ಪಕ್ಷಿಗಳನ್ನು ಗಮನಿಸಿದರೆ, ಅವು ಯಾವಾಗಲೂ ಏನಾದರೂ ಕೆಲಸದಲ್ಲೇ ತಲ್ಲೀನವಾಗಿರುತ್ತವೆ. ಒಂದೊಮ್ಮೆ ಆಹಾರ ಹುಡುಕುತ್ತಿದ್ದರೆ, ಮತ್ತೊಮ್ಮೆ ಗೂಡು ಕಟ್ಟುತ್ತಿರುತ್ತವೆ, ಇಲ್ಲವೇ ಮರಿಗಳಿಗೆ ಆಹಾರ ತಿನ್ನಿಸುತ್ತಿರುತ್ತವೆ. ಕೆಲವೊಮ್ಮೆ ತಮ್ಮ ಕೆಲಸದಲ್ಲಿ ಅಷ್ಟು ಮಗ್ನವಾಗಿಬಿಡುತ್ತವೆ, ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನೇ ಮರೆತುಬಿಡುತ್ತವೆ.
ಕ್ಯಾಸಲ್ ರಾಕ್ ಹತ್ತಿರ ಇವೋಲಿ ಎಂಬ ಪುಟ್ಟ ಊರಿನ ಬಳಿ ಒಂದು ಸಣ್ಣ ಹೊಳೆಯಿದೆ. ಒಂದು ದಿನ ನಾನು ಜೀಪಿನಲ್ಲಿ ಆ ಹೊಳೆಯನ್ನು ದಾಟುತ್ತಿದ್ದೆ. ಸಾಮಾನ್ಯವಾಗಿ ಹೊಳೆ ಅಥವಾ ನದಿಯ ಹತ್ತಿರ ಯಾವುದಾದರೂ ಪಕ್ಷಿ ಅಥವಾ ಪ್ರಾಣಿ ಕಾಣಬಹುದು ಎಂಬ ಅನುಭವವಿರುವುದರಿಂದ, ಅಂತಹ ಜಾಗಗಳಲ್ಲಿ ನಾನು ಯಾವಾಗಲೂ ನಿಧಾನವಾಗಿಯೇ ಜೀಪ್ ಓಡಿಸುತ್ತೇನೆ. ಬಹಳ ಬಾರಿ ಆ ಅಭ್ಯಾಸಕ್ಕೆ ಪ್ರತಿಫಲವೂ ಸಿಕ್ಕಿದೆ.
ಆ ದಿನವೂ ಹೊಳೆಯ ಹತ್ತಿರ ಬಂದ ತಕ್ಷಣ ಜೀಪಿನ ವೇಗ ಕಡಿಮೆ ಮಾಡಿದೆ. ಹೊಳೆಯ ಮಧ್ಯದಲ್ಲಿದ್ದ ಒಂದು ಕಲ್ಲಿನ ಮೇಲೆ ಮಿಂಚುಳ್ಳಿ (Common Kingfisher) ಕುಳಿತಿತ್ತು. ಅದರ ದೃಷ್ಟಿಯೆಲ್ಲ ನೀರಿನ ಮೇಲೆಯೇ ಇತ್ತು. ಯಾವುದೋ ಮೀನು ಹತ್ತಿರ ಬರಬಹುದೆಂಬ ನಿರೀಕ್ಷೆಯಲ್ಲಿ ಸಂಪೂರ್ಣ ಏಕಾಗ್ರತೆಯಿಂದ ಹೊಂಚು ಹಾಕಿ ಕುಳಿತಿತ್ತು.
ನಾನು ಜೀಪನ್ನು ನಿಲ್ಲಿಸಿದೆ. ಕೆಲವು ಕ್ಷಣಗಳ ನಂತರ ನಿಧಾನವಾಗಿ ಇನ್ನೂ ಹತ್ತಿರ ಕೊಂಡೊಯ್ದೆ. ಆಗಲೂ ಅದು ಹಾರಲಿಲ್ಲ. ನನ್ನ ಜೀಪಿನ ಕಡೆ ಒಮ್ಮೆ ಕೂಡ ನೋಡಲಿಲ್ಲ. "ಇನ್ನೂ ಸ್ವಲ್ಪ ಹತ್ತಿರ ಹೋಗಿ ನೋಡೋಣ," ಎಂದು ಜೀಪನ್ನು ಮೆಲ್ಲನೆ ನೀರಿನೊಳಗೆ ಇಳಿಸಿದೆ.
