ವಿಷಯಕ್ಕೆ ಹೋಗಿ

ಡಿಜಿಟಲ್ ಕಾಲದ ಪಕ್ಷಿವೀಕ್ಷಣೆ

ಕಳೆದ ಮೇ ತಿಂಗಳ ಒಂದು ರಾತ್ರಿ ಸುಮಾರು ಹತ್ತು ಗಂಟೆ ಸಮಯದಲ್ಲಿ ಮಲಗಲು ಸಿದ್ಧತೆ ನಡೆಸಿದ್ದೆ. ಆಗ ಯಾವುದೋ ಅಪರಿಚಿತ ಪ್ರಾಣಿಯೋ ಪಕ್ಷಿಯೋ ಏನೋ ಒಂದು ಹೊರಗಡೆ ಕೂಗುತ್ತಿರುವ ಸದ್ದಾಯಿತು. ಟಾರ್ಚೊಂದನ್ನು ಹಿಡಿದು ಹೊರಗಡೆ ಹೊರಟೆ. ಪಕ್ಕದ ತೋಟದಿಂದ ಸದ್ದು ಬರುತ್ತಿದೆ ಎನ್ನುವುದೊಂದನ್ನು ಉಳಿದು ಮತ್ತೇನು ತಿಳಿಯಲಿಲ್ಲ. ನನ್ನ ಬಳಿಯಿದ್ದ ಟಾರ್ಚ್‌ನಿಂದ ಬರುವ ಬೆಳಕು ಆ ಕಗ್ಗತ್ತಲಲ್ಲಿ ಯಾವುದಕ್ಕೂ ಸಾಲುತ್ತಿರಲಿಲ್ಲ. ಆದರೂ ಸದ್ದು ಬರುತ್ತಿರುವ ದಿಕ್ಕಿನೆಡೆಗೆ ಬೆಳಕು ಬಿಟ್ಟು ನೋಡಿದೆ. ಮರಗಳಿಗೆ ಬಲೆಯಂತೆ ಹರಡಿಕೊಂಡಿದ್ದ ಬಳ್ಳಿಗಳ ನಡುವೆ ಏನೂ ಕಾಣಲಿಲ್ಲ. ಕೊನೆಯದಾಗಿ ನನ್ನ ಬಳಿಯಿದ್ದ ಮೊಬೈಲ್‌ನಲ್ಲಿ ಬರುತ್ತಿರುವ ಸದ್ದನ್ನು ರೆಕಾರ್ಡ್ ಮಾಡಿದೆ. ನಂತರ ಒಳಗೆ ಬಂದು ಆ ಸದ್ದು ಯಾವುದು ಇರಬಹುದೆಂದು ಅಂತರ್ಜಾಲದಲ್ಲಿ ಹುಡುಕುತ್ತಾ ಕುಳಿತೆ. ನನಗಿದ್ದ ದೊಡ್ಡ ಸಮಸ್ಯೆಯೆಂದರೆ ಆ ಸದ್ದು ಪ್ರಾಣಿಯದ್ದೋ, ಪಕ್ಷಿಯದ್ದೋ, ಕೀಟದ್ದೋ ಎನ್ನುವುದೇ ತಿಳಿದಿರಲಿಲ್ಲ. ಹೀಗಾಗಿ ಹುಡುಕಾಟ ವ್ಯರ್ಥ ಎನ್ನಿಸಿತು. ಆಗ ನನಗೆ ನೆನಪಾದದ್ದು ನನ್ನ ಮೊಬೈಲ್‌ನಲ್ಲಿದ್ದ BirdNet ಎನ್ನುವ ಆಂಡ್ರಾಯ್ಡ್ ಅಪ್ಲಿಕೇಶನ್. ಈ ಅಪ್ಲಿಕೇಶನ್‌ನ ವಿಶೇಷವೆಂದರೆ ಅದರಲ್ಲಿ ನಾವು ರೆಕಾರ್ಡ್ ಮಾಡಿದ ಸದ್ದಿನ ತುಣುಕನ್ನು ಅಪ್ಲೋಡ್ ಮಾಡಿ, analyse ಆಯ್ಕೆಯನ್ನು ಒತ್ತಿದರೆ ಅದು ಯಾವ ಪಕ್ಷಿಯಿರಬಹುದು ಎಂದು ಅಂದಾಜು ಮಾಡಿ ಒಂದು ಪಟ್ಟಿ ತೋರಿಸುತ್ತದೆ. ನನಗೆ ಆ ಸದ್ದು ಪಕ್ಷಿಯದ್ದೇ ಎಂದು ಖಚಿತವಿಲ್ಲದಿದ್ದರೂ ಪ್ರಯತ್ನಿಸಿದೆ.

