ವಿಷಯಕ್ಕೆ ಹೋಗಿ

ಆನೆ, ವಾಚರ್ ಮತ್ತು ಪಟಾಕಿ

ಕಾಡಿನ ಪ್ರಬುದ್ದ ದೈತ್ಯ, ಸಾಂದರ್ಭಿಕ ಚಿತ್ರ ಚಿತ್ರ: © ಶ್ರೀಕಾಂತ


ಅದೊಂದು ಸುಂದರವಾದ ದಿನ. ಪಾಲಕ್ಕಾಡಿನ ಕಾಡುಗಳಲ್ಲಿ ಆನೆಗಳನ್ನು ಸೆರೆಹಿಡಿಯಲು ಅಳವಡಿಸಿದ್ದ ಕ್ಯಾಮರಾ ಟ್ರ್ಯಾಪ್‌ಗಳಲ್ಲಿ, ಒಂದು ಸ್ಥಳದಲ್ಲಿದ್ದ ಕ್ಯಾಮರಾಗಳು ಸರಿಯಾಗಿ ಕೆಲಸ ಮಾಡುತ್ತಲಿವೆಯೋ ಇಲ್ಲವೋ ಮತ್ತು ಅದುವರೆಗೆ ಸೆರೆಯಾದ ಚಿತ್ರಗಳನ್ನು ಸಂಗ್ರಹಿಸಲು ಹೋಗುತ್ತಿದ್ದೆವು. ನಾನು ಮತ್ತು ಕೇರಳ ಅರಣ್ಯ ಇಲಾಖೆಯ ಒಬ್ಬ ವೀಕ್ಷಕ (Forest Watcher) ಕಾಡಿನ ದಾರಿಯಲ್ಲಿ ಮಹೀಂದ್ರಾ ಥಾರ್‌ನಲ್ಲಿ ಹೋಗುತ್ತಿದ್ದೆವು. ಅಲ್ಲೊಂದು ಕಡೆ ರಸ್ತೆಯ ಮೇಲೆ ಒಂದು ಮರ ಅಡ್ಡವಾಗಿ ಬಿದ್ದಿರುವುದು ಕಂಡಿತು. ಅದರ ಸುತ್ತಲೂ ಆನೆಗಳ ಕುರುಹುಗಳು! ಅವನ್ನೆಲ್ಲಾ ನೋಡಿದರೆ, ರಾತ್ರಿ ಆನೆಗಳು ಅಲ್ಲಿ ಚೆನ್ನಾಗಿ ಓಡಾಡಿರುವುದು ಸ್ಪಷ್ಟವಾಗಿತ್ತು.

ಸುಮಾರು ಅರ್ಧ ಗಂಟೆ ಕಷ್ಟಪಟ್ಟು ಮರವನ್ನು ಸರಿಸಿ ದಾರಿ ತೆರವುಗೊಳಿಸಿದೆವು. ಸ್ವಲ್ಪ ದೂರದ ನಂತರ ರಸ್ತೆ ಜೀಪ್ ನಿಲ್ಲಿಸುವ ಜಾಗ ಬಂದಿತು. ಅಲ್ಲಿಂದ ಕ್ಯಾಮರಾ ಅಳವಡಿಸಿರುವ ಜಾಗ ಸುಮಾರು ಮೂರು ಕಿಲೋಮೀಟರ್‌ಗಳು. ವಾಹನವನ್ನು ಅಲ್ಲೇ ನಿಲ್ಲಿಸಿ ನಡೆದು ಹೊರಟೆವು.

ಸ್ವಲ್ಪ ಮುಂದೆ ಹೋದಂತೆ ರಸ್ತೆ ಕಿರಿದಾಗಿ ದಾರಿಯಾಯಿತು. ಪ್ರಾಣಿಗಳ ಕುರುಹುಗಳೂ ಹೆಚ್ಚಾಗತೊಡಗಿದವು. ಆನೆಯ ಲದ್ದಿ, ಕಾಡುನಾಯಿಯ ಮಲ — ಎಲ್ಲವೂ ಹಿಂದಿನ ರಾತ್ರಿ ನಡೆದ ಕತೆ ಹೇಳುತ್ತಿದ್ದವು.

