ವಿಷಯಕ್ಕೆ ಹೋಗಿ

ಸಹವಿಕಾಸದ ಅದ್ಭುತ: ಜೋಶುವಾ ಮರ ಮತ್ತು ಯುಕ್ಕಾ ಪತಂಗ

 ಪ್ರಕೃತಿಯಲ್ಲಿ ಕೆಲವು ಕಥೆಗಳು ನಮ್ಮ ಕಣ್ಣೆದುರೇ ನಡೆಯುತ್ತಿರುತ್ತವೆ. ಆದರೆ ಅವುಗಳನ್ನು ನೋಡುವ ದೃಷ್ಟಿ ಮಾತ್ರ ಎಲ್ಲರಿಗೂ ಇರುವುದಿಲ್ಲ. ನಾವು ಒಂದು ಮರದ ನೆರಳಲ್ಲಿ ಸಾವಿರಾರು ಬಾರಿ ನಿಂತಿರಬಹುದು. ಅದರ ಹೂಗಳನ್ನು ನೋಡಿರಬಹುದು. ಅದರ ಎಲೆಗಳನ್ನು ಮುಟ್ಟಿರಬಹುದು. ಆದರೆ ಅದರ ಯಶಸ್ವಿ ಬದುಕಿಗೆ ಏನು ಕಾರಣ ಎಂಬುದನ್ನು ನಾವು ಯೋಚಿಸಿರುವುದೇ ಇಲ್ಲ.

ಹೀಗೆಯೇ ಕೆಲವೊಮ್ಮೆ ಒಂದು ಕಾಡಿನ ಭವಿಷ್ಯವು ಒಂದು ಮರದ ಮೇಲೆ ನಿಂತಿರುತ್ತದೆ. ಇನ್ನೂ ಕೆಲವೊಮ್ಮೆ ಒಂದು ಮರದ ಭವಿಷ್ಯವು ಯಾರ ಕಣ್ಣಿಗೂ ಬೀಳದಷ್ಟು ಪುಟ್ಟ ಜೀವಿಯ ಮೇಲೆ ನಿಂತಿರುತ್ತದೆ. ಇದು ಅಂತಹ ಒಂದು ಕಥೆ.

ಅಮೆರಿಕದ ಪಶ್ಚಿಮ ಭಾಗದಲ್ಲಿ ಮೊಜಾವೆ ಮರುಭೂಮಿಯಿದೆ. ಮೈಲುಗಟ್ಟಲೆ ಹರಡಿರುವ ಮರಳು, ಕಲ್ಲುಗಳು, ಉರಿಯುವ ಬಿಸಿಲು, ಮಳೆಯ ಹನಿ ಬೀಳುವುದೇ ಅಪರೂಪ. ಆದರೂ ಆ ನಿರ್ಜನ ನೆಲದ ಮಧ್ಯೆ ಕೈಗಳನ್ನು ಆಕಾಶದತ್ತ ಚಾಚಿಕೊಂಡಿರುವಂತೆ ನಿಂತಿರುವ ಒಂದು ವಿಚಿತ್ರ ಮರ ಎಲ್ಲರ ಗಮನ ಸೆಳೆಯುತ್ತದೆ. ಅದರ ಹೆಸರು ಜೋಶುವಾ ಮರ.

ಮೊಜಾವೆ ಮರುಭೂಮಿಯಲ್ಲಿನ ಜೋಶುವಾ ಮರ
ಚಿತ್ರ: Wikipedia CC BY-SA 3.0


ಮೊದಲ ಬಾರಿ ಅದನ್ನು ನೋಡಿದವರು ಒಂದೇ ಪ್ರಶ್ನೆ ಕೇಳುತ್ತಾರೆ. "ಇದು ನಿಜವಾಗಿಯೂ ಭೂಮಿಯ ಮೇಲಿನ ಮರವೇ?" ಯಾಕೆಂದರೆ ಅದರ ರೂಪವೇ ಹಾಗಿರುತ್ತದೆ. ತಿರುಚಿದ ಕಾಂಡ, ಎಲ್ಲ ದಿಕ್ಕಿಗೂ ಚಾಚಿದ ಕೊಂಬೆಗಳು, ಮುಳ್ಳಿನಂತಿರುವ ಎಲೆಗಳು, ಮತ್ತು ಅವುಗಳ ತುದಿಯಲ್ಲಿ ಅರಳುವ ಬಿಳಿ ಮೇಣದಂತಹ ಹೂಗಳು.

