ಜೀವ ವಿಕಾಸ ಸಿದ್ಧಾಂತದ ಒಂದು ವೈಶಿಷ್ಟ್ಯವೆಂದರೆ ಈಗಾಗಲೇ ಇರುವ ವಿವರಗಳನ್ನು ವಿಶ್ಲೇಷಿಸಿ ಮುಂದಿನದ್ದನ್ನು ಊಹಿಸುವ ಸಾಮರ್ಥ್ಯ! ವಿಜ್ಞಾನವೆಂದರೆ ಈಗಾಗಲೇ ಗೊತ್ತಿರುವ ಸಂಗತಿಗಳನ್ನು ದಾಖಲಿಸುವುದು ಮಾತ್ರವಲ್ಲ, ಇನ್ನೂ ಕಂಡುಹಿಡಿಯದಿರುವ ಸಂಗತಿಗಳ ಬಗ್ಗೆ ಊಹೆಗಳನ್ನು ಮಾಡುವುದು, ನಂತರ ಅವು ಸತ್ಯವೋ ಸುಳ್ಳೋ ಎಂದು ಪರೀಕ್ಷಿಸುವುದೂ ಅದರ ಮೂಲಭೂತ ಸ್ವಭಾವ. ಆದ್ದರಿಂದ ಪರೀಕ್ಷಿಸಬಹುದಾದ ಊಹೆಗಳನ್ನು ರೂಪಿಸುವುದು ಪ್ರತಿಯೊಂದು ವೈಜ್ಞಾನಿಕ ಸಂಶೋಧನೆಯ ಹೃದಯವಾಗಿದೆ.
ಕೆಲವು ಊಹೆಗಳನ್ನು ಪರಿಶೀಲಿಸುವುದು ಸುಲಭ. ಆದರೆ ಕೆಲವು ಊಹೆಗಳು ಪ್ರಕೃತಿಯಲ್ಲೇ ಅಪರೂಪವಾಗಿ ನಡೆಯುವ ಒಂದು ಘಟನೆಯನ್ನು ನೇರವಾಗಿ ನೋಡುವವರೆಗೆ ಉತ್ತರ ಕೊಡುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಹಲವು ದಶಕಗಳಲ್ಲ, ಒಂದು ಶತಮಾನಕ್ಕೂ ಹೆಚ್ಚು ಕಾಲ ಕಾಯಬೇಕಾಗುತ್ತದೆ. ಡಾರ್ವಿನ್ ಊಹಿಸಿದ್ದ ಪತಂಗದ ಕಥೆಯೂ ಅಂಥದ್ದೇ. ಪರಿಸರ ವಿಜ್ಞಾನ ಮತ್ತು ವಿಕಾಸ ಜೀವಶಾಸ್ತ್ರದ ಅತ್ಯಂತ ಪ್ರಸಿದ್ಧ ಊಹೆಗಳಲ್ಲಿ ಒಂದಾದ ಈ ಊಹೆಯನ್ನು ಖಚಿತಪಡಿಸಿಕೊಳ್ಳಲು ಅನೇಕ ಅಧ್ಯಯನಗಳು ಮತ್ತು ಬಹಳ ದೀರ್ಘಕಾಲದ ಸಂಶೋಧನೆ ಬೇಕಾಯಿತು.
ಹೂಬಿಡುವ ಸಸ್ಯಗಳ ಜೀವನದಲ್ಲಿ ಪರಾಗಸ್ಪರ್ಶ ಅತ್ಯಂತ ಮಹತ್ವದ ಹಂತ. ಒಂದು ಹೂವಿನ ಪರಾಗ ಮತ್ತೊಂದು ಹೂವಿನ ಅಂಡಾಶಯವನ್ನು ತಲುಪಿದಾಗ ಮಾತ್ರ ಹೊಸ ಬೀಜಗಳು ರೂಪುಗೊಳ್ಳುತ್ತವೆ. ಆದರೆ ಸಸ್ಯಗಳಿಗೆ ತಮ್ಮಷ್ಟಕ್ಕೆ ತಾವೇ ಚಲಿಸಲು ಸಾಧ್ಯವಿಲ್ಲ. ಹಾಗಿದ್ದಾಗ ಈ ಕೆಲಸವನ್ನು ಅವು ಹೇಗೆ ಮಾಡುತ್ತವೆ?
