| ಬೆರಳಿನ ತುದಿಯಲ್ಲಿ "ಸಾವಿನ ಮುಖ" |
ವಾಲ್ಪರೈನಲ್ಲಿ ಕೆಲಸ ಮಾಡುತ್ತಿದ್ದ ದಿನಗಳು. ಒಂದು ದಿನ ನಾವು ಬಳಸುತ್ತಿದ್ದ ಮಹೀಂದ್ರ ಥಾರ್‌ನ ಟೈರ್‌ಗಳನ್ನು ಬದಲಾಯಿಸಲು ಪಾಲಕ್ಕಾಡಿಗೆ ಹೋಗಬೇಕಾಯಿತು. ನಾನು ಮತ್ತು ನನ್ನ ಸಹೋದ್ಯೋಗಿ ಪ್ರೀತಿ ಬೆಳಗ್ಗೆಯೇ ಹೊರಟೆವು. ಪಾಲಕ್ಕಾಡು ತಲುಪಿ ವಾಹನವನ್ನು ಟೈರ್ ಅಂಗಡಿಯ ಮುಂದೆ ನಿಲ್ಲಿಸಿದ್ದೆವು. ಕೆಲಸ ಮುಗಿಯಲು ಇನ್ನೂ ಸಮಯವಿದ್ದುದರಿಂದ ಸುತ್ತಮುತ್ತಲು ನೋಡುತ್ತಾ ವಾಹನದ ಸುತ್ತ ನಡೆದಾಡುತ್ತಿದ್ದೆ.
ವಾಹನದ ಹಿಂಭಾಗಕ್ಕೆ ಬಂದಾಗ, ಹಿಂದಿನ ಸ್ಟೆಪ್ನಿ ಟೈರ್ ನ ಮೇಲೆ ಒಂದು 'ವಿಕಾರ' ಮುಖ ಕಂಡಿತು. ಒಂದು ಕ್ಷಣ ನಿಂತು ಮತ್ತೊಮ್ಮೆ ನೋಡಿದೆ.
ಅದು ಒಂದು ಪತಂಗ!
ಆದರೆ ಸಾಮಾನ್ಯ ಪತಂಗವಲ್ಲ. ಅದರ ಮೇಲಿದ್ದ ವಿಚಿತ್ರ ವಿನ್ಯಾಸವು ಮನುಷ್ಯನ ತಲೆಬುರುಡೆಯನ್ನೇ ನೆನಪಿಸುತ್ತಿತ್ತು. ಒಂದು ಕ್ಷಣ ನನಗೂ ಅಚ್ಚರಿಯಾಯಿತು. ಅಂತಹ ಪತಂಗವನ್ನು ನಾನು ಮೊದಲ ಬಾರಿಗೆ ನೋಡುತ್ತಿದ್ದೆ. ನಿಧಾನವಾಗಿ ಅದನ್ನು ನನ್ನ ಬೆರಳಿನ ತುದಿಗೆ ಹತ್ತಿಸಿಕೊಂಡು ಪ್ರೀತಿಯ ಬಳಿ ಹೋದೆ.
"ನೋಡು..." ಎಂದು ಕೈ ಮುಂದಿಟ್ಟೆ.
ರಾತ್ರಿಯಿಡೀ ಕಾಡಿನಲ್ಲಿ ಉಭಯವಾಸಿಗಳ ಸಮೀಕ್ಷೆ ಮಾಡುವ ಪ್ರೀತಿ, ಆ ಪತಂಗವನ್ನು ನೋಡಿದ ತಕ್ಷಣ ಹಿಂದಕ್ಕೆ ಸರಿದಳು. ಹತ್ತಿರ ಬರಲೂ ಹಿಂಜರಿದಳು. ಅಷ್ಟು ವಿಚಿತ್ರವಾಗಿತ್ತು ಅದರ ರೂಪ. ಈ ಮೇಲಿನ ಚಿತ್ರವನ್ನು ನೋಡಿದರೆ, ಅವಳ ಪ್ರತಿಕ್ರಿಯೆ ನಿಮಗೂ ಅರ್ಥವಾಗಬಹುದು.