ನನ್ನ ಜೊತೆಯಲ್ಲಿದ್ದ ವಾಚರ್‌ಗೆ ಮಾತ್ರ ಸ್ವಲ್ಪ ಆತಂಕ ಶುರುವಾಗಿತ್ತು. ಆನೆಯ ಕುರುಹುಗಳು ಕಾಣುತ್ತಿದ್ದಂತೆಯೇ ಅವನಿಗೆ ಒಂದು ವಿಷಯ ನೆನಪಾಯಿತು. ಅವನು ಪಟಾಕಿ ತರಲು ಮರೆತಿದ್ದ! ಆನೆಗಳು ಎದುರಾದರೆ ಏನು ಮಾಡುವುದು ಎನ್ನುವುದಕ್ಕಿಂತ, ಪಟಾಕಿ ತರದೇ ಬಂದಿದ್ದೇನೆ ಎಂಬುದೇ ಅವನಿಗೆ ಹೆಚ್ಚು ಚಿಂತೆ ಕೊಟ್ಟಂತಿತ್ತು.

ಆದರೆ ದಿನ ಮಾತ್ರ ತುಂಬಾ ಚೆನ್ನಾಗಿತ್ತು. ಶುಭ್ರವಾದ ಆಕಾಶ. ನಾವು ಗುಡ್ಡ ಹತ್ತುತ್ತಿದ್ದಂತೆ ಬಿಸಿಲ ಬೇಗೆಯೂ ಕಡಿಮೆಯಾಗುತ್ತಿತ್ತು. ಕಾಡು Hill Myna, Fairy Bluebird, Malabar Parakeet, Black-headed Oriole ಮತ್ತು ಇನ್ನಿತರ ಪಕ್ಷಿಗಳ ಗಾಯನಗಳಿಂದ ತುಂಬಿತ್ತು. ಒಟ್ಟಾರೆಯಾಗಿ ಸುಂದರ ದಿನ.

ಎಲ್ಲೆಡೆಯೂ ಆನೆಗಳ ಕುರುಹುಗಳು ಕಾಣುತ್ತಿದ್ದುದರಿಂದ ಸುತ್ತ-ಮುತ್ತೆಲ್ಲಾ ಪರೀಕ್ಷಿಸುತ್ತಾ ನಿಧಾನವಾಗಿ ನಡೆಯುತ್ತಿದ್ದೆವು. ಆದರೆ ವಾಚರ್‌ಗೆ ಎಲ್ಲವೂ ಅನುಮಾನಾಸ್ಪದವಾಗಿ ಕಾಣುತ್ತಿತ್ತು. ಒಮ್ಮೆ ಒಂದು ಉಡ ಮರದ ಬುಡದ ಹತ್ತಿರ ಓಡಿತು. ಅವನು ತಕ್ಷಣ ನಿಂತು ನೋಡಿದ. ಸ್ವಲ್ಪ ಹೊತ್ತಿನ ನಂತರ ಒಂದು Red Spurfowl ಇದ್ದಕ್ಕಿದ್ದಂತೆ ಹಾರಿತು. ಮತ್ತೆ ನಿಂತು ನೋಡಿದ. ಮತ್ತೇನಾದರೂ ಈ ರೀತಿ ಆದರೆ ಅವನು ಓಡಿಯೇ ಹೋಗುತ್ತಾನೇನೋ ಎಂದು ನನಗೆ ಅನುಮಾನವಾಯ್ತು. ಅವನು ಆನೆಗಳನ್ನು ಹುಡುಕುತ್ತಿದ್ದಾನೋ, ಅಥವಾ ಕಾಡಿನಲ್ಲಿರುವ ಪ್ರತಿಯೊಂದು ಚಲನೆಯನ್ನೂ ಆನೆಯೆಂದೇ  ಭಾವಿಸುತ್ತಿದ್ದಾನೋ ಎನಿಸುತ್ತಿತ್ತು.

