![]() |
| ವಾಲ್ಪರೈನಲ್ಲಿ ಕಂಡ, Gymnopiona ಜೀನಸ್ ಗೆ ಸೇರಿದ ಒಂದು ಪ್ರಭೇದದ ಸಿಸಿಲಿಯನ್. ಚಿತ್ರದಲ್ಲಿ ಸಿಸಿಲಿಯನ್ ನ ಚಿಕ್ಕ ಕಣ್ಣುಗಳನ್ನೂ ಕಾಣಬಹುದು. |
ಕೆಲವು ಜೀವಿಗಳು ಅಪರೂಪವಾಗಿರುವುದರಿಂದ ನಮ್ಮ ಕಣ್ಣಿಗೆ ಬೀಳುವುದಿಲ್ಲ. ಆದರೆ ಮತ್ತೂ ಕೆಲವು ಜೀವಿಗಳು ಅವು ಎಲ್ಲಿ ಬದುಕುತ್ತವೆ, ಹೇಗೆ ಬದುಕುತ್ತವೆ ಎಂದು ನಮಗೆ ಗೊತ್ತಿರದ ಕಾರಣ ಕಾಣಿಸುವುದಿಲ್ಲ.
ನನಗೆ ಸುಮಾರು ವರ್ಷ ಸಿಸಿಲಿಯನ್‌ಗಳ ಪರಿಚಯ ಇರದೇ ಇದ್ದುದಕ್ಕೆ ಕಾರಣ ಅವುಗಳ ನಿಗೂಢ ಬದುಕು!
2016ರ ಆಗಸ್ಟ್ ತಿಂಗಳು. ಹರ್ಷ ಮತ್ತು ನಾನು ಆಗುಂಬೆಗೆ ಹೋಗುತ್ತಿದ್ದೆವು. ಬೆಂಗಳೂರಿನಿಂದ ರಾತ್ರಿ ಹೊರಟಿದ್ದೆವು. ಬೆಳಗಿನ ಜಾವ ಸುಮಾರು ಮೂರು ಗಂಟೆ ಹೊತ್ತಿಗೆ ಬಾಳೆಹೊನ್ನೂರಿನ ಹತ್ತಿರ ತಲುಪಿದ್ದೆವು. ಜೋರಾಗಿ ಸುರಿಯುತ್ತಿದ್ದ ಮಳೆ ಆಗ ತಾನೆ ನಿಂತಿತ್ತು. ವಾಹನದ ಹೆಡ್‌ಲೈಟ್ ಬೆಳಕಿನಲ್ಲಿ ಡಾಂಬರು ರಸ್ತೆ ಹೊಳೆಯುತ್ತಿತ್ತು.
ಆಗ ರಸ್ತೆಯ ಮೇಲೆ ವಿಚಿತ್ರ ದೃಶ್ಯವೊಂದು ಕಾಣಿಸಿತು. ರಸ್ತೆಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಲವಾರು ಜೀವಿಗಳು ದಾಟುತ್ತಿದ್ದವು. ಹಾವುಗಳಂತೆ ಕಾಣುತ್ತಿದ್ದ ಅವು ಸುಮಾರು ಒಂದು ಅಡಿಯಷ್ಟು ಉದ್ದವಿದ್ದವು. ಕತ್ತಲಿನಲ್ಲಿ ರಸ್ತೆಯ ಮೇಲೆ ನಿಧಾನವಾಗಿ ತೆವಳುತ್ತಿದ್ದವು. ಅವು ಯಾವ ಜೀವಿಗಳು ಎಂಬುದೇ ಗೊತ್ತಿರಲಿಲ್ಲ. ಹೀಗಾಗಿ ಸ್ವಲ್ಪ ಆತಂಕವೂ ಆಯಿತು.
ಆದರೆ ಕೆಲ ಕ್ಷಣಗಳಲ್ಲೇ ಕುತೂಹಲ ಭಯವನ್ನು ಮೀರಿಸಿತು. ವಾಹನದಿಂದ ಇಳಿದು ಕೆಲವು ಚಿತ್ರಗಳನ್ನು ತೆಗೆದುಕೊಂಡೆ. ನಂತರ ಪ್ರಯಾಣ ಮುಂದುವರಿಸಿದೆವು.
| ಬಾಳೆಹೊನ್ನೂರಿನ ಸಮೀಪ, ರಸ್ತೆಯ ಮೇಲೆ ಕಂಡ ಸಿಸಿಲಿಯನ್ |
ಬೆಂಗಳೂರಿಗೆ ಹಿಂದಿರುಗಿದ ನಂತರ ಆ ಚಿತ್ರಗಳೂ ಕೆಲವು ದಿನ ಕಂಪ್ಯೂಟರಿನಲ್ಲೇ ಹಾಗೆಯೇ ಉಳಿದವು. ನಂತರ ಒಂದು ದಿನ ಅವುಗಳನ್ನು Ngಗೆ ತೋರಿಸಿದೆ.
