ವಿಷಯಕ್ಕೆ ಹೋಗಿ

ಕಲ್ಲರಳಿ, ಹೂವಾಗಿ..

 ಪಾಲಕ್ಕಾಡಿನ ಕಾಡುಗಳಲ್ಲಿ ನಡೆದಾಡುವಾಗ ಬಂಡೆಯೊಂದರ ಮೇಲೆ ಕಂಡ ಈ ಚಿತ್ತಾರವನ್ನು ಗಮನಿಸಿ. ಇವು ಕಲ್ಲುಹೂವು ಅಥವಾ ಲೈಕೆನ್‌ಗಳು! (Lichens)

ಪಾಲಕ್ಕಾಡಿನಲ್ಲಿ ಬಂಡೆಯೊಂದರ ಮೇಲಿನ ಚಿತ್ತಾರ. ಈ ಒಂದು ಬಂಡೆಯ ಮೇಲೆ ಕಲ್ಲುಹೂವಿನ ಅನೇಕ ಪ್ರಭೇದಗಳಿವೆ

ಮೊದಲ ನೋಟಕ್ಕೆ ಅವು ಬಂಡೆಯ ಮೇಲಿನ ಬಣ್ಣದ ಕಲೆಗಳಂತೆ ಕಾಣಬಹುದು.. ಆದರೆ ಹತ್ತಿರದಿಂದ ನೋಡಿದರೆ ಅವುಗಳ ಪ್ರಪಂಚವೇ ಬೇರೆ. ಬೂದು, ಹಸಿರು, ಹಳದಿ, ಕಿತ್ತಳೆ ಬಣ್ಣಗಳ ವಿಚಿತ್ರ ಆಕೃತಿಗಳು. ಬಂಡೆಯ ಮೇಲೆ ಯಾರೋ ನಕ್ಷೆಯನ್ನು ಬಿಡಿಸಿದಂತೆ, ಅಥವಾ ಅಪರಿಚಿತ ಭಾಷೆಯ ಅಕ್ಷರಗಳನ್ನು ಬರೆದಂತೆ ಕಾಣುತ್ತವೆ.

ಬೆಂಗಳೂರಿನ ಬಳಿಯ ತುರಹಳ್ಳಿಯಲ್ಲಿ ಕಲ್ಲಿನ ಮೇಲೆ ಸಿಕ್ಕ ಕಲ್ಲುಹೂವು

ನಾನು ಮೊದಲಿಗೆ ಕಲ್ಲುಹೂವುಗಳನ್ನು ಒಂದು ಸಸ್ಯದ ಪ್ರಭೇದವೆಂದು ಭಾವಿಸಿದ್ದೆ. ನಂತರ ಅದರ ಬಗ್ಗೆ ಓದುತ್ತಾ ಹೋದಂತೆ ಅವುಗಳ ಕಥೆ ಇನ್ನೂ ಕುತೂಹಲಿಯಾಗಿ ಕಾಣತೊಡಗಿತು.

ಕಲ್ಲುಹೂವು ಎನ್ನುವುದು ಒಂದೇ ಜೀವಿಯಲ್ಲ! ವಾಸ್ತವವಾಗಿ ಅದು ಎರಡು ಜೀವಿಗಳ ಸಹಜೀವನ. ಒಂದು ಶಿಲೀಂಧ್ರ ಮತ್ತು ಒಂದು ಪಾಚಿ (ಅಥವಾ ಸಯನೋಬ್ಯಾಕ್ಟೀರಿಯಾ) ಒಟ್ಟಿಗೆ ಬದುಕಿದಾಗ ಕಲ್ಲುಹೂವುಗಳು ರೂಪುಗೊಳ್ಳುತ್ತದೆ. ಪಾಚಿ ಸೂರ್ಯನ ಬೆಳಕಿನಿಂದ ಆಹಾರ ತಯಾರಿಸಿದರೆ, ಶಿಲೀಂಧ್ರ ನೀರನ್ನು ಹಿಡಿದಿಟ್ಟುಕೊಂಡು ರಕ್ಷಣೆ ನೀಡುತ್ತದೆ. ಲಕ್ಷಾಂತರ ವರ್ಷಗಳಿಂದ ಈ ಎರಡು ವಿಭಿನ್ನ ಜೀವಿಗಳು ಒಂದೇ ಜೀವಿಯಂತೆ ಬದುಕುತ್ತಾ ಬಂದಿವೆ.