ಈ ಪತಂಗದ ಎದೆಯ (ಥೋರಾಕ್ಸ್) ಮೇಲಿರುವ ಹಳದಿ, ಕಂದು ಮತ್ತು ಕಪ್ಪು ಬಣ್ಣಗಳ ಸಂಯೋಜನೆಯು ಮನುಷ್ಯನ ತಲೆಬುರುಡೆಯನ್ನು ಹೋಲುವಂತೆ ಕಾಣುತ್ತದೆ. ವಾಸ್ತವದಲ್ಲಿ ಅದು ತಲೆಬುರುಡೆಯಲ್ಲ; ಕೇವಲ ಬಣ್ಣಗಳ ಮತ್ತು ಆಕಾರಗಳ ಒಂದು ವಿನ್ಯಾಸ. ಆದರೆ ನಮ್ಮ ಮೆದುಳು ಪರಿಚಿತ ಆಕಾರಗಳನ್ನು ಹುಡುಕುವ ಗುಣ ಹೊಂದಿರುವುದರಿಂದ, ಅದರಲ್ಲಿ ತಲೆಬುರುಡೆಯನ್ನೇ ಕಾಣುತ್ತೇವೆ. ಇದೇ ಕಾರಣದಿಂದ ಈ ಪತಂಗಕ್ಕೆ Death's-head Hawkmoth ಎಂಬ ಹೆಸರು ಬಂದಿದೆ.
ಈ ವಿಚಿತ್ರ ಗುರುತು ಶತಮಾನಗಳಿಂದ ಜನರಲ್ಲಿ ಭಯ ಹುಟ್ಟಿಸಿದೆ. ಯುರೋಪಿನಲ್ಲಿ ಈ ಪತಂಗ ಮನೆಗೆ ಬಂದರೆ ಸಾವು ಸಂಭವಿಸುತ್ತದೆ, ಯುದ್ಧ, ಸಾಂಕ್ರಾಮಿಕ ರೋಗ ಅಥವಾ ದುರಂತದ ಮುನ್ಸೂಚನೆ ಎಂಬ ನಂಬಿಕೆಗಳಿದ್ದವು. ಅನೇಕ ಕಾದಂಬರಿಗಳು, ಚಿತ್ರಗಳು ಮತ್ತು ಜನಪದ ಕಥೆಗಳಲ್ಲಿಯೂ ಈ ಪತಂಗ ಅಪಶಕುನದ ಸಂಕೇತವಾಗಿ ಕಾಣಿಸಿಕೊಂಡಿದೆ. ಆದರೆ ಇವೆಲ್ಲವೂ ಮಾನವರ ಕಲ್ಪನೆಯಷ್ಟೇ. ಈ ಪತಂಗಕ್ಕೂ ಮನುಷ್ಯರ ಸಾವಿಗೂ ಯಾವುದೇ ಸಂಬಂಧವಿಲ್ಲ.
ಈ ಪತಂಗದ ಮೇಲಿರುವ ತಲೆಬುರುಡೆಯಂತಹ ಗುರುತು ಏಕೆ ವಿಕಸನಗೊಂಡಿತು ಎಂಬುದು ಇಂದಿಗೂ ನಿಗೂಢ. ಇದನ್ನು ಬೇಟೆಯಾಡುವ ಪ್ರಾಣಿಗಳನ್ನು ಬೆದರಿಸಲು ನೆರವಾಗುತ್ತದೆಯೇ, ಅಥವಾ ಕೇವಲ ಬಣ್ಣಗಳ ಕಾಕತಾಳೀಯ ವಿನ್ಯಾಸವೇ ಎಂಬುದರ ಬಗ್ಗೆ ವಿಜ್ಞಾನಿಗಳಲ್ಲಿ ಇನ್ನೂ ಒಮ್ಮತವಿಲ್ಲ.
