ವಿಷಯಕ್ಕೆ ಹೋಗಿ

ಕಾಡಿನಲ್ಲಿ ಕಂಡ ನೋಟಗಳು

ಕಾಡಿನಲ್ಲಿ ನಡೆಯುವ ಘಟನೆಗಳೆಲ್ಲವೂ ನಮಗೆ ಪೂರ್ತಿಯಾಗಿ ತೆರೆದುಕೊಳ್ಳುತ್ತದೆ ಎಂದೇನಿಲ್ಲ. ಕೆಲವು ಘಟನೆಗಳ ಒಂದು ಭಾಗವನ್ನಷ್ಟೇ ನಮಗೆ ಗೋಚರವಾಗಿ, ಪೂರ್ತಿಯಾಗಿ ಏನು ನಡೆಯಿತು ಎನ್ನುವುದನ್ನು ನಮ್ಮ ಕಲ್ಪನೆಯಲ್ಲಷ್ಟೇ ಉಳಿದುಬಿಡುತ್ತದೆ.



ಗುಂಪಿನ ಬಲದಿಂದ ಕಾಡುನಾಯಿಗಳು ಕಾಟಿಯಂತಹ ದೊಡ್ಡ
ಪ್ರಾಣಿಗಳನ್ನೂ ಬೇಟೆಯಾಡಬಲ್ಲವು. ಚಿತ್ರ: ಶ್ರೀಕಾಂತ

ಒಂದು ದಿನ ನಾಗರಹೊಳೆಯಿಂದ ಕಾರ್ಮಾಡು ಎನ್ನುವ ಊರಿಗೆ ಹೋಗುವ ಕಾಡಿನ ದಾರಿಯಲ್ಲಿ ನಮ್ಮ ಕೆಲಸವಿತ್ತು. ಆ ದಾರಿಯಿಂದ ಹೊರಟ fire line ಒಂದಿತ್ತು. ಅಲ್ಲಿನ ಗಿಡ ಪೊದೆಗಳನ್ನೆಲ್ಲಾ ಕಡಿದು ದೂರದವರೆಗೂ ಕಾಣುವಂತೆ ಮಾಡಿದ್ದರು. ದೂರದಲ್ಲಿದ್ದ ಒಂದು ಏರಿಯಲ್ಲಿ ಆ fire line ಕಾಡಿನೊಳಗೆ ಕಣ್ಮರೆಯಾಗಿತ್ತು. ನಾನು ನಮ್ಮ ಕೆಲಸ ಮಾಡುತ್ತಲೇ ಆ fire line ನೋಡುತ್ತಾ ಕುಳಿತ್ತಿದ್ದೆ. ಆ ಏರು ಶುರುವಾಗುವ ಜಾಗದಲ್ಲಿ ಒಂದು ಕಾಡುನಾಯಿ ಕಾಡಿನಿಂದ ಹೊರಗೆ ಬಂತು. ಓಡುತ್ತಾ ಬಂದ ಆ ನಾಯಿಯ ಹಿಂದೆ ಕಾಟಿಯೊಂದು ಆ ನಾಯಿಯನ್ನೇ ಅಟ್ಟಿಕೊಂಡು ಬಂತು. ಎರಡು ಮೂರು ಕ್ಷಣಗಳಷ್ಟೇ.. ಒಂದು ಕಡೆಯಿಂದ ಬಂದ ಕಾಡುನಾಯಿ, ಕಾಟಿ ಮತ್ತೊಂದು ಕಡೆ ಮರೆಯಾಯ್ತು. ಅಲ್ಲಿ ಏನು ನಡೆದಿರುಬಹುದು ಎಂದು ಕಲ್ಪಿಸುತ್ತಾ ಕುಳಿತೆ. ಕಾಟಿಯ ಗುಂಪೊಂದಿರಬಹುದು. ಆ ಕಡೆಯೇ ಬಂದ ಕಾಡುನಾಯಿಯ ಗುಂಪೊಂದು ಕಾಟಿಗಳನ್ನು ನೋಡಿ ಸ್ವಲ್ಪ ಕಾಡಲು ನಿರ್ಧರಿಸಿ ಅವುಗಳನ್ನು ಬೆದರಿಸಲು ಪ್ರಯತ್ನಿಸಿರಬಹುದು. ಕಾಡು ನಾಯಿ ಗುಂಪಿನ ಹಲವಾರು ನಾಯಿಗಳಲ್ಲಿ ಒಂದು ನಾಯಿಯನ್ನು ಈ ಕಾಟಿ ಓಡಿಸುತ್ತಾ ಬಂದಿರಬಹುದು. ಇವೆಲ್ಲಾ ನನ್ನ ಕಲ್ಪನೆಯಷ್ಟೆ. ಅಲ್ಲಿ ನಿಜವಾಗಿ ಏನು ನಡೆದಿರಬಹುದು ಎನ್ನುವ ಕಲ್ಪನೆ ಕಾಡು ಇನ್ನೂ ಕುತೂಹಲಕಾರಿಯಾಗುವಂತೆ ಮಾಡುತ್ತದೆ.




