ವಿಷಯಕ್ಕೆ ಹೋಗಿ

ಕಾಡಿನ ಸುಂದರ ಗಾಯನಗಳು

ನಾನು ಇದನ್ನು ಬರೆಯುತ್ತಿರುವ ಹೊತ್ತಿನಲ್ಲಿ ಬೆಳಕು ಹರಿದಿಲ್ಲದ, ಕತ್ತಲು ತುಂಬಿದ ಬೆಳಗಿನ ಜಾವ. ರಾತ್ರಿಯಿಡಿ ತಮ್ಮ ಆಹಾರ ಅರಸುತ್ತಾ ಕಾಡೆಲ್ಲಾ ಸುತ್ತಾಡಿದ ನಿಶಾಚರ ಪಕ್ಷಿಗಳಿಗೆ ವಿಶ್ರಾಂತಿಯ ಸಮಯ. ಪ್ರಮುಖವಾಗಿ ನಮ್ಮ ಕ್ಯಾಂಪಿನ ಬಳಿ ಮೂರು ಪಕ್ಷಿಗಳ ಕೂಗು ಕೇಳುತ್ತಿದೆ. Brown Hawk Owl, Oriental Scops Owl ಮತ್ತು Jerdon’s Nightjar ಕೂಗುಗಳು ಇನ್ನೂ ರಾತ್ರಿಯ ಅನುಭವವನ್ನೇ ಕಟ್ಟಿಕೊಡುತ್ತಿದೆ. ರಾತ್ರಿಯೆಂದರೆ ಬರಿಯ ಕತ್ತಲು ಮಾತ್ರವಲ್ಲ, ಅದು ನಿಗೂಢ.

ಸಮಯ ಸರಿಯುತ್ತಿದೆ. ಆಕಾಶ ಸ್ವಲ್ಪವೇ ಬೆಳಗಾಗಿದ್ದರೂ ಮಬ್ಬು ಮಬ್ಬು. ದೈತ್ಯ ಮರಗಳಿರುವ ಕಾಡು, ರಸ್ತೆ, ಕ್ಯಾಂಪಿನ ಸುತ್ತ ಮುತ್ತ ಎಲ್ಲವೂ ಇನ್ನೂ ಕತ್ತಲು. ಇಲ್ಲೇ ಹೀಗಿದ್ದರೆ ಕಾಡಿನ ಒಳಗಿನ ನನ್ನ ಮೆಚ್ಚಿನ ಕೆಲವು ಸ್ಥಳಗಳು ಹೇಗಿರಬಹುದೆಂದು ಊಹಿಸುತ್ತಿದ್ದೇನೆ. ಭಯವಾಗುತ್ತದೆ. ಅಬ್ಬಾ! ಸದ್ಯ ನಾನು ಅಲ್ಲಿಲ್ಲವಲ್ಲ.

ಈಗ ಸ್ವಲ್ಪ ಬೆಳಕಾಗಿದೆ. ಅದರೆ Brown Hawk Owlಗಳಿಗೇನೋ ಅಸಹನೆ ಅನಿಸುತ್ತದೆ. ಕತ್ತಲನ್ನು ಬಿಟ್ಟುಕೊಡಲು ಸಿದ್ದವಿಲ್ಲದಂತೆ ಕೂಗುತ್ತಿದೆ. ಅರೆ! ಶುರುವಾಗಿಯೇ ಬಿಟ್ಟಿತು ಕಾಜಣಗಳ ಅಲಾಪ. ಅದು ಸತತವಾಗಿಯಲ್ಲ, ಈಗ ಕೂಗಿದರೆ ಮತ್ತೆರಡು ನಿಮಿಷ ಬಿಟ್ಟು, ವಿರಳವಾಗಿ. ಇಂತಹ ಸಮಯದಲ್ಲೇ ನಮ್ಮ ಕ್ಯಾಂಪಿನ ಗೋಡೆಯ ಸಂದಿಯಲ್ಲಿರುವ ಬಿಲದಲ್ಲಿ ವಾಸವಾಗಿರುವ ಬಾವಲಿಗಳೆರಡು ಒಳಗೆ ನುಗ್ಗಲು ಹವಣಿಸುತ್ತಿವೆ.

ನಿಶಾಚರ ಪಕ್ಷಿಗಳ ಸದ್ದೆಲ್ಲಾ ಈಗ ಕ್ಷೀಣವಾಗಿ ಹೋಗಿದೆ. ಕುಟುರ, ಪಿಕಳಾರ, ಕಾಡುಕೋಳಿ, ಮಡಿವಾಳ, ಟುವ್ವಿ ಹಕ್ಕಿ, ವಿವಿಧ Priniaಗಳು, ಮೈನಾ, Hill Myna, ಮಂಗಟ್ಟೆ ಹಕ್ಕಿಗಳೆಲ್ಲಾ ಗದ್ದಲ ಆರಂಭಿಸಿವೆ. ನಮ್ಮ ಕ್ಯಾಂಪಿನ ಹೆಂಚಿನ ಸಂದಿಯಲ್ಲೆಲ್ಲೋ ಗೂಡು ಮಾಡಿರುವ White-browed Wagtailಗಳೆರಡು ಕೂಗುತ್ತಾ, ಬಾಲವನ್ನು ಕುಣಿಸುತ್ತಾ ಹೊರಗಡೆ ಬಂದಿವೆ. ಕೆಂಬೂತಗಳ ಧ್ವನಿ ಎನೋ ಒಂದು ಗಂಭೀರತೆಯನ್ನು ತಂದುಕೊಟ್ಟಿವೆ. ಕೆಂದಳಿಲುಗಳು ಸದ್ದು ಮಾಡುತ್ತಾ ಮರದಿಂದ ಮರಕ್ಕೆ ಓಡಾಡುತ್ತಿವೆ. ಇಷ್ಟಲ್ಲದೆ ನನಗೆ ಗೊತ್ತೇಇರದ ಅಸಂಖ್ಯಾತ ಪಕ್ಷಿಗಳ ಸದ್ದು! Puff-throated Babblerಗಳ ಕೂಗಿನೊಂದಿಗೆ ಇಡೀ ಪಕ್ಷಿ ಸಮೂಹವೆಲ್ಲಾ ಬೆಳಗನ್ನು ಸಂಭ್ರಮಿಸುತ್ತಿವೆಯೇನೋ ಎನ್ನಿಸುತ್ತಿದೆ.

ಶಮಾ, Common ioraಗಳ ಗಾಯನ ಇನ್ನಷ್ಟೇ ಶುರುವಾಗಬೇಕಿದೆ. ಈ ಕ್ಯಾಂಪಿನ ಬೆಳಗನ್ನು ಮುಂದೊಂದು ದಿನ ನೆನೆಯುವಾಗ ‘ಕಾಲವೊಂದಿತ್ತು, ದಿವ್ಯ ತಾನಾಗಿತ್ತು’ ಎನಿಸುವಂತೆ ಮಾಡುವ ಸುಂದರ ಗಾಯನಕ್ಕಾಗಿ ಕಾಯುತ್ತಿದ್ದೇನೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...