“ಇವು ಯಾವ ಜೀವಿಗಳು ಗೊತ್ತಾ?” ಎಂದು ಕೇಳಿದೆ.
ಅವನು ಚಿತ್ರಗಳನ್ನು ನೋಡಿದ ತಕ್ಷಣ ಉತ್ತರಿಸಿದ.
“ಅವು ಸಿಸಿಲಿಯನ್‌ಗಳು.”
ಆ ಪದವನ್ನು ನಾನು ಮೊದಲ ಬಾರಿಗೆ ಕೇಳಿದ್ದು ಅಂದೇ. ನಂತರ ಅದರ ಬಗ್ಗೆ ಓದುತ್ತಾ ಹೋದಂತೆ ನನಗೆ ಇನ್ನೂ ಆಶ್ಚರ್ಯವಾಗತೊಡಗಿತು.
ಸಿಸಿಲಿಯನ್‌ಗಳು (Cecilian) ಒಂದು ಬಗೆಯ ಉಭಯವಾಸಿಗಳು!
ಉಭಯವಾಸಿಗಳು ಎಂದರೆ ಸಾಮಾನ್ಯವಾಗಿ ಕಪ್ಪೆಗಳು ನಮ್ಮ ಮನಸ್ಸಿಗೆ ಬರುತ್ತವೆ. ಕೆಲವರಿಗೆ ಸಲಮಾಂಡರ್‌ಗಳ ಪರಿಚಯವೂ ಇರಬಹುದು. ಆದರೆ ಸಿಸಿಲಿಯನ್‌ಗಳ ಬಗ್ಗೆ ಬಹುತೇಕ ಜನ ಕೇಳಿರುವುದೇ ಇಲ್ಲ. ವಾಸ್ತವದಲ್ಲಿ ಉಭಯವಾಸಿಗಳ (Amphibians) ಮೂರು ಪ್ರಮುಖ ಗುಂಪುಗಳಲ್ಲಿ ಸಿಸಿಲಿಯನ್‌ಗಳೂ ಒಂದು. ಉಳಿದ ಎರಡು ಗುಂಪುಗಳೆಂದರೆ ಕಪ್ಪೆಗಳು ಮತ್ತು ಸಲಮಾಂಡರ್‌ಗಳು.
ಭಾರತದಲ್ಲಿ ಸಲಮಾಂಡರ್‌ಗಳು ಹಿಮಾಲಯದ ಪೂರ್ವಭಾಗದಲ್ಲಿ ಮಾತ್ರ ಕಂಡುಬರುತ್ತವೆ. ಆದರೆ ಸಿಸಿಲಿಯನ್‌ಗಳು ಈಶಾನ್ಯ ಭಾರತದಲ್ಲಿ ಮತ್ತು ವಿಶೇಷವಾಗಿ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತವೆ.
ಆದರೂ ಅವುಗಳ ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ. ಇದಕ್ಕೆ ಕಾರಣ ಅವುಗಳು ಜೀವನಶೈಲಿ.
ಮೊದಲ ನೋಟಕ್ಕೆ ಸಿಸಿಲಿಯನ್‌ಗಳು ಮಣ್ಣುಹುಳು ಅಥವಾ ಹಾವಿನಂತೆ ಕಾಣುತ್ತವೆ. ಉದ್ದವಾದ, ನಳಿಕೆಯಾಕಾರದ, ಕಾಲುಗಳಿಲ್ಲದ ದೇಹ, ಯಾವಾಗಲೂ ತೇವಾಂಶದಿಂದ ಕೂಡಿದ ಮೇಲ್ಮೈ, ಬಹುತೇಕ ಇಲ್ಲವೆಂದೇ ತೋರುವ ಕಣ್ಣುಗಳು ಇವುಗಳ ಪ್ರಮುಖ ಲಕ್ಷಣಗಳು.
