ನೀವು ಈ ಲೇಖನವನ್ನು ನಿಮ್ಮ ಮೊಬೈಲ್ ಸ್ಮಾರ್ಟ್ ಫೋನಿನನಲ್ಲಿ ಓದುತ್ತಿದ್ದರೆ, ನಿಮ್ಮ ಸ್ಕ್ರೀನ್‌ನಲ್ಲಿ ಟಚ್ ಸೆನ್ಸರ್ ಇದೆ. ಅದೇ ನೀವು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಉಪಯೋಗಿಸುತ್ತಿದ್ದರೆ, ಟಚ್‌ಪ್ಯಾಡ್ ನಲ್ಲಿ ಟಚ್ ಸೆನ್ಸರ್ ಅಥವಾ ಮೌಸ್‌ನಲ್ಲಿ ಮೂವ್‌ಮೆಂಟ್ ಸೆನ್ಸರ್ ಇರುತ್ತದೆ. ಇಂದಿನ ಜಗತ್ತಿನಲ್ಲಿ ಬಹುತೇಕ ಎಲ್ಲೆಡೆ ಸೆನ್ಸರ್‌ಗಳು ಕಾಣಿಸುತ್ತವೆ. ಬಹುಶಃ ಸೆನ್ಸರ್ ಇಲ್ಲದ ನಮ್ಮ ಜೀವನ ನೆನೆಸಿಕೊಳ್ಳುವುದು ಕಷ್ಟವಾಗುತ್ತದೆ.
ಸರಳವಾಗಿ ಹೇಳಬೇಕಾದರೆ, ತನ್ನ ಸುತ್ತಲಿನ ಪರಿಸರದಲ್ಲಿ ಆಗುವ ಬದಲಾವಣೆಯನ್ನು ಗ್ರಹಿಸಿ ಅದನ್ನು ಎಲೆಕ್ಟ್ರಾನಿಕ್ ಸಂಜ್ಞೆಯಾಗಿ ಪರಿವರ್ತಿಸುವ ಉಪಕರಣವೆ ಸೆನ್ಸರ್ ಅಥವಾ ಅರಿವುಕ.
ಸೆನ್ಸರ್ಗಳನ್ನು ಅನೇಕ ಬಗೆಯಲ್ಲಿ ವಿಂಗಡಿಸಲಾಗಿದೆ. ಅದರಲ್ಲಿ ಮುಖ್ಯವಾದವೆಂದರೆ ಸಕ್ರಿಯ ಮತ್ತು ನಿಷ್ಕ್ರಿಯ ಎಂಬ ವಿಂಗಡನೆ ಸಕ್ರಿಯ ಸೆನ್ಸರ್‌ಗಳು ಕಾರ್ಯ ನಿರ್ವಹಿಸಬೇಕಾದರೆ ಹೊರಗಿನ ಶಕ್ತಿಯನ್ನು ಕೊಡಬೇಕಾಗುತ್ತದೆ ಆದರೆ ನಿಷ್ಕ್ರಿಯ ಸೆನ್ಸರ್‌ಗಳಿಗೆ ಹೊರಗಿನ ಶಕ್ತಿಯ ಅಗತ್ಯವಿರುವುದಿಲ್ಲ. ಇವು ನೇರವಾಗಿ ಉತ್ಪತ್ತಿ ನೀಡುತ್ತದೆ.
ಇನ್ನೊಂದು ವಿಂಗಡನೆ ಎಂದರೆ ಸೆನ್ಸರ್‌ಗಳು ಏನನ್ನು ಪತ್ತೆ ಹಚ್ಚುತ್ತವೆ ಎನ್ನುವುದು. ಕೆಲವು ಸೆನ್ಸರ್‌ಗಳು ವಿದ್ಯುತ್, ಜೈವಿಕ, ರಾಸಾಯನಿಕ ಮತ್ತು ರೇಡಿಯೊ ವಿಕಿರಣಗಳನ್ನು ಪತ್ತೆ ಹಚ್ಚುತ್ತವೆ.
