ವಿಷಯಕ್ಕೆ ಹೋಗಿ

ಪೆಪ್ಪರ್ಡ್ ಪತಂಗ: ನೈಸರ್ಗಿಕ ಆಯ್ಕೆಯ ಜೀವಂತ ಸಾಕ್ಷಿ

 ಒಂದು ಪುಟ್ಟ ಪತಂಗ!

ಅದು ಹುಲಿಯಷ್ಟು ಬಲಿಷ್ಠವಲ್ಲ. ಚೀತಾದಷ್ಟು ವೇಗವೂ ಇಲ್ಲ. ವಿಷದಹಾವಿನಂತೆ ತನ್ನನ್ನು ರಕ್ಷಿಸಿಕೊಳ್ಳುವುದೂ ಗೊತ್ತಿಲ್ಲ. ಅದರ ಬಳಿ ಇದ್ದದ್ದು ಕೇವಲ ಎರಡು ರೆಕ್ಕೆಗಳು ಮತ್ತು ಮರದ ತೊಗಟೆ ಮೇಲೆ ಕುಳಿತಾಗ ಹಿನ್ನಲೆಯಲ್ಲಿನ ಬಣ್ಣದೊಡನೆ ಕರಗಿಹೋಗುವ ಅವುಗಳ ಬಣ್ಣ. ಆದರೆ ಇದೇ ಪುಟ್ಟ ಪತಂಗ ಜೀವವಿಕಾಸದ (Evolution) ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಜೀವಿಗಳಲ್ಲಿ ಒಂದಾಯಿತು.

ಚಾರ್ಲ್ಸ್ ಡಾರ್ವಿನ್ 1859ರಲ್ಲಿ On the Origin of Species ಪ್ರಕಟಿಸಿದಾಗ, ಜೀವಿಗಳು ಪರಿಸರಕ್ಕೆ ಹೊಂದಿಕೊಂಡು ಕಾಲಕ್ರಮೇಣ ಬದಲಾಗುತ್ತವೆ ಎಂದು ಪ್ರತಿಪಾದಿಸಿದರು. ಆದರೆ ಆ ಕಾಲದಲ್ಲಿ ಈ ಕಲ್ಪನೆಯನ್ನು ಕಣ್ಣಾರೆ ನೋಡಲು ಸಾಧ್ಯವಾಗುವ ಉದಾಹರಣೆಗಳು ವಿರಳವಾಗಿದ್ದವು. ಡಾರ್ವಿನ್ ನಿಧನರಾದ ಕೆಲವು ದಶಕಗಳ ನಂತರ, ಇಂಗ್ಲೆಂಡಿನ ಕಾಡೊಂದರಲ್ಲಿ ಬದುಕುತ್ತಿದ್ದ ಈ ಸಣ್ಣ ಪತಂಗ ಅವರ ಸಿದ್ಧಾಂತವನ್ನು ಜೀವಂತವಾಗಿ ತೋರಿಸಿಕೊಟ್ಟಿತು.

ಈ ಪತಂಗ ಇದ್ದದ್ದು ಇಂಗ್ಲೆಂಡಿನ ಓಕ್, ಬರ್ಚ್ ಮತ್ತು ಇತರ ಮರಗಳಿಂದ ತುಂಬಿದ್ದ ಹಳೆಯ ಕಾಡುಗಳಲ್ಲಿ. ಆ ಮರಗಳ ಕಾಂಡಗಳ ಮೇಲೆ ಬಿಳಿ ಮತ್ತು ಬೂದು ಬಣ್ಣದ ಕಲ್ಲುಹೂಗಳು (Lichens) ಹರಡಿಕೊಂಡಿದ್ದವು. ದೂರದಿಂದ ನೋಡಿದರೆ ಮರದ ತೊಗಟೆಯೇ ಒಂದು ವಿಚಿತ್ರ ಚಿತ್ರಕಲೆಯಂತೆ ಕಾಣುತ್ತಿತ್ತು. ಹಗಲಿನಲ್ಲಿ ಈ ಪತಂಗ ಬಂದು ಆ ತೊಗಟೆಯ ಮೇಲೆ ಕುಳಿತುಕೊಳ್ಳುತ್ತಿತ್ತು. ಆ ಪತಂಗಗಳ ರೆಕ್ಕೆಗಳ ಮೇಲೂ ತೊಗಟೆಯಂತೆ ಬಿಳಿ ಬಣ್ಣ, ಅದರ ಮೇಲೆ ಸಣ್ಣ ಕಪ್ಪು ಚುಕ್ಕೆಗಳಿದ್ದವು. ಮೆಣಸು ಕಾಳುಗಳನ್ನು ಎರಚಿದಂತೆ! ಅದೇ ಕಾರಣಕ್ಕೆ ಈ ಪತಂಗಗಳನ್ನು ಪೆಪ್ಪರ್ಡ್ ಪತಂಗ (Biston betularia) ಎಂದು ಕರೆಯಲಾಗಿತ್ತು. ತಿಳಿ ಬಣ್ಣದ ಈ ರೂಪಕ್ಕೆ ಟೈಪಿಕಾ (Typica) ಎನ್ನುವ ಹೆಸರಿದೆ. ಇದೇ ಆ ಪತಂಗಗಳ ಮೂಲ ಮತ್ತು ಅತ್ಯಂತ ಸಾಮಾನ್ಯ ರೂಪ.

ಪೆಪ್ಪರ್ಡ್ ಪತಂಗ (Biston betularia) - ತಿಳಿ ಬಣ್ಣದ ರೂಪ Typica ಚಿತ್ರ: Wikipedia CC BY-SA 3.0


ಒಂದು ಹಕ್ಕಿ ಅದೇ ಮರದ ಮೇಲೆ ಕುಳಿತು ಹುಡುಕಿದರೂ, ಅದರ ಕಣ್ಣಿಗೆ ಈ ಪತಂಗ ಬೀಳದೇ ಇರಬಹುದಾದ ಸಾಧ್ಯತೆಯಿತ್ತು. ಆ ಪತಂಗದ ರಕ್ಷಣೆ ಓಡುವುದಲ್ಲ ಅಥವಾ ಇನ್ಯಾವುದೋ ರೀತಿ ಬೇಟೆಗಾರ ಪ್ರಾಣಿಯನ್ನು ಹೆದರಿಸುವುದಲ್ಲ, ಹಿನ್ನಲೆ ಬಣ್ಣದೊಂದಿಗೆ ಕರಗಿಹೋಗುವುದೇ ಅದರ ರಕ್ಷಣೆಗಿದ್ದ ಆಯುಧ. ಇದೇ ಪೆಪ್ಪರ್ಡ್ ಪತಂಗ ಬದುಕುಳಿದಿದ್ದ ರಹಸ್ಯ. ಸಾವಿರಾರು ವರ್ಷಗಳಿಂದ ಅದು ಇದೇ ರೀತಿಯಲ್ಲಿ ಬದುಕುತ್ತಿತ್ತು.

ಆದರೆ ಒಂದು ದಿನ ಮರಗಳು ಬಣ್ಣ ಬದಲಿಸಲು ಆರಂಭಿಸಿದವು!

