ವಿಷಯಕ್ಕೆ ಹೋಗಿ

ನಾನು ಕಂಡ ಕೆಲವು ಆರ್ಕಿಡ್‌ಗಳು

ಹೆಚ್ಚಿನ ವಿವರಗಳು ದೊರೆಯದ, ಪಶ್ಚಿಮ ಘಟ್ಟಗಳ ಒಂದು ಅನಾಮಧೇಯ ಆರ್ಕಿಡ್ ಪ್ರಭೇದ

ಆರ್ಕಿಡ್‌ಗಳ ಬಗ್ಗೆ ನನಗೆ ಯಾವಾಗಲೂ ಆಶ್ಚರ್ಯವಾಗುವ ವಿಷಯವೆಂದರೆ, ಅವುಗಳ ಜೀವನಶೈಲಿಯ ವೈವಿಧ್ಯ. ಆರ್ಕಿಡ್ ಎಂದರೆ ಮರದ ಮೇಲೆ ಬೆಳೆಯುವ ಗಿಡಗಳೆಂದು ನಾನು ಮೊದಲಿಗೆ ಭಾವಿಸಿದ್ದೆ. ನಿಜಕ್ಕೂ ಪಶ್ಚಿಮ ಘಟ್ಟಗಳ ಅನೇಕ ಆರ್ಕಿಡ್‌ಗಳು ಮರಗಳ ಮೇಲೆಯೇ ಬೆಳೆಯುತ್ತವೆ. ಆದರೆ ಅವು ಪರಾವಲಂಬಿಗಳಲ್ಲ. ಮರವನ್ನು ಕೇವಲ ಆಸರೆಯಾಗಿ ಬಳಸುತ್ತವೆ ಅಷ್ಟೇ.

ಇಷ್ಟು ವರ್ಷಗಳಿಂದ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಓಡಾಡುತ್ತಿದ್ದರೂ, ನಾನು ನೋಡಿರುವ ಆರ್ಕಿಡ್‌ಗಳ ಸಂಖ್ಯೆ ತುಂಬಾ ಕಡಿಮೆ. ಅವು ಇಲ್ಲವೆಂದಲ್ಲ. ಆದರೆ ಅವು ತಮ್ಮನ್ನು ತಾವು ಸುಲಭವಾಗಿ ತೋರಿಸಿಕೊಳ್ಳುವುದಿಲ್ಲ. ಮರದ ತೊಗಟೆಗಳ ಮೇಲೆ ಹಚ್ಚಹಸಿರಾದ ಪಾಚಿ ಮತ್ತು ಲೈಕೆನ್‌ಗಳ ನಡುವೆ ಎಲ್ಲೋ ಅಡಗಿಕೊಂಡಿರುತ್ತವೆ. ಹೂ ಬಿಡದ ಸಮಯದಲ್ಲಿ ಅವುಗಳನ್ನು ಗಮನಿಸುವುದೇ ಕಷ್ಟ. ಸಾಮಾನ್ಯವಾಗಿ ನೋಡಿದರೆ ಮರದ ಮೇಲಿನ ಇನ್ನೊಂದು ಸಣ್ಣ ಗಿಡದಂತೆ ಕಾಣುತ್ತವೆ. ಹೀಗಾಗಿ ಎಷ್ಟೋ ಸಲ ಅವುಗಳ ಇರುವಿಕೆಯ ಅರಿವೇ ಇಲ್ಲದೆ ನಾನು ಅವುಗಳ ಪಕ್ಕದಿಂದಲೇ ನಡೆದು ಹೋಗಿರಬಹುದು.

ನನಗೆ ಸ್ಪಷ್ಟವಾಗಿ ನೆನಪಿರುವ ಕೆಲವು ಆರ್ಕಿಡ್‌ಗಳಿವೆ.

