ವಿಷಯಕ್ಕೆ ಹೋಗಿ

ಚಿರತೆ ಮಾಡಿದ ಲೈನ್ ಟ್ರಾನ್ಸೆಕ್ಟ್ ಸಮೀಕ್ಷೆ!

ಕಾಡಿನಲ್ಲಿ ಬಲಿ ಪ್ರಾಣಿಗಳ ಸಮೀಕ್ಷೆಗೆ ಹೊರಟ ಚಿರತೆ! (ಸಾಂದರ್ಭಿಕ ಚಿತ್ರ) 

2025ರ ಅಕ್ಟೋಬರ್ ತಿಂಗಳ ಒಂದು ಮುಂಜಾವು. ನಾನು ಪಾಲಕ್ಕಾಡಿನ ಫೀಲ್ಡ್ ಸ್ಟೇಷನ್‌ನಲ್ಲಿ ಆಗತಾನೆ ಕಣ್ಣು ಬಿಡುತ್ತಿದ್ದೆ. ಸಮಯ ಸುಮಾರು ಐದೂವರೆ ಗಂಟೆ. ಫೀಲ್ಡ್ ಸ್ಟೇಷನ್ ಹತ್ತಿರವೇ ಒಂದು ಚಿರತೆಯ ಗುರುಗುಟ್ಟುವ ಸದ್ದು ಕೇಳಿಸಿತು. ನಾನು ಹಾಗೇಯೇ ಹಿಂದಿನ ಘಟನೆಗಳನ್ನು ನೆನೆಯತೊಡಗಿದೆ.

ಚಿರತೆಯ ಕೂಗು ಕೇಳಿದಾಗಲೆಲ್ಲಾ ನನಗೆ 2023ರ ಒಂದು ಘಟನೆ ನೆನಪಾಗುತ್ತದೆ.

ಆ ಸಮಯದಲ್ಲಿ ನಾವು ತೆಲಂಗಾಣದ ಅಮರಾಬಾದ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಲೈನ್ ಟ್ರಾನ್ಸೆಕ್ಟ್ ಸಮೀಕ್ಷೆ ಮಾಡುತ್ತಿದ್ದೆವು. ನಮ್ಮ ಇಡೀ ತಂಡ ಕಾಡಿನ ಒಳಭಾಗದಲ್ಲಿ ತಂಗಿತ್ತು. ವಿದ್ಯುತ್ ಸಂಪರ್ಕ, ಮೊಬೈಲ್ ಸಿಗ್ನಲ್ ಯಾವುದೂ ಇರದ ಆ ಜಾಗ ಮುಖ್ಯ ರಸ್ತೆಯಿಂದ ಸುಮಾರು ಹತ್ತು ಕಿಲೋಮೀಟರ್ ಒಳಗಿತ್ತು. ಅಲ್ಲಿದ್ದ ಅರಣ್ಯ ಇಲಾಖೆಯ ಕ್ಯಾಂಪ್ ಎಲ್ಲರಿಗೂ ಸಾಕಾಗದ ಕಾರಣ ನಮ್ಮಲ್ಲಿ ಕೆಲವರು ಟೆಂಟ್‌ಗಳಲ್ಲಿ ಮಲಗುತ್ತಿದ್ದೆವು.

ಅಲ್ಲಿನ ಸ್ನಾನದ ವ್ಯವಸ್ಥೆಯೂ ಮಜವಾಗಿತ್ತು!

ಹತ್ತಿರದಲ್ಲೇ ಒಂದು ಸಣ್ಣ ಕೊಳ. ಆ ಕೊಳದ ಪಕ್ಕ ಇದ್ದ ಬೋರ್‌ವೆಲ್‌ಗೆ ಅರಣ್ಯ ಇಲಾಖೆ ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಪಂಪ್‌ಸೆಟ್ ಒಂದನ್ನು ಅಳವಡಿಸಿದ್ದರು. ಅಧಿಕೃತವಾಗಿ ಅದು ಕಾಡುಪ್ರಾಣಿಗಳಿಗಾಗಿ. ಆದರೆ ನಾವು ಕೂಡ ಅದನ್ನೇ ಬಳಸುತ್ತಿದ್ದೆವು. ಬೋರ್‌ವೆಲ್‌ನಿಂದ ಬರುವ ನೀರನ್ನು ಹಿಡಿದು ಸ್ನಾನ ಮಾಡುತ್ತಿದ್ದಾಗ, ನಾವು ಅಲ್ಲಿ ಕೇವಲ ಅತಿಥಿಗಳು ಎಂಬ ಭಾವನೆ ಯಾವಾಗಲೂ ಇರುತ್ತಿತ್ತು.