ಹದಿನೆಂಟನೇ ಶತಮಾನದ ಕೊನೆಯಲ್ಲಿ ಬ್ರಿಟನ್‌ನಲ್ಲಿ ಕೈಗಾರಿಕಾ ಕ್ರಾಂತಿ ಆರಂಭವಾಯಿತು. ಕಲ್ಲಿದ್ದಲಿನಿಂದ ಓಡುವ ಯಂತ್ರಗಳು, ಸಾವಿರಾರು ಕಾರ್ಖಾನೆಗಳು, ಎತ್ತರದ ಹೊಗೆಗೂಡುಗಳು, ದಿನರಾತ್ರಿ ಹೊಗೆ ಉಗುಳುತ್ತಿದ್ದ ನಗರಗಳು... ಈ ಹೊಗೆ ಕೇವಲ ನಗರಗಳನ್ನಷ್ಟೇ ಬದಲಿಸಲಿಲ್ಲ. ಗಾಳಿಯೊಂದಿಗೆ ದೂರದ ಕಾಡುಗಳಿಗೂ ತಲುಪಿತು. ಕಲ್ಲಿದ್ದಲಿನ ಹೊಗೆಯಿಂದ ಹೊರಬಂದ ಸೂಕ್ಷ್ಮ ಕಪ್ಪು ಕಣಗಳು ಮರಗಳ ಮೇಲೆ ಪದರದಂತೆ ಕುಳಿತುಕೊಂಡವು. ಗಾಳಿಯಲ್ಲಿದ್ದ ಸಲ್ಫರ್ ಡೈಆಕ್ಸೈಡ್ ಅನಿಲ ಮರಗಳ ಮೇಲಿದ್ದ ಕಲ್ಲುಹೂಗಳನ್ನು ನಿಧಾನವಾಗಿ ಕೊಲ್ಲತೊಡಗಿತು. ಕೆಲವೇ ದಶಕಗಳಲ್ಲಿ ಬೂದು-ಬಿಳಿ ಮರಗಳು ಕಪ್ಪು ಮರಗಳಾಗಿ ಬದಲಾದವು.

ಆದರೆ ಪತಂಗ ಇನ್ನೂ ತನ್ನ ಹಳೆಯ ಬಣ್ಣದಲ್ಲೇ ಇತ್ತು. ಒಂದು ಕಾಲದಲ್ಲಿ ಮರದ ಬಣ್ಣದೊಡನೆ ಕರಗಿಹೋಗುತ್ತಿದ್ದ ಪತಂಗ ಈಗ ಕಪ್ಪಾದ ಮರದ ಮೇಲೆ ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ಪಕ್ಷಿಗಳಿಗೆ ಆಹಾರ ಹುಡುಕುವುದು ಸುಲಭವಾಯಿತು. ಒಂದು ಕಾಲದಲ್ಲಿ ರಕ್ಷಣೆ ನೀಡುತ್ತಿದ್ದ ಬಣ್ಣವೇ ಈಗ ಸಾವಿನ ಕಾರಣವಾಯಿತು.

ಆದರೆ ಪ್ರಕೃತಿ ಎಂದಿಗೂ ಒಂದೇ ರೂಪವನ್ನು ಮಾತ್ರ ಸೃಷ್ಟಿಸುವುದಿಲ್ಲ. ಅಪರೂಪಕ್ಕೆ ಕೆಲವು ಪೆಪ್ಪರ್ಡ್ ಪತಂಗಗಳು ಸಂಪೂರ್ಣ ಕಪ್ಪು ಬಣ್ಣದಲ್ಲೂ ಹುಟ್ಟುತ್ತಿದ್ದವು. ಈ ರೂಪಕ್ಕೆ ಕಾರ್ಬೊನಾರಿಯಾ (Carbonaria) ಎಂದು ಹೆಸರು. ಕೈಗಾರಿಕಾ ಕ್ರಾಂತಿಗೂ ಮೊದಲು ಇವು ದುರದೃಷ್ಟವಂತ ಪತಂಗಗಳು. ಆದರೆ ಬದಲಾದ ಸನ್ನಿವೇಷದಲ್ಲಿ ಅದೇ ಕಪ್ಪು ಬಣ್ಣ ಅವುಗಳ ಜೀವ ಉಳಿಸಿತು.

ಪೆಪ್ಪರ್ಡ್ ಪತಂಗ (Biston betularia) - ಕಪ್ಪು ಬಣ್ಣದ ರೂಪ Carbonaria ಚಿತ್ರ: Wikipedia CC BY-SA 3.0


ಒಂದು ಕಾಡಿನಲ್ಲಿ ಸಾವಿರ ಪೆಪ್ಪರ್ಡ್ ಪತಂಗಗಳಿದ್ದರೆ, ಅವುಗಳಲ್ಲಿ ಸುಮಾರು ಒಂಬೈನೂರ ತೊಂಬತ್ತೊಂಬತ್ತು ಪತಂಗಗಳು ತಿಳಿ ಬಣ್ಣದಲ್ಲಿ, ಕೇವಲ ಒಂದು ಅಥವಾ ಎರಡು ಪತಂಗಗಳು ಮಾತ್ರ ಕಪ್ಪು ಬಣ್ಣದಲ್ಲಿರುತ್ತಿದ್ದವು ಎಂದು ಊಹಿಸೋಣ. ಆ ಕಪ್ಪು ಪತಂಗಗಳು ಹೊಸದಾಗಿ ಹುಟ್ಟಿದವುಗಳಲ್ಲ. ಅವು ಪ್ರಕೃತಿಯಲ್ಲಿ ಆಗಾಗ ಕಾಣಿಸಿಕೊಳ್ಳುವ ಸಹಜ ವೈವಿಧ್ಯದ ಒಂದು ಭಾಗವಾಗಿದ್ದವು. ಪ್ರತಿಯೊಂದು ಜೀವಿಯಲ್ಲೂ ಸ್ವಲ್ಪ ವ್ಯತ್ಯಾಸಗಳಿರುತ್ತವೆ. ಕೆಲವೊಮ್ಮೆ ಆ ವ್ಯತ್ಯಾಸಗಳು ದೇಹದ ಗಾತ್ರದಲ್ಲಿ ಕಾಣಿಸುತ್ತವೆ, ಕೆಲವೊಮ್ಮೆ ಬಣ್ಣದಲ್ಲಿ, ಮತ್ತೊಮ್ಮೆ ವರ್ತನೆಯಲ್ಲಿ.

ಪೆಪ್ಪರ್ಡ್ ಪತಂಗದಲ್ಲೂ ಹಾಗೆಯೇ ಆಗಿತ್ತು.

ಕೈಗಾರಿಕಾ ಕ್ರಾಂತಿಯ ಮೊದಲು ಕಪ್ಪು ಬಣ್ಣವು ಅವುಗಳಿಗೆ ಅನುಕೂಲಕರವಾಗಿರಲಿಲ್ಲ. ಬಿಳಿ ಕಲ್ಲುಹೂಗಳಿಂದ ಆವೃತವಾದ ಮರಗಳ ಮೇಲೆ ಅವುಗಳ ಬಣ್ಣ ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದ್ದವು. ಹೀಗಾಗಿ ಪಕ್ಷಿಗಳ ಬೇಟೆಗೆ ಅವೇ ಮೊದಲು ಬಲಿಯಾಗುತ್ತಿದ್ದವು. ಆದ್ದರಿಂದ ಅವುಗಳ ಸಂಖ್ಯೆ ಯಾವಾಗಲೂ ಕಡಿಮೆಯಾಗಿಯೇ ಇತ್ತು. ಆದರೆ ಕಾಡಿನ ಬಣ್ಣ ಬದಲಾದ ನಂತರ ಎಲ್ಲವೂ ತಲೆಕೆಳಗಾಯಿತು.

