(ಅಮೆರಿಕನ್ ಮಾನವ ಶಾಸ್ತ್ರಜ್ಞ Stephen Jay Gould ಅವರ ಬರೆದಿರುವ Ever Since Darwin ಪುಸ್ತಕದ Human Baby as Embryos ಆಧ್ಯಾಯದ ಅನುವಾದ)
ಸ್ವಿಸ್ ಪ್ರಾಣಿಶಾಸ್ತ್ರಜ್ಞ ಅಡಾಲ್ಫ್ ಪೋರ್ಟ್‌ಮನ್ ನನ್ನ ನೆಚ್ಚಿನ ವಿಜ್ಞಾನಿಗಳಲ್ಲಿ ಒಬ್ಬರು. ಪೋರ್ಟ್‌ಮನ್ ತಮ್ಮ ಅಧ್ಯಯನದಲ್ಲಿ, ಸಸ್ತನಿಗಳ ಸಂತಾನೋತ್ಪತ್ತಿ ತಂತ್ರಗಳ ಎರಡು ಮೂಲ ಮಾದರಿಗಳನ್ನು ಗುರುತಿಸಿದ್ದಾರೆ. "ಆದಿಮ" (Primitive) ಎಂದು ಗುರುತಿಸಲ್ಪಡುವ ಕೆಲವು ಸಸ್ತನಿಗಳು, ಕಡಿಮೆ ಗರ್ಭಾವಧಿ ಹೊಂದಿರುತ್ತವೆ ಮತ್ತು ಪೂರ್ಣವಾಗಿ ಬೆಳವಣಿಗೆಯಾಗಿರದ (ಚಿಕ್ಕ ಗಾತ್ರದ, ಕೂದಲುರಹಿತ, ಮುಚ್ಚಿದ ಕಣ್ಣು, ಮುಚ್ಚಿದ ಕಿವಿಗಳನ್ನು ಹೊಂದಿದ ಮತ್ತು ಅಸಹಾಯಕ) ಹೆಚ್ಚಿನ ಸಂಖ್ಯೆಯ ಮರಿಗಳಿಗೆ ಜನ್ಮ ನೀಡುತ್ತದೆ. ಈ ಸಸ್ತನಿಗಳ ಜೀವಿತಾವಧಿಯು ಅಲ್ಪಾವಧಿಯದಾಗಿದ್ದು, ದೇಹದ ಗಾತ್ರಕ್ಕೆ ಹೋಲಿಸಿದರೆ ಚಿಕ್ಕ ಮೆದುಳನ್ನು ಹೊಂದಿರುತ್ತವೆ ಮತ್ತು ಅವುಗಳ ಸಾಮಾಜಿಕ ನಡವಳಿಕೆಯು ಸರಳವಾಗಿರುತ್ತದೆ. ಪೋರ್ಟ್‌ಮನ್ ಈ ಮಾದರಿಯನ್ನು ಆಲ್ಟ್ರಿಷಿಯಲ್ (Altricial) ಎಂದು ಉಲ್ಲೇಖಿಸುತ್ತಾರೆ. ಮತ್ತೊಂದೆಡೆ, ಅನೇಕ "ಮುಂದುವರಿದ" ಸಸ್ತನಿಗಳು ದೀರ್ಘಾವಧಿಯ ಗರ್ಭಧಾರಣೆ, ದೀರ್ಘಾವಧಿಯ ಜೀವಿತಾವಧಿ, ದೊಡ್ಡ ಮೆದುಳು, ಸಂಕೀರ್ಣವಾದ ಸಾಮಾಜಿಕ ನಡವಳಿಕೆಗಳನ್ನು ಹೊಂದಿರುವ, ಮತ್ತು ಕೆಲವು ಪ್ರಾಣಿಗಳು ಚೆನ್ನಾಗಿ ಬೆಳವಣಿಗೆಯಾದ, ಕಡಿಮೆ ಸಂಖ್ಯೆಯ ಶಿಶುಗಳಿಗೆ ಜನ್ಮ ನೀಡುತ್ತವೆ ಮತ್ತು ಅಂತಹ ಬೆಳವಣಿಗೆ ಹೊಂದಿದ ಶಿಶುಗಳ ಪ್ರಸವ ಸಮಯದಲ್ಲಿ ತಾಯಿ ಪ್ರಾಣಿಗೆ ಅಪಾಯವಾಗುವ ಸಾಧ್ಯತೆ ಕಡಿಮೆಯಿರುತ್ತದೆ. ಈ ಮಾದರಿಯನ್ನು ಪ್ರಿಕೋಷಿಯಲ್ (Precocial) ಎಂದೂ ಉಲ್ಲೇಖಿಸುತ್ತಾರೆ.
