ವಿಷಯಕ್ಕೆ ಹೋಗಿ

ಹುಲಿ ಸಂರಕ್ಷಣೆ: ಏಕೆ ಇಷ್ಟೊಂದು ಪ್ರಾಮುಖ್ಯತೆ?

 ಅದು ಮೇ 2016. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಉತ್ತರ ಭಾಗದಲ್ಲಿರುವ ಗಣಗೂರಿನಲ್ಲಿ ನಾವು ತಂಗಿದ್ದೆವು. ಹುಲಿಯ ಬಲಿ ಪ್ರಾಣಿಗಳ ಸಾಂದ್ರತೆಯನ್ನು ಅಂದಾಜಿಸುವ ಸೀಳುದಾರಿ ಗಣತಿ ಸಮೀಕ್ಷೆ (Line Transect Survey)  ನಡೆಯುತ್ತಿತ್ತು. ನನ್ನೊಂದಿಗೆ ಕೆಲವು ಫೀಲ್ಡ್ ಅಸಿಸ್ಟೆಂಟ್‌ಗಳು ಮತ್ತು ಸ್ವಯಂಸೇವಕರು ಇದ್ದರು. ಅದು ಮುಂಗಾರು ಪೂರ್ವದ ಮಳೆಯ ಸಮಯ. ಒಂದೊಂದು ದಿನ ಸಂಜೆ ಬೀಳುತ್ತಿದ್ದ ಹದವಾದ ಮಳೆಯಿಂದ ಕಾಡು ಹಸಿರಿನಿಂದ ಕಂಗೊಳಿಸುತ್ತಿತ್ತು. ಒದ್ದೆಯಾದ ಮಣ್ಣಿನ ವಾಸನೆ ಗಾಳಿಯಲ್ಲಿ ಹರಡಿಕೊಂಡಿತ್ತು.

ಒಂದು ಮಧ್ಯಾಹ್ನ ಸುಮಾರು ಎರಡೂವರೆ ಗಂಟೆ. ಊಟ ಮುಗಿಸಿ, ಸಮೀಕ್ಷೆಗೆ ಹೊರಡಲು ಇನ್ನೂ ಸಮಯವಿದ್ದ ಕಾರಣ ಎಲ್ಲರೂ ಹರಟೆಯಲ್ಲಿ ತೊಡಗಿದ್ದೆವು. ನಾವು ಉಳಿದಿದ್ದ ಅರಣ್ಯ ಇಲಾಖೆಯ ಹಳೆಯ ಕಟ್ಟಡದ ಸ್ವಲ್ಪ ದೂರದಲ್ಲೇ ಒಂದು ಕೆರೆಯಿತ್ತು. ಕಟ್ಟಡದಿಂದ ಹೊರಬಂದರೆ ಕೆಲವು ಮೆಟ್ಟಿಲುಗಳು. ಅಲ್ಲಿಂದ ಒಂದು ಕಚ್ಚಾ ರಸ್ತೆ ಬಲಗಡೆಯಿಂದ ಬಂದು ಕಟ್ಟಡದ ಮುಂದೆ ಹಾದು, ಎಡಗಡೆಗೆ ಸಾಗಿ ಸ್ವಲ್ಪ ದೂರದಲ್ಲಿ ಸ್ವಲ್ಪ ಬಲಕ್ಕೆ ತಿರುಗಿ ಕೆರೆಯನ್ನು ಸೇರುತ್ತಿತ್ತು. ಆ ತಿರುವಿನ ಕಾರಣದಿಂದ ಕಟ್ಟಡದ ಮುಂದೆ ನಿಂತರೆ ಕೆರೆ ಕಾಣುತ್ತಿರಲಿಲ್ಲ.

ಒಂದು ಕ್ಷಣ ನಮ್ಮ ಮಾತೆಲ್ಲವು ಸ್ತಬ್ದವಾಯಿತು. ಇದ್ದಕ್ಕಿದ್ದಂತೆ ಹುಲಿಯ ಕೂಗೊಂದು ಕೇಳಿಸಿದ್ದರಿಂದ ನಾವು ಮಾತನಾಡುವುದನ್ನು ನಿಲ್ಲಿಸಿದೆವು. ಅದು ಹುಲಿಯ ಘರ್ಜನೆಯಲ್ಲ. ಬೆದೆಗೆ ಬಂದ ಹೆಣ್ಣು ಹುಲಿ ಕಾಡಿನಲ್ಲಿ ಸಂಚರಿಸುತ್ತಾ ಮಧ್ಯೆ ಮಧ್ಯೆ ಕೂಗುತ್ತಿತ್ತು. ಆ ಕೂಗಿನ ಮೂಲಕ ಸುತ್ತಮುತ್ತಲಿನ ಗಂಡು ಹುಲಿಗಳಿಗೆ ತಾನು ಅಲ್ಲಿರುವುದನ್ನೂ, ಸಂತಾನೋತ್ಪತ್ತಿಗೆ ಸಿದ್ಧವಾಗಿರುವುದನ್ನೂ ತಿಳಿಸುತ್ತಿತ್ತು.

ಆ ಕೂಗನ್ನು ಕೇಳುತ್ತಿದ್ದಂತೆ ಎಲ್ಲರೂ ಹೊರಗೆ ಬಂದು ಮೆಟ್ಟಿಲುಗಳ ಮೇಲೆ ನಿಂತೆವು. ಸದ್ದು ಕೆರೆಯ ದಿಕ್ಕಿನಿಂದಲೇ ಬರುತ್ತಿತ್ತು. ನಾವೆಲ್ಲ ಆ ಕಡೆಗೆ ನೋಡುತ್ತಾ ಕೆಲ ಕ್ಷಣ ನಿಂತೆವು. ನಂತರ "ಹೋಗಿ ನೋಡೋಣ" ಎಂದು ನಾನು ರಸ್ತೆಯ ಕಡೆ ಹೆಜ್ಜೆ ಹಾಕಿದೆ. ಉಳಿದವರೂ ನನ್ನೊಂದಿಗೆ ಬರುತ್ತಾರೆ ಎಂದು ಭಾವಿಸಿದ್ದೆ. ಆದರೆ ಸ್ವಲ್ಪ ದೂರ ನಡೆದ ನಂತರ ಹಿಂದಿರುಗಿ ನೋಡಿದಾಗ, ಒಬ್ಬ ಫೀಲ್ಡ್ ಅಸಿಸ್ಟೆಂಟ್ ಹೊರತುಪಡಿಸಿ ಉಳಿದವರೆಲ್ಲ ಮೆಟ್ಟಿಲುಗಳ ಮೇಲೆಯೇ ನಿಂತಿದ್ದರು.

ನಾನು ನಿಧಾನವಾಗಿ ಮುಂದೆ ಸಾಗಿದೆ. ರಸ್ತೆ ಬಲಕ್ಕೆ ತಿರುಗುವ ಜಾಗವನ್ನು ತಲುಪುತ್ತಿದ್ದಂತೆಯೇ ನನ್ನಿಂದ ಕೆಲವೇ ಮೀಟರ್ ದೂರದಲ್ಲಿ ಒಂದು ಹುಲಿ ನಿಂತಿತ್ತು!

ಅದು ಮರದ ಬುಡಕ್ಕೆ ಮೂತ್ರ ಸಿಂಪಡಿಸುತ್ತಿತ್ತು. ಬೆದೆಗೆ ಬಂದ ಹೆಣ್ಣು ಹುಲಿಗಳು ಕೇವಲ ಕೂಗುವುದಷ್ಟೇ ಅಲ್ಲ, ತಮ್ಮ ಮೂತ್ರದಲ್ಲಿರುವ ರಾಸಾಯನಿಕಗಳ ಮೂಲಕವೂ ಗಂಡು ಹುಲಿಗಳಿಗೆ ಸಂದೇಶ ಕಳುಹಿಸುತ್ತವೆ. ಆ ರಾಸಾಯನಿಕ ಸಂಕೇತಗಳು ಅದು ಸಂತಾನೋತ್ಪತ್ತಿಗೆ ಸಿದ್ಧವಾಗಿರುವುದನ್ನು ತಿಳಿಸುತ್ತವೆ. ಬಹುಶಃ ನಾವು ಕೇಳಿದ್ದ ಕೂಗಿಗೂ, ನನ್ನ ಕಣ್ಣೆದುರು ನಡೆಯುತ್ತಿದ್ದ ಈ ವರ್ತನೆಗೂ ಒಂದೇ ಉದ್ದೇಶವಿತ್ತು.