ದೃಷ್ಟಿ ಮಂದವಾಗಿದ್ದರೂ ಕಾಟಿ ಅತ್ಯಂತ ಬಲಿಷ್ಠ ಪ್ರಾಣಿ. ಚಿತ್ರ: ಶ್ರೀಕಾಂತ




ತನ್ನ ಸುತ್ತಲ ಪರಿಸರದ ಬಣ್ಣಗಳಲ್ಲಿ ಮರೆಯಾಗಿ ಕುಳಿತ ಚಿರತೆ.
ಚಿತ್ರ: ಶ್ರೀಕಾಂತ

ಮತ್ತೊಂದು ಬೆಳಗು. Line Transect surveyಗಾಗಿ ಕಾಡಿನ ಒಂದು ರಸ್ತೆಯಲ್ಲಿದ್ದ ಒಂದು Lineನಲ್ಲಿ ನಡೆಯಲು ಸಿದ್ಧವಾಗುತ್ತಿದ್ದೆವು. ಅದು ಮೇ ತಿಂಗಳ ಕೊನೆಯಭಾಗ. ನಮ್ಮ survey ಮುಕ್ತಾಯದ ಹಂತಕ್ಕೆ ಬಂದಿತ್ತು. ಆಗಲೇ ಮಳೆ ಶುರುವಾಗಿ, ನಾವು ನಡೆಯಬೇಕಾದ ಜಾಗದಲ್ಲೆಲ್ಲಾ ದಟ್ಟ ಪೊದೆಗಳು ಬೆಳೆದು ಮುಚ್ಚಿಹೋಗುವಂತಾಗಿತ್ತು. ಹಿಂದಿನ ರಾತ್ರಿ ಮಳೆಬಂದು ನಿಂತಿದ್ದ, ಆ ಬೆಳಗಿನ ಮೋಡಮುಸುಕಿದ ಹೊತ್ತಿನಲ್ಲಿ ಇನ್ನೂ ಪಕ್ಷಿಗಳೇ ಕೂಗಲು ಶುರುಮಾಡಿರಲಿಲ್ಲ. ದೈತ್ಯಾಕಾರದ ಮರಗಳ ಮಧ್ಯೆಯೆಲ್ಲಾ ಗಿಡಗಳು ಬೆಳೆದು ಕಾಡೆಲ್ಲಾ ಗೌವ್ವೆನ್ನುತ್ತಿತ್ತು. ನಮ್ಮ survey ಶುರುಮಾಡಲು ಬೆಳಕು ಕಡಿಮೆ ಇದ್ದುದರಿಂದ ಅಲ್ಲೇ ಕಾಯುತ್ತಾ ನಿಂತಿದ್ದೆವು. ಹತ್ತು ನಿಮಿಷಗಳ ನಂತರ surveyಗಾಗಿ ಹೊರಟಾಗ ಇದ್ದಕ್ಕಿದ್ದಂತೆ ಚಿರತೆಯ ಗುರುಗುಟ್ಟುವಿಕೆ ಸಮೀಪದಲ್ಲೇ ಕೇಳಲಾರಂಭಿಸಿತು. ಚಿರತೆ ಕಾಣುತ್ತಿಲ್ಲ, ಆದರೆ ಅದರ ಸದ್ದು ಮಾತ್ರ ಕೇಳುತ್ತಿದೆ. ಹಾಗಾದರೆ ನಾವು ಕಾಯುತ್ತಿದ್ದ ಸಮಯದಲ್ಲೂ ಚಿರತೆ ಅಲ್ಲಿಯೇ ಇತ್ತೆ? ನಮ್ಮನ್ನು ನೋಡಿ ಏನು ಯೋಚಿಸುತ್ತಾ ನಿಂತಿರಬಹುದು? ಆ ನಿಶ್ಯಬ್ದ ಹೊತ್ತಿನಲ್ಲಿ ಅದರ ಕೂಗು ದೊಡ್ಡದಾಗಿ ಸುತ್ತಲಿನ ಕಾಡಿನಿಂದ ಪ್ರತಿಧ್ವನಿಸುತ್ತಿತ್ತು. ಕಾಡಿನಲ್ಲಿ ಎಷ್ಟೋಬಾರಿ ಹೀಗಾಗಿರುತ್ತದೆ. ನಾವು ಸುತ್ತಲಿನ ಪ್ರಾಣಿಗಳನ್ನು ನೋಡದೇ ಹೋಗಿರಬಹುದು. ಆದರೆ ಎಲ್ಲಾ ಸಮಯಗಳಲ್ಲೂ ನಾವು ತಪ್ಪದೇ ಗಮನಿಸಲ್ಪಟ್ಟಿರುತ್ತೇವೆ.


