ವಿಷಯಕ್ಕೆ ಹೋಗಿ

ಒಂದು ಕೂಗು, ಹಲವು ಕಾಡುಗಳು

ಪೂರ್ವ ಘಟ್ಟದ ಕಾಡುಗಳಲ್ಲಿ ಕಂಡ Indian Scops-Owl

ಕೆಲವು ಪಕ್ಷಿಗಳ ಕೂಗುಗಳು ಆಳವಾಗಿ ನೆನಪಿನಲ್ಲಿ ಉಳಿದುಬಿಡುತ್ತವೆ.

2025ರ ಅಕ್ಟೋಬರ್ ತಿಂಗಳ ಒಂದು ಸಂಜೆ ಪಾಲಕ್ಕಾಡಿನಲ್ಲಿ ನಾನು ಉಳಿದುಕೊಂಡಿದ್ದ ಮನೆಯ ಮುಂದೆ ಕುಳಿತಿದ್ದೆ. ಆ ಮನೆಯ ಮುಂದೆ ಕೃಷಿ ನೀರಾವರಿಗೆಂದು ಮಾಡಿದ ದೊಡ್ಡದೊಂದು ಕಾಲುವೆ ಮತ್ತು ಅದರ ಆಚೆಗೆ ಒಂದು ಚಿಕ್ಕ ಕಾಡಿತ್ತು. ಅದರ ಆಚೆಗೆ ಸ್ವಲ್ಪ ಕೃಷಿ ಭೂಮಿ ಮತ್ತು ಅದರ ಹಿಂದೆ ದೊಡ್ಡದಾದ ಕಾಡು ಆರಂಭವಾಗುತ್ತದೆ. ಆ ಹತ್ತಿರದ ಕಾಡಿನಿಂದ Mottled Wood Owlನ ಕೂಗು ಕೇಳಿಬರುತ್ತಿತ್ತು. ಆ ಕೂಗನ್ನು ಕೇಳಿದೊಡನೆ ಬೇರೆ ಬೇರೆ ಗೂಬೆಗಳ ಕೂಗುಗಳು ಒಂದೊಂದಾಗಿ ನೆನಪಿಗೆ ಮೂಡತೊಡಗಿತು.

2023ರಲ್ಲಿ ಆಂಧ್ರಪ್ರದೇಶದ ನಾಗಾರ್ಜುನಸಾಗರ–ಶ್ರೀಶೈಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಲಸ ಮಾಡುವಾಗ ನಾನು ಮತ್ತು Ng ಕೃಷ್ಣಾ ನದಿಯ ದಡದಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದೆವು. ಲೈನ್ ಟ್ರಾನ್ಸೆಕ್ಟ್ ಸಮೀಕ್ಷೆ ನಡೆಯುತ್ತಿತ್ತು. ನಮ್ಮ ಜೊತೆಗೆ ಇನ್ನಿಬ್ಬರು ಫೀಲ್ಡ್ ಅಸಿಸ್ಟೆಂಟ್‌ಗಳಿದ್ದರು.

ಒಂದು ಸಂಜೆ ಸಮೀಕ್ಷೆ ಮುಗಿಸಿ ಬಂದ ನಂತರ ಟಾರ್ಚ್ ಬೆಳಕಿನಲ್ಲಿ ಊಟ ಮಾಡುತ್ತಾ ಹೊರಗಡೆ ಕುಳಿತಿದ್ದೆವು. ದಿನವಿಡೀ ನಡೆದ ಘಟನೆಗಳ ಬಗ್ಗೆ ಮಾತನಾಡುತ್ತಿದ್ದೆವು. ಅಷ್ಟರಲ್ಲಿ ಕಾಡಿನೊಳಗಿಂದ ಒಂದು ವಿಚಿತ್ರ ಶಬ್ದ ಕೇಳಿಸಿತು. ಮೊದಲಿಗೆ ಅದು ಏನೆಂದು ಅರ್ಥವಾಗಲಿಲ್ಲ. ಯಾರೋ ನಗುತ್ತಿರುವಂತೆ ಅನಿಸುತ್ತಿತ್ತು. ಆದರೆ ಅದು ಮನುಷ್ಯನ ಧ್ವನಿ ಅಲ್ಲ. ಪ್ರಾಣಿಯ ಶಬ್ದವೂ ಅಲ್ಲ. ಕತ್ತಲಿನ ನಡುವೆ ಆ ಕೂಗು ಇನ್ನೂ ವಿಚಿತ್ರವಾಗಿ ಕೇಳಿಸುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಅದು Mottled Wood Owl ಎಂದು ಗೊತ್ತಾಯಿತು.

