ವಿಷಯಕ್ಕೆ ಹೋಗಿ

ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನ

 

ಮೋಡಗಳಲ್ಲಿ ಮರೆಯಾದ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನದ ಒಂದು ಬೆಟ್ಟ

ನಾನು ಪಾಲಕ್ಕಾಡಿನಲ್ಲಿ ಕೆಲಸ ಮಾಡುತ್ತಿದ್ದಾಗ, ಪಾಲಕ್ಕಾಡು ಫಾರೆಸ್ಟ್ ಡಿವಿಷನ್ ಅಲ್ಲದೆ ಪಕ್ಕದ ಮನ್ನಾರುಕಾಡು ಫಾರೆಸ್ಟ್ ಡಿವಿಷನ್‌ನಲ್ಲಿಯೂ ಕೆಲಸಮಾಡಲು ನಮಗೆ ಅನುಮತಿ ಇತ್ತು. ಮನ್ನಾರುಕಾಡಿನಿಂದ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನ ಹತ್ತಿರವಾಗಿತ್ತು.

ಹೀಗೊಮ್ಮೆ ಸೈಲೆಂಟ್ ವ್ಯಾಲಿಯ ಹತ್ತಿರ ಹೋಗುತ್ತಿದ್ದಾ ನನಗೆ 2017ರಲ್ಲಿ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನದಲ್ಲಿ ಕೆಲಸಮಾಡುತ್ತಿದ್ದ ದಿನಗಳು ನೆನಪಾಯಿತು.

ಆ ವರ್ಷ ನಾನು ವಾನರಗಳ ಸಮೀಕ್ಷೆಯ ಭಾಗವಾಗಿ ಹಲವು ದಿನಗಳನ್ನು ಸೈಲೆಂಟ್ ವ್ಯಾಲಿಯೊಳಗೆ ಕಳೆದಿದ್ದೆ. ಸೈಲೆಂಟ್ ವ್ಯಾಲಿಯಲ್ಲಿ ನಾಲ್ಕು ಜಾತಿಯ ವಾನರಗಳು ಪ್ರಬೇಧಗಳು ಕಂಡುಬರುತ್ತವೆ. ಸಿಂಗಳೀಕ, ಮುಸಿಯ, ನೀಲಗಿರಿ ಮುಸಿಯ ಮತ್ತು ಎಲ್ಲೆಡೆ ಕಾಣುವ ಕೋತಿ. ಇನ್ನೊಂದು ಪ್ರಭೇದವೂ ಇರಬಹುದು. ಅದುವೇ ಕಾಡುಪಾಪ. ಆದರೆ ಅದು ರಾತ್ರಿಯಲ್ಲಿ ಚಟುವಟಿಕೆಯಿಂದಿರುವ ಪ್ರಾಣಿ. ನಮ್ಮ ಹಗಲಿನ ಸಮೀಕ್ಷೆಯ ವ್ಯಾಪ್ತಿಗೆ ಅದು ಬರುತ್ತಿರಲಿಲ್ಲ.

ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನದ ಮಳೆಕಾಡು

ಆ ದಿನಗಳಲ್ಲಿ ನಮ್ಮ ಸಮೀಕ್ಷೆಗಳಿಗೆ ನಿಗದಿತ ದಾರಿಗಳಿರಲಿಲ್ಲ. ಮಳೆಕಾಡಿನೊಳಗೆ ನೇರವಾಗಿ ನಡೆದು ವಾನರಗಳ ಕೂಗು ಕೇಳಿಸುತ್ತದೆಯೇ? ಮರಗಳ ನಡುವೆ ನಾಲ್ಕು ವಾನರಗಳಲ್ಲಿ ಯಾವುದಾದರೂ ಕಾಣಿಸುತ್ತದೆಯೇ? ಎಂದು ಗಮನಿಸುವುದಾಗಿತ್ತು.

