ವಿಷಯಕ್ಕೆ ಹೋಗಿ

ಶ್ರೀಗಂಧ ವಿಪರ್ಣಕ

ಮಳೆಗಾಲದಲ್ಲಿ ಸಾಮಾನ್ಯವಾಗಿ ನಮ್ಮ ಮನೆಯ ಗೋಡೆಯ ಮೇಲೆ ಅಥವಾ ಕೈತೋಟದಲ್ಲಿ ಅನೇಕ ಪತಂಗಗಳು ಮತ್ತು ಅದರ ಕಂಬಳಿ ಹುಳುಗಳು ಕಾಣಿಸಿಕೊಳ್ಳುತ್ತವೆ. ಮಳೆಗಾಲ ಇವಕ್ಕೆ ಸಾಕಷ್ಟು ಆಹಾರ ಒದಗಿಸುವುದರಿಂದ ಇವುಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗೆ ಮಳೆಗಾಲದಲ್ಲಿ ಒಮ್ಮೆ ಗೋಡೆಯ ಮೇಲೆ ಕುಳಿತಿದ್ದ ಒಂದು ಪತಂಗ ಸ್ಯಾಂಡಲ್‌ವುಡ್ ಡೀಫೋಲಿಯೇಟರ್ ಅಂದರೆ ಶ್ರೀಗಂಧ ವಿಪರ್ಣಕ ಎಂದು ತಿಳಿಯಿತು.

 

ಶ್ರೀಗಂಧ ವಿಪರ್ಣಕ

ಶ್ರೀಗಂಧ ವಿಪರ್ಣಕ ಭಾರತ ಮತ್ತು ಶ್ರೀಲಂಕಾ ದೇಶಗಳಲ್ಲಿ ಕಂಡುಬರುತ್ತದೆ. ಇದರ ವೈಜ್ಞಾನಿಕ ಹೆಸರು ಅಮಾಟ ಪಸ್ಸಾಲಿಸ್. ಅಮಾಟ ಎನ್ನುವ ಕುಲ, ಟೈಗರ್ ಮಾತ್ ಅಥವಾ ಅರಿಕ್ಟಿನೆ ಉಪಕುಟುಂಬಕ್ಕೆ ಸೇರಿದೆ. ಅರಿಕ್ಟಿನೆ ಉಪಕುಟುಂಬದ ಪತಂಗಗಳ ವಿಶೇಷತೆಯೆನೆಂದರೆ, ಇವು ಸಾಮಾನ್ಯ ಪತಂಗಗಳಂತೆ ಕಾಣದೆ, ದುಂಬಿ ಅಥವಾ ಕಣಜಗಳನ್ನು ಹೋಲುವುದು. ಇದೆ ರೀತಿ ಶ್ರೀಗಂಧ ವಿಪರ್ಣಕ ಸಹ ತನ್ನ ಅಬ್ಡಮನ್ ಮೇಲೆ ಕೆಂಪು ಬಣ್ಣದ ಪಟ್ಟೆಯನ್ನು ಹೊಂದಿರುತ್ತದೆ. ಅಲ್ಲದೆ ಇದರ ರೆಕ್ಕೆಗಳು ಪಾರದರ್ಶಕವಾದ ಚುಕ್ಕೆಗಳಿಂದ ಕೂಡಿರುತ್ತದೆ. ಈ ರೀತಿಯ ದುಂಬಿ ಅಥವಾ ಕಣಜದ ಅನುಕರಣೆಯನ್ನು ಬೆಟೇಷಿಯನ್ ಮಿಮಿಕ್ರಿ ಎನ್ನುತ್ತಾರೆ. ಈ ರೀತಿ ವರ್ತಿಸುವುದರಿಂದ ಶತ್ರುಗಳಿಂದ ತಪ್ಪಿಸಿಕೊಳ್ಳುವುದು ಸುಲಭವಾಗುತ್ತದೆ.