ಈಗ ಕಪ್ಪು ಮರಗಳ ಮೇಲೆ ಕಪ್ಪು ಪತಂಗಗಳು ಮರೆಯಾಗುತ್ತಿದ್ದವು. ಬದಲಾಗಿ ತಿಳಿ ಬಣ್ಣದ ಪತಂಗಗಳೇ ದೂರದಿಂದಲೇ ಕಣ್ಣಿಗೆ ಬೀಳುತ್ತಿದ್ದವು. ಪಕ್ಷಿಗಳು ಯಾವುದೇ ಉದ್ದೇಶಪೂರ್ವಕ ಆಯ್ಕೆ ಮಾಡುತ್ತಿರಲಿಲ್ಲ. ಅವು ಎದ್ದು ಕಾಣುವ ಬಣ್ಣದ ಪತಂಗವನ್ನು ಹಿಡಿಯುತ್ತಿದ್ದವು ಅಷ್ಟೇ.

ಎದ್ದು ಕಾಣುವ ಬಣ್ಣದ ಪತಂಗಗಳು ಹೆಚ್ಚು ಸತ್ತವು. ಎದ್ದು ಕಾಣದ ಬಣ್ಣದ ಪತಂಗಗಳೂ ಹೆಚ್ಚು ಬದುಕಿದವು, ಬದುಕಿ ಸಂತಾನೋತ್ಪತ್ತಿ ಮಾಡಿದವು. ಅವುಗಳ ಮರಿಗಳಲ್ಲಿಯೂ ಕಪ್ಪು ಬಣ್ಣ ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿತು. ಒಂದು ತಲೆಮಾರಿನ ನಂತರ ಮತ್ತೊಂದು ತಲೆಮಾರು, ಮತ್ತೊಂದು, ಇನ್ನೊಂದು, ಹೀಗೆ ಕೆಲವೇ ದಶಕಗಳಲ್ಲಿ, ಒಮ್ಮೆ ಅಪರೂಪವಾಗಿದ್ದ ಕಪ್ಪು ಪತಂಗಗಳೇ ಆ ಪ್ರದೇಶಗಳಲ್ಲಿ ಸಾಮಾನ್ಯವಾದವು.

ಯಾವ ಪತಂಗವೂ ತನ್ನ ಜೀವನದಲ್ಲಿ ಬಣ್ಣ ಬದಲಿಸಲಿಲ್ಲ. ಬದಲಾದದ್ದು ಪೀಳಿಗೆಯ ಅನುಪಾತ. ಇದೇ ನೈಸರ್ಗಿಕ ಆಯ್ಕೆಯ ಅತ್ಯಂತ ಸರಳ, ಆದರೆ ಅತ್ಯಂತ ಶಕ್ತಿಯುತ ಕಾರ್ಯವಿಧಾನ.

ಡಾರ್ವಿನ್ ಹೇಳಿದ್ದೂ ಇದೇ.

ಜೀವಿಗಳು ಪರಿಸರಕ್ಕೆ ಹೊಂದಿಕೊಳ್ಳುವಂತೆ ತಮ್ಮ ದೇಹವನ್ನು ತಾವೇ ಬದಲಿಸಿಕೊಳ್ಳುವುದಿಲ್ಲ. ಈಗಾಗಲೇ ಪ್ರಕೃತಿಯಲ್ಲಿ ಇರುವ ವೈವಿಧ್ಯಗಳಲ್ಲಿ, ಪರಿಸರಕ್ಕೆ ಹೆಚ್ಚು ಹೊಂದಿಕೊಂಡವು ಮಾತ್ರ ಬದುಕಿ ಮುಂದಿನ ತಲೆಮಾರಿಗೆ ತಮ್ಮ ಗುಣಲಕ್ಷಣಗಳನ್ನು ವರ್ಗಾಯಿಸುತ್ತವೆ. ಆದ್ದರಿಂದ ಜೀವವಿಕಾಸವು ಒಂದು ಜೀವಿಯ ಕಥೆಯಲ್ಲ. ಅದು ಸಾವಿರಾರು ತಲೆಮಾರುಗಳ ಕಥೆ.

ಈ ವಿಚಿತ್ರ ಬದಲಾವಣೆ ಬ್ರಿಟನ್‌ನ ಪ್ರಕೃತಿ ವಿಜ್ಞಾನಿಗಳ ಗಮನ ಸೆಳೆಯಿತು. ಒಂದೇ ಪ್ರಭೇದದ ಪತಂಗದಲ್ಲಿ ಎರಡು ವಿಭಿನ್ನ ಬಣ್ಣಗಳು ಏಕೆ? ಕಪ್ಪು ರೂಪ ಏಕಾಏಕಿ ಹೇಗೆ ಇಷ್ಟು ಸಾಮಾನ್ಯವಾಯಿತು?

ಈ ಪ್ರಶ್ನೆಗೆ ಮೊದಲ ವೈಜ್ಞಾನಿಕ ಉತ್ತರವನ್ನು 1896ರಲ್ಲಿ ಬ್ರಿಟಿಷ್ ಕೀಟಶಾಸ್ತ್ರಜ್ಞ ಜೇಮ್ಸ್ ವಿಲಿಯಂ ಟಟ್ (James William Tutt) ಪ್ರಸ್ತಾಪಿಸಿದರು. ಅವರ ಅಭಿಪ್ರಾಯ ಸರಳವಾಗಿತ್ತು.

"ಮರಗಳ ಬಣ್ಣ ಬದಲಾಗಿದೆ. ಆದ್ದರಿಂದ ಎದ್ದು ಕಾಣುವ ಬಣ್ಣದ ಪತಂಗಗಳನ್ನು ಪಕ್ಷಿಗಳು ಹಿಡಿಯುತ್ತಿವೆ. ಎದ್ದು ಕಾಣದ ಬಣ್ಣದ ಪತಂಗಗಳು ಬದುಕುತ್ತಿವೆ."

ಇದು ಕೇವಲ ಒಂದು ಊಹೆಯಾಗಿತ್ತು. ಆದರೆ ಅದು ಡಾರ್ವಿನ್‌ನ ನೈಸರ್ಗಿಕ ಆಯ್ಕೆಯ ಸಿದ್ಧಾಂತಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತಿತ್ತು. ಆ ಊಹೆ ಸರಿಯೇ?

ಅದನ್ನು ಪರೀಕ್ಷಿಸಲು ಇನ್ನೂ ಹಲವು ದಶಕಗಳೇ ಬೇಕಾಯ್ತು. ಜೇಮ್ಸ್ ವಿಲಿಯಂ ಟಟ್ ಅವರ ವಿವರಣೆ ವೈಜ್ಞಾನಿಕವಾಗಿ ಸಮಂಜಸವಾಗಿತ್ತು. ಆದರೆ ವಿಜ್ಞಾನದಲ್ಲಿ ಸಮಂಜಸವಾದ ವಿವರಣೆ ಸಾಕಾಗುವುದಿಲ್ಲ. ಅದನ್ನು ಸಾಕ್ಷಿಗಳಿಂದ ಸಾಬೀತುಪಡಿಸಬೇಕು.

