![]() |
| ಆನೆಯ ಹೆಜ್ಜೆ ಗುರುತಿನ ಮೇಲೆಯೇ ಕಂಡ ಹುಲಿಯ ಹೆಜ್ಜೆ ಗುರುತು! |
ಒಂದು ದಿನ ಪಾಲಕ್ಕಾಡಿನ ಕಾಡುಗಳಲ್ಲಿರುವ ಒಂದು ಹಳೆಯ ಕೂಪ್ ರಸ್ತೆಯ ಮೂಲಕ ನಡೆದು, ಎರಡು ಸ್ಥಳಗಳಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸುವುದು ನಮ್ಮ ಕೆಲಸವಾಗಿತ್ತು. ದಾರಿಯುದ್ದಕ್ಕೂ ಕಾಡು ತನ್ನ ಅನೇಕ ಕಥೆಗಳನ್ನು ನಮ್ಮ ಮುಂದೆ ತೆರೆದಿಟ್ಟಿತು.
ಕಾಡಿನ ನೆಲ ಹಲವಾರು ವನ್ಯಜೀವಿಗಳ ಹೆಜ್ಜೆಗುರುತುಗಳಿಂದ ತುಂಬಿತ್ತು. ಕಡವೆ, ಕಾಡೆಮ್ಮೆ ಮತ್ತು ಕಾಡುಹಂದಿಗಳ ಹೆಜ್ಜೆ ಗುರುತು ಆಗಾಗ ಕಾಣಿಸುತ್ತಿದ್ದವು. ಆದರೆ ಎಲ್ಲಕ್ಕಿಂತ ಗಮನ ಸೆಳೆದದ್ದು ಆನೆಯ ಹೆಜ್ಜೆ ಗುರುತಿನ ಮೇಲೆಯೇ ಕಂಡ ಹುಲಿಯ ಹೆಜ್ಜೆ ಗುರುತು! ಆನೆಯ ಹೆಜ್ಜೆ ಗುರುತು ಸುಮಾರು ಒಂದು ದಿನ ಹಳೆಯದಾಗಿ ಕಾಣಿಸುತ್ತಿತ್ತು. ಅದರ ನಂತರ ಅದೇ ಹಾದಿಯನ್ನು ಹುಲಿ ಬಳಸಿದಂತಿತ್ತು. ಕಾಡಿನ ಈ ಎರಡು ಪ್ರಮುಖ ಜೀವಿಗಳ ಹಾದಿಗಳು ಒಂದಕ್ಕೊಂದು ಬೆರೆತಿರುವುದು ಅರಣ್ಯದ ಸೂಕ್ಷ್ಮ ಸಮತೋಲನವನ್ನು ನೆನಪಿಸಿತು. ಕಾಡು ಪುನರುಜ್ಜೀವನಗೊಳ್ಳಲು ಅಗತ್ಯವಾದ ಬೀಜಗಳನ್ನು ಆನೆಗಳು ಹರಡುತ್ತವೆ; ಬಲಿಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಹುಲಿಗಳು ಪರಿಸರದ ಸಮತೋಲನವನ್ನು ಕಾಪಾಡುತ್ತವೆ.
ಮಧ್ಯಾಹ್ನ ಸುಮಾರು ಮೂರುವರೆ ಗಂಟೆಯ ವೇಳೆಗೆ ಕೊನೆಯ ಕ್ಯಾಮೆರಾ ಟ್ರ್ಯಾಪ್ ಅಳವಡಿಸಿ ಹಿಂದಿರುಗಲು ಸಿದ್ಧವಾಗುತ್ತಿದ್ದಾಗ, ಏಕಾಏಕಿ ಆನೆಯ ಗಂಭೀರ ಕರೆಯೊಂದು ಕಾಡಿನ ನಿಶ್ಶಬ್ದತೆಯನ್ನು ಭೇದಿಸಿತು. ಅದು ಬಹಳ ಹತ್ತಿರದಲ್ಲೇ ಇತ್ತು. ಆ ಧ್ವನಿ ಕಾಡಿನ ಗಾಳಿಯನ್ನೇ ಕಂಪಿಸಿದಂತೆ ಭಾಸವಾಯಿತು.
ನಾವು ನಿಂತ ಜಾಗ ಒಂದು ಸಣ್ಣ ಗುಡ್ಡದ ಮೇಲಿತ್ತು. ದಟ್ಟ ಕಾಡಿನ ಕಾರಣದಿಂದ ಆನೆ ಮೇಲೆ ಇದೆಯೋ, ಸ್ವಲ್ಪ ಇಳಿಜಾರಿನಲ್ಲಿದೆಯೋ ಅಂದಾಜಾಗಲಿಲ್ಲ. ಆದರೂ ಗುಡ್ಡ ಇಳಿದು ಬೇರೊಂದು ದಾರಿಯಲ್ಲಿ ಸಾಗಲು ತೀರ್ಮಾನಿಸಿದೆವು. ಬಹುಶಃ ಆ ಮಹಾಕಾಯ ಪ್ರಾಣಿಯ ಒಂದು ನೋಟ ಸಿಗಬಹುದು ಎಂಬ ನಿರೀಕ್ಷೆ. ದಟ್ಟ ಗಿಡ ಮರಗಳ ನಡುವೆ ನಿಧಾನವಾಗಿ ಹೆಜ್ಜೆ ಇಡುತ್ತ ಸಾಗುತ್ತಿದ್ದಾಗ, ಮುಂದಿನ ಕ್ಷಣವೇ ಕಾಡು ತನ್ನ ರಹಸ್ಯವನ್ನು ತೆರೆದಿಡಬಹುದು ಎಂಬ ಕುತೂಹಲ ಮನಸ್ಸಿನಲ್ಲಿತ್ತು. ಮೇಲಿನ ದಟ್ಟ ಹಸಿರು ಹೊದಿಕೆಯ ನಡುವೆ ಸೂರ್ಯನ ಕಿರಣಗಳು ಸಣ್ಣ ಸಣ್ಣ ಪಟ್ಟಿಗಳಾಗಿ ಒಳನುಗ್ಗುತ್ತಿದ್ದವು. ಕಾಡು ಒಂದೇ ಸಮಯದಲ್ಲಿ ನಿಗೂಢವಾಗಿಯೂ ಜೀವಂತವಾಗಿಯೂ ಕಾಣಿಸುತ್ತಿತ್ತು.
