ಪೂರ್ವಘಟ್ಟ ಭಾಗದ ಕಾಡುಗಳಲ್ಲಿ ನಾನು 2017ರಿಂದ ಕೆಲಸ ಮಾಡುತ್ತಿದ್ದೆ. ಮೊದಲ ಬಾರಿಗೆ ಇಲ್ಲಿಗೆ ಬಂದಾಗ ಕಾಡಿನ ನಡುವೆ ಇದ್ದ ಚೆಂಚು ಬುಡಕಟ್ಟುಗಳು ವಾಸಿಸುತ್ತಿದ್ದ ಹಳ್ಳಿ ಒಂದರಲ್ಲಿ ಕರಡಿಯೊಂದು ಒಬ್ಬ ವ್ಯಕ್ತಿಯನ್ನು ಕೊಂದಿತ್ತು. ಈ ಮುಂಚೆಯೂ ನಡೆದಿದ್ದ ಇಂತಹಾ ಅನೇಕ ಪ್ರಕರಣಗಳ ಬಗ್ಗೆ ಅಲ್ಲಿನ ಜನ ಮಾತನಾಡುತ್ತಿದ್ದರು. ಈ ಮುಂಚೆ ನಾವು ಅನೇಕ ವರ್ಷಗಳನ್ನು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಕಂಡ ಕರಡಿಗಳ ವರ್ತನೆಗೆ ವ್ಯತಿರಿಕ್ತವಾಗಿ ಇಲ್ಲಿನ ಕರಡಿಗಳು ಅತ್ಯಂತ ಆಕ್ರಮಣಕಾರಿ ಎನ್ನುವುದು ಅಲ್ಲಿನ ಜನಗಳ ಮಾತುಗಳಿಂದ ತಿಳಿಯುತ್ತಿತ್ತು.
ನಾವು ಸಮೀಕ್ಷೆಯ ಸಲುವಾಗಿ ಕಾಡಿನಲ್ಲಿ ನಡೆಯುವುದಕ್ಕೂ, ಜನ ತಮ್ಮ ದೈನಂದಿನ ಅವಶ್ಯಕತೆಗಳಿಗಾಗಿ ಕಾಡಿನಲ್ಲಿ ತಿರುಗಾಡುವುದಕ್ಕೂ ವ್ಯತ್ಯಾಸವಿದೆ. ಪ್ರಾಣಿಗಳ ಆವಾಸದಲ್ಲಿ ಅವು ನಮ್ಮನ್ನು ಗುರುತಿಸುವ ಮೊದಲೇ, ನಾವು ಪ್ರಾಣಿಗಳನ್ನು ಗುರುತಿಸಲು, ನಾವು ಪ್ರತಿಯೊಂದಯ ಹೆಜ್ಜೆಯನ್ನು ಎಚ್ಚರಿಕೆಯಿಂದ, ಆದಷ್ಟು ಸದ್ದು ಕಡಿಮೆಯಾಗುವಂತೆ ಇಡುತ್ತಿದ್ದೆವು. ಆದರೂ ಪ್ರತಿಬಾರಿಯೂ ಪ್ರಾಣಿಗಳು ನಮ್ಮನ್ನು ಗುರುತಿಸುವ ಮೊದಲೇ ನಾವು ಅವುಗಳನ್ನು ಗುರುತಿಸುತ್ತಿದ್ದೇವೆಂದು ಹೇಳಲಾರೆ.
| ಕಣ್ಣಾಮುಚ್ಚಾಲೆ ಆಟಕ್ಕೆ ರೆಡಿನಾ? (ಸಾಂದರ್ಭಿಕ ಚಿತ್ರ) ಚಿತ್ರ: © ಶ್ರೀಕಾಂತ |
ಅಮರಾಬಾದ್ ಹುಲಿ ಸಂರಕ್ಷಣಾ ಪ್ರದೇಶದಲ್ಲಿ 2019ರ ದಿನಗಳು. ಹುಲಿ ಸಂಖ್ಯೆ ಅಂದಾಜಿಸುವ ಸಲುವಾಗಿ ಮತ್ತು ಅವುಗಳ ಬಲಿ ಪ್ರಾಣಿಗಳ ಸಾಂದ್ರತೆಯನ್ನು ಅಂದಾಜಿಸುವ ಸಲುವಾಗಿ ಅನೇಕ ದಿನಗಳನ್ನು ಅಲ್ಲಿ ಕಳೆದಿದ್ದವು. ಕಾಡಿನ ಮಧ್ಯದ ಬೈರಾಪುರ ಎನ್ನುವ ಹಳ್ಳಿಯಲ್ಲಿ ಕ್ಯಾಂಪ್ ಮಾಡಿದ್ದೆವು. ಹೀಗೊಂದು ದಿನ, ಲೈನ್ ಟ್ರಾನ್ಸೆಕ್ಟ್‌ನಲ್ಲಿ ನಡೆಯುತ್ತಿದ್ದಾಗ, ಕರಡಿಗಳ ಬಗ್ಗೆ ಮತ್ತೊಂದು ಅನುಭವ ಸೇರ್ಪಡೆಯಾಯಿತು.
