ಕೆಲವೊಮ್ಮೆ ಕಾಡಿನಲ್ಲಿ ದೊಡ್ಡ ಪ್ರಾಣಿಗಳನ್ನು ನೋಡುವಾಗ ಆಗುವಷ್ಟೇ ಖುಷಿ ಚಿಕ್ಕ ಜೀವಿಗಳನ್ನು ನೋಡುವುದರಲ್ಲೂ ಆಗುತ್ತದೆ.
ಅಂತಹ ಒಂದು ಜೀವಿ Indrella ampulla ಎನ್ನುವ ಬಸವನಹುಳು (Snail)!
ಹಲವು ವರ್ಷಗಳಿಂದ ನೋಡಬೇಕೆಂದುಕೊಂಡಿದ್ದ ಜೀವಿಗಳ ಪಟ್ಟಿಯಲ್ಲಿ ಅದೂ ಒಂದಾಗಿತ್ತು. ಆನೆ, ಹುಲಿ ಅಥವಾ ಹಾರ್ನ್‌ಬಿಲ್‌ನಷ್ಟು ಪ್ರಸಿದ್ಧವಲ್ಲದಿದ್ದರೂ, ಪಶ್ಚಿಮ ಘಟ್ಟಗಳ ಜೀವವೈವಿಧ್ಯದ ಬಗ್ಗೆ ಆಸಕ್ತಿ ಇರುವವರಿಗೆ ಇದು ಒಂದು ವಿಶೇಷ ಜೀವಿ.
2025ರ ಏಪ್ರಿಲ್ ನಲ್ಲಿ ಕೊಡಗಿನಲ್ಲಿ ಸಣ್ಣ ಮಾಂಸಾಹಾರಿ ಪ್ರಾಣಿಗಳ ಬಗ್ಗೆ ಕೆಲಸ ಮಾಡುವಾಗ ಒಂದು ಕಾಫಿ ತೋಟದಲ್ಲಿ ನಾನು ಮೊದಲ ಬಾರಿಗೆ Indrella ampulla ನೋಡಿದ್ದೆ. ಒದ್ದೆಯಾದ ಕಾಡಿನ ನೆಲದ ಮೇಲೆ ನಿಧಾನವಾಗಿ ಚಲಿಸುತ್ತಿದ್ದ ಆ ಕಿತ್ತಳೆ ಬಣ್ಣದ ಬಸವನಹುಳವನ್ನು ನೋಡಿದಾಗ ಹಲವು ವರ್ಷಗಳಿಂದ ನೋಡಬೇಕೆಂದುಕೊಂಡಿದ್ದ ಜೀವಿ ಕೊನೆಗೂ ಕಣ್ಣಮುಂದೆ ಕಾಣಿಸಿಕೊಂಡಿತ್ತು.
![]() |
| ಕೊಡಗಿನಲ್ಲಿ ಕಂಡ ಕಿತ್ತಳೆ ಬಣ್ಣದ Indrella ampulla ಬಸವನ ಹುಳು |
ಕೆಲವು ತಿಂಗಳ ನಂತರ, ಸೆಪ್ಟೆಂಬರ್ ನಲ್ಲಿ ಪಾಲಕ್ಕಾಡಿನಲ್ಲಿ ಮತ್ತೊಮ್ಮೆ Indrella ampulla ಕಾಣಿಸಿತು. ಈ ಬಾರಿ ಹಳದಿ ಬಣ್ಣದ ಹುಳು ಕಂಡಿತ್ತು. ನಂತರ ಅದರ ಬಗ್ಗೆ ಓದುತ್ತಾ ಹೋದಂತೆ ಅದು ಇನ್ನಷ್ಟು ಆಸಕ್ತಿದಾಯಕವಾಗಿ ಕಾಣತೊಡಗಿತು.
