| ಕತ್ತಲು ಮಳೆಯಲ್ಲಿ ಕಂಡ ಚಂದಿರ - ಚಂದ್ರ ಪತಂಗ |
ಅದು ವಾಲ್ಪರೈನಲ್ಲಿ ಉಭಯವಾಸಿ ಸಮೀಕ್ಷೆಯ ಒಂದು ರಾತ್ರಿ. ಸಮೀಕ್ಷೆಗಾಗಿ ನಾವು ತಾಲನಾರ್ ಎಂಬ ಜಾಗಕ್ಕೆ ತೆರಳಿದ್ದೆವು. ನಮ್ಮೊಂದಿಗೆ Nature Conservation Foundationನ ಹಿರಿಯ ವಿಜ್ಞಾನಿ ಡಾ. ದಿವ್ಯಾ ಮುದ್ದಪ್ಪ ಅವರೂ ಇದ್ದರು. ಆರ್ಕಿಡ್‌ಗಳ ಬಗ್ಗೆ ಅವರಿಗಿದ್ದ ಅಪಾರ ಜ್ಞಾನದಿಂದ ದಾರಿಯುದ್ದಕ್ಕೂ ಕಾಣುವ ಪ್ರತಿಯೊಂದು ಆರ್ಕಿಡ್‌ನ ಕಥೆಯನ್ನು ಹೇಳುತ್ತಾ ಸಾಗುತ್ತಿದ್ದರು. ಆದರೆ ತಾಲನಾರ್‌ನ ಕಾಫಿ ತೋಟದ ರಸ್ತೆಗಳು ನನ್ನ ಸಂಪೂರ್ಣ ಗಮನವನ್ನು ವಾಹನ ಚಾಲನೆಯ ಮೇಲೆಯೇ ಕೇಂದ್ರೀಕರಿಸುವಂತೆ ಮಾಡಿದ್ದವು. ಹೀಗಾಗಿ ಆರ್ಕಿಡ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅಪರೂಪದ ಅವಕಾಶವನ್ನು ಕೈಚೆಲ್ಲಬೇಕಾಯಿತು.
ಅನಮಲೈ ಬೆಟ್ಟಗಳ ಈ ಭಾಗದಲ್ಲಷ್ಟೇ ಕಂಡುಬರುವ ಒಂದು ಕಪ್ಪೆಯನ್ನು ಹುಡುಕುತ್ತಿದ್ದೆವು. ಸಾಕಷ್ಟು ಹುಡುಕಿದರೂ ಆ ಕಪ್ಪೆ ಮಾತ್ರ ನಮ್ಮ ಕಣ್ಣಿಗೆ ಬೀಳಲಿಲ್ಲ. (ಆ ಕಪ್ಪೆಯ ಹೆಸರು ನೆನಪಾಗುತ್ತಿಲ್ಲ) ಆ ಕಪ್ಪೆಯನ್ನು ಹುಡುಕುವುದನ್ನು ಬಿಟ್ಟು ಎಂದಿನಂತೆ ನಾವು ಸಮೀಕ್ಷೆ ಶುರುಮಾಡಿದೆವು. ಸಮೀಕ್ಷೆಯುದ್ದಕ್ಕೂ ಮಳೆ ಸುರಿಯುತ್ತಲೇ ಇತ್ತು.
ಸಮೀಕ್ಷೆ ಮುಗಿಸಿ ಹಿಂತಿರುಗುವ ಪ್ರಯಾಣ ಇನ್ನಷ್ಟು ಕಠಿಣವಾಗಿತ್ತು. ಕೆಸರುಮಯವಾದ ದಾರಿ ಸವಾಲಾಗಿತ್ತು. ಎರಡು ಬಾರಿ ವಾಹನ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿತು. ಅನಮಲೈ ಬೆಟ್ಟಗಳ ದಟ್ಟ ಕತ್ತಲಲ್ಲಿ ಹೇಗೋ ಅದನ್ನು ಹೊರತೆಗೆದು ಮತ್ತೆ ಮುಂದುವರಿದೆವು. ಕೊನೆಗೆ ಸ್ವಲ್ಪ ಉತ್ತಮ ರಸ್ತೆಯನ್ನು ತಲುಪಿದಾಗ ಮನಸ್ಸಿಗೆ ಒಂದು ದೊಡ್ಡ ನಿರಾಳತೆ ಸಿಕ್ಕಂತಾಯಿತು.