ಇನ್ನೊಂದು ವಿಂಗಡನೆ ಎಂದರೆ ಸೆನ್ಸರ್‌ಗಳು ಏನನ್ನು ಸ್ವೀಕರಿಸಿ ಅದನ್ನು ಏನಾಗಿ ಪರಿವರ್ತಿಸುತ್ತದೆ ಎಂದು. ಕೆಲವು ಸಾಮಾನ್ಯ ಪರಿವರ್ತನೆಯೆಂದರೆ ದ್ಯುತಿವಿದ್ಯುತ್ (ಫೋಟೊಎಲೆಕ್ಟ್ರಿಕ್), ಉಷ್ಣವಿದ್ಯುತ್ (ಥೆರ್ಮೋಎಲೆಕ್ಟ್ರಿಕ್), ವಿದ್ಯುದ್ರಾಸಾಯನಿಕ (ಎಲೆಕ್ಟ್ರೋಕೆಮಿಕಲ್), ವಿದ್ಯುತ್ಕಾಂತೀಯ (ಎಲೆಕ್ಟ್ರೋಮ್ಯಾಗ್ನೆಟಿಕ್). ಈ ಸೆನ್ಸರ್‌ಗಳು ಇಂತಹ ಪರಿವರ್ತನೆಯನ್ನು ಸಾಧಿಸುತ್ತವೆ.
ಸೆನ್ಸರ್‌ಗಳನ್ನು ಅನಲಾಗ್ ಮತ್ತು ಡಿಜಿಟಲ್ ಎನ್ನುವ ಸರಳ ವಿಂಗಡನೆಗೆ ಒಳಪಡಿಸಲಾಗಿದೆ. ಅನಲಾಗ್ ಸೆನ್ಸರ್‌ಗಳು ಸತತವಾಗಿ ಉತ್ಪತ್ತಿಯನ್ನು ವೋಲ್ಟೇಜ್ ರೂಪದಲ್ಲಿ ನೀಡುತ್ತವೆ. ಡಿಜಿಟಲ್ ಸೆನ್ಸರ್‌ಗಳು ಡಿಜಿಟಲ್ ರೂಪದಲ್ಲಿ ಉತ್ಪತ್ತಿ ನೀಡುತ್ತವೆ.
ಕೆಲವು ಸೆನ್ಸರ್‌ಗಳು.
ಉಷ್ಣಾಂಶ ಸೆನ್ಸರ್
ಇದು ಒಂದು ಸಾಮಾನ್ಯ ಸೆನ್ಸರ್. ನಮ್ಮ ಡಿಜಿಟಲ್ ತೆರ್ಮಾಮೀಟರ್ನಲ್ಲಿ ಇದರ ಬಳಕೆ ಇದೆ. ಅಲ್ಲದೆ ಏರ್ ಕಂಡೀಷನರ್, ಗೀಸರ್, ವಾಹನಗಳು ಮತ್ತು ಅನೇಕ ಉದ್ಯಮಗಳಲ್ಲಿ ಬಳಕೆ ಇದೆ.
ಉಷ್ಣಾಂಶ ಸೆನ್ಸರ್ |
ಸಾಮೀಪ್ಯ ಸೆನ್ಸರ್
ಇದು ವಸ್ತುಗಳು ಎಷ್ಟು ಸನಿಹದಲ್ಲಿದೆ ಎಂದು ಸೂಚಿಸುವ ಸೆನ್ಸರ್. ವಾಹನಗಳ ರಿವರ್ಸ್ ಪಾರ್ಕಿಂಗ್ ಸಿಸ್ಟಮ್ನಲ್ಲಿ ವ್ಯಾಪಕ ಬಳಕೆ ಇದೆ. ಇದನ್ನು ಸಾಧಿಸಲು ಲೇಸರ್, ಶ್ರವಣಾತೀತ, ಆಯಸ್ಕಾಂತಗಳನ್ನು ಬಳಸಲಾಗುತ್ತದೆ. ವಿಮಾನ ಮತ್ತು ಅನೇಕ ಉದ್ಯಮಗಳಲ್ಲಿ ಇದರ ಬಳಕೆ ಇದೆ.