ನಿಜ ಹೇಳಬೇಕೆಂದರೆ ನಾನೂ ಅಷ್ಟೇನೂ ಧೈರ್ಯಶಾಲಿಯಲ್ಲ. ಕಾಡಿನಲ್ಲಿ ಏನಾದರೂ ಹಠಾತ್ತನೆ ಅಲುಗಾಡಿದರೆ ಯಾರಾದರೂ ಬೆಚ್ಚಿಬೀಳುತ್ತಾರೆ.

ಸುಮಾರು ನಲವತ್ತೈದು ನಿಮಿಷ ನಡೆದಿರಬಹುದು. ಒಂದು ತಿರುವಿನ ಬಳಿ, ದಾರಿಯ ಪಕ್ಕದಲ್ಲಿದ್ದ ಬಿದಿರಿನ ಪೊದೆಯ ಹಿಂದಿನಿಂದ ಹಠಾತ್ತನೆ "ಟಕ್!" ಎಂಬ ಶಬ್ದ ಕೇಳಿಸಿತು. ಮುಂದಿನ ಕ್ಷಣ ವಾಚರ್ ಸುಮ್ಮನೆ ಹಿಂದಿರುಗಿ ನನ್ನತ್ತ ನೋಡಿದ. ನಾನು ಸಹ ಶಬ್ದ ಬಂದ ಕಡೆ ನೋಡಿದ್ದೆ. ಅಲ್ಲಿ ಎರಡು ದೊಡ್ಡ ಬಿಳಿ ದಂತಗಳು ನಮ್ಮ ಕಡೆಗೆ ಮುಖಮಾಡಿ ನಿಂತಿದ್ದವು.

ಆನೆ!

ಅಷ್ಟರಲ್ಲಿ ನನ್ನ ಮುಂದಿದ್ದ ವಾಚರ್‌ ನನ್ನನ್ನು ಬಿಟ್ಟು ನನ್ನ ಹಿಂದೆ ಓಡಿಯಾಗಿತ್ತು. ನಾನು ತಿರುವಿಗೆ ಹಿಂದಿರುಗುವಷ್ಟರಲ್ಲಿ ವಾಚರ್‌ ಸುಮಾರು ದೂರ ಓಡಿಯಾಗಿತ್ತು. ನಾನು ಅವನ ಹತ್ತಿರ ಹೋದೆ. ಅವನು ಪಟಾಕಿ ತರದೇ ಬಂದಿದ್ದಕ್ಕೆ ತನ್ನನ್ನೇ ಬೈದುಕೊಳ್ಳುತ್ತಿದ್ದ. ಆನೆಯ ಬಗ್ಗೆ ಅವನಿಗೆ ಎಷ್ಟು ಚಿಂತೆಯಿತ್ತೋ ಗೊತ್ತಿಲ್ಲ. ಆದರೆ ಪಟಾಕಿ ಬಗ್ಗೆ ಮಾತ್ರ ಅವನಿಗೆ ಖಂಡಿತ ಚಿಂತೆಯಿತ್ತು.

ನಾವು ಸುಮಾರು ಹತ್ತು ನಿಮಿಷ ಅಲ್ಲೇ ನಿಂತೆವು. ಅಷ್ಟರಲ್ಲಿ ಒಂದು ಕೆಂದಳಿಲು ಕೂಗಲು ಆರಂಭಿಸಿತು. ಸ್ವಲ್ಪ ಹೊತ್ತಿನ ನಂತರ ಇನ್ನೂ ಕೆಲವು ಕೂಗುಗಳು ಕೇಳಿದವು. ಅಳಿಲುಗಳು, ಮುಸಿಯಗಳು ಮತ್ತು ಕಪಿಗಳ ಎಚ್ಚರಿಕೆ ದನಿಯನ್ನು ಕಾಡಿನ ಇತರ ಪ್ರಾಣಿಗಳು ತುಂಬಾ ಗಮನಿಸುತ್ತವೆ. ಅವು ಮರಗಳ ಮೇಲಿಂದ ದೂರದವರೆಗೂ ನೋಡಬಲ್ಲವು.

