![]() |
| ದೂರದ ಬೆಟ್ಟದ ಮೇಲೆ ನಿಂತಿದ್ದ ಆನೆಗಳು ಚುಕ್ಕಿಗಳಾಗಿ ಕಾಣುತ್ತಿದ್ದವು! (ಬೇರೊಂದು ಸ್ಥಳದಲ್ಲಿ ಸೆರೆಹಿಡಿದ ಈ ಚಿತ್ರದಲ್ಲಿ ದೂರದ ಗುಡ್ಡದ ಮೇಲೆ ನಿಂತಿರುವ ಆನೆಯನ್ನು ಗುರುತಿಸಬಲ್ಲಿರಾ?) - ಸಾಂಧರ್ಭಿಕ ಚಿತ್ರ |
ಪಾಲಕ್ಕಾಡಿನಲ್ಲಿ ಕೆಲಸ ಮಾಡುವಾಗ ಒಂದು ದಿನ ನನ್ನ ಸಹೋದ್ಯೋಗಿ ರಜೆ ಮೇಲೆ ಇದ್ದ ಕಾರಣ ನಾನು ಫೀಲ್ಡ್ ಸ್ಟೇಷನ್‌ನಲ್ಲೇ ಉಳಿಯಲು ನಿರ್ಧರಿಸಿದ್ದೆ. ಅದು ವಿಶ್ರಾಂತಿಯ ದಿನವಾಗಬೇಕಿತ್ತು. ನನ್ನ ವೈಯಕ್ತಿಕ ಕೆಲಸಗಳನ್ನು ಮುಗಿಸಿದ ಮೇಲೆಯೂ ಕನಿಷ್ಠ ಅರ್ಧ ದಿನವಾದರೂ ಬೇರಾವುದೇ ಕೆಲಸದ ಒತ್ತಡವಿಲ್ಲದೆ ಕಳೆಯಬಹುದು ಎಂದುಕೊಂಡಿದ್ದೆ.
ಆದರೆ ಮಧ್ಯಾಹ್ನ ಊಟ ಮುಗಿದ ಸ್ವಲ್ಪ ಹೊತ್ತಿನಲ್ಲೇ ನನ್ನ ಸಹೋದ್ಯೋಗಿಯ ಕರೆ ಬಂತು. ಹತ್ತಿರದ ಜಾಗದಲ್ಲಿರುವ ಕ್ಯಾಮೆರಾ ಟ್ರ್ಯಾಪ್ ಗಳನ್ನು ಪರಿಶೀಲಿಸಿ ಬರಬಹುದು ಎಂದ.
ನಿಜ ಹೇಳಬೇಕೆಂದರೆ ಆ ಕರೆ ನನಗೆ ಸ್ವಲ್ಪ ಕಿರಿಕಿರಿ ಉಂಟುಮಾಡಿತು. ಫೀಲ್ಡ್ ಕೆಲಸಕ್ಕೂ ಒಂದು ಲಯ ಇರಬೇಕು ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಯಾವಾಗ ಬೇಕಾದರೂ, ಯಾರಿಗೆ ಯಾವಾಗ ಅನುಕೂಲವೋ ಆಗ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ. ಹೀಗಲ್ಲದಿದ್ದರೆ ಬೇರೆ ಕೆಲಸಗಳಿಗೆ ಸಮಯವೇ ಸಿಗುವುದಿಲ್ಲ.
