ಚಾರ್ಲ್ಸ್ ಮೆಸ್ಸಿಯರ್‌ನ ಪ್ರಸಿದ್ಧ ಪಟ್ಟಿಯಲ್ಲಿ M101 ಎಂದು ನಮೂದಿಸಲ್ಪಟ್ಟಿರುವ ನೀಹಾರಿಕೆಯು ನಿಜವಾಗಿಯೂ ಒಂದು ದೊಡ್ಡದಾದ, ಸುಂದರವಾದ, ಸುರುಳಿಯಾಕಾರದ ಗ್ಯಾಲಕ್ಸಿಯಾಗಿದೆ. ಈ ಗ್ಯಾಲಕ್ಸಿಯು ಸುಮಾರು 170,000 ಬೆಳಕಿನ ವರ್ಷಗಳಷ್ಟು ಅಗಾಧವಾಗಿದೆ. ಇದು ನಮ್ಮದೇ ಆದ ಕ್ಷೀರಪಥ ಗ್ಯಾಲಕ್ಸಿಗಿಂತ ಎರಡು ಪಟ್ಟು ದೊಡ್ಡದಾಗಿದೆ. ಲಾರ್ಡ್ ರೋಸ್ಸೆಯವರು 19ನೇ ಶತಮಾನದಲ್ಲಿ ಐರ್ಲೆಂಡ್‌ನ ಪಾರ್ಸನ್‌ಟೌನ್‌ನಲ್ಲಿರುವ ಲೆವಿಯಾಥನ್ ದೂರದರ್ಶಕದಿಂದ ಗಮನಿಸಿದ ಸುರುಳಿಯಾಕಾರದ ನೀಹಾರಿಕೆಗಳಲ್ಲಿ M101 ಕೂಡ ಒಂದಾಗಿದೆ. ಕಳೆದ ಮೂವತ್ತು ವರ್ಷಗಳಲ್ಲಿ ಹಬಲ್ ದೂರದರ್ಶಕದಿಂದ ತೆಗೆದ 51 ಚಿತ್ರಗಳನ್ನು ಸಂಯೋಜಿಸಿದ ಚಿತ್ರ ಇದಾಗಿದೆ. ಭೂಮಿಯ ವಿವಿಧ ಭಾಗಗಳಲ್ಲಿ ಸ್ಥಾಪಿಸಲಾದ ದೂರದರ್ಶಕಗಳಿಂದ ಸಂಗ್ರಹಿಸಿದ ಮಾಹಿತಿಯಂತೆ ಈ ಗ್ಯಾಲಕ್ಸಿಯ ಮಧ್ಯಭಾಗವು ಸುಮಾರು 40,000 ಬೆಳಕಿನ ವರ್ಷಗಳಷ್ಟು ವ್ಯಾಪಿಸಿದೆ. ಹಬಲ್ ತೆಗೆದ ವಿವರವಾದ ಚಿತ್ರಗಳಲ್ಲಿ M101ರ ಚಿತ್ರವೂ ಸಹಾ ಒಂದು. ಗ್ಯಾಲಕ್ಸಿಯ ಪೂರ್ಣ ಸುರುಳಿ ನೋಟ, ಗ್ಯಾಲಕ್ಸಿಯ ಹಿನ್ನಲೆಯಲ್ಲಿ ಕಾಣುವ ಇನ್ನಿತರ ಗ್ಯಾಲಕ್ಸಿಗಳು, ಈ ರೀತಿ ಬೆರಗುಗೊಳಿಸುವ ವೈಶಿಷ್ಟ್ಯಗಳು ಈ ಚಿತ್ರದ ವಿಶೇಷ. ಪಿನ್‌ವ್ಹೀಲ್ (Pinwheel) ಗ್ಯಾಲಕ್ಸಿ ಎಂದೂ ಕರೆಯಲ್ಪಡುವ M101 ಉತ್ತರ ದಿಕ್ಕಿನ ನಕ್ಷತ್ರಪುಂಜ ಸಪ್ತರ್ಷಿ ಮಂಡಲ ಅಥವಾ Ursa Majorನ ಗಡಿಯೊಳಗೆ, ಸುಮಾರು 25 ಮಿಲಿಯನ್ ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ.
(Astronomy Picture of the Day ವೆಬ್ಸೈಟ್ ನಲ್ಲಿ 2021, ನವೆಂಬರ್ 27ರಂದು ಪ್ರಕಟವಾದ ಲೇಖನದ ಕನ್ನಡಾನುವಾದ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