ಹತ್ತು ನಿಮಿಷಗಳ ನಂತರ ವಾಚರ್ ನಿಧಾನವಾಗಿ ಮತ್ತೆ ಆನೆಯ ಕಡೆ ಸಾಗಿದ. ನಾನೂ ಅವನ ಹಿಂದೆ ಹೋದೆ. ಆನೆ ನಿಂತಿದ್ದ ಜಾಗ ನೋಡಿದಾಗ ಅಲ್ಲೇನೂ ಇರಲಿಲ್ಲ. ಆನೆ ಹೊರಟುಹೋಯಿತೆ ಎಂದುಕೊಂಡೆ. ಆದರೆ ಎರಡು ಹೆಜ್ಜೆ ಮುಂದೆ ಹೋದ ತಕ್ಷಣ ವಾಚರ್ ಮತ್ತೆ ನಿಂತ. ಮತ್ತೆ ವಾಚರ್ ತನ್ನ ಕಾಲಿಗೆ ಬುದ್ದಿ ಹೇಳಿದ. ನಾನು ಸ್ವಲ್ಪ ಹೊತ್ತು ಗಮನಿಸಿ ನೋಡಿದೆ.

ಆನೆ ಅಲ್ಲೇ ಇತ್ತು!

ಬಿದಿರಿನ ಪೊದೆಯ ಹಿಂದೆ ಸ್ವಲ್ಪ ಸರಿದು ನಿಂತಿತ್ತು ಅಷ್ಟೇ. ಅದು ಸಂಪೂರ್ಣ ನಿಶ್ಚಲವಾಗಿತ್ತು. ಕಿವಿಯೂ ಅಲ್ಲಾಡುತ್ತಿರಲಿಲ್ಲ. ಸೊಂಡಿಲೂ ಆಡುತ್ತಿರಲಿಲ್ಲ. ನಿಜ ಹೇಳಬೇಕೆಂದರೆ ಅದು ಜೀವಂತ ಆನೆಯೇ ಅಲ್ಲ, ಆನೆಯ ಒಂದು ಫೋಟೋದಂತೆ ಕಾಣುತ್ತಿತ್ತು!

ಆನೆಗಳ ಬಗ್ಗೆ ನನಗೆ ಯಾವಾಗಲೂ ಆಶ್ಚರ್ಯವಾಗುವ ವಿಷಯ ಇದೇ! ಇಷ್ಟು ದೊಡ್ಡ ಪ್ರಾಣಿ. ಇಷ್ಟು ಶಕ್ತಿಶಾಲಿ ಪ್ರಾಣಿ. ಆದರೂ ಯಾವಾಗಲೂ ತಾನೇ ಕಾಡಿನ ಯಜಮಾನನಂತೆ ವರ್ತಿಸುವುದಿಲ್ಲ. ಅವುಗಳೂ ಗಮನಿಸುತ್ತವೆ, ಆಲಿಸುತ್ತವೆ, ಏನಾದರೂ ಅಸಾಮಾನ್ಯವಾಗಿ ಕಂಡರೆ ಎಚ್ಚರಿಕೆ ವಹಿಸುತ್ತವೆ.