ಸುಮಾರು ಐವತ್ತು ವರ್ಷಗಳ ನಂತರ, ಬ್ರಿಟಿಷ್ ವೈದ್ಯ ಮತ್ತು ಕೀಟಶಾಸ್ತ್ರಜ್ಞ ಬರ್ನಾರ್ಡ್ ಕೆಟಲ್‌ವೆಲ್ (Bernard Kettlewell) ಈ ಪ್ರಶ್ನೆಗೆ ಉತ್ತರ ಹುಡುಕಲು ಮುಂದಾದರು. 1950ರ ದಶಕದಲ್ಲಿ ಅವರು ಎರಡು ವಿಭಿನ್ನ ಕಾಡುಗಳನ್ನು ಆಯ್ಕೆ ಮಾಡಿಕೊಂಡರು.

ಒಂದು ಕೈಗಾರಿಕಾ ಪ್ರದೇಶದ ಬಳಿಯ ಕಾಡು. ಅಲ್ಲಿನ ಮರಗಳು ಹೊಗೆಯಿಂದ ಕಪ್ಪಾಗಿದ್ದವು. ಇನ್ನೊಂದು ಗ್ರಾಮೀಣ ಪ್ರದೇಶದ ಸ್ವಚ್ಛ ಕಾಡು. ಅಲ್ಲಿನ ಮರಗಳ ಮೇಲೆ ಬಿಳಿ ಕಲ್ಲುಹೂಗಳು ಬೆಳೆದಿದ್ದವು. ಈ ಎರಡೂ ಕಾಡುಗಳಲ್ಲಿ ಅವರು ತಿಳಿ ಬಣ್ಣದ ಮತ್ತು ಕಪ್ಪು ಬಣ್ಣದ ಪೆಪ್ಪರ್ಡ್ ಪತಂಗಗಳನ್ನು ಬಿಟ್ಟರು. ನಂತರ ಏನಾಗುತ್ತದೆ ಎಂದು ಗಮನಿಸಿದರು.

ಪ್ರಯೋಗಾಲಯದ ನಾಲ್ಕು ಗೋಡೆಗಳೊಳಗೆ ನಡೆಯುವ ಪ್ರಯೋಗಗಳಿಗಿಂತ ಇದು ವಿಭಿನ್ನವಾಗಿತ್ತು. ಇಲ್ಲಿ ಪ್ರಯೋಗ ನಡೆಸಿದ್ದು ಕಾಡಿನಲ್ಲೇ. ಅಂತಿಮ ತೀರ್ಮಾನ ಮಾಡುವವರು ಹಸಿದ ಪಕ್ಷಿಗಳು! ಅವುಗಳಿಗೆ ಯಾವ ಬಣ್ಣದ ಪತಂಗ ಬೇಕು ಎಂಬ ಪೂರ್ವಾಗ್ರಹ ಇರಲಿಲ್ಲ. ಅವು ಕೇವಲ ಸುಲಭವಾಗಿ ಎದ್ದು ಕಾಣಿಸಿದ ಪತಂಗವನ್ನು ಹಿಡಿಯುತ್ತಿದ್ದವು. ಫಲಿತಾಂಶಗಳು ಆಶ್ಚರ್ಯಕರವಾಗಿದ್ದವು.

ಹೊಗೆಯಿಂದ ಕಪ್ಪಾದ ಕಾಡುಗಳಲ್ಲಿ ಕಪ್ಪು ಪತಂಗಗಳು ಹೆಚ್ಚು ಬದುಕಿದವು. ತಿಳಿ ಪತಂಗಗಳು ಹೆಚ್ಚು ಪಕ್ಷಿಗಳ ಆಹಾರವಾದವು.

ಆದರೆ ಸ್ವಚ್ಛ ಕಾಡುಗಳಲ್ಲಿ ದೃಶ್ಯವೇ ತಲೆಕೆಳಗಾಯಿತು. ಅಲ್ಲಿ ತಿಳಿ ಬಣ್ಣದ ಪತಂಗಗಳೇ ಹೆಚ್ಚು ಬದುಕಿದವು. ಕಪ್ಪು ಪತಂಗಗಳು ಸುಲಭವಾಗಿ ಪಕ್ಷಿಗಳ ಕಣ್ಣಿಗೆ ಬಿದ್ದವು. ಪಕ್ಷಿಗಳು ಯಾವ ಪತಂಗವನ್ನು "ಆಯ್ಕೆ" ಮಾಡಲಿಲ್ಲ. ಅವು ಕೇವಲ ಎದ್ದು ಕಾಣುವ ಬಣ್ಣದ ಪತಂಗಗಳನ್ನು ಹಿಡಿದವು.

ಇದೇ ನೈಸರ್ಗಿಕ ಆಯ್ಕೆ!

ಕೆಟಲ್‌ವೆಲ್ ಅವರ ಸಂಶೋಧನೆ ಪ್ರಕಟವಾದ ನಂತರ, ಪೆಪ್ಪರ್ಡ್ ಪತಂಗ ಜೀವಶಾಸ್ತ್ರದ ಜಗತ್ತಿನಲ್ಲಿ ಪ್ರಸಿದ್ಧಿಯಾಯಿತು. ಶಾಲಾ-ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಜೀವವಿಕಾಸದ ಬಗ್ಗೆ ಹೇಳುವ ಪ್ರತಿಯೊಂದು ಪುಸ್ತಕದಲ್ಲೂ ಪೆಪ್ಪರ್ಡ್ ಪತಂಗದ ಕಥೆ ಸ್ಥಾನ ಪಡೆದುಕೊಂಡಿತು. "ನೈಸರ್ಗಿಕ ಆಯ್ಕೆ ಹೇಗೆ ಕೆಲಸ ಮಾಡುತ್ತದೆ?" ಎಂಬ ಪ್ರಶ್ನೆಗೆ ಉತ್ತರವಾಗಿ ಶಿಕ್ಷಕರು ಇದೇ ಉದಾಹರಣೆಯನ್ನು ಬಳಸುತ್ತಿದ್ದರು. ಕಾರಣ, ಇಲ್ಲಿ ಎಲ್ಲವೂ ಕಣ್ಣೆದುರೇ ನಡೆದಿತ್ತು.

ಮರಗಳು ಬಣ್ಣ ಬದಲಿಸಿದವು. ಪತಂಗಗಳ ಬದುಕು ಬದಲಾಯಿತು. ಕೆಲವು ರೂಪಗಳು ಹೆಚ್ಚಾದವು. ಇನ್ನೂ ಕೆಲವು ಕಡಿಮೆಯಾದವು. ನೈಸರ್ಗಿಕ ಆಯ್ಕೆ ಎಂಬ ಅಮೂರ್ತ ಕಲ್ಪನೆ, ಈ ಪುಟ್ಟ ಪತಂಗದ ಮೂಲಕ ಜೀವಂತವಾಗಿ ಕಾಣಿಸಿತು.

ಆದರೆ ವಿಜ್ಞಾನದಲ್ಲಿ ಯಾವ ಕಥೆಯೂ ಶಾಶ್ವತವಾಗಿ ಮುಗಿಯುವುದಿಲ್ಲ. ಪ್ರಶ್ನೆಗಳು ಮತ್ತೆ ಹುಟ್ಟುತ್ತವೆ. ಹಾಗೆಯೇ, ಪೆಪ್ಪರ್ಡ್ ಪತಂಗದ ಕಥೆಯ ಮೇಲೂ ಪ್ರಶ್ನೆಗಳು ಏಳಲು ಆರಂಭಿಸಿದವು.

"ಈ ಪ್ರಯೋಗಗಳು ನಿಜವಾಗಿಯೂ ಪ್ರಕೃತಿಯನ್ನು ಪ್ರತಿಬಿಂಬಿಸುತ್ತವೆಯೇ?"