 
ಕಾಡಿನ ದಾರಿಯೊಲ್ಲಂದು ಕರಡಿ..
ಚಿತ್ರ: ಶ್ರೀಕಾಂತ

ಎಲ್ಲಾ ಘಟನೆಗಳೂ ಹೀಗಿರುವುದಿಲ್ಲ. ಕೆಲವು ಘಟನೆಗಳು ನಾವಿರುವ ಜಾಗದಲ್ಲಿ ಸರಿಯಾಗಿ ಕಾಣುವಂತಿರುತ್ತದೆ. ಮತ್ತೊಂದು ಘಟನೆ, ಅದು ನಮ್ಮ surveyಯ ಕೊನೆಯದಿನ. ಕಾಡಿನ ಸುಂಕದಕಟ್ಟೆ ಎನ್ನುವ ಹೆಸರಿನ ರಸ್ತೆಯೊಂದರಲ್ಲಿದ್ದೆ. ಅಂದು ನನ್ನ ಕೆಲಸ surveyಗಾಗಿ ನಡೆಯುವವರನ್ನು ನಿಗದಿತ ಸ್ಥಳಕ್ಕೆ ತಲುಪಿಸಿ, surveyಯ ನಂತರ ಅವರನ್ನು ಮತ್ತೆ ಕರೆತರುವುದಾಗಿತ್ತು. ಮಳೆ ಸುರಿದು ನಿಂತಿದ್ದ ಆ ಸಂಜೆ ಜೀಪಿನಲ್ಲಿ ಕುಳಿತು ಕಾಯುತ್ತಿದ್ದೆ. ಪ್ರವಾಸಿಗರಿಗ ಕಾಣಲು ಅನುಕೂಲವಾಗಲೆಂದು ರಸ್ತೆಯ ಅಕ್ಕಪಕ್ಕ ಪೊದೆಗಳನ್ನು ಕಡಿದಿದ್ದ ಆ ರಸ್ತೆಯಲ್ಲಿ ಕಾಡು ದೂರದವರೆಗೂ ಸ್ಪಷ್ಟವಾಗಿ ಕಾಣುತ್ತಿತ್ತು. ಅಂತಹ ರಸ್ತೆಯಲ್ಲಿ ಕರಡಿಯೊಂದು ನಡೆದು ಬರುತ್ತಿತ್ತು. ಮಳೆ ಬಂದು ಮೆದುವಾದ ನೆಲವನ್ನು ಕೆದಕುತ್ತಾ, ಆಹಾರ ಹುಡುಕಿಕೊಂಡು ಬರುತ್ತಿದ್ದ ಆ ಕರಡಿ ತುಂಬಾ ದೊಡ್ಡದಾಗಿತ್ತು. ಒಂದು ಕಡೆಯಂತೂ ಒಂದು ಮರದ ಹತ್ತಿರ ಎದ್ದು ನಿಂತು ತನ್ನ ಬೆನ್ನನ್ನು ಚೆನ್ನಾಗಿ ತುರಿಸಿಕೊಂಡಿತು. ಆಗಲೇ ಅದರ ಗಾತ್ರ ಪೂರ್ತಿಯಾಗಿ ಕಂಡಿದ್ದು.