ಈ ಪತಂಗ ವರ್ಷಪೂರ್ತಿ ಸಕ್ರಿಯವಾಗಿ ಸಂತಾನೋತ್ಪತ್ತಿಯನ್ನು ಮಾಡುತ್ತಿರುತ್ತದೆ. ಲ್ಯಾಬ್‌ಗಳಲ್ಲಿ ಕಂಡುಕೊಂಡಂತೆ ಇದರ ಜೀವನ ಚಕ್ರ ಸುಮಾರು 62 ದಿನಗಳಾಗಿರುತ್ತವೆ. ಹೆಣ್ಣು ಸುಮಾರು ನಾಲ್ಕು ದಿನಗಳಲ್ಲಿ ಮುನ್ನೂರಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳಿಂದ ಹೊರಬಂದ ಕಂಬಳಿಹುಳುಗಳು 8 ಹಂತಗಳನ್ನು ದಾಟಿ ವಯಸ್ಕ ಕೀಟಗಳಾಗುತ್ತವೆ. ಇವು ಸೂರ್ಯೋದಯದ ಅನಂತರ ಒಂದೆರಡು ಗಂಟೆಗಳಲ್ಲಿ ತಮ್ಮ ಪ್ಯೂಪಾವಸ್ಥೆಯಿಂದ ಹೊರಬರುತ್ತವೆ.

ಶ್ರೀಗಂಧ ವಿಪರ್ಣಕ ಎಂದು ಇದಕ್ಕೆ ಹೆಸರು ಬರಲು ಕಾರಣ ಇವು ಶ್ರೀಗಂಧದ ಗಿಡಗಳನ್ನು ಅತಿಥೇಯವಾಗಿ ಬಳಸುವುದರಿಂದ. ಇವು ಒಮ್ಮೆ ಶ್ರೀಗಂಧದ ಗಿಡಕ್ಕೆ ದಾಳಿ ಇಟ್ಟರೆ ಅವುಗಳ ಎಲೆಗಳನ್ನು ಸಂಪೂರ್ಣವಾಗಿ ಭಕ್ಷಿಸಿ ಬಿಡುತ್ತವೆ. ಶ್ರೀಗಂಧದ ಗಿಡಗಳನ್ನು ಅಲ್ಲದೆ ಇನ್ನೂ ಅನೇಕ ಗಿಡಗಳನ್ನು ಇವು ಅತಿಥೇಯವಾಗಿ ಬಳಸುತ್ತವೆ. ಅವುಗಳೆಂದರೆ ಪಡವಲಕಾಯಿ, ಹುರಳಿಕಾಯಿ ಮೆಣಸಿನಕಾಯಿ ಹೂಕೋಸು ಇನ್ನೂ ಮುಂತಾದವು. ಕೆಲವು ಕಣಜಗಳು ಇವುಗಳ ಕಂಬಳಿಹುಳುಗಳಲ್ಲಿ ಮೊಟ್ಟೆಯಿಟ್ಟು ಇವನ್ನು ಅತಿಥೇಯವಾಗಿ ಬಳಸುವುದರಿಂದ ಇಂಥ ಕಣಜಗಳನ್ನು ಜೈವಿಕ ನಿಯಂತ್ರಣವಾಗಿ ಬಳಸಬಹುದು.

ಅದು ಗೋಡೆಯ ಮೇಲೆ ಮೊಟ್ಟೆ ಇಡುತ್ತಿರುವುದು ಕಂಡಿತು

ಒಮ್ಮೆ ನಮ್ಮ ಮನೆಯ ಗೋಡೆಯ ಮೇಲೆ ಒಂದು ಶ್ರೀಗಂಧ ವಿಪರ್ಣಕ ಕುಳಿತಿರುವುದು ಕಂಡು ಬಂತು. ಹತ್ತಿರದಿಂದ ನೋಡಿದಾಗ ಅದು ಗೋಡೆಯ ಮೇಲೆ ಮೊಟ್ಟೆ ಇಡುತ್ತಿರುವುದು ಕಂಡಿತು. ಸುಮಾರು ೫-೬ ದಿನದ ಬಳಿಕ ಮೊಟ್ಟೆಯಿಂದ ಮರಿ ಹೊರಬಂದಿರುವುದು ಕಾಣಿಸಿತು. ಆದರೆ ಅನಂತರ ಆ ಮರಿಗಳು ಆಹಾರಕ್ಕಾಗಿ ಯಾವ ಗಿಡವನ್ನು ಅರಿಸಿ ಹೋಯಿತು ಎಂದು ತಿಳಿಯಲಿಲ್ಲ.






ಮೊಟ್ಟೆಯಿಂದ ಮರಿ ಹೊರಬಂದಿರುವುದು ಕಾಣಿಸಿತು


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...