ವಿಷಯಕ್ಕೆ ಹೋಗಿ

ರಣಹದ್ದುಗಳು

 ರಣಹದ್ದುಗಳೆಂದರೆ ಸತ್ತ ಜೀವಿಗಳ ಸ್ವಚ್ಛಗೊಳಿಸುವ ಜಾಡಮಾಲಿಗಳು. ಕಾಡಿನಲ್ಲಿ ಅಥವಾ ಹಳ್ಳಿಯ ಸುತ್ತಮುತ್ತ ಎಲ್ಲೋ ಒಂದು ಪ್ರಾಣಿ ಸತ್ತರೆ, ಕೆಲವೇ ಗಂಟೆಗಳಲ್ಲಿ ಆಕಾಶದಲ್ಲಿ ಸುತ್ತುವ ರಣಹದ್ದುಗಳು ಅದನ್ನು ಪತ್ತೆಹಚ್ಚುತ್ತವೆ. ಅವುಗಳ ತೀಕ್ಷ್ಣ ದೃಷ್ಟಿ ಮತ್ತು ಪ್ರಕೃತಿಯಲ್ಲಿನ ವಿಶಿಷ್ಟ ಪಾತ್ರವೇ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಮಹತ್ತರವಾಗಿದೆ.

ಒಂದು ಬೆಳಗ್ಗೆ ನಾಗರಹೊಳೆಯ ಹಸಿರು ಗದ್ದೆ ರಸ್ತೆಯಲ್ಲಿ ಕಾಟಿಯೊಂದು ರಸ್ತೆಯ ಬದಿಯಲ್ಲಿ ಸತ್ತು ಬಿದ್ದಿತ್ತು. ಆ ಭಾಗದಲ್ಲಿ ತನ್ನ ಎರಡು ಮರಿಗಳೊಂದಿಗೆ ಓಡಾಡುತ್ತಿದ್ದ ಹೆಣ್ಣು ಹುಲಿಯ ಬಗ್ಗೆ ನಮಗೆ ಈಗಾಗಲೇ ಮಾಹಿತಿ ಇದ್ದುದರಿಂದ, ಈ ಬೇಟೆ ಅದರದ್ದೇ ಇರಬಹುದು ಎನ್ನಿಸಿತು. ಆದರೆ ಮೊದಲು ಕಣ್ಣಿಗೆ ಬಿದ್ದದ್ದು ಸತ್ತು ಬಿದ್ದಿದ್ದ ಕಾಟಿಯಲ್ಲ. ಅದರ ಸುತ್ತ ನೆರೆದಿದ್ದ ಸುಮಾರು ಮೂವತ್ತು ಬಿಳಿ ಎದೆಯ ರಣಹದ್ದುಗಳು (White-rumped Vulture)! ಹುಲಿ ಹೊಟ್ಟೆ ತುಂಬಿದ ನಂತರ ಬಿಟ್ಟುಹೋದ ಸುಮಾರು ಅರ್ಧದಷ್ಟು ಕಾಟಿಯ ಕಳೇಬರ ಆ ರಣಹದ್ದುಗಳಿಗೆ ಭರ್ಜರಿ ಭೋಜನವಾಗಿತ್ತು. ಕೆಲವೇ ಸಮಯದಲ್ಲಿ ಅವು ಉಳಿದ ಮಾಂಸವನ್ನು ಸಂಪೂರ್ಣವಾಗಿ ತಿಂದು ಪರಿಸರದಲ್ಲಿ ಲೀನವಾಗುವಂತೆ ಮಾಡುತ್ತವೆ.

ನಾಗರಹೊಳೆಯ ರಸ್ತೆಯೊಂದರಲ್ಲಿ ಕುಳಿತಿರುವ ಬಿಳಿ ಎದೆಯ ರಣಹದ್ದುಗಳ ಗುಂಪು. ಎಡಭಾಗದಲ್ಲಿ ಕಾಟಿಯ ಕಳೇಬರ ಕಾಣಿಸುತ್ತದೆ. ಚಿತ್ರ: © ಶ್ರೀಕಾಂತ