ಸೈಲೆಂಟ್ ವ್ಯಾಲಿಯ ಶಾಶ್ವತ ಸಂಗಾತಿಗಳು ಎಂದರೆ ಜಿಗಣೆಗಳು. ಮೊಣಕಾಲಿನವರೆಗೂ ಬರುವ ಸಾಕ್ಸ್ ಇಲ್ಲದೆ ಅಲ್ಲಿ ಕೆಲಸ ಮಾಡುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.

ಸಿಂಗಳೀಕಗಳನ್ನು ನೋಡುವುದು ಸುಲಭವಾಗಿರಲಿಲ್ಲ. ಅವು ತುಂಬಾ ಎಚ್ಚರಿಕೆಯ ಪ್ರಾಣಿಗಳು. ನಮ್ಮ ಧ್ವನಿ ಕೇಳಿದ ಕೂಡಲೇ ಸ್ವಲ್ಪ ಹೊತ್ತು ಕಾಣಿಸಿಕೊಂಡು ನಂತರ ಅಲ್ಲೇ ನಿಶ್ಚಲವಾಗಿ ಕುಳಿತುಬಿಡುತ್ತವೆ. ಅವುಗಳ ಕಪ್ಪು ಬಣ್ಣದ ದೇಹಗಳು ಆ ದೈತ್ಯ ನಿತ್ಯಹರಿದ್ವರ್ಣ ದಟ್ಟ ಮರಗಳ ನಡುವೆ ಸುಲಭವಾಗಿ ಮರೆಯಾಗುತ್ತವೆ.

ನೀಲಗಿರಿ ಮುಸಿಯಗಳು ಮಾತ್ರ ಭಿನ್ನ. ಬೆಳಿಗ್ಗೆಯ ಕಾಡಿನಲ್ಲಿ ಅವುಗಳ ಕೂಗು ಬಹಳ ದೂರದವರೆಗೂ ಕೇಳಿಸುತ್ತಿತ್ತು. ಕೆಲವೊಮ್ಮೆ ಆ ಕೂಗು ಕಾಡಿನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಪ್ರತಿಧ್ವನಿಸುತ್ತಿದ್ದವು.

ವಾನರಗಳಷ್ಟೇ ಅಲ್ಲ, ಸೈಲೆಂಟ್ ವ್ಯಾಲಿ ನನಗೆ ಇನ್ನೂ ಹಲವು ನೆನಪುಗಳನ್ನು ಕೊಟ್ಟಿದೆ.

ಎತ್ತರದ ಹುಲ್ಲುಗಾವಲುಗಳಲ್ಲಿ ಹುಲಿಯ ಹೆಜ್ಜೆ ಗುರುತುಗಳನ್ನು ನೋಡಿದ್ದೆ. ಆನೆಗಳ ಕುರುಹುಗಳು ಎಲ್ಲೆಲ್ಲೂ ಕಾಣಿಸುತ್ತಿದ್ದವು. ಆದರೆ ಆಶ್ಚರ್ಯವೆಂದರೆ ಒಂದು ಸಲವೂ ಆನೆಗಳನ್ನು ನೋಡಿರಲಿಲ್ಲ. ಪಕ್ಷಿಗಳಲ್ಲಿ ನನಗೆ ಹೆಚ್ಚು ನೆನಪಾಗುವುದು ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್. ಅದು ಕಾಣಿಸುವ ಮೊದಲೇ ಅದರ ರೆಕ್ಕೆಗಳ ಸದ್ದು ವೂಫ್... ವೂಫ್... ಎಂದು ಕೇಳಿಸುತ್ತಿತ್ತು. ಮತ್ತೊಮ್ಮೆ Amur Falconನ ಗೂಡು ನೋಡಿದ್ದೆ. ಗೂಡು ಎಂದರೆ ಶೋಲಾ ಹುಲ್ಲುಗಾವಲುಗಳ ಮೇಲಿದ್ದ ಎತ್ತರದ ಬಂಡೆಯ ಮೇಲೆ, ಸ್ವಲ್ಪ ತಗ್ಗಿನಲ್ಲಿ ಎರಡು ಮೊಟ್ಟೆ ಇಟ್ಟಿತ್ತು. ಸಾಮಾನ್ಯವಾಗಿ ಅಂತಹ ಜಾಗಕ್ಕೆ ಬೇರೆ ಯಾವ ಪ್ರಾಣಿಗಳು ಹೋಗುವುದಿಲ್ಲ. ಅಂತಹ ಕಡಿದಾದ ಜಾಗವೇ ಅದಕ್ಕೆ ರಕ್ಷಣೆ.


