ವಿಷಯಕ್ಕೆ ಹೋಗಿ

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.


ಅತ್ತಿ

ಆದರೆ ಇದು ಯಾವ ಹಣ್ಣು ಎಂಬುದು ಬಗೆ ಹರಿಯಲಿಲ್ಲ. ನನ್ನ ಗೆಳೆಯರನ್ನು ಕೇಳಿದರೆ ಕೆಲವರು ಇದು ಸ್ಟ್ರಾಬೆರಿ ಎಂದೊ ಅಥವಾ ತಮಗೆ ತೋಚಿದ ಹಣ್ಣಿನ ಹೆಸರನ್ನು ಹೇಳುತ್ತಿದ್ದರು. ಮುಂದೆ ಒಮ್ಮೆ ನನ್ನ ತಾಯಿಯ ಜೊತೆ ಯಾವುದೊ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ಇದ್ದ ಈ ಮರವನ್ನು ನೋಡಿ ಇದರ ಹಣ್ಣನ್ನು ತೋರಿಸಿ ಇದನ್ನು ತಿನ್ನಬಹುದೆ ಎಂದು ಕೇಳಿದ್ದಕ್ಕೆ ಅವರು ಇದು ಅತ್ತಿ ಹಣ್ಣು ಇದರ ತುಂಬ ಹುಳು ಇರುತ್ತದೆ. ಇದನ್ನು ತಿನ್ನಬಾರದು ಎಂದರು. ಹೀಗೆ ನನಗೆ ಪರಿಚಯವಾಯಿತು ಅತ್ತಿ ಮರ.

ಅತ್ತಿ ಮರ ಭಾರತ ಉಪಖಂಡ, ಆಸ್ಟ್ರೇಲಿಯಾ, ಮಲೇಷಿಯಾ ದೇಶಗಳಲ್ಲಿ ಕಂಡು ಬರುತ್ತದೆ. ಇದರ ವೈಜ್ಞಾನಿಕ ಹೆಸರು ಫೈಕಸ್ ರಾಸೀಮೊಸ (Ficus racemosa) ಮತ್ತು ಮೊರೇಸಿಯೆ ಕುಟುಂಬಕ್ಕೆ ವರ್ಗೀಕರಿಸಲಾಗಿದೆ. ಇದಕ್ಕೆ ಸಂಸ್ಕೃತದಲ್ಲಿ ಉದುಂಬರ, ಹಿಂದಿಯಲ್ಲಿ ಗೂಲರ್, ತೆಲುಗಿನಲ್ಲಿ ಮೇಡಿ ಪಂಡು, ತಮಿಳಿನಲ್ಲಿ ಮತ್ತು ಮಲಯಾಳಂನಲ್ಲಿ ಅತ್ತಿ, ಎಂದು ಹೆಸರಿದೆ.

ಅತ್ತಿ ಸುಮಾರು ೨೦-೩೦ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಹಳೆಯ ಮರಗಳಲ್ಲಿ ಇದರ ಕಾಂಡ ಸುಮಾರು ೬೦-೯೦ಸೆಂಮೀನಷ್ಟು ಅಗಲ ಇರುತ್ತದೆ ಮತ್ತು ತೊಗಟೆ ನಯವಾಗಿರುತ್ತದೆ. ಇದರ ಎಲೆಗಳು ಸರಳ ಮತ್ತು ಅದಲು ಬದಲಾಗಿ ಇರುತ್ತವೆ. ಹೊಸ ಚಿಗುರು ಬಿಳಿ ಬಣ್ಣ ಮತ್ತು ಸಣ್ಣ ಕೂದಲಿನಂತಹ ಎಳೆಗಳು ಇರುತ್ತವೆ.ಆಗಸ್ಟ್ ನಿಂದ ನವೆಂಬರ್ ವರೆಗು ಎಲೆ ಉದುರುವ ಕಾಲ. ಜನವರಿ ಫೆಬ್ರವರಿಯಲ್ಲಿ ಕಾಯಿ ಬಿಡುತ್ತವೆ. ಏಪ್ರಿಲ್ ವರೆಗೂ ಹಣ್ಣಾಗುತ್ತದೆ. 
ಎಲೆಗಳು


ಎಲ್ಲ ಫೈಕಸ್ ಮರಗಳಂತೆ ಅತ್ತಿಯ ಹೂಗಳು ಕೂಡ ಕಾಯಿಯಲ್ಲಿ ಅಡಗಿರುತ್ತದೆ. ಇದರ ಪರಾಗಸ್ಪರ್ಶ ಮಾಡುವ ವಿಶೇಷ ಕಣಜಗಳಿವೆ. ಈ ಕಣಜಗಳು ತಮ್ಮ ವಂಶಾಭಿವೃದ್ಧಿಗಾಗಿ ಅತ್ತಿಯ ಮರವನ್ನು ಅವಲಂಬಿಸಿವೆ. ನಾವು ಹಣ್ಣೆಂದು ಕೊಂಡಿರುವ ಹೂವಿನ ಒಳಗೆ ಕಣಜ ಮೊಟ್ಟೆಯಿಡುತ್ತದೆ. ಮೊದಲು ರೆಕ್ಕೆಯಿಲ್ಲದ ಗಂಡಿನ ಮರಿಗಳು ಹೊರಬಂದು ಹೆಣ್ಣಿಗಾಗಿ ರಂಧ್ರವನ್ನು ಕೊರೆಯುತ್ತದೆ. ಇತರ ಮರದ ಹಣ್ಣಿನಿಂದ ಬರುವ ರೆಕ್ಕೆಯಿರುವ ಹೆಣ್ಣು ಕಣಜಗಳು ಅಲ್ಲಿನ ಪರಾಗವನ್ನು ಹೊತ್ತು ತರುತ್ತವೆ. ಹೀಗೆ ಪರಾಗಸ್ಪರ್ಶ ನಡೆಯುತ್ತದೆ. ಈ ಕಣಜ ಕಡಿಮೆ ಅವಧಿ ಬದುಕುವ ಕಾರಣ ಬೇರೆ ಬೇರೆ ಅತ್ತಿ ಮರಗಳು ಬೇರೆ ಬೇರೆ ಕಾಲದಲ್ಲಿ ಹೂವನ್ನು ತಳೆಯುತ್ತದೆ. 
ಹಣ್ಣಿನ ಗೊಂಚಲು