ಉತ್ತರ ಬಂದಾಗ ನನಗೆ ಆಶ್ಚರ್ಯವಾಯಿತು. ಅದು Oriental Bay Owl ಎನ್ನುವ ಪಕ್ಷಿಯದ್ದಾಗಿತ್ತು. Merlin ಎನ್ನುವ, ಪಕ್ಷಿ ಕೈಪಿಡಿಯಂತೆಯೇ ಇರುವ ಮತ್ತೊಂದು ಅಪ್ಲಿಕೇಶನ್ ಮೂಲಕ ಆ ಪಕ್ಷಿಯ ವಿವರಗಳನ್ನು ಓದುತ್ತಾ ಹೋದೆ. ಪಕ್ಷಿ ಹರಡಿಕೊಂಡಿರಬಹುದಾದ ನಕ್ಷೆಯನ್ನು ನೋಡಿದ ಮೇಲೆ ಆ ಪಕ್ಷಿ ಇರಲಾರದು ಎನ್ನಿಸಿತು. Merlin ಅಪ್ಲಿಕೇಶನ್ನಿನ ಮತ್ತೊಂದು ವಿಶೇಷವೆಂದರೆ ಇದು ಪಕ್ಷಿಯ ಛಾಯಾಚಿತ್ರ, ಆವಾಸ ಸ್ಥಾನದ ನಕ್ಷೆ ಅಷ್ಟೇ ಅಲ್ಲದೆ ಆ ಪಕ್ಷಿಯ ಕೂಗುವ/ಹಾಡುವ ಬಗೆಯನ್ನೂ ಒಳಗೊಂಡಿದೆ. ಅದರಲ್ಲಿ Oriental Bay Owlನ ಕೂಗುವ ಬಗೆಯನ್ನು ಕೇಳಿದಾಗ ಖಂಡಿತವಾಗಿಯೂ ಆ ಪಕ್ಷಿ ಅಲ್ಲ ಎನ್ನುವುದು ಖಚಿತವಾಯಿತು. ಆದರೆ ನಾನು ರೆಕಾರ್ಡ್ ಮಾಡಿದ ಸದ್ದಿಗೆ ಹತ್ತಿರವಾಗಿತ್ತು. ಹೀಗಾಗಿ ಅದು ಯಾವುದೋ ಪಕ್ಷಿಯದ್ದೇ ಕೂಗು ಇರಬಹುದೆಂದು, ಅದರಲ್ಲೂ ಗೂಬೆ ಜಾತಿಗೆ ಸೇರಿದ ಪಕ್ಷಿಯಿರಬಹುದೆಂದು Merlin ಅಪ್ಲಿಕೇಶನ್ನಿನಲ್ಲಿ ಮತ್ತೆಲ್ಲಾ ಗೂಬೆಗಳ ಕೂಗನ್ನೂ ಹುಡುಕುತ್ತಾ ಹೊರಟೆ. ಆಗ ನನಗೆ ಕಂಡದ್ದು Sri Lanka Bay Owl ಎನ್ನುವ ಪಕ್ಷಿ. ಆ ಪಕ್ಷಿಯ ಕೂಗೂ ಸರಿಯಾಗಿ ನಾನು ಮನೆಯ ಹತ್ತಿರ ಕೇಳಿದ ಕೂಗಿನಂತೆಯೇ ಇತ್ತು. ಖಚಿತವಾಗಿ ನಾನು ಕೇಳಿದ್ದು Sri Lanka Bay Owl ಪಕ್ಷಿಯ ಕೂಗು. ಆ ಪಕ್ಷಿಯ ಆವಾಸ ಪಶ್ಚಿಮ ಘಟ್ಟಗಳ ಕೆಲವು ಭಾಗದಲ್ಲಿ ಮತ್ತು ಶ್ರೀಲಂಕಾದಲ್ಲಿ ಮಾತ್ರ ಇತ್ತು. ಕೇರಳ ರಾಜ್ಯದಿಂದ ಕೆಲವು ದಾಖಲೆಗಳು ಮತ್ತು ಕರ್ನಾಟಕದಿಂದ ಅತಿ ಕಡಿಮೆ ದಾಖಲೆಗಳು ಆಗಲೇ Merlin ಅಪ್ಲಿಕೇಶನ್‌ನಲ್ಲಿ ತೋರಿಸುತಿತ್ತು. ಒಂದು ಅಪರೂಪದ ಪಕ್ಷಿಯ ಧ್ವನಿಯನ್ನು ಕೇಳಿದ್ದೆ!