ನಾನು ಮತ್ತೆ ವಾಚರ್‌ನ ಹತ್ತಿರ ನಿಧಾನವಾಗಿ ಹೋದೆ. ಈ ಬಾರಿ ಅವನು ಹಿಂದಿರುಗಲು ಸಿದ್ಧನಾಗಿದ್ದ. ಆಗ ನನಗೆ ಯೋಚನೆ ಶುರುವಾಯಿತು. ಇಷ್ಟು ದೂರ ನಡೆದು ಬಂದಿದ್ದೆವು, ನಾವು ಕ್ಯಾಮೆರಾ ಟ್ರ್ಯಾಪ್ ಹಾಕಿದ್ದ ಜಾಗ ಅಲ್ಲಿಂದ ಬಹಳ ಹತ್ತಿರದಲ್ಲಿತ್ತು. ಮತ್ತೆ ಈ ಜಾಗಕ್ಕೆ ಬರಲು ಎಲ್ಲವೂ ಮೊದಲಿನಿಂದ ಶುರುಮಾಡಬೇಕಿತ್ತು. ನನ್ನ ಮುರುಕು ಮಲಯಾಳಂನಲ್ಲಿ ಹೇಗೋ ಅವನನ್ನು ಸಮಾಧಾನಪಡಿಸಿ, ದಾರಿಯನ್ನು ಬಿಟ್ಟು ಕಾಡಿನೊಳಗೆ ಬಳಸಿಕೊಂಡು ಹೋಗೋಣ ಎಂದು ಹೇಳಿದೆ. ಅವನು ಒಪ್ಪಿಕೊಂಡ. ನಾವು ಪಕ್ಕದ ಗುಡ್ಡದ ಮೇಲ್ಭಾಗಕ್ಕೆ ನಡೆಯತೊಡಗಿದೆವು.

ಕಾಡಿನೊಳಗೆ ಪಟಾಕಿ ಸಿಡಿಸುವುದು ನನಗೆ ಸ್ವಲ್ಪವೂ ಇಷ್ಟವಿಲ್ಲ. ಆನೆಗಳು ಜನವಸತಿಯ ಹತ್ತಿರ ಬಂದಾಗ ಅದು ಬೇರೆಯದೇ ಕತೆ. ಕಾಡಿನಲ್ಲಿ ನಾವು ಪರಕೀಯರು. ಅಲ್ಲಿನ ಪ್ರಾಣಿಗಳನ್ನು ಹೆದರಿಸಿ ದಾರಿ ಮಾಡಿಕೊಳ್ಳುವುದು ಸರಿಯಲ್ಲ ಎಂದು ನನಗೆ ಯಾವಾಗಲೂ ಅನ್ನಿಸುತ್ತದೆ. ಅದಕ್ಕಿಂತ ಬಳಸಿಕೊಂಡು ಹೋಗುವುದು ಉತ್ತಮ.

ನಾವು ಹತ್ತುತ್ತಿದ್ದ ಗುಡ್ಡದ ನೆಲ ತುಂಬಾ ಮೃದುವಾಗಿತ್ತು. ನೇರ ಸೂರ್ಯನ ಬೆಳಕು ಬೀಳದ, ಮಳೆಯೂ ನೇರವಾಗಿ ಬೀಳದ ಕಾರಣ ನೆಲ ಮೆತ್ತಗೆ ಇತ್ತು. ಅದರ ಮೇಲೆ ನಡೆಯುವುದೇ ಖುಷಿಯಾಗುತ್ತಿತ್ತು. ಆದರೆ ನಿಜ ಹೇಳಬೇಕೆಂದರೆ ನಾವು ಹೋಗುತ್ತಿದ್ದ ಬಳಸುದಾರಿ ಕೇವಲ ನಮ್ಮ ಸಮಾಧಾನಕ್ಕಷ್ಟೇ. ಆನೆಗಳು ಮನಸ್ಸು ಮಾಡಿದರೆ ಕಾಡಿನೊಳಗೆ ಎಲ್ಲಿಯಾದರೂ ಬರಬಹುದು! ಅವುಗಳ ಹಳೆಯ ಹೆಜ್ಜೆ ಗುರುತುಗಳು ಎಲ್ಲೆಲ್ಲೂ ಕಾಣುತ್ತಲೇ ಇದ್ದವು.

