ವಿಷಯಕ್ಕೆ ಹೋಗಿ

ನೇರಳೆ ಮರದ ಕತೆ

 ಬೆಂಗಳೂರಿನ ಆಕಾಶದ ತುಂಬಾ ಮುಂಗಾರು ಪೂರ್ವ ಮೋಡಗಳು ಆವರಿಸಿತ್ತು. ತಾಪಮಾನವೂ ಇಳಿದು ಸ್ವಲ್ಪ ನಿರಾಳವೆನಿಸಿತ್ತು. ಈ ಮಳೆ ಮೋಡದ ದಿನಗಳು ಚೇತೋಹಾರಿ! ನಮ್ಮ ಮನೆಯ ಮುಂದೆ ಇರುವ ನೇರಳೆ ಮರ (Syzygium cumini) ಈಗ ಹೊಸದಾಗಿ ಚಿಗುರಿದ ಎಲೆಗಳಿಂದ ಉಜ್ವಲವಾಗಿ ಹೊಳೆಯುತ್ತಿತ್ತು. ಈ ನಿತ್ಯಹರಿದ್ವರ್ಣ ಪ್ರಭೇದ ಸದಾ ಕಾಲ ಎಲೆಗಳಿಂದ ತುಂಬಿದ್ದರೂ ಮಳೆಯಿಂದ ತೊಳೆದ ಎಲೆಗಳು ಹಸುರಿನಿಂದ ಕಂಗೊಳಿಸುತ್ತಿದ್ದವು. ನೇರಳೆ ಹಣ್ಣುಗಳೆಂದರೆ ಯಾರಿಗೆ ಇಷ್ಟವಿಲ್ಲ? ಆದರೆ ನಮ್ಮ ಮನೆಯ ಮುಂದಿನ ಈ ಮರ ಇನ್ನೂ ಹಣ್ಣು ಬಿಡಲು ಪ್ರಾರಂಭಿಸಿಲ್ಲ!

ಚಿಕ್ಕ ಮರಕ್ಕೂ ತನ್ನದೇ ಆದ ಒಂದು ಕಥೆಯಿದೆ. ಇದು ಸಣ್ಣ ಗಿಡವಾಗಿದ್ದಾಗ ಜಿ.ಕೆ.ವಿ.ಕೆ ಸಮೀಪದ ನಮ್ಮ Officeನ ಮುಂದೆ ನೆಡಲು ಇದನ್ನು ತಂದಿದ್ದೆವು. ಆದರೆ ಆ ಕಟ್ಟಡದ ಯಜಮಾನ ಅದನ್ನು ಅಲ್ಲಿ ನೆಡಲು ಒಪ್ಪಲಿಲ್ಲ! ಕಾರಣ ಸರಳ - ಮುಂದೊಂದು  ದಿನ ಅದು ಹಣ್ಣು ಬಿಟ್ಟು, ಮಕ್ಕಳು ನೇರಳೆ ಹಣ್ಣಿಗಾಗಿ ಕಲ್ಲು ಎಸೆದರೆ? ನಮ್ಮ Officeಕಟ್ಟಡದಲ್ಲಿ ಬಹುತೇಕ ಗಾಜು ಇರುವುದರಿಂದ ನೇರಳೆ ಗಿಡವನ್ನು ಅಲ್ಲಿ ನೆಡುವುದು ಒಳ್ಳೆಯದಲ್ಲ ಎಂದು ಭಾವಿಸಿದ. ಎಂಥಾ ದೂ(ದು)ರಾಲೋಚನೆ! ಹೀಗೆ ಪಕ್ಕಕ್ಕಿಟ್ಟ ಗಿಡವನ್ನು ಒಂದು ದಿನ ಸದ್ದಿಲ್ಲದೆ ಮನೆಗೆ ತಂದೆ. Officeನಲ್ಲಿ ಅದು ಯಾರ ಗಮನಕ್ಕೂ ಬರಲಿಲ್ಲ.

ಮನೆಗೆ ತಂದಾಗ ಎಲ್ಲರೂ ಅದನ್ನು ಮಾವಿನ ಗಿಡವೆಂದೇ ಭಾವಿಸಿದರು. ನಮ್ಮ ಮನೆಯಲ್ಲಿ ಗಿಡ ನೆಡುವಂತಹ ಯಾವುದೇ ಸಾಧನಗಳಿಲ್ಲದ ಕಾರಣ ಅದನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲ ನೆಡಲು ಸಾಧ್ಯವಾಗಲೇ ಇಲ್ಲ. ನಂತರ 2019ರಲ್ಲಿ ನಾನು ನನ್ನ ಕೆಲಸದ ಸಲುವಾಗಿ ಹೊರಗೆ ಹೋಗಿದ್ದಾಗ ಮನೆಯವರು ಯಾರಿಗೋ ಹೇಳಿ ಅದನ್ನು ನೆಡಸಿದ್ದರು. ಆದರೆ ಅಲ್ಲಿಂದ ಆ  ಗಿಡದ ಕಷ್ಟಗಳು ಆರಂಭವಾಯಿತು!