ಪೋರ್ಟ್‌ಮನ್‌ನ ದೃಷ್ಟಿಯಲ್ಲಿ ಜೀವಿ ವಿಕಾಸ ಪ್ರಕ್ರಿಯೆ ಎನ್ನುವುದು ಆಧ್ಯಾತ್ಮಿಕ ಬೆಳವಣಿಗೆ, ಇದೊಂದು ಮೇಲ್ಮುಖವಾಗಿ ಮುನ್ನಡೆಯುವ ಕ್ರಿಯೆಯಾಗಿದ್ದು, ಆಲ್ಟ್ರಿಷಿಯಲ್ ಮಾದರಿಯೇ ವಿಕಸನಗೊಂಡು ಪ್ರಿಕೋಷಿಯಲ್ ಮಾದರಿಯಾಗಿ ರೂಪುಗೊಳ್ಳುತ್ತದೆ ಎಂದು ವ್ಯಾಖ್ಯಾನಿಸುತ್ತಾರೆ. ಹೆಚ್ಚಿನ ವಿಕಾಸವಾದಿಗಳು ಈ ವ್ಯಾಖ್ಯಾನವನ್ನು ತಿರಸ್ಕರಿಸುತ್ತಾರೆ ಮತ್ತು ಇಂತಹ ಮಾದರಿಗಳನ್ನು ಆ ಪ್ರಾಣಿಗಳು ಬದುಕುವ ಪರಿಸರ ಮತ್ತು ಅವುಗಳ ಅವಶ್ಯಕತೆಗಳಿಗೆ ತಳುಕು ಹಾಕುತ್ತಾರೆ. ಆಲ್ಟ್ರಿಷಿಯಲ್ ಮಾದರಿಯು ಅಸ್ಥಿರ, ಹೆಚ್ಚು ಏರಿಳಿತವಿರುವ ಪರಿಸರಕ್ಕೆ ಸಂಬಂಧ ಹೊಂದಿದಂತೆ ತೋರುತ್ತದೆ. ಇದರಿಂದ ಸಂಪನ್ಮೂಲಗಳ ಲಭ್ಯತೆಯಲ್ಲಿನ ಅನಿಶ್ಚಿತತೆಯನ್ನು ನಿವಾರಿಸಬಹುದು. ಇನ್ನೊಂದೆಡೆ ಪ್ರಿಕೋಷಿಯಲ್ ಮಾದರಿಯು ಸ್ಥಿರ, ಉಷ್ಣವಲಯದ ಪರಿಸರದಲ್ಲಿ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಇಲ್ಲಿ ಲಭ್ಯವಿರುವ ಹೆಚ್ಚು ಸಂಪನ್ಮೂಲಗಳಿಂದ ಪ್ರಾಣಿಗಳಿಗೆ ತಮ್ಮ ಸೀಮಿತ ಶಕ್ತಿಯನ್ನು ಕೆಲವು ಚೆನ್ನಾಗಿ ಬೆಳವಣಿಗೆ ಹೊಂದಿದ ಸಂತತಿ ಬೆಳೆಸಲು ಅನುಕೂಲ.
ವಿವರಣೆ ಏನೇ ಇರಲಿ, ವಾನರಗಳು (Primates) ಪ್ರಿಕೋಷಿಯಲ್ ಮಾದರಿಯ ಸಸ್ತನಿಗಳೆಂದು ಧೈರ್ಯವಾಗಿ ಹೇಳಬಹುದು. ದೇಹದ ಗಾತ್ರಕ್ಕೆ ಸಂಬಂಧಿಸಿದಂತೆ ದೊಡ್ಡದಾದ ಮೆದುಳು ಹೊಂದಿರುತ್ತವೆ ಮತ್ತು ಗರ್ಭಾವಧಿ, ಜೀವಿತಾವಧಿ ದೀರ್ಘವಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಅವು ಜನ್ಮ ನೀಡುವ ಶಿಶುಗಳ ಸಂಖ್ಯೆ ಕನಿಷ್ಠ ಒಂದಕ್ಕೆ ಸೀಮಿತಗೊಂಡಿದೆ. ಹುಟ್ಟುವಾಗ ಶಿಶುಗಳ ಮೆದುಳು ಚೆನ್ನಾಗಿ ಬೆಳವಣಿಗೆ ಹೊಂದಿರುತ್ತವೆ ಮತ್ತು ದೈಹಿಕವಾಗಿ ಸಮರ್ಥವಾಗಿರುತ್ತವೆ. ಇದಕ್ಕೆ ಒಂದು ಅಪವಾದವೆಂದರೆ ನಾವು ಎಂದರೆ ಮನುಷ್ಯರು. ನಾವು ದೀರ್ಘಾಯುಷ್ಯ, ದೊಡ್ಡ ಮೆದುಳು ಮತ್ತು ಕಡಿಮೆ ಸಂಖ್ಯೆಯ ಶಿಶುಗಳು ಇವುಗಳಿಂದ ಹೆಚ್ಚಿಗೆ ನಮ್ಮ ಇತರ ಸೋದರಸಂಬಂಧಿ ವಾನರಗಳಂತೆ ಪ್ರಿಕೋಷಿಯಲ್ ಮಾದರಿಗೆ ಹತ್ತಿರವಾಗಿದ್ದೇವೆ. ಆದರೆ ನಮ್ಮ ಶಿಶುಗಳು ಹುಟ್ಟುವಾಗ ದೈಹಿಕವಾಗಿ ಅಸಹಾಯಕರಾಗಿರುತ್ತವೆ ಮತ್ತು ಹೆಚ್ಚಿನ ಅಲ್ಟ್ರೀಷಿಯಲ್ ಸಸ್ತನಿಗಳಂತೆ ಬೆಳವಣಿಗೆ ಹೊಂದಿರುವುದಿಲ್ಲ. ವಾಸ್ತವವಾಗಿ, ಪೋರ್ಟ್‌ಮನ್ ಸ್ವತಃ ಮಾನವ ಶಿಶುಗಳನ್ನು "ಎರಡನೆ ಬಗೆಯ ಆಲ್ಟ್ರಿಷಿಯಲ್" ಎಂದು ಉಲ್ಲೇಖಿಸುತ್ತಾರೆ. ಹೆಚ್ಚು ಪ್ರಿಕೋಷಿಯಲ್ ಮಾದರಿಗೆ ಹತ್ತಿರವಾಗಿರುವ ಮಾನವ ಶಿಶು (ವಿಶೇಷವಾಗಿ ಮೆದುಳಿಗೆ ಸಂಬಂಧಿಸಿದಂತೆ) ಅದರ ಇತರ ವಾನರ ಸಂಬಂಧಿಗಳಿಗಿಂತ ಕಡಿಮೆ ಬೆಳವಣಿಗೆ ಹೊಂದಿದ ಮತ್ತು ಹೆಚ್ಚು ಅಸಹಾಯಕವಾಗಿ ಜನಿಸುವ ರೀತಿಯಲ್ಲಿ ಏಕೆ ವಿಕಾಸವಾಯಿತು?
ಈ ಪ್ರಶ್ನೆಗೆ ಉತ್ತರ ‘ಮಾನವ ಶಿಶುಗಳು ಇನ್ನೂ ಭ್ರೂಣಾವಸ್ಥೆಯಲ್ಲಿರುವಾಗಲೇ ಜನಿಸುತ್ತವೆ ಮತ್ತು ಜನಿಸಿದ ನಂತರ ಜೀವನದ ಮೊದಲ ಒಂಬತ್ತು ತಿಂಗಳು ಭ್ರೂಣಾವಸ್ಥೆಯಲ್ಲಿಯೇ ಉಳಿಯುತ್ತವೆ. ಒಂದೂವರೆ ವರ್ಷದ ಗರ್ಭಾವಧಿಯ ನಂತರ ಮಾನವ ಮಹಿಳೆಯರು ಶಿಶುವಿಗೆ ಜನ್ಮ ನೀಡಬಹುದಾದರೆ ಮಾನವ ಶಿಶುಗಳು ಇತರ ವಾನರಗಳಂತೆ ಪ್ರಿಕೋಷಿಯಲ್ ಲಕ್ಷಣಗಳನ್ನು ಹೊಂದಿದೆ ಎಂದು ಹೇಳಬಹುದು’. ಹೆಚ್ಚಿನ ಓದುಗರು ಈ ಉತ್ತರ ಅಸಂಬದ್ಧವಾಗಿದೆಯೆಂದು ಭಾವಿಸಬಹುದು. ಪೋರ್ಟ್‌ಮನ್ 1940 ರ ದಶಕದಲ್ಲಿ ಸರಣಿ ಲೇಖನಗಳ ಮೂಲಕ ಇದನ್ನು ಹೇಳಿದ್ದಾರೆ. ಅಕ್ಟೋಬರ್ 1961ರಲ್ಲಿ 'ಜರ್ನಲ್ ಆಫ್ ಅಮೇರಿಕನ್ ಮೆಡಿಕಲ್ ಅಸೋಸಿಯೇಶನ್'ನ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಮಾನವ ಶಾಸ್ತ್ರಜ್ಞ ಆಶ್ಲೇ ಮೊಂಟಾಗು ಸಹಾ ಅದೇ ತೀರ್ಮಾನಕ್ಕೆ ಬಂದಿದ್ದಾರೆ. ಆಕ್ಸ್‌ಫರ್ಡ್ ಮನಶಾಸ್ತ್ರಜ್ಞ ಆರ್. ಇ. ಪಾಸಿಂಗ್‌ಹ್ಯಾಮ್ 1975 ರ ಕೊನೆಯಲ್ಲಿ 'ಬ್ರೈನ್, ಬಿಹೇವಿಯರ್ ಮತ್ತು ಎವಲ್ಯೂಷನ್' ಎಂಬ ಒಂದು ಲೇಖನದಲ್ಲಿ ಇದನ್ನೇ ಹೇಳಿದರು. ಇವರೆಲ್ಲರ ವಾದ ಮೂಲತಃ ಸರಿ ಅನ್ನಿಸಿದ್ದರಿಂದಲೇ ನಾನು ಕೂಡ ಇದನ್ನು ಹೇಳುತ್ತಿದ್ದೇನೆ. ಈ ವಾದವು