| ಚಿತ್ರ: Damien Cannane (APOD) |
ನೀವು ಎಂದಾದರೂ ಕೃತ್ತಿಕಾ (Pleiades) ನಕ್ಷತ್ರ ಸಮೂಹವನ್ನು ನೋಡಿದ್ದೀರಾ? ಬಹುಶಃ ಈ ಚಿತ್ರದಲ್ಲಿರುವಂತೆ ದೊಡ್ಡದಾಗಿ ಮತ್ತು ಸ್ಪಷ್ಟವಾಗಿ ನೋಡಿಲ್ಲದಿರಬಹುದು. ಆಕಾಶದಲ್ಲಿ ಅತ್ಯಂತ ಪ್ರಸಿದ್ಧವಾದ ಕೃತ್ತಿಕಾ ನಕ್ಷತ್ರ ಸಮೂಹದ ಪ್ರಕಾಶಮಾನವಾದ ನಕ್ಷತ್ರಗಳನ್ನು ನಗರದ ಬೆಳಕು ಮತ್ತು ವಾಯು ಮಾಲಿನ್ಯವಿರುವ ಸ್ಥಳದಿಂದಲೂ ದೂರದರ್ಶಕವಿಲ್ಲದೆ ಬರಿಗಣ್ಣಿನಲ್ಲೇ ನೋಡಬಹುದು. ಬೆಳಕು ಮತ್ತು ಮಾಲಿನ್ಯರಹಿತವಾದ ಸ್ಥಳದಿಂದ ನೋಡಿದರೆ ಕೃತ್ತಿಕಾ ನಕ್ಷತ್ರ ಸಮೂಹವನ್ನು ಸುತ್ತುವರೆದಿರುವ ಧೂಳಿನ ಮೋಡವೂ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಚಿತ್ರವನ್ನು ಉತ್ತರ ಅಮೇರಿಕಾದ ಫ್ಲೋರಿಡಾದಲ್ಲಿ ತೆಗೆಯಲಾಗಿದೆ. ಕೃತ್ತಿಕಾ ನಕ್ಷತ್ರ ಸಮೂಹವು ಹುಣ್ಣಿಮೆಯ ಪೂರ್ಣ ಚಂದ್ರನ ಕೋನಿಯ ಗಾತ್ರಕ್ಕಿಂತಲೂ ಹಲವು ಪಟ್ಟು ದೊಡ್ಡದು. ಸಪ್ತ ಸಹೋದರಿಯರು (Seven Sisters) ಮತ್ತು ಎಂ45 ಎಂದೂ ಕರೆಯಲ್ಪಡುವ ಈ ನಕ್ಷತ್ರ ಸಮೂಹ ವೃಷಭ ರಾಶಿಯೆಡೆಗೆ ಸುಮಾರು 400 ಬೆಳಕಿನ ವರ್ಷಗಳ ದೂರದಲ್ಲಿದೆ. ಈ ನಕ್ಷತ್ರ ಸಮೂಹಕ್ಕೆ 'ಸಪ್ತ ಸಹೋದರಿಯರು' ಎಂದು ಹೆಸರಿಸಿದ ಮೇಲೆ ಅದರಲ್ಲಿನ ಒಂದು ಪ್ರಕಾಶಮಾನವಾದ ನಕ್ಷತ್ರ ಮಂಕಾಗಿ ಬರಿಗಣ್ಣಿಗೆ ಕಾಣದಂತಾಯ್ತು. ಹೀಗಾಗಿ ಒಟ್ಟು ಆರು ಪ್ರಕಾಶಮಾನ ನಕ್ಷತ್ರಗಳನ್ನು ಮಾತ್ರ ಇಂದು ನೋಡಬಹುದು. ಆದರೂ ನೋಡುವ ಸ್ಥಳ ಮತ್ತು ವೀಕ್ಷಕನ ದೃಷ್ಟಿಯ ಸ್ಪಷ್ಟತೆಯನ್ನು ಅವಲಂಬಿಸಿ ಈ ನಕ್ಷತ್ರ ಸಮೂಹದಲ್ಲಿ ಏಳು ಅಥವಾ ಹೆಚ್ಚು ನಕ್ಷತ್ರಗಳು ಕಾಣಬಹುದು. ಕೃತ್ತಿಕಾ ನಕ್ಷತ್ರ ಸಮೂಹದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ನಕ್ಷತ್ರಗಳಿವೆ.
(Astronomy Picture of the Day ವೆಬ್ಸೈಟ್ ನಲ್ಲಿ 2021, ನವೆಂಬರ್ 24ರಂದು ಪ್ರಕಟವಾದ ಲೇಖನದ ಕನ್ನಡಾನುವಾದ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