’ಅನಂತ’ದ ಬಗ್ಗೆ ಯೋಚನೆಗಳನ್ನು ಬರಹವಾಗಿಸುವುದು ತುಂಬಾ ಕಷ್ಟದ ವಿಷಯ. ಆದರೂ ಇದು ಒಂದು ಸಣ್ಣ ಪ್ರಯತ್ನ. ಈ ಲೇಖನ ಜಿ.ಟಿ.ನಾರಾಯಣರಾವ್ ಅವರ ಒಂದು ಲೇಖನದಲ್ಲಿನ ಯೋಚನೆಯ ವಿಸ್ತರಣೆ. ಆ ಲೇಖನ ಇಷ್ಟೆಲ್ಲಾ ಯೋಚನೆಗಳನ್ನು ಹುಟ್ಟುಹಾಕಿದೆ.
ಏನು ಅನಂತವೆಂದರೆ? ಅದು ನಿಜವಾಗಿಯೂ ಕೊನೆಯಿಲ್ಲದ್ದೆ? ಹಾಗೆ ಕೊನೆಯಿಲ್ಲದ್ದು ನಿಜವಾಗಿಯೂ ಇದೆಯೆ? ಅದನ್ನು ಯೋಚಿಸಲು ಸಾಧ್ಯವಿದೆಯೆ? ಏಕೆಂದರೆ ಕೊನೆಯಿಲ್ಲದ್ದನ್ನು ಯೋಚಿಸಲು ಕೊನೆಯಿಲ್ಲದ ಯೋಚನೆ ಬೇಕಾಗುತ್ತದೆ. ಎಂದರೆ ನಮ್ಮ ಯೋಚನೆಯೂ ಕೊನೆಯಿಲ್ಲದ್ದಾಗಬೇಕಾಗುತ್ತದೆ. ಅಂತಹ ಅನಂತ ಯೋಚನೆಯನ್ನು ಯೋಚಿಸಲು ಆರಂಭಿಸುತ್ತೇವೆ ಎನ್ನುವುದೇ ಅರ್ಥವಿಲ್ಲದ್ದು. ಏಕೆಂದರೆ ಅನಂತಕ್ಕೆ ಆರಂಭವೂ ಇರುವುದಿಲ್ಲ. ಆರಂಭವಿದ್ದರೆ ಅದು ಅನಂತ ಹೇಗಾಗುತ್ತದೆ?
ಇಡೀ ವಿಶ್ವದ ಕಥೆ ನೋಡಿದರೆ ಒಂದಾನೊಂದು ಕಾಲದಲ್ಲಿ ಇವೆಲ್ಲವೂ ಹೀಗಿರಲಿಲ್ಲ ಮತ್ತು ಬಹಳ ಹಿಂದೆ ಇವೆಲ್ಲವೂ ಶುರುವಾಯಿತು ಎನ್ನುವುದೇ ಅನಂತತೆಯ ಬಗ್ಗೆ ಅನುಮಾನ ಮೂಡಲು ಕಾರಣವಾಗುತ್ತದೆ. ವಿಶ್ವವೊಂದು ಅನಂತ ಎಂದಾದರೆ ಅದು ಹುಟ್ಟಿತು ಎನ್ನುವುದಕ್ಕೆ ಅರ್ಥವಿಲ್ಲ.
