![]() |
| ಪಶ್ಚಿಮಘಟ್ಟಗಳಿಗೆ ಮಾತ್ರ ಸೀಮಿತವಾದ ಶೋಲಾ ಹುಲ್ಲುಗಾವಲು |
ಕೆಲವೊಂದು ಪರಿಸರ ವ್ಯವಸ್ಥೆಗಳು ಗಮನವಿಟ್ಟು ನೋಡದೇ ಹೋದರೆ ನಮಗೆ ಅರಿವಾಗುವುದೇ ಇಲ್ಲ. ಒಂದು ದಿನ ಪಾಲಕ್ಕಾಡಿನ ಕಾಡುಗಳಲ್ಲಿ ನಡೆಯುತ್ತಿದ್ದಾಗ ಈ ಪರಿಸರ ವ್ಯವಸ್ಥೆಗಳು ಎಲ್ಲವನ್ನೂ ಒಳಗೊಳ್ಳುವ ಮಾಯಾಜಾಲ ಎಂದು ಅರಿವಾಯಿತು. ಹಾಗೆ ನಾನು ಗಮನಿಸಿದ ಎರಡು ಜಾಲಗಳಲ್ಲಿ ಒಂದು ಜಾಲ ಬಯಲಿನಲ್ಲಿದ್ದರೆ ಮತ್ತೊಂದು ಇನ್ನೊಂದು ದಟ್ಟ ಕಾಡಿನೊಳಗಿತ್ತು.
ಮೊದಲನೆಯ ಜಾಲ ಶೋಲಾ-ಹುಲ್ಲುಗಾವಲು ಪರಿಸರ ವ್ಯವಸ್ಥೆ! ಇದು ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾದ, ಎತ್ತರದ ಬೆಟ್ಟಗಳ ಮೇಲೆ ಹರಡಿಕೊಂಡಿರುವ ಹುಲ್ಲುಗಾವಲುಗಳು ಮತ್ತು ಅವುಗಳ ನಡುವೆ ಚದುರಿಕೊಂಡಿರುವ ಶೋಲಾ ಕಾಡುಗಳು!
ದೂರದಿಂದ ನೋಡಿದರೆ ಅವು ಬೆಟ್ಟಗಳ ಮೇಲಿನ ಹಸಿರು ಹೊದಿಕೆಯಂತೆ ಕಾಣುತ್ತವೆ. ಆದರೆ ಅವು ಕೇವಲ ಸುಂದರ ಭೂದೃಶ್ಯವಷ್ಟೇ ಅಲ್ಲ. ದಕ್ಷಿಣ ಭಾರತದ ಅನೇಕ ನದಿಗಳು ಹುಟ್ಟುವ ಸ್ಥಳ ಇದೇ. ಮಳೆ ಸುರಿದಾಗ ಈ ಹುಲ್ಲುಗಾವಲುಗಳು ನೀರನ್ನು ಹೀರಿಕೊಳ್ಳುತ್ತವೆ. ನಂತರ ಅದನ್ನು ನಿಧಾನವಾಗಿ ಮಣ್ಣಿನ ಮೂಲಕ ಹರಿಯಬಿಡುತ್ತವೆ. ಹೀಗೆ ವರ್ಷವಿಡೀ ಹೊಳೆಗಳು ಮತ್ತು ನದಿಗಳಿಗೆ ನೀರು ಒದಗಿಸುತ್ತವೆ. ಬೆಟ್ಟದ ಮೇಲಿನ ಈ ಹುಲ್ಲುಗಾವಲುಗಳು ಮತ್ತು ಶೋಲಾ ಕಾಡುಗಳು ಇಲ್ಲದಿದ್ದರೆ, ಕೆಳಗಿರುವ ಲಕ್ಷಾಂತರ ಜನರ ಬದುಕು ಬೇರೆ ರೀತಿಯದ್ದಾಗಿರುತ್ತಿತ್ತು.
ಈ ಪರಿಸರ ವ್ಯವಸ್ಥೆಯಲ್ಲಿ ಅನೇಕ ವಿಶಿಷ್ಟ ಜೀವಿಗಳು ವಾಸಿಸುತ್ತವೆ. ಪ್ರಾಣಿ, ಪಕ್ಷಿ, ಕೀಟ, ಉಭಯವಾಸಿ, ಉರಗ, ಅತಿ ಸೂಕ್ಷ ಪಾಚಿಯಂತಹ ಸಸ್ಯಗಳಿಂದ ಹಿಡಿದು ಅನೇಕ ವಿಧದ ಹುಲ್ಲು, ಮರ, ಗಿಡಗಳು. ಇನ್ನೂ ಎಷ್ಟೋ ಜೀವಿಗಳು. ಒಟ್ಟಾಗಿ ನೋಡಿದರೆ ಇದು ಒಂದು ಜಾಲದಂತೆಯೇ. ಒಂದು ಜೀವ ಇನ್ನೊಂದು ಜೀವವನ್ನವಲಂಬಿಸಿ, ಒಂದರ ಆವಾಸ ಇನ್ನೊಂದನ್ನು ಅವಲಂಬಿಸಿ, ಹೀಗೆ ಎಲ್ಲವೂ ಪರಸ್ಪರ ಜೋಡಿಸಿಕೊಂಡಿರುವ ಒಂದು ಜಾಲ.