ಮೂತ್ರ ಸಿಂಪಡಿಸಿದ ನಂತರ ಅದು ಒಂದು ಕ್ಷಣ ನನ್ನತ್ತ ನೋಡಿತು. ನಾನು ಆವರೆಗೂ ಕಾಡಿನಲ್ಲಿ ಹುಲಿಯನ್ನು ಮುಖಾಮುಖಿಯಾಗಿ ನೋಡಿದಾಗಲೆಲ್ಲ ಜೀಪಿನೊಳಗೆ ಕುಳಿತಿರುತ್ತಿದ್ದೆ. ಆದರೆ ಅದೇ ಮೊದಲ ಬಾರಿಗೆ ನಾನು ಮತ್ತು ಹುಲಿ ನೆಲದ ಮೇಲೆ ಎದುರು ಎದುರಾಗಿ ನಿಂತ ಕ್ಷಣವಾಗಿತ್ತು. ನಂತರ ಹುಲಿ ಯಾವುದೇ ಆತುರವಿಲ್ಲದೆ ಕೆರೆಯ ಕಡೆ ನಡೆದು ಕಾಡಿನೊಳಗೆ ಮರೆಯಾಯಿತು.

ನನಗೆ ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಎಲ್ಲವೂ ಮುಗಿದುಹೋಗಿತ್ತು. ಹುಲಿಯನ್ನು ನೋಡಿದ ಖುಷಿಯಲ್ಲಿ ನನ್ನೊಂದಿಗೆ ಬರುತ್ತಿದ್ದ ಫೀಲ್ಡ್ ಅಸಿಸ್ಟೆಂಟ್ ಕಡೆಗೆ ತಿರುಗಿ ನೋಡಿದೆ. ಅವನು ಅಲ್ಲಿರಲೇ ಇಲ್ಲ!

ನಂತರ ತಿಳಿಯಿತು. ಹುಲಿಯನ್ನು ನೋಡುವ ಆತುರದಲ್ಲಿ ಅವನು ಸ್ವಲ್ಪ ಹಿಂದೆಯೇ ಇದ್ದ ಒಂದು ಮರ ಏರಿದ್ದ. ಆದರೆ ಅವನಿಗೆ ಹುಲಿ ಕಾಣಿಸಿರಲೇ ಇಲ್ಲ. ಅಷ್ಟೇ ಅಲ್ಲ, ನನ್ನನ್ನು ಹೊರತು ಪಡಿಸಿ ಇನ್ಯಾರೂ ಹುಲಿ ನೋಡಿರಲಿಲ್ಲ! ಆಗಷ್ಟೇ ನನಗೆ ಒಂದು ಸಂಗತಿ ಮನದಟ್ಟಾಯಿತು. ಆ ತಿರುವಿನಲ್ಲಿ, ಆ ಕೆಲವು ಕ್ಷಣಗಳ ಕಾಲ, ನಾನು ಹುಲಿಯ ಎದುರು ಒಬ್ಬನೇ ನಿಂತಿದ್ದೆ!

ಆ ಘಟನೆ ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ. ಕಾಡಿನಲ್ಲಿ ಹಲವು ಬಾರಿ ಆನೆ, ಕರಡಿ, ಚಿರತೆ, ಕಾಟಿ ಸೇರಿದಂತೆ ಅನೇಕ ದೊಡ್ಡ ಪ್ರಾಣಿಗಳನ್ನು ನೋಡಿದ್ದೆ. ಆದರೆ ಆ ದಿನ ಹುಲಿಯನ್ನು ಅಷ್ಟು ಸಮೀಪದಿಂದ, ಅದರ ಸಹಜ ವರ್ತನೆಯನ್ನು ಅಡ್ಡಿಪಡಿಸದೆ ನೋಡುವ ಅವಕಾಶ ಸಿಕ್ಕಿತ್ತು. ಈ ಘಟನೆಯನ್ನು ನೆನೆದಾಗಲೆಲ್ಲಾ ನನ್ನೊಳಗೆ ಒಂದು ಪ್ರಶ್ನೆ ಮೂಡುತ್ತದೆ. ಈ ದೇಶದಲ್ಲಿ ಲಕ್ಷಾಂತರ ಜೀವಿ ಪ್ರಭೇದಗಳಿರುವಾಗ, ಹುಲಿಗೇ ಏಕೆ ಇಷ್ಟೊಂದು ಪ್ರಾಮುಖ್ಯತೆ? ಅದರ ಸಂರಕ್ಷಣೆಗೆ ಏಕೆ ಇಷ್ಟೊಂದು ಹಣ, ಮಾನವಶಕ್ತಿ ಮತ್ತು ಸರ್ಕಾರಿ ಗಮನ ಮೀಸಲಾಗಿವೆ?

ಭಾರತವು ಜೀವವೈವಿಧ್ಯದ ದೃಷ್ಟಿಯಿಂದ ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು. ಇಲ್ಲಿ ಸಾವಿರಾರು ಸಸ್ಯಗಳು, ಲಕ್ಷಾಂತರ ಕೀಟಗಳು, ನೂರಾರು ಸಸ್ತನಿಗಳು, ಪಕ್ಷಿಗಳು, ಸರೀಸೃಪಗಳು, ಉಭವಾಸಿಗಳು ಮತ್ತು ಮೀನುಗಳು ಜೀವಿಸುತ್ತಿವೆ. ಇವೆಲ್ಲವೂ ಪರಿಸರ ವ್ಯವಸ್ಥೆಯಲ್ಲಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸುತ್ತವೆ. ಹಾಗಿದ್ದರೂ, ಸಂರಕ್ಷಣೆ ಎಂಬ ವಿಷಯ ಬಂದಾಗ ಹೆಚ್ಚು ಕೇಳಿಬರುವುದು ಹುಲಿಯ ಹೆಸರೇ.

ಹೊಸ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಯಾದರೆ, ಹುಲಿಗಳ ಗಣತಿಯ ಫಲಿತಾಂಶ ಬಿಡುಗಡೆಯಾದರೆ ದೇಶವ್ಯಾಪಿ ಚರ್ಚೆಯಾಗುತ್ತದೆ. ಹುಲಿಯ ರಕ್ಷಣೆಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಹುಲಿಯೊಂದು ಸತ್ತರೆ ಅದು ರಾಷ್ಟ್ರೀಯ ಸುದ್ದಿಯಾಗುತ್ತದೆ. ವಿಶೇಷ ತರಬೇತಿ ಪಡೆದ ಸಿಬ್ಬಂದಿ, ವಿಶೇಷ ಕಾನೂನುಗಳು, ವಿಶೇಷ ಯೋಜನೆಗಳು ಇವೆಲ್ಲವೂ ಹುಲಿಯ ಸುತ್ತಲೇ ರೂಪುಗೊಂಡಿವೆ.

ಇದನ್ನು ನೋಡಿ ಕೆಲವರು ಪ್ರಶ್ನಿಸುತ್ತಾರೆ.

"ಕಪ್ಪೆಗಳು ಮುಖ್ಯವಲ್ಲವೇ?"

"ಚಿಟ್ಟೆಗಳು, ಬಾವಲಿಗಳು, ಕೀಟಗಳು, ಸಣ್ಣ ಸಸ್ತನಿಗಳು, ಹುಲ್ಲುಗಾವಲುಗಳು, ನದಿಗಳು ಇವೆಲ್ಲವೂ ಪ್ರಕೃತಿಯ ಭಾಗವಲ್ಲವೇ?"

ಈ ಪ್ರಶ್ನೆಗಳು ಸರಿಯಾದವು. ಏಕೆಂದರೆ ಸಂರಕ್ಷಣೆ ಎಂದರೆ ಕೇವಲ ಒಂದು ಪ್ರಾಣಿಯ ಉಳಿವಲ್ಲ. ಅದು ಸಂಪೂರ್ಣ ಜೀವವೈವಿಧ್ಯದ ಉಳಿವು. ಹಾಗಿದ್ದರೆ, ಇಷ್ಟೆಲ್ಲ ಜೀವಿಗಳ ನಡುವೆ ಹುಲಿಯೇ ಏಕೆ ಸಂರಕ್ಷಣೆಯ ಸಂಕೇತವಾಯಿತು?