ಕೆಲವು ಸಸ್ಯಗಳು ಗಾಳಿಯನ್ನು ಅವಲಂಬಿಸುತ್ತವೆ. ಈ ವಿಧಾನದಲ್ಲಿ ಸಸ್ಯ ಅಪಾರ ಪ್ರಮಾಣದ ಪರಾಗವನ್ನು ಗಾಳಿಗೆ ತೇಲಿಬಿಡುತ್ತವೆ, ಅದರಲ್ಲಿ ಸ್ವಲ್ಪವಾದರೂ ಸರಿಯಾದ ಹೂವನ್ನು ತಲುಪಬಹುದು.
ಆರ್ಕಿಡ್ ಸಸ್ಯಗಳ ದಾರಿ ಬೇರೆ. ಅವು ತಮ್ಮಲ್ಲಿನ ಮಕರಂದವನ್ನು ಅಥವಾ ವಿವಿಧ ಆಕರ್ಷಕ ಸಂಕೇತಗಳನ್ನು ಬಳಸಿಕೊಂಡು ಕೀಟಗಳನ್ನು ತಮ್ಮ ಬಳಿಗೆ ಸೆಳೆಯುತ್ತವೆ. ಕೀಟವು ಮಕರಂದವನ್ನು ಸೇವಿಸಲು ಬಂದಾಗ ಅದರ ದೇಹಕ್ಕೆ ಪರಾಗ ಅಂಟಿಕೊಳ್ಳುತ್ತದೆ. ನಂತರ ಅದೇ ಜಾತಿಯ ಮತ್ತೊಂದು ಹೂವನ್ನು ಭೇಟಿ ಮಾಡಿದಾಗ ಆ ಪರಾಗ ಅಲ್ಲಿಗೆ ತಲುಪುತ್ತದೆ.
ಕೆಲವೊಮ್ಮೆ ಹೂವು ಮತ್ತು ಅದನ್ನು ಭೇಟಿ ಮಾಡುವ ಕೀಟದ ನಡುವೆ ಅತ್ಯಂತ ವಿಶೇಷವಾದ ಸಂಬಂಧ ಬೆಳೆಯುತ್ತದೆ. ಒಂದು ನಿರ್ದಿಷ್ಟ ಕೀಟಕ್ಕಷ್ಟೇ ಆ ಹೂವಿನ ಮಕರಂದವನ್ನು ತಲುಪಲು ಸಾಧ್ಯವಾದರೆ, ಆ ಕೀಟಕ್ಕೆ ಬೇರೆ ಜೀವಿಗಳೊಂದಿಗೆ ಆಹಾರಕ್ಕಾಗಿ ಸ್ಪರ್ಧಿಸುವ ಅಗತ್ಯವಿರುವುದಿಲ್ಲ. ಅದೇ ಸಮಯದಲ್ಲಿ, ಹೂವಿಗೂ ತನ್ನ ಪರಾಗ ತಪ್ಪಾದ ಹೂಗಳಿಗೆ ಹೋಗುವ ಸಾಧ್ಯತೆ ಕಡಿಮೆಯಾಗುತ್ತದೆ. ಇದು ಇಬ್ಬರಿಗೂ ಲಾಭದಾಯಕವಾದ ಸಂಬಂಧ.
ಆದರೆ ಆ ಹೂವಿನ ಮಕರಂದವನ್ನು ಎಲ್ಲ ಕೀಟಗಳೂ ತಲುಪಬಾರದು ಎಂದರೆ?
ಪ್ರಕೃತಿ ಅದಕ್ಕೂ ಒಂದು ಮಾರ್ಗ ಕಂಡುಕೊಂಡಿದೆ.