ಗುಂಪಿನಲ್ಲಿ ಮರಿಯೊಂದಿದ್ದರೆ ಆನೆಗಳು ತುಂಬಾ ರಕ್ಷಣಾತ್ಮಕವಾಗಿರುತ್ತವೆ
ಚಿತ್ರ: ಶ್ರೀಕಾಂತ

ಅದೇ ಸಮಯದಲ್ಲಿ ರಸ್ತೆ ದಾಟಲು ರಸ್ತೆಯ ಒಂದು ಬದಿಯಿಂದ ಆನೆಯ ಗುಂಪೊಂದು ಬಂದಿತು. ಆ ಗುಂಪಿನಲ್ಲಿ ಮೂರು ಆನೆ, ಅದರಲ್ಲಿ ಒಂದು ಚಿಕ್ಕ ಮರಿ. ಆನೆಯ ಗುಂಪು ಕರಡಿನ್ನು ನೋಡಿದ್ದೇ, ಒಂದು ಆನೆ ಕರಡಿಯನ್ನು ಅಟ್ಟಲು ಶುರುಮಾಡಿತು. ಕರಡಿಗೆ ಆನೆಗಳ ಬಗ್ಗೆ ಯೋಚನೆಯೇ ಇರಲಿಲ್ಲ. ಆ ಆನೆಗಳ ಗುಂಪಿಗೆ ಈ ಒಂದು ಕರಡಿ ಏನು ಮಾಡಲು ಸಾಧ್ಯ? ಆದರೂ ಆನೆಗಳು ಹೀಗೆ ಯೋಚಿಸಲಿಲ್ಲ. ಆನೆಗೂ ಕರಡಿಗೂ ತುಂಬಾ ಅಂತರವಿತ್ತು. ಆದರೂ ಆನೆಯೊಂದು ತನ್ನಕಡೆ ಬರುತ್ತಿದೆ ಎಂದು ಅರಿತ ಕರಡಿ ಹೆಚ್ಚೇನು ತಲೆ ಕೆಡಿಸಿಕೊಳ್ಳದೆ ರಸ್ತೆ ಬಿಟ್ಟು ಸ್ವಲ್ಪವೇ ಪಕ್ಕ ಹೋಯಿತು. ಆ ಮೂರು ಆನೆಗಳು ಅನಾವಶ್ಯಕವಾಗಿ ಭಯಪಡುತ್ತಾ ರಸ್ತೆ ದಾಟಿ ಇನ್ನೊಂದು ಬದಿಯ ಕಾಡಿನಲ್ಲಿ ಮರೆಯಾಯ್ತು. ಕರಡಿ ಆಹಾರ ಹುಡುಕುವುದರ ಕಡೆಗೆ ಗಮನ ನೀಡುತ್ತಾ ಮತ್ತೆ ರಸ್ತೆಗೆ ಬಂದು ನಡೆದು ನಾನಿದ್ದ ಜೀಪಿಗೆ ಹತ್ತಿರವಾಯ್ತು. ಆನೆಗಳಿಗೆ ಗಮನ ನೀಡದ ಕರಡಿ, ಜೀಪ್ ಇನ್ನೂ ಸುಮಾರು ಐವತ್ತು ಮೀಟರ್ ದೂರದಲ್ಲಿರುವಾಗಲೇ, ಅನುಮಾನದಿಂದ ಜೀಪಿನ ಕಡೆ ನೋಡಿ ಕಾಡಿನ ಒಳಕ್ಕೆ ಹೋಗಿ, ಮರಗಳ ಹಿಂದಿನಿಂದ ನಮ್ಮನ್ನು ದಾಟಿ ಹಿಂದೆ ಹೋಯ್ತು. ಕಾಡಿನೊಳಗೆಲ್ಲೋ ನುಗ್ಗಿದ್ದ ಆ ಆನೆಗಳ ಗುಂಪೂ ಕೂಡ ರಸ್ತೆ ಆ ಬದಿಯಿಂದ ಮತ್ತೆ ಹೊರಬಂದು ಜೀಪಿಗೆ ಹತ್ತಿರದಲ್ಲೇ, ಜೀಪನ್ನು ನೋಡಿಯೂ ನೋಡದಂತೆ, ಅವಸರದಲ್ಲಿ ರಸ್ತೆ ದಾಟಿ ಕಾಡು ಸೇರಿತು.

ಮಳೆ ಸುರಿದು ತೊಳೆದಿಟ್ಟಂತಿದ್ದ ಆಗಸದಲ್ಲಿ ಸೂರ್ಯ ಮೆಲ್ಲಗೆ ಇಳಿಯುತ್ತಿದ್ದ. ಕಾಡಿನಲ್ಲಿ ನಡೆಯುವ ಘಟನೆಯೊಂದು ಹೀಗೆ ನನ್ನ ಮುಂದೆ ತೆರೆದುಕೊಂಡಿದ್ದು ಸುಂದರ ನಾಟಕದಂತೆ ಮನದಲ್ಲಿ ಉಳಿದುಕೊಂಡಿದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...