ಇದಕ್ಕೆ ಉತ್ತರ ಕೇವಲ ಹುಲಿಯ ಗಾತ್ರದಲ್ಲಿಲ್ಲ, ಅದರ ಬಲದಲ್ಲಿಲ್ಲ ಅಥವಾ ಅದರ ಸೌಂದರ್ಯದಲ್ಲೂ ಇಲ್ಲ. ಉತ್ತರ ಪರಿಸರ ವ್ಯವಸ್ಥೆಯಲ್ಲಿರುವ ಅದರ ಪಾತ್ರದಲ್ಲಿದೆ. ಅದನ್ನು ಅರ್ಥಮಾಡಿಕೊಳ್ಳಲು ನಾವು ಸ್ವಲ್ಪ ಹಿಂದೆ ಹೋಗಬೇಕು.

ಒಂದು ಕಾಲದಲ್ಲಿ ಭಾರತವನ್ನು ಹುಲಿಗಳ ನಾಡು ಎಂದು ಕರೆಯಲಾಗುತ್ತಿತ್ತು. ಹಿಮಾಲಯದ ತಪ್ಪಲಿನಿಂದ ಹಿಡಿದು ಪಶ್ಚಿಮ ಘಟ್ಟಗಳವರೆಗೆ, ಸುಂದರ್‌ಬನ್ಸ್‌ನ ಜೌಗು ಕಾಡುಗಳಿಂದ ಹಿಡಿದು ಮಧ್ಯ ಭಾರತದ ದಟ್ಟ ಅರಣ್ಯಗಳವರೆಗೆ ಹುಲಿಗಳು ವ್ಯಾಪಕವಾಗಿ ಕಂಡುಬರುತ್ತಿದ್ದವು. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಭಾರತದಲ್ಲಿ ಸುಮಾರು 40,000 ಹುಲಿಗಳಿದ್ದವು ಎಂದು ಅಂದಾಜಿಸಲಾಗಿದೆ. ಇದು ನಿಖರ ಸಂಖ್ಯೆಯಲ್ಲ. ಆ ಕಾಲದಲ್ಲಿ ವೈಜ್ಞಾನಿಕವಾಗಿ ಹುಲಿಗಳ ಸಂಖ್ಯೆಯನ್ನು ಯಾರೂ ಎಣಿಸಿರಲಿಲ್ಲ. ಆದರೆ ಹುಲಿ ಅಪರೂಪದ ಪ್ರಾಣಿಯಾಗಿರಲಿಲ್ಲ.

ಆದರೆ ನಂತರ ಪರಿಸ್ಥಿತಿ ವೇಗವಾಗಿ ಬದಲಾಯಿತು.

ಬ್ರಿಟಿಷರ ಆಳ್ವಿಕೆಯಲ್ಲಿ ಮತ್ತು ಸ್ವಾತಂತ್ರ್ಯದ ನಂತರದ ಕೆಲವು ದಶಕಗಳಲ್ಲಿಯೂ ಹುಲಿಯನ್ನು ಸಂರಕ್ಷಿಸಬೇಕಾದ ಪ್ರಾಣಿಯಾಗಿ ನೋಡಲಿಲ್ಲ. ಅದು ರಾಜಮನೆತನದವರು, ಬ್ರಿಟಿಷ್ ಅಧಿಕಾರಿಗಳು ಮತ್ತು ಶ್ರೀಮಂತರಿಗೆ ಪ್ರತಿಷ್ಠೆಯ ಬೇಟೆಯ ಪ್ರಾಣಿಯಾಗಿತ್ತು. ಒಂದೇ ದಿನದಲ್ಲಿ ಹಲವು ಹುಲಿಗಳನ್ನು ಹೊಡೆದು ಅದರ ಮುಂದೆ ನಿಂತು ತೆಗೆಸಿಕೊಂಡ ಛಾಯಾಚಿತ್ರಗಳು ಅಂದಿನ ಹೆಮ್ಮೆಯ ಸಂಕೇತವಾಗಿದ್ದವು. ಸಾವಿರಾರು ಹುಲಿಗಳು ಈ ಬೇಟೆಗೆ ಬಲಿಯಾದವು.

ಇದರ ಜೊತೆಗೆ ದೇಶದಲ್ಲಿ ಕೃಷಿ ವಿಸ್ತಾರವಾಯಿತು. ಅರಣ್ಯಗಳನ್ನು ಕಡಿದು ಹೊಲಗಳನ್ನಾಗಿ, ತೋಟಗಳನ್ನಾಗಿ ಮತ್ತು ವಸತಿ ಪ್ರದೇಶಗಳನ್ನಾಗಿ ಪರಿವರ್ತಿಸಲಾಯಿತು. ರಸ್ತೆ, ಅಣೆಕಟ್ಟು, ಗಣಿಗಾರಿಕೆ ಮತ್ತು ಇತರ ಅಭಿವೃದ್ಧಿ ಯೋಜನೆಗಳಿಂದ ಹುಲಿಯ ಆವಾಸಗಳು ತುಂಡಾದವು. ಹಲವೆಡೆ ಹುಲಿಯ ಬಲಿ ಪ್ರಾಣಿಗಳ ಸಂಖ್ಯೆಯೂ ಕುಸಿಯಿತು. ಆಹಾರವೇ ಇಲ್ಲದ ಕಾಡಿನಲ್ಲಿ ಹುಲಿ ಹೇಗೆ ಉಳಿಯುತ್ತದೆ?

ಈ ಎಲ್ಲ ಕಾರಣಗಳಿಂದ ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಯುತ್ತಲೇ ಹೋಯಿತು. 1972ರಲ್ಲಿ ನಡೆದ ಮೊದಲ ರಾಷ್ಟ್ರೀಯ ಹುಲಿಗಳ ಅಂದಾಜು ಸಂಖ್ಯೆ ದೇಶವನ್ನು ಬೆಚ್ಚಿಬೀಳಿಸಿತು. ಆಗ ಭಾರತದಲ್ಲಿ ಉಳಿದಿದ್ದ ಹುಲಿಗಳ ಸಂಖ್ಯೆ ಕೇವಲ 1,827!

ಕಾಡಿನ ದಾರಿಯೊಂದರಲ್ಲಿ ಮೂಡಿದ ಹುಲಿಯ ಹೆಜ್ಜೆ ಗುರುತು. 1972ರಲ್ಲಿ ಮೊದಲಬಾರಿಗೆ ಹುಲಿ ಸಂಖ್ಯೆಯನ್ನು ಅಂದಾಜಿಸಲಾಗಿತ್ತು. ಆಗ ಅಂದಾಜಿಸಲಾಗಿದ್ದ ಹುಲಿಗಳ ಸಂಖ್ಯೆ 1,827. ಆಗ ಹುಲಿ ಹೆಜ್ಜೆಗುರುತು ವಿಧಾನದಲ್ಲಿ ಹುಲಿ ಸಂಖ್ಯೆಯನ್ನು ಅಂದಾಜಿಸಲಾಗಿತ್ತು. ಈ ವಿಧಾನದಲ್ಲಿ ಹೆಜ್ಜೆಗುರುತಗಳ ಗಾತ್ರದ ಮೇಲೆ ಹುಲಿಗಳನ್ನು ಎಣಿಸಲಾಗುತ್ತದೆ. ಹೆಜ್ಜೆಗುರುತು ವಿಧಾನ ವೈಜ್ಞಾನಿಕವಲ್ಲ. ವಿವಿಧ ಬಗೆಯ ನೆಲಗಳ ಮೇಲೆ ಒಂದೇ ಹುಲಿಯ ಹೆಜ್ಜೆಗುರುತು ಬೇರೆ ಬೇರೆ ಗಾತ್ರದಲ್ಲಿ ಮೂಡುತ್ತದೆ. ಕ್ಯಾಮೆರಾ ಟ್ರಾಪ್ ಸಮೀಕ್ಷೆ ವಿಧಾನ ವೈಜ್ಞಾನಿಕ ವಿಧಾನವಾಗಿದ್ದು, ಈ ವಿಧಾನವನ್ನು ಬಳಸಿಕೊಂಡು ಹುಲಿ ಸಂಖ್ಯೆ ಅಂದಾಜಿಸಲು 2006ರ ವರೆಗೂ ಕಾಯಬೇಕಾಯಿತು. ಚಿತ್ರ: © ಶ್ರೀಕಾಂತ


ಒಂದು ಕಾಲದಲ್ಲಿ ಭಾರತದ ಅರಣ್ಯಗಳ ಸಂಕೇತವಾಗಿದ್ದ ಪ್ರಾಣಿ ಕಣ್ಮರೆಯಾಗುವ ಹಂತಕ್ಕೆ ತಲುಪಿತ್ತು. ಇದು ಕೇವಲ ಒಂದು ಪ್ರಾಣಿಯ ಸಂಕಷ್ಟವಾಗಿರಲಿಲ್ಲ. ಭಾರತದ ಅರಣ್ಯಗಳ ಆರೋಗ್ಯ ಕುಸಿಯುತ್ತಿರುವ ಅಪಾಯದ ಗಂಟೆಯಾಗಿತ್ತು.