ಈ ಪತಂಗದ ಕುರಿತು ಪ್ರಸಿದ್ಧವಾಗಿರುವ ಹೆಚ್ಚಿನ ಕಥೆಗಳು ಮತ್ತು ಮೂಢನಂಬಿಕೆಗಳು ಯುರೋಪಿನಲ್ಲಿ ಕಂಡುಬರುವ Acherontia atropos ಪ್ರಭೇದದ ಬಗೆಗಿನದ್ದಾಗಿದೆ. ಆದರೆ ನಾನು ಪಾಲಕ್ಕಾಡಿನಲ್ಲಿ ಕಂಡ ಪತಂಗ ಅದರ ಸಂಬಂಧಿ, ಭಾರತದಲ್ಲಿಯೂ ಸಾಮಾನ್ಯವಾಗಿ ಕಂಡುಬರುವ Eastern Death's-head Hawkmoth (Acherontia styx) ಆಗಿತ್ತು. ರೂಪದಲ್ಲಿ ಹೋಲಿಕೆಯಾಗಿದ್ದರೂ, ಯುರೋಪಿನ ಕಥೆಗಳಲ್ಲಿ ಭಯದ ಸಂಕೇತವಾಗಿದ್ದ ಪ್ರಭೇದ ಇದಲ್ಲ.
ಪ್ರಪಂಚದಲ್ಲಿ Acherontia ಜೀನಸ್‌ಗೆ ಸೇರಿದ ಮೂರು ಪ್ರಭೇದಗಳಿವೆ. ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವುದು Eastern Death's-head Hawkmoth (Acherontia styx). ಇದರ ಜೊತೆಗೆ Lesser Death's-head Hawkmoth (Acherontia lachesis) ಸಹ ಭಾರತದಲ್ಲಿ ದಾಖಲಾಗಿದೆ. ಯುರೋಪಿನಲ್ಲಿ ಪ್ರಸಿದ್ಧವಾಗಿರುವ African Death's-head Hawkmoth (Acherontia atropos) ಭಾರತದಲ್ಲಿ ಕಂಡುಬರುವುದಿಲ್ಲ.
ಈ ಪತಂಗದ ವೈಜ್ಞಾನಿಕ ಹೆಸರಿನ ಹಿಂದೆಯೂ ಒಂದು ಕುತೂಹಲಕಾರಿ ಕಥೆಯಿದೆ. ಇದರ ಜೀನಸ್ ಹೆಸರು Acherontia ಗ್ರೀಕ್ ಪುರಾಣದಲ್ಲಿನ ಅಚೆರಾನ್ (Acheron) ಎಂಬ ನದಿಯಿಂದ ಬಂದಿದೆ. ಆ ನದಿಯನ್ನು ಸತ್ತವರ ಲೋಕಕ್ಕೆ ಹರಿಯುವ ಸ್ಟೈಕ್ಸ್ (Styx) ನದಿಯ ಒಂದು ಶಾಖೆ ಎಂದು ನಂಬಲಾಗುತ್ತಿತ್ತು. ಇದೇ ಜೀನಸ್‌ನ ಮೂರು ಪ್ರಭೇದಗಳ ಹೆಸರುಗಳಾದ atropos, lachesis ಮತ್ತು styx ಸಹ ಗ್ರೀಕ್ ಪುರಾಣದಿಂದಲೇ ಬಂದಿವೆ. Atropos ಜೀವದ ನೂಲನ್ನು ಕತ್ತರಿಸಿ ಮರಣವನ್ನು ನಿರ್ಧರಿಸುವ ದೇವತೆಯ ಹೆಸರು; Lachesis ಪ್ರತಿಯೊಂದು ಜೀವಿಗೆ ಎಷ್ಟು ಆಯಸ್ಸು ಇರಬೇಕು ಎಂದು ನಿರ್ಧರಿಸುವ ದೇವತೆಯ ಹೆಸರು; Styx ಜೀವಂತವಿರುವವರ ಲೋಕ ಮತ್ತು ಸತ್ತವರ ಲೋಕವನ್ನು ಬೇರ್ಪಡಿಸುವ ಪೌರಾಣಿಕ ನದಿಯ ಹೆಸರು. ಹೀಗಾಗಿ ಈ ಪತಂಗದ ಜೀನಸ್ ಹೆಸರಿನಿಂದ ಹಿಡಿದು ಪ್ರಭೇದಗಳ ಹೆಸರಿನವರೆಗೂ ಎಲ್ಲವೂ ಸಾವಿನ ಮತ್ತು ವಿಧಿಯ ಕುರಿತಾದ ಗ್ರೀಕ್ ಪುರಾಣದ ನೆನಪುಗಳನ್ನು ಹೊತ್ತಿವೆ.