ಅಷ್ಟರಲ್ಲಿ ಮಳೆಯೂ ನಿಂತಿತ್ತು. ವಾಹನದ ಹೆಡ್‌ಲೈಟ್‌ಗಳಿಗೆ ಆಕರ್ಷಿತರಾಗಿ ಅಸಂಖ್ಯಾತ ಕೀಟಗಳು ಸುತ್ತಮುತ್ತ ಹಾರಾಡುತ್ತಿದ್ದವು. ಸಮಯವೂ ತುಂಬಾ ಆಗಿತ್ತು. ಬೇಗ ಹಿಂದಿರುಗಬೇಕೆಂಬ ಆತುರ ಎಲ್ಲರಲ್ಲೂ ಇತ್ತು. ಆದರೆ ಆ ಕೀಟಗಳ ಗುಂಪಿನ ನಡುವೆ ಏನೋ ಒಂದು ನನ್ನ ಕಣ್ಣು ಸೆಳೆಯಿತು. ವಾಹನವನ್ನು ನಿಲ್ಲಿಸದೇ ಇರಲಾಗಲಿಲ್ಲ.
ಅದು… ಒಂದು ಅದ್ಭುತ ಚಂದ್ರ ಪತಂಗ. (Lunar Moth)
ಅಲ್ಲಿಯವರೆಗೆ ಅದರ ಬಗ್ಗೆ ಕೇಳಿದ್ದೇ, ಆದರೆ ಅದನ್ನು ಕಣ್ಣಾರೆ ನೋಡುವ ಅವಕಾಶ ನನಗೆ ಸಿಕ್ಕಿರಲಿಲ್ಲ.
ಚಂದ್ರ ಪತಂಗಗಳು ರೇಷ್ಮೇ ಪತಂಗಗಳು (Silk Moths) ಎನ್ನುವ ಗುಂಪಿಗೆ ಸೇರಿದೆ. ಮಂದವಾದ ಬೆಳಕಿನಲ್ಲಿ ಹೊಳೆಯುವ ಅದರ ತಿಳಿಹಸಿರು ಬಣ್ಣದ ರೆಕ್ಕೆಗಳನ್ನು ನೋಡಿದರೆ, ಚಂದ್ರನ ಹಿತವಾದ ಬೆಳಕನ್ನೇ ಹೋಲುತ್ತದೆ. ಬಹುಶಃ ಅದಕ್ಕೇ ಇದಕ್ಕೆ ಚಂದ್ರ ಪತಂಗ ಎಂಬ ಹೆಸರು ಬಂದಿರಬಹುದು. ಉದ್ದವಾಗಿ ಹರಿದಾಡುವ ಅದರ ಬಾಲಗಳು, ನಾಜೂಕಾದ ಮೈಕಟ್ಟು, ರಾತ್ರಿಯ ಮೌನ—ಇವೆಲ್ಲ ಸೇರಿ ಆ ಪತಂಗ ಅಪ್ಸರ ಲೋಕಕ್ಕೆ ಸೇರಿದ ಜೀವಿಯೇನೋ ಎನ್ನುವಂತಿತ್ತು.
ಹೆಡ್‌ಲೈಟ್‌ನ ಬೆಳಕಿನಲ್ಲಿ ಅದರ ರೆಕ್ಕೆಗಳು ಇನ್ನಷ್ಟು ಹೊಳೆಯುತ್ತಿದ್ದವು. ಹಿಂಬದಿಯ ರೆಕ್ಕೆಗಳಿಂದ ಹರಿಯುವ ಉದ್ದನೆಯ ಬಾಲಗಳು ಗಾಳಿಯಲ್ಲಿ ನವಿರಾಗಿ ತೇಲುತ್ತಿದ್ದವು. ಅದರ ಗರಿಯಂತಿರುವ ಮೀಸೆಗಳು (ಆಂಟೆನಾ), ವಿಶೇಷವಾಗಿ ಗಂಡು ಪತಂಗಗಳಲ್ಲಿ, ಹಲವಾರು ಕಿಲೋಮೀಟರ್ ದೂರದಲ್ಲಿರುವ ಹೆಣ್ಣಿನ ಸುಗಂಧವನ್ನು ಗ್ರಹಿಸುವಷ್ಟು ಸೂಕ್ಷ್ಮವಾಗಿವೆ.