ಈ ಹಿನ್ನೆಲೆಯಲ್ಲೇ ಭಾರತ ಸರ್ಕಾರ 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ (Wild Life Protection Act) ಜಾರಿಗೊಳಿಸಿತು. ಅದರ ಮುಂದುವರಿದ ಭಾಗವಾಗಿ 1973ರಲ್ಲಿ ಪ್ರಾಜೆಕ್ಟ್ ಟೈಗರ್ (Project Tiger) ಆರಂಭವಾಯಿತು. ಆರಂಭದಲ್ಲಿ ಕೇವಲ ಒಂಬತ್ತು ಹುಲಿ ಸಂರಕ್ಷಿತ ಪ್ರದೇಶಗಳಿದ್ದ ಈ ಯೋಜನೆ, ಇಂದು ವಿಶ್ವದ ಅತಿದೊಡ್ಡ ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಒಂದಾಗಿ ಬೆಳೆದಿದೆ. ಇಂದಿಗೂ ಹಲವಾರು ಮಿತಿಗಳಿದ್ದರೂ ಪ್ರಾಜೆಕ್ಟ್ ಟೈಗರ್ ಒಂದು ಯಶಸ್ವಿ ಸಂರಕ್ಷಣಾ ಯೋಜನೆ.

ಆದರೆ ಇಲ್ಲಿಯೇ ಮತ್ತೊಂದು ಪ್ರಶ್ನೆ ಬರುತ್ತದೆ. ಅಳಿವಿನಂಚಿನಲ್ಲಿದ್ದವು ಹುಲಿಗಳು ಮಾತ್ರವೇ?

ಇಲ್ಲ.

ಆನೆ, ಸಿಂಹ, ಘೇಂಡಾಮೃಗ, ಮೊಸಳೆ, ಗಂಗಾ ಡಾಲ್ಫಿನ್, ಗ್ರೇಟ್ ಇಂಡಿಯನ್ ಬಸ್ಟರ್ಡ್, ರಣಹದ್ದುಗಳು, ಅನೇಕ ಉಭವಾಸಿಗಳು ಮತ್ತು ಇನ್ನೂ ಹಲವಾರು ಜೀವಿಗಳೂ ಸಂಕಷ್ಟದಲ್ಲಿದ್ದವು. ಹಾಗಿದ್ದರೆ, ಸರ್ಕಾರದ ದೊಡ್ಡ ವನ್ಯಜೀವಿ ಸಂರಕ್ಷಣಾ ಯೋಜನೆಗೆ ಹುಲಿಯನ್ನೇ ಏಕೆ ಆಯ್ಕೆ ಮಾಡಲಾಯಿತು? ಅದಕ್ಕೆ ಉತ್ತರ ಹುಡುಕಲು ನಾವು ಹುಲಿಯ  ಬದುಕುವ ಪರಿಸರ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಬೇಕು.

ಪರಿಸರ ವ್ಯವಸ್ಥೆಯಲ್ಲಿ ಹುಲಿ ಪ್ರಮುಖ ಪರಭಕ್ಷಕ (Apex predator). ಪ್ರಮುಖ ಪರಭಕ್ಷಕ ಪ್ರಾಣಿ ಸ್ಥಳದಿಂದಿ ಸ್ಥಳಕ್ಕೆ ಬೇರೆಯಾಗಬಹುದು. ಹುಲಿಯ ಪಟ್ಟೆಗಳು ಪ್ರತಿಯೊಂದು ಹುಲಿಗೂ ವಿಶಿಷ್ಟವಾಗಿದ್ದು, ಇದರಿಂದ ಪ್ರತಿಯೊಂದು ಹುಲಿಯನ್ನೂ ಗುರುತಿಸಬಹುದು. ಇದಕ್ಕಾಗಿ ಕ್ಯಾಮೆರಾ ಟ್ರಾಪ್ ಸಮೀಕ್ಷೆಯನ್ನು ಬಳಸಲಾಗುತ್ತದೆ. ಚಿತ್ರ: © ಶ್ರೀಕಾಂತ


ಹುಲಿ ಆಹಾರ ಸರಪಳಿಯ ಮೇಲ್ತುದಿಯಲ್ಲಿರುವ ಪರಭಕ್ಷಕ (Apex Predator). ಆದರೆ ಈ ಒಂದು ವಾಕ್ಯದಿಂದ ಅದರ ಮಹತ್ವ ಅರ್ಥವಾಗುವುದಿಲ್ಲ.

ಒಂದು ಕ್ಷಣ ಯೋಚಿಸಿ. ಒಂದು ಹುಲಿ ಬದುಕಬೇಕಾದರೆ ಅದಕ್ಕೆ ಏನು ಬೇಕು? ಮೊದಲನೆಯದಾಗಿ, ಅದಕ್ಕೆ ಬೇಟೆಯಾಡಲು ಸಾಕಷ್ಟು ಬಲಿ ಪ್ರಾಣಿಗಳು ಬೇಕು. ಜಿಂಕೆ, ಕಾಟಿ, ಕಡವೆ, ಕಾಡುಹಂದಿ ಮುಂತಾದ ಬಲಿಪ್ರಾಣಿಗಳ ಸಂಖ್ಯೆ ಸಾಕಷ್ಟಿರಬೇಕು. ಹಸಿದ ಹುಲಿ ಬದುಕಲಾರದು.

ಕರ್ನಾಟಕದ ಕಾಡುಗಳಲ್ಲಿ ಹುಲಿಯ ಪ್ರಮುಖ ಬಲಿ ಪ್ರಾಣಿಗಳು. ಭಾರತದ ಬೇರೆ ಬೇರೆ ಸ್ಥಳಗಳಲ್ಲಿ ಇದು ಬದಲಾಗುತ್ತದೆ. ಮೇಲಿನ ಚಿತ್ರದಲ್ಲಿನ ಜಿಂಕೆ, ಕಡವೆ, ಕಾಟಿ, ಕಾಡುಹಂದಿ ಮತ್ತು ಕಾಡುಕುರಿಯಂತಹ ಪ್ರಾಣಿಗಳಲ್ಲದೆ ಇನ್ನೂ ಹಲವಾರು ಪ್ರಾಣಿಗಳನ್ನು ಹುಲಿ ಬೇಟೆಯಾಡುತ್ತದೆ. ಈ ಬಲಿ ಪ್ರಾಣಿಗಳ ಸಾಂದ್ರತೆಯನ್ನು ಅಂದಾಜಿಸಲು ಸೀಳುದಾರಿ ಗಣತಿ ಸಮೀಕ್ಷೆಯನ್ನು ಬಳಸಲಾಗುತ್ತದೆ. ಚಿತ್ರ: © ಶ್ರೀಕಾಂತ


ಆ ಬಲಿ ಪ್ರಾಣಿಗಳು ಬದುಕಬೇಕಾದರೆ ಅವುಗಳಿಗೆ ಸಮೃದ್ಧವಾದ ಸಸ್ಯವರ್ಗ ಬೇಕು. ಹುಲ್ಲುಗಾವಲುಗಳು, ಬಿದಿರಿನ ಕಾಡುಗಳು, ಹೊಸದಾಗಿ ಬೆಳೆಯುವ ಗಿಡಗಳು ಮತ್ತು ವೈವಿಧ್ಯಮಯ ಸಸ್ಯಗಳು ಇರಬೇಕು. ಸಸ್ಯಗಳು ಬೆಳೆಯಬೇಕಾದರೆ ಫಲವತ್ತಾದ ಮಣ್ಣು, ಮಳೆ, ನೀರು ಮತ್ತು ಆರೋಗ್ಯಕರ ಅರಣ್ಯ ಇರಬೇಕು. ಅರಣ್ಯ ಆರೋಗ್ಯಕರವಾಗಿರಬೇಕಾದರೆ ಅದು ಸಾಕಷ್ಟು ದೊಡ್ಡದಾಗಿರಬೇಕು. ಸ್ವಚ್ಛವಾದ ನದಿಗಳು, ಅರಣ್ಯ ಬೆಂಕಿಯ ನಿಯಂತ್ರಣ, ಅಕ್ರಮವಾಗಿ ಮರಕಡಿಯುವುದನ್ನು ಕಡಿಮೆ ಇರುವುದು ಮತ್ತು ಮಾನವನ ಒತ್ತಡ ಕಡಿಮೆಯಾಗಿರುವುದು ಮುಖ್ಯ.