ಇನ್ನೊಂದು ಬಾರಿ ಬಂಡೀಪುರದಲ್ಲಿ ಸುತ್ತಾಡುವಾಗ, ಕಾಡುನಾಯಿಗಳ ಗುಂಪೊಂದು ತಿಂದು ಬಿಟ್ಟಿದ್ದ ಜಿಂಕೆಯ ಕಳೇಬರದ ಬಳಿ ಅಪರೂಪದ ಎರಡು ಕೆಮ್ಮಂಡೆ ರಣಹದ್ದುಗಳು (Red-headed Vulture) ಕುಳಿತಿದ್ದವು. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಬೂದಿ ಮಂಡೆಯ ರಣಹದ್ದುಗಳು (Indian Vulture) ತಮ್ಮೊಳಗೆ ಆಹಾರಕ್ಕಾಗಿ ಜಗಳವಾಡುತ್ತಿದ್ದರೆ, ಈ ಎರಡು ಕೆಮ್ಮಂಡೆ ರಣಹದ್ದುಗಳು ಮಾತ್ರ ಯಾವುದೇ ಆತುರವಿಲ್ಲದೆ, ಸಂಯಮಿಗಳಂತೆ ತಮ್ಮ ಸರದಿಗಾಗಿ ಕಾಯುತ್ತ ಕುಳಿತಿದ್ದವು. ಒಂದೇ ಆಹಾರದ ಬಳಿ ಬೇರೆಬೇರೆ ರಣಹದ್ದುಗಳ ವರ್ತನೆಯ ವ್ಯತ್ಯಾಸವನ್ನು ನೋಡುವುದೇ ಒಂದು ವಿಶಿಷ್ಟ ಅನುಭವ.

ಬಂಡೀಪುರದಲ್ಲಿ ಕಂಡ ಕೆಮ್ಮಂಡೆ ರಣಹದ್ದು (Red-headed Vulture) ಮತ್ತು ಬೂದಿ ಮಂಡೆಯ ರಣಹದ್ದು (Indian Vulture) ಚಿತ್ರ: © ಶ್ರೀಕಾಂತ


ಒಮ್ಮೆ ನಮ್ಮ ಹಳ್ಳಿಗಳ ಸಮೀಪದಲ್ಲಿಯೇ ಸಾಮಾನ್ಯವಾಗಿ ಕಾಣುತ್ತಿದ್ದ ರಣಹದ್ದುಗಳು ಇಂದು ಬಹುತೇಕ ಕಣ್ಮರೆಯಾಗಿವೆ. ಪಶುಗಳಿಗೆ ನೋವು ನಿವಾರಕವಾಗಿ ಬಳಸಲಾಗುತ್ತಿದ್ದ ಡೈಕ್ಲೋಫೆನಾಕ್ (Diclofenac) ಎಂಬ ಔಷಧಿ ರಣಹದ್ದುಗಳ ಸಂಖ್ಯೆಯ ಕುಸಿತಕ್ಕೆ ಪ್ರಮುಖ ಕಾರಣಗಳಲ್ಲಿ ಒಂದೆಂದು ಸಂಶೋಧನೆಗಳು ತೋರಿಸಿವೆ. ಆ ಔಷಧಿ ನೀಡಿದ್ದ ಜಾನುವಾರು ಸತ್ತ ನಂತರ ಅದರ ಕಳೇಬರವನ್ನು ತಿಂದಲ್ಲಿ ರಣಹದ್ದುಗಳ ಮೂತ್ರಪಿಂಡಗಳು ಹಾನಿಗೊಳಗಾಗಿ ಅವು ಸಾವನ್ನಪ್ಪುತ್ತಿದ್ದವು. ಇದರ ಪರಿಣಾಮವಾಗಿ ಭಾರತೀಯ ಉಪಖಂಡದ ಅನೇಕ ರಣಹದ್ದುಗಳ ಜನಸಂಖ್ಯೆ ಕೆಲವೇ ದಶಕಗಳಲ್ಲಿ ಶೇಕಡಾ 95 ಕ್ಕಿಂತಲೂ ಹೆಚ್ಚು ಕುಸಿಯಿತು.