ಹಾಗಾಗಿಯೇ ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ಎಂದು ನನಗನ್ನಿಸುತ್ತದೆ. ಅದನ್ನು ಈ ಉದಾಹರಣೆಯೊಂದಿಗೆ ಹೇಳುತ್ತೇನೆ. ನನ್ನ ಎಣಿಕೆಯ ವಿಸ್ತಾರ ಕೆಲವು ಮಿಲಿಯನ್ ಗಳನ್ನು ಮುಟ್ಟಬಹುದು. ನಿಮ್ಮಲ್ಲಿ ಒಬ್ಬೊಬ್ಬರಲ್ಲೂ ಒಂದೊಂದು ಎಣಿಕೆಯ ಮಿತಿ ಇರಬಹುದು. ಸರಳವಾಗಿಸಿ ಹೇಳುವುದಾದರೆ ನನಗೆ ಲಕ್ಷ ಎನ್ನುವುದರ ಬಗ್ಗೆ ಸ್ಪಷ್ಟ ಕಲ್ಪನೆಯಿರುತ್ತದೆ. ಎಂದರೆ ಲಕ್ಷ ರೂಪಾಯಿ ನನ್ನಲ್ಲಿದ್ದರೆ ನನಗೆ ಅದರ ಬೆಲೆ ತಿಳಿದಿರುತ್ತದೆ. ಅದು ಕೋಟಿಯನ್ನು ಮುಟ್ಟಿದರೆ ನನ್ನ ಅರಿವಿನಲ್ಲಿ ಅದರ ಬೆಲೆ ನೂರು ಪಟ್ಟು ಹೆಚ್ಚಾಗುತ್ತದೆ. ಶತಕೋಟಿಯ ಹೊತ್ತಿಗೆ ನನಗೆ ಬೆಲೆಯೆನ್ನುವುದು ಮಸುಕಾಗುತ್ತದೆ. ಆನಂತರದ ಬಿಲಿಯನ್, ಟ್ರಿಲಿಯನ್, ಹೀಗೆಲ್ಲಾ ಸೊನ್ನೆಗಳನ್ನು ಸೇರಿಸಿ ಸಂಖ್ಯೆಯನ್ನು ದೊಡ್ಡದಾಗಿಸುತ್ತಾ ಹೋಗಬಹುದು. ಟ್ರಿಲಿಯನ್ನಿಗೂ ಮತ್ತು ಅದರ ಮುಂದಿನ ಸಂಖ್ಯೆ ಕ್ವಾಡ್ರಿಲಿಯನ್ನಿಗೂ ನನಗೆ ವ್ಯತ್ಯಾಸ ತಿಳಿಯದೇ ಹೋಗಬಹುದು. ಅವೆರಡೂ ನನ್ನ ಮಟ್ಟಿಗೆ ತುಂಬಾ ದೊಡ್ಡ ಸಂಖ್ಯೆಗಳು ಹೌದು. ಆದರೆ ಎಷ್ಟು ದೊಡ್ಡದು? ಒಂದು ಕ್ವಾಡ್ರಿಲಿಯನ್ನಿನಲ್ಲಿ ಒಂದು ಬಿಲಿಯನ್ ಕಳೆದರೆ, ಆಥವಾ ಒಂದು ಬಿಲಿಯನ್ ಕೂಡಿದರೆ ಎಷ್ಟು ವ್ಯತ್ಯಾಸವಗುತ್ತದೆ ಎನ್ನುವುದರ ಬಗ್ಗೆ ಸ್ಪಷ್ಷತೆಯಿಲ್ಲ. ಎಂದರೆ ಒಂದು ಮಿತಿಯ ನಂತರ ಅವೆಲ್ಲಾ ಅಂತಹ ಸಂಖ್ಯೆಗಳಿಗೆ ಕೊಟ್ಟಿರುವ ಹೆಸರುಗಳಷ್ಟೇ. ಹೀಗಾದರೆ ಅನಂತದ ಕಲ್ಪನೆ ನಾನು ಹೇಗೆ ಮಾಡಿಕೊಳ್ಳಬಹುದು?
ಇನ್ನು ಮುಂದೆ ನೀವೇ ಯೋಚಿಸಿ. ಇನ್ನು ಹೆಚ್ಚಾಗಿ ಬರೆದರೆ ಹೇಳಿದ್ದನ್ನೇ ಹೇಳಬೇಕಾಗುತ್ತದೆ. ಅನಂತದ ಬಗ್ಗೆ ಎಷ್ಟುಬರೆದರೂ ನನ್ನ ಯೋಚನೆಗಳನ್ನು ಪೂರ್ತಿಯಾಗಿ ನಿಮಗೆ ಹೇಳಲಾಗುವುದಿಲ್ಲ. ಏಕೆಂದರೆ ಅನಂತದ ಬಗೆಗಿನ ಯೋಚನೆಗಳು ಒಂದು ಹಂತದ ನಂತರ ಅಮೂರ್ತವಾಗುತ್ತಾ ಹೋಗುತ್ತದೆ. ಕೊನೆಯಲ್ಲಿ ಒಂದು ಮಾತು. ನಾನು ಈ ಬರಹದ ಮೂಲಕ ಅನಂತದ ಅಸ್ತಿತ್ವವನ್ನು ನಿರಾಕರಿಸುತ್ತಿಲ್ಲ. ಹಾಗೆ ನಿರಾಕರಿಸಿ ನೀವು ಅದರ ಬಗ್ಗೆ ಯೋಚಿಸುವ ಸುಂದರ ಅನುಭವವನ್ನು ತಪ್ಪಿಸಿಕೊಳ್ಳುವುದು ನನಗೆ ಇಷ್ಟವಿಲ್ಲ. ಯೋಚನೆಯನ್ನು ನೀವು ಮುಂದುವರಿಸಬಹುದು. ನನ್ನ ಬರಹ ನಿಮ್ಮ ಯೋಚನೆಗೆ ಪ್ರಚೋದನೆಯಾಗಬಹುದು. ಹಾಗಾದರೆ ಸಂತೋಷ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