ನಾನು ಮತ್ತು ಸಮೀಕ್ಷೆಯಲ್ಲಿ ಭಾಗವಹಿಸಲು ಬಂದಿದ್ದ ಸ್ವಯಂಸೇವಕ ರಾಜ್‌ಪಾಲ್ ನಡೆದುಕೊಂಡು ಹೋಗುತ್ತಿದ್ದೆವು. ನಮ್ಮಿಂದ ಮುವತ್ತೆಂಟು ಮೀಟರ್ ದೂರದಲ್ಲಿ ಒಂದು ಕರಡಿ ತನ್ನ ಬೆನ್ನ ಮೇಲೆ ಪುಟ್ಟ ಮರಿಯನ್ನು ಕೂರಿಸಿಕೊಂಡು ನಡೆಯುತ್ತಿರುವುದು ನಮ್ಮ ಕಣ್ಣಿಗೆ ಬಿತ್ತು!
ತಾಯಿ ಕರಡಿ ನೆಲದಿಂದ ಎತ್ತರಕ್ಕೆ ಬೆಳೆದಿದ್ದ ಹುಲ್ಲಿನ ನಡುವೆ ಮರೆಯಾಗಿತ್ತು. ಅದೇ ಹೊತ್ತಿನಲ್ಲಿ, ತಾಯಿ ಮತ್ತು ಮರಿಯಿಂದ ಕೆಲವು ಮೀಟರ್ ದೂರದಲ್ಲಿ ಇನ್ನೂ ಮೂರು ಕರಡಿಗಳು ಇರುವುದನ್ನು ಗಮನಿಸಿದೆವು. ಬಹುಶಃ ಅವು ಮತ್ತೊಂದು ತಾಯಿ ಕರಡಿ ಮತ್ತು ಅದರ ಎರಡು ಮರಿಗಳಾಗಿರಬಹುದು. ಆ ಮರಿಗಳು ಬೆನ್ನ ಮೇಲೆ ಕುಳಿತಿದ್ದ ಮರಿಗಿಂತ ಸ್ವಲ್ಪ ದೊಡ್ಡದಾಗಿದ್ದವು ಮತ್ತು ತಾಯಿಯ ಹಿಂದೆ ನಡೆದುಕೊಂಡು ಹೋಗುತ್ತಿದ್ದವು ಮತ್ತು ನಮ್ಮಿಂದ ದೂರವಾಗುತ್ತಿತ್ತು.
ಒಟ್ಟಿನಲ್ಲಿ ಐದು ಕರಡಿಗಳು!
ಕಾಡಿನಲ್ಲಿ ಇಂತಹ ದೃಶ್ಯ ಸಿಕ್ಕಾಗ ಸಾಮಾನ್ಯವಾಗಿ ನಮ್ಮ ಉತ್ಸಾಹಕ್ಕೆ ಮಿತಿಯೇ ಇರುವುದಿಲ್ಲ. ಆದರೆ ಲೈನ್ ಟ್ರಾನ್ಸೆಕ್ಟ್‌ನಲ್ಲಿ ನಡೆಯುವಾಗ ಆ ಉತ್ಸಾಹವನ್ನು ನಿಯಂತ್ರಿಸಿಕೊಳ್ಳುವುದು ಬಹಳ ಮುಖ್ಯ. ನಾವು ಪಾಲಿಸುವ ಇನ್ನೊಂದು ಪ್ರಮುಖ ನಿಯಮವೆಂದರೆ, ನಾವು ಪ್ರಾಣಿಯಿಂದ ಸುರಕ್ಷಿತ ಅಂತರದಲ್ಲಿದ್ದೇವೆಯೇ, ಪ್ರಾಣಿ ಆಕ್ರಮಣ ಮಾಡಿದರೆ ತಪ್ಪಿಸಿಕೊಳ್ಳಲು ಅಥವಾ ಸುರಕ್ಷಿತವಾಗಿ ಹಿಂದೆ ಸರಿಯಲು ಅವಕಾಶವಿದೆಯೇ ಎಂಬುದನ್ನು ಗಮನಿಸುವುದು. ಇದರ ಜೊತೆಗೆ, ಸಮೀಕ್ಷೆಗೆ ಅಗತ್ಯವಾದ ಪ್ರಾಣಿಯ ದೂರ, ಕೋನ, ನೋಡಿದ ಸಮಯ ಮುಂತಾದ ವಿವರಗಳನ್ನೂ ದಾಖಲಿಸಿಕೊಳ್ಳಬೇಕು.