Amur Falcon ಗೂಡು ಮಾಡಿ ಮೊಟ್ಟೆ ಇಟ್ಟಿದ್ದ ಬಂಡೆಯನ್ನು ಬೆಟ್ಟದ ತುದಿಯಲ್ಲಿ ನೋಡಬಹುದು


ಸೈಲೆಂಟ್ ವ್ಯಾಲಿಯ ಕೆಲವು ಮರಗಳು ಮಾತ್ರ ಇಂದಿಗೂ ಸ್ಪಷ್ಟವಾಗಿ ನೆನಪಿವೆ. ಅತ್ತಿ, ಆಲ, ಅರಳಿ ಮರಗಳನ್ನೊಳಗೊಂಡ ಫೈಕಸ್ ಗುಂಪಿಗೆ ಸೇರಿದ ಹಲವಾರು ಜಾತಿಯ ಮರಗಳನ್ನು Strangler Fig ಎಂದು ಕರೆಯಲಾಗಿದೆ. ಮೊದಲ ನೋಟಕ್ಕೆ ಅವು ಸಾಮಾನ್ಯ ಮರದಂತೆ ಕಾಣುತ್ತವೆ. ಆದರೆ ಹತ್ತಿರ ಹೋಗಿ ನೋಡಿದರೆ ಕಥೆಯೇ ಬೇರೆ. ಪಕ್ಷಿಯೋ, ಪ್ರಾಣಿಯೋ ಹಿಕ್ಕೆಗಳ ಮೂಲಕ ಬಿಟ್ಟುಹೋದ ಇಂತಹಾ ಫೈಕಸ್ ಜಾತಿಯ ಮರಗಳ ಬೀಜ ಮತ್ತೊಂದು ಮರದ ಮೇಲೆಯೇ ಮೊಳಕೆಯೊಡೆದಿರುತ್ತದೆ. ನಂತರ ಅದು ನಿಧಾನವಾಗಿ ಕೆಳಗೆ ಬೇರುಗಳನ್ನು ಇಳಿಸಿ, ವರ್ಷಗಳ ಕಾಲ ಆತಿಥೇಯ ಮರವನ್ನು ಬಿಗಿಯಾಗಿ ಸುತ್ತಿಕೊಳ್ಳುತ್ತಾ ಬೆಳೆಯುತ್ತದೆ. ಕೊನೆಗೆ ಅಥಿತೇಯ ಮರ ಈ ಅಪ್ಪುಗೆಯಿಂದ ಬೆಳೆಯಲಾಗದೆ ಸಾಯುತ್ತದೆ. ಮೂಲ ಮರ ಸತ್ತರೂ ಸುತ್ತುವರೆದ ಮರ ಮಾತ್ರ ಉಳಿಯುತ್ತದೆ. ಈ ಕಾರಣಕ್ಕೆ ಈ ಮರಗಳನ್ನು Strangler Fig, ಎಂದರೆ ಹಿಸುಕಿ ಸಾಯಿಸುವ ಎನ್ನುವ ಅರ್ಥವನ್ನು ಕೊಡುವ ಈ ಮರಗಳನ್ನು ನೋಡಿದಾಗ, ಕಾಡಿನಲ್ಲಿ ಮರಗಳ ನಡುವೆ ಸ್ಪರ್ಧೆ ಎಷ್ಟು ತೀವ್ರವಾಗಿರಬಹುದು ಎಂದು ಅನಿಸುತ್ತಿತ್ತು.