"ಪತಂಗಗಳು ನಿಜಕ್ಕೂ ಮರದ ಕಾಂಡಗಳ ಮೇಲೆಯೇ ವಿಶ್ರಾಂತಿ ಪಡೆಯುತ್ತವೆಯೇ?"

"ಪ್ರಯೋಗಗಳಲ್ಲಿ ಬಳಸಿದ ವಿಧಾನಗಳು ಸರಿಯಾಗಿದ್ದವೆಯೇ?"

ಒಮ್ಮೆ ಡಾರ್ವಿನ್‌ನ ಸಿದ್ಧಾಂತಕ್ಕೆ ಅತ್ಯಂತ ಬಲವಾದ ಸಾಕ್ಷಿ ಎಂದು ಪರಿಗಣಿಸಲ್ಪಟ್ಟಿದ್ದ ಈ ಪತಂಗ, ಈಗ ವಿಜ್ಞಾನದಲ್ಲೇ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾದ ಜೀವಿಗಳಲ್ಲಿ ಒಂದಾಯಿತು.

ವಿಜ್ಞಾನದ ಸೌಂದರ್ಯವೇ ಅದು.

ಒಂದು ಸಂಶೋಧನೆ ಪ್ರಕಟವಾಯಿತು ಎಂದರೆ ಅದರ ಮಾತು ಅಂತಿಮ ಸತ್ಯವಾಗುವುದಿಲ್ಲ. ಬೇರೆ ವಿಜ್ಞಾನಿಗಳು ಅದನ್ನು ಪ್ರಶ್ನಿಸುತ್ತಾರೆ. ಮತ್ತೆ ಪರೀಕ್ಷಿಸುತ್ತಾರೆ. ಹೊಸ ಸಾಕ್ಷಿಗಳನ್ನು ಹುಡುಕುತ್ತಾರೆ. ಹೀಗೆ ನೋಡಿದರೆ, ಪ್ರಶ್ನೆಗಳು ವಿಜ್ಞಾನಕ್ಕೆ ಶತ್ರುಗಳಲ್ಲ. ಅವು ವಿಜ್ಞಾನದ ಬೆಳವಣಿಗೆಗೆ ಅಗತ್ಯವಾದ ಹೆಜ್ಜೆಗಳು.

ಆದರೆ ಪೆಪ್ಪರ್ಡ್ ಪತಂಗದ ವಿಷಯದಲ್ಲಿ ಎದ್ದ ಪ್ರಶ್ನೆಗಳು ಕೇವಲ ವೈಜ್ಞಾನಿಕ ವಲಯಕ್ಕೆ ಸೀಮಿತವಾಗಲಿಲ್ಲ. ಅವು ಸಾರ್ವಜನಿಕ ಚರ್ಚೆಯ ವಿಷಯವಾದವು. 1990ರ ದಶಕದಲ್ಲಿ ಕೆಲವು ಲೇಖಕರು ಮತ್ತು ಸಂಶೋಧಕರು ಕೆಟಲ್‌ವೆಲ್ ಅವರ ಪ್ರಯೋಗಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಅವರ ಪ್ರಮುಖ ಪ್ರಶ್ನೆಗಳು ಹೀಗಿದ್ದವು.

ಮೊದಲನೆಯದು, ಪೆಪ್ಪರ್ಡ್ ಪತಂಗಗಳು ನಿಜಕ್ಕೂ ಮರದ ಕಾಂಡಗಳ ಮೇಲೆಯೇ ವಿಶ್ರಾಂತಿ ಪಡೆಯುತ್ತವೆಯೇ? ಪ್ರಯೋಗದಲ್ಲಿ ಪತಂಗಗಳನ್ನು ಮರದ ಕಾಂಡದ ಮೇಲೆ ಇಡಲಾಗಿತ್ತು. ಆದರೆ ನೈಸರ್ಗಿಕವಾಗಿ ಅವು ಹೆಚ್ಚಾಗಿ ಮರದ ಕೊಂಬೆಗಳ ಕೆಳಭಾಗದಲ್ಲಿ ಅಥವಾ ಎಲೆಗಳ ನಡುವೆ ವಿಶ್ರಾಂತಿ ಪಡೆಯಬಹುದು ಎಂಬ ವಾದ ಕೇಳಿಬಂತು.

ಎರಡನೆಯದು, ಪ್ರಯೋಗದಲ್ಲಿ ಬಳಸಿದ ಪತಂಗಗಳ ಸಂಖ್ಯೆ ಮತ್ತು ಅವುಗಳನ್ನು ಬಿಟ್ಟ ವಿಧಾನಗಳು ನೈಸರ್ಗಿಕ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಪ್ರತಿನಿಧಿಸುತ್ತವೆಯೇ?

ಮೂರನೆಯದು, ಪ್ರಯೋಗಾಲಯದಲ್ಲಿ ಬೆಳೆಸಿದ ಪತಂಗಗಳ ವರ್ತನೆ ಕಾಡಿನಲ್ಲಿ ಹುಟ್ಟಿದ ಪತಂಗಗಳಂತೆಯೇ ಇರುತ್ತದೆಯೇ?

ಇವು ವೈಜ್ಞಾನಿಕವಾಗಿ ಕೇಳಬಹುದಾದ ಸಮಂಜಸ ಪ್ರಶ್ನೆಗಳಾಗಿದ್ದವು.

ಆದರೆ ಕಥೆ ಇಲ್ಲಿಗೇ ನಿಲ್ಲಲಿಲ್ಲ.

ಡಾರ್ವಿನ್‌ನ ಜೀವವಿಕಾಸ ಸಿದ್ಧಾಂತವನ್ನು ಒಪ್ಪದ ಕೆಲವು ಸಂಘಟನೆಗಳು ಈ ವಿವಾದವನ್ನು ತಮ್ಮ ವಾದಕ್ಕೆ ಬಳಸಿಕೊಳ್ಳತೊಡಗಿದವು. "ಪೆಪ್ಪರ್ಡ್ ಪತಂಗದ ಕಥೆಯೇ ತಪ್ಪಾದರೆ, ಡಾರ್ವಿನ್‌ನ ಸಿದ್ಧಾಂತವೂ ತಪ್ಪು" ಎಂದು ಅವರು ಪ್ರಚಾರ ಮಾಡಿದರು. ಕೆಲವರು ಇನ್ನೂ ಮುಂದೆ ಹೋಗಿ, ಕೆಟಲ್‌ವೆಲ್ ಅವರ ಪ್ರಯೋಗಗಳನ್ನು ವಂಚನೆ ಎಂದು ಕರೆದರು. ಮಾಧ್ಯಮಗಳಲ್ಲೂ ಈ ಸುದ್ದಿ ದೊಡ್ಡದಾಯಿತು. ಸಾಮಾನ್ಯ ಜನರಿಗೆ, "ಪೆಪ್ಪರ್ಡ್ ಪತಂಗದ ಕಥೆ ಸುಳ್ಳು ಎಂದು ಸಾಬೀತಾಗಿದೆ" ಎಂಬ ಭಾವನೆ ಮೂಡಿತು.