ಇಂದು ಕೈಯಲ್ಲಿನ ಮೊಬೈಲ್ ಮೂಲಕ ಇಡೀ ವಿಶ್ವವೇ ನಮ್ಮ ಬೆರಳ ತುದಿಗೆ ಬಂದಿದೆ. ಇಂತಹ ಸಮಯದಲ್ಲಿ ನಮಗೇನು ಬೇಕು ಎನ್ನುವ ಖಚಿತತೆ ಇದ್ದರೆ ಒಳ್ಳೆಯದು. ಇಲ್ಲವಾದಲ್ಲಿ ಸಂತೆಯಲ್ಲಿ ದಾರಿತಪ್ಪಿದವರಂತೆ ಸುಮ್ಮನೆ ಅಲೆಯಬೇಕು. ಪಕ್ಷಿವೀಕ್ಷಣೆ ಸಂಬಂಧಪಟ್ಟ ಹಲವಾರು ಜಾಲತಾಣಗಳು ಇಂದು ಲಭ್ಯವಿದೆ. ಅದರಲ್ಲಿ ಈಗ ಹೇಳ ಹೊರಟಿರುವುದು eBird ಎನ್ನುವ ಜಾಲತಾಣದ ಬಗ್ಗೆ. eBird ಜಾಲತಾಣವಷ್ಟೇ ಅಲ್ಲ, ಅವರೇ ಅಭಿವೃದ್ದಿ ಪಡಿಸಿರುವ ಹಲವು ಮೊಬೈಲ್ ಅಪ್ಲಿಕೇಶನ್‌ಗಳೂ ಇಂದು ಪ್ರಪಂಚದಾದ್ಯಂತ ಪಕ್ಷಿವೀಕ್ಷಕರಿಗೆ ಅನುಕೂಲವಾಗುತ್ತಿದೆ. ಇದು ಹೇಗೆ ಕೆಲಸ ಮಾಡುತ್ತದೆ ನೋಡೋಣ.