ನೂರಾರು ವರ್ಷಗಳಿಂದ ಈ ಮರ ಮೊಜಾವೆ ಮರುಭೂಮಿಯ ಸಂಕೇತವಾಗಿದೆ. ಕಲಾವಿದರು ಅದನ್ನು ಚಿತ್ರಿಸಿದ್ದಾರೆ. ಛಾಯಾಗ್ರಾಹಕರು ಅದನ್ನು ಸೆರೆಹಿಡಿದಿದ್ದಾರೆ. ಚಲನಚಿತ್ರಗಳಲ್ಲೂ ಅದು ಮರುಭೂಮಿಯ ಸಂಕೇತವಾಗಿ ಕಾಣಿಸಿಕೊಂಡಿದೆ. ಆದರೆ ಈ ಮರದ ನಿಜವಾದ ಕಥೆ ಮಾತ್ರ ಬಹಳ ಕಡಿಮೆ ಜನ ಮಾತ್ರ ತಿಳಿದಿದೆ.

ಜೋಶುವಾ ಮರದಲ್ಲಿ ಸಾವಿರಾರು ಹೂಗಳು ಅರಳುತ್ತವೆ. ಪ್ರತಿಯೊಂದು ಹೂವಿನೊಳಗೂ ಹೊಸ ತಲೆಮಾರಿನ ಬೀಜಗಳು ರೂಪುಗೊಳ್ಳುವ ಕನಸಿರುತ್ತದೆ. ಆದರೆ ಒಂದು ದೊಡ್ಡ ಸಮಸ್ಯೆಯಿದೆ. ಈ ಮರದ ಹೂಗಳಲ್ಲಿ ಪರಾಗ ಸ್ಪರ್ಶ ಮಾಡುವಂತಹ ಜೀವಿಗಳಿಗೆ ಆಕರ್ಷಕವಾದ ಮಕರಂದವೇ ಇಲ್ಲ. ಜೇನುನೊಣಗಳು, ಚಿಟ್ಟೆಗಳು ಮತ್ತು ಯಾವುದೇ ಪಕ್ಷಿಗಳೂ ಅದರ ಹತ್ತಿರ ಸುಳಿಯುವುದಿಲ್ಲ.

ಹಾಗಾದರೆ ಈ ಮರ ಸಂತಾನೋತ್ಪತ್ತಿ ಹೇಗೆ ಮಾಡುತ್ತದೆ? ಈ ಪ್ರಶ್ನೆಗೆ ಉತ್ತರ ಒಂದು ಪತಂಗ!

ಈ ಪತಂಗ ಹಗಲಿನಲ್ಲಿ ಎಲ್ಲೋ ಅಡಗಿಕೊಂಡಿದ್ದು, ರಾತ್ರಿಯಾದ ಕೂಡಲೆ ತನ್ನ ಕೆಲಸಕ್ಕೆ ಹೊರಡುತ್ತದೆ. ಮೊದಲ ನೋಟಕ್ಕೆ ಅದು ಸಾಮಾನ್ಯ ಬೂದು ಬಣ್ಣದ ಪತಂಗ. ಅದರ ಹೆಸರು ಯುಕ್ಕಾ ಪತಂಗ.

ಜೋಶುವಾ ಮರದ ಹೂವಿನ ಮೇಲೆ ಕುಳಿತ ಯುಕ್ಕಾ ಪತಂಗ
ಚಿತ್ರ: Corey Lange – some rights reserved (CC BY-NC)


ಜೋಶುವಾ ಮರದ ಬದುಕು ಈ ಪುಟ್ಟ ಪತಂಗದ ಕೈಯಲ್ಲಿದೆ. ಇದು ಕೇವಲ ಹೂವಿನ ಮೇಲೆ ಕುಳಿತು ಮಕರಂದ ಕುಡಿಯುವ ಪತಂಗವಲ್ಲ. ಇದಕ್ಕೆ ಪ್ರಕೃತಿಯು ಒಂದು ವಿಶೇಷ ಜವಾಬ್ದಾರಿಯನ್ನು ಕೊಟ್ಟಿದೆ. ಮೊದಲು ಅದು ಒಂದು ಹೂವಿನಿಂದ ಪರಾಗವನ್ನು ಎಚ್ಚರಿಕೆಯಿಂದ ಸಂಗ್ರಹಿಸುತ್ತದೆ. ನಂತರ ಮತ್ತೊಂದು ಹೂವಿನ ಬಳಿಗೆ ಹಾರಿ ಹೋಗಿ, ತನ್ನ ಬಾಯಿಯ ವಿಶೇಷ ಅಂಗಗಳಿಂದ ಆ ಪರಾಗವನ್ನು ಹೂವಿನ ಹೆಣ್ಣು ಭಾಗದ ಮೇಲೆ ಉದ್ದೇಶಪೂರ್ವಕವಾಗಿ ಇರಿಸುತ್ತದೆ!

