ವಿಷಯಕ್ಕೆ ಹೋಗಿ

ಹುಲಿಯ ಬದುಕಿನಿಂದ ಚುರುಳಿ ಕೊಂಬನ್‌ವರೆಗೆ

ಕಾಡಿನ ನಿಗೂಢಗಳನ್ನು ತರೆದಿಡುವ 'ಹುಲಿಯ ಬದುಕು'


ಕಾಡಿನ ಕೆಲವು ಕಥೆಗಳು ಕಾಡಿನಲ್ಲೇ ಆರಂಭವಾಗುವುದಿಲ್ಲ. ಅವು ದಶಕಗಳ ಹಿಂದೆ, ಪುಸ್ತಕಗಳ ಪುಟಗಳಲ್ಲಿ, ಒಂದು ಯುವ ಮನಸ್ಸಿನ ಕಲ್ಪನೆಗಳಲ್ಲಿ, ಬದುಕಿನ ದಿಕ್ಕನ್ನೇ ಬದಲಿಸುವ ಮೌನ ಕನಸುಗಳಲ್ಲಿ ಆರಂಭವಾಗುತ್ತವೆ.

ನನಗೆ ಆ ಕಥೆ 'ಹುಲಿಯ ಬದುಕು' ಮತ್ತು 'ಹುಲಿರಾಯನ ಆಕಾಶವಾಣಿ' ಪುಸ್ತಕಗಳಿಂದ ಆರಂಭವಾಯಿತು.

1980ರ ದಶಕದ ಕೊನೆಯ ಭಾಗ ಮತ್ತು 1990ರ ದಶಕದಲ್ಲಿ ಡಾ. ಉಲ್ಲಾಸ್ ಕಾರಂತ್ ಅವರು ಕರ್ನಾಟಕದ ಕಾಡುಗಳಲ್ಲಿ ರೇಡಿಯೊ ಕಾಲರ್ ಅಳವಡಿಸಿದ್ದ ಹುಲಿಗಳನ್ನು ಹಿಂಬಾಲಿಸಿ ನಡೆಸಿದ ಅಧ್ಯಯನಗಳನ್ನು ಆಧರಿಸಿದ ಈ ಪುಸ್ತಕಗಳು 2000ರ ದಶಕದ ಮಧ್ಯಭಾಗದಲ್ಲಿ ಪ್ರಕಟವಾಗಿತ್ತು. ಕೈಯಲ್ಲಿ ಆಂಟೆನಾ ಹಿಡಿದು ನಾಗರಹೊಳೆ ಕಾಡಿನಲ್ಲಿ ನಡೆಯುತ್ತಾ, ಹುಲಿಯ ಕುತ್ತಿಗೆಯಲ್ಲಿದ್ದ ಕಾಲರ್‌ನಿಂದ ಬರುವ ರೇಡಿಯೊ ಸಂಕೇತವನ್ನು ಆಲಿಸುತ್ತಿದ್ದ ಅವರ ವರ್ಣನೆಗಳು ನನಗೆ ಹೊಸ ಜಗತ್ತೊಂದನ್ನು ತೆರೆದವು. ಒಂದು ಅರ್ಥದಲ್ಲಿ, ಆ ಪುಸ್ತಕಗಳೇ ನನ್ನನ್ನು ವನ್ಯಜೀವಿ ಕ್ಷೇತ್ರದತ್ತ ಸೆಳೆಯಿತು.