| ದಟ್ಟ ಕಾಡಿನಲ್ಲಿ ಸದ್ದು ಮಾಡದೆ ನಿಂತ ಆನೆಗಳಂತಹ ಬೃಹತ್ ದೇಹಿಗಳನ್ನೂ ಗುರುತಿಸುವುದು ಕಷ್ಟ. (ಸಾಂದರ್ಭಿಕ ಚಿತ್ರ) ಚಿತ್ರ: © ಶ್ರೀಕಾಂತ |
ಆ ದಿನ ನಮ್ಮ ಎಡಭಾಗದ ಹತ್ತಿರದಲ್ಲಿ ನಡೆಯುತ್ತಿದ್ದ ತಾಯಿ ಕರಡಿ ನಮ್ಮನ್ನು ಗಮನಿಸಿರಲಿಲ್ಲ. ನಾವು ಅಲ್ಲೇ ನಿಶ್ಚಲವಾಗಿ ನಿಂತೆವು.
ಕೆಲವು ಕ್ಷಣಗಳ ನಂತರ ಕರಡಿಗೆ ಏನೋ ಅನುಮಾನ ಬಂದಿರಬೇಕು. ಅದು ನಿಂತು ನಾವು ಇದ್ದ ದಿಕ್ಕಿನತ್ತ ನೋಡತೊಡಗಿತು. ಕರಡಿಗಳ ದೃಷ್ಟಿ ಅಷ್ಟೇನೂ ತೀಕ್ಷ್ಣವಲ್ಲ ಎಂಬುದು ನಮಗೆ ತಿಳಿದಿತ್ತು. ಅದು ಗಾಳಿಯನ್ನು ಮೂಸಿ ನಮ್ಮ ಇರುವಿಕೆಯನ್ನು ಪತ್ತೆಹಚ್ಚಲು ಪ್ರಯತ್ನಿಸಿತು. ನಂತರ ನಿಧಾನವಾಗಿ ನಮ್ಮ ಕಡೆಗೆ ಕೆಲವು ಹೆಜ್ಜೆಗಳನ್ನು ಹಾಕಿ, ಮತ್ತೆ ನಿಂತು ನೋಡಿತು.
ನಾವು ಮಾತ್ರ ಅಲ್ಲೇ ನಿಂತಿದ್ದೆವು.
ಆ ಕ್ಷಣದಲ್ಲಿ ಅದರ ಮನಸ್ಸಿನಲ್ಲಿ ಏನು ನಡೆಯುತ್ತಿರಬಹುದು ಎಂಬ ಕುತೂಹಲ ನನಗೆ ಮೂಡಿತು.
“ಇಲ್ಲಿ ಏನೋ ಇದೆ… ಆದರೆ ಏನದು? ಕಣ್ಣಿಗೆ ಸ್ಪಷ್ಟವಾಗಿ ಏನೂ ಕಾಣುತ್ತಿಲ್ಲ. ಮೂಸಿ ನೋಡಿದರೂ ಖಚಿತವಾದ ಸುಳಿವು ಸಿಗುತ್ತಿಲ್ಲ. ಬೀಸುತ್ತಿದ್ದ ಗಾಳಿಯೂ ಅನುಕೂಲಕರವಾಗಿಲ್ಲ!”
ತಾಯಿ ಕರಡಿಗೆ ಗೊಂದಲವಾಗಿರಬೇಕು ಗಾಳಿ ಕರಡಿಯ ಕಡೆಯಿಂದ ನಮ್ಮ ಕಡೆಗೆ ಬೀಸುತ್ತಿತ್ತು. ಹೀಗಾಗಿ ನಮ್ಮ ವಾಸನೆ ಅದಕ್ಕೆ ತಲುಪದೇ ಇರಬಹುದು.
