| ಸಹೋದ್ಯೋಗಿಯ ಕಾಲಿನ ಮೇಲೆ ಕುಳಿತ ಅಟ್ಲಾಸ್ ಪತಂಗ |
ಅದು 2012. ದಾಂಡೇಲಿಯ ಕಾಡುಗಳಲ್ಲಿ ಒಂದು ರಾತ್ರಿ. ಕಾಳಿ ನದಿಯ ಉಪನದಿಯಾದ ಕಾನೇರಿ ನದಿಯ ದಡದಲ್ಲಿದ್ದ ಅರಣ್ಯ ಇಲಾಖೆಯ ನರ್ಸರಿಯೊಂದರಲ್ಲಿ ಉಳಿದುಕೊಂಡಿದ್ದೆ. ನದಿಯ ಪಕ್ಕದಲ್ಲಿದ್ದ ಒಂದು ಬೆಂಚಿನ ಮೇಲೆ ಕುಳಿತಿದ್ದೆ. ಸುತ್ತಲೂ ದಟ್ಟ ಕಾಡು. ನದಿಯ ಹರಿವಿನ ಸದ್ದು, ಅಸಂಖ್ಯಾತ ಕೀಟಗಳ ನಿರಂತರ ಗಾಯನ, ಇಷ್ಟನ್ನು ಬಿಟ್ಟರೆ ಮತ್ತಾವ ಶಬ್ದವೂ ಇರಲಿಲ್ಲ. ಹೀಗೆ ಕಾಡಿನ ರಾತ್ರಿಯನ್ನು ಸುಮ್ಮನೆ ಕುಳಿತು ಆಲಿಸುವುದು ನನಗೆ ಇಷ್ಟದ ಚಟುವಟಿಕೆಗಳಲ್ಲೊಂದು.
ಅಷ್ಟರಲ್ಲಿ ನನ್ನ ಹಿಂದೆ ಇದ್ದ ಪೊದೆಗಳಲ್ಲಿ ಸಣ್ಣದೊಂದು ಸದ್ದಾಯಿತು. ಹಿಂದೆ ತಿರುಗಿ ನೋಡಿದೆ. ನನ್ನ ಹೆಡ್‌ಲ್ಯಾಂಪಿನ ಬೆಳಕಿನಲ್ಲಿ ಎರಡು ಕಣ್ಣುಗಳು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದವು. ಒಂದು ಕ್ಷಣ ಬೆಚ್ಚಿಬಿದ್ದೆ. ಅದು ಯಾವ ಪ್ರಾಣಿಯೆಂಬುದು ತಕ್ಷಣಕ್ಕೆ ಅರ್ಥವಾಗಲಿಲ್ಲ.
ಇನ್ನೊಂದು ಕ್ಷಣ ಗಮನಿಸಿದಾಗ ಎಲ್ಲವೂ ಸ್ಪಷ್ಟವಾಯಿತು.
ಅದು... ಅಟ್ಲಸ್ ಪತಂಗ! ವೈಜ್ಞಾನಿಕ ಹೆಸರು Attacus taprobanis
ಆದರೆ ಆ ಭೇಟಿ ಹೆಚ್ಚು ಹೊತ್ತು ಉಳಿಯಲಿಲ್ಲ. ಕೆಲವೇ ಕ್ಷಣಗಳಲ್ಲಿ ಅದು ರೆಕ್ಕೆ ಬಡಿದು ಕತ್ತಲೆಯೊಳಗೆ ಮರೆಯಾಯಿತು.
ಆ ನಂತರ ಎರಡು ವರ್ಷಗಳ ಕಾಲ ಮತ್ತೊಮ್ಮೆ ಅದು ನನ್ನ ಕಣ್ಣಿಗೆ ಬೀಳಲೇ ಇಲ್ಲ. ಮತ್ತೆ 2014ರಲ್ಲಿ, ಕೊಟ್ಟಿಗೆಹಾರದ ಸಮೀಪದ ಒಂದು ಹಳ್ಳಿಯ ಹೊರಭಾಗದ ನಿರ್ಜನ ಪ್ರದೇಶದಲ್ಲಿ ರಾತ್ರಿ ನಡೆದುಕೊಂಡು ಹೋಗುತ್ತಿದ್ದಾಗ, ಅದೇ ದೈತ್ಯನನ್ನು ಮತ್ತೊಮ್ಮೆ ಕಂಡೆ. ಈ ಬಾರಿ ಅದು ಮರದ ಕೊಂಬೆಯೊಂದರ ಮೇಲೆ ಶಾಂತವಾಗಿ ಕುಳಿತಿತ್ತು. ನಾವು ಹೋದದ್ದಕ್ಕೋ ಏನೋ ಅದು ಹಾರಿ ನನ್ನ ಸಹೋದ್ಯೋಗಿಯೊಬ್ಬರ ಮೊಣಕಾಲಿನ ಮೇಲೆಯೇ ಕುಳಿತಿತು. ಆಗ ಪತಂಗವನ್ನು ವಿವರವಾಗಿ ನೋಡುವ ಅವಕಾಶ ಸಿಕ್ಕಿತು.