ಒಂದು ಬೆಳಗ್ಗೆ, ಆ ಕ್ಯಾಂಪ್‌ನಿಂದ ಸುಮಾರು ಎರಡು ಕಿಲೋಮೀಟರ್ ದೂರ ನಡೆದು ಹೋಗಿ ಸಮೀಕ್ಷೆ ಮಾಡಬೇಕಾಗಿದ್ದ ಟ್ರಾನ್ಸೆಕ್ಟ್‌ಗೆ ಹೋಗುವ ಸರದಿ ನನ್ನದಾಗಿತ್ತು. ನನ್ನ ಜೊತೆಗೆ ಒಬ್ಬ ಫೀಲ್ಡ್ ಅಸಿಸ್ಟೆಂಟ್ ಇದ್ದ. ಸಮೀಕ್ಷೆಯನ್ನು ಬೆಳಕಾದ ನಂತರ, ಸುಮಾರು ಆರು ಅಥವಾ ಆರು ಕಾಲಿಗೆ ಶುರುಮಾಡಬೇಕಿದ್ದರಿಂದ, ಎರಡು ಕಿಲೋಮೀಟರ್ ದಾರಿ ಕ್ರಮಿಸಲು ಬೆಳಿಗ್ಗೆ ಐದೂವರೆ ಗಂಟೆಗೇ ಟಾರ್ಚ್ ಹಿಡಿದು ಹೊರಟೆವು. ಆಗ ಇನ್ನೂ ಕತ್ತಲಿತ್ತು. 

ಕಾಡಿನಲ್ಲಿ ಕತ್ತಲಿನಲ್ಲಿ ನಡೆಯುವುದು ಒಂದು ವಿಶಿಷ್ಟ ಅನುಭವ. ಅದರಲ್ಲೂ ಪೂರ್ವಘಟ್ಟದ ಕಾಡುಗಳಲ್ಲಿ ನಕ್ಷತ್ರಗಳ ಕೆಳಗೆ ನಡೆಯುವ ಅನುಭವವನ್ನು ಆನಂದಿಸಿದ್ದೇನೆ. ಪಶ್ಚಿಮ ಘಟ್ಟದ ಕಾಡುಗಳಂತೆ ಇಲ್ಲಿನ ಕಾಡು ದಟ್ಟವಾಗಿರುವುದಿಲ್ಲ. ಹೆಚ್ಚು ಬಯಲು ಪ್ರದೇಶ. ಕಲ್ಲುಗಳು, ಮುಳ್ಳಿನ ಪೊದೆಗಳು, ಒರಟಾದ ನೆಲ. ಮಧ್ಯಾಹ್ನದ ಬಿಸಿಲಿನಲ್ಲಿ ಈ ಕಾಡು ಇನ್ನೂ ಕಠಿಣವಾಗಿ ಕಾಣುತ್ತದೆ. ಆದರೆ ಬೆಳಗಿನ ಹೊತ್ತಿನಲ್ಲಿ ವಾತಾವರಣ ತಂಪಾಗಿರುತ್ತದೆ. ಆ ದಿನ ಆಕಾಶವೂ ನಿರ್ಮಲವಾಗಿತ್ತು. ನನ್ನ ನೆತ್ತಿಯ ಮೇಲೆ ಆಕಾಶಗಂಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಆಕಾಶದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಮಸುಕಾದ ಬೆಳ್ಳಿಯ ಪಟ್ಟಿಯಂತೆ ಹರಡಿಕೊಂಡಿತ್ತು.