ರಣಹದ್ದುಗಳು ಕೇವಲ ಸತ್ತ ಜೀವಿಗಳನ್ನು ತಿನ್ನುವ ಪಕ್ಷಿಗಳಲ್ಲ. ಅವು ಪ್ರಕೃತಿಯ ಸ್ವಚ್ಛತಾ ಸಿಬ್ಬಂದಿ. ಕಳೇಬರಗಳನ್ನು ಶೀಘ್ರವಾಗಿ ವಿಲೀನಗೊಳಿಸುವ ಮೂಲಕ ರೋಗಾಣುಗಳ ಹರಡುವಿಕೆಯನ್ನು ತಡೆಯುತ್ತವೆ ಹಾಗೂ ಪರಿಸರದ ಆರೋಗ್ಯವನ್ನು ಕಾಪಾಡುತ್ತವೆ. ಇಂದು ಕರ್ನಾಟಕದಲ್ಲಿ ನಾಗರಹೊಳೆ, ಬಂಡೀಪುರ, ರಾಮನಗರದ ಕೆಲವು ಬಂಡೆ ಪ್ರದೇಶಗಳು ಮತ್ತು ಇನ್ನೂ ಕೆಲವೇ ಸ್ಥಳಗಳು ಈ ಅಪರೂಪದ ಪಕ್ಷಿಗಳಿಗೆ ಆಶ್ರಯವಾಗಿವೆ. ಒಮ್ಮೆ ನಮ್ಮ ಕಣ್ಣಿಗೆ ಸಾಮಾನ್ಯವಾಗಿದ್ದ ಈ ಪಕ್ಷಿಗಳು ಇಂದು ಕಾಣಿಸಿಕೊಂಡರೆ ಅದೇ ಒಂದು ವಿಶೇಷ ಅನುಭವವಾಗಿದೆ.

ಕಾಮೆಂಟ್‌ಗಳು

  1. ಲೇಖನ ಚೆನ್ನಾಗಿ ಮೂಡಿ ಬಂದಿದೆ. ರಣಹದ್ದುಗಳ ಬಗ್ಗೆ ಓದಿ ಸಂತಸವಾಯಿತು. ರಣಹದ್ದುಗಳ ಸಂಖ್ಯೆ ಕಳೆದೆರಡು ದಶಕದಲ್ಲಿ ಸುಮಾರು 97%ರಷ್ಟು ಕಮ್ಮಿಯಾಗಿದೆ. ಇದಕ್ಕೆ ಕಾರಣ ಡಿಕ್ಲೋಫೆನಾಕ್ ಎಂಬ ದನಗಳ ಔಷಧಿ. ಈ ಔಷಧಿ ರಣಹದ್ದುಗಳ ಮೂತ್ರಪಿಂಡ ವೈಫಲ್ಯಗೊಳಿಸಿ ಅವುಗಳ ಸಾವಿಗೆ ಕಾರಣವಾಗುತ್ತದೆ. ಆದರೆ ಇದು ನಾಡಿನಲ್ಲಿ ಮಾತ್ರ ಆಗಬೇಕಿತ್ತು ಕಾಡಿನಲ್ಲಿ ಅವುಗಳ ಸಂಖ್ಯೆ ಕಮ್ಮಿಯಾಗಲು ಕಾರಣವೇನಿರಬಹುದು? ಎಂಬ ಪ್ರಶ್ನೆ ಕಾಡುತ್ತದೆ.

    ಪ್ರತ್ಯುತ್ತರಅಳಿಸಿ
  2. ರಣಹದ್ದುಗಳು ಊರಿನ ಹತ್ತಿರವೇ ಹೆಚ್ಚಾಗಿ ಬದುಕುತ್ತಿದ್ದಿರಬಹುದು. ಕಾಡಿನಲ್ಲಿರುವ ರಣಹದ್ದುಗಳು ಊರಿಗೆ ಬರಬಹುದಾದ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಅದೂ ಅಲ್ಲದೆ ನೂರಾರು ಕಿಲೋಮೀಟರ್ ಕಾಡುಗಳೇನು ನಮ್ಮಲ್ಲಿ ಉಳಿದಿಲ್ಲ.
    ಈ ಬಗ್ಗೆ ನನ್ನ ಕೆಲವು ಸಹೋದ್ಯೋಗಿಗಳ ಜೊತೆ ಚರ್ಚೆ ಮಾಡಿದೆ. ಎಲ್ಲರೂ ಹೇಳುವುದೇನೆಂದರೆ ಈಗಲೂ ಕಾಡುಗಳಲ್ಲಿ ಮೇವಿಗಾಗಿ ದನಗಳನ್ನು ಬಿಡಲಾಗುತ್ತದೆ, ಅದೇ ಮುಖ್ಯಕಾರಣ, ಅದರಿಂದಲೇ ಕಾಡುಗಳಲ್ಲೂ ಅದರ ಸಂಖ್ಯೆ ಕಡಿಮೆಯಾಗುತ್ತಿದೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಚಿತ್ರ: © ಶ್ರೀಕಾಂತ ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. ಚಿತ್ರ: © ಶ್ರೀಕಾಂತ Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

 ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ್ರ...