ವಿಷಯಕ್ಕೆ ಹೋಗಿ

ಟಿಟ್ಟಿಭನ ಕಥೆ

    ಬಂಡೀಪುರದಲ್ಲಿ ಒಂದು ದಿನ ಜೀಪ್ ರಸ್ತೆಯ ಬದಿಯಲ್ಲಿ ಟಿಟ್ಟಿಭ (Red-wattled Lapwing) ಗೂಡು ಕಂಡಿತು. "ಗೂಡು" ಎಂದರೆ ಮರದ ಮೇಲೆ ಕಟ್ಟಿದ ಗೂಡಲ್ಲ. ನಾವು ಪ್ರತಿದಿನ ಓಡಾಡುವ ಮಣ್ಣಿನ ರಸ್ತೆಯ ಅಂಚಿನಲ್ಲಿ, ಸ್ವಲ್ಪ ಹಳ್ಳವಾಗಿದ್ದ ಜಾಗದಲ್ಲಿ ನೆಲದ ಮೇಲೆಯೇ ನಾಲ್ಕು ಮೊಟ್ಟೆಗಳನ್ನು ಇಟ್ಟಿತ್ತು. ಸುತ್ತಲೂ ಇದ್ದ ಒಣಮಣ್ಣು ಮತ್ತು ಸಣ್ಣ ಕಲ್ಲುಗಳ ಬಣ್ಣವೇ ಮೊಟ್ಟೆಗಳು ಇದ್ದ ಕಾರಣ ಅಷ್ಟೇನೂ ಸುಲಭವಾಗಿ ಕಣ್ಣಿಗೆ ಬೀಳುವಂತಿರಲಿಲ್ಲ.

ನಾನು ಜೀಪ್ ನಿಲ್ಲಿಸಿ ಗೂಡಿನ ಕಡೆ ನಡೆದುಕೊಂಡು ಹೋದೆ. ತಾಯಿ ಟಿಟ್ಟಿಭ ಯಾವುದೇ ಸದ್ದು ಮಾಡದೆ ಸುಮ್ಮನೆ ಎದ್ದು ಪಕ್ಕದಲ್ಲಿದ್ದ ಪೊದೆಯೊಳಗೆ ಓಡಿ ಮರೆಯಾಯಿತು. ನಾನು ಮೊಟ್ಟೆಗಳ ಕೆಲವು ಚಿತ್ರಗಳನ್ನು ತೆಗೆದು ಅಲ್ಲಿಂದ ಹೊರಟೆ.

ಸುಮಾರು ಒಂದು ವಾರ ಆ ಕಡೆ ಹೋಗುವ ಅವಕಾಶವೇ ಬರಲಿಲ್ಲ. ಮತ್ತೆ ಅದೇ ರಸ್ತೆಯಲ್ಲಿ ಹೋಗಬೇಕಾದಾಗ ಕುತೂಹಲದಿಂದ ಜೀಪ್ ನಿಲ್ಲಿಸಿ ಗೂಡಿನತ್ತ ನೋಡಿದೆ. ನಾಲ್ಕು ಮೊಟ್ಟೆಗಳಲ್ಲಿ ಮೂರು ಮರಿಗಳಾಗಿದ್ದವು. ಆದರೆ ಈ ಬಾರಿ ತಾಯಿ ಹಕ್ಕಿಯ ವರ್ತನೆ ಸಂಪೂರ್ಣ ಬದಲಾಗಿತ್ತು. ಹಿಂದಿನಂತೆ ಸುಮ್ಮನೆ ಓಡಿ ಹೋಗಲಿಲ್ಲ. ಸ್ವಲ್ಪ ದೂರ ನಿಂತು ಜೋರಾಗಿ ಕೂಗತೊಡಗಿತು. ಅದರ ಎಚ್ಚರಿಕೆಯ ಕೂಗು ಕೇಳುತ್ತಿದ್ದಂತೆಯೇ ಗೂಡಿನಲ್ಲಿ ಮೌನವಾಗಿ ಕುಳಿತಿದ್ದ ಮರಿಗಳು ಎದ್ದು ಬೇರೆ ಬೇರೆ ದಿಕ್ಕುಗಳಿಗೆ ಓಡಿ ಚೆಲ್ಲಾಪಿಲ್ಲಿಯಾದವು. ಕ್ಷಣಾರ್ಧದಲ್ಲಿ ಅವು ನೆಲದ ಬಣ್ಣದಲ್ಲೇ ಬೆರೆತುಹೋದವು.

ಮೊಟ್ಟೆಗಳಿದ್ದಾಗ ತಾಯಿ ಹಕ್ಕಿ ಯಾವುದೇ ಗದ್ದಲ ಮಾಡಲಿಲ್ಲ. ಆದರೆ ಮರಿಗಳಾದ ನಂತರ ಯಾಕೆ ಇಷ್ಟೊಂದು ಆತಂಕದಿಂದ ಕೂಗತೊಡಗಿತು ಎಂಬುದು ಆಗ ನನಗೆ ಆಶ್ಚರ್ಯವಾಗಿತ್ತು.


ಜೀಪ್ ರಸ್ತೆಯ ಬದಿಯಲ್ಲಿದ್ದ ಸ್ವಲ್ಪ ಹಳ್ಳದ ಜಾಗದಲ್ಲಿ ಟಿಟ್ಟಿಭ ಇಟ್ಟಿದ್ದ ನಾಲ್ಕು ಮೊಟ್ಟೆಗಳು. ಚಿತ್ರ: © ಶ್ರೀಕಾಂತ


ನಾಲ್ಕು ಮೊಟ್ಟೆಗಳಲ್ಲಿ ಮೂರು ಮರಿಗಳಾಗಿ ಹೊರಬಂದಿದ್ದವು. ಚಿತ್ರ: © ಶ್ರೀಕಾಂತ
  

ತಾಯಿ ಹಕ್ಕಿಯ ಎಚ್ಚರಿಕೆಯ ಕೂಗು ಕೇಳುತ್ತಿದ್ದಂತೆಯೇ ಮರಿಗಳು ಗೂಡಿನಿಂದ ಎದ್ದು ಬೇರೆ ಬೇರೆ ದಿಕ್ಕುಗಳಿಗೆ ಓಡಿ ಚೆಲ್ಲಾಪಿಲ್ಲಿಯಾದವು. ಚಿತ್ರ: © ಶ್ರೀಕಾಂತ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಚಿತ್ರ: © ಶ್ರೀಕಾಂತ ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. ಚಿತ್ರ: © ಶ್ರೀಕಾಂತ Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

 ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ್ರ...