ಹೂವುಗಳು |
ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ. ೨೦೧೫ರಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ನಮ್ಮ ಗಣರಾಜ್ಯೋತ್ಸವದಂದು ಅತಿಥಿಯಾಗಿ ಬಂದಾಗ ಈ ಗೊಂಬೆಗಳನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ವರದಿಯಾಗಿತ್ತು. ಇಂದಿನ ಪ್ಲ್ಯಾಸ್ಟಿಕ್ ಯುಗದಲ್ಲಿ ಪರಿಸರ ಸ್ನೇಹಿಯಾದ ಮರದ ಗೊಂಬೆಗಳು ಇನ್ನು ಪ್ರಸ್ತುತವಾಗಿರುವುದು ಸಂತಸದಾಯಕ. ಅಂದ ಹಾಗೆ ಈ ಗೊಂಬೆಗಳನ್ನು ತಯಾರಿಸುವ ಮರ ಯಾವುದೆಂದು ನಿಮಗೆ ಗೊತ್ತೆ? ಅದು ಆಲೆ ಅಥವಾ ಬೆಪ್ಪಾಲೆ ಮರ.
ಎಲೆಗಳು |
ಆಲೆ ಭಾರತ, ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ ದೇಶಗಳಲ್ಲಿ ಕಂಡು ಬರುತ್ತದೆ. ಇದು ಒಣ ಪ್ರದೇಶ ಮತ್ತು ಎಲೆಯುದುರುವ ಕಾಡುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಇಂಗ್ಲೀಷ್ ನಲ್ಲಿ ಪಾಲ ಇಂಡಿಗೊ ಅಥವಾ ಡೈಯರ್ಸ್ ಓಲಿಯಾಂಡರ್ ಎನ್ನುವ ಹೆಸರಿದೆ. ಇದರ ವೈಜ್ಞಾನಿಕ ಹೆಸರು ರೈಟಿಯ ಟಿಂಕ್ಟೋರಿಯ.
ಕಾಯಿಗಳು |
ಇದು ಸುಮಾರು ೧೮ ಮೀ ಎತ್ತರದವರೆಗು ಬೆಳೆಯುತ್ತದೆ. ಇದರ ಕಾಂಡ ಸುಮಾರು ೨೦ ಸೆಂಮೀ ದಪ್ಪವಿರುತ್ತದೆ. ಇದರ ತೊಗಟೆ ಹಳದಿ ಮಿಶ್ರಿತ ಕಂದು ಬಣ್ಣದಿಂದ ಕೂಡಿರುತ್ತದೆ, ಬಿಳಿ ಬಣ್ಣದ ದ್ರವವನ್ನು ಸ್ರವಿಸುತ್ತದೆ ಮತ್ತು ನುಣುಪಾಗಿರುತ್ತದೆ. ಎಲೆಗಳು ಸರಳ ರೀತಿಯಲ್ಲಿ ಎದುರು ಬದುರಾಗಿ ವಿನ್ಯಾಸವಾಗಿರುತ್ತದೆ. ಇದು ಬೇಸಿಗೆಯಲ್ಲಿ ಅಂದರೆ ಮಾರ್ಚ್ನಿಂದ ಮೇವರೆಗೆ ಹೂ ಬಿಡುತ್ತದೆ. ಕಡು ಹಸಿರು ಬಣ್ಣದ ಹುರುಳಿ ರೀತಿಯ ಕಾಯಿಗಳು ತುದಿಯಲ್ಲಿ ಅಂಟಿಕೊಂಡಿರುತ್ತದೆ. ಪರಾಗಸ್ಪರ್ಶ ಕೀಟಗಳಿಂದ ಆಗುತ್ತದೆ ಮತ್ತು ಬೀಜ ಪ್ರಸರಣ ಗಾಳಿಯಿಂದ ಆಗುತ್ತದೆ. ಬಿಳಿ ಬಣ್ಣದ ಇದರ ಹೂವುಗಳು ನಕ್ಷತ್ರದ ರೀತಿ ಐದು ಎಸಳು ಇರುತ್ತದೆ. ಹೂವುಗಳು ಗೊಂಚಲಾಗಿ ಬಿಡುತ್ತವೆ ಹಾಗಾಗಿ ದೂರದಿಂದ ನೋಡಲು ಆಕರ್ಷಕವಾಗಿರುತ್ತವೆ.
ತೊಗಟೆ |
ಮೊದಲೆ ತಿಳಿಸಿದಂತೆ ಆಲೆಯನ್ನು ಗೊಂಬೆ ಮಾಡಲು ಉಪಯೋಗಿಸುತ್ತಾರೆ. ವಿಲಿಯಮ್ ರಾಕ್ಸ್ಬರ್ ಎಂಬುವನು ಇದರ ಬಣ್ಣ ದಂತದ ಬಣ್ಣದ ಸನಿಹಕ್ಕೆ ಬರುತ್ತದೆ ಎಂದು ಬರೆದಿದ್ದಾನೆ. ಹಾಗಾಗಿ ಇದನ್ನು ಕುಸುರಿ ಕೆಲಸ ಮಾಡಲು ಉಪಯೋಗಿಸುತ್ತಾರೆ. ಪೀಠೋಪಕರಣಕ್ಕು ಬಳಸಲಾಗುತ್ತದೆ. ಇದರ ಎಲೆ, ಹೂವು ಮತ್ತು ಬೇರುಗಳಿಂದ ನೀಲಿ ಬಣ್ಣವನ್ನು ತಯಾರಿಸಬಹುದು.
ಹಿಂದೆ ಯಥೇಚ್ಛವಾಗಿ ಸ್ವಾಭಾವಿಕವಾಗಿ ಕಾಣಿಸಿಕೊಳ್ಳುತ್ತಿದ್ದ ಆಲೆ ಇಂದು ಅಪರೂಪವಾಗುತ್ತಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