ಗಮನಿಸಿ, ಜೇನುನೊಣಗಳು, ಚಿಟ್ಟೆಗಳು, ಪಕ್ಷಿಗಳು ಮತ್ತು ಇತರೆ ಪತಂಗಗಳೂ ಸಹಾ ಅರಿವಿಲ್ಲದೆ ಪರಾಗಸ್ಪರ್ಶ ಕ್ರಿಯೆಯಲ್ಲಿ ಭಾಗವಹಿಸುತ್ತವೆ. ಆದರೆ ಈ ಪತಂಗಕ್ಕೆ ತಾನು ಮಾಡುತ್ತಿರುವ ಕೆಲಸದ ಸ್ಪಷ್ಟ ಅರಿವಿದೆ! ಮೊದಲು ಆ ಪತಂಗ ಯಾವುದೇ ಮಕರಂದವಿಲ್ಲದಿದ್ದರೂ ಜೋಶುವಾ ಮರದ ಗಂಡು ಹೂವಿನಿಂದ ಪರಾಗವನ್ನು ಸಂಗ್ರಹಿಸುತ್ತದೆ. ನಂತರ ಮತ್ತೊಂದು ಹೂವಿನ ಹೆಣ್ಣು ಭಾಗದ ಮೇಲೆ ಇರಿಸುತ್ತದೆ.

ಪರಾಗಸ್ಪರ್ಶ ಮುಗಿದ ಕೂಡಲೇ ಅದರ ಕೆಲಸ ಮುಗಿಯುವುದಿಲ್ಲ. ಪರಾಗಸ್ಪರ್ಶದಿಂದ ಹೂವಿನೊಳಗೆ ಬೆಳೆಯಲಿರುವ ಬೀಜಗಳ ಬಳಿ ಅದು ತನ್ನ ಮೊಟ್ಟೆಗಳನ್ನು ಇಡುತ್ತದೆ. ಕೆಲವು ದಿನಗಳ ನಂತರ ಮೊಟ್ಟೆಗಳು ಒಡೆದು ಮರಿಹುಳುಗಳು ಹೊರಬರುತ್ತವೆ. ಅಷ್ಟರಲ್ಲಿ ಬೀಜಗಳೂ ಸಹಾ ಬೆಳೆದಿರುತ್ತವೆ. ಆ ಮರಿಹುಳುಗಳು ಬೀಜಗಳನ್ನು ಮಾತ್ರ ತಿಂದು ಬೆಳೆಯುತ್ತವೆ. ಅವು ಸಾಕಷ್ಟು ತಿಂದೂ ಮತ್ತಷ್ಟು ಬೀಜಗಳು ಹೊಸ ಜೋಶುವಾ ಮರಗಳಾಗಿ ಬೆಳೆಯಲು ಉಳಿದುಕೊಳ್ಳುತ್ತವೆ. ಅಂದರೆ ಪತಂಗ ತನ್ನ ಮಕ್ಕಳಿಗೂ ಆಹಾರ ಒದಗಿಸುತ್ತದೆ ಮತ್ತು ಅದೇ ಸಮಯದಲ್ಲಿ ಮರಕ್ಕೂ ಹೊಸ ತಲೆಮಾರನ್ನು ಉಡುಗೊರೆಯಾಗಿ ನೀಡುತ್ತದೆ. ಹೀಗೆ ಒಬ್ಬರ ಬದುಕು ಮತ್ತೊಬ್ಬರ ಬದುಕನ್ನು ಉಳಿಸುತ್ತದೆ. ಈ ಸಂಬಂಧ ನಿನ್ನೆ ಮೊನ್ನೆ ಹುಟ್ಟಿದ್ದಲ್ಲ. ಲಕ್ಷಾಂತರ ವರ್ಷಗಳಿಂದ ಮರ ಮತ್ತು ಈ ಪತಂಗ ಸಹ ವಿಕಾಸಗೊಂಡಿವೆ.