2011ರಲ್ಲಿ ನಾನು ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್ (CWS) ಸಂಸ್ಥೆಗೆ ಸೇರಿದಾಗ, ಡಾ. ಕಾರಂತ್ ಅವರು ಆರಂಭಿಸಿದ್ದ ಕ್ಯಾಮೆರಾ ಟ್ರ್ಯಾಪ್ ಸಮೀಕ್ಷೆಗಳು ಇನ್ನೂ ಮುಂದುವರಿಯುತ್ತಲೇ ಇದ್ದವು. ಭಾರತದ ಹುಲಿಗಳ ಸಂಖ್ಯೆಯನ್ನು ಅವರೇ ಪರಿಚಯಿಸಿದ್ದ ವಿಧಾನಗಳ ಮೂಲಕ ಅಂದಾಜಿಸಲಾಗುತ್ತಿತ್ತು. ಹುಲಿಗಳ ಬದುಕಿಗೆ ಆಧಾರವಾಗಿರುವ ಜಿಂಕೆ, ಕಾಡೆಮ್ಮೆ, ಕಾಡುಹಂದಿ ಮುಂತಾದ ಬಲಿ ಪ್ರಾಣಿಗಳ ಸಾಂದ್ರತೆಯನ್ನು ಅಂದಾಜಿಸುವ ಲೈನ್ ಟ್ರಾನ್ಸೆಕ್ಟ್ ಸಮೀಕ್ಷೆಗಳ ಭಾಗವಾಗಿದ್ದೆ ನಾನು.

ಆದರೆ ಅಷ್ಟರಲ್ಲಿ ರೇಡಿಯೊ ಟೆಲಿಮೆಟ್ರಿಯ ಯುಗ ಬಹುತೇಕ ಮುಗಿದಿತ್ತು. ಕಾಡಿನಲ್ಲಿ ಆಂಟೆನಾ ಹಿಡಿದು ಹುಲಿ ಅಥವಾ ಆನೆಯಂತಹ ಪ್ರಾಣಿಗಳನ್ನು ಅವುಗಳದೇ ಆವಾಸದಲ್ಲಿ ಹಿಂಬಾಲಿಸುವ ದಿನಗಳು ಕಳೆದುಹೋಗಿದ್ದವು. ಆ ಅನುಭವವನ್ನು ನಾನು ಬದುಕಿದ್ದು ಕೇವಲ ಅದನ್ನು ಅನುಭವಿಸಿದ್ದ ವ್ಯಕ್ತಿಯ ಬರಹಗಳ ಮೂಲಕ ಮಾತ್ರ.

2014ರಲ್ಲಿ ಕರ್ನಾಟಕದಲ್ಲಿ CWS ನಡೆಸುತ್ತಿದ್ದ ಹುಲಿ ಮತ್ತು ಆನೆಗಳ ಆಕ್ಯುಪೆನ್ಸಿ ಸಮೀಕ್ಷೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಆ ಹಳೆಯ ಟೆಲಿಮೆಟ್ರಿ ದಿನಗಳು ಜನರ ನೆನಪಿನಲ್ಲಿ ಎಷ್ಟು ಆಳವಾಗಿ ಉಳಿದಿವೆ ಎಂಬುದು ನನಗೆ ಅರಿವಾಯಿತು.

ಅದು ಏಪ್ರಿಲ್ 17ರ ದಿನ. ಒಮ್ಮೆ ಕೆನೆತ್ ಆಂಡರ್ಸನ್ ಬರಹಗಳಲ್ಲಿ ಕಾಣಿಸಿಕೊಂಡಿದ್ದ ಶಿಖಾರಿಪುರ ಸಮೀಪದ ಬೆಳಂದೂರು - ತ್ಯಾಗರ್ತಿ ಪ್ರದೇಶದ ಬಳಿ ಸಮೀಕ್ಷಾ ತಂಡಗಳು ಮರಳಿ ಬರುವುದನ್ನು ಕಾಯುತ್ತಾ ವಾಹನದ ಬಳಿ ಕುಳಿತಿದ್ದೆ. ಆಂಡರ್ಸನ್ ವರ್ಣಿಸಿದ್ದ ದಟ್ಟ ಕಾಡುಗಳು ಮರೆಯಾಗಿ ಕೇವಲ ತುಣುಕುಗಳಾಗಿ ಉಳಿದಿದ್ದವು. ಅಷ್ಟರಲ್ಲಿ ಸುಮಾರು ಅರವತ್ತು ವರ್ಷದ, ದ್ಯಾವಣ್ಣ ಎಂಬ ರೈತ ನನ್ನ ಬಳಿ ಬಂದು ಮಾತು ಆರಂಭಿಸಿದರು.