ಅಸಂಬದ್ಧವಾಗಿರಬಹುದು ಎಂಬ ಅನಿಸಿಕೆ ಮಾನವ ಗರ್ಭಾವಸ್ಥೆಯ ಅವಧಿಯಿಂದ ಉದ್ಭವಿಸುತ್ತದೆ. ಗೊರಿಲ್ಲಾಗಳು, ಚಿಂಪ್‌ಗಳು ಮತ್ತು ಇತರ ಯಾವುದೇ ವಾನರರಿಗಿಂತ ಮಾನವನ ಗರ್ಭಾವಸ್ಥೆಯು ಹೆಚ್ಚಿನ ಅವಧಿಯಾದ್ದಗಿದೆ. ಹಾಗಾಗಿಯೂ ಒಂಬತ್ತು ತಿಂಗಳ ಗರ್ಭಾವಧಿ ಮುಗಿದು ಜನಿಸುವ ಮಾನವ ನವಜಾತ ಶಿಶುಗಳನ್ನು ಭ್ರೂಣಗಳೆಂದೇ ಹೇಳಬಹುದು. ಇನ್ನೊಂದು ರೀತಿಯಲ್ಲಿ ಮಾನವ ಶಿಶುಗಳು ಬೇಗನೆ ಜನಿಸುತ್ತವೆ!
ಈ ವಾದವನ್ನು ಮುಂದುವರೆಸುವ ಮುನ್ನ ಜೀವಿಗಳ ಬದುಕುವ ಕಾಲದ ಬಗ್ಗೆ ಸ್ವಲ್ಪ ವಿಚಾರ ಮಾಡೋಣ. ಭೂ ಗ್ರಹದಲ್ಲಿ ನಾವು ಕಾಲವನ್ನು ಅಳೆಯುವ ದಿನ, ತಿಂಗಳು, ವರ್ಷ ಎಲ್ಲಾ ಜೈವಿಕ ಲೆಕ್ಕಾಚಾರಕ್ಕೆ ಸೂಕ್ತವಾಗಲಾರವು. ಪ್ರಾಣಿಗಳ ಸ್ವಂತ ಚಯಾಪಚಯ ಅಥವಾ ಬೆಳವಣಿಗೆಯ ದರದಲ್ಲಿ ತುಲನಾತ್ಮಕವಾಗಿ ಸಮಯವನ್ನು ಅಳೆಯುವಾಗ ಮಾತ್ರ ಕೆಲವು ವಿಷಯಗಳನ್ನು ಸರಿಯಾಗಿ ಗ್ರಹಿಸಬಹುದು. ಉದಾಹರಣೆಗೆ, ಸಸ್ತನಿಗಳ ಜೀವಿತಾವಧಿಯು ಕೆಲವು ವಾರಗಳಿಂದ ಹಿಡಿದು ಶತಮಾನಕ್ಕಿಂತ ಹೆಚ್ಚು ಕಾಲ ಬದಲಾಗುತ್ತದೆ ಎಂದು ನಮಗೆ ತಿಳಿದಿದೆ. ಆದರೆ ಸಸ್ತನಿಗಳ ಸ್ವಂತ ಗ್ರಹಿಕೆಯ ದೃಷ್ಟಿಯಿಂದ ಇದು "ನಿಜವಾದ" ವ್ಯತ್ಯಾಸವೇ? ಇಲಿ ನಿಜವಾಗಿಯೂ ಆನೆಗಿಂತ "ಕಡಿಮೆ" ಜೀವಿಸುತ್ತದೆಯೇ? ಕಾಲವನ್ನು ಅಳೆಯುವ ನಿಯಮಗಳು ಸಣ್ಣ ಪ್ರಾಣಿಗಳು ದೊಡ್ಡ ಪ್ರಾಣಿಗಳಿಗಿಂತ ವೇಗವಾಗಿ ಬದುಕು ಮುಗಿಸುತ್ತವೆ ಎಂದು ತೋರುವಂತೆ ಮಾಡುತ್ತದೆ. ವಾಸ್ತವವಾಗಿ ಎಲ್ಲಾ ಸಸ್ತನಿಗಳು ಒಂದೇ ಕಾಲ ಪ್ರಮಾಣದಲ್ಲಿ ವಾಸಿಸುತ್ತವೆ. ಉದಾಹರಣೆಗೆ, ಎಲ್ಲ ಪ್ರಾಣಿಗಳು ತಮ್ಮ ಜೀವಿತದಲ್ಲಿ ತಮ್ಮ ಗಾತ್ರಕ್ಕೆ ಅನುಗುಣವಾಗಿ ಒಂದೇ ಮೊತ್ತದಲ್ಲಿ ಉಸಿರಾಡುತ್ತವೆ. (ಸಣ್ಣ, ಅಲ್ಪಾವಧಿಯ ಸಸ್ತನಿಗಳು ದೊಡ್ಡ, ನಿಧಾನ ಚಯಾಪಚಯ ಹೊಂದಿರುವ ಸಸ್ತನಿಗಳಿಗಿಂತ ವೇಗವಾಗಿ ಉಸಿರಾಡುತ್ತವೆ, ಹೃದಯವು ಹೆಚ್ಚು ವೇಗವಾಗಿ ಬಡಿಯುತ್ತದೆ ಮತ್ತು ಚಯಾಪಚಯವು ಹೆಚ್ಚಿನ ವೇಗದಲ್ಲಿ ಮುಂದುವರಿಯುತ್ತದೆ).