ಅಂದರೆ, ಒಂದು ಹುಲಿ ಬದುಕಲು ಬೇಕಾಗಿರುವುದು ಕೇವಲ ಒಂದು ಕಾಡಲ್ಲ, ಸರಿಯಾಗಿ ಕಾರ್ಯನಿರ್ವಹಿಸುವ ಸಂಪೂರ್ಣ ಪರಿಸರ ವ್ಯವಸ್ಥೆ. ಇದೇ ಕಾರಣಕ್ಕೆ ಹುಲಿಯನ್ನು 'ಅಂಬ್ರೆಲಾ ಪ್ರಭೇದ' (Umbrella Species) ಎಂದು ಕರೆಯುತ್ತಾರೆ.

ಒಂದು ದೊಡ್ಡ ಛತ್ರಿ ಮಳೆಯಿಂದ ಒಬ್ಬ ವ್ಯಕ್ತಿಯನ್ನು ಮಾತ್ರ ರಕ್ಷಿಸುವುದಿಲ್ಲ. ಅದರ ಕೆಳಗೆ ನಿಂತಿರುವ ಎಲ್ಲರನ್ನೂ ರಕ್ಷಿಸುತ್ತದೆ. ಅದೇ ರೀತಿ, ಹುಲಿಗೆ ಅಗತ್ಯವಾದಷ್ಟು ದೊಡ್ಡ ಮತ್ತು ಆರೋಗ್ಯಕರ ಅರಣ್ಯವನ್ನು ಉಳಿಸಿದರೆ, ಅದರೊಳಗೆ ವಾಸಿಸುವ ಸಾವಿರಾರು ಇತರ ಜೀವಿಗಳಿಗೂ ರಕ್ಷಣೆ ಸಿಗುತ್ತದೆ.

ಇದರ ಮಹತ್ವ ಕೇವಲ ಕಾಡಿನೊಳಗಿನ ಜೀವಿಗಳಿಗೆ ಮಾತ್ರ ಸೀಮಿತವಲ್ಲ. ಉದಾಹರಣೆಗೆ, ಪಶ್ಚಿಮ ಘಟ್ಟಗಳಲ್ಲಿರುವ ಬಹುತೇಕ ಹುಲಿ ಸಂರಕ್ಷಿತ ಪ್ರದೇಶಗಳೇ ದಕ್ಷಿಣ ಭಾರತದ ಪ್ರಮುಖ ನದಿಗಳ ಉಗಮ ಪ್ರದೇಶಗಳನ್ನು ಒಳಗೊಂಡಿವೆ. ಈ ಕಾಡುಗಳು ಮಳೆಯನ್ನು ಹಿಡಿದಿಟ್ಟುಕೊಂಡು, ವರ್ಷಪೂರ್ತಿ ನದಿಗಳಿಗೆ ನೀರು ಹರಿಯುವಂತೆ ಮಾಡುತ್ತವೆ. ಹುಲಿಗಾಗಿ ರಕ್ಷಿಸಲ್ಪಟ್ಟ ಈ ಅರಣ್ಯಗಳು ಕೊನೆಗೆ ಕೋಟ್ಯಂತರ ಜನರಿಗೆ ಕುಡಿಯುವ ನೀರು, ಕೃಷಿ ಮತ್ತು ವಿದ್ಯುತ್ ಉತ್ಪಾದನೆಗೆ ಆಧಾರವಾಗುತ್ತವೆ. ಅಂದರೆ, ಹುಲಿ ಸಂರಕ್ಷಣೆ ಕೇವಲ ವನ್ಯಜೀವಿಗಳಿಗಷ್ಟೇ ಅಲ್ಲ, ಮನುಷ್ಯರ ಬದುಕಿಗೂ ನೇರವಾಗಿ ಸಂಬಂಧಿಸಿದೆ.

ಪಶ್ಚಿಮ ಘಟ್ಟಗಳಲ್ಲಿರುವ ಹುಲಿ ಸಂರಕ್ಷಿತ ಪ್ರದೇಶಗಳನ್ನೊಳಗೊಂಡು ಬಹುತೇಕ ಕಾಡುಗಳು ದಕ್ಷಿಣ ಭಾರತದ ಪ್ರಮುಖ ನದಿಗಳ ಉಗಮ ಪ್ರದೇಶಗಳನ್ನು ಒಳಗೊಂಡಿವೆ. ಈ ಕಾಡುಗಳು ಮಳೆಯನ್ನು ಹಿಡಿದಿಟ್ಟುಕೊಂಡು, ವರ್ಷಪೂರ್ತಿ ನದಿಗಳಿಗೆ ನೀರು ಹರಿಯುವಂತೆ ಮಾಡುತ್ತವೆ. ಕೇರಳದ ಪಶ್ಚಿಮ ಘಟ್ಟಗಳ ಒಂದು ಭಾಗ. ಚಿತ್ರ: © ಶ್ರೀಕಾಂತ


ಇನ್ನೊಂದು ಮುಖ್ಯ ವಿಷಯವಿದೆ. ಹುಲಿ ಕಾಡಿನ "ರಾಜ" ಎಂಬ ಜನಪ್ರಿಯ ಕಲ್ಪನೆ ವಿಜ್ಞಾನದಲ್ಲಿ ಮುಖ್ಯವಲ್ಲ. ವಿಜ್ಞಾನಕ್ಕೆ ಮುಖ್ಯವಾದುದು ಅದರ ಪರಿಸರದ ಮೇಲಿನ ಪ್ರಭಾವ.

ಹುಲಿ ಇಲ್ಲದಿದ್ದರೆ ಕೆಲವು ಪ್ರದೇಶಗಳಲ್ಲಿ ಜಿಂಕೆ, ಕಡವೆ, ಕಾಟಿಗಳ ಸಂಖ್ಯೆ ಅತಿಯಾಗಿ ಹೆಚ್ಚಾಗಬಹುದು. ಅವು ಅತಿಯಾಗಿ ಮೇಯುವುದರಿಂದ ಹೊಸ ಸಸ್ಯಗಳು ಬೆಳೆಯಲು ತೊಂದರೆಯಾಗಬಹುದು. ಸಸ್ಯವರ್ಗ ಬದಲಾದರೆ ಕೀಟಗಳು, ಪಕ್ಷಿಗಳು, ಸಣ್ಣ ಸಸ್ತನಿಗಳು ಸೇರಿದಂತೆ ಅನೇಕ ಜೀವಿಗಳ ಮೇಲೂ ಪರಿಣಾಮ ಬೀಳುತ್ತದೆ. ಹೀಗೆ ಒಂದು ಹಂತದಲ್ಲಿ ಆಗುವ ಬದಲಾವಣೆ ಕ್ರಮೇಣ ಇಡೀ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಪರಿಸರ ವಿಜ್ಞಾನದಲ್ಲಿ ಇದನ್ನು ಟ್ರೋಫಿಕ್ ಕ್ಯಾಸ್ಕೇಡ್ (Trophic Cascade) ಎಂದು ಕರೆಯುತ್ತಾರೆ.

ಆದ್ದರಿಂದ, ಹುಲಿಯನ್ನು ಉಳಿಸುವುದು ಎಂದರೆ ಕೇವಲ ಒಂದು ದೊಡ್ಡ ಮಾರ್ಜಾಲವನ್ನು ಉಳಿಸುವುದಲ್ಲ. ಅದರ ಹಿಂದೆ ನಿಂತಿರುವ ಸಂಪೂರ್ಣ ಆಹಾರ ಸರಪಳಿ ಮತ್ತು ಅರಣ್ಯ ಪರಿಸರ ವ್ಯವಸ್ಥೆಯನ್ನು ಉಳಿಸುವುದು.

ಆದರೆ ಇಲ್ಲಿಯೇ ಒಂದು ಎಚ್ಚರಿಕೆಯೂ ಬೇಕು. ಹುಲಿಯನ್ನು ಉಳಿಸಿದರೆ ಎಲ್ಲಾ ಜೀವಿಗಳೂ ಸ್ವಯಂಚಾಲಿತವಾಗಿ ಉಳಿಯುತ್ತವೆ ಎಂದು ಹೇಳುವುದು ವಿಷಯವನ್ನು ತುಂಬಾ ಸರಳಗೊಳಿಸಿದಂತಾಗುತ್ತದೆ.