ಸುಮಾರು ಆರುಗಂಟೆಯ ಹೊತ್ತಿಗೆ ಟ್ರಾನ್ಸೆಕ್ಟ್ ಆರಂಭವಾಗುವ ಜಾಗ ತಲುಪಿದ್ದೆವು. ಇನ್ನೂ ಸಾಕಷ್ಟು ಬೆಳಕು ಹರಿದಿರಲಿಲ್ಲ. ಹೀಗಾಗಿ ಸ್ವಲ್ಪ ಹೊತ್ತು ಅಲ್ಲೇ ನಿಂತೆವು. ಡೇಟಾ ಫಾರ್ಮ್, ದಿಕ್ಸೂಚಿ, ರೇಂಜ್‌ಫೈಂಡರ್, ಬೈನಾಕ್ಯುಲರ್, ಸಮೀಕ್ಷೆಗೆ ಬೇಕಾದ ಎಲ್ಲವನ್ನೂ ಸಿದ್ಧಪಡಿಸಿಕೊಂಡೆವು. ಸುಮಾರು 6:10ಕ್ಕೆ ಸಮೀಕ್ಷೆ ಆರಂಭಿಸಿದೆವು.

ನಾವು ಸಮೀಕ್ಷೆಗಾಗಿಯೇ ಮೊದಲೇ ನಿರ್ಮಿಸಿದ ಕಾಡನ್ನು ಸೀಳಿಕೊಂಡು ಹೋಗುವ ಆ ದಾರಿ ಸುಮಾರು ಮುನ್ನೂರು ಮೀಟರ್ ನಂತರ 90° ಬಲಕ್ಕೆ ತಿರುಗುತ್ತಿತ್ತು. ನಾವು ಸಮೀಕ್ಷೆ ಶುರು ಮಾಡಿದ ಸ್ಥಳದಿಂದ ಆ ತಿರುವಿಗೆ ಪೊದೆಗಳಿಂದ ತುಂಬಿದ ಒಂದು ಸಣ್ಣ ಗುಡ್ಡ ಇಳಿಯಬೇಕಿತ್ತು. ನಾವು ಗುಡ್ಡ ಇಳಿದು, ಬಲಕ್ಕೆ ತಿರುಗಿ ಅಲ್ಲಿಂದ ಮತ್ತೂ ನೂರು ಮೀಟರ್ ನಡೆದಿರಬಹುದು. ಅಷ್ಟರಲ್ಲಿ ಕೇಳಿತು ಒಂದು ಚಿರತೆ ಕೂಗುವ ಸದ್ದು!

ಚಿರತೆಗಳು ಹುಲಿಯ ರೀತಿ ಘರ್ಜಿಸುವ ಬಗ್ಗೆ ನನಗೆ ಸರಿಯಾಗಿ ತಿಳಿದಿಲ್ಲ. ನಾನು ಇದುವರೆಗೂ ಬೇರೆ ಬೇರೆ ಕಾಡುಗಳಲ್ಲಿ ಕೇಳಿದ ಚಿರತೆಯ ಸದ್ದು ಗರಗಸದಿಂದ ಮರವನ್ನು ಕತ್ತರಿಸಿದರೆ ಯಾವ ರೀತಿಯಿರುತ್ತದೆಯೋ ಹಾಗಿರುತ್ತದೆ. ಅದಕ್ಕೆ sawing sound ಎಂದೇ ಹೆಸರು.

ಚಿರತೆಯ ಸದ್ದು ಕೇಳಿ ನಾವು ನಿಂತೆವು. ಗಮನವಿಟ್ಟು ಆಲಿಸಿದೆವು. ನಮ್ಮಿಂದ ಚಿರತೆ ತುಂಬಾ ದೂರದಲ್ಲೇನೂ ಇರಲಿಲ್ಲ, ಆದರೆ ನಮಗೆ ಚಿರತೆ ಕಾಣುತ್ತಿರಲಿಲ್ಲ. ಸ್ವಲ್ಪ ಹೊತ್ತು ಕಾದು ಮತ್ತೆ ಮುಂದೆ ನಡೆದೆವು. ಮತ್ತೆ ಸದ್ದು. ಮತ್ತೆ ಸ್ವಲ್ಪ ಮುಂದೆ ಹೋದೆವು. ಮತ್ತೆ ಸದ್ದು.