ಮಾನವ ಗರ್ಭಾವಧಿಯು ಒಂಬತ್ತು ತಿಂಗಳುಗಳಷ್ಟು ಕಾಲ ದೀರ್ಘವಾಗಿರುತ್ತದೆ, ಆದರೆ ಮಾನವ ಜೀವಿತಾವಧಿ ಮತ್ತು ಬೆಳವಣಿಗೆಯ ವೇಗಕ್ಕೆ ಹೋಲಿಸಿದರೆ ಅದು ಚಿಕ್ಕ ಅವಧಿಯಾಗಿದೆ. ಮಾನವ ವಿಕಾಸದ ಒಂದು ಪ್ರಮುಖ ಲಕ್ಷಣವೆಂದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಧಾನಗತಿಯಾದ ಬೆಳವಣಿಗೆಯಾಗಿದೆ. ನಮ್ಮ ಬುದ್ದಿಮತ್ತೆಯು ಇತರ ವಾನರರಿಗಿಂತ ನಿಧಾನವಾಗಿ ಮತ್ತು ದೀರ್ಘಾವಧಿಯವರೆಗೆ ಬೆಳೆಯುತ್ತವೆ, ನಮ್ಮ ಮೂಳೆಗಳು ಬಹಳ ನಿಧಾನವಾಗಿ ಬಲಿಷ್ಠವಾಗುತ್ತವೆ ಮತ್ತು ನಮ್ಮ ಬಾಲ್ಯದ ಅವಧಿಯು ಬಹಳವಾಗಿ ವಿಸ್ತರಿಸಲ್ಪಟ್ಟಿದೆ. ವಾಸ್ತವವಾಗಿ, ಹೆಚ್ಚಿನ ಸಸ್ತನಿಗಳು ಅವುಗಳ ಜೀವಿತಾವಧಿಯಲ್ಲಿ ಸಾಧಿಸುವ ಬೆಳವಣಿಗೆಯ ಮಟ್ಟವನ್ನು ಮಾನವರು ಎಂದಿಗೂ ತಲುಪುವುದಿಲ್ಲ. ಮಾನವ ವಯಸ್ಕರು ದೈಹಿಕ ವಿಷಯಗಳಿಗೆ ಸಂಬಂಧಿಸಿದಂತೆ, ವಾನರಗಳ ಶಿಶುಗಳ ಗುಣಲಕ್ಷಣಗಳನ್ನು ಉಳಿಸಿಕೊಂಡಿದ್ದಾರೆ! ಜೀವಿವಿಕಾಸಕ್ಕೆ ಸಂಬಂಧಿಸಿದಂತೆ ಈ ವಿದ್ಯಮಾನವನ್ನು “ನಿಯಾಟನಿ” (Neoteny) ಎಂದು ಹೆಸರಿಸಲಾಗಿದೆ.
