ಪುಸ್ತಕಗಳನ್ನು ಓದುವ ಹವ್ಯಾಸ ಇರುವವರಿಗೆ ಅದರಲ್ಲು ಹಳೆಯ ಪುಸ್ತಕಗಳನ್ನು ಓದವವರಿಗೆ ಒಂದು ಜೀವಿಯ ಪರಿಚಯ ಇದ್ದೆ ಇರುತ್ತದೆ. ಪುಟಗಳನ್ನು ತಿರುವಿದಾಗ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಇವು ಬುಳ ಬುಳನೆ ಓಡಾಡಿ ಗಾಬರಿಯನ್ನು ಉಂಟುಮಾಡಬಹುದು. ಹೀಗೆ ಮಾಡಿ ಆತಂಕಗೊಂಡ ಓದುಗರ ಕೋಪಕ್ಕೆ ಬಲಿಯಾಗಲುಬಹುದು. ಈ ರೀತಿ ಪುಸ್ತಕಗಳಲ್ಲಿ ನಮಗೆ ಎದುರಾಗುವ ಜೀವಿ ಸಿಲ್ವರ್ ಫಿಶ್.
ಸಿಲ್ವರ್ ಫಿಶ್ ಎಂಬುದು ಒಂದು ಮಿಥ್ಯಾನಾಮ. ಇದು ಹೆಸರು ಸೂಚಿಸುವಂತೆ ಮೀನಲ್ಲ ಬದಲಿಗೆ ಇದು ಒಂದು ಕೀಟ. ಈ ರೀತಿ ಹೆಸರು ಬರಲು ಕಾರಣ ಇದರ ಬೆಳ್ಳಿ ಬಣ್ಣ ಮತ್ತು ನಡೆ ಮೀನಿನ ಚಲನೆಯನ್ನು ಹೋಲುವುದರಿಂದ. ಈ ಕೀಟವನ್ನು ಝೈಗೆನ್ ಟೋಮ ಎಂಬ ಗಣಕ್ಕೆ ಸೇರಿಸಲಾಗಿದೆ. ಇದರ ವೈಜ್ಞಾನಿಕ ಹೆಸರು ಲೆಪಿಸ್ಮ ಸಕ್ಕ್ಹಾರಿನ (Lepisma saccharina). ಸಕ್ಕ್ಹಾರಿನ ಹೆಸರು ಇದರ ಆಹಾರ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ಸ್ ಎಂದು ಸೂಚಿಸುತ್ತದೆ.
ಇವು ಪ್ರಪಂಚದ ಬಹುತೇಕ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ತೇವಾಂಶ ಹೆಚ್ಚಿರುವ ಜಾಗವನ್ನು ಮನೆ ಮಾಡಿಕೊಳ್ಳುತ್ತವೆ. ನಮ್ಮ ಮನೆಗಳ ಅಟ್ಟ, ನೆಲಮಾಳಿಗೆ, ಪುಸ್ತಕದ ಕಪಾಟು ಮತ್ತು ಸಿಂಕ್ಗಳಲ್ಲಿ ವಾಸಿಸುತ್ತವೆ. ಇವು ಸುಮಾರು ೧೩-೨೫ ಮಿಮೀ ಉದ್ದ ವಿರುತ್ತದೆ. ದೇಹದ ಹಿಂಭಾಗ ಸಣ್ಣದಾಗಿ ಕೊನೆಗೊಳ್ಳುತ್ತದೆ. ಹಿಂಭಾಗದ ಕೊನೆಯಲ್ಲಿ ಮೂರು ಎಳೆಗಳು ಇರುತ್ತವೆ. ಚಿಕ್ಕಾದಾದ ಎರಡು ಸಂಕೀರ್ಣ ಕಣ್ಣುಗಳನ್ನು ಹೊಂದಿರುತ್ತವೆ. ಈ ಉಪವರ್ಗದ ಎಲ್ಲ ಕೀಟಗಳಂತೆ ಇವು ರೆಕ್ಕೆಯನ್ನು ಹೊಂದಿರುವುದಿಲ್ಲ. ಆದರೆ ಸಮತಲದ ಮೇಲ್ಮೈನಲ್ಲಿ ವೇಗವಾಗಿ ಓಡುತ್ತವೆ ಇದು ಶತ್ರುಗಳಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಗೋಡೆಯಂತಹ ಮೇಲ್ಮೈಯಲ್ಲಿ ಅಷ್ಟು ವೇಗವಾಗಿ ಓಡಲಾಗುವುದಿಲ್ಲ. ಇವು ನಿಶಾಚರಿ ಜೀವಿಗಳು ಮತ್ತು ಬೆಳಕಿನಿಂದ ತಪ್ಪಿಸಿಕೊಳ್ಳುತ್ತವೆ.