BRT ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಮ್ಮೆ ಮರದ ತೊಗಟೆಯ ಮೇಲೆ ಬೆಳೆಯುತ್ತಿದ್ದ ಒಂದು ಸಣ್ಣ ಆರ್ಕಿಡ್ ಕಂಡಿತ್ತು. ಆಗ ಅದರ ಹೆಸರು ಗೊತ್ತಿರಲಿಲ್ಲ. ನಂತರ ಚಿತ್ರಗಳನ್ನು ಪರಿಶೀಲಿಸಿದಾಗ ಅದು Porpax braccata ಎಂದು ತಿಳಿಯಿತು. ಹೂಬಿಟ್ಟ ಸಮಯವನ್ನು ಹೊರತುಪಡಿಸಿದರೆ, ಅದು ಮರದ ತೊಗಟೆಯ ಮೇಲಿನ ಇನ್ನೊಂದು ಪಾಚಿಯ ಗುಂಪಿನಂತೆ ಕಾಣುತ್ತದೆ. ಆಹಾರ ಅಥವಾ ನೀರಿಗಾಗಿ ಮರವನ್ನು ಅವಲಂಬಿಸುವುದಿಲ್ಲ. ಈ ಆರ್ಕಿಡ್ ತುಂಬಾ ಚಿಕ್ಕದು. ಹೂವಿಲ್ಲದ ಸಮಯದಲ್ಲಿ ಮರದ ತೊಗಟೆಯ ಮೇಲಿನ ಪಾಚಿ, ಕಲ್ಲುಹೂವು ಅಥವಾ ಬೇರೆ ಸಸ್ಯಗಳ ನಡುವೆ ಸಂಪೂರ್ಣ ಬೆರೆತುಹೋಗಿರುತ್ತದೆ. ವರ್ಷದ ಬಹುಭಾಗ ಇದು ಅಜ್ಞಾತವಾಗಿ ಬದುಕುತ್ತದೆ. ಆದರೆ ಹೂಬಿಟ್ಟಾಗ ಅದರ ಸಣ್ಣ ಬಿಳಿ ಅಥವಾ ಹಸಿರು-ಬಿಳಿ ಹೂಗಳು ಮರದ ತೊಗಟೆಯ ಮೇಲೆ ಏಕಾಏಕಿ ಹೊಳೆಯುವಂತೆ ಕಾಣುತ್ತವೆ. ಈ ಆರ್ಕಿಡ್‌ ಸಾಮಾನ್ಯವಾಗಿ ತೇವಾಂಶಯುಕ್ತ, ಹೆಚ್ಚು ಅಡಚಣೆಯಾಗದ ಕಾಡುಗಳಲ್ಲಿ ಕಂಡುಬರುತ್ತವೆ. ಆದ್ದರಿಂದ ಅವುಗಳ ಇರುವಿಕೆ ಕಾಡಿನ ಆರೋಗ್ಯದ ಸೂಚಕವಾಗಿಯೂ ಪರಿಗಣಿಸಲಾಗುತ್ತದೆ.

Porpax braccata - ಹೂಬಿಟ್ಟ ಸಮಯವನ್ನು ಹೊರತುಪಡಿಸಿದರೆ, ಅದು ಮರದ ತೊಗಟೆಯ ಮೇಲಿನ ಇನ್ನೊಂದು ಪಾಚಿಯ ಗುಂಪಿನಂತೆ ಕಾಣುತ್ತದೆ.