ಇತರ ಸಸ್ತನಿಗಳೊಂದಿಗೆ ಹೋಲಿಸಿದರೆ, ನಾವು ದೈಹಿಕವಾಗಿ ಮತ್ತು ಬುದ್ದಿಮತ್ತೇ ವಿಷಯದಲ್ಲಿ ನಿಧಾನಗತಿಯ ವೇಗದಲ್ಲಿ ಬೆಳೆಯುತ್ತೇವೆ; ಆದರೂ ನಮ್ಮ ಗರ್ಭಾವಧಿಯು ಇತರ ವಾನರರಿಗಿಂತ ಕೆಲವೇ ದಿನಗಳು ಹೆಚ್ಚು. ನಮ್ಮದೇ ಬೆಳವಣಿಗೆಯ ವೇಗಕ್ಕೆ ಸಂಬಂಧಿಸಿದಂತೆ ಗರ್ಭಾವಧಿ ಗಮನಾರ್ಹವಾಗಿ ಕಡಿಮೆಯಾಗಿದೆ. ಗರ್ಭಾವಸ್ಥೆಯ ಅವಧಿಯು ನಮ್ಮ ಉಳಿದ ಬೆಳವಣಿಗೆಯಷ್ಟು ನಿಧಾನವಾಗಿದ್ದರೆ, ಮಾನವ ಶಿಶುಗಳ ನಿಜವಾಗಿ ಗರ್ಭಾವಧಿಯು ಹದಿನಾರರಿಂದ ಹದಿನೇಳು ತಿಂಗಳು (ಪಾಸಿಂಗ್‌ಹ್ಯಾಮ್‌ನ ಅಂದಾಜು), ಹತ್ತೊಂಬತ್ತು ತಿಂಗಳು (ಪೋರ್ಟ್‌ಮನ್ ಮತ್ತು ಆಶ್ಲೇ ಮೊಂಟಾಗು ಅವರ ಅಂದಾಜು) ಆಗಿರಬೇಕಿತ್ತು.
ಇದು ಬರಿಯ ಆಕರ್ಷಕ ಮಾತುಗಳಲ್ಲ. ನಾನು ಸಹಾ ಜನಿಸಿದ ನಂತರ ನವಿರಾದ ಮೊದಲ ಎರಡು ವರ್ಷಗಳನ್ನು ಕಳೆದಿದ್ದೇನೆ ಮತ್ತು ಆ ವಯಸ್ಸಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಎಲ್ಲಾ ಸಂತೋಷ ಮತ್ತು ರಹಸ್ಯಗಳನ್ನು ಅನುಭವಿಸಿದ್ದೇನೆ – ಇವು ಗರ್ಭದ ಕತ್ತಲೆಯಲ್ಲಿ ಎಂದಿಗೂ ಸಂಭವಿಸದ ಸಂಗತಿಗಳು. ಆದರೂ, ನಾನು ಮಾನವ ಶಿಶುವಿನ ದೈಹಿಕ ಬೆಳವಣಿಗೆಯ ದತ್ತಾಂಶವನ್ನು ಪರಿಗಣಿಸಿದಾಗ ಪೋರ್ಟ್‌ಮನ್ ಪರವಾಗಿದ್ದೇನೆ, ಏಕೆಂದರೆ ಬೇರಾವುದೇ ಸಸ್ತನಿಗಳಿಗೆ ಹೋಲಿಸಿದರೆ ಜನಿಸಿದ ನಂತರ ಒಂದು ವರ್ಷದವರೆಗೂ ಮಾನವ ಶಿಶುಗಳ ಬೆಳವಣಿಗೆ ಹೆಚ್ಚಾಗಿ ಭ್ರೂಣದ ಬೆಳವಣಿಗೆಯನ್ನು ಹೋಲುತ್ತವೆ. (ಕೆಲವು ರೀತಿಯ ಬೆಳವಣಿಗೆಗಳನ್ನು ಭ್ರೂಣಕ್ಕೆ ಸೀಮಿತ ಎಂದು ಗುರುತಿಸುವುದು ಸಾಧ್ಯವಿಲ್ಲ. ಪ್ರಸವಾನಂತರದ ಶಿಶುವಿನ ಬೆಳವಣಿಗೆ ಭ್ರೂಣದ ಬೆಳವಣಿಗೆಯ ಮುಂದುವರೆದ ಭಾಗವಲ್ಲ; ಜನನವೆಂದರೆ ಭ್ರೂಣದ ಬೆಳವಣಿಗೆಯ ಹಲವು ಲಕ್ಷಣಗಳ ಸ್ಥಗಿತದ ಸಮಯವಾಗಿದೆ) ನವಜಾತ ಮಾನವ ಶಿಶುಗಳಲ್ಲಿ ಬೆರಳು ಮೂಳೆಗಳು ಅಥವಾ ಬೆರಳುಗಳ ತುದಿಗಳು ಸಂಪೂರ್ಣವಾಗಿ ಬೆಳವಣಿಗೆಯಾಗಿರುವುದಿಲ್ಲ. ಆದರೆ ಕೋತಿಗಳಲ್ಲಿ ಈ ಮಟ್ಟದ ಬೆಳವಣಿಗೆ ಭ್ರೂಣದ ಹದಿನೆಂಟನೇ ವಾರದಲ್ಲೇ ಆಗಿರುತ್ತದೆ. ಇಪ್ಪತ್ತನಾಲ್ಕು ವಾರಕ್ಕೆ ಜನಿಸುವ ಕೋತಿಗಳ ಕೈ ಬೆರಳುಗಳ ಬೆಳವಣಿಗೆಯ ಹಂತ ತಲುಪಲು ಮಾನವ ಶಿಶುವಿಗೆ ಹುಟ್ಟಿದ ನಂತರ ಒಂದು ವರ್ಷ ಬೇಕಾಗುತ್ತದೆ. ಮೆದುಳಿನ ವಿಚಾರಕ್ಕೆ ಬಂದರೆ, ಭ್ರೂಣಾವಸ್ಥೆಯಲ್ಲೂ ಮತ್ತು ಜನನದ ನಂತರವೂ ನಮ್ಮ ಮೆದುಳು ತ್ವರಿತವಾಗಿ ಬೆಳೆಯುತ್ತಲೇ ಇರುತ್ತದೆ. ಅನೇಕ ಸಸ್ತನಿಗಳ ಮಿದುಳುಗಳು ಜನನದ ಸಂದರ್ಭದಲ್ಲಿಯೇ ಸಂಪೂರ್ಣವಾಗಿ ಬೆಳವಣಿಗೆಯಾಗಿರುತ್ತದೆ. ವಾನರಗಳಲ್ಲಿ ಮೆದುಳಿನ ಬೆಳವಣಿಗೆ ಪ್ರಸವಾನಂತರವೂ ವಿಸ್ತರಿಸುತ್ತವೆ. ಮಾನವ ಶಿಶುಗಳ ಮೆದುಳು ಜನನದ ಸಮಯದಲ್ಲಿ ಅದು ಪೂರ್ಣವಾಗಿ ಬೆಳೆದ ಮೇಲೆ ಇರುವ ಗಾತ್ರದ ನಾಲ್ಕನೇ ಒಂದು ಭಾಗ ಮಾತ್ರ ಇರುತ್ತದೆ. ಜನಿಸಿದ ಸುಮಾರು ಆರು ತಿಂಗಳವರೆಗೆ ಮನುಷ್ಯ ಶಿಶುವಿನ ಮೆದುಳು ಚಿಂಪಾಂಜಿಯ ಶಿಶು ಜನಿಸಿದಾಗ ಅದಕ್ಕೆ ಬೆಳವಣಿಗೆಯಾಗಿರುವಷ್ಟು ಪ್ರಮಾಣವನ್ನು ತಲುಪುವುದಿಲ್ಲ. ಪಾಸಿಂಗ್‌ಹ್ಯಾಮ್ ಹೇಳುವ ಮಾನವನ ಗರ್ಭಾವಧಿ ಎಷ್ಟು ಧೀರ್ಘಾವಾಗಿ ಇರಬೇಕು ಎನ್ನುವುದಕ್ಕೆ ಈ ಅವಧಿಯು ಹೊಂದಿಕೆಯಾಗುತ್ತದೆ.
ಜೀವವಿಕಾಸವು ನಮ್ಮ ಬೆಳವಣಿಗೆಯನ್ನು ಹೆಚ್ಚು ನಿಧಾನವಾಗಿಸಿದೆ ಮತ್ತು ಧೀರ್ಘಾವಾಗಿಸಿದೆ, ಸಾಪೇಕ್ಷವಾಗಿ ನಮ್ಮ ಗರ್ಭಾವಸ್ಥೆಯ ಅವಧಿಯನ್ನು ಮಾತ್ರ ಮೊಟಕುಗೊಳಿಸಿದೆ. ಈ ಮೂಲಕ ಇನ್ನೂ ಭ್ರೂಣಾವಸ್ಥೆಯಲ್ಲಿ ಇರುವಾಗಲೇ ಮಾನವ ಶಿಶು ಜನಿಸುವಂತೆ ಮಾಡಿದೆ. ಇದು ಏಕೆ? ಗರ್ಭಾವಸ್ಥೆಯ ಅವಧಿಯು ಉಳಿದ ಬೆಳವಣಿಗೆ, ಜೀವಿತಾವಧಿಗೆ ಸಾಪೇಕ್ಷವಾಗಿ ಏಕೆ ವಿಸ್ತರಿಸಲಿಲ್ಲ?
