ನಮ್ಮ ತೋಟದಲ್ಲಿ ಕರಿಬೇವಿನ ಸಸಿಯನ್ನು ನೆಡಲಾಗಿತ್ತು. ಇದು ಸ್ವಲ್ಪ ನಿಧಾನವಾಗಿ ಬೆಳೆಯುವ ಮರ. ಹಾಗಾಗಿ ಒಂದೆರಡು ವರ್ಷವಾಗಿದ್ದರು ಅಂತಹ ಎತ್ತರ ಬೆಳೆದಿರಲಿಲ್ಲ. ನಾನು ಅನೇಕ ವೇಳೆ ಈ ಗಿಡದ ಎಲೆಗಳ ಮೇಲೆ ಹಕ್ಕಿಯ ಹಿಕ್ಕೆ ಬಿದ್ದಿರುವುದು ಗಮನಿಸುತ್ತಿದ್ದೆ. ಆಗ ಇದ್ದಕ್ಕಿದ್ದಂತೆ ಪಾರಿವಾಳಗಳ ಸಂಖ್ಯಾಸ್ಫೋಟದಿಂದಾಗಿ ಎಲ್ಲೆಂದರಲ್ಲಿ ಅವುಗಳ ಹಿಕ್ಕೆ ಬಿದ್ದಿರುತ್ತಿತ್ತು. ಹೀಗಾಗಿ ಕರಿಬೇವಿನ ಎಲೆಗಳ ಮೇಲಿರುವ ಹಕ್ಕಿಯ ಹಿಕ್ಕೆ ವಿಶೇಷವಾಗಿ ನನ್ನ ಗಮನ ಸೆಳೆದಿರಲಿಲ್ಲ.
ಮತ್ತೆ ಕೆಲವೊಮ್ಮೆ ಇದ್ದಕ್ಕಿದ್ದಂತೆ ಎಲೆಗಳೆಲ್ಲ ನಾಪತ್ತೆ ಆಗಿಬಿಡುತ್ತಿದ್ದವು. ಈ ರೀತಿಯಾದರೆ ಇದು ಒಂದು ಕಂಬಳಿಹುಳುವಿನ ಕೆಲಸವೆ ಆಗಿರಬೇಕು. ಅದಕ್ಕಾಗಿ ಶೋಧನೆ ಮಾಡಿದ ನಂತರ ಕಾಣಿಸಿತು ಹಸಿರು ಬಣ್ಣದ ನುಣುಪಾದ ಕಂಬಳಿ ಹುಳು. ಇದು ಕಾಮನ್ ಮಾರ್ಮನ್ (Papilio polytes) ಚಿಟ್ಟೆಯ ಮರಿಯಾಗಿತ್ತು.
ಕಾಮನ್ ಮಾರ್ಮನ್ ಹೆಣ್ಣು |
ಕಂಬಳಿ ಹುಳು |
ಕಾಮನ್ ಮಾರ್ಮನ್ ಏಷ್ಯಾದ್ಯಂತ ಕಂಡು ಬರುತ್ತದೆ. ಇದು ಸ್ವಾಲೊಟೈಲ್ ಗುಂಪಿಗೆ ಸೇರುವ ಚಿಟ್ಟೆ. ಇದು ದ್ವಿರೂಪವನ್ನು ಅಂದರೆ ಗಂಡು ಮತ್ತು ಹೆಣ್ಣು ಪ್ರತ್ಯೇಕ ಬಣ್ಣ ಮತ್ತು ವಿನ್ಯಾಸವನ್ನು ಹೊಂದಿದೆ. ಗಂಡಿನ ಬಣ್ಣ ಕಪ್ಪು ಮತ್ತು ಬಿಳುಪು. ಮುಂಭಾಗ ರೆಕ್ಕೆಯ ಮೇಲ್ಭಾಗ ಸಣ್ಣದಾದ ಬಿಳಿ ಚುಕ್ಕೆಗಳನ್ನು ಒಳಗೊಂಡಿದೆ. ಹಿಂಭಾಗ ರೆಕ್ಕೆಯ ಮೇಲ್ಭಾಗ ಉದ್ದದ ಬಿಳಿ ಚುಕ್ಕೆಗಳನ್ನು ಹೊಂದಿದೆ. ಹೆಣ್ಣಿನ ಹಿಂಭಾಗದ ರೆಕ್ಕೆಗಳ ಮೇಲೆ ಕೆಂಪು ಬಣ್ಣದ ಚುಕ್ಕೆಗಳು ಇರುತ್ತವೆ. ಹೆಣ್ಣು ತನ್ನ ರೂಪದಲ್ಲಿ ಮೂರು ಬಗೆಯಲ್ಲಿ ಕಂಡುಬರುತ್ತದೆ ಹಾಗು ಕಾಮನ್ ರೋಸ್ ಮತ್ತು ಕ್ರಿಮಸ್ನ್ ರೋಸ್ ಚಿಟ್ಟೆಗಳನ್ನು ಅನುಕರಿಸುತ್ತದೆ. ಈ ರೀತಿಯ ಅನುಕರಣೆಗೆ ಬೇಟೇಶಿಯನ್ ಅನುಕರಣೆ ಎನ್ನುತ್ತಾರೆ. ಇಲ್ಲಿ ಬೇಟೆಗಾರರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಿನ್ನಲು ಯೋಗ್ಯವಾದ ಜೀವಿಗಳು ತಿನ್ನಲಾರದ ಜೀವಿಗಳಂತೆ ಕಾಣುತ್ತವೆ. ಕ್ರಿಂಸ್ನ್ ಮತ್ತು ಕಾಮನ್ ರೋಸ್ಗಳು ವಿಷಪೂರಿತ ಚಿಟ್ಟೆಗಳು ಹಾಗಾಗಿ ಬೇಟೆಗಾರ ಜೀವಿಗಳು ಇವನ್ನು ತಿನ್ನುವುದಿಲ್ಲ. ಕಾಮನ್ ಮಾರ್ಮನ್ ಚಿಟ್ಟೆಗಳ ಸಂಖ್ಯೆ ಎಂದಿಗು ಕ್ರಿಮಸ್ನ್ ಮತ್ತು ಕಾಮನ್ ರೋಸ್ಗಳ ಸಂಖ್ಯೆ ಗಿಂತ ಕಡಿಮೆ ಇರುತ್ತದೆ. ಏಕೆಂದರೆ ಬೇಟೆಗಾರರು ಮೊದಲು ವಿಷಪೂರಿತ ಚಿಟ್ಟೆಗಳ ರುಚಿ ನೋಡಲಿ ಎನ್ನುವ ತಂತ್ರಗಾರಿಕೆ. ಒಂದು ವೇಳೆ ಕಾಮನ್ ಮಾರ್ಮನ್ ಸಂಖ್ಯೆ ರೋಸ್ ಚಿಟ್ಟೆಗಳಿಗಿಂತಲು ಅಧಿಕವಾದರೆ ಬೇಟೆಗಾರರು ಮೊದಲು ಮಾರ್ಮನ್ ಚಿಟ್ಟೆಯನ್ನು ತಿನ್ನುವ ಸಾಧ್ಯತೆ ಇರುತ್ತದೆ ಆಗ ಈ ತಂತ್ರಗಾರಿಕೆ ಫಲಿಸುವುದಿಲ್ಲ.