![]() |
| ಪಾಲಕ್ಕಾಡಿನಲ್ಲಿ ಕಂಡ ಹಳದಿ ಬಣ್ಣದ Indrella ampulla ಬಸವನ ಹುಳು |
Indrella ampulla ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾದ ಜೀವಿ. ಈ ಬಸವನಹುಳುವಿನ (Snail) ಬೆನ್ನಿನ ಮೇಲೆ ಚಿಪ್ಪು ಇರುತ್ತದೆ. ಆದರೆ ಅಪಾಯ ಬಂದಾಗ ಬಸವನಹುಳುವಿನಂತೆ ಅದರ ಇಡೀ ದೇಹವನ್ನು ಚಿಪ್ಪಿನ ಒಳಗೆ ಎಳೆದುಕೊಳ್ಳಲು ಸಾಧ್ಯವಿಲ್ಲ. ಈ ಕಾರಣಕ್ಕೆ ಬಸವನ ಹುಳುವಿನ ಹತ್ತಿರದ ಸಂಬಂಧಿ, ಚಿಪ್ಪುಗಳು ಇಲ್ಲದಿರುವ ಗೊಣ್ಣೆಹುಳುವಿನೊಡನೆ (Slug) ಅದನ್ನು ಸಮೀಕರಿಸಿ ವಿಜ್ಞಾನಿಗಳು ಇದನ್ನು "ಸೆಮಿ-ಸ್ಲಗ್" ಎಂದು ಕರೆಯುತ್ತಾರೆ.
ಇದರ ಇನ್ನೊಂದು ವಿಶೇಷತೆ ಅದರ ಬಣ್ಣ. ಈ ಪ್ರಭೇದ ಮೂರು ಪ್ರಮುಖ ಬಣ್ಣಗಳಲ್ಲಿ ಕಂಡುಬರುತ್ತದೆ: ಹಳದಿ, ಕಿತ್ತಳೆ ಮತ್ತು ಕೆಂಪು. ಕೆಲ ವರ್ಷಗಳ ಹಿಂದೆ ವಿಜ್ಞಾನಿಗಳು ಈ ಮೂರು ಬಣ್ಣಗಳ ರೂಪಗಳನ್ನು ಅಧ್ಯಯನ ಮಾಡಿದ್ದರು. ಆರಂಭದಲ್ಲಿ ಅವು ಬೇರೆ ಬೇರೆ ಪ್ರಭೇದಗಳಿರಬಹುದು ಎಂದು ಭಾವಿಸಿದ್ದರು. ಆದರೆ ನಂತರ ಅವೆಲ್ಲವೂ ಒಂದೇ ಪ್ರಭೇದಕ್ಕೆ ಸೇರಿದವು ಎಂದು ತಿಳಿಯಿತು. ಆದರೆ ಆ ಅಧ್ಯಯನದಲ್ಲಿ ಇನ್ನೊಂದು ಕುತೂಹಲಕಾರಿ ಸಂಗತಿ ಬೆಳಕಿಗೆ ಬಂತು.
ಪಶ್ಚಿಮ ಘಟ್ಟಗಳ ಅತ್ಯಂತ ಪ್ರಮುಖ ಭೌಗೋಳಿಕ ಲಕ್ಷಣಗಳಲ್ಲಿ ಒಂದಾದ ಪಾಲಕ್ಕಾಡು ಗ್ಯಾಪ್ ಈ ಜೀವಿಯ ವಿಕಾಸದ ಮೇಲೂ ತನ್ನ ಪ್ರಭಾವ ಬೀರಿದೆ. ಅಧ್ಯಯನದ ಪ್ರಕಾರ, ಕೆಂಪು ಬಣ್ಣದ ರೂಪ ಮುಖ್ಯವಾಗಿ ಪಾಲಕ್ಕಾಡು ಗ್ಯಾಪ್‌ನ ದಕ್ಷಿಣ ಭಾಗದಲ್ಲಿ ಕಂಡುಬಂದರೆ, ಹಳದಿ ಮತ್ತು ಕಿತ್ತಳೆ ಬಣ್ಣದ ರೂಪಗಳು ಉತ್ತರ ಭಾಗದಲ್ಲಿ ಕಂಡುಬರುತ್ತವೆ. ಲಕ್ಷಾಂತರ ವರ್ಷಗಳಿಂದ ಈ ವಿಶಾಲ ಗ್ಯಾಪ್ ಅವುಗಳ ನಡುವಿನ ಜೀನ್ ಹರಿವನ್ನು ನಿರ್ಬಂಧಿಸಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣಕ್ಕೆ ಪಾಲಕ್ಕಾಡು ಗ್ಯಾಪ್ ಕೇವಲ ಪರ್ವತಗಳ ಕಥೆ, ಮಾರುತಗಳ ಕಥೆ ಮತ್ತು ಮಳೆಯ ಕಥೆಯಷ್ಟೇ ಅಲ್ಲದೆ ಜೀವವಿಕಾಸದ ಕಥೆಯಲ್ಲೂ ಪಾತ್ರ ವಹಿಸಿದೆ!