ಜೀವನದ ಬಹುಭಾಗವನ್ನು ಅವು ಮಣ್ಣಿನೊಳಗೆ ಕಳೆಯುತ್ತವೆ. ಒದ್ದೆಯಾದ ಮಣ್ಣು, ಕೊಳೆಯುತ್ತಿರುವ ಎಲೆಗಳ ರಾಶಿ, ಬಿದ್ದ ಮರದ ದಿಮ್ಮಿಗಳು, ಮಣ್ಣಿನ ಬಿರುಕುಗಳು, ಇವೆಲ್ಲಾ ಅವುಗಳ ಆವಾಸ. ಈ ಕಾರಣಕ್ಕೆ ಅವುಗಳನ್ನು ನೋಡುವ ಅವಕಾಶ ಬಹಳ ವಿರಳ.
ಭಾರೀ ಮಳೆಯ ಸಮಯದಲ್ಲಿ ಮಾತ್ರ ಕೆಲವೊಮ್ಮೆ ಅವು ನೆಲದ ಮೇಲಕ್ಕೆ ಬರುತ್ತವೆ. ಆ ರಾತ್ರಿ ಬಾಳೆಹೊನ್ನೂರಿನ ಹತ್ತಿರ ರಸ್ತೆಯ ಮೇಲೆ ಇಷ್ಟು ಸಿಸಿಲಿಯನ್‌ಗಳು ಕಾಣಿಸಿಕೊಂಡಿದ್ದಕ್ಕೂ ಬಹುಶಃ ಅದೇ ಕಾರಣ.
ಅವು ಮಣ್ಣಿನೊಳಗಿನ ಕೀಟಗಳು, ಗೆದ್ದಲುಗಳು, ಮಣ್ಣಹುಳುಗಳು ಮತ್ತು ಇತರ ಸಣ್ಣ ಪ್ರಾಣಿಗಳನ್ನು ತಿನ್ನುತ್ತವೆ. ನೆಲದ ಒಳಗಿನ ಒಂದು ಪ್ರತ್ಯೇಕ ಪ್ರಪಂಚದಲ್ಲಿ ಅವು ಪ್ರಮುಖ ಪರಭಕ್ಷಕಗಳಾಗಿವೆ.
ಇಷ್ಟೆಲ್ಲಾ ತಿಳಿದ ನಂತರ ಸಿಸಿಲಿಯನ್‌ಗಳ ಬಗ್ಗೆ ನನಗೆ ಆಸಕ್ತಿ ಹುಟ್ಟಿತು. ಅಲ್ಲಿಂದ ಮುಂದೆ ಪಶ್ಚಿಮ ಘಟ್ಟದ ಕಾಡುಗಳಿಗೆ ಹೋದಾಗಲೆಲ್ಲಾ ಅವುಗಳಿಗಾಗಿ ಹುಡುಕುತ್ತಿದ್ದೆ. ಆದರೂ ಕೇವಲ ಓದಿನಿಂದ ತಿಳಿದದ್ದು ಕಾಡಿನಲ್ಲಿ ಯಾವ ಉಪಯೋಗಕ್ಕೂ ಬರುತ್ತಿರಲಿಲ್ಲ. ಅವುಗಳನ್ನು ಎಲ್ಲಿ ಹುಡುಕಬೇಕು? ಯಾವ ಸಮಯದಲ್ಲಿ ಹುಡುಕಬೇಕು? ಏನನ್ನು ಗಮನಿಸಬೇಕು? ಎನ್ನುವುದು ಏನೂ ಗೊತ್ತಿರಲಿಲ್ಲ. ಹೀಗಾಗಿ ಮುಂದಿನ ಹಲವು ವರ್ಷಗಳ ಕಾಲ ಅವು ಮತ್ತೆ ಕಣ್ಣಿಗೆ ಬೀಳಲಿಲ್ಲ.
2023ರಲ್ಲಿ ಕೊಡಗಿನಲ್ಲಿ ಉಭಯವಾಸಿಗಳ ಸಮೀಕ್ಷೆಯಲ್ಲಿ ಭಾಗವಹಿಸಿದ್ದೆ. ಆಗಲೂ ಸಾಕಷ್ಟು ಸಮಯ ಕಪ್ಪೆಗಳು ಮತ್ತು ಸಿಸಿಲಿಯನ್‌ಗಳ ಹುಡುಕಾಟದಲ್ಲಿ ಕಳೆದರೂ, ಒಂದು ಸಿಸಿಲಿಯನ್ ಕೂಡ ಕಾಣಿಸಲಿಲ್ಲ.