ಹೆಣ್ಣು ಒಮ್ಮೆಗೆ ಸುಮಾರು ೬೦ ಮೊಟ್ಟೆಗಳನ್ನು ಇಡುತ್ತವೆ. ಮರಿಗಳು ಸಣ್ಣ ಗಾತ್ರದ ವಯಸ್ಕ ಕೀಟಗಳಂತೆ ಕಾಣಿಸುತ್ತವೆ. ಮೊದಲು ಬಿಳಿ ಬಣ್ಣದಾಗಿದ್ದು ಅನಂತರ ಬೂದು ಬಣ್ಣಕ್ಕೆ ತಿರುಗಿ ಲೋಹದ ಹೊಳಪನ್ನು ಪಡೆಯುತ್ತವೆ. ಈ ಮೊದಲೆ ತಿಳಿಸಿದಂತೆ ಇವುಗಳ ಆಹಾರ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ಸ್ . ಇಂತಹ ಆಹಾರ ಮತ್ತು ಜೀವನಕ್ರಮ ಹೊಂದಿರುವ ಇವು ಪುಸ್ತಕಗಳಲ್ಲಿ ಏನು ಮಾಡುತ್ತವೆ ಎಂದು ಆಶ್ಚರ್ಯವಾಗಬಹುದು. ಪುಸ್ತಕಗಳಲ್ಲಿ ಬಳಸುವ ಗೋಂದಿನಲ್ಲಿ ಸಕ್ಕರೆಯ ಅಂಶ ಇರುತ್ತದೆ ಇದರಿಂದಾಗಿ ಸಿಲ್ವರ್ ಫಿಶ್ ಪುಸ್ತಕಗಳಲ್ಲಿ ಸೇರಿಕೊಂಡು ಗೋಂದನ್ನು ತಿನ್ನುತ್ತವೆ. ಇದರಿಂದ ಪುಸ್ತಕಗಳು ಹಾಳಾಗಬಹುದು. ಇಷ್ಟೇ ಅಲ್ಲದೇ ನಮ್ಮ ಮನೆಗಳ ಬಟ್ಟೆ, ಜಮಖಾನೆ, ಫೋಟೊಗಳು, ಚರ್ಮದ ವಸ್ತುಗಳು ಇನ್ನು ಮುಂತಾದ ವಸ್ತುಗಳ ಮೇಲೆ ದಾಳಿ ಮಾಡುತ್ತವೆ. ಹೀಗಾಗಿ ಇವು ಮನುಷ್ಯನಿಗೆ ಪಿಡುಗು ಎನಿಸಿವೆ.
ಒಮ್ಮೆ ನಾನು ತಾರಸಿಯ ಮೇಲಿದ್ದ ಗಿಡಗಳ ತರಗೆಲೆಯನ್ನು ತೆಗೆಯುತ್ತಿದ್ದೆ.ಎಲೆಗಳ ನಡುವಿನಿಂದ ಕೀಟವೊಂದು ಹೊರಬಂತು. ನೋಡಿದರೆ ಸಿಲ್ವರ್ ಫಿಶ್. ತತ್ಕ್ಷಣ ಕ್ಯಾಮೆರಾ ತಂದು ಫೋಟೋ ತೆಗೆದೆ. ಅನಂತರ ಸಿಲ್ವರ್ ಫಿಶ್ ಯಾವ ಕಾರಣಕ್ಕಾಗಿ ಇಲ್ಲಿದೆ.? ಸಾಮಾನ್ಯವಾಗಿ ಮನೆಯ ಒಳಗೆ ಕಾಣಿಸಿಕೊಳ್ಳುವ ಇವು ಇಲ್ಲೇನು ಮಾಡುತ್ತಿದೆ? ಎಂದು ಅನುಮಾನ ಬಂತು. ಅತಿ ಪುರಾತನ ಕೀಟಗಳಲ್ಲಿ ಒಂದಾದ ಇವು ಮನುಷ್ಯ ತನ್ನ ವಸ್ತುಗಳನ್ನು ಸಿದ್ಧ ಪಡಿಸಿಕೊಳ್ಳುವ ಮುಂಚಿಗಿಂತಲು ಭೂಮಿಯ ಮೇಲೆ ಬದುಕುತ್ತಿವೆ. ಹಾಗಾದರೆ ಇವು ಆಹಾರಕ್ಕಾಗಿ ಏನು ಮಾಡುತ್ತಿದ್ದವು? ಈಗಲು ಸಹ ಇವು ಮರದ ತೊಗಟೆ ಗಳ ಮತ್ತು ತರಗೆಲೆಗಳ ನಡುವೆ ಕಾಣಸಿಗುತ್ತವೆ ಏಕೆಂದರೆ ಇವುಗಳ ಸ್ವಾಭಾವಿಕ ಆಹಾರ ಒಣಗಿದ ಸಸ್ಯಗಳ ಭಾಗಗಳು. ಇವು ಆಹಾರ ಸರಪಳಿಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಒಣಗಿದ ಸಸ್ಯಗಳ ಭಾಗಗಳನ್ನು ತಿಂದು ಅವನ್ನು ಮಣ್ಣಿಗೆ ಸೇರಿಸುತ್ತದೆ. ಅಲ್ಲದೆ ಶತಪದಿ, ಜೇಡ ಮುಂತಾದ ಜೀವಿಗಳಿಗೆ ಆಹಾರವಾಗುತ್ತದೆ. ಹೀಗೆ ಮನುಷ್ಯನಿಗೆ ಪಿಡುಗೆನಿಸಿದರು ಪ್ರಕೃತಿಯಲ್ಲಿ ತನ್ನದೆ ಕೊಡುಗೆಯನ್ನು ನೀಡುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