ಇದರ ಮತ್ತೊಂದು ವಿಚಿತ್ರ ವಿಷಯವೆಂದರೆ, ಅಪಾಯ ಎದುರಾದಾಗ ಇದು ಬಸವನಹುಳುವಿನಂತೆ ಚಿಪ್ಪಿನೊಳಗೆ ಅಡಗಿಕೊಳ್ಳದೆ, ಬಿಳಿ ನೊರೆಯನ್ನು ಹೊರಸೂಸುತ್ತದೆ. ಮತ್ತು, ಇದು ಬೇರೆ ಬಸವನಹುಳುಗಳಂತೆ ದಪ್ಪ ಲೋಳೆಯನ್ನೂ ಹೊರಬಿಡುವುದಿಲ್ಲ.
Indrella ampulla ಹೆಚ್ಚಾಗಿ ಮಳೆಗಾಲದ ಸಮಯದಲ್ಲಿ ಅಥವಾ ಮೊದಲ ಮಳೆಯ ನಂತರ ಸಕ್ರಿಯವಾಗಿರುತ್ತದೆ. ಕೊಳೆಯುತ್ತಿರುವ ಎಲೆಗಳು, ಶಿಲೀಂಧ್ರಗಳು, ಪಾಚಿಗಳು ಮತ್ತು ಇತರ ಸಾವಯವ ಪದಾರ್ಥಗಳನ್ನು ಆಹಾರವಾಗಿ ಸೇವಿಸುತ್ತದೆ. ಈ ರೀತಿ ಕಾಡಿನ ನೆಲದಲ್ಲಿ ಪೋಷಕಾಂಶಗಳ ವಿಘಟನೆಯಲ್ಲಿ ಇಂತಹ ಜೀವಿಗಳು ಪ್ರಮುಖ ಪಾತ್ರ ವಹಿಸುತ್ತವೆ.
ನಾವು ಸಾಮಾನ್ಯವಾಗಿ ಕಾಡಿನ ಬಗ್ಗೆ ಮಾತನಾಡುವಾಗ ಹುಲಿ, ಆನೆ, ಚಿರತೆ ಅಥವಾ ಹಾರ್ನ್‌ಬಿಲ್‌ಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಪಶ್ಚಿಮ ಘಟ್ಟಗಳ ಕಥೆ ಅಷ್ಟಕ್ಕೆ ಸೀಮಿತವಲ್ಲ. ನೆಲದ ಮೇಲೆ ಬಿದ್ದ ತರಗೆಲೆಗಳ ನಡುವೆ ನಿಧಾನವಾಗಿ ಸಾಗುತ್ತಿರುವ ಒಂದು ಬಸವನಹುಳುವಿನ ಜೊತೆ ಈ ಪರ್ವತಗಳ ಲಕ್ಷಾಂತರ ವರ್ಷಗಳ ಇತಿಹಾಸ ತಳುಕು ಹಾಕಿಕೊಂಡಿದೆ.
Indrella ampulla ನಿಧಾನವಾಗಿ ಚಲಿಸುವ, ಹೆಚ್ಚು ಗಮನಕ್ಕೆ ಬಾರದ ಒಂದು ಜೀವಿ.ಆದರೆ ಅದರ ಕಥೆ ಮಾತ್ರ ಪಶ್ಚಿಮ ಘಟ್ಟಗಳಷ್ಟೇ ಹಳೆಯದು. ಕಾಡಿನಲ್ಲಿ ಇಂತಹ ಜೀವಿಗಳನ್ನು ನೋಡಿದಾಗ ಕುವೆಂಪು ಅವರ ಈ ಸಾಲುಗಳು ನೆನಪಾಗುತ್ತದೆ: "ಇಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ"


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