ನೀವು ಪಕ್ಷಿವೀಕ್ಷಣೆಗೆ ಹೊಸಬರಾಗಿದ್ದು, ಯಾವುದಾದರೊಂದು ಪಕ್ಷಿಯನ್ನು ನೋಡುತ್ತೀರೆಂದು ಭಾವಿಸೋಣ. ಆ ಪಕ್ಷಿ ಯಾವುದೆಂದು ಹೇಗೆ ಗುರುತಿಸುತ್ತೀರಿ? ಅದರ ದೇಹದ ಬೇರೆ ಬೇರೆ ಭಾಗಗಳ ಬಣ್ಣ, ಗಾತ್ರ, ಕೊಕ್ಕಿನ ಆಕಾರ, ಆವಾಸ ಸ್ಥಾನದ ವಿಧ, ಇವೆಲ್ಲವನ್ನು ನಾವು ಟಿಪ್ಪಣಿ ಮಾಡಿಕೊಳ್ಳಬೇಕು. ನಂತರ ಯಾವುದಾದರೊಂದು ಪಕ್ಷಿವೀಕ್ಷಣೆಗೆಂದೇ ಇರುವ ಕೈಪಿಡಿಯನ್ನು ನೋಡಿ ಆ ಪಕ್ಷಿಯನ್ನು ಗುರುತಿಸಬಹುದು. eBirdನವರ Merlin ಮೊಬೈಲ್ ಅಪ್ಲಿಕೇಶನ್ ಪಕ್ಷಿ ಕೈಪಿಡಿಯಂತೆಯೇ ಕೆಲಸ ಮಾಡುತ್ತದೆ. ನಾವು ಟಿಪ್ಪಣಿ ಮಾಡಿಕೊಂಡ ವಿವರಗಳನ್ನು ಇದರಲ್ಲಿ ನಮೂದಿಸುತ್ತಾ ಹೋದಂತೆ Merlin ಅಪ್ಲಿಕೇಶನ್ ಒಂದು ಸಂಭಾವ್ಯ ಪಟ್ಟಿಯನ್ನು ಕೊಡುತ್ತದೆ. ಈ ಪಟ್ಟಿಯನ್ನು ನೋಡಿ ನಾವು ನೋಡಿದ ಪಕ್ಷಿ ಯಾವುದೆಂದು ನೋಡಿ ಖಾತರಿ ಮಾಡಿಕೊಳ್ಳಬಹುದು. ಮತ್ತೊಂದು ವಿಧಾನವೆಂದರೆ ನಾವು ನೋಡಿದ ಪಕ್ಷಿಯ ಛಾಯಾಚಿತ್ರವನ್ನು ತೆಗೆದಿದ್ದರೆ ಅದನ್ನು Merlin ಅಪ್ಲಿಕೇಶನ್‌ಗೆ ಅಪ್ಲೋಡ್ ಮಾಡಿದರೆ, ಆಗಲೂ ಸಹ ಸಂಭಾವ್ಯ ಪಟ್ಟಿಯೊಂದು ಬರುತ್ತದೆ. ಅದರಿಂದಲೂ ಸಹಾ ನಾವು ನೋಡಿದ ಪಕ್ಷಿಯನ್ನು ಗುರುತಿಸಬಹದು. ಮೂರನೇ ವಿಧಾನವೆಂದರೆ ನಾನು ಮೊದಲು ಹೇಳಿದಂತೆ ಪಕ್ಷಿಯ ಕೂಗನ್ನು ಅಪ್ಲೋಡ್ ಮಾಡಿ ಆ ಪಕ್ಷಿ ಯಾವುದೆಂದು ಗುರುತಿಸುವುದು. ಕೊನೆಯ ಸೌಲಭ್ಯವು ಸದ್ಯಕ್ಕೆ ಉತ್ತರ ಅಮೇರಿಕಾದ ಪಕ್ಷಿಗಳಿಗೆ ಮಾತ್ರ ಇದೆ. eBirdನವರು ಹೇಳುವಂತೆ ಈ ಸೌಲಭ್ಯ ಪ್ರಪಂಚದ ಎಲ್ಲಾ ಭಾಗದ ಪಕ್ಷಿಗಳಿಗೂ ಶೀಘ್ರದಲ್ಲೇ ಬರಲಿದೆ. eBird ನವರ ಸಹಾಯದಿಂದ ಅಭಿವೃದ್ಧಿಯಾದ ಮತ್ತೊಂದು ಅಪ್ಲಿಕೇಶನ್ BirdNet ನಲ್ಲಿ ಪ್ರಪಂಚದ ಎಲ್ಲಾ ಪಕ್ಷಿಗಳ ಕೂಗನ್ನು ಗುರುತಿಸುವ ಸೌಲಭ್ಯ ಈಗಾಗಲೇ ಇದೆ. ಇದಲ್ಲದೇ ಪಕ್ಷಿ ಕೈಪಿಡಿಯ ಪುಸ್ತಕವನ್ನು ತಿರುವಿಹಾಕುತ್ತಾ ಹೋದಂತೆ Merlinನಲ್ಲೂ ಸಹಾ ಸುಮ್ಮನೆ ಪಕ್ಷಿಗಳನ್ನು ನೋಡುತ್ತಾ ಹೋಗಬಹುದು.