ಸಮೀಕ್ಷೆಗಳ ಸಮಯದಲ್ಲಿ ನಾವು ನಮ್ಮನ್ನು ಶಿರಸಿಯ ಅರಣ್ಯ ವಿದ್ಯಾಲಯದ ವಿದ್ಯಾರ್ಥಿಗಳೆಂದು ಪರಿಚಯಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಅನಗತ್ಯ ಪ್ರಶ್ನೆಗಳನ್ನು ತಪ್ಪಿಸಲು ಅದು ಸುಲಭವಾದ ಮಾರ್ಗ. ನಾನು ನಮ್ಮ ಕೆಲಸದ ಬಗ್ಗೆ ದ್ಯಾವಣ್ಣನವರಿಗೆ ಅಸ್ಪಷ್ಟವಾಗಿ ಹೇಳುತ್ತಿದ್ದಂತೆ ಅವರು ನಗುಮುಖದಿಂದ ತಮಗೆ ಎಲ್ಲವೂ ಅರ್ಥವಾಗಿದೆ ಎಂಬಂತೆ ತಲೆ ಆಡಿಸಿದರು.

“ನೀವೆಲ್ಲ ಕಾಡಿನೊಳಗೆ ಹೋಗಿ ಮರಗಳಿಗೆ ಕ್ಯಾಮೆರಾ ಕಟ್ಟ್ತೀರ, ಬೇಟೆಗಾರರನ್ನು ಹಿಡೀತೀರ,” ಎಂದರು.

ಮುಂದುವರೆದು "ನಿಮ್ಮ ಸುರಕ್ಷತೆ ಹೇಗೆ?"

ನಾನು ಏನಾದರೂ ಹೇಳುವ ಮುನ್ನವೇ ಅವರು ಸಲಹೆ ನೀಡಲು ಆರಂಭಿಸಿದರು.

“ನೀವು ಗನ್ ತೆಗೆದುಕೊಂಡು ಹೋಗಬೇಕು.”

“ಅಂಥದ್ದಕ್ಕೆ ನಮಗೆ ಅನುಮತಿ ಇಲ್ಲ,” ಎಂದೆ.

“ಕೊಲ್ಲೋಕೆ ಅಲ್ಲ. ಪ್ರಾಣಿಯನ್ನು ಪ್ರಜ್ಞೆ ತಪ್ಪಿಸಲು. ನಂತರ ನೀವು ತಪ್ಪಿಸಿಕೊಂಡು ಬರಬಹುದು,” ಎಂದರು.

ಮಾತು ಯಾವ ದಿಕ್ಕಿಗೆ ಸಾಗುತ್ತಿದೆ ಎಂಬುದು ನನಗೆ ಅರ್ಥವಾಗಲಿಲ್ಲ.

ನಂತರ ಅವರು ಹೇಳಿದ್ದು ಇನ್ನೂ ಆಶ್ಚರ್ಯಕರವಾಗಿತ್ತು.

“ನಾಗರಹೊಳೆ ಕಾಡಿನಲ್ಲಿ ಹೀಗೆ ಒಬ್ಬ ವ್ಯಕ್ತಿ ಗನ್‌ನಿಂದ ಹುಲಿಗೆ ಗುಂಡು ಹೊಡೆದು ಪ್ರಜ್ಞೆ ತಪ್ಪಿಸಿ ಅದರ ಕತ್ತಿಗೆ ಗಂಟೆ ಕಟ್ಟುತ್ತಿದ್ದ!”

“ಗಂಟೆ? ಯಾಕೆ?” ಎಂದು ಕೇಳಿದೆ.