ವಿಜ್ಞಾನದಲ್ಲಿ ದೊಡ್ಡ ಆರೋಪಗಳಿಗೆ ದೊಡ್ಡ ಸಾಕ್ಷಿಗಳೇ ಬೇಕು. ಯಾರಾದರೂ ಒಂದು ಪ್ರಯೋಗವನ್ನು ಟೀಕಿಸಿದರೆ ಸಾಕಾಗುವುದಿಲ್ಲ. ಅದನ್ನು ಮತ್ತೆ ಮಾಡಿ ನೋಡಬೇಕು. ಅದೇ ಪ್ರಶ್ನೆಗೆ ಇನ್ನಷ್ಟು ಉತ್ತಮ ಸಾಕ್ಷಿಗಳನ್ನು ಸಂಗ್ರಹಿಸಬೇಕು. ಇದೇ ವಿಜ್ಞಾನದ ವಿಧಾನ.

ಈ ವಿವಾದವನ್ನು ಗಮನಿಸುತ್ತಿದ್ದ ಬ್ರಿಟನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕೀಟಶಾಸ್ತ್ರಜ್ಞ ಮೈಕೆಲ್ ಇ. ಎನ್. ಮಜೆರಸ್ ಅವರಿಗೆ ಒಂದು ವಿಚಾರ ಸ್ಪಷ್ಟವಾಗಿತ್ತು. ಕೇವಲ ವಾದವಿವಾದಗಳಿಂದ ಈ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ, ಉತ್ತರ ಕಾಡಿನಲ್ಲೇ ಇದೆ. ಆದ್ದರಿಂದ ಅವರು ಹೊಸ ಅಧ್ಯಯನ ಆರಂಭಿಸಿದರು. ಆದರೆ ಈ ಬಾರಿ ಹಿಂದಿನ ಪ್ರಯೋಗಗಳನ್ನು ಪುನರಾವರ್ತಿಸುವ ಉದ್ದೇಶ ಅವರದ್ದಾಗಿರಲಿಲ್ಲ. ಪೆಪ್ಪರ್ಡ್ ಪತಂಗದ ನಿಜವಾದ ಜೀವನವನ್ನು ಅರ್ಥಮಾಡಿಕೊಳ್ಳುವುದೇ ಅವರ ಗುರಿಯಾಗಿತ್ತು. ಅವು ಹಗಲಿನಲ್ಲಿ ಎಲ್ಲಿರುತ್ತವೆ? ಎಷ್ಟು ಎತ್ತರದಲ್ಲಿ ಕುಳಿತುಕೊಳ್ಳುತ್ತವೆ? ಮರದ ಕಾಂಡದಲ್ಲಾ ಅಥವಾ ಕೊಂಬೆಗಳಲ್ಲಾ? ಪಕ್ಷಿಗಳು ಅವುಗಳನ್ನು ಹೇಗೆ ಹುಡುಕುತ್ತವೆ ನಿಜವಾದ ಪರಿಸರದಲ್ಲಿ ಯಾವ ಬಣ್ಣದ ಪತಂಗ ಹೆಚ್ಚು ಬದುಕುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಅವರು ಹಲವು ವರ್ಷಗಳನ್ನು ಮೀಸಲಿಟ್ಟರು. ಇದು ಒಂದು ದಿನದ ಅಥವಾ ಒಂದು ತಿಂಗಳ ಪ್ರಯೋಗವಾಗಿರಲಿಲ್ಲ. ಪ್ರಕೃತಿಯನ್ನು ತಾಳ್ಮೆಯಿಂದ ಗಮನಿಸಿದ ದೀರ್ಘಕಾಲದ ಅಧ್ಯಯನವಾಗಿತ್ತು. 

ಮೈಕೆಲ್ ಮಜೆರಸ್ ಅವರಿಗೆ ಒಂದು ವಿಷಯ ಚೆನ್ನಾಗಿ ತಿಳಿದಿತ್ತು. ಕೆಟಲ್‌ವೆಲ್ ಅವರ ಪ್ರಯೋಗಗಳನ್ನು ಟೀಕಿಸುವುದು ಸುಲಭ. ಆದರೆ ಅವು ತಪ್ಪು ಎಂದು ಹೇಳಬೇಕಾದರೆ, ಅದಕ್ಕಿಂತ ಉತ್ತಮ ಅಧ್ಯಯನವನ್ನು ನಡೆಸಬೇಕು. ಅದಕ್ಕಾಗಿ ಅವರು ಪ್ರಯೋಗಾಲಯದ ಬದಲು ಮತ್ತೆ ಕಾಡನ್ನೇ ಆಯ್ಕೆ ಮಾಡಿಕೊಂಡರು. ಇಂಗ್ಲೆಂಡಿನ ಕೇಂಬ್ರಿಡ್ಜ್ ಸಮೀಪದ ಕಾಡುಗಳಲ್ಲಿ ಹಲವು ವರ್ಷಗಳ ಕಾಲ ಅವರು ಪೆಪ್ಪರ್ಡ್ ಪತಂಗಗಳನ್ನು ಗಮನಿಸುತ್ತಿದ್ದರು. ಅವು ಎಲ್ಲೆಲ್ಲಿ ವಿಶ್ರಾಂತಿ ಪಡೆಯುತ್ತವೆ ಎಂಬುದನ್ನು ದಾಖಲಿಸಿದರು. ಮರದ ಕಾಂಡದಲ್ಲಾ? ಕೊಂಬೆಗಳ ಕೆಳಭಾಗದಲ್ಲಾ? ಎಲೆಗಳ ನಡುವೆ ಅಡಗಿಕೊಳ್ಳುತ್ತವೆಯಾ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕಿದರು. ಇದರ ಜೊತೆಗೆ ಸಾವಿರಾರು ಪತಂಗಗಳನ್ನು ನೈಸರ್ಗಿಕ ಪರಿಸರದಲ್ಲಿ ಬಿಟ್ಟು, ಅವುಗಳ ಮುಂದಿನ ಜೀವನವನ್ನು ಗಮನಿಸಿದರು. ಪಕ್ಷಿಗಳು ಯಾವ ಬಣ್ಣದ ಪತಂಗವನ್ನು ಹೆಚ್ಚು ಬೇಟೆಯಾಡುತ್ತವೆ ಎಂಬುದನ್ನೂ ದಾಖಲಿಸಿದರು.

ಇದು ಕೆಲವು ದಿನಗಳ ಅಧ್ಯಯನವಲ್ಲ. ವರ್ಷಗಳ ಕಾಲ ನಡೆದ ಅತ್ಯಂತ ತಾಳ್ಮೆಯ ಸಂಶೋಧನೆಯಾಗಿತ್ತು. ಸಂಶೋಧನೆ ಮುಗಿದ ನಂತರ ಫಲಿತಾಂಶಗಳನ್ನು ವಿಶ್ಲೇಷಿಸಲಾಯಿತು. ಉತ್ತರ ಸ್ಪಷ್ಟವಾಗಿತ್ತು.

ಪರಿಸರಕ್ಕೆ ಹೊಂದಿಕೊಂಡ ಬಣ್ಣದ ಪತಂಗಗಳು ಹೆಚ್ಚು ಬದುಕುತ್ತಿದ್ದವು! ಎದ್ದು ಕಾಣಿಸಿಕೊಳ್ಳುವ ಪತಂಗಗಳು ಪಕ್ಷಿಗಳ ಬೇಟೆಗೆ ಹೆಚ್ಚು ಬಲಿಯಾಗುತ್ತಿದ್ದವು. ಅಂದರೆ, ಡಾರ್ವಿನ್ ವಿವರಿಸಿದ ನೈಸರ್ಗಿಕ ಆಯ್ಕೆಯ ಪ್ರಕ್ರಿಯೆ ನಿಜವಾಗಿಯೂ ನಡೆಯುತ್ತಿತ್ತು.

