ವಿಷಯಕ್ಕೆ ಹೋಗಿ

ಹಣ್ಣಿನ ಮೇಲಿದ್ದ ಹಸಿರು ಅತಿಥಿ

ಸೀಬೆ ಹಣ್ಣಿನ ಮೇಲೆ ಕುಳಿತು ರಸ ಹೀರುತ್ತಿರುವ ಪತಂಗ

 

ಉಭಯವಾಸಿಗಳ ಸಮೀಕ್ಷೆಗಾಗಿ ರಾತ್ರಿ ಅಲೆದಾಡುತ್ತಿದ್ದಾಗಲೇ ಕೆಲವೊಮ್ಮೆ ಅನಿರೀಕ್ಷಿತ ಭೇಟಿಗಳು ಸಂಭವಿಸುತ್ತಿತ್ತು. ನಮ್ಮ ಗಮನ ಕಪ್ಪೆ, ಅಥವಾ ಹಾವಿನ ಮೇಲೆ ಇದ್ದರೂ, ಕೆಲವೊಮ್ಮೆ ದಾರಿಯ ಬದಿಯ ಮರಗಳೂ ಒಂದೊಂದು ಕಥೆಯನ್ನು ಹೇಳುತ್ತಿದ್ದವು.

ಕೊಡಗಿನಲ್ಲಿ ಕೆಲಸ ಮಾಡುತ್ತಿದ್ದ ದಿನಗಳಲ್ಲೊಂದು ರಾತ್ರಿ, ಸೀಬೆಮರದ ಬಳಿ ಹಾದು ಹೋಗುತ್ತಿದ್ದಾಗ ಹಣ್ಣಿನ ಮೇಲೆ ಕುಳಿತಿದ್ದ ಜೀವಿಯೊಂದು ಕಣ್ಣಿಗೆ ಬಿತ್ತು. ಮೊದಲ ನೋಟಕ್ಕೆ ಅದು ಎಲೆಯೇ ಇರಬಹುದೆಂದು ಅನಿಸಿತು. ಹತ್ತಿರ ಹೋಗಿ ಬೆಳಕು ಚೆಲ್ಲಿದಾಗ ಅದು ಒಂದು ಸುಂದರ ಪತಂಗ ಎಂಬುದು ಗೊತ್ತಾಯಿತು. ಯಾವ ಪ್ರಭೇದ ಎಂಬುದು ಮಾತ್ರ ತಿಳಿದಿರಲಿಲ್ಲ. ಅದರ ಚಿತ್ರ ತೆಗೆದುಕೊಂಡು, ಮೊಬೈಲ್ ಜಾಲದ ಸಂಪರ್ಕ ಸಿಕ್ಕ ನಂತರ ಹುಡುಕಿದಾಗ ಅದರ ಹೆಸರು ತಿಳಿಯಿತು—Green Fruit-piercing Moth (Eudocima salaminia). ಹೆಸರನ್ನು ಓದಿದ ಕ್ಷಣವೇ ನಗು ಬಂತು. ಏಕೆಂದರೆ ನಾನು ಅದನ್ನು ಮೊದಲು ಕಂಡದ್ದೇ ಹಣ್ಣಿನ ಮೇಲೆಯೇ ಕುಳಿತು ರಸ ಹೀರುತ್ತಿದ್ದಾಗ!

ಈ ಪತಂಗದ ಜೀವನವೇ ಹಣ್ಣುಗಳೊಂದಿಗೆ ಬೆಸೆದುಕೊಂಡಿದೆ. ತನ್ನ ಬಲವಾದ Proboscisನಿಂದ (ಚಿಟ್ಟೆ, ಪತಂಗಗಳಲ್ಲಿರುವ ಉದ್ದವಾದ ಹೀರುಗೊಳವೆ) ಮಾಗಿದ ಹಣ್ಣುಗಳ ಸಿಪ್ಪೆಯನ್ನು ಚುಚ್ಚಿ ಒಳಗಿನ ರಸವನ್ನು ಹೀರುತ್ತದೆ. ಸೀಬೆ, ಮಾವು, ಕಿತ್ತಳೆ, ಮೋಸಂಬಿ, ಬಾಳೆ, ಪಪ್ಪಾಯಿ, ದಾಳಿಂಬೆ, ದ್ರಾಕ್ಷಿ, ಸೇಬು, ಸಪೋಟಾ, ಟೊಮೇಟೊ ಹೀಗೆ ಹಲವಾರು ತೋಟದ ಬೆಳೆ ಮತ್ತು ಕಾಡು ಹಣ್ಣುಗಳು ಇದರ ಆಹಾರ. 