ಆದರೆ ಆ ದಿನ Rapid Response ತಂಡದ ಒಬ್ಬ ಉಪ ವಲಯ ಅರಣ್ಯಾಧಿಕಾರಿಯೂ ಬರುತ್ತಾರೆ ಎಂದಾಗ ನನಗೆ ಬೇರೆ ದಾರಿಯಿರಲಿಲ್ಲ. ಹೋಗಲು ಒಪ್ಪಿಕೊಂಡೆ. ಆ ಅಧಿಕಾರಿಯನ್ನು ನಾನು ಆಗಲೇ ಹಲವಾರು ಬಾರಿ ಭೇಟಿ ಮಾಡಿದ್ದೆ. ಅವರು ಮತ್ತು ಅವರ ತಂಡ ಸಂಪೂರ್ಣ ಆನೆಪ್ರೇಮಿಗಳು. ಅವರ ದೃಷ್ಟಿಯಲ್ಲಿ ಕಾಡು ಎಂದರೆ ಆನೆ. ಉಳಿದೆಲ್ಲಾ ಪ್ರಾಣಿಗಳಿಗೆ ಯಾವುದೇ ಪ್ರಾಮುಖ್ಯತೆಯಿಲ್ಲ.
ಒಮ್ಮೆ ಅವರ ಕಚೇರಿಗೆ ಹೋಗಿದ್ದೆ. ಅಲ್ಲಿ ಜನವಸತಿಗೆ ನುಗ್ಗಿದ್ದ ಹಾವು, ಕಬ್ಬೆಕ್ಕು ಮತ್ತಿತರ ಪ್ರಾಣಿಗಳನ್ನು ಸೆರೆಹಿಡಿದು ಇಟ್ಟಿದ್ದರು. ಅವನ್ನು ಕಾಡಿಗೆ ಒಯ್ದು ಬಿಡುಗಡೆ ಮಾಡುವವರೆಗೂ ಅಲ್ಲಿ ಇಡುತ್ತಿದ್ದರು. ಅಲ್ಲಿ ಸುಮಾರು ಪಂಜರಗಳಲ್ಲಿ ಹಾವುಗಳಿದ್ದವು. ಒಂದೇ ಪಂಜರದಲ್ಲಿ ಹೆಬ್ಬಾವು, ಕೇರೆಹಾವು, ನಾಗರಹಾವು, ಕೊಳಕುಮಂಡಲ ಇತ್ಯಾದಿಗಳನ್ನು ಹಾಕಿದ್ದರು. ಆ ಹೆಬ್ಬಾವುಗಳ ನಡುವೆ ಸಿಲುಕಿ ಕೆಲವು ಹಾವುಗಳು ಉಸಿರುಗಟ್ಟಿ ಸತ್ತಿದ್ದವು. ಮತ್ತೊಂದು ಸಲ ಒಂದು ಕಬ್ಬೆಕ್ಕನ್ನು ಪಂಜರದಲ್ಲಿ ಕೂಡಿಟ್ಟು, ಪಂಜರವನ್ನು ಎಲ್ಲರೂ ಓಡಾಡುವ ಜಾಗದಲ್ಲಿಟ್ಟಿದ್ದರು. ಕಬ್ಬೆಕ್ಕು ನಿಶಾಚರ ಜೀವಿ. ಬೆಳಕಿನಲ್ಲಿ, ಜನಗಳು ಓಡಾಡುವ ಜಾಗದಲ್ಲಿ ಅದನ್ನಿಟ್ಟರೆ ಅದು ಎಷ್ಟು ಒತ್ತಡ ಅನುಭವಿಸಿರಬಹುದು? ಒಟ್ಟಿನಲ್ಲಿ ಒತ್ತಡದಿಂದಲೋ, ಉಸಿರುಗಟ್ಟಿಯೋ ಅಲ್ಲಿನ ಕೆಲವು ಪ್ರಾಣಿಗಳು ಮತ್ತೆ ಕಾಡಿನ ಮುಖ ನೋಡುತ್ತಿರಲಿಲ್ಲ.