ಆ ಉದ್ದನೆಯ ಬಾಲಗಳು ಕೇವಲ ಅಲಂಕಾರವಲ್ಲ. ಅವು ಅದರ ಬದುಕಿನ ಆಯುಧ. ಬಾವಲಿಗಳು ನಮಗೆ ಶ್ರವಣಾತೀತವಾದ ಧ್ವನಿಗಳನ್ನು ಹೊರಡಿಸಿ, ಅವು ಪ್ರತಿಧ್ವನಿಸಿದಾದ ಗ್ರಹಿಸಿ (echolocation) ಆ ಮೂಲಕ ಪತಂಗಗಳನ್ನು ಬೇಟೆಯಾಡುತ್ತವೆ. ಆದರೆ ಚಂದ್ರಪತಂಗದ ಈ ಬಾಲಗಳು ಪ್ರತಿಧ್ವನಿಯನ್ನು ಗೊಂದಲಗೊಳಿಸುತ್ತವೆ. ಹೀಗಾಗಿ ಬಾವಲಿ ಅದರ ದೇಹದ ಬದಲು ಬಾಲದತ್ತ ದಾಳಿ ಮಾಡುವ ಸಾಧ್ಯತೆ ಹೆಚ್ಚಾಗುತ್ತದೆ. ಬೇಟೆಗಾರ ಮತ್ತು ಬೇಟೆಯಾಗುವ ಜೀವಿಯ ನಡುವಿನ ಲಕ್ಷಾಂತರ ವರ್ಷಗಳ ವಿಕಾಸದ ಹೋರಾಟದ ಅದ್ಭುತ ಉದಾಹರಣೆ ಇದು.
ಆದರೆ ನಾವು ಬಳಸುವ ಕೃತಕ ದೀಪಗಳು ಪತಂಗಗಳಿಗೆ ಒಳ್ಳೆಯದಲ್ಲ, ಅನೇಕ ಬಾರಿ ಅವೇ ಅವುಗಳ ಶಾಪವಾಗುತ್ತವೆ. ಸಂಗಾತಿಯನ್ನು ಹುಡುಕಿ ಸಂತಾನೋತ್ಪತ್ತಿ ಮಾಡಬೇಕಾದ ಅಮೂಲ್ಯ ಸಮಯವನ್ನು ಅವು ದೀಪಗಳ ಸುತ್ತ ಸುತ್ತುತ್ತಾ ವ್ಯರ್ಥ ಮಾಡುತ್ತವೆ. ಅನೇಕ ದೊಡ್ಡ ರೇಷ್ಮೆ ಪತಂಗಗಳ ವಯಸ್ಕ ಹಂತ ಬಹಳ ಚಿಕ್ಕದು. ಕೆಲವು ವಯಸ್ಕ ಹಂತಕ್ಕೆ ಬಂದ ನಂತರ ಆಹಾರವನ್ನೇ ಸೇವಿಸುವುದಿಲ್ಲ. ಮರಿಹುಳುವಾಗ ಸಂಗ್ರಹಿಸಿಕೊಂಡ ಶಕ್ತಿಯನ್ನೇ ಅವಲಂಬಿಸಿ ಬದುಕುತ್ತವೆ. ಆ ಅಲ್ಪಾಯುಷ್ಯದ ಗುರಿ ಒಂದೇ—ಸಂಗಾತಿಯನ್ನು ಹುಡುಕಿ ಸಂತಾನೋತ್ಪತ್ತಿ ಮಾಡುವುದು.
ನಾವು ಕಂಡ ಚಂದ್ರಪತಂಗ ತನ್ನ ಜೀವನದ ಕೊನೆಯ ಹಂತದಲ್ಲಿದ್ದಂತೆ ಕಾಣುತ್ತಿತ್ತು. ಹಾರುವುದಕ್ಕೂ ಅದು ಹೆಣಗಾಡುತ್ತಿತ್ತು. ಅದನ್ನು ಎಚ್ಚರಿಕೆಯಿಂದ ಕೈಗೆತ್ತಿಕೊಂಡು ಹತ್ತಿರದ ಒಂದು ಕೊಂಬೆಯ ಮೇಲೆ ಕೂರಿಸಿದೆವು. ಉಳಿದಿದ್ದ ಅದರ ಸ್ವಲ್ಪ ಸಮಯದ ಬದುಕು ಅಲ್ಲೇ ಕಳೆಯಲಿ ಎಂದು.
ಮತ್ತೆ ಮಳೆ ಆರಂಭವಾಗುವ ಸೂಚನೆ ಕಾಣುತ್ತಿತ್ತು. ಆ ರಾತ್ರಿ ಆಕಾಶದಲ್ಲಿ ಚಂದ್ರನನ್ನು ನೋಡುವ ಸಾಧ್ಯತೆಯೇ ಇರಲಿಲ್ಲ.
ಆದರೆ ಅಂದು ಅನಮಲೈ ಬೆಟ್ಟಗಳ ದಟ್ಟಕತ್ತಲಿನಲ್ಲಿ ಚಂದಿರನ ಬದಲಿಗೆ ನಮಗೆ ದರ್ಶನ ನೀಡಿದ್ದು ಒಂದು ಚಂದ್ರ ಪತಂಗ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