ಮರಿಗಳು ಮೊದಲ ಕೆಲವು ಹಂತದಲ್ಲಿ ಹಕ್ಕಿಯ ಹಿಕ್ಕೆಯನ್ನು ಹೋಲುತ್ತದೆ. |
ಕಾಮನ್ ಮಾರ್ಮನ್ ಅತಿಥೇಯ ಗಿಡದ ಎಲೆಗಳ ಮೇಲೆ ಮೊಟ್ಚೆಯಿಡುತ್ತದೆ. ಮೊಟ್ಟೆಯಿಂದ ಹೊರಬಂದ ಮರಿಗಳು ಮೊದಲ ಕೆಲವು ಹಂತದಲ್ಲಿ ಹಕ್ಕಿಯ ಹಿಕ್ಕೆಯನ್ನು ಹೋಲುತ್ತದೆ. ಇದು ಶತ್ರುಗಳಿಂದ ತಪ್ಪಿಸಿಕೊಳ್ಳಲು ಕಂಡುಕೊಂಡಿರುವ ತಂತ್ರ(ಈ ಮೊದಲೆ ತಿಳಿಸಿದಂತೆ ನಾನು ಅನೇಕ ಬಾರಿ ಇದನ್ನು ನೋಡಿದ್ದರು ಇದು ಕಂಬಳಿ ಹುಳುವೆಂದು ತಿಳಿದಿರಲಿಲ್ಲ). ನಂತರದ ಹಂತಗಳಲ್ಲಿ ಕಡು ಹಸಿರು ಬಣ್ಣಕ್ಕೆ ತಿರುಗುತ್ತದೆ. ತೆಳು ಕಂದು ಬಣ್ಣದ ಪಟ್ಟೆಯೊಂದಿಗೆ ಕಣ್ಣುಕಲೆಯನ್ನು ಒಳಗೊಂಐಡಿದೆ. ಈ ಹಂತಗಳಲ್ಲಿ ಇವನ್ನು ಶತ್ರುಗಳು ಎದುರಾದರೆ ಹೆದರಿಸಲು ಹಾವಿನ ನಾಲಿಗೆಯಂತೆ ಕೆಂಪಗಿನ V ಆಕಾರದ ಅಂಗವನ್ನು ಹೊರಚಾಚುತ್ತದೆ. ತನ್ನ ಕೋಶಾವಸ್ಥೆಯಲ್ಲಿ ಎಲೆಗಳ ಕೆಳಗೆ ನೆಲೆಸುತ್ತದೆ. ಶತ್ರುಗಳಿಂದ ತಪ್ಪಿಸಿಕೊಳ್ಳಲು ಮಾರ್ಮನ್ ಹಲವಾರು ಉಪಾಯಗಳನ್ನು ಕಂಡುಕೊಂಡಿದ್ದರು ಮರಿಹುಳುಗಳು ಕಣಜಗಳಿಗೆ ಬಲಿಯಾಗುತ್ತವೆ. ಈ ಕಣಜಗಳು ಅಸಹಾಯಕ ಪರಿಸ್ಥಿತಿಯಲ್ಲಿರುವ ಮರಿಗಳ ದೇಹದಲ್ಲಿ ಮೊಟ್ಟೆ ಇಡುತ್ತವೆ. ಮೊಟ್ಟೆಯಿಂದ ಹೊರಬಂದ ಮರಿಗಳು ಕಂಬಳಿಹುಳುವನ್ನು ತಮ್ಮ ಆಹಾರ ಮಾಡಿಕೊಳ್ಳುತ್ತವೆ.
ಕ್ರಿಂಸ್ನ್ ರೋಸ್ |
ಕಾಮನ್ ಮಾರ್ಮನ್ ಮರಿಗಳು ಬೇಲ, ನಿಂಬೆ ಜಾತಿಯ, ಕರಿ ಬೇವು ಮರಗಳನ್ನು ಅತಿಥೇಯವಾಗಿ ಬಳಸುತ್ತದೆ. ಚಿಟ್ಟೆಗಳು ಲಂಟಾನ, ಜಟ್ರೋಫಾ, ಮಲ್ಲಿಗೆ ಹೂವಿನ ಮಕರಂದವನ್ನು ಹೀರುತ್ತವೆ. ಇಂತಹ ಮರ ಮತ್ತು ಗಿಡಗಳನ್ನು ಹೊಂದಿರುವ ಉದ್ಯಾನಗಳಲ್ಲಿ ಈ ಚಿಟ್ಟೆ ಸಾಮಾನ್ಯವಾಗಿ ಕಾಣಸಿಗುತ್ತವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