ಹೀಗೆ ಮುಂದಿನ ಸುಮಾರು ಏಳುನೂರು ಮೀಟರ್ ಉದ್ದಕ್ಕೂ ಅದರ ಸದ್ದು ನಮ್ಮಿಂದ ದೂರವಾಗಲಿಲ್ಲ. ಚಿರತೆ ನಮಗೆ ಸಮಾನಾಂತರವಾಗಿ ನಮ್ಮ ಜೊತೆಗೆ ಬರುತ್ತಿತ್ತು! ಆದರೆ ನಮ್ಮ ಕಣ್ಣಿಗೆ ಕಾಣದಷ್ಟು ದೂರದಲ್ಲಿ! ನಾವು ನಡೆಯುತ್ತಿದ್ದ ದಿಕ್ಕಿನಲ್ಲೇ, ನಮ್ಮ ಜೊತೆಯಲ್ಲೇ ಚಿರತೆ ಕಾಡಿನೊಳಗೆಲ್ಲೋ ನಡೆಯುತ್ತಿತ್ತು. ಕೆಲವೊಮ್ಮೆ ಹತ್ತಿರದಲ್ಲಿ, ಕೆಲವೊಮ್ಮೆ ಸ್ವಲ್ಪ ದೂರದಲ್ಲಿ!  ಅದು ನಮ್ಮ ಟ್ರಾನ್ಸೆಕ್ಟ್ ಸಮೀಕ್ಷೆಯಲ್ಲಿ ಭಾಗವಹಿಸಲು ನಿರ್ಧರಿಸಿದಂತಿತ್ತು!

ಆದರೆ ಒಂದು ಸಮಸ್ಯೆ ಇತ್ತು. ನಾವು ಮಾಡುತ್ತಿದ್ದದ್ದು ಹುಲಿ ಮತ್ತು ಚಿರತೆಗಳ ಬಲಿ ಪ್ರಾಣಿಗಳ ಸಾಂದ್ರತೆಯನ್ನು ಅಂದಾಜಿಸುವ ಸಮೀಕ್ಷೆ. ಆದರೆ ಚಿರತೆಯ ಉಪಸ್ಥಿತಿಯಿಂದ ಕಾಡಿನ ಉಳಿದ ಪ್ರಾಣಿಗಳೆಲ್ಲಾ ಕಣ್ಮರೆಯಾಗಿದ್ದವು! ಹುಲಿ, ಚಿರತೆಯಂತಹ ಬೇಟೆಗಾರ ಪ್ರಾಣಿಗಳು ಬೇಟೆಯಾಡುವ ಬಲಿ ಪ್ರಾಣಿಗಳಾದ ಜಿಂಕೆ, ಕಡವೆ, ಕಾಡುಹಂದಿ, ಮತ್ತಿತರ ಪ್ರಾಣಿಗಳನ್ನು ನಾವು ನೋಡಿ, ಅವುಗಳ ಸಂಖ್ಯೆ, ದೂರ, ಕೋನ ಇತ್ಯಾದಿ ವಿವರಗಳನ್ನು ಸಂಗ್ರಹಿಸಬೇಕಾಗಿತ್ತು. ಆದರೆ ಬಲಿ ಪ್ರಾಣಿಗಳೆಲ್ಲಾ ಚಿರತೆಯ ಸದ್ದಿಗೆ ಎಲ್ಲೋ ಅಡಗಿಕೊಂಡಿದ್ದವು. ಆ ದಿನ ನಮ್ಮ ಲೈನ್ ಟ್ರಾನ್ಸೆಕ್ಟ್ ಸಮೀಕ್ಷೆ, ಚಿರತೆಯನ್ನು ಸದ್ದನ್ನು ಆಲಿಸುವ ಕಾರ್ಯಕ್ರಮವಾಗಿ ಬದಲಾಗಿತ್ತು!

ಸ್ವಲ್ಪ ಹೊತ್ತಿನ ನಂತರ ನನಗೆ ತಾಳ್ಮೆ ಕಡಿಮೆಯಾಗತೊಡಗಿತು. ಚಿರತೆಯ ಉತ್ಸಾಹ ಮೆಚ್ಚುವಂತದ್ದೇ. ಆದರೆ ನಮಗೆ ಬೇಕಾದ ಮಾಹಿತಿ ಸಂಗ್ರಹಣೆಗೆ ಅದರಿಂದ ಯಾವ ಸಹಾಯವೂ ಆಗುತ್ತಿರಲಿಲ್ಲ!