ಕಲ್ಲು ಹೂಗಳು ಕೇವಲ ಒಂದ ಜಾಗಕ್ಕೆ ಸೀಮಿತವಲ್ಲ. ತುಮಕೂರಿನ ಮೈದೇನಹಳ್ಳಿಯಲ್ಲಿ ನೋಡಲು ಸಿಕ್ಕ ಕಲ್ಲುಹೂವು


ಅದರ ಬಗ್ಗೆ ತಿಳಿದ ನಂತರ ಎಲ್ಲೆಲ್ಲೂ ಕಲ್ಲುಹೂಗಳು ಕಾಣತೊಡಗಿದವು. ಬಂಡೆಗಳ ಮೇಲೆ, ಮರದ ತೊಗಟೆಗಳ ಮೇಲೆ, ಒಣ ಕೊಂಬೆಗಳ ಮೇಲೆ ಮತ್ತು ಹಳೆಯ ಗೋಡೆಗಳ ಮೇಲೂ ಸಹ.

ರಾಮನಗರದ ಸಮೀಪ ಮಾವಿನ ತೋಟದಲ್ಲಿ ಕಂಡುಬಂದ ಕಲ್ಲುಹೂವು

ಪಶ್ಚಿಮ ಘಟ್ಟಗಳಂತಹ ತೇವಾಂಶಯುಕ್ತ ಕಾಡುಗಳು ಕಲ್ಲುಹೂವುಗಳಿಗೆ ಅತ್ಯುತ್ತಮ ಆವಾಸ. ಹೆಚ್ಚಿನ ಮಳೆ, ವರ್ಷಪೂರ್ತಿ ತೇವಾಂಶ ಮತ್ತು ತುಲನಾತ್ಮಕವಾಗಿ ಶುದ್ಧ ಗಾಳಿ ಅವುಗಳಿಗೆ ಅನುಕೂಲಕರ. ಅದಕ್ಕಾಗಿಯೇ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಅವುಗಳ ವೈವಿಧ್ಯತೆಯೂ ಅಪಾರ.

ವಾಲ್ಪರೈನಲ್ಲಿ ಕಂಡ ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಕಪ್ಪೆ‌ (Rhacophorus pseudomalabaricus) ಕುಳಿತಿರುವ ಕೊಂಬೆಯ ಕೆಳಭಾಗದಲ್ಲಿ ಕಲ್ಲುಹೂವನ್ನು ಗಮನಿಸಿ. 

ಕಲ್ಲುಹೂವುಗಳ ಇನ್ನೊಂದು ವಿಶೇಷತೆ ಅವುಗಳ ನಿಧಾನ ಬೆಳವಣಿಗೆ. ಕೆಲವು ಕಲ್ಲುಹೂವುಗಳು ವರ್ಷಕ್ಕೆ ಕೆಲವೇ ಮಿಲಿಮೀಟರ್ ಬೆಳೆಯುತ್ತವೆ. ಒಂದು ಬಂಡೆಯ ಮೇಲೆ ಕಾಣುವ ದೊಡ್ಡ ಕಲ್ಲುಹೂವು ಗುಂಪು ಹಲವು ದಶಕಗಳಷ್ಟು ಅಥವಾ ಅದಕ್ಕಿಂತಲೂ ಹಳೆಯದಾಗಿರಬಹುದು.
ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಕಲ್ಲುಹೂವುಗಳ ವೈವಿಧ್ಯತೆ ಅಪಾರ. ಬಿಸಿಲೆಯಲ್ಲಿ ನೋಡಲು ಸಿಕ್ಕ ಮರದ ಮೇಲಿನ ಕಲ್ಲುಹೂವು 