ಸುಮಾರು ಎರಡೂವರೆ ವರ್ಷಗಳ ಹಿಂದೆ ನನ್ನ ಜಾಗದಲ್ಲೇ Cleisostoma tenuifolium ಎನ್ನುವ ಆರ್ಕಿಡ್ ಪ್ರಭೇದ ಹೂಬಿಟ್ಟಿರುವುದನ್ನು ನೋಡಿದ್ದೆ. ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾಗಿರುವ ಈ ಆರ್ಕಿಡ್ ಸಾಮಾನ್ಯ ದಿನಗಳಲ್ಲಿ ಮರದ ತೊಗಟೆಯ ಮೇಲಿನ ಇನ್ನೊಂದು ಸಣ್ಣ ಗಿಡದಂತೆ ಕಾಣುತ್ತದೆ. ಆದರೆ ಹೂಬಿಟ್ಟಾಗ ಅದರ ರೂಪವೇ ಬದಲಾಗುತ್ತದೆ. ಮರವನ್ನು ಕೇವಲ ಆಸರೆಯಾಗಿ ಬಳಸಿಕೊಂಡು ಮಳೆ, ಗಾಳಿ ಮತ್ತು ತೊಗಟೆಯ ಮೇಲೆ ಸಂಗ್ರಹವಾಗುವ ಸಾವಯವ ಪದಾರ್ಥಗಳಿಂದ ತನಗೆ ಬೇಕಾದ ಪೋಷಕಾಂಶಗಳನ್ನು ಪಡೆಯುತ್ತದೆ. ಇದರ ಉದ್ದವಾದ, ತೆಳ್ಳಗಿನ ಎಲೆಗಳೇ ಇದರ ಹೆಸರಿಗೂ ಕಾರಣ. tenuifolium ಎಂದರೆ ‘ತೆಳ್ಳಗಿನ ಎಲೆಗಳನ್ನು ಹೊಂದಿರುವುದು’ ಎಂಬ ಅರ್ಥ. ಹೂಬಿಡುವ ಸಮಯದಲ್ಲಿ ಇದರ ಸಣ್ಣ ಹೂಗಳು ಮರದ ತೊಗಟೆಯ ಹಿನ್ನೆಲೆಯ ಮೇಲೆ ಎದ್ದು ಕಾಣುತ್ತವೆ. Cleisostoma tenuifolium ಸಾಮಾನ್ಯವಾಗಿ ಉತ್ತಮ ತೇವಾಂಶ ಹೊಂದಿರುವ ಕಾಡುಗಳಲ್ಲಿ ಕಂಡುಬರುತ್ತದೆ. ಪಶ್ಚಿಮ ಘಟ್ಟಗಳ ಸ್ಥಳೀಯ ಪ್ರಭೇದವಾಗಿರುವುದರಿಂದ ಇವು ಪಶ್ಚಿಮ ಘಟ್ಟಗಳ ವಿಶಿಷ್ಟ ಜೀವವೈವಿಧ್ಯತೆಯ ಮತ್ತೊಂದು ಕುರುಹು. ಕೆಲವೇ ದಿನಗಳ ಕಾಲ ಹೂಬಿಟ್ಟು, ಮತ್ತೆ ಕಾಡಿನ ಹಿನ್ನೆಲೆಯಲ್ಲಿ ಕರಗಿಹೋಗುತ್ತದೆ.

Cleisostoma tenuifolium - ಪಶ್ಚಿಮ ಘಟ್ಟ ಪರ್ವತಶ್ರೇಣಿಯ ವಿಶಿಷ್ಟ ಜೀವವೈವಿಧ್ಯತೆಯ ಮತ್ತೊಂದು ಕುರುಹು


ಎಲ್ಲಾ ಆರ್ಕಿಡ್‌ಗಳೂ ಮರದಮೇಲೆ ಬೆಳೆಯುತ್ತವೆ ಎಂದಲ್ಲ. ಹಲವಾರು ಪ್ರಭೇದಗಳು ನೆಲದ ಮೇಲೆಯೂ ಬೆಳೆಯುತ್ತವೆ. ಪ್ರಬೇಧದಿಂದ ಪ್ರಬೇಧಕ್ಕೆ ವಿವಿಧ ಕಾಲದಲ್ಲಿ ಕಾಡಿನ ನೆಲದ ಮೇಲೆ ಹೂಬಿಟ್ಟಿರುವ ಆರ್ಕಿಡ್‌ಗಳನ್ನು ನೋಡಬಹುದು.