“ಸರ್ಚ್ ಮಾಡೋಕೆ!” ಎಂದು ಅವರು ಹೆಮ್ಮೆಯಿಂದ ಉತ್ತರಿಸಿದರು.

ಬಹುಶಃ ಅವರು ‘ರಿಸರ್ಚ್’ ಎಂದು ಹೇಳಲು ಪ್ರಯತ್ನಿಸುತ್ತಿದ್ದಿರಬಹುದು.

“ನಾನು ಹೇಳ್ತಿರೋದು ಎಲ್ಲ ಸತ್ಯ. ಟಿವಿಯಲ್ಲಿ ನೋಡಿದ್ದೀನಿ,” ಎಂದು ತಮ್ಮ ಕಥೆಗೆ ಮತ್ತಷ್ಟು ಬಲ ತುಂಬಿದರು.

ಕೊನೆಗೆ ನಾನು ಕೇಳಿದೆ.

“ಆ ವ್ಯಕ್ತಿ ಯಾರು?”

“ಹೆಸರು ಗೊತ್ತಿಲ್ಲ... ಯಾರೋ ಮಂಗಳೂರು ಕಡೆ ಭಟ್ಟರ ಹುಡುಗ!”

ನಾನು ನಗುವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದೆ. ಅವರು ಹೇಳುತ್ತಿದ್ದ "ಭಟ್ಟರ ಹುಡುಗ" ಬೇರೆ ಯಾರೂ ಅಲ್ಲ — ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಯನ್ನು ಸ್ಥಾಪಿಸಿದ್ದ ಡಾ. ಉಲ್ಲಾಸ್ ಕಾರಂತ್ ಅವರೇ!

CWSನಲ್ಲಿ ಕೆಲಸ ಮಾಡುತ್ತಿದ್ದಾಗ ಡಾ. ಕಾರಂತ್ ಅವರು 1990ರ ದಶಕದಲ್ಲಿ ಬಳಸಿದ್ದ ಹಳೆಯ ಟೆಲಿಮೆಟ್ರಿ ಉಪಕರಣಗಳನ್ನು ನಾನು ಆಗಾಗ ನೋಡುತ್ತಿದ್ದೆ. ದೊಡ್ಡ ರಿಸೀವರ್‌ಗಳು, ಉದ್ದವಾದ ಆಂಟೆನಾಗಳು, ಕಾಡಿನ ನಿಜವಾದ ಕೆಲಸದ ಗುರುತುಗಳನ್ನು ಹೊತ್ತ ಟ್ರಾನ್ಸ್ಮಿಟರ್‌ಗಳು — ಅವೆಲ್ಲ ಒಂದು ಯುಗದ ಸಾಕ್ಷಿಗಳಾಗಿದ್ದವು.

ನಾನು ಅವುಗಳನ್ನು ಕಾಡಿನಲ್ಲಿ ಬಳಸಿರಲಿಲ್ಲ. ಆದರೆ CWS ಕಚೇರಿಗೆ ಗಣ್ಯರು ಭೇಟಿ ನೀಡುವ ಸಂದರ್ಭಗಳಲ್ಲಿ ಪ್ರದರ್ಶನಕ್ಕಾಗಿ ಅವುಗಳನ್ನು ಟೇಬಲ್ ಮೇಲೆ ಜೋಡಿಸುವ ಕೆಲಸ ನನ್ನದಾಗುತ್ತಿತ್ತು. ನಾಗರಹೊಳೆ ಕಾಡಿನಲ್ಲಿ ಒಮ್ಮೆ ಹುಲಿಗಳನ್ನು ಹಿಂಬಾಲಿಸಿದ್ದ ಉಪಕರಣಗಳನ್ನು ನೋಡಿ, ಬಂದವರು ಆಶ್ಚರ್ಯಪಡುತ್ತಿದ್ದರು. ಆ ಕ್ಷಣಗಳಲ್ಲಿ ನಾನು ಸ್ವತಃ ಟೆಲಿಮೆಟ್ರಿ ಮಾಡದಿದ್ದರೂ, ಆ ದಂತಕಥೆಯಂತಿದ್ದ ಕಾಲದೊಂದಿಗೆ ಒಂದು ಸಣ್ಣ ನಂಟನ್ನು ಅನುಭವಿಸುತ್ತಿದ್ದೆ.