ಇತರ ಸಸ್ತನಿಗಳಿಗೆ ಹೋಲಿಸಿದರೆ ಮಾನವ ಸ್ತ್ರೀಯರಿಗೆ ಜನ್ಮ ನೀಡುವ ಕ್ರಿಯೆ ಒಂದು ಅಪಾಯಕಾರಿ ಸನ್ನಿವೇಶ. ಭ್ರೂಣದ ತಲೆ ದೊಡ್ಡದಾದಷ್ಟೂ ಪೆಲ್ವಿಕ್ (Pelvic: ಸೊಂಟದ ಮೂಳೆ) ಕಾಲುವೆಯ ಮೂಲಕ ಭ್ರೂಣ ಹಾದು ಶಿಶುಗಳು ಜನಿಸುವ ಕ್ರಿಯೆಯಲ್ಲಿ ಮಾನವ ಸ್ತ್ರೀಯರು ಸಾಯಬಹುದು. ಭ್ರೂಣದ ತಲೆ ಪೆಲ್ವಿಕ್ ಕಾಲುವೆಗಿಂತ ಬಲಿಷ್ಠ. ಮಾನವ ವಿಕಾಸ ಪಥದಲ್ಲಿ ಭ್ರೂಣದ ಗಾತ್ರವು ತನ್ನ ಗರಿಷ್ಟ ಮಿತಿಯ ಸಮೀಪದಲ್ಲಿದೆ. ಅದೇ ಸಮಯಕ್ಕೆ ಎರಡು ಕಾಲಿನಮೇಲೆ ನಡೆಯಲು ಶುರುಮಾಡಿದ ಮಾನವನ ಸೊಂಟದ ಮೂಳೆಯ ಗಾತ್ರವೂ ಕುಗ್ಗಿದೆ. ಆದ್ದರಿಂದ ಒಂದೂವರೆ ವರ್ಷದ ಮಗುವಿಗೆ ಯಶಸ್ವಿಯಾಗಿ ಜನ್ಮ ನೀಡುವುದು ಮಾನವ ಸ್ತ್ರೀಯರಿಗೆ ಸಾಧ್ಯವಿಲ್ಲ.
ಈ ಕಥೆಯ ಅಪರಾಧಿ ನಮ್ಮ ದೊಡ್ಡ ಮೆದುಳು. ಹೆಚ್ಚಿನ ಸಸ್ತನಿಗಳಲ್ಲಿ ಮೆದುಳಿನ ಬೆಳವಣಿಗೆ ಸಂಪೂರ್ಣವಾಗಿ ಭ್ರೂಣಕ್ಕೆ ಸಂಬಂಧಿಸಿದ ವಿದ್ಯಮಾನವಾಗಿದೆ. ಆದರೆ ಅವುಗಳ ಮೆದುಳು ದೊಡ್ಡದಾಗಿರುವುದಿಲ್ಲ, ಇದು ಜನನಕ್ಕೆ ಯಾವುದೇ ಸಮಸ್ಯೆ ಉಂಟುಮಾಡುವುದಿಲ್ಲ. ದೊಡ್ಡ ಮೆದುಳಿನ ಮಂಗಗಳಲ್ಲಿ, ಪ್ರಸವಪೂರ್ವದಲ್ಲಿ ಭ್ರೂಣದ ಮೆದುಳಿನ ಬೆಳವಣಿಗೆ ಇದ್ದರೂ ಜನನ ಸಮಯದಲ್ಲಿ ಅದು ಹೆಣ್ಣು ಮಂಗಗಳಿಗೆ ಅಪಾಯಕಾರಿಯಾಗುವಷ್ಟು ದೊಡ್ಡದಾಗಿರುವುದಿಲ್ಲ. ಹೀಗಾಗಿ ಸಾಪೇಕ್ಷವಾಗಿ ಗರ್ಭಾವಧಿಯ ಸಮಯ ಬದಲಾಗುವ ಅಗತ್ಯವಿಲ್ಲ. ಆದರೆ ಮಾನವ ಮೆದುಳು ತುಂಬಾ ದೊಡ್ಡದಾಗಿದ್ದು, ಯಶಸ್ವಿ ಜನನಕ್ಕೆ ಮತ್ತೊಂದು ತಂತ್ರ ಸೇರಿಕೊಳ್ಳಬೇಕು – ನಮ್ಮ ಮೆದುಳು ಅದರ ಅಂತಿಮ ಗಾತ್ರದ ನಾಲ್ಕನೇ ಒಂದು ಭಾಗ ಬೆಳೆದಿರುವಾಗಲೇ ನಮ್ಮ ಜನನವಾಗಬೇಕು, ಇದಕ್ಕಾಗಿ ನಮ್ಮ ದೈಹಿಕ ಬೆಳವಣಿಗೆಯ ವೇಗ ಮತ್ತು ಜೀವಿತಾವಧಿಗೆ ಹೋಲಿಸಿದರೆ ಗರ್ಭಾವಧಿ ಕಡಿಮೆಯಾಗಬೇಕು.
ಬಹುಶಃ ಮಾನವ ಸ್ತ್ರೀಯರ ಸೊಂಟದ ಮೂಳೆಗೆ ಸಾಪೇಕ್ಷವಾಗಿ, ಜನನ ಸಮಯದಲ್ಲಿನ ನಮ್ಮ ಮೆದುಳು ಅದರ ಗಾತ್ರದ ಅಂತಿಮ ಮಿತಿಯನ್ನು ತಲುಪಿದೆ. ಈ ಗಾತ್ರದ ಮೆದುಳಿನ ಸಾಮರ್ಥ್ಯದೊಂದಿಗೆ ನಾವು ಮುಂದಿನ ಹಲವು ಸಹಸ್ರಮಾನಗಳನ್ನು ಸಂತೋಷದಿಂದ ಕಳೆಯಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