ಹುಲಿ ಸಂರಕ್ಷಣೆ ಅತ್ಯಂತ ಮುಖ್ಯ. ಆದರೆ ಹುಲ್ಲುಗಾವಲುಗಳಲ್ಲಿ ಬದುಕುವ ಪಕ್ಷಿಗಳು, ಗುಹೆಗಳಲ್ಲಿ ವಾಸಿಸುವ ಬಾವಲಿಗಳು, ಸಣ್ಣ ಜೌಗು ಪ್ರದೇಶಗಳಲ್ಲಿರುವ ಕಪ್ಪೆಗಳು ಅಥವಾ ಕೇವಲ ಒಂದು ನಿರ್ದಿಷ್ಟ ಸಸ್ಯವನ್ನು ಅವಲಂಬಿಸಿರುವ ಕೀಟಗಳ ಅಗತ್ಯಗಳು ಹುಲಿಯ ಅಗತ್ಯಗಳಿಗಿಂತ ಬೇರೆಯಾಗಿರಬಹುದು. ಆದ್ದರಿಂದ ಸಂರಕ್ಷಣೆಯ ಕೇಂದ್ರದಲ್ಲಿ ಹುಲಿ ಇರಬಹುದು. ಆದರೆ ಸಂರಕ್ಷಣೆಯ ದೃಷ್ಟಿಯಲ್ಲಿ ಇಡೀ ಜೀವವೈವಿಧ್ಯವೇ ಇರಬೇಕು.

ಈ ಸಮತೋಲನವನ್ನು ಸಾಧಿಸುವುದು ಇಂದಿನ ವನ್ಯಜೀವಿ ಸಂರಕ್ಷಣೆಯ ದೊಡ್ಡ ಸವಾಲು.

ಹುಲಿ ಒಂದು ಅಂಬ್ರೆಲಾ ಪ್ರಭೇದ ಎನ್ನುವುದು ಸತ್ಯ. ಅದನ್ನು ಉಳಿಸುವ ಮೂಲಕ ದೊಡ್ಡ ಪ್ರಮಾಣದ ಅರಣ್ಯಗಳನ್ನು ರಕ್ಷಿಸಬಹುದು ಎಂಬುದೂ ಸತ್ಯ. ಕಳೆದ ಐವತ್ತು ವರ್ಷಗಳಲ್ಲಿ ಭಾರತವು ಹುಲಿ ಸಂರಕ್ಷಣೆಯಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದೆ. ಇಂದು ವಿಶ್ವದಲ್ಲಿರುವ ಕಾಡು ಹುಲಿಗಳಲ್ಲಿ ಬಹುಪಾಲು ಭಾರತದಲ್ಲಿವೆ.

ಆದರೆ ಇದನ್ನೇ ಸಂರಕ್ಷಣೆಯ ಸಂಪೂರ್ಣ ಯಶಸ್ಸು ಎಂದು ಭಾವಿಸುವುದು ತಪ್ಪು. ಪ್ರಕೃತಿ ಕೇವಲ ಹುಲಿಯಿಂದ ನಿರ್ಮಿತವಾಗಿಲ್ಲ. ಒಂದು ಆರೋಗ್ಯಕರ ಅರಣ್ಯದಲ್ಲಿ ಹುಲಿಯಷ್ಟೇ ಮುಖ್ಯವಾದ ಸಾವಿರಾರು ಜೀವಿಗಳಿವೆ. ಕಾಡಿನ ಇಂಜಿನಿಯರ್‌ಗಳೆಂದು ಹೆಸರಾದ ಆನೆಗಳಿಂದ ಹಿಡಿದು ಮಣ್ಣಿನಲ್ಲಿರುವ ಶಿಲೀಂಧ್ರಗಳವರೆಗೂ, ಪರಾಗಸ್ಪರ್ಶ ಮಾಡುವ ಕೀಟಗಳು, ಬೀಜಗಳನ್ನು ಹರಡುವ ಪಕ್ಷಿಗಳು, ಕಾಡನ್ನು ಸ್ವಚ್ಛವಾಗಿಡುವ ರಣಹದ್ದುಗಳು, ನದಿಗಳ ಆರೋಗ್ಯ ಕಾಪಾಡುವ ಮೀನುಗಳು, ಮಳೆಯ ಕಾಲದಲ್ಲಿ ಸಂತಾನೋತ್ಪತ್ತಿ ಮಾಡುವ ಕಪ್ಪೆಗಳು ಇವುಗಳಲ್ಲಿ ಯಾವುದನ್ನೂ ಕಡೆಗಣಿಸಲಾಗುವುದಿಲ್ಲ.

ಹುಲಿಯ ಸಂರಕ್ಷಣೆಯಿಂದ ಇವುಗಳಲ್ಲಿ ಅನೇಕ ಜೀವಿಗಳಿಗೆ ಪ್ರಯೋಜನವಾಗುತ್ತದೆ. ಆದರೆ ಎಲ್ಲ ಸಮಸ್ಯೆಗಳಿಗೂ ಅದೇ ಪರಿಹಾರವಾಗುವುದಿಲ್ಲ.

ಉದಾಹರಣೆಗೆ, ಹುಲ್ಲುಗಾವಲುಗಳಲ್ಲಿ ಬದುಕುವ ಕೆಲವು ಪಕ್ಷಿಗಳಿಗೆ ದಟ್ಟ ಅರಣ್ಯ ಬೇಕಾಗುವುದಿಲ್ಲ. ತೆರೆದ ಹುಲ್ಲುಗಾವಲುಗಳೇ ಅವುಗಳ ಮನೆ. ಜೌಗು ಪ್ರದೇಶಗಳಲ್ಲಿ ಬದುಕುವ ಉಭಯವಾಸಿಗಳಿಗೆ ಸ್ವಚ್ಛವಾದ ನೀರಿನ ಸಣ್ಣ ತೊರೆಗಳು ಮುಖ್ಯ. ಕೆಲವು ಕೀಟಗಳು ಒಂದೇ ಒಂದು ಸಸ್ಯವನ್ನು ಅವಲಂಬಿಸಿರುತ್ತವೆ. ಅವುಗಳ ಸಂರಕ್ಷಣೆಗೆ ಬೇಕಾದ ಕ್ರಮಗಳು ಹುಲಿ ಸಂರಕ್ಷಣೆಯಿಂದ ಭಿನ್ನವಾಗಿರಬಹುದು.

ಆದ್ದರಿಂದ "ಹುಲಿಯನ್ನು ಉಳಿಸಿದರೆ ಎಲ್ಲವೂ ಉಳಿಯುತ್ತದೆ" ಎಂಬ ಮಾತನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಬೇಕು. ಅದು ಅನೇಕ ಸಂದರ್ಭಗಳಲ್ಲಿ ಉಪಯುಕ್ತವಾದರೂ, ಎಲ್ಲ ಜೀವಿಗಳಿಗೆ ಅನ್ವಯಿಸುವ ನಿಯಮವಲ್ಲ. ಅಲ್ಲದೆ ಪ್ರತಿಯೊಂದು ಪರಿಸರ ವ್ಯವಸ್ಥೆಯಲ್ಲೂ ಪ್ರಮುಖ ಪರಭಕ್ಷಕ ಒಂದೇ ಆಗಿರುವುದಿಲ್ಲ.

ಹುಲಿ ಉಳಿಸಿದರೆ ಎಲ್ಲವು ಉಳಿಯುತ್ತದೆ ಎಂಬ ಮಾತನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಹುಲಿ ಇರದ ಬಯಲು ಸೀಮೆಯ ಕಾಡುಗಳಲ್ಲಿ ಕೃಷ್ಣಮೃಗಗಳಂತಹ ಹುಲ್ಲೆ ಪ್ರಭೇದದ ಪ್ರಾಣಿಗಳು ಬದುಕುತ್ತವೆ. ಇವುಗಳ ಪ್ರಮುಖ ಪರಭಕ್ಷಕ ತೋಳಗಳು ಮತ್ತು ಒಂದು ಕಾಲದಲ್ಲಿ ನಮ್ಮ ನೆಲದಲ್ಲೇ ಬದುಕಿದ್ದ, ಈಗ ಅಳಿದು ಹೋಗಿರುವ ಸೀವಂಗಿಗಳು (Cheetha). ಇಂತಹ ಹುಲ್ಲುಗಾವಲುಗಳನ್ನು, ಅಲ್ಲಿನ ಜೀವವೈವಿಧ್ಯತೆಯನ್ನು ಉಳಿಸಲು ಹುಲಿ ಸಂರಕ್ಷಣೆಗಿಂತ ಭಿನ್ನವಾದ ಸಂರಕ್ಷಣಾ ಕ್ರಮಗಳ ಅವಶ್ಯಕತೆಯಿದೆ. ಚಿತ್ರ: © ಶ್ರೀಕಾಂತ