ಅಷ್ಟರಲ್ಲಿ ಮಿಂಚುಳ್ಳಿಗೆ ಏನನ್ನಿಸಿತೋ ಗೊತ್ತಿಲ್ಲ. ಥಟ್ಟನೆ ಹಾರಿ ಬಂದು ನನ್ನ ಜೀಪಿನ ಬಾನೆಟ್ ಮೇಲೆಯೇ ಕುಳಿತುಕೊಂಡಿತು!
ನನ್ನಿಂದ ಕೇವಲ ಮೂರು ಅಡಿ ದೂರದಲ್ಲಿ ಅದು ಕುಳಿತಿತ್ತು. ನಾನು ಅದನ್ನೇ ನೋಡುತ್ತಿದ್ದೆ. ಅದು ಮಾತ್ರ ನನ್ನ ಇರುವಿಕೆಯನ್ನೇ ಮರೆತು ನೀರನ್ನೇ ನೋಡುತ್ತಿತ್ತು. ಸುಮಾರು ಒಂದು ನಿಮಿಷ ಹಾಗೆಯೇ ಕಳೆದುಹೋಯಿತು. ಅಷ್ಟು ಹತ್ತಿರದಿಂದ ಆ ಪುಟ್ಟ ಪಕ್ಷಿಯನ್ನು ಸೂಕ್ಷ್ಮವಾಗಿ ನೋಡುವ ಅವಕಾಶ ಜೀವನದಲ್ಲಿ ಬಹಳ ಅಪರೂಪ.
ಕೊನೆಗೆ, "ಒಂದು ಚಿತ್ರವಾದರೂ ತೆಗೆದುಕೊಳ್ಳೋಣ," ಎಂದು ಮೆಲ್ಲಗೆ ನನ್ನ ಕಾಲಿನ ಬಳಿಯಿದ್ದ ಕ್ಯಾಮೆರಾದ ಕಡೆ ಕೈ ಚಾಚಿದೆ. ನನ್ನ ಆ ಸಣ್ಣ ಚಲನೆಯೇ ಸಾಕಾಯಿತು. ಮಿಂಚುಳ್ಳಿ ಕ್ಷಣಾರ್ಧದಲ್ಲಿ ಎಚ್ಚರಗೊಂಡಿತು. ಒಮ್ಮೆ ನನ್ನ ಕಡೆ ತಿರುಗಿ ನೋಡಿತು. ಆಗ ಬಹುಶಃ ತಾನು ಎಲ್ಲಿದ್ದೇನೆಂಬ ಅರಿವು ಅದಕ್ಕೆ ಆಗಿರಬೇಕು. ಮರುಕ್ಷಣವೇ ರೆಕ್ಕೆ ಬಡಿದು ಹಾರಿಹೋಯಿತು.
ಆ ದಿನ ಕ್ಯಾಮೆರಾ ನನ್ನ ಕೈಯಲ್ಲೇ ಇತ್ತು. ಆದರೂ ಒಂದು ಚಿತ್ರವೂ ತೆಗೆಯಲಾಗಲಿಲ್ಲ. ಆದರೆ ಈಗ ಅನಿಸುತ್ತದೆ—ತಕ್ಷಣಕ್ಕೆ ಕ್ಯಾಮೆರಾ ಸಿಕ್ಕಿದ್ದರೂ ಒಂದು ಒಳ್ಳೆ Photo ತೆಗೆಯುತ್ತಿದ್ದೆ ಎಂದು ಹೇಳಲಾರೆ. ಕೆಲವು ಕ್ಷಣಗಳು ಕ್ಯಾಮೆರಾದಲ್ಲಿ ಬಂಧಿಯಾಗಿಸುವುದಕ್ಕಿಂತ, ಸುಮ್ಮನೆ ಅನುಭವಿಸಬೇಕಷ್ಟೇ.
It is true. Having camera alone will not get you great pictures. In nature many moments can only be experienced and it is difficult to even express it.
ಪ್ರತ್ಯುತ್ತರಅಳಿಸಿ