| ಗಾತ್ರದ ಹೋಲಿಕೆ! ಚಿತ್ರದಲ್ಲಿರುವುದು ನನ್ನ ಕೈ |
ಮೊದಲು ಗಮನ ಸೆಳೆದದ್ದು ಅದರ ಗಾತ್ರ. ಭಾರತದ ಪತಂಗಗಳಲ್ಲಿ ಮಾತ್ರವಲ್ಲ, ಜಗತ್ತಿನ ಅತಿ ದೊಡ್ಡ ಪತಂಗಗಳಲ್ಲಿ ಒಂದಾದ ಅಟ್ಲಸ್ ಪತಂಗ, ರೆಕ್ಕೆಗಳನ್ನು ಬಿಚ್ಚಿಕೊಂಡು ಕುಳಿತರೆ ಒಂದು ಸಣ್ಣ ಹಕ್ಕಿಯಷ್ಟೇ ದೊಡ್ಡದಾಗಿ ಕಾಣುತ್ತದೆ. ಇಷ್ಟು ದೊಡ್ಡ ಜೀವಿಯನ್ನು ಕಂಡರೆ ಸಹಜವಾಗಿಯೇ ಒಂದು ಹಿಂಜರಿಕೆ ಮೂಡುತ್ತದೆ. ಅದು ಕಚ್ಚುತ್ತದೆಯೇ? ವಿಷವಿದೆಯೇ? ಅಪಾಯಕಾರಿಯೇ? ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಬಹುದು.
ಇಲ್ಲ.
ಅಟ್ಲಸ್ ಪತಂಗ ಸಂಪೂರ್ಣ ನಿರುಪದ್ರವಿ. ನಮಗೆ ಯಾವುದೇ ರೀತಿಯ ಹಾನಿ ಮಾಡುವ ಸಾಮರ್ಥ್ಯವಿಲ್ಲ. ಬಿಚ್ಚಿಕೊಂಡಿರುವ ದೈತ್ಯ ರೆಕ್ಕೆಗಳ ಮೇಲಿನ ಕಂದು, ಕ್ರೀಮ್ ಮತ್ತು ಗುಲಾಬಿ ಬಣ್ಣಗಳು ಬೆರೆತು ಮೂಡಿರುವ ಅದ್ಭುತ ವಿನ್ಯಾಸಗಳು, ರೆಕ್ಕೆಯ ತುದಿಯಲ್ಲಿ ಕಣ್ಣುಗಳಿಂತಿರುವ ಚುಕ್ಕೆಗಳು, ಇವೆಲ್ಲಾ ಕಲಾಕೃತಿಯಂತೆ ಕಾಣುತ್ತವೆ. ಆದರೆ ಮೊದಲ ಬಾರಿಗೆ ನೋಡಿದಾಗ ಅದು ಸಾಮಾನ್ಯ ರೆಕ್ಕೆಯಂತೆ ಕಾಣುವುದಿಲ್ಲ. ಅದರ ಆಕಾರ, ಬಣ್ಣದ ವಿನ್ಯಾಸ ಮತ್ತು ತುದಿಯ ಬಾಗಿದ ರೂಪವು ಹಾವಿನ ತಲೆಯನ್ನು ಹೋಲುತ್ತದೆ. ವಿಶೇಷವಾಗಿ ರೆಕ್ಕೆಗಳನ್ನು ಸ್ವಲ್ಪ ಅಲುಗಿಸಿದಾಗ, ದೂರದಿಂದ ನೋಡುವ ಬೇಟೆಗಾರ ಪ್ರಾಣಿಗಳಿಗೆ ಅದು ಹಾವು ತಲೆ ಎತ್ತಿದಂತೆ ಭಾಸವಾಗಬಹುದು.
ಇದು ಮಿಮಿಕ್ರಿ (Mimicry) ಅಥವಾ ಭಯ ಹುಟ್ಟಿಸುವ ರಕ್ಷಣಾತ್ಮಕ ವೇಷಧಾರಣೆಯ ಒಂದು ರೂಪ. ಅಟ್ಲಸ್ ಪತಂಗ ವಿಷಕಾರಿ ಅಲ್ಲ, ಕಚ್ಚುವುದಿಲ್ಲ, ತನ್ನನ್ನು ರಕ್ಷಿಸಿಕೊಳ್ಳಲು ಯಾವುದೇ ಆಯುಧವೂ ಇಲ್ಲ. ಆದ್ದರಿಂದ ಪ್ರಕೃತಿಯು ಅದಕ್ಕೆ ಮತ್ತೊಂದು ತಂತ್ರವನ್ನು ಕೊಟ್ಟಿದೆ: "ನಾನು ಹಾವಲ್ಲ, ಆದರೆ ಹಾವಿನಂತೆ ಕಾಣುತ್ತೇನೆ!"