ನಾವು ಮತ್ತೊಂದು 90° ಬಲ ತಿರುವಿನ ಹತ್ತಿರ ತಲುಪಿದೆವು. ಅಲ್ಲಿಗೆ ಬಂದ ನಂತರ ಚಿರತೆಯ ಕೂಗು ನಿಂತಿತು. ಸ್ವಲ್ಪ ಹೊತ್ತು ಅಲ್ಲೇ ನಿಂತು ಕಾಯುತ್ತಿದ್ದೆವು. ಬಹುಶಃ ಚಿರತೆ ಕಾಣಬಹುದೇನೋ ಎಂದು. ಅಷ್ಟರಲ್ಲಿ ನಮ್ಮ ಎಡಭಾಗದ ದೂರದಲ್ಲೆಲ್ಲೋ ಮುಸಿಯಗಳ ಎಚ್ಚರಿಕೆ ಕೂಗು ಕೇಳಿಸಿತು. ಅದನ್ನು ಕೇಳುತ್ತಿದ್ದಂತೆಯೇ ವಿಷಯ ಸ್ಪಷ್ಟವಾಯಿತು. ಚಿರತೆ ನಮ್ಮನ್ನು ಬಿಟ್ಟು ದೂರ ಸಾಗಿತ್ತು! 

ನಾವು ಸಮೀಕ್ಷೆಯನ್ನು ಮುಂದುವರೆಸಿದೆವು. ಮುಂದಿನ ಭಾಗದಲ್ಲಿ ನಾವು ಕೆಲವು ಬಲಿ ಪ್ರಾಣಿಗಳನ್ನು ನೋಡಲು ಸಾಧ್ಯವಾಯಿತು.

ನಂತರ ಕ್ಯಾಂಪಿಗೆ ಹಿಂತಿರುಗಿದಾಗ ಬೆಳಗ್ಗೆ ನಮಗಾದ ಅನುಭವಗಳ ಬಗ್ಗೆ ಇತರರೊಡನೆ ಮಾತನಾಡುತ್ತಿದ್ದೆವು. ಆಗ ನಾನು ಹೇಳಿದೆ,

“ಬಲಿ ಪ್ರಾಣಿಗಳ ಸಾಂದ್ರತೆ ಅಂದಾಜಿಸಲು, ಬಹುಶಃ ಆ ಚಿರತೆಯೂ ತನ್ನದೇ ಲೈನ್ ಟ್ರಾನ್ಸೆಕ್ಟ್ ಸಮೀಕ್ಷೆ ಮಾಡುತ್ತಿತ್ತೇನೋ.” 

ಎಲ್ಲರೂ ನಕ್ಕರು. ನಾನು ಮುಂದುವರೆದು ಹೇಳಿದೆ,

“ಒಂದೇ ವ್ಯತ್ಯಾಸ ಎಂದರೆ ಅದಕ್ಕೆ ನಿಶ್ಯಬ್ದವಾಗಿ ನಡೆಯುವುದು ಗೊತ್ತಿರಲಿಲ್ಲ. ಅದಕ್ಕೇ ಮತ್ತೆ ಮತ್ತೆ ಸದ್ದು ಮಾಡುತ್ತಿತ್ತು!”

ಆ ದಿನ ಬೆಳಿಗ್ಗೆ ಕಾಡಿನ ನಿಜವಾದ ಸಂಶೋಧಕ ಯಾರು ಎಂಬುದನ್ನು ಕಾಡು ನಮಗೆ ಚೆನ್ನಾಗಿಯೇ ನೆನಪಿಸಿತ್ತು.

(ಲೈನ್ ಟ್ರಾನ್ಸೆಕ್ಟ್ ಸಮೀಕ್ಷೆ ನಡೆಸುವ ಸಮಯದಲ್ಲಿ ಇದೇ ರೀತಿಯ ಮತ್ತೊಂದು ಅನುಭವವನ್ನು ಇದೇ ಬ್ಲಾಗ್‌ನ 'ಕಾಡಿನಲ್ಲಿ ಕಂಡ ನೋಟಗಳು' ಭಾಗದಲ್ಲಿ ದಾಖಲಿಸಿದ್ದೇನೆ. ಅದನ್ನು ಇಲ್ಲಿ ನೋಡಬಹುದು)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...