ನಾವು ಕೇಳಿದ Mottled Wood Owlನ ಕೂಗು ನಮಗೆ ಹೊಸದೇನೂ ಆಗಿರಲಿಲ್ಲ. ನಾನು ಮತ್ತು Ng ಅದನ್ನು 2012ರಲ್ಲೇ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೇಳಿದ್ದೆವು. ಆದರೆ ಪ್ರತಿ ಕಾಡಿನಲ್ಲೂ ಅದರ ಕೂಗು ಸ್ವಲ್ಪ ಬೇರೆಯದೇ ಎನಿಸುತ್ತದೆ.

ಬಹುತೇಕ ಗೂಬೆಗಳ ಕೂಗುಗಳಲ್ಲಿ ಯಾವುದೋ ಒಂದು ನಿಗೂಢತೆ ಇರುತ್ತದೆ. ಬಹುಶಃ ಅವು ರಾತ್ರಿಯಲ್ಲಿ ಮಾತ್ರ ಚಟುವಟಿಕೆಯಾಗುವುದರಿಂದ ಇರಬಹುದು. ಅದಕ್ಕೇ ಜನರು ಅವುಗಳ ಧ್ವನಿಯನ್ನು ತಮಗೆ ಅರ್ಥವಾಗದ ಯಾವುದೋ ನಿಗೂಢ ಸಂಗತಿಗಳ ಜೊತೆ ತಳುಕು ಹಾಕಿ ನೋಡುತ್ತಾರೆ.

Spot-bellied Eagle-Owlನ ಕೂಗು ಕೇಳಿದರೆ, ಯಾರೋ ಕಾಡಿನೊಳಗೆ ಜೋರಾಗಿ ಕಿರುಚಿದಂತೆ ಅನಿಸುತ್ತದೆ. ಮೊದಲ ಬಾರಿ ಕೇಳಿದವರಿಗೆ ಖಂಡಿತ ಬೆಚ್ಚಿಬೀಳುವ ಅನುಭವ.

Oriental Scops-Owlನ ಕೂಗು ಕೇಳಿದಾಗಲೆಲ್ಲಾ ನನಗೆ 2012ರ ನಾಗರಹೊಳೆ ನೆನಪಾಗುತ್ತದೆ. ಆಗ ನಮ್ಮ ಕ್ಯಾಂಪಿನ ಸುತ್ತ ಅದರ ಕೂಗು ಸತತವಾಗಿ ಕೇಳಿಸುತ್ತಿತ್ತು.

Indian Scops-Owl ಮತ್ತು Jungle Owletಗಳ ಕೂಗುಗಳು ಪೂರ್ವಘಟ್ಟದ ಕಾಡುಗಳನ್ನು ನೆನಪಿಸುತ್ತದೆ. Indian Scops-Owlನ ಕೂಗನ್ನು ನಾನು ಮೊದಲಿಗೆ ಕೇಳಿದಾಗ ಅದು ಯಾವುದೋ ಕಪ್ಪೇ ಕೂಗು ಅಥವಾ ನೀರು ತೊಟ್ಟಿಕ್ಕುವ ಸದ್ದು ಇರಬಹುದು ಎಂದೆಣಿಸಿದ್ದೆ!