ಅಂದು ತಲುಪಬೇಕಾಗಿದ್ದ ಜಾಗ ದೂರವೇನೂ ಇರಲಿಲ್ಲ. ಅರ್ಧ ಗಂಟೆಯಲ್ಲೇ ಅಲ್ಲಿಗೆ ತಲುಪಿದೆವು. ಅದು ಕಾಡಿನ ಗಡಿ ಭಾಗದಲ್ಲಿದ್ದ ಜಾಗ. ಆನೆಗಳು ಅನೇಕ ಬಾರಿ ಅಲ್ಲಿಂದಲೇ ಕಾಡು ದಾಟಿ ಕೃಷಿ ಭೂಮಿಗೆ ಬರುತ್ತಿದ್ದವು. ಅಲ್ಲಿ ವಾಹನದಿಂದ ಇಳಿಯುತ್ತಿದ್ದಂತೆ ಮುಂದೆ ಇದ್ದ ಬೆಟ್ಟದ ಮೇಲಿನ ಕಾಡಿನಲ್ಲಿ ಆನೆಗಳು ಕಾಣಿಸಿದವು! ತುಂಬಾ ದೂರದಲ್ಲಿ, ಮರಗಳ ನಡುವೆ ಸಣ್ಣ ಸಣ್ಣ ಕಪ್ಪು ಚುಕ್ಕೆಗಳಂತೆ ಗೋಚರಿಸುತ್ತಿದ್ದ ಆ ಆನೆ ಗುಂಪಿನಲ್ಲಿ ಸುಮಾರು ಎಂಟು ಆನೆಗಳಿದ್ದವು.
ಆ ದೃಶ್ಯ ಬಹಳ ಸುಂದರವಾಗಿತ್ತು!
ಕಳೆದ ವರ್ಷ ವಾಲ್ಪರೈನಲ್ಲಿ ದೂರದ ಬೆಟ್ಟದ ಮೇಲೊಂದು ಗಂಡಾನೆಯೊಂದು ಒಂಟಿಯಾಗಿ ಮೇಯುತ್ತಿದ್ದುದು ಕಂಡದ್ದು ನೆನಪಾಯಿತು. ಆದರೆ ಈ ಬಾರಿ ಇಡೀ ಹಿಂಡು ಕಾಣಿಸುತ್ತಿತ್ತು. ಇಡೀ ದೃಶ್ಯವೇ ಜೀವಂತವಾದಂತೆ ಅನಿಸಿತು!
ನಾನು ಆ ದೃಶ್ಯವನ್ನು ಆನಂದಿಸುತ್ತಿರುವಷ್ಟರಲ್ಲಿ ಜೊತೆಯಲ್ಲಿದ್ದ ಅಧಿಕಾರಿ ತಮ್ಮ ಮೊಬೈಲ್ ತೆಗೆದುಕೊಂಡರು. ಯಾರಿಗೋ ಕರೆ ಮಾಡಿ ಏನನ್ನೋ ಹೇಳಿದರು. ನಂತರ ನನ್ನ ಕಡೆ ತಿರುಗಿ ಹೆಮ್ಮೆಯಿಂದ,
“ನಮ್ಮ ರಿಸರ್ಚ್ ಟೀಮ್ ಬರ್ತಿದೆ!” ಎಂದರು.
ನಾನು ಅವರತ್ತ ನೋಡಿದೆ.
“ರಿಸರ್ಚ್ ಟೀಮ್?”
“ಹೌದು!” ಎಂದರು.
“ನಾನೇ ಕ್ಯಾಪ್ಟನ್!”
ಅವರ ಮುಖದಲ್ಲಿದ್ದ ಹೆಮ್ಮೆ ನೋಡಿದರೆ ಯಾವುದೋ ದೊಡ್ಡ ವೈಜ್ಞಾನಿಕ ಕಾರ್ಯಾಚರಣೆ ನಡೆಯಲಿದೆಯೆಂದು ಅನಿಸಿತು.