ಮೂರ್ನಾಲ್ಕು ನಿಮಿಷಗಳ ಕಾಲ ಆ ತಾಯಿ ಕರಡಿ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿತು. ತನ್ನ ಮರಿಯ ಸುರಕ್ಷತೆಯ ಬಗ್ಗೆ ಖಚಿತಪಡಿಸಿಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಿರುವಂತೆ ಕಾಣುತ್ತಿತ್ತು. ಕೊನೆಗೆ ಅಲ್ಲಿ ಯಾವುದೇ ಅಪಾಯವಿಲ್ಲ ಎಂದು ನಿರ್ಧರಿಸಿರಬೇಕು. ನಮ್ಮನ್ನು ಪತ್ತೆಹಚ್ಚಲಾಗದೆ ಅದು ಅಲ್ಲಿಂದ ಮುಂದೆ ಸಾಗಿತು.
| ಹುಲಿಯ ಬಣ್ಣ ಮತ್ತು ಪಟ್ಟೆಗಳು ಕಾಡಿನ ನಡುವೆ ಮರೆಯಾಗುವ ಹಾಗೆ ವಿಕಾಸವಾಗಿದೆ. ಇಲ್ಲಿ ಕುಳಿತ ಹುಲಿಯನ್ನು ಗುರುತಿಸಿ. (ಸಾಂದರ್ಭಿಕ ಚಿತ್ರ) ಚಿತ್ರ: © ಶ್ರೀಕಾಂತ |
ನಾವು ಮಾತ್ರ ಆ ಸಂಪೂರ್ಣ ದೃಶ್ಯವನ್ನು ಮೌನವಾಗಿ ನೋಡುತ್ತಾ ನಿಂತಿದ್ದೆವು. ಅದು ಅದ್ಭುತವಾದ ದೃಶ್ಯವಾಗಿತ್ತು.
ಆ ಕರಡಿಗಳ ವರ್ತನೆ ನನಗೆ ಪಶ್ಚಿಮ ಘಟ್ಟಗಳಲ್ಲಿ ಕಂಡಿದ್ದ ಕರಡಿಗಳ ವರ್ತನೆಯಂತೆಯೇ ಕಂಡಿತು. ಕರಡಿಗಳು ಇತರ ಕೆಲವು ಕಾಡುಪ್ರಾಣಿಗಳಿಗಿಂತ ಹೆಚ್ಚು ಆಕ್ರಮಣಕಾರಿ ಆಗಿರಬಹುದು. ಅದರಲ್ಲೂ ಮರಿಗಳೊಂದಿಗೆ ಇರುವ ತಾಯಿ ಕರಡಿ, ತನ್ನ ಮರಿಗಳಿಗೆ ಅಪಾಯವಿದೆ ಎಂದು ಭಾವಿಸಿದರೆ, ಇನ್ನಷ್ಟು ರಕ್ಷಣಾತ್ಮಕವಾಗಬಹುದು.
ಆದರೆ ಪೂರ್ವ ಘಟ್ಟಗಳ ಸ್ಥಳೀಯರು ವಿವರಿಸಿದಂತಹ “ಆಕ್ರಮಣಕಾರಿ ಕರಡಿಯನ್ನು” ನಾನು ಇನ್ನೂ ಎದುರಿಸಿರಲಿಲ್ಲ!
ಆ ದಿನದ ಅನುಭವ ಮತ್ತೊಂದು ವಿಷಯವನ್ನೂ ನೆನಪಿಸಿತು, ಕಾಡಿನಲ್ಲಿ ಪ್ರಾಣಿಗಳೊಂದಿಗೆ ನಮ್ಮ ವರ್ತನೆ ಎಷ್ಟು ಮುಖ್ಯ ಎಂಬುದನ್ನು.