ಕಾಡಿನಲ್ಲಿ ಇದರ ರೂಪ ನೋಡಿ ಇದನ್ನು ಬೇಟೆಯಾಡುವ ಹಕ್ಕಿಗಳು, ಸರೀಸೃಪಗಳು ಅಥವಾ ಇತರ ಬೇಟೆ ಪ್ರಾಣಿಗಳು ಕ್ಷಣಮಾತ್ರ ಹಿಂಜರಿದರೂ ಸಾಕು. ಆ ಒಂದೇ ಕ್ಷಣ ಅಟ್ಲಸ್ ಪತಂಗಕ್ಕೆ ಹಾರಿಹೋಗಲು ಅವಕಾಶ ದೊರಕುತ್ತದೆ. ಪ್ರಕೃತಿಯಲ್ಲಿ ಅನೇಕ ಬಾರಿ ಬದುಕುಳಿಯಲು ಒಂದು ಕ್ಷಣದ ಅವಕಾಶವೇ ಸಾಕಾಗುತ್ತದೆ.
ಇದು ಅದರ ಸೌಂದರ್ಯದ ಬಗೆಗಿನ ಅಚ್ಚರಿಯಾದರೆ, ಅದರ ಬದುಕು ಮತ್ತೊಂದು ಅಚ್ಚರಿ!
ಅಟ್ಲಸ್ ಪತಂಗ ತನ್ನ ಜೀವನದಲ್ಲಿ ಎಂದಿಗೂ ಆಹಾರ ಸೇವಿಸುವುದಿಲ್ಲ. ಪತಂಗದ ಬಾಯಿಯ ಭಾಗಕ್ಕೆ ಆಹಾರ ಸೇವಿಸಲು ಸಾಧ್ಯವಿಲ್ಲ. ಪತಂಗವಾಗುವ ಮೊದಲಿನ ಮರಿಹುಳುವಿನ ದಿನಗಳೇ ಅದರ ಊಟದ ದಿನಗಳು. ಆ ಸಮಯದಲ್ಲಿ ಅದು ಅಪಾರ ಪ್ರಮಾಣದಲ್ಲಿ ಎಲೆಗಳನ್ನು ತಿನ್ನುತ್ತಾ ತನ್ನ ದೇಹದಲ್ಲಿ ಶಕ್ತಿಯನ್ನು ಸಂಗ್ರಹಿಸಿಕೊಳ್ಳುತ್ತದೆ. ನಂತರ ಕೋಶಾವಸ್ಥೆಗೆ ಪ್ರವೇಶಿಸಿ, ಸಂಪೂರ್ಣ ರೂಪಾಂತರಗೊಂಡು ಅಟ್ಲಸ್ ಪತಂಗವಾಗಿ ಹೊರಬರುತ್ತದೆ.
ಆ ರೂಪಾಂತರದೊಂದಿಗೆ ಅದರ ಬದುಕಿನ ಉದ್ದೇಶವೂ ಬದಲಾಗುತ್ತದೆ.
ಮರಿಹುಳುವಾಗ ಸಂಗ್ರಹಿಸಿಕೊಂಡ ಶಕ್ತಿಯನ್ನೇ ಅವಲಂಬಿಸಿ ಅದು ಕೇವಲ ಒಂದು ಅಥವಾ ಎರಡು ವಾರಗಳಷ್ಟೇ ಬದುಕುತ್ತದೆ. ಆ ಕೆಲವೇ ದಿನಗಳಲ್ಲಿ ಅದರ ಒಂದೇ ಕೆಲಸ, ಸಂಗಾತಿಯನ್ನು ಹುಡುಕುವುದು, ತನ್ನ ಪೀಳಿಗೆಯನ್ನು ಮುಂದುವರೆಸುವುದು.
ಹಗಲಿನ ಬಹುಭಾಗವನ್ನು ಅದು ನಿಶ್ಚಲವಾಗಿ ಕಳೆಯುತ್ತದೆ. ಪ್ರತಿಯೊಂದು ಹಾರಾಟವೂ ಅಮೂಲ್ಯ. ಏಕೆಂದರೆ ಪ್ರತಿಯೊಂದು ಬಾರಿ ರೆಕ್ಕೆ ಬಡಿಯುವಾಗ ಅದರ ಸಂಗ್ರಹವಾದ ಶಕ್ತಿಯ ಸ್ವಲ್ಪ ಭಾಗ ಕರಗುತ್ತಿರುತ್ತದೆ.
ನಾನು ಆ ದಿನ ನೋಡಿದ ಪತಂಗ ಸಾಕಷ್ಟು ಸಮಯ ಅಲ್ಲೇ ಕುಳಿತಿತ್ತು. ಅದರ ಗಾತ್ರ, ಬಣ್ಣ, ವಿನ್ಯಾಸಗಳ ಅನೇಕ ಫೋಟೋಗಳನ್ನು ತೆಗೆದುಕೊಂಡೆ. ನಂತರ ಸ್ವಲ್ಪವೇ ಅಲುಗಾಟಕ್ಕೆ ಹಾರಿ ಕತ್ತಲಲ್ಲಿ ಮರೆಯಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