ಸ್ವಲ್ಪ ಹೊತ್ತಿನ ನಂತರ ಮತ್ತೊಂದು ವಾಹನ ಬಂತು. ಅದೇ ಆ ರಿಸರ್ಚ್ ಟೀಮ್. ಅವರು ವಾಹನದಿಂದ ಇಳಿದರು. ಕೆಲವು ಉಪಕರಣಗಳನ್ನೂ ತಂದಿದ್ದರು. ಆದರೆ ಅವುಗಳನ್ನು ನೋಡಿದಾಗ ನನಗೆ ಯಾವುದೇ ವೈಜ್ಞಾನಿಕ ಉಪಕರಣಗಳಂತೆ ಕಾಣಲಿಲ್ಲ. ಆದರೂ ಕುತೂಹಲದಿಂದ ನೋಡುತ್ತಿದ್ದೆ. ಒಬ್ಬರು ಉಪಕರಣದ ಮಧ್ಯದಲ್ಲಿ ಬಿಳಿಯದ್ದೇನೋ ತುಂಬಿ ಮೇಲೆ ಹಿಡಿದರು. ಮತ್ತೊಬ್ಬರು ಲೈಟರ್ ತೆಗೆದು, ಬೆಂಕಿ ಹಚ್ಚಿದರು.
ಮುಂದಿನ ಕ್ಷಣ, ರಾಕೆಟ್ ನಂತದ್ದೇನೋ ಸ್ವಲ್ಪ ಮೇಲೆ ಹೋಗಿ ಢಮಾರ್ ಎಂದು ಸಿಡಿಯಿತು!
ಪಟಾಕಿ!!
ಬೆಟ್ಟಗಳ ನಡುವೆ ಸದ್ದು ಪ್ರತಿಧ್ವನಿಸಿತು. ಅದರ ನಂತರ ಮತ್ತೊಂದು, ಮತ್ತೊಂದು.
ವಿಷಯವೇನೆಂದರೆ, ಕಳೆದ ಒಂದು ತಿಂಗಳಿನಿಂದ ಈ ಆನೆಗಳು ಜನವಸತಿ ಪ್ರದೇಶಗಳ ಬಳಿ ಬೆಳೆ ಹಾನಿಮಾಡುತ್ತಿದ್ದವಂತೆ. ಅವುಗಳನ್ನು ಓಡಿಸುವ ಮಹತ್ವದ ಕಾರ್ಯಾಚರಣೆ ನಡೆಯುತ್ತಿತ್ತು. ಕಾರ್ಯಾಚರಣೆಯ ವಿಧಾನ ಸರಳ. ಈಗಾಗಲೇ ಕಾಡಿನಲ್ಲಿರುವ ಆನೆಗಳು ಅಲ್ಲೆಲ್ಲೋ ಬೆಟ್ಟದ ಮೇಲೆ! ಇವರು ಕೆಳಗೆ ಸಮತಟ್ಟಾದ ಜಾಗದಲ್ಲಿ! ಈ ಮಹತ್ವದ ಕೆಲಸದಲ್ಲಿ ನಿರತರಾಗಿದ್ದವರಿಗೆ ಯಾರಿಗೂ ಆನೆಗಳು ಇದ್ದ ದೂರದ ಬಗ್ಗೆ ಅಂದಾಜಿರಲಿಲ್ಲವೆನಿಸುತ್ತದೆ.
ಮತ್ತಷ್ಟು ಪಟಾಕಿಗಳು!
ಬೆಟ್ಟದ ಮೇಲೆ ನಿಂತಿದ್ದ ಆನೆಗಳಿಗೆ ಕೆಳಗೆ ನಡೆಯುತ್ತಿದ್ದ 'ದೀಪಾವಳಿ'ಯ ಪರಿವೇ ಇರಲಿಲ್ಲ. ಯಾವೊಂದು ಆನೆಯೂ ಸ್ವಲ್ಪವೂ ವಿಚಲಿತವಾಗಲಿಲ್ಲ!
ಅಷ್ಟರಲ್ಲಿ ನನ್ನ ಸಹೋದ್ಯೋಗಿ ತನ್ನದೇ ಲೋಕದಲ್ಲಿ ಬ್ಯುಸಿಯಾಗಿದ್ದ. ಅಷ್ಟು ದೂರದಲ್ಲಿದ್ದ ಆನೆಗಳ ಫೋಟೋಗಳನ್ನು ನಿರಂತರವಾಗಿ ತೆಗೆಯುತ್ತಿದ್ದ. ಅವನಿಗೆ ಜೀವನದಲ್ಲಿ ಫೋಟೋಗ್ರಫಿ ಒಂದೇ ಧ್ಯೇಯ ಎನ್ನುವಂತೆ, ಯಾವ ಪಟಾಕಿಗಳಿಗೂ ಕಿವಿಗೊಡದೆ ಸತತವಾಗಿ ಫೋಟೋ ತೆಗೆಯುತ್ತಿದ್ದ.