2015ರಲ್ಲಿ ಕಚೇರಿ ಹೊಸ ಟೆಲಿಮೆಟ್ರಿ ವ್ಯವಸ್ಥೆಯನ್ನು ಖರೀದಿಸಿತು. ಇದು ಸಿಮ್ ಆಧಾರಿತ ಆಧುನಿಕ ವ್ಯವಸ್ಥೆಯಾಗಿದ್ದು, ಯಾವುದೇ ಆಂಟೆನಾ ಇರಲಿಲ್ಲ. ಕಾಲರ್‌ನೊಳಗಿನ ಸಿಮ್ ಕಾರ್ಡ್ (ಮೊಬೈಲ್ ಜಾಲವಿದ್ದರೆ) ಪ್ರಾಣಿಯ ಸ್ಥಳ ಮಾಹಿತಿಯನ್ನು ನೇರವಾಗಿ ಕಳುಹಿಸುತ್ತಿತ್ತು. ಆ ವ್ಯವಸ್ಥೆಯನ್ನು ಬಳಸುವ ತರಬೇತಿಯನ್ನೂ ನಾನು ಪಡೆದಿದ್ದೆ.

ಆ ಸಮಯದಲ್ಲಿ ಕೆಲವು ಕಾಡುಪ್ರಾಣಿಗಳಿಗೆ ಮತ್ತೆ ಕಾಲರ್ ಅಳವಡಿಸಿ ಅಧ್ಯಯನ ಆರಂಭಿಸುವ ಯೋಜನೆಗಳಿದ್ದವು. ಆದರೆ ಹಲವಾರು ಕಾರಣಗಳಿಂದ ಅವು ಕಾರ್ಯರೂಪಕ್ಕೆ ಬರಲಿಲ್ಲ. ಆ ಹೊಸ ಉಪಕರಣಗಳು ಎಂದಿಗೂ ಆರಂಭವಾಗದ ಒಂದು ಯೋಜನೆಗಾಗಿ ಕಾಯುತ್ತಲೇ ಉಳಿದವು.

2022 ಅಥವಾ 2023ರಲ್ಲಿ ಮುಂಬೈನ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ರೇಡಿಯೊ ಕಾಲರ್ ಅಳವಡಿಸಿದ್ದ ಚಿರತೆಗಳನ್ನು ಹಿಂಬಾಲಿಸುವ ಯೋಜನೆಯಲ್ಲಿ ಭಾಗವಹಿಸುವ ಅಪರೂಪದ ಅವಕಾಶ ನನಗೆ ದೊರಕಿತ್ತು. ಅದು ನಾನು ವರ್ಷಗಳ ಕಾಲ ಕಲ್ಪಿಸಿಕೊಂಡಿದ್ದ ಅನುಭವಕ್ಕೆ ಅತ್ಯಂತ ಹತ್ತಿರದ ಅವಕಾಶವಾಗಿತ್ತು. ಆದರೆ ವೈಯಕ್ತಿಕ ಕಾರಣವೊಂದರಿಂದ ನಾನು ಹೋಗಲಿಲ್ಲ. ಅವಕಾಶ ಕೈತಪ್ಪಿತು.

ಆದರೆ ಕಥೆ ಅಲ್ಲಿಗೆ ಮುಗಿಯಲಿಲ್ಲ.