ವಿಕಾಸದ ಹಾದಿಯಲ್ಲಿ ಕೆಲವು ಹೂವುಗಳು ಮಕರಂದವಿರುವ ಕೊಳವೆಯನ್ನು (Nectar Spur) ನಿಧಾನವಾಗಿ ಉದ್ದವಾಗಿಸಿಕೊಂಡವು. ಕೆಲವು ಕೀಟಗಳ ಹೀರುಗೊಳವೆ (Proboscis) ಸಹಾ ಉದ್ದ ಕೊಳವೆಯ ತಳದಲ್ಲಿರುವ ಮಕರಂದವನ್ನು ತಲುಪಲು ಸಾಧ್ಯವಾಗುವಂತೆ ವಿಕಾಸವಾಯಿತು. ಹಲವು ಆರ್ಕಿಡ್‌ಗಳು ಪ್ರಭೇದಗಳು ಈ ತಂತ್ರವನ್ನು ಅತ್ಯಂತ ಪರಾಕಾಷ್ಠೆಗೆ ಕೊಂಡೊಯ್ದಿವೆ. ಅಂತಹ ಒಂದು ಆರ್ಕಿಡ್ ಹೂವೇ ಜಗತ್ತಿನ ಅತ್ಯಂತ ಪ್ರಸಿದ್ಧ ವೈಜ್ಞಾನಿಕ ಊಹೆಗಳಲ್ಲಿ ಒಂದಕ್ಕೆ ಕಾರಣವಾಯಿತು.
1862ರ ಆರಂಭದಲ್ಲಿ ಬ್ರಿಟಿಷ್ ಆರ್ಕಿಡ್ ಸಂಗ್ರಹಕಾರ ಜೇಮ್ಸ್ ಬ್ಯಾಟ್‌ಮನ್, ಮಡಗಾಸ್ಕರ್‌ನಿಂದ ಕೆಲವು ಆರ್ಕಿಡ್‌ಗಳನ್ನು ಚಾರ್ಲ್ಸ್ ಡಾರ್ವಿನ್ ಅವರಿಗೆ ಕಳುಹಿಸಿದರು. ಅವುಗಳಲ್ಲಿ Angraecum sesquipedale ಎಂಬ ಸುಂದರವಾದ ನಕ್ಷತ್ರಾಕಾರದ ಆರ್ಕಿಡ್ ಕೂಡ ಇತ್ತು.
| Angraecum sesquipedale ಆರ್ಕಿಡ್. ಇದರ ಉದ್ದವಾದ ಮಕರಂದ ಇರುವ ಕೊಳವೆಯನ್ನು ಗಮನಿಸಿ. ಚಿತ್ರ: Wikipedia (Public Domain) |
ಆ ಹೂವಿನ ವಿಶೇಷತೆಯೆಂದರೆ ಅದರ ಮಕರಂದದ ಕೊಳವೆ ಸುಮಾರು ಮೂವತ್ತು ಸೆಂಟಿಮೀಟರ್ ಉದ್ದವಿತ್ತು!
ಡಾರ್ವಿನ್ ಈ ವಿಚಿತ್ರ ರಚನೆಯನ್ನು ಗಮನಿಸಿದರು. ಇಷ್ಟೊಂದು ಉದ್ದದ ಮಕರಂದದ ಕೊಳವೆ ಯಾವುದೋ ಕಾರಣಕ್ಕಾಗಿ ರೂಪುಗೊಂಡಿರಬೇಕು. ಅದನ್ನು ತಲುಪಬಲ್ಲಷ್ಟು ಉದ್ದದ ಹೀರುಗೊಳವೆ ಹೊಂದಿರುವ ಒಂದು ಪತಂಗದೊಂದಿಗೆ ಈ ಹೂವು ಸಹ-ವಿಕಾಸಗೊಂಡಿರಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಒಂದು ಪತ್ರದಲ್ಲಿ ಅವರು ತಮ್ಮ ಸ್ನೇಹಿತನಿಗೆ ಹೀಗೆ ಬರೆದಿದ್ದರು:
"ನನಗೆ ಮಿಸ್ಟರ್ ಬ್ಯಾಟ್‌ಮನ್ ಅವರಿಂದ ಆರ್ಕಿಡ್‌ಗಳ ಒಂದು ಪೆಟ್ಟಿಗೆ ಬಂದಿದೆ. ಅದರಲ್ಲಿ ಸುಮಾರು ಒಂದು ಅಡಿ ಉದ್ದದ ಮಕರಂದದ ಕೊಳವೆಯಿರುವ ಅದ್ಭುತವಾದ Angraecum ಇದೆ. ದೇವರೇ! ಇಷ್ಟು ಆಳದಲ್ಲಿರುವ ಮಕರಂದವನ್ನು ಯಾವ ಕೀಟ ಹೀರುತ್ತದೆ?"