ನಾವು ಫೀಲ್ಡ್ ಕೆಲಸ ಆರಂಭಿಸಿದ ದಿನಗಳಲ್ಲಿ ಕ್ಯಾಮೆರಾಗಳನ್ನು, ವಿಶೇಷವಾಗಿ DSLR ಕ್ಯಾಮರಾಗಳನ್ನು, ಕಾಡಿನೊಳಗೆ ತೆಗೆದುಕೊಂಡು ಹೋಗಬಾರದು ಎಂದು ಹೇಳುತ್ತಿದ್ದರು. ಅದರಿಂದ ನಮ್ಮ ಗಮನ ಫೋಟೋಗ್ರಫಿಯ ಕಡೆಗೆ ಹೋಗಿ, ನಮ್ಮ ಕೆಲಸದ ಕಡೆ ಗಮನ ಕಡಿಮೆಯಾಗಬಹುದೆಂದು. ನಾನು ಈಗಲೂ ಆ ನಿಯಮ ಪಾಲಿಸುತ್ತೇನೆ. ನನ್ನ ಹತ್ತಿರ DSLR ಕ್ಯಾಮರಾ ಇಲ್ಲವೆನ್ನುವುದು ಬೇರೆ ವಿಷಯ.
ಈ ಎಲ್ಲ ನಾಟಕ ನೋಡುತ್ತಿದ್ದಾಗ ನನಗೆ ಆಂಧ್ರ-ತೆಲಂಗಾಣದ ಹಳೆಯ ಫೀಲ್ಡ್ ಅಸಿಸ್ಟೆಂಟ್‌ಗಳು ನೆನಪಾದರು. ನಾವು ಅವರನ್ನು "ಫಾರೆಸ್ಟ್ ಗಾಂಪ್ಸ್" ಎಂದು ಕರೆಯುತ್ತಿದ್ದೆವು. ಇಲ್ಲಿರುವ "ಗಾಂಪ್ಸ್" ಪದ ಕನ್ನಡದ "ಗಾಂಪ" ಪದದ ಬದಲಾದ ರೂಪ. ಅವರ ಉತ್ಸಾಹ ಅಪರಿಮಿತ. ಆದರೆ ಯಾವುದೇ ಕೆಲಸ ಮಾಡುವಾಗ ಯೋಚಿಸುವುದು ಕಡಿಮೆ.
ಒಮ್ಮೆ ಟ್ರಾನ್ಸೆಕ್ಟ್ ಸಮೀಕ್ಷೆಯ ಪೂರ್ವಭಾವಿಯಾಗಿ ಕಾಡಿನಲ್ಲಿ ಸೀಳು ದಾರಿಯನ್ನು ಮಾಡಿಸುತ್ತಿದ್ದೆ. ಆಗ ನನ್ನ ಮುಂದಿದ್ದ ಫೀಲ್ಡ್ ಅಸಿಸ್ಟೆಂಟ್ ಒಬ್ಬನಿಗೆ ಒಂದು ಹನಿಬ್ಯಾಡ್ಜರ್ ಕಂಡಿತ್ತು. ಕನ್ನಡದಲ್ಲಿ ತರಕರಡಿಯೆಂದು ಕರೆಯಲಾಗುವ ಈ ಪ್ರಾಣಿಗಳು ಕರ್ನಾಟಕದ ಕಾವೇರಿ ವನ್ಯಜೀವಿಧಾಮ ಮತ್ತು ಪೂರ್ವಘಟ್ಟದ ಕಾಡುಗಳಲ್ಲಿ ಕಂಡುಬರುತ್ತವೆ. ತುಂಬಾ ಅಪರೂಪದ ಪ್ರಾಣಿಗಳು. ನನ್ನ ಜೀವನದಲ್ಲಿ ಇದುವರೆಗೂ ನೋಡಿರದ ಪ್ರಾಣಿಗಳಲ್ಲಿ ಒಂದು.