ಮೊದಲ ನೋಟಕ್ಕೆ ಅವು ಸಾಮಾನ್ಯ ಮರದಂತೆ ಕಾಣುತ್ತವೆ. ಆದರೆ ಹತ್ತಿರ ಹೋಗಿ ನೋಡಿದರೆ ಕಥೆಯೇ ಬೇರೆ!



ಮೂಲ ಮರವನ್ನು ಅಪ್ಪಿ ಹಿಡಿದು, ಅಥಿತೇಯ ಮರ ಸತ್ತು, ಮಧ್ಯದಲ್ಲಿ ಟೊಳ್ಳಾಗಿರುವುದು. ಸುತ್ತಲಿನ Strangler Fig ಮಾತ್ರ ಹಾಗೆ ಉಳಿದುಕೊಂಡಿದೆ. 


ಕೆಲವು ಪ್ರಾಣಿಗಳು ಮಾತ್ರ ನನಗೆ ಕಾಣಲಿಲ್ಲ. ಅವುಗಳಲ್ಲಿ ಪ್ರಮುಖವಾದದ್ದು ನೀಲಗಿರಿ ತಾರ್. ಅಲ್ಲಿದ್ದ ದಿನಗಳಲ್ಲಿ ಒಂದು ಬಾರಿಯೂ ಕಾಣಲಿಲ್ಲ. ಹಲವು ವರ್ಷಗಳ ನಂತರ ಆನಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೊದಲ ಬಾರಿಗೆ ನೋಡಿದೆ.

ಇಂದು ಯೋಚಿಸಿದರೆ, ಸೈಲೆಂಟ್ ವ್ಯಾಲಿಯಲ್ಲಿ ಕಳೆದ ಆ ದಿನಗಳು ಒಂದು ವಿಶೇಷ ಅವಕಾಶವಾಗಿದ್ದವು ಎಂದು ಅನಿಸುತ್ತದೆ. ಕಾಡಿನ ಮಧ್ಯೆ ಅರಣ್ಯ ಇಲಾಖೆಯ ವಸತಿಗಳಲ್ಲಿ ತಂಗುವುದು. ಮಳೆಕಾಡಿನೊಳಗೆ ಗಂಟೆಗಟ್ಟಲೆ ನಡೆಯುವುದು. ಅಲ್ಲಿನ ಕಾಡನ್ನು ಅದರ ನಿಜ ರೂಪದಲ್ಲಿ ಅನುಭವಿಸುವುದು. ಇಂತಹ ಅವಕಾಶಗಳು ಪದೇ ಪದೇ ಸಿಗುವುದಿಲ್ಲ.

ಕೆಲವು ಕಾಡುಗಳು ಹಾಗೆಯೇ. ಅವುಗಳನ್ನು ಬಿಟ್ಟು ಬಂದರೂ ಅವು ನಮ್ಮನ್ನು ಬಿಡುವುದಿಲ್ಲ. ಸೈಲೆಂಟ್ ವ್ಯಾಲಿಯೂ ನನಗೆ ಅಂತಹ ಒಂದು ಕಾಡು. ಒಂದು ದಿನ ನಾನು ಮತ್ತೆ ಅಲ್ಲಿಗೆ ಹೋಗುವೆ. ಯಾವುದೇ ಸಮೀಕ್ಷೆಗಾಗಿ ಅಲ್ಲ! ಯಾವುದೇ ಕೆಲಸಕ್ಕಾಗಿ ಅಲ್ಲ! ಆ ಕಾಡಿನೊಳಗೆ ಮತ್ತೊಮ್ಮೆ ನಡೆಯಲು ಮಾತ್ರ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...