ಕೆಲವೇ ದಿನಗಳ ನಂತರ ಬರೆದ ಮತ್ತೊಂದು ಪತ್ರದಲ್ಲಿ ಅವರು ಇನ್ನೂ ಮುಂದುವರೆದು,
"ಮಡಗಾಸ್ಕರ್‌ನಲ್ಲಿ ಹತ್ತು ಅಥವಾ ಹನ್ನೊಂದು ಇಂಚುಗಳಷ್ಟು ಉದ್ದಕ್ಕೆ ಚಾಚಬಹುದಾದ ಹೀರುಗೊಳವೆ ಹೊಂದಿರುವ ಪತಂಗಗಳು ಇರಲೇಬೇಕು." ಎಂದು ಊಹಿಸಿದರು.
| ಡಾರ್ವಿನ್ ನ ಊಹೆಯನ್ನು ಆಧರಿಸಿ ಮತ್ತೊಬ್ಬ ಜೀವ ವಿಜ್ಞಾನಿ ಆಲ್‌ಫ್ರೆಡ್ ರಸೆಲ್ ವ್ಯಾಲೆಸ್ 1867ರಲ್ಲಿ ಚಿತ್ರಿಸಿದ ಪತಂಗ ಮತ್ತು ಆರ್ಕಿಡ್‌ನ ಕಾಲ್ಪನಿಕ ಚಿತ್ರ. ಇದರಲ್ಲಿನ ಪತಂಗ ನಿಜವಾಗಿಯೂ Xanthopan morganii praedicta ಪತಂಗವಲ್ಲ. ಆ ವೇಳೆಗೆ ಆ ಪತಂಗ ಇನ್ನೂ ಕಂಡುಹಿಡಿಯಲ್ಪಟ್ಟಿರಲಿಲ್ಲ. ಚಿತ್ರ: Wikipedia (Public Domain) |
ಅದು ಕೇವಲ ಊಹೆಯಾಗಿರಲಿಲ್ಲ. ಅದು ಒಂದು ಸ್ಪಷ್ಟವಾದ ವೈಜ್ಞಾನಿಕ ಭವಿಷ್ಯವಾಣಿಯಾಗಿತ್ತು. ಆದರೆ ಅದನ್ನು ಸಾಬೀತುಪಡಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ.
ಇಂದು ಹೂವುಗಳು ಮತ್ತು ಅವುಗಳ ಪರಾಗಸ್ಪರ್ಶ ಮಾಡುವ ಜೀವಿಗಳ ನಡುವಿನ ಸಹ-ವಿಕಾಸದ ಸಂಬಂಧವನ್ನು ವಿಕಾಸವಾದದ ಅತ್ಯಂತ ಸುಂದರ ಉದಾಹರಣೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಆದರೆ ಡಾರ್ವಿನ್ ಈ ಊಹೆಯನ್ನು ಮಂಡಿಸಿದ ಕಾಲದಲ್ಲಿ ಅದು ಸಂಪೂರ್ಣ ಹೊಸ ಕಲ್ಪನೆಯಾಗಿತ್ತು.
ಆ ಕಾಲದಲ್ಲಿ ಹಲವಾರು ಆರ್ಕಿಡ್‌ಗಳನ್ನು ಹಾಕ್ ಪತಂಗಗಳು ಪರಾಗಸ್ಪರ್ಶ ಮಾಡುತ್ತವೆ ಎಂಬುದು ತಿಳಿದಿತ್ತು. ಆದರೆ ಆ ಕಾಲಕ್ಕೆ Angraecum sesquipedale ಹೂವಿನ ಉದ್ದದ ಮಕರಂದದ ಕೊಳವೆಯನ್ನು ತಲುಪಬಲ್ಲ ಹೀರುಗೊಳವೆ ಹೊಂದಿರುವ ಯಾವುದೇ ಪತಂಗ ಮಡಗಾಸ್ಕರ್‌ನಲ್ಲಿ ದಾಖಲಾಗಿರಲಿಲ್ಲ.