2025ರ ನವೆಂಬರ್‌ನಲ್ಲಿ ಪಾಲಕ್ಕಾಡಿನ ಕಾಡಿನಲ್ಲಿ ರೇಡಿಯೊ ಕಾಲರ್ ಅಳವಡಿಸಿದ್ದ ಆನೆಯನ್ನು ಅರಸುತ್ತಾ ನಿಂತಿದ್ದಾಗ ಈ ಎಲ್ಲ ನೆನಪುಗಳು ಮತ್ತೆ ಮನಸ್ಸಿನಲ್ಲಿ ಮೂಡಿದವು.

ಇದಕ್ಕೂ ಮೂರೂವರೆ ತಿಂಗಳ ಹಿಂದೆ, ಆಗಸ್ಟ್‌ನಲ್ಲಿ ಕೇರಳ ಅರಣ್ಯ ಇಲಾಖೆ ‘ಚುರುಳಿ ಕೊಂಬನ್’ ಎಂಬ ಗಂಡು ಆನೆಗೆ ಪ್ರಜ್ಞೆ ತಪ್ಪಿಸಿ ರೇಡಿಯೊ ಕಾಲರ್ ಅಳವಡಿಸಿತ್ತು. ಆ ಆನೆಯ ದಂತಗಳು ಸುರುಳಿಯಾಗಿ ಇದ್ದುದರಿಂದ, ಅದಕ್ಕೆ ಆ ಹೆಸರು! ಆ ಆನೆ ತನ್ನ ಒಂದು ಕಣ್ಣನ್ನು ಮತ್ತೊಂದು ಆನೆಯೊಡನೆ ನಡೆದ ಕಾದಾಟದಲ್ಲಿ ಕಳೆದುಕೊಂಡಿತ್ತು. ಇನ್ನೊಂದು ಕಣ್ಣನ್ನು ಯಾರೋ ಹೊಡೆದ ಗುಂಡೇಟಿನಿಂದ ಕಳೆದುಕೊಂಡಿತ್ತು. ಸಂಪೂರ್ಣ ಕುರುಡನಾಗಿದ್ದ ಆನೆ ಮಾನವ ವಸತಿಗಳ ಸಮೀಪ ತಿರುಗಾಡುತ್ತಾ ಬೆಳೆ ಹಾನಿ ಮಾಡುತ್ತಿತ್ತು. ಆನೆಯ ಸುರಕ್ಷತೆಗೂ, ಜನರ ಸುರಕ್ಷತೆಗೂ, ಅದರ ಚಲನೆಯನ್ನು ಗಮನಿಸಲು ಇಲಾಖೆ ಉಪಗ್ರಹ ಆಧಾರಿತ ಕಾಲರ್ ಬಳಸಲು ನಿರ್ಧರಿಸಿತ್ತು.

ನನ್ನ ಸಹೋದ್ಯೋಗಿಗೆ ಅದರ ಟೆಲಿಮೆಟ್ರಿ ಮಾಹಿತಿಯನ್ನು ನೋಡುವ ಅವಕಾಶವಿತ್ತು. ಪ್ರತಿದಿನ ಬೆಳಿಗ್ಗೆ ನಾವು ಅದನ್ನು ಪರಿಶೀಲಿಸುತ್ತಿದ್ದೆವು. ಕೆಲವೊಮ್ಮೆ ಆನೆ ಹತ್ತಿರದಲ್ಲಿದ್ದರೆ ಹೋಗಿ ನೋಡುತ್ತಿದ್ದೆವು. ನವೆಂಬರ್ ಮಧ್ಯಭಾಗದಲ್ಲಿ ಆನೆ ಪೂರ್ವದತ್ತ, ತಮಿಳುನಾಡು ಗಡಿಯ ಕಡೆಗೆ ಚಲಿಸುತ್ತಿತ್ತು. ಒಂದು ದಿನ ನಾವು ಅದನ್ನು ಹಿಂಬಾಲಿಸಲು ನಿರ್ಧರಿಸಿದೆವು.