ಮುಂದಿನ ವರ್ಷ ವಾಲ್ಪರೈನಲ್ಲಿ ಉಭಯವಾಸಿ ಸಮೀಕ್ಷೆಯಲ್ಲಿ ಭಾಗವಹಿಸಿದೆ. ಅಲ್ಲಿಂದ ಪರಿಸ್ಥಿತಿ ಬೇರೆಯದೇ ರೀತಿಯಾಗಿತ್ತು. ನಮ್ಮ ಕೆಲಸದ ಕೇಂದ್ರಬಿಂದುವೇ ಉಭಯವಾಸಿಗಳಾಗಿದ್ದರಿಂದ, ನಾವು ಕೇವಲ ಹಳ್ಳಗಳು ಮತ್ತು ಕೆರೆಗಳನ್ನು ಮಾತ್ರವಲ್ಲ, ಎಲೆಗಳ ರಾಶಿ, ಮಣ್ಣು, ಬಿದ್ದ ಮರದ ದಿಮ್ಮಿಗಳು ಮತ್ತು ಇತರ ಸೂಕ್ಷ್ಮ ಆವಾಸಗಳನ್ನೂ ಪರಿಶೀಲಿಸುತ್ತಿದ್ದೆವು.
![]() |
| ಮಣ್ಣಿನಿಂದ ಹೊರಬಂದಿರುವ ಒಂದು ಸಿಸಿಲಿಯನ್, ವಾಲ್ಪರೈನಲ್ಲಿ ಕಂಡಂತೆ |
ಆಗ ಮೊದಲ ಬಾರಿಗೆ ಸಿಸಿಲಿಯನ್‌ಗಳು ಎಷ್ಟು ಸಾಮಾನ್ಯವಾಗಿರಬಹುದು ಎಂಬುದು ಅರ್ಥವಾಯಿತು. ಎಲ್ಲಿ ನೋಡಬೇಕು ಎಂದು ತಿಳಿದಿದ್ದರೆ ಅವುಗಳನ್ನು ಕಂಡುಹಿಡಿಯುವುದು ಅಷ್ಟೇನೂ ಕಷ್ಟವಲ್ಲ.
ಆದರೂ ಅವುಗಳ ನಿಗೂಢತೆ ಮಾತ್ರ ಕಡಿಮೆಯಾಗಲಿಲ್ಲ. ಬಾಳೆಹೊನ್ನೂರಿನ ಸಮೀಪ ಆ ರಾತ್ರಿ ನಾವು ನೋಡಿದ್ದ ಸಿಸಿಲಿಯನ್‌ಗಳು ಯಾವ ಪ್ರಭೇದಕ್ಕೆ ಸೇರಿದವು ಎಂಬುದನ್ನು ಇದುವರೆವಿಗೂ ತಿಳಿಯಲಾಗಲಿಲ್ಲ. ಆ ರಾತ್ರಿ ಬಾಳೆಹೊನ್ನೂರಿನ ಸಮೀಪ ರಸ್ತೆ ತುಂಬಾ ಹಾವುಗಳಿವೆ ಎಂದುಕೊಂಡಿದ್ದೆ. ಆದರೆ ಅದು ಪಶ್ಚಿಮ ಘಟ್ಟಗಳ ಅತ್ಯಂತ ವಿಚಿತ್ರ ಉಭಯವಾಸಿಗಳೊಂದಿಗಿನ ನನ್ನ ಮೊದಲ ಭೇಟಿಯಾಗಿತ್ತು! ಪ್ರತಿ ಬಾರಿ ಒಂದು ಸಿಸಿಲಿಯನ್ ಕಂಡಾಗಲೂ ಮಣ್ಣಿನ ಕೆಳಗಿರುವ ಮತ್ತೊಂದು ಪ್ರಪಂಚದ ಒಂದು ಕಿರುನೋಟ ಸಿಕ್ಕಂತಾಗುತ್ತಿತ್ತು.
ನಮಗೆ ಗಮನಿಸುವ ಆಸಕ್ತಿಯಿದ್ದಲ್ಲಿ ಕಾಡು ತನ್ನ ರಹಸ್ಯಗಳನ್ನು ಒಂದೊಂದಾಗಿ ಪರಿಚಯಿಸುತ್ತಾ ಹೋಗುತ್ತದೆ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