ಆದರೂ ಡಾರ್ವಿನ್ ಒಂದು ಹೂವಿನ ರಚನೆಯನ್ನು ಮಾತ್ರ ಆಧರಿಸಿ, ಇನ್ನೂ ಯಾರೂ ಕಂಡಿರದ ಒಂದು ಜೀವಿಯ ಅಸ್ತಿತ್ವವನ್ನು ಊಹಿಸಿದ್ದರು. ಆ ಹೂವು ಇಷ್ಟು ಉದ್ದದ ಮಕರಂದದ ಕೊಳವೆಯನ್ನು ಹೊಂದಿದ್ದರೆ, ಅದನ್ನು ತಲುಪಬಲ್ಲಷ್ಟು ಉದ್ದದ ಹೀರುಗೊಳವೆ ಹೊಂದಿರುವ ಪತಂಗವೂ ಇರಲೇಬೇಕು ಎಂದು ಅವರು ನಂಬಿದ್ದರು. ಇದು ಕೇವಲ ಕಲ್ಪನೆಯಲ್ಲ, ಆರ್ಕಿಡ್‌ಗಳನ್ನು ಮತ್ತು ಕೀಟಗಳನ್ನು ಅಭ್ಯಸಿಸಿದ ಜ್ಞಾನ ಹಾಗೂ ವಿಕಾಸದ ಬಗ್ಗೆ ಅವರಿಗೆ ಇದ್ದ ಆಳವಾದ ತಿಳಿವಳಿಕೆಯಿಂದ ಹುಟ್ಟಿದ ವೈಜ್ಞಾನಿಕ ಊಹೆಯಾಗಿತ್ತು.
ವಾಸ್ತವವಾಗಿ, Xanthopan morganii ಎಂಬ ಒಂದು ದೊಡ್ಡ ಹಾಕ್ ಪತಂಗವನ್ನು 1830ರ ದಶಕದಲ್ಲಿಯೇ ಆಫ್ರಿಕಾದ ಕಾಂಗೋ ಪ್ರದೇಶದಲ್ಲಿ ದಾಖಲಿಸಲಾಗಿತ್ತು. ಆದರೆ ಕಾಂಗೋ ಮತ್ತು ಮಡಗಾಸ್ಕರ್ ನಡುವೆ ಬಹಳ ದೂರವಿದೆ. ಆ ಸಮಯದಲ್ಲಿ ಡಾರ್ವಿನ್ ಅವರಿಗೆ ಆ ಪತಂಗದ ಬಗ್ಗೆ ತಿಳಿದಿದ್ದ ಸಾಧ್ಯತೆಯೂ ಬಹಳ ಕಡಿಮೆ.
ಕಾಲ ಮುಂದೆ ಸಾಗಿತು.
ಡಾರ್ವಿನ್ ನಿಧನರಾದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ನಂತರ, ಕಾಂಗೋದಲ್ಲಿದ್ದ ಪತಂಗದ ಉಪಪ್ರಭೇದವೊಂದನ್ನು 1907ರಲ್ಲಿ ಮಡಗಾಸ್ಕರ್‌ನಲ್ಲಿ ವಿಜ್ಞಾನಿಗಳು ಗುರುತಿಸಿದರು. ಅದಕ್ಕೆ Xanthopan morganii praedicta ಎಂದು ಹೆಸರು ಇಡಲಾಯಿತು. Praedicta ಎಂದರೆ "ಊಹಿಸಿದ" ಎಂದು ಅರ್ಥ. ಕುತೂಹಲಕರ ಸಂಗತಿಯೆಂದರೆ, ಆ ಪತಂಗಕ್ಕೆ ಈ ಹೆಸರಿಟ್ಟ ಮೂಲ ವೈಜ್ಞಾನಿಕ ಲೇಖನದಲ್ಲಿ ಡಾರ್ವಿನ್ ಅವರ ಹೆಸರನ್ನೇ ಉಲ್ಲೇಖಿಸಿರಲಿಲ್ಲ.