ಆಧುನಿಕ ಟೆಲಿಮೆಟ್ರಿ ಅದ್ಭುತ. ಮೊಬೈಲ್‌ನಲ್ಲಿ ನೇರ ಉಪಗ್ರಹ ಸಂಕೇತಗಳು, ನಿಖರ ಸ್ಥಳಾಂಶಗಳು, ಆನ್‌ಲೈನ್ ನಕ್ಷೆಗಳು. ನೋಡಿದರೆ ಎಲ್ಲವೂ ಸುಲಭವೆನಿಸುತ್ತದೆ. ಆದರೆ ಕಾಡು ಯಾವಾಗಲೂ ತನ್ನದೇ ನಿಯಮಗಳನ್ನು ಹೊಂದಿರುತ್ತದೆ. ಮೊಬೈಲ್ ಜಾಲ ಮರೆಯಾಗುತ್ತದೆ. ದಟ್ಟ ಕಾಡು ದಿಕ್ಕುಗಳನ್ನು ಮರೆಮಾಚುತ್ತದೆ. ಪ್ರಾಣಿ ನಿರಂತರವಾಗಿ ಚಲಿಸುತ್ತಿರುತ್ತದೆ. ಅಲ್ಲದೆ ಅಲ್ಲಿನ ಭೂಪ್ರದೇಶವೂ ಏರು-ತಗ್ಗುಗಳಿಂದ ಕೂಡಿದ್ದು ಸುಲಭವಾಗಿ ಹೋಗಲು ಸಾಧ್ಯವಿರಲಿಲ್ಲ.

ಸಂಜೆ ಸುಮಾರು ಐದೂವರೆ ಗಂಟೆಗೆ ಮೋಡಗಳು ಕವಿದವು. ಆಕಾಶ ಕತ್ತಲಾಯಿತು. ತುಂತುರು ಮಳೆ ಆರಂಭವಾಯಿತು. ಮೊಬೈಲ್ ಜಾಲ ಸಂಪೂರ್ಣ ಮರೆಯಾಯಿತು.

ಮೊಬೈಲ್‌ನಲ್ಲಿ ಸಿಗ್ನಲ್ ಮರೆಯಾಗುವ ಮುಂಚೆ, ಕಾಲರ್‌ನಿಂದ ದೊರೆತ ಕೊನೆಯ ಮಾಹಿತಿಯಂತೆ ನಾವು ನಿಂತ ಜಾಗದಿಂದ ಆನೆ ನೂರು ಮೀಟರ್ ದೂರದಲ್ಲಿತ್ತು. ಆದರೆ ಸುರಿಯುತ್ತಿದ್ದ ಮಳೆ ಕಾಡಿನ ಎಲ್ಲ ಶಬ್ದಗಳನ್ನು ನುಂಗಿಕೊಂಡಿತ್ತು. ದಟ್ಟ ಮೋಡಗಳ ಕತ್ತಲೆಯೊಳಗೆ ದಾರಿ ಕರಗಿಹೋಗಿತ್ತು.

ನಾವು ಕೆಲ ಕ್ಷಣ ಅಲ್ಲೇ ನಿಂತು ಆಲಿಸುತ್ತಿದ್ದೆವು. ಸಂಪೂರ್ಣ ಕುರುಡಾದ ಆನೆ ಕಾಡಿನಲ್ಲಿ ಎಲ್ಲೋ ಹತ್ತಿರದಲ್ಲೇ ನಿಧಾನವಾಗಿ ಚಲಿಸುತ್ತಿತ್ತು. ಅಲ್ಲಿ ಒಂದೇ ಆನೆ ಇದೆಯೋ ಅಥವಾ ಇನ್ನೊಂದು ಆನೆಯೋ, ಅನೆಗಳ ಹಿಂಡೋ ಇದೆಯೋ ಇಲ್ಲವೋ ಗೊತ್ತಿರಲಿಲ್ಲ.

ಕೊನೆಗೆ ಒಳಗೆ ಹೋಗದೆ ಹಿಂದಿರುಗಲು ನಿರ್ಧರಿಸಿದೆವು.