ಭಾರತದಲ್ಲಿ ಅತ್ತಿ ಧಾರ್ಮಿಕವಾಗಿ ಮುಖ್ಯ ವಾದ ಮರ. ಹಿಂದುಗಳಲ್ಲಿ ಇದು ದತ್ತಾತ್ರೇಯರ ವಾಸ ಸ್ಥಾನ ಎಂದು ನಂಬಲಾಗಿದೆ. ಬೌದ್ಧ ಧರ್ಮ ದಲ್ಲು ಇದಕ್ಕೊ ಮಹತ್ವದ ಸ್ಥಾನವಿದೆ. ಇದರ ಹಣ್ಣನ್ನು ಕೆಲವು ಕಡೆ ತಿನ್ನುವ ರೂಢಿ ಇದೆ. ಅಡುಗೆಯಲ್ಲು ಬಳಸುತ್ತಾರೆ. ಇದರ ತೊಗಟೆ ಮತ್ತು ಬೇರುಗಳು ಔಷಧಿಯಾಗಿ ಬಳಸಲ್ಪಡುತ್ತದೆ. ಇದೆಲ್ಲಕ್ಕಿಂತ ಮುಖ್ಯ ವಾಗಿ ಅನೇಕ ಪ್ರಾಣಿ ಪಕ್ಷಿಗಳಿಗೆ ಇದರ ಹಣ್ಣು ಆಹಾರವಾಗುತ್ತದೆ‌.

ಅತ್ತಿ ಸುಮಾರು ೨೦-೩೦ಮೀಟರ್ ಎತ್ತರಕ್ಕೆ ಬೆಳೆಯುತ್ತದೆ

ಕಾಮೆಂಟ್‌ಗಳು

  1. ಪ್ರಪಂಚದಲ್ಲಿನ ಸುಮಾರು 700 ಜಾತಿಯ Ficus ಮರಗಳಿಗೆ ಸೀಮೀತವಾದ ಪ್ರತ್ಯೇಕ ಕಣಜಗಳಿವೆ. ಒಂದು ಜಾತಿಯ‌ ಮರಕ್ಕೆ ಬರುವ ಕಣಜಗಳು ಮತ್ತೊಂದಕ್ಕೆ ಹೋಗುವುದಿಲ್ಲ. ಈ ಕಣಜಗಳಲ್ಲಿ ಗಂಡು ಎಂದಿಗೂ ಹೊರ ಲೋಕವನ್ನೇ ನೋಡುವುದಿಲ್ಲ. ಅದರ ಹುಟ್ಟು-ಸಾವು ಎಲ್ಲಾ ಹಣ್ಣಿನ ಒಳಗೆ! Ficus ಜಾತಿಯ ಮರಗಳ ಹಿರಿಮೆಯೆಂದರೆ ವರ್ಷವಿಡೀ ಹಣ್ಣುಬಿಡುತ್ತದೆ. ಹೀಗಾಗಿ ಪ್ರಾಣಿ ಪಕ್ಷಿಗಳಿಗೆ ವರ್ಷವಿಡೀ ಆಹಾರ ಒದಗಿಸುವ ಅಧ್ಭುತ Ficus. ಈ ಕಾರಣದಿಂದಲೇ ಅವುಗಳ ಪರಾಗ ಕಣಗಳನ್ನು ಹೊತ್ತು ತರುವ ಕಣಜಗಳಿಗೆ ಒಂದು ಸೀಮಿತ ಪ್ರದೇಶದಲ್ಲಿ ಒಂದು ನಿರ್ದಿಷ್ಟ ಸಂಖ್ಯೆಯ ಮರಗಳಿರಲೇಬೇಕು. ಇಲ್ಲವಾದರೆ ಆ ಮರಗಳ ಪುನಾರಾಭಿವೃದ್ಧಿ ಸಾಧ್ಯವಿಲ್ಲ. ಅಂದಹಾಗೆ ದೈತ್ಯ ವೃಕ್ಷಗಳಿರುವ Ficus ಮರಗಳ ಪುನಾರಾಭಿವೃದ್ಧಿಗೆ ಸಹಕರಿಸುವುದು ಅತೀ ಸಣ್ಣ ಕಣಜಗಳು!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...