ಮಜೆರಸ್ ಅವರ ಅಧ್ಯಯನವು ಇನ್ನೊಂದು ಮಹತ್ವದ ವಿಷಯವನ್ನೂ ತೋರಿಸಿತು. ಕೆಟಲ್‌ವೆಲ್ ಅವರ ಕೆಲವು ಪ್ರಯೋಗ ವಿಧಾನಗಳ ಬಗ್ಗೆ ಕೇಳಲಾಗಿದ್ದ ಪ್ರಶ್ನೆಗಳು ಸಮಂಜಸವಾಗಿದ್ದರೂ, ಅವು ಮೂಲ ತೀರ್ಮಾನವನ್ನು ತಪ್ಪು ಎಂದು ಸಾಬೀತುಪಡಿಸಲಿಲ್ಲ. ಕೆಲವು ವಿವರಗಳಲ್ಲಿ ಸುಧಾರಣೆ ಬೇಕಾಗಿರಬಹುದು. ಆದರೆ ಪ್ರಮುಖ ವಿಚಾರ ಒಂದೇ ಆಗಿತ್ತು. ಮರದ ಬಣ್ಣ ಮತ್ತು ಪಕ್ಷಿಗಳ ಬೇಟೆಯ ಒತ್ತಡವು ಪೆಪ್ಪರ್ಡ್ ಪತಂಗಗಳ ಬಣ್ಣದ ಪ್ರಮಾಣವನ್ನು ಬದಲಾಯಿಸುತ್ತಿತ್ತು.

ಅಂದರೆ ಕಥೆಯ ಹೃದಯ ಭಾಗ ಸರಿಯಾಗಿಯೇ ಇತ್ತು.

ಈ ಅಧ್ಯಯನವನ್ನು ಪೂರ್ಣಗೊಳಿಸಲು ಮಜೆರಸ್ ಹಲವು ವರ್ಷಗಳ ಕಾಲ ಶ್ರಮಿಸಿದರು. ಆದರೆ ಅವರ ಸಂಶೋಧನೆಯ ಅಂತಿಮ ಪ್ರಕಟಣೆಯನ್ನು ನೋಡುವ ಮೊದಲು ಅವರು ನಿಧನರಾದರು. ಅವರ ಸಹೋದ್ಯೋಗಿಗಳು ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ, ಅಧ್ಯಯನವನ್ನು ಪೂರ್ಣಗೊಳಿಸಿ ಪ್ರಕಟಿಸಿದರು. ಅದರ ಫಲಿತಾಂಶವು ವಿಜ್ಞಾನ ಜಗತ್ತಿಗೆ ಒಂದು ಮಹತ್ವದ ಸಂದೇಶ ನೀಡಿತು.

ಪೆಪ್ಪರ್ಡ್ ಪತಂಗದ ಕಥೆ ಸುಳ್ಳಲ್ಲ, ಬದಲಾಗಿ, ಇನ್ನಷ್ಟು ಬಲವಾದ ಸಾಕ್ಷಿಗಳೊಂದಿಗೆ ಮತ್ತೆ ಧೃಢವಾಯಿತು. ಈ ಕಥೆಯ ಅತ್ಯಂತ ದೊಡ್ಡ ಪಾತ್ರಧಾರಿ ಪೆಪ್ಪರ್ಡ್ ಪತಂಗವಲ್ಲ, ವಿಜ್ಞಾನ!

ಒಂದು ವಿಜ್ಞಾನಿ ಒಂದು ವಿವರಣೆಯನ್ನು ನೀಡುತ್ತಾನೆ. ಇನ್ನೊಬ್ಬ ವಿಜ್ಞಾನಿ ಅದನ್ನು ಪ್ರಶ್ನಿಸುತ್ತಾನೆ. ಮೂರನೆಯವನು ಹೊಸ ಅಧ್ಯಯನ ನಡೆಸುತ್ತಾನೆ. ಹಳೆಯ ಪ್ರಯೋಗಗಳನ್ನು ಮತ್ತೆ ಪರಿಶೀಲಿಸಲಾಗುತ್ತದೆ. ಹೊಸ ಮಾಹಿತಿಯನ್ನು ಸೇರಿಸಲಾಗುತ್ತದೆ. ತಪ್ಪುಗಳಿದ್ದರೆ ಅವು ತಿದ್ದಲ್ಪಡುತ್ತವೆ. ಸರಿಯಾದ ಭಾಗಗಳು ಉಳಿಯುತ್ತವೆ. ಆದ್ದರಿಂದ ವಿಜ್ಞಾನದಲ್ಲಿ "ನಾನು ಹೇಳಿದ್ದೇ ಸತ್ಯ" ಎಂಬ ಮಾತಿಗೆ ಸ್ಥಾನವಿಲ್ಲ. "ಸಾಕ್ಷಿಗಳು ಏನು ಹೇಳುತ್ತವೆ?" ಎಂಬ ಪ್ರಶ್ನೆಯೇ ಮುಖ್ಯ. ಪೆಪ್ಪರ್ಡ್ ಪತಂಗದ ಕಥೆಯು ಇದಕ್ಕೆ ಅತ್ಯುತ್ತಮ ಉದಾಹರಣೆ. ಈ ಕಥೆ ಕೇವಲ ನೈಸರ್ಗಿಕ ಆಯ್ಕೆಯನ್ನು ಮಾತ್ರ ಸಾಬೀತುಪಡಿಸಲಿಲ್ಲ. ವಿಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನೂ ಜಗತ್ತಿಗೆ ತೋರಿಸಿತು.

ಇಪ್ಪತ್ತನೇ ಶತಮಾನದ ಮಧ್ಯಭಾಗದ ವೇಳೆಗೆ ಬ್ರಿಟನ್‌ನಲ್ಲಿ ವಾಯುಮಾಲಿನ್ಯದ ಪರಿಣಾಮಗಳು ಸ್ಪಷ್ಟವಾಗಿ ಗೋಚರಿಸತೊಡಗಿದವು. ನದಿಗಳು ಕಲುಷಿತವಾಗಿದ್ದವು. ಕಾಡುಗಳ ಜೀವವೈವಿಧ್ಯ ಕುಸಿಯುತ್ತಿತ್ತು. ಮರಗಳ ಮೇಲಿದ್ದ ಕಲ್ಲುಹೂಗಳು ಬಹುತೇಕ ನಾಶವಾಗಿದ್ದವು. ಕೊನೆಗೆ ಸರ್ಕಾರಗಳು ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತುಕೊಂಡವು. 1956ರಲ್ಲಿ ಬ್ರಿಟನ್ Clean Air Act ಎಂಬ ಪರಿಸರ ಸಂರಕ್ಷಣೆಯ ಕಾಯ್ದೆಯನ್ನು ಜಾರಿಗೆ ತಂದಿತು. ನಂತರದ ವರ್ಷಗಳಲ್ಲಿ ಕಾರ್ಖಾನೆಗಳಿಂದ ಹೊರಬರುವ ಹೊಗೆ ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಯಿತು.

