| ಚಿತ್ರ: NASA, Apollo 17 Crew |
'ಸೂರ್ಯ' ಎಂಬ ಹೆಸರಿನ ನಕ್ಷತ್ರದ ಸುತ್ತ ಸುತ್ತುತ್ತಿರುವ ಗ್ರಹಗಳಲ್ಲಿ ಮೂರನೇ ಗ್ರಹ ನಮ್ಮ ಮೆಚ್ಚಿನ 'ಭೂಮಿ'ಯ ಚಿತ್ರ ಇಲ್ಲಿದೆ. ಗೋಳಾಕಾರದ ಭೂಮಿಯ ಬಹುಪಾಲು ಕಲ್ಲು-ಬಂಡೆಯಿಂದ ಕೂಡಿದೆ. ಭೂಮಿಯ ಮೇಲೆ 70 ಪ್ರತಿಶತ ನೀರು ಆವರಿಸಿದೆ. ಗ್ರಹದ ಪರಿಧಿಗೆ ಹೋಲಿಸಿದರೆ ತೆಳ್ಳಗಿನ ವಾತಾವರಣವನ್ನು ಹೊಂದಿದೆ ಮತ್ತು ಈ ವಾತಾವರಣ ಹೆಚ್ಚಾಗಿ ಸಾರಜನಕ ಮತ್ತು ಆಮ್ಲಜನಕದಿಂದ ಕೂಡಿದೆ. ಧರಣಿ, ಅವನಿ, ಇಳಾ, ಪೃಥ್ವಿ, ಕ್ಷಿತಿ, ಧರಿತ್ರಿ, ಸ್ಥಿರಾ, ಧರಾ, ವಸುಧಾ, ಮಹಿ, ಧರಣಿ, ಮೇದಿನಿ, ಉರ್ವಿ, ಕ್ಷಮಾ, ಜಗತೀ, ವಸುಂಧರಾ, ವಸುಮತಿ, ಧಾತ್ರಿ ಎಂದೆಲ್ಲಾ ಸುಂದರ ಹೆಸರುಗಳಿಂದ ಕರೆಯಲ್ಪಡುವ ಭೂಮಿಯ ಈ ಸುಂದರ ಚಿತ್ರವನ್ನು 1972 ರಲ್ಲಿ ಅಪೊಲೊ 17 ರಿಂದ ಸೆರೆಹಿಡಿಯಲಾಯಿತು. ಚಿತ್ರದಲ್ಲಿ ಆಫ್ರಿಕಾ ಮತ್ತು ಅಂಟಾರ್ಟಿಕಾ ಖಂಡವನ್ನು ಕಾಣಬಹುದು. ಈ ಚಿತ್ರ ಅತ್ಯಂತ ವ್ಯಾಪಕವಾಗಿ ಹಂಚಿಕೊಳ್ಳಲಾದ, ಹೆಚ್ಚು ವಿತರಿಸಲಾದ ಯಾವುದೇ ರೀತಿಯ ಛಾಯಾಚಿತ್ರಗಳಲ್ಲಿ ಒಂದು ಎಂದು ಭಾವಿಸಲಾಗಿದೆ. ಭೂಮಿಯ ಒಂದೇ ಒಂದು ದೊಡ್ಡ ಚಂದ್ರ, ಭೂ ವ್ಯಾಸದ ಸುಮಾರು 1/4ರಷ್ಟಿದೆ ಮತ್ತು ಭೂಮಿಯಿಂದ ಸೂರ್ಯನಷ್ಟೇ ಕೋನಿಯ ಗಾತ್ರದಲ್ಲಿ ಕಾಣುತ್ತದೆ. ದ್ರವರೂಪದಲ್ಲಿರುವ ನೀರು ಭೂಮಿಯನ್ನು ಜೀವಕೋಟಿಗಳನ್ನು ಸಲಹುವ, ನಮಗೆ ಇದುವರೆಗೆ ತಿಳಿದಿರುವ ಜೀವಿಗಳ ಏಕೈಕ ನೆಲೆಯಾಗಿಸಿದೆ. ನಮ್ಮ ಈ ಸುಂದರ ವಸುಂಧರೆಯನ್ನು ಜತನದಿಂದ ಕಾಪಾಡೋಣ.
(Astronomy Picture of the Day ವೆಬ್ಸೈಟ್ ನಲ್ಲಿ 2022, ಫೆಬ್ರವರಿ 6ರಂದು ಪ್ರಕಟವಾದ ಲೇಖನದ ಕನ್ನಡಾನುವಾದ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