ಸುಮಾರು ಒಂದು ಗಂಟೆಯ ಕಾಲ ನಾವು ಧ್ವನಿಗಳನ್ನೂ ಆಲಿಸುತ್ತಾ ನಿಂತೆವು. ಎಲ್ಲೋ ಕೊಂಬರ ಮುರಿಯುವ ಸದ್ದು, ದೂರದಲ್ಲಿ ಕೇಳಿಬರುವ ಭಾರವಾದ ಹೆಜ್ಜೆಗಳ ಮೃದುವಾದ ಶಬ್ದ, ಇವೆಲ್ಲವೂ ಆನೆ ಹತ್ತಿರದಲ್ಲೇ ಇದೆ ಎಂದು ಹೇಳುತ್ತಿದ್ದವು. ಆದರೆ ಕಾಡು ತನ್ನ ರಹಸ್ಯವನ್ನು ಸಂಪೂರ್ಣವಾಗಿ ಬಿಟ್ಟುಕೊಡಲು ಸಿದ್ಧವಾಗಿರಲಿಲ್ಲ.
ಕೊನೆಗೆ ದಟ್ಟ ಗಿಡಗಳ ನಡುವೆ ನಮಗೆ ಅದು ಗೋಚರಿಸಿತು. ನಿಧಾನವಾಗಿ ಅಲ್ಲಾಡುತ್ತಿದ್ದ ಬಾಲ! ತನ್ನ ಬೃಹತ್ ದೇಹವನ್ನು ತಂಪಾಗಿರಿಸಲು ಅಲುಗಾಡುತ್ತಿದ್ದ ಅದರ ಮೊರದಷ್ಟು ಗಾತ್ರದ ಕಿವಿಗಳು! ಒಂದು ಬಿಳಿಯ ದಂತ!
ಒಂದು ಸಣ್ಣ ಝಲಕ್ ಅಷ್ಟೇ.
ಆದರೆ ಅಷ್ಟೇ ಸಾಕಾಗಿತ್ತು!
ಕಾಡಿನಲ್ಲಿ ಮರೆಯೊಳಗೆ ನಿಂತು, ಅಷ್ಟು ಹತ್ತಿರದಿಂದ (ಸುಮಾರು 60-70 ಅಡಿಗಳು) ಅಂತಹ ಜೀವಿಯ ಉಪಸ್ಥಿತಿಯನ್ನು ಅನುಭವಿಸುವುದು ವಿನಮ್ರತೆಯನ್ನು ಕಲಿಯುವ ಕ್ಷಣ. ಅಂದು ನಮ್ಮ ಇರವು ಆನೆಯ ಗಮನಕ್ಕೆ ಬಂದಿರಲಿಲ್ಲ ಎನ್ನಿಸುತ್ತದೆ. ಆನೆ ವಿಚಲಿತವಾಗದೆ, ತನ್ನ ಪಾಡಿಗೆ ಎಲೆಗಳನ್ನು, ಕಾಂಡದ ತೊಗಟೆಗಳನ್ನು ಮೇಯುತ್ತಾ ನಿಧಾನವಾಗಿ ಸಾಗುತ್ತಿತ್ತು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅವೇ ನಮ್ಮನ್ನು ಬಹಳ ಮೊದಲೇ ಗಮನಿಸಿರುತ್ತವೆ ಎಂಬ ಅರಿವು ಸದಾ ನಮ್ಮ ಮನದಲ್ಲಿತ್ತು.
ಅಂದಿನ ಆ ಅನುಭವ ಆನೆಯನ್ನು ಪೂರ್ತಿಯಾಗಿ ನೋಡಲಿಲ್ಲ ಎನ್ನುವ ನಿರಾಸೆಗಿಂತ ಗೌರವದ ಭಾವನೆಯನ್ನು ಮನದಲ್ಲಿ ಉಳಿಸಿತು. ನಿಜ ಹೇಳಬೇಕೆಂದರೆ, ಆನೆಯ ಸಂಪೂರ್ಣ ರೂಪ ಕಾಣದಿರುವುದೇ ಆ ಅನುಭವವನ್ನು ಇನ್ನಷ್ಟು ಆಳವಾಗಿಸಿತು. ಕಾಡು ತನ್ನ ಅನಂತ ರಹಸ್ಯಗಳ ಪರದೆಯನ್ನು ಕ್ಷಣಮಾತ್ರ ಸರಿಸಿ, ಒಳಗಿನ ಜಗತ್ತಿನ ಒಂದು ಚಿಕ್ಕ ನೋಟವನ್ನು ಮಾತ್ರ ನಮಗೆ ನೀಡಿದಂತಿತ್ತು. ನಂತರ ಮತ್ತೆ ಆ ಪರದೆ ನಿಧಾನವಾಗಿ ಮುಚ್ಚಿಕೊಂಡಿತು!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