ನಿಧಾನವಾಗಿ ಗಾಳಿ ಸ್ವಚ್ಛವಾಗತೊಡಗಿತು. ಹೊಗೆಯ ಪ್ರಮಾಣ ಕಡಿಮೆಯಾಯಿತು. ಮರಗಳ ಮೇಲಿದ್ದ ಕಪ್ಪು ಪದರಗಳು ಮಳೆಯ ನೀರಿನಲ್ಲಿ ಕೊಚ್ಚಿಹೋದವು. ಮತ್ತು ಹಲವು ವರ್ಷಗಳ ನಂತರ ಮರಗಳ ಮೇಲೆ ಮತ್ತೆ ಕಲ್ಲುಹೂಗಳು ಬೆಳೆಯತೊಡಗಿದವು. ಒಂದು ಕಾಲದಲ್ಲಿ ಕಪ್ಪಾಗಿದ್ದ ಮರಗಳು ಮತ್ತೊಮ್ಮೆ ಬೂದು-ಬಿಳಿ ಬಣ್ಣವನ್ನು ಪಡೆಯತೊಡಗಿದವು. ಪ್ರಕೃತಿ ತನ್ನ ಹಳೆಯ ರೂಪವನ್ನು ಮರಳಿ ಪಡೆಯುತ್ತಿತ್ತು. ಮರಗಳ ಬಣ್ಣ ಬದಲಾದಾಗ ಪತಂಗಗಳ ಬದುಕೂ ಮತ್ತೊಮ್ಮೆ ಬದಲಾಯಿತು.

ಈಗ ಕಪ್ಪು ಬಣ್ಣದ ಪತಂಗಗಳೇ ಸ್ಪಷ್ಟವಾಗಿ ಎದ್ದು ಕಾಣಿಸತೊಡಗಿದವು. ತಿಳಿ ಬಣ್ಣದ ಪತಂಗಗಳು ಮತ್ತೆ ಮರದ ತೊಗಟೆಯ ಬಣ್ಣದೊಂದಿಗೆ ಬೆರೆತುಹೋದವು. ಪಕ್ಷಿಗಳು ಈ ಬಾರಿ ಕಪ್ಪು ಪತಂಗಗಳನ್ನು ಹೆಚ್ಚು ಬೇಟೆಯಾಡಲು ಆರಂಭಿಸಿದವು. ಹೀಗಾಗಿ ಹಲವು ದಶಕಗಳಿಂದ ಪ್ರಾಬಲ್ಯ ಹೊಂದಿದ್ದ ಕಪ್ಪು ಪತಂಗಗಳ ಸಂಖ್ಯೆ ನಿಧಾನವಾಗಿ ಇಳಿಯತೊಡಗಿತು. ಮತ್ತೆ ತಿಳಿ ಬಣ್ಣದ ಪೆಪ್ಪರ್ಡ್ ಪತಂಗಗಳೇ ಹೆಚ್ಚಾದವು.

ಇದು ಅತ್ಯಂತ ಮಹತ್ವದ ಸಂಗತಿ. ಏಕೆಂದರೆ ಜೀವವಿಕಾಸವು ಯಾವಾಗಲೂ ಒಂದೇ ದಿಕ್ಕಿನಲ್ಲಿ ನಡೆಯುವುದಿಲ್ಲ. ಪರಿಸರ ಬದಲಾದಂತೆ ನೈಸರ್ಗಿಕ ಆಯ್ಕೆಯ ದಿಕ್ಕೂ ಬದಲಾಗಬಹುದು. ಇಂದು ಅನುಕೂಲವಾಗಿರುವ ಲಕ್ಷಣ ನಾಳೆ ಅನನುಕೂಲವಾಗಬಹುದು. ನಿನ್ನೆ ಅಪರೂಪವಾಗಿದ್ದ ಲಕ್ಷಣ ನಾಳೆ ಸಾಮಾನ್ಯವಾಗಬಹುದು. ಪ್ರಕೃತಿಯಲ್ಲಿ ಶಾಶ್ವತವಾಗಿ "ಉತ್ತಮ" ಎನ್ನುವ ಗುಣಲಕ್ಷಣವೇ ಇರುವುದಿಲ್ಲ. ಇರುವ ಪರಿಸರಕ್ಕೆ ಯಾವುದು ಹೆಚ್ಚು ಹೊಂದಿಕೊಳ್ಳುತ್ತದೆಯೋ ಅದೇ ಆ ಕ್ಷಣದ ಯಶಸ್ವಿ ರೂಪ.

ಪೆಪ್ಪರ್ಡ್ ಪತಂಗದ ಕಥೆಯನ್ನು ನಾವು ಸಾಮಾನ್ಯವಾಗಿ "ಕಪ್ಪು ಪತಂಗ ಬಿಳಿ ಪತಂಗವಾಯಿತು" ಅಥವಾ "ಬಿಳಿ ಪತಂಗ ಕಪ್ಪಾಯಿತು" ಎಂಬ ಸರಳ ಕಥೆಯಾಗಿ ಹೇಳುತ್ತೇವೆ. ಆದರೆ ಅದು ಸಂಪೂರ್ಣ ಸತ್ಯವಲ್ಲ. ಒಂದು ಪತಂಗ ತನ್ನ ಜೀವನದಲ್ಲಿ ಬಣ್ಣ ಬದಲಿಸಿರಲಿಲ್ಲ. ಪ್ರಕೃತಿಯೂ ಹೊಸ ಬಣ್ಣವನ್ನು ಸೃಷ್ಟಿಸಿರಲಿಲ್ಲ. ಆ ಬಣ್ಣಗಳು ಮೊದಲೇ ಇದ್ದವು. ಬದಲಾದದ್ದು ಪರಿಸರ. ಆ ಪರಿಸರವು ಯಾವ ರೂಪವನ್ನು ಬದುಕಲು ಬಿಡಬೇಕು ಎಂದು ನಿರ್ಧರಿಸಿತು. ಇದೇ ಡಾರ್ವಿನ್ ಪ್ರತಿಪಾದಿಸಿದ್ದ ನೈಸರ್ಗಿಕ ಆಯ್ಕೆಯ ಸಾರ. ಈ ಕಥೆ ಜೀವವಿಕಾಸದ ಕಥೆ ಮಾತ್ರವಲ್ಲ. ಇದು ವಿಜ್ಞಾನದ ಕಥೆಯೂ ಹೌದು.

ವಿಜ್ಞಾನದಲ್ಲಿ ಪ್ರಶ್ನೆ ಕೇಳುವುದು ತಪ್ಪಲ್ಲ. ಪ್ರಶ್ನೆಗಳಿಗೆ ಉತ್ತರ ಹುಡುಕುವುದನ್ನು ನಿಲ್ಲಿಸುವುದೇ ತಪ್ಪು. ವಿಜ್ಞಾನ ಎಂದರೆ ಅಂತಿಮ ಉತ್ತರಗಳ ಸಂಗ್ರಹವಲ್ಲ; ಹೊಸ ಪ್ರಶ್ನೆಗಳನ್ನು ಕೇಳುತ್ತಾ, ಹೊಸ ಸಾಕ್ಷಿಗಳನ್ನು ಹುಡುಕುತ್ತಾ ಮುಂದೆ ಸಾಗುವ ನಿರಂತರ ಪಯಣ ಎಂಬುದಕ್ಕೆ ಜೀವಂತ ಸಾಕ್ಷಿ.

ಆಧಾರ: Industrial Melanism in the Peppered Moth, Biston betularia: An Excellent Teaching Example of Darwinian Evolution in Action by Michael E. N. Majerus, Published on December 6th, 2008.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಚಿತ್ರ: © ಶ್ರೀಕಾಂತ ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. ಚಿತ್ರ: © ಶ್ರೀಕಾಂತ Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

 ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ್ರ...