ಸಾಮೀಪ್ಯ ಸೆನ್ಸರ್ |
ಅವಗೆಂಪು ಸೆನ್ಸರ್
ಹೆಸರೆ ಸೂಚಿಸುವಂತೆ ಈ ಸೆನ್ಸರ್ ಅವಗೆಂಪು ವಿಕಿರಣವನ್ನು ಪತ್ತೆ ಹಚ್ಚುತ್ತದೆ. ಬೆಂಕಿ ಅವಘಡವನ್ನು , ದೇಹದ ಉಷ್ಣಾಂಶವನ್ನು, ಕೃಷಿಯಲ್ಲಿ ದಾಳಿಕೋರ ವನ್ಯಮೃಗಗಳನ್ನು, ಗಡಿ ರಕ್ಷಣೆಯಲ್ಲಿ ನುಸುಳು ಕೋರರನ್ನು ಪತ್ತೆ ಹಚ್ಚುವುದು ಇನ್ನು ಮುಂತಾದ ಕ್ಷೇತ್ರಗಳಲ್ಲಿ ಇದರ ಬಳಕೆ ಇದೆ.
ಅವಗೆಂಪು ಸೆನ್ಸರ್ |
ಒತ್ತಡ ಸೆನ್ಸರ್
ಈ ಸೆನ್ಸರ್ ಗಾಳಿ ಮತ್ತು ದ್ರವದ ಒತ್ತಡವನ್ನು ಪತ್ತೆ ಹಚ್ಚುತ್ತದೆ. ಇದು ಮುಖ್ಯವಾಗಿ ಉದ್ಯಮಗಳಲ್ಲಿ ಬಳಸುತ್ತಾರೆ. ಈ ಸೆನ್ಸರ್‌ನಿಂದ ನಾವು ಒಂದು ಪ್ರದೇಶದ ಎತ್ತರವನ್ನು ಅಳೆಯಬಹುದು.
ಶ್ರವಣಾತೀತ ಸೆನ್ಸರ್
ಇದು ಶ್ರವಣಾತೀತ ಶಬ್ದದ ಅಲೆಗಳನ್ನು ಬಳಸಿ ಯಾವುದೆ ವಸ್ತುವಿನ ದೂರವನ್ನು ಅಳೆಯಬಹುದು. ಅಲ್ಲದೆ ಡಾಪ್ಲರ್ ಪರಿಣಾಮದಿಂದ ಚಲಿಸುತ್ತಿರುವ ವಸ್ತುವಿನ ಗತಿಯನ್ನು ಅರಿಯಬಹುದು.
ಶ್ರವಣಾತೀತ ಸೆನ್ಸರ್ |
ಸ್ಪರ್ಶ ಸೆನ್ಸರ್
ಟಚ್ ಸೆನ್ಸರ್ ಇದಕ್ಕೆ ಟ್ಯಾಕ್ಟೈಲ್ ಸೆನ್ಸರ್ ಎಂಬ ಹೆಸರು ಸಹ ಇದೆ ಇದು ತನ್ನ ಮೇಲೆ ಆಗುವ ಸ್ಪರ್ಶ ಅಥವಾ ಒತ್ತಡದಿಂದ ಒಂದು ಸ್ವಿಚ್ ನಂತೆ ವರ್ತಿಸುತ್ತದೆ ಹೀಗಾಗಿ ಇದನ್ನು ನಮ್ಮ ಇಂದಿನ ಸ್ಮಾರ್ಟ್ಫೋನ್ಗಳಲ್ಲಿ ಅಲ್ಲದೆ ಅನೇಕ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಲ್ಲಿ ಸ್ವಿಚ್ನಂತೆ ಬಳಸುವುದನ್ನು ನಾವು ಕಾಣಬಹುದು.