ಮಾಳದ ಮನೆಯ ಹತ್ತಿರ ರಾತ್ರಿಗಳಲ್ಲಿ Brown Wood-Owl ಮತ್ತು Brown Hawk Owlಗಳ (ಬದಲಾದ ಹೆಸರು Brown Boobook) ಧ್ವನಿ ಕೇಳಿಸುತ್ತಿರುತ್ತದೆ. ಚಳಿಗಾಲದಲ್ಲಿ ಮನೆಯ ಹತ್ತಿರ ಹೆಚ್ಚಾಗಿ ಕೇಳುವ ಮತ್ತೊಂದು ಗೂಬೆ Brown Fish-Owl. ರಾತ್ರಿಯ ನೀರವತೆಯಲ್ಲಿ ಅದರ ಹಮ್ ಎನ್ನುವ ಗುನುಗು ಕೇಳುತ್ತಿರುತ್ತದೆ. ಅಪರೂಪವಾದ Sri Lank Bay-Owl ಸಹಾ ಮನೆಯ ಹತ್ತಿರ ಆಗಾಗ ಕೇಳುತ್ತದೆ. ಅದರ ಬಗ್ಗೆ ಇದೇ ಬ್ಲಾಗ್‌ನಲ್ಲಿ ಹಿಂದೆ ಬರೆದಿದ್ದೆ. ಅದನ್ನು ಇಲ್ಲಿ ಓದಬಹುದು.

ಇದೇ ರೀತಿ ರಾತ್ರಿಯಲ್ಲಿ ಕೇಳುವ ಮತ್ತೊಂದು ಕೂಗು Sri Lanka Frogmouthನದ್ದು. ಇದು ಗೂಬೆ ಅಲ್ಲದಿದ್ದರೂ ಒಂದು ನಿಶಾಚರ ಪಕ್ಷಿ. ಕಳೆದ ಚಳಿಗಾಲದಲ್ಲಿ ಮನೆಯ ಹತ್ತಿರವೇ ಅದರ ಕೂಗನ್ನು ಹೆಚ್ಚುಬಾರಿ ಕೇಳಿದೆ.

Eastern Barn Owl ಮತ್ತು Spotted Owlet ಮಾತ್ರ ಕಾಡಿಗಿಂತ ಜನವಸತಿಗಳ ಹತ್ತಿರ ಹೆಚ್ಚಾಗಿ ನೋಡಲು ಸಿಗುತ್ತವೆ. ರಾತ್ರಿಯ ಹೊತ್ತು ಅವುಗಳ ಕೂಗು ಮನೆಗಳ ನಡುವೆ ಪ್ರತಿಧ್ವನಿಸುತ್ತವೆ. ಕೆಲವೇ ವರ್ಷಗಳ ಹಿಂದಿನವರೆಗೂ Eastern Barn Owl ಬೆಂಗಳೂರಿನ ಮನೆಯ ಸುತ್ತ ಇಲಿಗಳನ್ನು ಹಿಡಿಯುತ್ತಿರುವ ದೃಶ್ಯ ಕಾಣುತ್ತಿತ್ತು.

ಇಂದಿಗೂ ಗೂಬೆಗಳ ಕೂಗು ಕೇಳಿದಾಗ ನನಗೆ ಕುತೂಹಲವಾಗುತ್ತದೆ. ಕೆಲವು ಕೂಗುಗಳು ಮೈ ಜುಮ್ಮೆನಿಸುತ್ತವೆ. ಇನ್ನೂ ಕೆಲವು ವಿಚಿತ್ರವಾದ ನೆಮ್ಮದಿಯನ್ನು ಕೊಡುತ್ತವೆ. ಆದರೆ ಎಲ್ಲವೂ ರಾತ್ರಿಯ ನಿಗೂಢತೆಯನ್ನು ನೆನಪಿಸುತ್ತವೆ.

ಒಂದು ಗೂಬೆಯ ಕೂಗು ಇಷ್ಟೊಂದು ಕಾಡುಗಳನ್ನು, ಇಷ್ಟೊಂದು ವರ್ಷಗಳನ್ನು, ಇಷ್ಟೊಂದು ನೆನಪುಗಳನ್ನು ಒಟ್ಟಿಗೆ ಜೋಡಿಸಬಲ್ಲದು ಎಂದು ಆಗ ಅನ್ನಿಸಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.