ನಾವು ಒಮ್ಮೆ ಪಕ್ಷಿವೀಕ್ಷಣೆಗೆ ಹೋದಾಗ ನಾವು ನೋಡಿದ ಎಲ್ಲಾ ಪ್ರಭೇದಗಳ ಪಕ್ಷಿಗಳ ಪಟ್ಟಿ ಮಾಡುವುದು ಅವಶ್ಯಕ. ಚೆಕ್‌ಲಿಸ್ಟ್ ನಾವು ಗುರುತಿಸಿದ ಪಕ್ಷಿಗಳು, ಒಂದು ನಿರ್ದಿಷ್ಟ ಸ್ಥಳದಲ್ಲಿ ಕಾಣಸಿಗುವ ಪಕ್ಷಿಗಳು ಇವುಗಳನ್ನು ಅಭ್ಯಾಸ ಮಾಡಲು ಅನುಕೂಲ. ಇದಕ್ಕಾಗಿಯೇ ಇರುವ ಮತ್ತೊಂದು ಅಪ್ಲಿಕೇಶನ್ eBird. ಇದರಲ್ಲಿ ನಾವು ಒಂದು ಬಾರಿಗೆ ಪಕ್ಷಿವೀಕ್ಷಣೆಗೆ ಹೋದಾಗ ನೋಡಿದ ಪಕ್ಷಿಗಳು, ಆ ಸಂದರ್ಭದಲ್ಲಿ ಅವುಗಳ ಚಟುವಟಿಕೆ, ಎಲ್ಲವನ್ನೂ ದಾಖಲಿಸಬಹುದು. ಇಂತಹ ಪಟ್ಟಿಯನ್ನು ನಾವು eBirdನ  ಕೇಂದ್ರ ಸರ್ವರ್‌ಗೆ ಸೇರಿಸಬಹುದು. ಈ ರೀತಿ ಒಂದು ಪಕ್ಷಿಯನ್ನು ಬೇರೆ ಬೇರೆ ಸ್ಥಳಗಳಲ್ಲಿ, ಬೇರೆ ಬೇರೆ ಸಮಯದಲ್ಲಿ, ಪಕ್ಷಿವೀಕ್ಷಕರು ದಾಖಲಿಸುತ್ತಾ ಹೋದಂತೆ, ಆ ಪಕ್ಷಿಯ ಆವಾಸ, ವಲಸೆ ಅಭ್ಯಾಸಗಳು, ಸಂತಾನೋತ್ಪತ್ತಿ ಕಾಲ ಮತ್ತು ಸ್ಥಳ ಇವೆಲ್ಲವನ್ನು ಅಧ್ಯಯನ ಮಾಡಲು ಅನುಕೂಲ. ಈ ರೀತಿ ಪಕ್ಷಿವೀಕ್ಷಕರು ಸೇರಿಸುತ್ತಾ ಹೋಗುವ ಪಟ್ಟಿಗಳ ಸಹಾಯದಿಂದ eBird ಅಧ್ಯಯನ ಮಾಡಿ ವರದಿಯೊಂದನ್ನು ತಯಾರಿಸುತ್ತದೆ. ಇದು ಒಂದು ಕಾಲಂತರದಲ್ಲಿ ಒಂದು ಸ್ಥಳದಲ್ಲಿ ಪಕ್ಷಿಗಳ ಸಂಖ್ಯೆಗಳಲ್ಲಿನ ಏರಿಳಿತವನ್ನು ವಿವರಿಸುತ್ತದೆ. ಅಂತಿಮವಾಗಿ ಪಕ್ಷಿಗಳ ಇರುವಿಕೆ, ಏರಿಳಿತ ಒಂದು ಪ್ರದೇಶದ ಪರಿಸರವು ಎಷ್ಟು ಆರೋಗ್ಯಕರವಾಗಿದೆ ಮತ್ತು ಆ ಪರಿಸರದಲ್ಲಿ ಏನು ಬದಲಾವಣೆಯಾಗುತ್ತಿದೆ ಎನ್ನುವುದರ ಸಂಕೇತ, ಹೀಗಾಗಿ ಈ ಅಂಶಗಳು ಅತಿ ಅವಶ್ಯಕ.

ಮೊಬೈಲ್ ಇಲ್ಲದಿದ್ದರೆ ನಾವು ನೋಡಿ ಗುರುತಿಸಿದ ಪಕ್ಷಿಗಳ ಪಟ್ಟಿಯನ್ನು eBird ಜಾಲತಾಣದಲ್ಲೂ ದಾಖಲಿಸಬಹುದು. eBird ಜಾಲತಾಣವನ್ನು ಈ ಲಿಂಕ್ ಉಪಯೋಗಿಸಿ ತಲುಪಬಹುದು. Merlin ಮತ್ತು eBird ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತು ಆಪಲ್ ಸ್ಟೋರ್‌ನಲ್ಲಿ ಲಭ್ಯವಿದೆ.

ಗಮನಿಸಿ: ಯಾವುದೇ ಕಾರಣಕ್ಕೂ Merlin ನಲ್ಲಿನ ಪಕ್ಷಿಗಳ ಕೂಗನ್ನು ನೀವು ಪಕ್ಷಿವೀಕ್ಷಣೆ ಮಾಡುವಾಗ ಆಯಾ ಪಕ್ಷಿಗಳ ಮುಂದೆ ಕೇಳಿಸಬೇಡಿ. ಇದು ಆ ಪಕ್ಷಿಗಳಿಗೆ ಒತ್ತಡ ಉಂಟುಮಾಡುತ್ತದೆ.

Sri Lanka Bay Owl (ಚಿತ್ರ: ವಿಕಿಪೀಡಿಯಾ)

ಆಗ ರೆಕಾರ್ಡ್ ಮಾಡಿದ Sri Lanka Bay Owlನ ಕೂಗು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...