ಬಹಳ ವರ್ಷಗಳ ಹಿಂದೆ ನಮ್ಮ ಮನೆಯ ಲೆಟರ್ಬಾಕ್ಸ್ನಲ್ಲಿ ಒಂದು ಕೀಟ ಗೂಡು ರಚಿಸಿತ್ತು. ಆ ಗೂಡು ನೋಡಲು ಷಟ್ಕೋನಾಕೃತಿಯಲ್ಲಿದ್ದರಿಂದ ಅದನ್ನು ನಾನು ಜೇನು ಹುಳು ಎಂದೆ ತಿಳಿದುಕೊಂಡಿದ್ದೆ. ಆದರೆ ನನ್ನ ತಂದೆ ಹೇಳಿದ ಅನಂತರ ತಿಳಿಯಿತು ಅದು ಜೇನು ಹುಳು ಅಲ್ಲ ಬದಲಿಗೆ ಕಣಜವೆಂದು. ಅಷ್ಚೆ ಅಲ್ಲದೆ ಅದರ ಕಡಿತ ತುಂಬ ನೋವಿನಿಂದ ಕೂಡಿರುತ್ತದೆ ಅದರ ತಂಟೆಗೆ ಹೋಗಬಾರದೆಂದು ಎಚ್ಚರಿಸಿದ್ದರು.
ನಾವು ಎಷ್ಟೆ ಎಚ್ಚರವಹಿಸಿದರು ನನ್ನ ತಮ್ಮನಿಗೆ ಅದರ ಕಡಿತದ ರುಚಿ ಕಾಣುವಂತಾಯಿತು. ಹೀಗಾಗಿ ಅನಿವಾರ್ಯವಾಗಿ ಆ ಗೂಡನ್ನು ನಿರ್ಮೂಲನೆ ಮಾಡಬೇಕಾಯಿತು.ಮುಂದಿನ ದಿನಗಳಲ್ಲಿ ಕೀಟಗಳ ಬಗ್ಗೆ ಆಸಕ್ತಿ ಮೂಡಿ ಹೆಚ್ಚು ತಿಳಿದುಕೊಂಡಂತೆಲ್ಲ ಈ ಕೀಟದ ಪರಿಚಯವು ಆಗಿ ಇದು ಪೇಪರ್ ಕಣಜವೆಂದು (paper wasp) ತಿಳಿಯಿತು. ಕಣಜಗಳು ಹೈಮೆನೊಪ್ಟೇರ ಗುಂಪಿಗೆ ಸೇರಿರುವ ಕೀಟ ಆದರೆ ಇವು ಇರುವೆ ಅಥವಾ ದುಂಬಿಗಳು ಅಲ್ಲ. ಪೇಪರ್ ಕಣಜಗಳು ವೆಸ್ಪಿಡೆ ಕುಟುಂಬಕ್ಕೆ ಮತ್ತು ಪಾಲಿಸ್ಟಿನೆ ಉಪಕುಟುಂಬಕ್ಕೆ ಸೇರುತ್ತವೆ. ಇವು ಉತ್ತಮ ಸಾಮಾಜಿಕ ಜೀವಿಗಳು. ಇವು ತಮ್ಮ ಗೂಡನ್ನು ಒಣಗಿದ ಗಿಡಗಳ ನಾರಿಗೆ ತಮ್ಮ ಜೊಲ್ಲಿನ ರಸವನ್ನು ಸೇರಿಸಿ ಪೇಪರ್ ರೀತಿಯಲ್ಲಿ ರಚಿಸುತ್ತವೆ. ಹಾಗಾಗಿ ಇದಕ್ಕೆ ಪೇಪರ್ ಕಣಜ ಎಂಬ ಹೆಸರು ಬಂದಿದೆ.