ಇನ್ನೊಂದು ಸವಾಲು ಮಾನವ-ವನ್ಯಜೀವಿ ಸಂಬಂಧ. ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಸಂತೋಷದ ವಿಷಯ. ಆದರೆ ಅದೇ ಸಮಯದಲ್ಲಿ ಕಾಡಿನ ಅಂಚಿನಲ್ಲಿ ಬದುಕುವ ಜನರ ಜೀವನವೂ ಸುರಕ್ಷಿತವಾಗಿರಬೇಕು. ಜಾನುವಾರುಗಳ ನಷ್ಟ, ಮಾನವರ ಮೇಲಿನ ದಾಳಿಗಳು, ಪರಿಹಾರದ ವಿಳಂಬ, ಬೆಳೆ ಹಾನಿ ಇವೆಲ್ಲವೂ ಜನರಲ್ಲಿ ಅಸಮಾಧಾನ ಉಂಟುಮಾಡುತ್ತವೆ. ಸಂರಕ್ಷಣೆಯ ಭಾರವನ್ನು ಸ್ಥಳೀಯ ಸಮುದಾಯಗಳೇ ಹೊತ್ತುಕೊಂಡರೆ, ಅವರು ಸಂರಕ್ಷಣೆಯ ಪಾಲುದಾರರಾಗುವುದು ಕಷ್ಟ.

ಕಾಡಿನ ಅಂಚಿನಲ್ಲಿ ಬದುಕುವ ಜನರು ಪ್ರಕೃತಿಯ ಶತ್ರುಗಳಲ್ಲ. ಅವರ ಬದುಕೂ ಅದೇ ಕಾಡಿನೊಂದಿಗೆ ಹೆಣೆದುಕೊಂಡಿದೆ. ಅವರನ್ನು ಹೊರಗಿಟ್ಟು ರೂಪಿಸುವ ಯಾವುದೇ ಸಂರಕ್ಷಣಾ ನೀತಿ ದೀರ್ಘಕಾಲ ಯಶಸ್ವಿಯಾಗುವುದಿಲ್ಲ.

ಕೆಲವೊಮ್ಮೆ ಚಿರತೆ ಜಾನುವಾರನ್ನು ಕೊಲ್ಲುತ್ತದೆ. ಕೆಲವೊಮ್ಮೆ ಹುಲಿ ಹಸುವಿನ ಮೇಲೆ ದಾಳಿ ಮಾಡುತ್ತದೆ. ಆನೆಗಳು ಒಂದು ರಾತ್ರಿಯಲ್ಲಿ ಒಬ್ಬ ರೈತನ ಹಲವು ದಿನಗಳ ಪರಿಶ್ರಮವನ್ನು ನಾಶ ಮಾಡುತ್ತವೆ. ಇಂತಹ ಘಟನೆಗಳು ಕೇವಲ ಅಂಕಿ-ಅಂಶಗಳಲ್ಲ. ಅವು ಒಂದು ಕುಟುಂಬದ ಜೀವನೋಪಾಯದ ಮೇಲೆ ನೇರ ಪರಿಣಾಮ ಬೀರುತ್ತವೆ.

ಇಂತಹ ಸಂದರ್ಭದಲ್ಲಿ "ಹುಲಿಯನ್ನು ಉಳಿಸಬೇಕು" ಎಂದು ಹೇಳುವುದು ಸುಲಭ. ಆದರೆ ತನ್ನ ಒಂದೇ ಹಸುವನ್ನು ಕಳೆದುಕೊಂಡ ರೈತನ ನೋವನ್ನು ಅರ್ಥಮಾಡಿಕೊಳ್ಳುವುದೂ ಅಷ್ಟೇ ಮುಖ್ಯ.

ಸಂರಕ್ಷಣೆ ಯಶಸ್ವಿಯಾಗಬೇಕಾದರೆ ಸ್ಥಳೀಯ ಜನರು ಅದರ ವಿರೋಧಿಗಳಾಗಬಾರದು, ಪಾಲುದಾರರಾಗಬೇಕು. ಅದಕ್ಕಾಗಿ ತ್ವರಿತ ಮತ್ತು ನ್ಯಾಯಯುತ ಪರಿಹಾರ, ಬೆಳೆ ಮತ್ತು ಜಾನುವಾರುಗಳ ರಕ್ಷಣೆ, ಸುರಕ್ಷಿತ ಬೇಲಿಗಳು, ವೈಜ್ಞಾನಿಕ ಸಲಹೆಗಳು, ಉತ್ತಮ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳು, ಹಾಗೂ ನಿರ್ಧಾರಗಳಲ್ಲಿ ಸ್ಥಳೀಯ ಸಮುದಾಯದ ಭಾಗವಹಿಸುವಿಕೆ ಅತ್ಯಗತ್ಯ.

ಜನರು ವನ್ಯಜೀವಿ ಸಂರಕ್ಷಣೆಯಿಂದ ತಮ್ಮ ಬದುಕಿಗೂ ಪ್ರಯೋಜನವಿದೆ ಎಂದು ನಂಬಿದಾಗ ಮಾತ್ರ ಅವರು ಕಾಡಿನ ಮೊದಲ ರಕ್ಷಕರಾಗುತ್ತಾರೆ.

ಇತಿಹಾಸವೂ ಇದನ್ನೇ ಹೇಳುತ್ತದೆ. ಭಾರತದಲ್ಲಿ ಇಂದಿಗೂ ಉಳಿದಿರುವ ಅನೇಕ ಕಾಡುಗಳು ಕೇವಲ ಸರ್ಕಾರದ ಪ್ರಯತ್ನದಿಂದ ಉಳಿದಿಲ್ಲ. ತಲೆಮಾರುಗಳಿಂದ ಆ ಕಾಡಿನೊಂದಿಗೆ ಬದುಕಿದ ಆದಿವಾಸಿಗಳು ಮತ್ತು ಸ್ಥಳೀಯ ಸಮುದಾಯಗಳ ಪಾತ್ರವೂ ಅದರಲ್ಲಿ ಮಹತ್ವದ್ದಾಗಿದೆ.

ಆದ್ದರಿಂದ ಸಂರಕ್ಷಣೆಯ ಯಶಸ್ಸನ್ನು ಕೇವಲ ಹುಲಿಗಳ ಸಂಖ್ಯೆಯಿಂದ ಅಳೆಯಲಾಗುವುದಿಲ್ಲ. ಅದನ್ನು ಕಾಡಿನ ಆರೋಗ್ಯದಿಂದ ಅಳೆಯಬೇಕು. ಅದರಲ್ಲಿರುವ ಜೀವವೈವಿಧ್ಯದಿಂದ ಅಳೆಯಬೇಕು. ಹಾಗೆಯೇ ಕಾಡಿನ ಅಂಚಿನಲ್ಲಿ ಬದುಕುವ ಜನರ ನೆಮ್ಮದಿಯಿಂದಲೂ ಅಳೆಯಬೇಕು. ಜನರನ್ನೂ ಜೊತೆಗೆ ಕರೆದುಕೊಂಡು ಹೋಗುವ ಸಂರಕ್ಷಣೆಯೇ ನಿಜವಾದ ಯಶಸ್ಸು. ಅದು ಕೇವಲ ಪ್ರಾಣಿಗಳನ್ನು ರಕ್ಷಿಸುವುದಲ್ಲ; ಪ್ರಾಣಿಗಳಿಗೂ, ಮನುಷ್ಯರಿಗೂ ನ್ಯಾಯ ಒದಗಿಸುವ ವ್ಯವಸ್ಥೆಯನ್ನು ಕಟ್ಟುವುದು.

ಆದ್ದರಿಂದ ಇಂದಿನ ಸಂರಕ್ಷಣೆಯ ಪ್ರಶ್ನೆ "ಹುಲಿಯನ್ನು ಹೇಗೆ ಉಳಿಸಬೇಕು?" ಎಂಬುದೊಂದೇ ಅಲ್ಲ. "ಹುಲಿ, ಅರಣ್ಯ ಮತ್ತು ಮನುಷ್ಯ ಈ ಮೂರೂ ಸಹಬಾಳ್ವೆಯಿಂದ ಹೇಗೆ ಬದುಕಬೇಕು?" ಎಂಬುದು. ಮುಂದಿನ ದಿನಗಳಲ್ಲಿ ಭಾರತದ ವನ್ಯಜೀವಿ ಸಂರಕ್ಷಣೆಯ ದೊಡ್ಡ ಸವಾಲು ಇದೇ.