![]() |
| ಮರದಿಂದ ಮರಕ್ಕೆ ಹಬ್ಬಿದಾ ಬಳ್ಳಿ ಜಾಲ |
ಎರಡನೆಯ ಜಾಲ ದಟ್ಟಕಾಡಿನ ಬೃಹದಾಕಾರದ ಬಳ್ಳಿಗಳ ಜಾಲ. ಕೆಲವೊಂದು ಕಾಡಿನಲ್ಲಿ ಎಲ್ಲೆಲ್ಲೂ ಬೃಹತ್ ಬಳ್ಳಿಗಳು ಕಾಣಿಸುತ್ತವೆ. ಕೆಲವು ಆನೆಯ ಸೊಂಡಿಲಿನಷ್ಟು ದಪ್ಪ! ಇನ್ನೂ ಕೆಲವು ಮರಗಳ ಮೇಲಿನಿಂದ ಹಗ್ಗಗಳಂತೆ ನೇತಾಡುತ್ತವೆ. ಕೆಲವು ಮರದಿಂದ ಮರಕ್ಕೆ ಸೇತುವೆಗಳಂತೆ ಚಾಚಿಕೊಂಡಿದ್ದರೆ, ಇನ್ನೂ ಕೆಲವು ಹಾವಿನಂತೆ ಸುತ್ತಿಕೊಂಡು ಮೇಲಕ್ಕೆ ಏರಿರುವ ಬಳ್ಳಿಗಳು. ಮೇಲಿಂದ ಯಾರಾದರೂ ಬಿದ್ದರೆ ನೆಲವನ್ನೇ ಮುಟ್ಟುವುದಿಲ್ಲವೇನೋ ಎಂದು ಅನಿಸುವಷ್ಟು ದಟ್ಟ. ಈ ಬಳ್ಳಿಗಳು ಕೇವಲ ಮರಗಳನ್ನು ಅಪ್ಪಿ ಬೆಳೆಯುವಂತಹುದ್ದಲ್ಲ. ಅವು ಇಡೀ ಕಾಡನ್ನು ಒಟ್ಟಿಗೆ ಕಟ್ಟಿ ಹಿಡಿದಿವೆ. ಮರಗಳ ತುದಿಯಿಂದ ಹಿಡಿದು ಅಡಿಯವರೆಗೂ, ಕಾಡಿನ ನೆಲದವರೆಗೂ ಎಲ್ಲವನ್ನೂ ಜೋಡಿಸುವ ಜೀವಂತ ಹಗ್ಗಗಳಂತೆ. ಎಷ್ಟೋ ಕೀಟಗಳು, ಪಕ್ಷಿಗಳು, ಸರೀಸೃಪಗಳು, ಸಸ್ತನಿಗಳು, ಈ ಬಳ್ಳಿಗಳನ್ನೇ ತಮ್ಮ ಆವಾಸವನ್ನಾಗಿಸಿಕೊಂಡಿರುತ್ತವೆ, ಆಹಾರ ಹುಡುಕುತ್ತವೆ, ಬದುಕುತ್ತವೆ.
ಒಂದು ಬೆಟ್ಟದ ಮೇಲೆ. ಇನ್ನೊಂದು ಕಾಡಿನೊಳಗೆ. ಒಂದು ನೀರನ್ನು ಹಿಡಿದಿಟ್ಟುಕೊಂಡರೆ, ಇನ್ನೊಂದು ಕಾಡನ್ನು ಹಿಡಿದಿಟ್ಟುಕೊಳ್ಳುತ್ತದೆ. ಎರಡೂ ತಕ್ಷಣ ಗಮನಕ್ಕೆ ಬಾರದೇ ಹೋಗಬಹುದು. ಆದರೆ ನಾವು ಪರೋಕ್ಷವಾಗಿ ಈ ಜಾಲಗಳ ಮೇಲೆ ಅವಲಂಬಿತರಾಗಿದ್ದೇವೆ. ಪಶ್ಚಿಮ ಘಟ್ಟಗಳ ಅನೇಕ ಕಥೆಗಳಂತೆ, ಈ ಜಾಲಗಳೂ ಕೂಡ ದೂರದಿಂದ ನೋಡಿದರೆ ಅರಿವಾಗುವುದಿಲ್ಲ. ಹತ್ತಿರ ಹೋಗಿ ನೋಡಿದಾಗ ಮಾತ್ರ ಅವುಗಳ ನಿಜವಾದ ರೂಪ ಅರ್ಥವಾಗುತ್ತದೆ.
![]() |
| ತನ್ನ ಬಾಹುಗಳಿಂದ ಮರವೊಂದನ್ನು ಗಟ್ಟಿಯಾಗಿ ಹಿಡಿದ ಬಳ್ಳಿ |



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