ಈ ಪತಂಗದ ಅತ್ಯಂತ ಆಶ್ಚರ್ಯಕರ ಗುಣವೆಂದರೆ ಇದು ಜೇನುನೊಣಗಳ ಗೂಡಿನೊಳಗೆ ನುಗ್ಗಿ ಜೇನು ಹೀರುತ್ತದೆ! ಗೂಡಿನೊಳಗೆ ನೂರಾರು ಜೇನುನೊಣಗಳಿದ್ದರೂ, ಅವಕಾಶ ಸಿಕ್ಕರೆ ಇದು ಒಳಗೆ ಪ್ರವೇಶಿಸಿ ತನ್ನ ಉದ್ದವಾದ ಹೀರುಗೊಳವೆಯ ಮೂಲಕ ಜೇನನ್ನು ಹೀರುತ್ತದೆ. ಇಂತಹ ವರ್ತನೆ ಪತಂಗಗಳಲ್ಲಿ ಅಪರೂಪ.
ಜೇನುಗೂಡಿಗೆ ಪ್ರವೇಶಿಸುವುದು ಸುಲಭದ ಕೆಲಸವಲ್ಲ. ಸಂಶೋಧನೆಗಳ ಪ್ರಕಾರ, ಈ ಪತಂಗದ ದೇಹದ ಮೇಲಿರುವ ರಾಸಾಯನಿಕ ವಾಸನೆ ಜೇನುನೊಣಗಳ ವಾಸನೆಗೆ ಸ್ವಲ್ಪಮಟ್ಟಿಗೆ ಹೋಲುವುದರಿಂದ, ಕೆಲವು ಸಂದರ್ಭಗಳಲ್ಲಿ ಜೇನುನೊಣಗಳು ಅದನ್ನು ತಕ್ಷಣವೇ ಶತ್ರುವೆಂದು ಗುರುತಿಸುವುದಿಲ್ಲ. ಜೊತೆಗೆ ಇದರ ದೇಹದ ಹೊರಚರ್ಮವೂ ಸಾಕಷ್ಟು ಗಟ್ಟಿಯಾಗಿದ್ದು, ಜೇನುನೊಣಗಳು ಕಚ್ಚಿದರೂ ಸ್ವಲ್ಪ ಮಟ್ಟಿಗೆ ರಕ್ಷಣೆ ನೀಡುತ್ತದೆ. ಆದರೂ ಅನೇಕ ಬಾರಿ ಜೇನುನೊಣಗಳ ದಾಳಿಗೆ ಸಿಲುಕಿ ಸಾಯುತ್ತದೆ.
ಹೆಚ್ಚಿನ ಪತಂಗಗಳು ಯಾವುದೇ ಶಬ್ದ ಮಾಡುವುದಿಲ್ಲ. ಆದರೆ ಈ ಪತಂಗ ಅಪಾಯ ಎದುರಾದಾಗ ಅಥವಾ ಹಿಡಿದಾಗ ಸಣ್ಣ ಕೀರಲು ಶಬ್ದವನ್ನು ಮಾಡುತ್ತದೆ. ತನ್ನ ಬಾಯಿಯ ಭಾಗದ ಮೂಲಕ ಗಾಳಿಯನ್ನು ಒಳಗೆಳೆದು ಹೊರಬಿಡುವಾಗ ಈ ಶಬ್ದ ಉಂಟಾಗುತ್ತದೆ. ಈ ಕಾರಣದಿಂದಲೂ ಇದು ಜನರಲ್ಲಿ ಇನ್ನಷ್ಟು ಭಯ ಹುಟ್ಟಿಸಿರಬಹುದು.