ವಾಲ್ಪರೈನಲ್ಲಿ ನಾನು ನೋಡಿದ Dienia ophrydis ನೆಲದ ಮೇಲೆ ಬೆಳೆಯುವ ಆರ್ಕಿಡ್ ಪ್ರಭೇದ. ಮಳೆಗಾಲದಲ್ಲಿ ಅಥವಾ ನಂತರ ಕಾಡಿನ ನೆಲದ ಮೇಲೆ ಹೂಬಿಡುವ ಈ ಆರ್ಕಿಡ್‌ ಬಹಳ ಆಕರ್ಷಕವಾಗಿ ಕಾಣುತ್ತದೆ. ಉದ್ದವಾದ ದಂಟಿನ ಮೇಲೆ ಸಾಲಾಗಿ ಜೋಡಿಸಲ್ಪಟ್ಟಿರುವ ಸಣ್ಣ ಹೂಗಳು ಕಾಡಿನ ನೆಲದಲ್ಲಿಯೂ ಆರ್ಕಿಡ್‌ಗಳ ಪ್ರಪಂಚ ಎಷ್ಟೊಂದು ವೈವಿಧ್ಯಮಯವಾಗಿದೆ ಎಂಬುದನ್ನು ನೆನಪಿಸುತ್ತವೆ. ಆದರೆ ವರ್ಷದ ಬಹುಭಾಗ ಈ ಸಸ್ಯ ಗಮನಕ್ಕೆ ಬರುವುದಿಲ್ಲ. ಹೂವಿಲ್ಲದ ಸಮಯದಲ್ಲಿ ಅದು ಸುತ್ತಲಿನ ಇತರ ಗಿಡಗಳ ನಡುವೆ ಬೆರೆತುಹೋಗಿರುತ್ತದೆ. ಸರಿಯಾದ ಸಮಯದಲ್ಲಿ ಅಲ್ಲಿದ್ದರೆ ಮಾತ್ರ ಅದರ ಹೂಗಳನ್ನು ನೋಡುವ ಅವಕಾಶ ಸಿಗುತ್ತದೆ. Dienia ophrydis ಪಶ್ಚಿಮ ಘಟ್ಟಗಳು ಮತ್ತು ದಕ್ಷಿಣ ಏಷ್ಯಾದ ಕೆಲವು ಭಾಗಗಳಲ್ಲಿ ಕಂಡುಬರುವ ಆರ್ಕಿಡ್. ತೇವಾಂಶಯುಕ್ತ ಕಾಡುಗಳಲ್ಲಿ ಮತ್ತು ಶೋಲಾ ಅಂಚುಗಳಲ್ಲಿ ಬೆಳೆಯುವ ಈ ಸಸ್ಯ, ಕಾಡಿನ ನೆಲವೂ ಮರದ ಮೇಲಿನ ಕೊಂಬೆಗಳಷ್ಟೇ ಜೀವವೈವಿಧ್ಯದಿಂದ ಸಮೃದ್ಧವಾಗಿದೆ ಎಂಬುದನ್ನು ನೆನಪಿಸುತ್ತದೆ.

Dienia ophrydi- ಒಂದು ನೆಲವಾಸಿ ಆರ್ಕೀಡ್

Satyrium nepalense ಮತ್ತೊಂದು ನೆಲದ ಮೇಲೆಯೇ ಬೆಳೆಯುವ ಒಂದು ಆರ್ಕಿಡ್. ಮಳೆಗಾಲದ ನಂತರ ಹುಲ್ಲುಗಾವಲುಗಳು ಮತ್ತು ಶೋಲಾ ಕಾಡುಗಳ ಅಂಚುಗಳಲ್ಲಿ ಹೂಬಿಡುವ ಈ ಸಸ್ಯ ದೂರದಿಂದಲೇ ಕಣ್ಣಿಗೆ ಬೀಳುತ್ತದೆ. ಉದ್ದವಾದ ದಂಟಿನ ಮೇಲೆ ದಟ್ಟವಾಗಿ ಜೋಡಿಸಲ್ಪಟ್ಟಿರುವ ಗುಲಾಬಿ ಅಥವಾ ನೇರಳೆ ಬಣ್ಣದ ಹೂಗಳು ಸುತ್ತಲಿನ ಹಸಿರಿನ ನಡುವೆ ವಿಶಿಷ್ಟವಾಗಿ ಕಾಣುತ್ತವೆ. ಹೂಬಿಟ್ಟ ಸಮಯದಲ್ಲಿ ತನ್ನ ಚೆಲುವನ್ನು ಸ್ಪಷ್ಟವಾಗಿ ಸಾರುತ್ತದೆ. ವರ್ಷದ ಬಹುಭಾಗ ಇದು ನೆಲದಡಿಯಲ್ಲಿ ಅಥವಾ ಎಲೆಗಳ ನಡುವೆ ಗಮನಕ್ಕೆ ಬಾರದೆ ಬದುಕುತ್ತದೆ. Satyrium nepalense ಪಶ್ಚಿಮ ಘಟ್ಟಗಳು, ಶ್ರೀಲಂಕಾ ಮತ್ತು ಹಿಮಾಲಯದವರೆಗೂ ವ್ಯಾಪಿಸಿರುವ ಪ್ರಭೇದ.

Satyrium nepalense - ನೆಲವಾಸಿ ಆರ್ಕೀಡ್. ಪಶ್ಚಿಮ ಘಟ್ಟಗಳ ಎತ್ತರದ ಸ್ಥಳಗಳಲ್ಲಿ, ಶೋಲಾ ಹುಲ್ಲುಗಾವಲುಗಳ ಅಂಚುಗಳಲ್ಲಿ ಕಂಡುಬರುತ್ತದೆ.


ಆದರೆ ಆರ್ಕಿಡ್‌ಗಳು ಕೇವಲ ಪಶ್ಚಿಮ ಘಟ್ಟಗಳ ಮಳೆಕಾಡುಗಳಲ್ಲಿ ಮಾತ್ರ ಕಂಡುಬರುವುದಿಲ್ಲ. ಬೆಂಗಳೂರಿನ ತುರಹಳ್ಳಿಯ ಸಮೀಪವೂ ಒಮ್ಮೆ ಒಂದು ಆರ್ಕಿಡ್ ನೋಡಿದ್ದೆ. ಅದು Habenaria roxburghii ಎಂಬ ನೆಲವಾಸಿ ಆರ್ಕಿಡ್. ಮಳೆಗಾಲದ ನಂತರ ಹುಲ್ಲುಗಾವಲಿನ ನಡುವೆ ಕಾಣಿಸಿಕೊಳ್ಳುವ ಈ ಸಸ್ಯ, ನೆಲದಡಿಯ ಗೆಡ್ಡೆಯಿಂದ (tuber) ಪ್ರತಿ ವರ್ಷ ಹೊಸದಾಗಿ ಬೆಳೆಯುತ್ತದೆ. ಕಾಡಿನ ದಟ್ಟ ನೆರಳಿಗಿಂತ ತೆರವಾದ ಹುಲ್ಲುಗಾವಲುಗಳು, ಗುಡ್ಡದ ಇಳಿಜಾರುಗಳು ಮತ್ತು ಮಳೆಗಾಲದಲ್ಲಿ ಹಸಿರಾಗುವ ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅದರ ಬಿಳಿ ಹೂಗಳನ್ನು ಹತ್ತಿರದಿಂದ ನೋಡಿದರೆ, ಸಣ್ಣ ಬಿಳಿ ಪಕ್ಷಿಗಳು ಸಾಲಾಗಿ ಕುಳಿತಿರುವಂತೆ ಕಾಣುತ್ತದೆ. ಹೂವಿನ ಹಿಂಭಾಗದಲ್ಲಿರುವ ಮಕರಂದ ತುಂಬಿದ ಭಾಗ ಉದ್ದವಾದ ಕೊಳವೆ ತಳ‌ಭಾಗದಲ್ಲಿದ್ದು, ಉದ್ದವಾದ ಪ್ರೊಬೋಸಿಸ್ ಹೊಂದಿರುವ ಪತಂಗಗಳು (moths) ಮಾತ್ರ ಅದನ್ನು ತಲುಪಬಲ್ಲವು. ಹೀಗಾಗಿ ನಿರ್ದಿಷ್ಟ ಕೀಟಗಳೊಂದಿಗೆ ಇದರ ನಿಕಟ ಸಂಬಂಧವಿದೆ.  ಹೂಬಿಡುವ ಅವಧಿ ಬಹಳ ಚಿಕ್ಕದು.