ಸಂತಾನೋತ್ಪತ್ತಿ ಮಾಡುವ ಒಂದು ಹೆಣ್ಣು ಕಣಜ ಅಥವಾ ಅಂತಹ ಕಣಜಗಳ ಒಂದು ಗುಂಪು ಗೂಡನ್ನು ರಚಿಸಲು ಶುರು ಮಾಡುತ್ತವೆ. ಇವು ನಮ್ಮ ಮನೆಗಳ ಛಾವಣಿಯ , ಸಜ್ಜದ ಕೆಳಗೆ, ಬಟ್ಟೆ ಒಣಗಿಸುವ ಆಧಾರ ಕಂಬಗಳ ಕೆಳಗೆ ಮತ್ತು ಮಳೆ, ಬಿಸಿಲಿನನಿಂದ ರಕ್ಷಣೆ ಒದಗಿಸುವ ಎಡೆಯಲ್ಲಿ ತಮ್ಮ ಗೂಡನ್ನು ರಚಿಸುತ್ತವೆ. ಷಟ್ಕೋನಾಕೃತಿಯಲ್ಲಿರುವ ಇವುಗಳ ಗೂಡು ಷಟ್ಕೋನಾಕೃತಿಯಲ್ಲಿರುವ ಕೋಶದಿಂದ ಕೂಡಿರುತ್ತದೆ ಮತ್ತು ತಳಕ್ಕೆ ಒಂದು ಸಣ್ಣ ತಂತುವಿನಿಂದ ಅಂಟಿಸಲ್ಪಟ್ಟಿರುತ್ತದೆ. ಗೂಡು ಕೆಲವು ಪ್ರಬೇಧಗಳಲ್ಲಿ ವೃತ್ತಾಕಾರವಾಗಿ, ಕೆಲವು ಪ್ರಬೇಧಗಳಲ್ಲಿ ಅಡ್ಡಡ್ಡವಾಗಿ, ಕೆಲವು ಪ್ರಬೇಧಗಳಲ್ಲಿ ತೂಗುವಂತೆ ಉದ್ದವಾಗಿ ರಚಿಸಲ್ಪಡುತ್ತದೆ. ಸಂತಾನೋತ್ಪತ್ತಿ ಮಾಡುವ ಹೆಣ್ಣು ಗೂಡಿನ ಕೋಶದಲ್ಲಿ ಮೊಟ್ಟೆಯನ್ನು ಇರಿಸುತ್ತದೆ. ಅನಂತರ ಸಂತಾನೋತ್ಪತ್ತಿ ಮಾಡುವ ಹೆಣ್ಣು ತಾಯಿ ಮತ್ತು ಸಹಾಯಕ ಹೆಣ್ಣು ಕಣಜಗಳು ಮೊಟ್ಟೆಗಳ ರಕ್ಷಣೆಯ ಕಾರ್ಯವನ್ನು ನಿರ್ವಹಿಸುತ್ತವೆ. ಮೊಟ್ಟೆಯಿಂದ ಮರಿ ಹೊರ ಬಂದ ಮೇಲೆ, ಅದಕ್ಕಾಗಿ ತಾಯಿ, ಕಂಬಳಿ ಹುಳುಗಳನ್ನು ಬೇಟೆಯಾಡಿ ತರುತ್ತದೆ. ಇತರ ಹೈಮೆನೊಪ್ಟೇರ ಕೀಟಗಳಂತೆ ಒಂದೇ ಬಾರಿ ಆಹಾರವನ್ನು ಒದಗಿಸದೆ ಹಂತ ಹಂತವಾಗಿ ಆಹಾರವನ್ನು ಒದಗಿಸುತ್ತದೆ. ಒಮ್ಮೆ ನಾನೇ ನೋಡಿದಂತೆ, ಒಂದು ಪೇಪರ್ ಕಣಜ ಹಸಿರು ಬಣ್ಣದ ವಸ್ತುವನ್ನು ಬಹುಶಃ ಕಂಬಳಿ ಹುಳು ಇರಬಹುದು, ತಂದು ಇತರ ಕೀಟಗಳಿಗೆ ಹಂಚಿತು. ಈ ರೀತಿಯ ಮರಿಗಳ ಆರೈಕೆಯಿಂದಾಗಿ ಇವು ಉತ್ತಮ ಸಾಮಾಜಿಕ ಜೀವಿಗಳು ಎನಿಸಿಕೊಂಡಿವೆ.