ಜೋಶುವಾ ಮರಗಳ ಪರಾಗಸ್ಪರ್ಶ ಮಾಡುವ ಯುಕ್ಕಾ ಪತಂಗಗಳು ಇತರ ಹೂವುಗಳಿಗೆ ಮಕರಂದ ಹೀರಲು ಹೋಗುವುದಿಲ್ಲ. ಅವುಗಳ ಇಡೀ ಜೀವನವೇ ಯುಕ್ಕಾ ಸಸ್ಯಗಳ ಸುತ್ತ ಹೆಣೆದಿದೆ. ವಯಸ್ಕ ಯುಕ್ಕಾ ಪತಂಗಗಳು ಸಾಮಾನ್ಯವಾಗಿ ಮಕರಂದವನ್ನು ಸೇವಿಸುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸುತ್ತಾರೆ. ಅದರಲ್ಲೂ ಹೆಣ್ಣು ಯುಕ್ಕಾ ಪತಂಗಗಳ ಬಾಯಿಯ ಭಾಗವು ಮಕರಂದ ಹೀರಲು ಅಲ್ಲ, ಯುಕ್ಕಾ ಹೂಗಳ ಪರಾಗ ಕಣಗಳನ್ನು ಸಂಗ್ರಹಿಸಿ ಮತ್ತೊಂದು ಹೂವಿಗೆ ವರ್ಗಾಯಿಸಲು ವಿಶೇಷವಾಗಿ ರೂಪಾಂತರಗೊಂಡಿದೆ. ಅವು ಮರಿಹುಳಾಗಿದ್ದಾಗ ಸಂಗ್ರಹಿಸಿಕೊಂಡ ಶಕ್ತಿಯನ್ನೇ ಬಳಸಿಕೊಂಡು ತಮ್ಮ ಅಲ್ಪಕಾಲದ ವಯಸ್ಕ ಜೀವನವನ್ನು ಪೂರ್ಣಗೊಳಿಸುತ್ತವೆ. ಈ ಕಾರಣದಿಂದ ಯುಕ್ಕಾ ಪತಂಗಗಳು ತಮ್ಮ ಜೀವನದ ಬಹುತೇಕ ಸಮಯವನ್ನು ಯುಕ್ಕಾ ಸಸ್ಯಗಳೊಂದಿಗೇ ಕಳೆಯುತ್ತವೆ.

ಅಲ್ಲಿರುವ ಜೋಶುವಾ ಮರಗಳೆಲ್ಲ ಒಂದೇ ಪ್ರಭೇದವಲ್ಲ. ಮೊಜಾವೆ ಮರುಭೂಮಿಯನ್ನು ಎರಡು ಭಾಗಗಳಾಗಿ ವಿಭಜಿಸುವ ಡೆತ್ ವ್ಯಾಲಿ ಮತ್ತು ಅಮರ್ಗೋಸಾ ಮರುಭೂಮಿಯ ಎರಡೂ ಬದಿಗಳಲ್ಲಿ ಎರಡು ವಿಭಿನ್ನ ಜೋಶುವಾ ಮರಗಳು ಬೆಳೆಯುತ್ತವೆ. ಮೊಜಾವೆ ಮರುಭೂಮಿಯ ಪೂರ್ವ ಭಾಗದಲ್ಲಿ ಬೆಳೆಯುವ ಮರಗಳು Yucca brevifolia. ಇವು ಎತ್ತರಕ್ಕೆ ಬೆಳೆಯುವ ಮರ. ಎಲೆಗಳು ಉದ್ದವಾಗಿದ್ದು, ಹೂವುಗಳು ಸಹಾ ದೊಡ್ಡದಾಗಿರುತ್ತವೆ. ಪಶ್ಚಿಮ ಭಾಗದಲ್ಲಿ ಬೆಳೆಯುವ ಮರಗಳು Yucca jaegeriana. ಇವು ಪೊದೆಯಂತೆ ಹರಡಿಕೊಳ್ಳುವ, ಸಣ್ಣ ಎಲೆಗಳ ಮತ್ತು ಚಿಕ್ಕ ಹೂವುಗಳನ್ನು ಬಿಡುವ ಮರ. ಮೊದಲ ನೋಟಕ್ಕೆ ಅವೆಲ್ಲ ಒಂದೇ ಎಂದು ಅನಿಸುತ್ತದೆ.