ಲಂಡನ್‌ನ 'ನ್ಯಾಟುರಲ್ ಹಿಸ್ಟರಿ ಮ್ಯೂಸಿಯಂ'ನಲ್ಲಿರುವ Xanthopan morganii praedicta ಪತಂಗದ ಮಾದರಿ.
|
ಈ ಪತಂಗದ ರೆಕ್ಕೆಗಳ ಅಗಲ ಸುಮಾರು ಹದಿನಾರು ಸೆಂಟಿಮೀಟರ್. ಆದರೆ ಅದರ ನಿಜವಾದ ವಿಶೇಷತೆ ಅದರ ಹೀರುಗೊಳವೆ. ಅದು ಇಪ್ಪತ್ತು ಸೆಂಟಿಮೀಟರ್‌ಗಿಂತಲೂ ಹೆಚ್ಚು ಉದ್ದವಿರುತ್ತದೆ. ಬಳಸದೆ ಇರುವಾಗ ಆ ಕೊಳವೆ ತಲೆಯ ಮುಂಭಾಗದಲ್ಲಿ ದೊಡ್ಡ ಸುರುಳಿಯಂತೆ ಸುತ್ತಿಕೊಂಡಿರುತ್ತದೆ.
ಈಗ ವಿಜ್ಞಾನಿಗಳ ಮುಂದೆ ಎರಡು ಸಂಗತಿಗಳು ಇದ್ದವು. ಒಂದು ಕಡೆ ಅತ್ಯಂತ ಉದ್ದದ ಮಕರಂದದ ಕೊಳವೆಯನ್ನು ಹೊಂದಿರುವ ಆರ್ಕಿಡ್ ಇತ್ತು. ಇನ್ನೊಂದು ಕಡೆ ಅಷ್ಟೇ ಉದ್ದದ ಹೀರುಗೊಳವೆ ಹೊಂದಿರುವ ಪತಂಗವೂ ಇತ್ತು.
ಆದರೆ ಇನ್ನೂ ಒಂದು ಪ್ರಶ್ನೆ ಉತ್ತರಕ್ಕಾಗಿ ಕಾಯುತ್ತಿತ್ತು.
ಈ ಪತಂಗ ನಿಜವಾಗಿಯೂ Angraecum sesquipedale ಹೂವಿನ ಮಕರಂದವನ್ನು ಸೇವಿಸುತ್ತದೆಯೇ?
ಈ ಪ್ರಶ್ನೆಗೆ ಉತ್ತರ ಸಿಗಲು ಮತ್ತೆ ಹಲವು ದಶಕಗಳು ಕಳೆದವು.
ಕೊನೆಗೂ 1992ರಲ್ಲಿ, ಸಂಶೋಧಕರು ಮಡಗಾಸ್ಕರ್‌ನ ಕಾಡಿನಲ್ಲೇ ಆ ಅಪರೂಪದ ಕ್ಷಣವನ್ನು ದಾಖಲಿಸಿದರು. Xanthopan morganii praedicta ಪತಂಗ ತನ್ನ ಉದ್ದನೆಯ ಹೀರುಗೊಳವೆಯನ್ನು Angraecum sesquipedale ಹೂವಿನ ಮಕರಂದದ ಕೊಳವೆಯ ಆಳದವರೆಗೆ ಚಾಚಿ ಮಕರಂದವನ್ನು ಹೀರುವುದನ್ನು, ಅದರ ದೇಹಕ್ಕೆ ಅಂಟಿದ್ದ ಪರಾಗ ಮತ್ತೊಂದು ಹೂವಿಗೆ ತಲುಪುವುದನ್ನೂ ಛಾಯಾಚಿತ್ರಗಳು ಮತ್ತು ವೀಡಿಯೊಗಳ ಮೂಲಕ ದಾಖಲಿಸಲಾಯಿತು. ನಂತರ ಕೃತಕ ಪರಿಸರದಲ್ಲಿಯೂ ನಡೆಸಿದ ಅಧ್ಯಯನಗಳು ಇದೇ ಸಂಗತಿಯನ್ನು ಮತ್ತೊಮ್ಮೆ ದೃಢಪಡಿಸಿದವು.
