ಕಣಗಿಲೆ ಅಥವಾ ನಂದಿಬಟ್ಟಲು ಗಿಡವನ್ನು ಬೆಳೆಸಿರುವವರಿಗೆ, ಸಾಮಾನ್ಯವಾಗಿ ಒಂದು ಕಂಬಳಿ ಹುಳು ಈ ಗಿಡಗಳನ್ನು ಅತಿಥೇಯವಾಗಿ ಬಳಸುವುದು ತಿಳಿದಿರುತ್ತದೆ. ನನಗೂ ಈ ಜೀವಿಯ ಪರಿಚಯವಾಗಿದ್ದು ಹೀಗೆ. ನಮ್ಮ ಮನೆಯಲ್ಲಿ ಕುಂಡದಲ್ಲಿ ಬೆಳೆಸಿದ್ದ ನಂದಿಬಟ್ಟಲಿನ ಗಿಡದ ಎಲೆಗಳು ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾದವು. ಹೀಗೆ ದಿಢೀರನೆ ಎಲೆಗಳನ್ನು ಕಳೆದುಕೊಂಡು ಕಾಷ್ಟವಾಗಿದ್ದ ಗಿಡ ನೋಡಿ ಆಶ್ಚರ್ಯ ಆಯಿತು.
ಏನಾಗಿರಬಹುದು ಎಂದು ಸೂಕ್ಷ್ಮವಾಗಿ ಗಮನಿಸಿದೆ. ನೆಲದ ಮೇಲೆ ಹಸಿರು ಬಣ್ಣದ ಗುಂಡಗಿನ ವಸ್ತುಗಳು ಬಿದಿದ್ದವು. ಅದು ಕಂಬಳಿ ಹುಳುವಿನ ಹಿಕ್ಕೆ ಎಂದು ತಿಳಿಯಿತು. ಗಿಡವನ್ನು ಗಮನಿಸಿದಾಗ ಒಂದು ಟೊಂಗೆಯ ಮೇಲೆ ಹಸಿರು ಬಣ್ಣದ ಕಂಬಳಿ ಹುಳು ಪತ್ತೆಯಾಯಿತು. ನೋಡಲು ಇದು ತುಂಬಾ ಆಕರ್ಷಕವಾಗಿತ್ತು. ಆನಂತರ ತಿಳಿಯಿತು ಇದು ಕಣಗಿಲೆ ಗಿಡುಗ-ಪತಂಗವೆಂದು(Oleander Hawk-Moth).
ಈ ಪತಂಗ, ಏಷ್ಯಾ,ಆಫ್ರಿಕದ ಬಹುತೇಕ ದೇಶಗಳಲ್ಲಿ ಕಂಡು ಬರುತ್ತದೆ. ಇವು ಬೇಸಿಗೆಯಲ್ಲಿ ಯೂರೋಪ್ ಗೆ ವಲಸೆ ಹೋಗುವುದುಂಟು. ಇದರ ವೈಜ್ಞಾನಿಕ ಹೆಸರು ಡ್ಯಾಫ್ನಿಸ್ ನೀರಿ.
ಕಣಗಿಲೆ ಗಿಡುಗ-ಪತಂಗದ ಕಂಬಳಿ ಹುಳುಗಳು ತುಂಬಾ ಆಕರ್ಷಕವಾಗಿರುತ್ತದೆ ಮೊಟ್ಟೆಯಿಂದ ಹೊರಬಂದ ಮರಿ 3-4 ಮಿಮೀ ಇರುತ್ತದೆ. ಬಣ್ಣ ಹಳದಿ. ಇದು ಬೆಳೆದಂತೆ ಹಸಿರು, ಕಂದು ಮತ್ತು ಕೊನೆಯಲ್ಲಿ ಕಡು ಕಂದು ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ನೀಲಿಬಣ್ಣದ ಹುಸಿ ಕಣ್ಣುಗಳು ಇರುತ್ತವೆ. ಏನಾದರು ಅಪಾಯದ ಸನ್ನೀವೇಶ ಎದುರಾದರೆ, ಇವು ತಮ್ಮ ತಲೆಯನ್ನು ಮಡಚಿ ಕಣ್ಣುಗಳನ್ನು ಹಿರಿದಾಗಿಸಿ ತಟಸ್ಥವಾಗುತ್ತವೆ. ಆಗ ನೋಡಲು ಇವು ನಮ್ಮ ಕಲ್ಪನೆಯ ದೆವ್ವ ಭೂತಗಳಂತೆ ಕಾಣುತ್ತವೆ. ಇದು ಅದರ ಶತ್ರುಗಳಿಗೆ ದಿಗಿಲು ಹುಟ್ಟಿಸಬಹುದು. ಪಕ್ಕೆಯುದ್ದಕ್ಕು ಬಿಳಿ ಬಣ್ಣದ ಪಟ್ಟೆಯಿರುತ್ತದೆ ಮತ್ತು ಇದರ ಸುತ್ತ ನೀಲಿ ಬಣ್ಣದ ಚುಕ್ಕೆಗಳು ಇರುತ್ತವೆ. ಇದರ ಕೆಳಗೆ ಕಪ್ಪು ಬಣ್ಣದ ಸ್ಪಿರಾಕಲ್ಸ್ ಇರುತ್ತದೆ. ಸ್ಪಿರಾಕಲ್ಸ್ ಉಸಿರಾಟಕ್ಕೆ ಸಹಾಯ ಮಾಡುತ್ತದೆ. ಇವು ತಮ್ಮ ದೇಹದ ಕೊನೆಯಲ್ಲಿ ಹಳದಿ ಬಣ್ಣದ ಕೊಂಬನ್ನು ಹೊಂದಿರುತ್ತವೆ.