ಗಣಗೂರಿನ ಆ ಮಧ್ಯಾಹ್ನವನ್ನು ನಾನು ಇಂದಿಗೂ ಮರೆತಿಲ್ಲ. ನನ್ನ ಎದುರು ನಿಂತಿದ್ದ ಹೆಣ್ಣು ಹುಲಿ ನನ್ನನ್ನು ನೋಡಿ ಕ್ಷಣಕಾಲ ನಿಂತಿತು. ನಂತರ ಯಾವುದೇ ಆತುರವಿಲ್ಲದೆ, ಯಾವುದೇ ಆಕ್ರಮಣವಿಲ್ಲದೆ, ತನ್ನ ದಾರಿಯಲ್ಲಿ ಕಾಡಿನೊಳಗೆ ನಡೆದುಹೋಯಿತು.

ಆ ಕ್ಷಣದಲ್ಲಿ ನಾನು ಕಂಡಿದ್ದು ಕೇವಲ ಒಂದು ಹುಲಿಯನ್ನಲ್ಲ. ಸಾವಿರಾರು ವರ್ಷಗಳಿಂದ ರೂಪುಗೊಂಡಿರುವ ಒಂದು ಪರಿಸರ ವ್ಯವಸ್ಥೆಯ ಜೀವಂತ ರೂಪವನ್ನು. ಅದರ ಹೆಜ್ಜೆಗಳ ಹಿಂದೆ ಜೀವವೈವಿಧ್ಯತೆಯ ಕಥೆಗಳೂ ಅಡಗಿದ್ದವು.

ಹುಲಿಯನ್ನು ಉಳಿಸುವುದು ಎಂದರೆ ಆ ಒಂದು ಪ್ರಾಣಿಯನ್ನು ಮಾತ್ರ ಉಳಿಸುವುದಲ್ಲ. ಅದರ ಬದುಕಿಗೆ ಆಧಾರವಾಗಿರುವ ಇಡೀ ಅರಣ್ಯವನ್ನು ಉಳಿಸುವುದು. ಅದೇ ಸಮಯದಲ್ಲಿ ಆ ಅರಣ್ಯದ ಅಂಚಿನಲ್ಲಿ ಬದುಕುವ ಜನರ ಬದುಕನ್ನೂ ಗೌರವಿಸುವುದು. ಸಂರಕ್ಷಣೆಯ ನಿಜವಾದ ಯಶಸ್ಸು ಎಂದರೆ ಹುಲಿಗಳ ಸಂಖ್ಯೆ ಹೆಚ್ಚುವುದಷ್ಟೇ ಅಲ್ಲ. ಅರಣ್ಯಗಳು ಆರೋಗ್ಯವಾಗಿರುವುದು, ನದಿಗಳು ಹರಿಯುತ್ತಿರುವುದು, ಜೀವವೈವಿಧ್ಯ ಸಮೃದ್ಧವಾಗಿರುವುದು ಮತ್ತು ಸ್ಥಳೀಯ ಜನರು ಈ ಸಂರಕ್ಷಣೆಯ ಭಾಗವಾಗಿರುವುದು.

ಹುಲಿಯನ್ನು ಉಳಿಸುವುದರ ಮೂಲಕ ಅದರ ಬದುಕಿಗೆ ಆಧಾರವಾಗಿರುವ ಜೀವವೈವಿಧ್ಯತೆಯನ್ನು ಒಳಗೊಂಡ ಇಡೀ ಅರಣ್ಯವನ್ನು ಉಳಿಸುವುದು ಹುಲಿ ಸಂರಕ್ಷಣೆಯ ಪ್ರಮುಖ ಉದ್ದೇಶ. ಪೂರ್ವ ಘಟ್ಟಗಳ ಹುಲಿ ಸಂರಕ್ಷಿತ ಪ್ರದೇಶದ ಒಂದು ನೋಟ. ಚಿತ್ರ: © ಶ್ರೀಕಾಂತ


ಬಹುಶಃ ಅದಕ್ಕಾಗಿಯೇ ಭಾರತವು ಹುಲಿಗೆ ಇಷ್ಟೊಂದು ಮಹತ್ವ ನೀಡಿದೆ. ಏಕೆಂದರೆ, ಹುಲಿ ಕೇವಲ ಒಂದು ಪ್ರಾಣಿ ಅಲ್ಲ. ಅದು ನಮ್ಮ ಅರಣ್ಯಗಳ ಆರೋಗ್ಯವನ್ನು ತೋರಿಸುವ ಒಂದು ಸಂಕೇತ.

ಆದರೆ ಕೊನೆಯಲ್ಲಿ ನಾವು ಮರೆಯಬಾರದ ಒಂದು ಸತ್ಯವಿದೆ.

ನಾವು ಉಳಿಸಬೇಕಾಗಿರುವುದು ಬರಿ ಹುಲಿಯನ್ನಲ್ಲ; ಅದರ ಮೂಲಕ ಪ್ರತಿನಿಧಿಸಲ್ಪಡುವ ಸಂಪೂರ್ಣ ಪ್ರಕೃತಿಯನ್ನು. ಹುಲಿ ಇಲ್ಲದ ಕಾಡು ಅಪೂರ್ಣವಾಗಿರಬಹುದು. ಆದರೆ ಬರಿ ಹುಲಿ ಮಾತ್ರ ಇರುವ ಕಾಡೂ ಸಂಪೂರ್ಣವಾಗುವುದಿಲ್ಲ. ನಿಜವಾದ ವನ್ಯಜೀವಿ ಸಂರಕ್ಷಣೆ ಎಂದರೆ ಪ್ರತಿಯೊಂದು ಜೀವಿಗೂ ಅದರ ವಾಸಸ್ಥಾನ ಉಳಿಯುವಂತೆ, ಮನುಷ್ಯ ಮತ್ತು ಪ್ರಕೃತಿ ಪರಸ್ಪರ ಗೌರವದಿಂದ ಸಹಬಾಳ್ವೆ ನಡೆಸುವ ಭವಿಷ್ಯವನ್ನು ನಿರ್ಮಿಸುವುದು.

"ಈ ದೇಶದಲ್ಲಿ ಲಕ್ಷಾಂತರ ಜೀವಿಗಳಿರುವಾಗ, ಹುಲಿಗೇ ಏಕೆ ಇಷ್ಟೊಂದು ಪ್ರಾಮುಖ್ಯತೆ?" ಎಂಬ ಪ್ರಶ್ನೆಗೆ ಕೊನೆಯಲ್ಲಿ ಒಂದೇ ಉತ್ತರ ಸಿಗುತ್ತದೆ. ಅದು ಕೇವಲ ಒಂದು ಪ್ರಾಣಿಯನ್ನು ಉಳಿಸುವುದಲ್ಲ; ನಮ್ಮ ಕಾಡುಗಳನ್ನು, ನದಿಗಳನ್ನು, ನೀರಿನ ಮೂಲಗಳನ್ನು ಮತ್ತು ನಮ್ಮ ಭವಿಷ್ಯವನ್ನೂ ಉಳಿಸುವ ಪ್ರಯತ್ನವಾಗಿದೆ.

"ಹುಲಿಯನ್ನು ಉಳಿಸುವ ಪ್ರಯತ್ನ, ಸರಿಯಾಗಿ ನಡೆಸಿದರೆ, ಕೊನೆಗೆ ನಮ್ಮನ್ನೇ ಉಳಿಸುವ ಪ್ರಯತ್ನವಾಗುತ್ತದೆ."


ಆಧಾರ:

ಪುಸ್ತಕ: 'ಹುಲಿಯ ಬದುಕು' ಮತ್ತು 'ಹುಲಿರಾಯನ ಆಕಾಶವಾಣಿ' - ಉಲ್ಲಾಸ ಕಾರಂತ

ಸಾಕ್ಷ್ಯಚಿತ್ರ: ಹುಲಿ ಉಳಿಸುವ ದಾರಿ - ಶೇಖರ್ ದತ್ತಾತ್ರಿ

ಸಾಕ್ಷ್ಯಚಿತ್ರ: Project Tiger - Kalyan Varma

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಚಿತ್ರ: © ಶ್ರೀಕಾಂತ ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. ಚಿತ್ರ: © ಶ್ರೀಕಾಂತ Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

 ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ್ರ...