ಅವುಗಳ ಪ್ರಾಮುಖ್ಯತೆಯೂ ಕಡಿಮೆಯಿಲ್ಲ. ಕಲ್ಲುಹೂವುಗಳಿಗೆ ಬೇರುಗಳಿಲ್ಲ. ನೀರು ಮತ್ತು ಪೋಷಕಾಂಶಗಳನ್ನು ನೇರವಾಗಿ ಗಾಳಿಯಿಂದ ಪಡೆಯುತ್ತವೆ. ಹೀಗಾಗಿ ಸ್ವಲ್ಪವೇ ವಾಯುಮಾಲಿನ್ಯಕ್ಕೆ ಕಲ್ಲುಹೂವುಗಳು ತ್ವರಿತವಾಗಿ ಸ್ಪಂದಿಸುತ್ತವೆ. ಆದ್ದರಿಂದ ವಿಜ್ಞಾನಿಗಳು ಕಲ್ಲುಹೂವುಗಳನ್ನು ಗಾಳಿಯ ಗುಣಮಟ್ಟದ ಸೂಚಕಗಳಾಗಿ ಬಳಸುತ್ತಾರೆ. ಕೆಲವು ಕಲ್ಲುಹೂವುಗಳ ಉಪಸ್ಥಿತಿಯೇ ಆ ಪ್ರದೇಶದ ಗಾಳಿ ಎಷ್ಟು ಶುದ್ಧವಾಗಿದೆ ಎಂಬುದರ ಸುಳಿವು ನೀಡುತ್ತದೆ.

ಕಲ್ಲುಹೂವುಗಳ ಉಪಸ್ಥಿತಿ ಆ ಪ್ರದೇಶದ ಗಾಳಿಯ ಗುಣಮಟ್ಟದ ಸೂಚಕ. ಕವಲೇದುರ್ಗದಲ್ಲಿ ಸಿಕ್ಕ ಕಲ್ಲುಹೂವು

ಬಂಡೆಗಳ ಮೇಲೆ ಮೊದಲು ನೆಲೆಸುವ ಜೀವಿಗಳಲ್ಲಿಯೂ ಕಲ್ಲುಹೂಗಳೂ ಸೇರಿವೆ. ಅವು ನಿಧಾನವಾಗಿ ಬಂಡೆಗಳನ್ನು ಸವೆಸಿ ಮಣ್ಣಿನ ನಿರ್ಮಾಣಕ್ಕೂ ನೆರವಾಗುತ್ತವೆ. ಹೀಗೆ ನೋಡಿದರೆ, ಒಂದು ಪರಿಸರದ ಅಡಿಪಾಯ ನಿರ್ಮಾಣದಲ್ಲೂ ಅವುಗಳ ಪಾತ್ರವಿದೆ.

ಈ ವಿಷಯಗಳು ತಿಳಿದ ನಂತರ ಬಂಡೆಗಳ, ಮರದ ಮೇಲಿ‌ನ ಆ ಬೂದು ಬಣ್ಣದ ಕಲೆಗಳು ನಿಮಗೆ ಮೊದಲಿನಂತೆ ಕಾಣುವುದಿಲ್ಲ.

ಅವು ಕೇವಲ ಬಣ್ಣದ ಚಿತ್ತಾರಗಳಲ್ಲ, ಅವು ಎರಡು ಜೀವಿಗಳ ಸಹಜೀವನದ ಕಥೆಗಳು, ಅವು ಶುದ್ಧ ಗಾಳಿಯ ಸಂಕೇತಗಳು, ಅವು ಅತ್ಯಂತ ನಿಧಾನ ಜೀವಿಗಳಲ್ಲಿ ಒಂದು, ಮತ್ತು ಸುಲಭವಾಗಿ ಗಮನಕ್ಕೆ ಬಾರದೆ ಉಳಿಯುವ ಒಂದು ಸೂಕ್ಷ್ಮ ಪ್ರಪಂಚ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...