ಮಳೆಯ ಹನಿಗಳಲ್ಲಿ ನೆನೆದು, ಕೇವಲ ಮೀಟರ್‌ಗಳ ದೂರದಲ್ಲಿದ್ದರೂ ಕಾಣಿಸದ ಆ ಮಹಾಕಾಯ ಪ್ರಾಣಿಯನ್ನು ಮರೆಮಾಚಿದ್ದ ಕಾಡಿನತ್ತ ನೋಡುತ್ತಾ ನಿಂತಿದ್ದಾಗ, ದಶಕಗಳ ಹಿಂದೆ ನಾಗರಹೊಳೆ ಕಾಡಿನಲ್ಲಿ ಆಂಟೆನಾ ಹಿಡಿದು ಒಬ್ಬರೇ ನಡೆಯುತ್ತಿದ್ದ ಕಾರಂತ್ ಸರ್ ನೆನಪಾದರು.

ಅವರು ಹಿಂಬಾಲಿಸುತ್ತಿದ್ದದ್ದು ಕುರುಡಾದ ಆನೆ ಅಲ್ಲ, ಒಂದು ಆರೋಗ್ಯವಂತ ಕಾಡು ಹುಲಿ! ಉಪಗ್ರಹ ಕಾಲರ್‌ಗಳಿಲ್ಲ. ಮೊಬೈಲ್ ಜಾಲವಿಲ್ಲ. ಆನ್‌ಲೈನ್ ನಕ್ಷೆಗಳಿಲ್ಲ. ಕೈಯಲ್ಲಿದ್ದ ರಿಸೀವರ್‌ನಿಂದ ಕೇಳಿಬರುವ ಕ್ಷೀಣವಾದ ‘ಬೀಪ್’ ಶಬ್ದ, ದಟ್ಟ ಕಾಡು, ಮತ್ತು ಹುಲಿಯ ಪ್ರಪಂಚ ಮಾತ್ರ.

ಅದರ ಹೋಲಿಕೆಯಲ್ಲಿ ನನ್ನ ಅನುಭವ ಚಿಕ್ಕದು. ಬಹುತೇಕ ಸಾಂಕೇತಿಕ ಮಾತ್ರ. ಆದರೂ ಆ ಸಂಜೆ, ಮಳೆಯಲ್ಲಿ ಸಿಗ್ನಲ್ ಇಲ್ಲದ ಮೊಬೈಲ್ ಕೈಯಲ್ಲಿ ಹಿಡಿದು ನಿಂತಿದ್ದಾಗ, ವರ್ಷಗಳ ಕಾಲ ನಾನು ಕಲ್ಪಿಸಿಕೊಂಡಿದ್ದ ಒಂದು ಅನುಭವವನ್ನು ನಾನು ಸ್ಪರ್ಶಿಸಿದ್ದೇನೆ ಎಂಬ ಭಾವನೆ ಮೂಡಿತು.

ಅದೃಷ್ಟದಿಂದಲ್ಲ, ವಿಜ್ಞಾನದಿಂದ!

ಒಂದು ಕಾಡುಪ್ರಾಣಿಯನ್ನು ಅದರದೇ ಪ್ರಪಂಚದಲ್ಲಿ ಹಿಂಬಾಲಿಸುವ ರೋಮಾಂಚನ. ಬಹುಶಃ ಅದು ತಡವಾಗಿ ನೆರವೇರಿದ ಕನಸು. ಆದರೂ, ಒಂದು ಕ್ಷಣವಾದರೂ ಬದುಕಿ ನೋಡಿದ ಕನಸು.

ನಿಧಾನವಾಗಿ ಹೆಜ್ಜೆಯಿಟ್ಟು ಸಾಗುತ್ತಿರುವ ಪಾಲಕ್ಕಾಡಿನ ಧೃತರಾಷ್ಟ್ರ, 'ಚುರುಳಿ ಕೊಂಬನ್'



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...