ನಮಗೆ ಜೇನ್ದುಂಬಿಗಳು ಎಂದರೆ ಸ್ವಲ್ಪ ಹೆದರಿಕೆ ಇದ್ದೆ ಇರುತ್ತದೆ. ಒಮ್ಮೆಲೆ ಇವು ದಾಳಿ ನಡೆಸಿದರೆ ಒಮ್ಮೊಮ್ಮೆ ಜೀವಕ್ಕೆ ಅಪಾಯ ವಾಗಬಹುದು. ಆದರೆ ಎಲ್ಲ ಜೇನ್ದುಂಬಿಗಳು ಅಷ್ಟು ಅಪಾಯಕಾರಿ ಆಗಿರುವುದಿಲ್ಲ. ಅಂತಹ ಒಂದು ಜೇನ್ದುಂಬಿಯೆ ಕೋಲು ಜೇನು.
ಕೋಲು ಜೇನ್ದುಂಬಿ |
ಕೆಲವು ವರ್ಷಗಳ ಹಿಂದೆ ನನ್ನ ರೂಮಿನ ಬಾಲ್ಕನಿಯಲ್ಲಿ ನೆಲದಿಂದ ಸುಮಾರು ಎರಡು ಅಡಿ ಎತ್ತರದಲ್ಲಿ ಗೋಡೆಯ ಮೇಲೆ ದೀರ್ಘಗೋಲಾಕಾರದಲ್ಲಿ ಜೇನ್ದುಂಬಿಗಳು ಇರುವುದು ಕಂಡುಬಂತು. ನೋಡಲು ಇವು ಚಿಕ್ಕಗಾತ್ರದಲ್ಲಿ ಇದ್ದುದ್ದರಿಂದ, ಹೆಜ್ಜೇನಂತು ಅಲ್ಲ ಹಾಗೆ ಬಿಟ್ಟರೆ ಅದರ ಚಲನವಲನಗಳನ್ನು ನೋಡಬಹುದು ಎಂದುಕೊಂಡೆ. ಏನು ತೊಂದರೆ ನೀಡದೆ ಇವು ಅಲ್ಲಿ ಅನೇಕ ದಿನಗಳು ಇದ್ದವು. ಇವು ಕೋಲುಜೇನು ಅಥವಾ ರೆಡ್ ಡ್ವಾರ್ಫ್ ಹನಿ ಬೀ ಎಂದು ತಿಳಿಯಿತು.
ಇದರ ವೈಜ್ಞಾನಿಕ ಹೆಸರು ಏಪಿಸ್ ಫ್ಲೋರಿಯ(Apis florea). ಇವು ಭಾರತ ಸೇರಿದಂತೆ ಆಫ್ರಿಕಾ ಮತ್ತು ಏಷ್ಯಾ ಖಂಡದ ದೇಶಗಳಲ್ಲಿ ಕಾಣಸಿಗುತ್ತವೆ. ಅದರಲ್ಲು ಆಗ್ನೇಯ ಏಷ್ಯಾದಲ್ಲಿ ಇವು ಸಾಮಾನ್ಯ. ಇವು ಹೈಮೆನಾಪ್ಟೆರ ವ್ಯವಸ್ಥೆಯಲ್ಲಿ ಏಪಿಡೆ ಕುಟುಂಬ ಮತ್ತು ಎಪಿಸ್ ಕುಲದಡಿ ವರ್ಗೀಕರಿಸಲಾಗಿದೆ.
ಗೋಡೆಯ ಮೇಲೆ ದೀರ್ಘಗೋಲಾಕಾರದ ಗೂಡು |
ಕೋಲು ಜೇನು ಉನ್ನತಮಟ್ಟದ ಸಾಮಾಜಿಕ ದುಂಬಿಗಳು. ಪ್ರಪಂಚದಲ್ಲಿ ಇದುವರೆಗೆ ಗುರುತಿಸಲಾಗಿರುವ ಹತ್ತು ಜೇನ್ದುಂಬಿಗಳಲ್ಲಿ ಇದು ಸಹ ಒಂದು. ಇದರ ಗೂಡಿನಲ್ಲಿ ರಾಣಿ, ಗಂಡುಗಳು ಮತು ಹೆಣ್ಣು ಕೆಲಸಗಾರ ದುಂಬಿಗಳು ಇರುತ್ತವೆ. ರಾಣಿ ಮತ್ತು ಗಂಡುಗಳು ಸಂತಾನೋತ್ಪತ್ತಿ ಮಾಡುವ ಕಾರ್ಯವನ್ನು ನಿರ್ವಹಿಸುತ್ತದೆ. ಹೆಣ್ಣು ಕೆಲಸಗಾರ ದುಂಬಿಗಳು ಸಂತಾನೋತ್ಪತ್ತಿ ಮಾಡುವುದಿಲ್ಲ ಮತ್ತು ಗೂಡಿನ ನಿರ್ವಹಣೆ ಮತ್ತು ಆಹಾರವನ್ನು ಸಂಗ್ರಹಿಸುವ ಕಾರ್ಯ ನಿರ್ವಹಿಸುತ್ತದೆ. ಇವೆಲ್ಲ ಪರಸ್ಪರ ಅವಲಂಬಿತವಾಗಿರುವುದರಿಂದ ಒಂದನ್ನೊಂದು ಬಿಟ್ಟು ಬದುಕಿರಲಾರವು.