ಅಲ್ಲಿ ಮರಗಳು ಹೆಚ್ಚಾಗಿದ್ದುದರಿಂದ, ನಾನು ಅವನಿದ್ದ ಜಾಗಕ್ಕೆ ಹೋದರೆ ಮಾತ್ರ ಆ ಪ್ರಾಣಿಯನ್ನು ನೋಡಬಹುದಿತ್ತು. ಆದರೆ ನಾನು ಅಲ್ಲಿಗೆ ಹೋಗುವ ಮುನ್ನವೇ ಆ ಗಾಂಪ ಕೂಗಿ, ಹೆದರಿಸಿ ಆ ಪ್ರಾಣಿಯನ್ನು ಓಡಿಸಿಬಿಟ್ಟ. ತರಕರಡಿಗಳು ದೊಡ್ಡ ಪ್ರಾಣಿಯೇನಲ್ಲ ಮತ್ತು ಆ ಪ್ರಾಣಿಯೇನೂ ಅವನಿಗೆ ಹತ್ತಿರವಾಗಿಯೂ ಇರಲಿಲ್ಲ. ಪ್ರಾಣಿ ಓಡಿಹೋಯಿತು. ನನ್ನ ಜೀವನದ ಅತ್ಯುತ್ತಮ ನೋಟಗಳಲ್ಲಿ ಒಂದಾಗಬಹುದಾಗಿದ್ದ ಅವಕಾಶ ಅಲ್ಲಿಗೇ ಮುಗಿಯಿತು. ಆದರೆ ಅವನು ಮಾತ್ರ ಆ ಪ್ರಾಣಿಯನ್ನು ಓಡಿಸಿ, ನಮ್ಮನ್ನೆಲ್ಲಾ ಕಾಪಾಡಿದ ಮಹತ್ಸಾಧನೆ ಮಾಡಿದವನಂತೆ ಹೆಮ್ಮೆಯಿಂದ ನಿಂತಿದ್ದ.
ಅಂದು ಪಾಲಕ್ಕಾಡಿನಲ್ಲಿ ಆ "ರಿಸರ್ಚ್ ಟೀಮ್" ಗಾಳಿಯ ಕಡೆಗೆ ಪಟಾಕಿ ಸಿಡಿಸುತ್ತಾ ನಿಂತಿದ್ದಾಗ ನನಗೆ ಮತ್ತೆ ಅದೇ ಗಾಂಪ್ಸ್ ನೆನಪಾದರು. ಒಂದೇ ವ್ಯತ್ಯಾಸ. ಈ ಬಾರಿ ಅವರು ಫೀಲ್ಡ್ ಅಸಿಸ್ಟೆಂಟ್‌ಗಳಾಗಿರಲಿಲ್ಲ. ಅವರಿಗೆ ಸಮವಸ್ತ್ರಗಳಿದ್ದವು. ಅಧಿಕೃತ ಬ್ಯಾಡ್ಜ್‌ಗಳಿದ್ದವು. ಮತ್ತು ಹೊಸ ಹೆಸರೂ ಇತ್ತು.
"ರಿಸರ್ಚ್ ಟೀಮ್!"
![]() |
| ಕೆಂಪು ಗುರುತು ಮಾಡಿರುವಲ್ಲಿ ಆನೆಯೊಂದು ನಿಂತಿದೆ. ಮೊಬೈಲ್‌ನಲ್ಲಿ ತೆಗೆದ ಈ ಪೋಟೋ ಸ್ಪಷ್ಟವಾಗಿಲ್ಲ. |


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