ಹೀಗೆ, ಡಾರ್ವಿನ್ ಅವರು ಒಂದು ವಿಚಿತ್ರ ಆರ್ಕಿಡ್‌ನ್ನು ನೋಡಿ, ಅದನ್ನು ಪರಾಗಸ್ಪರ್ಶ ಮಾಡುವ ಅಸಾಮಾನ್ಯ ಪತಂಗವೊಂದು ಇರಲೇಬೇಕು ಎಂದು ಊಹಿಸಿದ ಸುಮಾರು ನೂರಮೂವತ್ತು ವರ್ಷಗಳ ನಂತರ, ಅವರ ಭವಿಷ್ಯವಾಣಿ ಸತ್ಯವೆಂದು ವಿಜ್ಞಾನ ದೃಢಪಡಿಸಿತು.
ಅದು ಒಂದು ಊಹೆಯನ್ನು ಸಾಬೀತುಪಡಿಸಲು ತೆಗೆದುಕೊಂಡ ದೀರ್ಘ ಪಯಣವಾಗಿತ್ತು. ಆದರೆ ಪ್ರಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿ, ನೈಸರ್ಗಿಕ ಆಯ್ಕೆಯ ಮೂಲಕ ವಿಕಾಸದ ಕುರಿತು ಹೊಂದಿದ್ದ ತಮ್ಮ ಆಳವಾದ ಅರಿವಿನ ಆಧಾರದ ಮೇಲೆ ಡಾರ್ವಿನ್ ಮಾಡಿದ್ದ ಆ ಊಹೆ ಕೊನೆಗೆ ಸರಿಯೆಂದು ಸಾಬೀತಾಯಿತು.
ಕೆಲವೊಮ್ಮೆ ವಿಜ್ಞಾನವು ಉತ್ತರಗಳಿಂದ ಆರಂಭವಾಗುವುದಿಲ್ಲ. ಒಂದು ಪ್ರಶ್ನೆಯಿಂದ ಆರಂಭವಾಗುತ್ತದೆ. ಆ ಪ್ರಶ್ನೆಗೆ ಉತ್ತರ ಹುಡುಕಲು ಒಂದು ಜೀವಮಾನ ಸಾಕಾಗದಿರಬಹುದು. ಆದರೆ ಪ್ರಕೃತಿಯಲ್ಲಿ ಸುಳಿವುಗಳು ಇದ್ದೇ ಇರುತ್ತದೆ. ಅವುಗಳನ್ನು ಓದಲು ಕಲಿತಾಗ, ಇನ್ನೂ ಕಾಣದಿರುವ ಜೀವಿಗಳ ಅಸ್ತಿತ್ವವನ್ನೂ ಊಹಿಸಬಹುದು ಎಂಬುದನ್ನು ಡಾರ್ವಿನ್ ಅವರ ಈ ಕಥೆ ನಮಗೆ ನೆನಪಿಸುತ್ತದೆ.
ಈ ಲೇಖನವನ್ನು ಅನುವಾದಿಸಲಾಗಿದೆ. ಮೂಲ ಲೇಖನ: Dr Dave Hone ಅವರು ಅಕ್ಟೋಬರ್ 13, 2013ರಂದು The Guardian ಪತ್ರಿಕೆಗೆ ಬರೆದ ಲೇಖನ, Moth Tongues, Orchids and Darwin - the predictive power of evolution
(ಆರ್ಕಿಡ್ ಮತ್ತು ಪತಂಗದ ಸಂಬಂಧವನ್ನು ವಿವರಿಸುವ ತುಣುಕನ್ನು 'ಸ್ಕೈ ವಿಷನ್' 2017ರಲ್ಲಿ ನಿರ್ಮಿಸಿದ, ಡೇವಿಡ್ ಆಟೆನ್‌ಬರೋ ನಿರೂಪಿಸಿರುವ ಡಾಕ್ಯುಮೆಂಟರಿಯಲ್ಲಿ ತೋರಿಸಲಾಗಿದೆ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