Habenaria roxburghii - ಬೆಂಗಳೂರಿನ ಸಮೀಪ ನೋಡಿದ ನೆಲವಾಸಿ ಆರ್ಕಿಡ್‌ 


ಪಶ್ಚಿಮ ಘಟ್ಟಗಳಲ್ಲಿ ಎಷ್ಟು ಬಗೆಯ ಆರ್ಕಿಡ್‌ಗಳಿರಬಹುದು? ನಾನು ಎಷ್ಟನ್ನು ನೋಡಿರಬಹುದು? ಮತ್ತು ಎಷ್ಟನ್ನು ನೋಡದೆ ಬಿಟ್ಟಿರಬಹುದು? ಯೋಚಿಸಿದರೆ ಆಶ್ಚರ್ಯವಾಗುತ್ತದೆ. ಕಾಡಿನಲ್ಲಿ ಅನೇಕ ಜೀವಿಗಳು ನಮ್ಮ ಗಮನ ಸೆಳೆಯುತ್ತವೆ. ಪಕ್ಷಿಗಳ ಕಲರವ, ಚಿಟ್ಟೆಗಳ ಬಣ್ಣ, ಮತ್ತು ಸಸ್ತನಿಗಳು ಚಲಿಸುವುದರಿಂದ ಅವುಗಳ ಇರವು ನಮ್ಮ ಗಮನಕ್ಕೆ ಬರುತ್ತವೆ. ಬೇರೆ ಕೆಲವು ಮರ-ಗಿಡಗಳೂ ತಮ್ಮ ಕೆಲವು ವಿಶಿಷ್ಟತೆಯಿಂದ ನಮ್ಮ ಗಮನ ಸೆಳೆಯುತ್ತವೆ.

ಆದರೆ ಆರ್ಕಿಡ್‌ಗಳು ಹಾಗಲ್ಲ. ವರ್ಷಗಟ್ಟಲೇ ಅವು ಅರಿವಿಗೆ ಬಾರದಂತಿರುತ್ತವೆ. ಇತರ ಚಿಕ್ಕ ಪುಟ್ಟ ಸಸ್ಯಗಳೊಂದಿಗೆ ಬೆರೆತು ಹೋಗಿರುತ್ತವೆ. ಹೂ ಬಿಡುವ ಸಮಯ ಬಂದಾಗ ಮಾತ್ರ ಅದ್ಭುತ ಸೌಂದರ್ಯದಿಂದ ಕಂಗೊಳಿಸುತ್ತವೆ. ಹೂ ಬಿಡುವ ಕಾಲದ ನಂತರ ಮತ್ತೆ ಕಾಡಿನ ಹಿನ್ನೆಲೆಯಲ್ಲಿ ಕರಗಿಹೋಗುತ್ತವೆ.

ಈ ಕಾರಣಕ್ಕೆ ಅವುಗಳನ್ನು ಹುಡುಕಬೇಕಾಗುತ್ತದೆ, ಗಮನಿಸಬೇಕಾಗುತ್ತದೆ, ನೋಡಲು ಕಾಯಬೇಕಾಗುತ್ತದೆ. ಆದರೆ ಒಮ್ಮೆ ಹೂಬಿಟ್ಟಿರುವ ಆರ್ಕಿಡ್ ಕಣ್ಣಿಗೆ ಬಿದ್ದರೆ, ಅದು ಕಾಡು ಕೊಡುವ ಅತ್ಯಂತ ಸುಂದರ ಉಡುಗೊರೆಗಳಲ್ಲಿ ಒಂದೆಂದು ಅನಿಸುತ್ತದೆ. ಪಾಚಿ, ಕಲ್ಲುಹೂವು ಮತ್ತು ಮರದ ತೊಗಟೆಗಳ ನಡುವೆ ಅವೊತು ಕುಳಿತಿದ್ದ ಆ ಸಣ್ಣ ಗಿಡಗಳು ಹೂಬಿಟ್ಟಾಗ, ಇಡೀ ಕಾಡು ಏಕಾಏಕಿ ಇನ್ನಷ್ಟು ಸುಂದರವಾಗಿ ಕಾಣಲು ಆರಂಭಿಸುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.