ಕೊನೆಗೆ ಸುಮಾರು ಅರ್ಧ ಕಿಲೋಮೀಟರ್ ಸುತ್ತಿಕೊಂಡು ಮತ್ತೆ ದಾರಿಗೆ ಬಂದೆವು. ಸ್ವಲ್ಪ ದೂರದಲ್ಲೇ ಕ್ಯಾಮೆರಾ ಟ್ರ್ಯಾಪ್ ಜಾಗ ಇತ್ತು. ಅದಕ್ಕೂ ಮುಂಚೆ ಅಲ್ಲಿ ದಾರಿಗೆ ಅಡ್ಡವಾಗಿ ಹರಿಯುತ್ತಿದ್ದ ಹೊಳೆಯೊಂದನ್ನು ದಾಟಬೇಕಿತ್ತು. ಶೂ ತೆಗೆದು ಹೊಳೆ ದಾಟಲು ಹೋಗುತ್ತಿದ್ದಾಗ ಒಂದು ಹುಲಿಯ ಹೆಜ್ಜೆ ಗುರುತು ಕಾಣಿಸಿತು! ಕಾಡು ಕೆಲವೊಮ್ಮೆ ಇಂತಹ ಸಣ್ಣ ಉಡುಗೊರೆಗಳನ್ನು ಕೊಡುತ್ತದೆ.

ಕ್ಯಾಮೆರಾ ಟ್ರ್ಯಾಪ್ ಜಾಗಕ್ಕೆ ತಲುಪಿದಾಗ ಎರಡೂ ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡುತ್ತಿದ್ದವು. ಅದೇ ನಮಗೆ ಬೇಕಾಗಿದ್ದದ್ದು. ಈ ಎಲೆಕ್ಟ್ರಾನಿಕ್ ಸಾಧನಗಳು ಕೆಲವೊಮ್ಮೆ ಕೈಕೊಡುತ್ತವೆ. ಆದರೆ ಈ ಬಾರಿ ಎಲ್ಲವೂ ಸರಿಯಾಗಿತ್ತು. 

ಹಿಂತಿರುಗುವಾಗಲೂ ನಾವು ಬಳಸುದಾರಿಯಲ್ಲಿಯೇ ಬಂದೆವು. ಆನೆ ಯಾವಾಗಲೋ ಹೊರಟುಹೋಗಿತ್ತು. ದಟ್ಟ ಕಾಡಿನೊಳಗೆ ಕರಗಿಹೋಗಿತ್ತು. ನಾವು ಸುಲಭವಾಗಿ ವಾಹನದವರೆಗೆ ತಲುಪಿದೆವು.

ಸಂಜೆ ಫೀಲ್ಡ್ ಸ್ಟೇಷನ್‌ಗೆ ಹಿಂತಿರುಗಿ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾದ ಚಿತ್ರಗಳನ್ನು ನೋಡಿದಾಗ ಬೆಳಿಗ್ಗೆ ಕಾಡು ಮರೆಮಾಚಿದ್ದ ಎಲ್ಲ ರಹಸ್ಯಗಳೂ ಬಯಲಾಗಿದ್ದವು.

ಆನೆಗಳು, ಹುಲಿ, ಕಾಡುನಾಯಿಗಳು!

ಎಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಬೆಳಿಗ್ಗೆ ಕಾಡು ನಮಗೆ ಕೇವಲ ಟ್ರೈಲರ್ ಮಾತ್ರ ತೋರಿಸಿತ್ತು. ಆದರೆ ಕ್ಯಾಮೆರಾಗಳು ಇಡೀ ಸಿನಿಮಾವನ್ನೇ ತೋರಿಸಿದ್ದವು!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಚಿತ್ರ: © ಶ್ರೀಕಾಂತ ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. ಚಿತ್ರ: © ಶ್ರೀಕಾಂತ Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

 ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ್ರ...