ಈ ಪತಂಗ ತನ್ನ ಉದ್ದವಾದ ಹೀರುಗೊಳವೆಯ ಸಹಾಯದಿಂದ ರಾತ್ರಿ ಅರಳುವ ಹೂವುಗಳ ಮಕರಂದವನ್ನು ಹೀರಲು ಹೂವಿಂದ ಹೂವಿಗೆ ಹಾರುವ ಮೂಲಕ ಪರಾಗಸ್ಪರ್ಶದಲ್ಲಿಯೂ ಪಾತ್ರವಹಿಸುತ್ತದೆ. ಹಗಲಿನಲ್ಲಿ ಜೇನುನೊಣಗಳು ಮಾಡುವ ಕೆಲಸವನ್ನು, ಅನೇಕ ಕಡೆಗಳಲ್ಲಿ ರಾತ್ರಿಯಲ್ಲಿ ಇಂತಹ ಪತಂಗಗಳು ನಿರ್ವಹಿಸುತ್ತವೆ.
ಆ ಪತಂಗದ ಕೆಲವು ಚಿತ್ರಗಳನ್ನು ತೆಗೆದುಕೊಂಡೆ. ಅದನ್ನು ನೋಡಿದಾಗಲೇ ಅದರ ಜೀವನದ ಕೊನೆಯ ಹಂತದಲ್ಲಿದೆ ಎಂಬ ಭಾವನೆ ಮೂಡಿತ್ತು. ಹಾರುವುದಕ್ಕೂ ಅದು ಕಷ್ಟಪಡುತ್ತಿತ್ತು. ಅದನ್ನು ಎಚ್ಚರಿಕೆಯಿಂದ ವಾಹನದ ಒಳಗೆ, ಮುಂಭಾಗದ ಗಾಜಿನ ಬಳಿ ಇರಿಸಿದೆ. ನಮ್ಮ ಕೆಲಸ ಮುಗಿದ ಬಳಿಕವೂ ಅದು ಅಲ್ಲಿಯೇ ಇತ್ತು.
ಮತ್ತೆ ನಾವು ವಾಲ್ಪರೈ ಕಡೆಗೆ ಹೊರಟೆವು. ಮಧ್ಯದಲ್ಲಿ ಒಮ್ಮೆ ವಾಹನ ನಿಲ್ಲಿಸಿದಾಗ ಅದರ ಕಡೆ ನೋಡಿದೆ. ಯಾವುದೇ ಚಲನೆಯಿರಲಿಲ್ಲ. "ಸಾವಿನ ಮುಖ"ವನ್ನು ಹೊತ್ತಿದ್ದ ಆ ಪತಂಗ ತನ್ನ ಕೊನೆಯ ಪ್ರಯಾಣವನ್ನು ನಮ್ಮ ವಾಹನದಲ್ಲೇ ಮುಗಿಸಿತ್ತು!
ಪ್ರಕೃತಿ ಅದಕ್ಕೆ ಕೊಟ್ಟಿದ್ದು ಒಂದು ವಿಚಿತ್ರ ವಿನ್ಯಾಸ ಮಾತ್ರ. ಆದರೆ ಆ ವಿನ್ಯಾಸಕ್ಕೆ ಮನುಷ್ಯ ತನ್ನ ಕಲ್ಪನೆಯಲ್ಲಿ ಭಯ, ಅಪಶಕುನ ಮತ್ತು ಸಾವಿನ ಅರ್ಥಗಳನ್ನು ತುಂಬಿಕೊಂಡಿದ್ದ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