ಬೇಲಿ ಇಲ್ಲದ ಕಾರಣ ಬೀಡಾಡಿ ದನಗಳು ಹೋಗುವಾಗ ಬರುವಾಗ ಗಿಡದ ಎಲೆಗಳನ್ನೆಲ್ಲಾ ತಿನ್ನುತ್ತಿದ್ದವು. ಬಿದಿರುಕಡ್ಡಿಗಳನ್ನು ತಂದು ಅದರ ಸುತ್ತ ಬೇಲಿ ಮಾಡುವವರೆಗೆ ಅದು ಮುಂದುವರೆದಿತ್ತು. ಹಬ್ಬಗಳ ಸಮಯದಲ್ಲಿ ಮತ್ತೊಂದು ಸಮಸ್ಯೆ ಎದುರಾಯಿತು – ಅದು ಮಾವಿನ ಗಿಡವೋ, ನೇರಳೆ ಗಿಡವೋ ತಿಳಿಯದ ನಗರದ ಜನಗಳು, ಮಾವಿನ ಎಲೆಗಳೆಂದೇ ಭಾವಿಸಿ ತೋರಣ ಕಟ್ಟಲು ಎಲೆಗಳನ್ನು ಕತ್ತರಿಸಿಕೊಂಡು ಹೋಗುತ್ತಿದ್ದರು. ಕೆಲ ದಿನಗಳವರೆಗೆ ಎಲೆಗಳಿಲ್ಲದೇಹೋದರೂ ಗಿಡ ಬದುಕಿತು, ಬೆಳೆಯಿತು.

ಗಿಡ ಎತ್ತರವಾಗಿ ಮರವಾಗಿ ಬೆಳೆಯುತ್ತಿದ್ದಂತೆ ರಸ್ತೆಯಲ್ಲಿ ಹೋಗುವ ದೊಡ್ಡ ವಾಹನಗಳು ಅದಕ್ಕೆ ಡಿಕ್ಕಿ ಹೊಡೆದು ಹೋಗುತ್ತಿದ್ದವು. ಈ ಅಫಘಾತಗಳನ್ನೆಲ್ಲಾ ಸಹಿಸಿಕೊಂಡು ಮರವಾಗಿ ನೆರಳು ನೀಡುವಷ್ಟು ಅಗಲ ಹರಡಿಕೊಂಡಿತು. ನೆರೆಮನೆಯವನೊಬ್ಬ ಅದರ ನೆರಳಲ್ಲಿ ತನ್ನ ಕಾರನ್ನು ನಿಲ್ಲಿಸಲು ಶುರುಮಾಡಿದ. ಆದರೆ ಕಾರಿನ ಮೇಲೆಲ್ಲಾ ಅಂಟು ದ್ರವ ಬಿದ್ದು ಕರೆಯಾಗಲು ಶುರುವಾಯಿತು. ಮರವನ್ನೇ ಕತ್ತರಿಸುವಂತೆ ಮನೆಯವರಲ್ಲಿ ಹೇಳಿದನಂತೆ. ಮನೆಯವರು ಮರ ಕತ್ತರಿಸಲು  ನಗರಪಾಲಿಕೆಯನ್ನು ಕೇಳಬೇಕೆಂದು ಹೇಳಿದಾಗ ವಿಷಯ ಅಲ್ಲಿಗೆ ನಿಂತಿತು. ಅವನು ತನ್ನ ಕಾರಿಗೆ ಒಂದು ಕವರ್ ತಂದು ಮುಚ್ಚಲು ಪ್ರಾರಂಭಿಸಿದ.

ಈಗ ಮರ ಎರಡನೇ ಮಹಡಿಯ ಎತ್ತರಕ್ಕೆ ಬೆಳೆದಿದೆ. ನನ್ನ ಕೊಠಡಿಯಿಂದ ಅದನ್ನು ನೋಡಬಹುದಾಗಿದೆ. ಇನ್ನೂ ಹಣ್ಣು ನೀಡಿಲ್ಲವಾದರೂ ಅದು ಸಲಹುವ ಜೀವಿಗಳಿಗೆ ಲೆಕ್ಕವಿಲ್ಲ. ಪ್ರತಿದಿನವೂ ವಿವಿಧ ಪಕ್ಷಿಗಳು ಮರಕ್ಕೆ ಬರುತ್ತವೆ. ಮೊದಲ ಬಾರಿಗೆ ಮನೆಯ ಹತ್ತಿರ ಒಂದು ಬಾರಿಗೆ ಗೋಲ್ಡನ್ ಓರಿಯೋಲ್ ಪಕ್ಷಿಯನ್ನು ಇದೆ ಮರದ ಮೇಲೆ ನೋಡಿದೆ. ಹಕ್ಕಿಗಳ ಜತೆಗೆ ಚಿಟ್ಟೆಗಳು ಈಗ ಪ್ರತಿದಿನ ಬರುತ್ತವೆ. ವಿಶೇಷವಾಗಿ ‘ಗಾಡಿ ಬ್ಯಾರನ್’ ಎಂಬ ಸುಂದರ ಚಿಟ್ಟೆ ನೋಡಿದೆ.