ಇದರ ಬಣ್ಣಗಳ ಸಂಯೋಜನೆಯೇ ಇನ್ನೊಂದು ಅಚ್ಚರಿ. ಮುಂಭಾಗದ ರೆಕ್ಕೆಗಳು ಹಸಿರು ಎಲೆಯಂತಿದ್ದು, ಅದರ ಮೇಲಿರುವ ಕಂದು, ಬೂದು ಮತ್ತು ಬಿಳಿ ಗೆರೆಗಳು ಎಲೆಯ ಮೇಲಿನ ಗೆರೆಗಳನ್ನು ನೆನಪಿಸುತ್ತವೆ. ಹಗಲಿನಲ್ಲಿ ರೆಕ್ಕೆ ಮಡಚಿಕೊಂಡು ಕುಳಿತಾಗ ಇದು ಮರದ ಎಲೆಗಳ ಮಧ್ಯೆ ಸಂಪೂರ್ಣ ಮರೆಯಾಗುತ್ತದೆ. ಆದರೆ ಹಾರುವ ಕ್ಷಣದಲ್ಲಿ ಮಾತ್ರ ಅದರ ಒಳರೆಕ್ಕೆಗಳ ಹೊಳೆಯುವ ಕಿತ್ತಳೆ-ಹಳದಿ ಬಣ್ಣ, ಅದರ ಮೇಲಿನ ಕಪ್ಪು ಪಟ್ಟೆಗಳೊಂದಿಗೆ ಮಿಂಚಿನಂತೆ ಕಣ್ಣಿಗೆ ಬೀಳುತ್ತದೆ. ಕ್ಷಣಕಾಲ ಬೇಟೆಗಾರರನ್ನು ಬೆಚ್ಚಿಬೀಳಿಸಿ, ತಾನು ಸುರಕ್ಷಿತವಾಗಿ ಹಾರಿಹೋಗುತ್ತದೆ. ಮತ್ತೆ ಎಲ್ಲೋ ಕುಳಿತ ಕೂಡಲೇ ಆ ಬಣ್ಣಗಳೆಲ್ಲ ಮಾಯವಾಗಿ, ಮತ್ತೊಮ್ಮೆ ಒಂದು ಸಾಮಾನ್ಯ ಎಲೆಯಂತೆ ಕಾಣುತ್ತದೆ.

ಈ ಪತಂಗ ಹಣ್ಣನ್ನು ಚುಚ್ಚಿದ ಜಾಗದಿಂದ ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳು ಪ್ರವೇಶಿಸಿ ಹಣ್ಣು ಕೊಳೆಯುವ ಕಾರಣ, ತೋಟಗಾರರ ದೃಷ್ಟಿಯಲ್ಲಿ ಇದು ಒಂದು ಉಪದ್ರಕಾರಿ ಕೀಟ. ಭಾರತ ಸೇರಿದಂತೆ ಆಗ್ನೇಯ ಏಷ್ಯಾದಾದ್ಯಂತ ಕಂಡುಬರುವ ಈ ಪತಂಗ ಅಪರೂಪದ್ದಲ್ಲ. ಆದರೂ ನಿಶಾಚರ ಸ್ವಭಾವ ಮತ್ತು ಅದ್ಭುತವಾಗಿ ಮರೆಯಾಗುವ ಸಾಮರ್ಥ್ಯದಿಂದಾಗಿ ಹೆಚ್ಚಿನ ಜನರ ಕಣ್ಣಿಗೆ ಬೀಳುವುದಿಲ್ಲ. ಪ್ರಕೃತಿಯಲ್ಲಿ ಕೆಲವೊಂದು ಜೀವಿಗಳು ತಮ್ಮ ಸೌಂದರ್ಯವನ್ನು ಎಲ್ಲರಿಗೂ ತೋರಿಸುವುದಿಲ್ಲ. ಸರಿಯಾದ ಸಮಯದಲ್ಲಿ, ಸರಿಯಾದ ಸ್ಥಳದಲ್ಲಿರುವವರಿಗೆ ಮಾತ್ರ ತಮ್ಮನ್ನು ಪರಿಚಯಿಸಿಕೊಳ್ಳುತ್ತವೆ. ಈ ಪತಂಗವೂ ಅಂತಹ ಜೀವಿಗಳಲ್ಲೊಂದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...