ಕೋಲು ಜೇನು ಚಿಕ್ಕಗಾತ್ರದ ಜೇನ್ದುಂಬಿಗಳು. ಕೆಲಸಗಾರ ದುಂಬಿಗಳು ಸುಮಾರು 7-10 ಮಿಮೀನಷ್ಟು ಉದ್ದವಿರುತ್ತದೆ. ಇದರ ಪ್ರಧಾನ ಬಣ್ಣವೆಂದರೆ ಕೆಂಗಂದು. ಇದರ ನಡು ಭಾಗ ಕೆಂಗಂದು ಬಣ್ಣದಲ್ಲಿ ಶುರುವಾಗಿ ಬಿಳಿ ಪಟ್ಟೆಗಳೊಡನೆ ಕಪ್ಪು ಬಣ್ಣದಲ್ಲಿ ಕೊನೆಗೊಳ್ಳುತ್ತದೆ. ಮಧ್ಯ ಭಾಗ ಕಪ್ಪು ಬಣ್ಣದಿಂದ ಕೂಡಿದ್ದು ಚಿಕ್ಕದಾದ ಬಿಳಿಯ ರೋಮಗಳು ಇರುತ್ತವೆ. ಚಿಕ್ಕ ದಾದ ಸೊಂಡಿ ಮಧುವನ್ನು ಹೀರಲು ಸಹಾಯ ಮಾಡುತ್ತದೆ. ರಾಣಿ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಗಂಡು ದುಂಬಿ ಸಂಪೂರ್ಣವಾಗಿ ಕಪ್ಪಗಿರುತ್ತದೆ.
ಈ ದುಂಬಿಗಳು ತಮ್ಮ ಗೂಡನ್ನು ಪೊದೆ ಅಥವಾ ಕಡಿಮೆ ಎತ್ತರದ ಕೊಂಬೆಗಳಲ್ಲಿ ಮತ್ತು ಎಲೆಗಳಿಂದ ಆವೃತವಾದ ನೆರಳಿನ ಜಾಗಗಳಲ್ಲಿ ಕಟ್ಟಿಕೊಳ್ಳುತ್ತವೆ. ಇದರ ಗೂಡು ಒಂಟಿ ಹುಟ್ಟಿನಿಂದ ಕೂಡಿರುತ್ತದೆ.
ಈ ದುಂಬಿಗಳು ವಿಷೇಶತೆ ಎಂದರೆ ಇವು ತಮ್ಮ ಸಂಗಡಿಗರಿಗೆ ಅಹಾರದ ಲಭ್ಯತೆ ಬಗ್ಗೆ ತಿಳಿಸುವ ಬಗೆ. ಇದಕ್ಕಾಗಿ ಇವು ಒಂದು ರೀತಿಯ ನರ್ತನ ಮಾಡುತ್ತದೆ. ಇದರಿಂದ ಇತರ ದುಂಬಿಗಳಿಗೆ ಅಹಾರ ಇರುವ ಜಾಗದ ದೂರ ಮತ್ತು ದಿಕ್ಕು ತಿಳಿಯುತ್ತದೆ. ಇವುಗಳು ಲಾರ್ವ ಹಂತದಲ್ಲಿ ಪಡೆಯುವ ಆಹಾರದ ಮೇಲೆ ಇವುಗಳ ಲಿಂಗ ನಿರ್ಧರಿತವಾಗುತ್ತದೆ. ಕಡಿಮೆ ಪೌಷ್ಟಿಕಾಹಾರ ಗಳಿಸಿಕೊಳ್ಳುವ ಲಾರ್ವಗಳು ಮುಂದೆ ಕೆಲಸಗಾರ ದುಂಬಿಗಳಾಗಿ ಬೆಳೆಯುತ್ತವೆ.
ಈ ದುಂಬಿಗಳು ಸೌಮ್ಯ ಸ್ವಭಾವದವಾದರು ಇವುಗಳನ್ನು ಸಾಕುವುದು ತುಂಬಾ ಅಪರೂಪ. ಇವುಗಳ ಜೇನು ಸಂಗ್ರಹಿಕೆ ಕಡಿಮೆ ಇರುವುದೆ ಇದಕ್ಕೆ ಕಾರಣ.
ಮೊನ್ನೆ ಚಳಿಗಾಲದಲ್ಲಿ ಮನೆಯ ಮುಂದಿರುವ ಹೊಂಗೆ ಮರ ತನ್ನ ಎಲೆಗಳನ್ನ ಉದುರಿಸಿದಾಗ ಆಶ್ಚರ್ಯವೊಂದು ಕಾದಿತ್ತು. ಮರದ ಕೊಂಬೆಯೊಂದರಲ್ಲಿ ಕೋಲು ಜೇನು ಗೂಡನ್ನ ಕಟ್ಟಿಕೊಂಡಿರುವುದು ಕಂಡುಬಂತು. ಎಲೆಗಳ ಮಧ್ಯೆ ಈ ಗೂಡು ಅಷ್ಟು ಸುಲಭವಾಗಿ ಕಾಣಿಸುವುದಿಲ್ಲ. ಏನು ತೊಂದರೆ ಕೊಡದ ಕೋಲು ಜೇನು ಗೂಡು ಕಂಡುಬಂದರೆ ಅದನ್ನ ಕೀಳಿಸದೆ ಹಾಗೆ ಬಿಡುವುದು ಒಳಿತು. ಇವು ಪರಾಗಸ್ಪರ್ಶದಿಂದ ನಮಗೆ ಮಾಡುವ ಸಹಾಯ ಅಪಾರ
ಕೊಂಬೆಯೊಂದರಲ್ಲಿ ಕೋಲು ಜೇನು ಗೂಡು |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