ಎರಡೂ ಪ್ರಭೇದದ ಜೋಶುವಾ ಮರಗಳಿಗೂ ನಿರ್ದಿಷ್ಟ ಪ್ರಭೇದದ ಯುಕ್ಕಾ ಪತಂಗಗಳಿವೆ. Yucca brevifolia ಜೋಶುವಾ ಮರಕ್ಕೆ Tegeticula synthetica ಯುಕ್ಕಾ ಪತಂಗ ಪರಾಗಸ್ಪರ್ಶ ಮಾಡುತ್ತದೆ. ಇದರ ಗಾತ್ರ ಮತ್ತೊಂದಕ್ಕೆ ಹೋಲಿಸಿದರೆ ಸ್ವಲ್ಪವೇ ದೊಡ್ಡದು. Yucca jaegeriana ಜೋಶುವಾ ಮರಕ್ಕೆ Tegeticula antithetica ಯುಕ್ಕಾ ಪತಂಗ ಪರಾಗಸ್ಪರ್ಶ ಮಾಡುತ್ತದೆ. ಇದರ ಗಾತ್ರ ಚಿಕ್ಕದು.

ನಾವು ಕಾಡಿನಲ್ಲಿ ನಡೆಯುವಾಗ ದೊಡ್ಡ ಮರಗಳನ್ನು ಮಾತ್ರ ನೋಡುತ್ತೇವೆ. ಆದರೆ ಆ ಮರದ ಬದುಕಿನ ಹಿಂದಿರುವ ಪುಟ್ಟ ಜೀವಿಗಳನ್ನು ಗಮನಿಸುವುದೇ ಇಲ್ಲ. ಬಹುಶಃ ಪ್ರಕೃತಿಯ ದೊಡ್ಡ ಪಾಠವೂ ಇದೇ ಇರಬಹುದು. ಈ ಜಗತ್ತಿನಲ್ಲಿ ಯಾರೂ ಒಂಟಿಯಾಗಿ ಬದುಕುವುದಿಲ್ಲ. ಪ್ರತಿಯೊಂದು ಜೀವಿಯ ಬದುಕು ಮತ್ತೊಂದು ಜೀವಿಯನ್ನು ಅವಲಂಬಿಸಿ ಬದುಕುತ್ತಿರುತ್ತದೆ.

ಚಾರ್ಲ್ಸ್ ಡಾರ್ವಿನ್ ಈ ಸಂಬಂಧವನ್ನು ನೋಡಿ ಆಶ್ಚರ್ಯಪಟ್ಟಿದ್ದರು. ತಮ್ಮ ಸ್ನೇಹಿತನಿಗೆ ಬರೆದ ಪತ್ರದಲ್ಲಿ ಅವರು ಇದನ್ನು "ಇದುವರೆಗೆ ತಿಳಿದಿರುವ ಪರಾಗಸ್ಪರ್ಶದ ಅತ್ಯಂತ ಅದ್ಭುತ ಉದಾಹರಣೆ" ಎಂದು ಕರೆದಿದ್ದರು.

ನಮ್ಮ ಅರಿವಿಗೆ ಬಾರದ ಇಂತಹ ಸಹವಿಕಾಸದ ಕಥೆಗಳು, ಜೀವಿ-ಜೀವಿಗಳ ನಡುವಿನ ಅವಿನಾಭಾವ ಸಂಬಂಧಗಳು ಪ್ರಕೃತಿಯಲ್ಲಿ ಇನ್ನೂ ಅಸಂಖ್ಯಾತವಾಗಿ ಅಡಗಿವೆ. ಅವುಗಳನ್ನು ಕಂಡುಕೊಳ್ಳಲು ನಮಗೆ ನೋಡುವ ತಾಳ್ಮೆಯೂ, ಅರ್ಥಮಾಡಿಕೊಳ್ಳುವ ಕುತೂಹಲವೂ, ಎಲ್ಲಕ್ಕಿಂತ ಮುಖ್ಯವಾಗಿ ಅವುಗಳನ್ನು ಉಳಿಸಿಕೊಳ್ಳುವ ವಿವೇಕವೂ ಬೇಕಿದೆ.

ಆಧಾರ: Smithsonian Magazineನಲ್ಲಿ ಆಗಸ್ಟ್ 10, 2017ರಂದು ಪ್ರಕಟವಾದ Sam Schipani ಅವರ How a Tree and Its Moth Shaped the Mojave Desert ಲೇಖನ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಚಿತ್ರ: © ಶ್ರೀಕಾಂತ ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. ಚಿತ್ರ: © ಶ್ರೀಕಾಂತ Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

 ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ್ರ...