ಆನೆ, ಕರಡಿ ಅಥವಾ ಇತರ ದೊಡ್ಡ ಕಾಡುಪ್ರಾಣಿಗಳನ್ನು ಎದುರಿಸಿದಾಗ ಹೇಗೆ ವರ್ತಿಸಬೇಕು, ಎಷ್ಟು ದೂರ ಕಾಯ್ದುಕೊಳ್ಳಬೇಕು, ಅವುಗಳ ವರ್ತನೆಯನ್ನು ಹೇಗೆ ಗಮನಿಸಬೇಕು ಇವೆಲ್ಲವನ್ನು ಕೇವಲ ಪುಸ್ತಕಗಳಲ್ಲಿ ಓದಿ ಕಲಿಯಲಾಗುವುದಿಲ್ಲ. ಕಾಡಿನಲ್ಲಿ ನಡೆಯುವಾಗ ನಮ್ಮ ಮಾರ್ಗದರ್ಶಕರು ಕಲಿಸಿದ ಸಣ್ಣ ಸಣ್ಣ ಪಾಠಗಳು ಮತ್ತು ನಮ್ಮ ಸಮಯ ಪ್ರಜ್ಞೆ ಇಂತಹ ಸಂದರ್ಭಗಳಲ್ಲಿ ನೆರವಿಗೆ ಬರುತ್ತವೆ.
| ಪೊದೆಗಳ ನಡುವೆ ಸಂಪೂರ್ಣವಾಗಿ ಕರಗಿಹೋದ ಚಿರತೆ. (ಸಾಂದರ್ಭಿಕ ಚಿತ್ರ) ಚಿತ್ರ: © ಶ್ರೀಕಾಂತ |
ವರ್ಷಗಳ ಕಾಲ ಲೈನ್ ಟ್ರಾನ್ಸೆಕ್ಟ್‌ಗಳಲ್ಲಿ ನಡೆದ ನಂತರ, ನನಗೆ ಅದು ಕೇವಲ ಒಂದು ಸಮೀಕ್ಷೆಯ ವಿಧಾನವಾಗಿ ಕಾಣುವುದಿಲ್ಲ.
ಅದು ಕಾಡಿನೊಳಗೆ ನಡೆಯುವ ಒಂದು ರೀತಿಯ ಕಣ್ಣಾಮುಚ್ಚಾಲೆ ಆಟ! ನಾವು ಪ್ರಾಣಿಗಳನ್ನು ಹುಡುಕುತ್ತಾ ನಡೆಯುತ್ತೇವೆ. ಆದರೆ ಅದೇ ಸಮಯದಲ್ಲಿ ಪ್ರಾಣಿಗಳೂ ನಮ್ಮನ್ನು ಗಮನಿಸುತ್ತಿರುತ್ತವೆ. ಕೆಲವೊಮ್ಮೆ ನಾವು ಅವುಗಳನ್ನು ಮೊದಲು ನೋಡುತ್ತೇವೆ. ಕೆಲವೊಮ್ಮೆ ಅವು ನಮ್ಮನ್ನು ಮೊದಲು ಗಮನಿಸುತ್ತವೆ.
ಮತ್ತೆ ಕೆಲವೊಮ್ಮೆ - ಈ ಕರಡಿಯ ಘಟನೆಯಲ್ಲಿ ಆದಂತೆ - ಇನ್ನೊಬ್ಬರ ಇರುವಿಕೆಯ ಅನುಮಾನ ಬಂದರೂ, ನಿಜವಾಗಿ ಯಾರು ಯಾರನ್ನು ಕಂಡರು ಎಂಬುದು ಕೊನೆಯವರೆಗೂ ಸ್ಪಷ್ಟವಾಗುವುದಿಲ್ಲ.
ಇಷ್ಟೆಲ್ಲ ವರ್ಷಗಳಾದರೂ ಲೈನ್ ಟ್ರಾನ್ಸೆಕ್ಟ್‌ನಲ್ಲಿ ನಡೆಯುವುದು ನನಗೆ ಇನ್ನೂ ಆ ಕಾರಣಕ್ಕಾಗಿಯೇ ಒಂದು ಆಟದಂತೆ ಅನಿಸುತ್ತದೆ. ಕಾಡಿನೊಳಗೆ, ಕಾಡಿನ ಜೀವಿಗಳೊಂದಿಗೆ ನಡೆಯುವ ಒಂದು ಕಣ್ಣಾಮುಚ್ಚಾಲೆ ಆಟ!
| ತಾಯಿಯ ಹಿಂದೆ ಅಡಗಿದ ಮರಿಯಾನೆ! ಸೊಂಡಿಲೊಂದು ಮಾತ್ರ ಹೊರಗೆ ಚಾಚಿ, ಅದನ್ನು ನಾವು ನೋಡಿ, ಔಟ್ ಮಾಡಿಯಾಯ್ತು. (ಸಾಂದರ್ಭಿಕ ಚಿತ್ರ) ಚಿತ್ರ: © ಶ್ರೀಕಾಂತ |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