ತನ್ನ ಪ್ಯೂಪ ಹಂತವನ್ನು ದಾಟಿ, ರೆಕ್ಕೆಗಳನ್ನು ಮೂಡಿಸಿಕೊಂಡು ವಯಸ್ಕ ಕೀಟವಾಗುತ್ತದೆ. ನೋಡಲು ತ್ರಿಕೋನಾಕೃತಿಯಲ್ಲಿ ಕಾಣುವ ಈ ಕೀಟ ಮಿಲಿಟರಿ ಸಮವಸ್ತ್ರವನ್ನು ಹೋಲುವ, ಹಸಿರು ಮತ್ತು ಬಿಳಿ ಬಣ್ಣವನ್ನು ಹೊಂದಿರುತ್ತದೆ. ಇವು ನಿಶಾಚರಿಗಳು ಹಾಗಾಗಿ ಹಗಲಿನಲ್ಲಿ ಕಾಣುವುದು ಅಪರೂಪ. ಇವು ರಾತ್ರಿಯ ವೇಳೆ ಅರಳುವ ಮಲ್ಲಿಗೆಯಂತಹ ಹೂಗಳ ಮಕರಂದವನ್ನು ಹೀರಿ ಬದುಕತ್ತವೆ.
ಈ ಕೀಟ ದ ವಿಶೇಷವೆಂದರೆ ಇದು ಭಕ್ಷಿಸುವ ಕಣಗಿಲೆ ಅಥವಾ ನಂದಿಬಟ್ಟಲು ಗಿಡಗಳು ವಿಷಕಾರಿ ಗಿಡಗಳು. ಅದರಲ್ಲು ಕಣಗಿಲೆ ಅತ್ಯಂತ ವಿಷಕಾರಿ ಗಿಡ. ಇಂತಹ ವಿಷಕಾರಿ ಎಲೆಗಳನ್ನು ತಿಂದು ಬದುಕುವುದು ಅಚ್ಚರಿಯ ಸಂಗತಿ. ಇವು ವಿಷಕಾರಿ ಗಿಡಗಳನ್ನು ತಿನ್ನುವುದರಿಂದಲೆ ಇರಬಹುದು, ಈ ಕೀಟಕ್ಕೆ ಯಾವುದೇ ಬೇಟೆಗಾರ ಜೀವಿಗಳಿಲ್ಲ.
ಕುಂಡದಲ್ಲಿ ಬೆಳೆಸಿದ್ದ ನಂದಿಬಟ್ಟಲಿನ ಗಿಡವನ್ನು ಕೈ ತೋಟದಲ್ಲಿ ನೆಟ್ಟಿದೆವು ಇದರ ಪಕ್ಕದಲ್ಲಿ ಕಣಗಿಲೆ ಗಿಡವನ್ನು ಹಾಕಲಾಯಿತು. ಎರಡು ಗಿಡಗಳು ದೊಡ್ಡದಾಗಿ ಬೆಳೆದವು. ಆಗಲು ಕಂಬಳಿ ಹುಳುಗಳು ಗಿಡದಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಆದರೆ ಗಿಡಕ್ಕೆ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಅಲ್ಲದೆ ಕಂಬಳಿ ಹುಳುಗಳು ಗಿಡದಲ್ಲಿ ಇವೆ ಎಂದು ಹುಡುಕಿದರೆ ಮಾತ್ರ ತಿಳಿಯುತ್ತಿತ್ತು. ಇದರಿಂದ ಗೊತ್ತಾಗುವುದು ಏನೆಂದರೆ ಈ ಕೀಟದಿಂದ ಅತಿಥೇಯ ಗಿಡಕ್ಕೆ ಯಾವುದೆ ತೊಂದರೆಯಾಗುವುದಿಲ್ಲ ಎಂದು. ಹಾಗೆ ಈ ತೋಟದಲ್ಲಿ ಮಲ್ಲಿಗೆ ಗಿಡ ಸಹ ಇತ್ತು. ಇದರ ಮಕರಂದವನ್ನು ಪತಂಗ ಸೇವಿಸುತ್ತಿತ್ತೆಂದು ಕಾಣುತ್ತದೆ ಅನೇಕ ಬಾರಿ ಈ ಗಿಡದ ಬಳಿ ಕಾಣಿಸುತ್ತಿತ್ತು. ಈ ಎಲ್ಲ ಗಿಡಗಳಿಂದ ಪತಂಗಕ್ಕೆ ಪರಿಪೂರ್ಣ ಆಶ್ರಯ ದೊರಕಿರಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