ಹೀಗೆ ಮೊದಲ ಹಂತದಲ್ಲಿ ಹುಟ್ಟುವ ಪೇಪರ್ ಕಣಜಗಳು ಬಹುತೇಕ ಹೆಣ್ಣೆ ಆಗಿರುತ್ತದೆ. ಇವು ತಮ್ಮ ಸ್ವಂತ ಗೂಡು ಸ್ಥಾಪಿಸದೆ ಕೇವಲ ಸಹಾಯಕ ಕೆಲಸಕ್ಕೆ ಸೀಮಿತವಾಗುತ್ತದೆ. ಮುಂದಿನ ಹಂತಗಳಲ್ಲಿ ಜನಿಸುವ ಹೆಣ್ಣು ಕಣಜಗಳು ಸಂತಾನೋತ್ಪತ್ತಿ ಮಾಡಲು ಸಮರ್ಥವಾಗಿರುತ್ತವೆ. ಒಮ್ಮೆ ಗಂಡುಗಳು ಕಣಜಗಳು ಜನಿಸಿದ ನಂತರ ಸಂತಾನೋತ್ಪತ್ತಿ ಮಾಡುವ ಹೆಣ್ಣು ಮತ್ತು ಗಂಡು ಕಣಜಗಳು ತಮ್ಮ ಗೂಡನ್ನು ತೊರೆದು ಹೊರಟುಹೋಗುತ್ತವೆ. ಇಂತಹ ಹಂತದಲ್ಲಿ ಕೆಲಸಗಾರ ಕಣಜಗಳು ಸತ್ತು ಹೋದರೆ ಅದರ ಬದಲಿ ಕೆಲಸಗಾರರು ಜನಿಸುವುದಿಲ್ಲ ಹಾಗಾಗಿ ಕ್ರಮೇಣ ಗೂಡಿನ ಸಂಖ್ಯೆ ಇಳಿಮುಖವಾಗಿ ಕೊನೆಗೊಮ್ಮೆ ಗೂಡು ಖಾಲಿಯಾಗುತ್ತದೆ.
ಪೇಪರ್ ಕಣಜಗಳ ಕಡಿತ ತುಂಬಾ ನೋವಿನಿಂದ ಕೂಡಿರುತ್ತದೆ ಹಾಗಾಗಿ ಇದನ್ನು ಅಪಾಯಕಾರಿ ಕೀಟ ಎಂದೇ ಹೇಳಬಹುದು. ಆದರೆ ಇವು ರೈತರಿಗೆ ಮತ್ತು ತೋಟದ ಮಾಲೀಕರಿಗೆ ಅತ್ಯಂತ ಉಪಯುಕ್ತವಾದ ಕೀಟವಾಗಿದೆ. ಹೇಗೆಂದರೆ ಈ ಕಣಜಗಳು ಆಹಾರಕ್ಕಾಗಿ ಚಿಟ್ಟೆ, ಪತಂಗ ಮುಂತಾದ ಕೀಟಗಳ ಕಂಬಳಿ ಹುಳುಗಳನ್ನು ಬೇಟೆಯಾಡುತ್ತದೆ ಹೀಗಾಗಿ ಅವುಗಳ ಸಂಖ್ಯೆ ವಿಪರೀತವಾಗುವುದನ್ನು ತಡೆಯುತ್ತದೆ. ಅಲ್ಲದೆ ಈ ಕಣಜಗಳು ಹೂವಿನ ಮಕರಂದವನ್ನು ಹೀರುತ್ತವೆ ಹೀಗಾಗಿ ಪರಾಗಸ್ಪರ್ಶದಲ್ಲೂ ಇವುಗಳ ಕೊಡುಗೆ ಇದೆ. ಪೇಪರ್ ಕಣಜಗಳು ತಮ್ಮ ಗೂಡನ್ನು ಜನರು ಹೆಚ್ಚು ಓಡಾಡದಂತಹ ಜಾಗದಲ್ಲಿ ಕಟ್ಟಿದ್ದರೆ ಅವನ್ನು ಹಾಗೆ ಬಿಡುವುದು ಒಳ್ಳೆಯದು. ಆದರೆ ಜನಗಳು ಓಡಾಡುವ ಜಾಗದಲ್ಲಿ ಕಟ್ಟಿದ್ದರೆ ಮತ್ತು ಅವುಗಳಿಂದ ಕಡಿತ ಉಂಟಾಗುತ್ತದೆ ಎಂಬ ಶಂಕೆ ಇದ್ದರೆ ಗೂಡನ್ನು ನಿರ್ಮೂಲನೆ ಮಾಡುವುದು ಒಳ್ಳೆಯದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