ಒಂದು ಮಧ್ಯಾಹ್ನ ಕೆಳಗೆ ಇಳಿದು ಹೋಗುವಾಗ ಮರದ ಮೇಲೆ ಗಮನಹರಿಯಿತು. ಒಂದು ದೊಡ್ಡ ಚಿಟ್ಟೆ! ಯಾವುದೋ ಇದುವರೆವಿಗೂ ನೋಡಿರದ ಚಿಟ್ಟೆಯಂತೆ ಕಂಡಿತು. Blue ವರ್ಗಕ್ಕೆ ಸೇರಿದ ಚಿಟ್ಟೆಯಿರಬೇಕು. ಚಿಟ್ಟೆ ಯಾವುದೆಂದು ಗೊತ್ತಾಗಲಿಲ್ಲ, ಆದರೆ ಇಡೀ ಮರ ಕೀಟಗಳ ಚಟುವಟಿಕೆಯಿಂದ ತುಂಬಿಹೋಗಿತ್ತು. ಜೇನುಹುಳಗಳು, ಕಣಜಗಳು, ವಿವಿಧ ಬಣ್ಣದ ನೊಣಗಳು ಮತ್ತು ಗೊತ್ತೇಇರದ ಹಲವಾರು ಕೀಟಗಳು. ಸುಮಾರು ಒಂದು ಗಂಟೆ ಕಾಲ ನಾನು ಅವುಗಳನ್ನು ನೋಡುತ್ತಾPhoto ತೆಗೆಯುತ್ತಾ ನಿಂತೆ. ಕನಿಷ್ಠ ಹನ್ನೊಂದು ವಿಭಿನ್ನ ಪ್ರಭೇದದ ಕೀಟಗಳನ್ನು Photo ತೆಗೆದು ಗುರುತಿಸಿದೆ. Photo ತೆಗೆಯಲಾಗದೆ ಉಳಿದವು ಹಲವಾರು. ಪ್ರಭೇದಗಳ ಸಂಖ್ಯೆ ಇಂದಿಗೂ ಮುಂದುವರೆದಿದೆ.

ನೇರಳೆ ಮರದ ಬಗ್ಗೆ ಓದುತ್ತಿದ್ದಂತೆ ಯಾಕೆ ಇಷ್ಟೆಲ್ಲಾ ಕೀಟಗಳು ಅಲ್ಲಿಗೆ ಎಡತಾಕುತ್ತಿವೆ ಎಂದು ತಿಳಿಯಿತು. ಈ ಮರದ ಎಲೆಗಳಿಂದ ಒಂದು ಸಿಹಿ ರಸ ಸ್ರವಿಸುತ್ತದೆ, ಇದೇ ಕೀಟಗಳನ್ನು ಆಕರ್ಷಿಸುತ್ತದೆ. ಆ ಸಿಹಿ ರಸವೇ ನೆರೆಮನೆಯವನ ಕಾರಿನ ಮೇಲೆ ಬಿದ್ದು ಕರೆ ಉಂಟು ಮಾಡುತ್ತಿತ್ತು. ಈಗ ಮರದ ಮೇಲೆ ಒಂದು ಅದ್ಭುತವಾದ ಚಿಕ್ಕ ಪ್ರಪಂಚ ನಿರ್ಮಾಣವಾಗಿತ್ತು!

ಈ ನೇರಳೆ ಮರವನ್ನು ನೋಡಿದಾಗ, ಅದು ತನ್ನೊಳಗೆ ಒಂದು ಸಣ್ಣ ಕಾಡನ್ನೇ ಒಳಗೊಂಡಿರುವಂತೆ ಕಂಡಿತು.

Emerald Cockroach Wasp ಚಿತ್ರ: © ಶ್ರೀಕಾಂತ

Oriental Fruit Fly ಚಿತ್ರ: © ಶ್ರೀಕಾಂತ

Cockroach Wasp ಚಿತ್ರ: © ಶ್ರೀಕಾಂತ

Potter Waspನ ಒಂದು ವಿಧ ಚಿತ್ರ: © ಶ್ರೀಕಾಂತ

Bamboo Tiger Longhom ಚಿತ್ರ: © ಶ್ರೀಕಾಂತ

Red Dwarf Honey Bee ಚಿತ್ರ: © ಶ್ರೀಕಾಂತ

Giant Honey Bee ಚಿತ್ರ: © ಶ್ರೀಕಾಂತ

Asian Honey Bee ಚಿತ್ರ: © ಶ್ರೀಕಾಂತ

Greater  Banded Hornet ಚಿತ್ರ: © ಶ್ರೀಕಾಂತ

Paper Wasp ಚಿತ್ರ: © ಶ್ರೀಕಾಂತ

Paper Waspನ ಇನ್ನೊಂದು ವಿಧ ಚಿತ್ರ: © ಶ್ರೀಕಾಂತ

Hairy Maggot Blow Fly ಚಿತ್ರ: © ಶ್ರೀಕಾಂತ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಚಿತ್ರ: © ಶ್ರೀಕಾಂತ ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. ಚಿತ್ರ: © ಶ್ರೀಕಾಂತ Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

 ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ್ರ...