ಬಣ್ಣ ಸೆನ್ಸರ್
ಯಾವುದೇ ಒಂದು ವಸ್ತುವಿನ ಮೇಲೆ ಬಿದ್ದ ಬೆಳಕಿನಿಂದ ಹೊಮ್ಮಿದ ಕೆಂಪು ನೀಲಿ ಮತ್ತು ಹಸಿರು ಬಣ್ಣಗಳ ಮಟ್ಟವನ್ನು ಆಧರಿಸಿ ಆ ವಸ್ತುವಿನ ಬಣ್ಣ ಯಾವುದು ಎಂದು ತಿಳಿಸುತ್ತದೆ.
ಇದನ್ನು ಇಮೇಜ್ ಪ್ರೊಸೆಸಿಂಗ್, ಡಿಜಿಟಲ್ ಸಿಗ್ನಲ್ ಪ್ರೊಸೆಸಿಂಗ್ ಮತ್ತು ವಸ್ತುವನ್ನು ಗುರುತಿಸಲು ಬಳಸಲಾಗುತ್ತದೆ ಹಾಗೆಯೇ ಆಹಾರ ಉದ್ಯಮ ಪ್ರಿಂಟ್ ಉದ್ಯಮದಲ್ಲು ಬಳಕೆಯಿದೆ.
ಬಣ್ಣ ಸೆನ್ಸರ್ |
ತೇವಾಂಶ ಸೆನ್ಸರ್
ತೇವಾಂಶ ಸೆನ್ಸರ್‌ಅನ್ನು ಮುಖ್ಯವಾಗಿ ಮಣ್ಣಿನ ತೇವಾಂಶವನ್ನು ತಿಳಿಯಲು ಬಳಸಲಾಗುತ್ತದೆ ಇದರಿಂದಾಗಿ ಕೃಷಿರಂಗದಲ್ಲಿ ಗಿಡಗಳಿಗೆ ಸರಿಯಾದ ಪ್ರಮಾಣದ ನೀರನ್ನು ಒದಗಿರುವುದರಿಂದ ಕೃಷಿಯ ಇಳುವರಿ ಹೆಚ್ಚುತ್ತದೆ.
ತೇವಾಂಶ ಸೆನ್ಸರ್ |
ಚಿತ್ರ ಸೆನ್ಸರ್
ಇವು ನಮ್ಮ ಸ್ಮಾರ್ಟ್ಫೋನ್ ಮತ್ತು ಡಿಜಿಟಲ್ ಕ್ಯಾಮೆರಾಗಳಲ್ಲಿ ಇದ್ದೇ ಇರುತ್ತದೆ ಈ ಸೆನ್ಸರ್ ತನ್ನ ಮೇಲೆ ಬಿದ್ದ ಬೆಳಕನ್ನು ಎಲೆಕ್ಟ್ರಿಕಲ್ ಸಿಗ್ನಲ್ ಆಗಿ ಪರಿವರ್ತಿಸುತ್ತದೆ. ಇದನ್ನು ಮಾಹಿತಿಯಂತೆ ಶೇಖರಿಸಿದಲ್ಲಿ ಅದು ನಮಗೆ ಫೋಟೊ ರೂಪದಲ್ಲಿ ದೊರಕುತ್ತವೆ.
ಸೆನ್ಸರ್‌ಗಳು ಕಾಲದಿಂದ ಕಾಲಕ್ಕೆ ಬೆಲೆ ಮತ್ತು ಗಾತ್ರ ಇವೆರಡರಲ್ಲೂ ಕಡಿಮೆಯಾಗುತ್ತಾ ಬಂದಿದೆ ಹಾಗಾಗಿ ಇದರ ಬಳಕೆಯ ವ್ಯಾಪಕತೆ ಹೆಚ್ಚಿದೆ. ವಸ್ತುಗಳ ಅಂತರ್ಜಾಲದಲ್ಲಿ ಮೂಲ ಕೊಂಡಿಯಾಗಿರುವ ಸೆನ್ಸರ್‌ಗಳು ಮುಂದಿನ ನಮ್ಮ ಬದುಕನ್ನು ಇನ್ನಷ್ಟು ಬದಲಿಸಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