ಸಾಮಾನ್ಯವಾಗಿ ಪ್ರಾಣಿಗಳು ತಮ್ಮ ಶತ್ರುಗಳಿಂದ ತಪ್ಪಿಸಿಕೊಳ್ಳಲು ಅಥವಾ ಬೇಟೆಯನ್ನು ಹಿಡಿಯಲು ಕಂಡುಕೊಂಡಿರುವ ಒಂದು ಮಾರ್ಗವೆಂದರೆ ಅದು ಮರೆಮಾಚಿಕೊಳ್ಳುವುದು. ಮರೆಮಾಚಿಕೊಳ್ಳುವುದು ಎಂದರೆ ಇತರರ ಕಣ್ಣಿಗೆ ಸರಿಯಾಗಿ ಕಾಣದ ಹಾಗೆ ತನ್ನ ಸುತ್ತಲಿನ ಪರಿಸರದಲ್ಲಿ ಲೀನವಾಗುವುದು. ತನ್ನ ದೇಹದ ಬಣ್ಣ ತನ್ನ ಸುತ್ತಲಿನ ಪರಿಸರದ ಬಣ್ಣವೆ ಆಗಿದ್ದರೆ ನಮ್ಮ ಕಣ್ಣಿಗೆ ಅದು ಕಾಣುವುದಿಲ್ಲ. ಆದರೆ ಇದು ಇಷ್ಟಕ್ಕೆ ನಿಲ್ಲದೆ ದೇಹದ ಆಕಾರವು ತನ್ನ ಸುತ್ತಲಿನ ಪರಿಸರದಂತೆ ಬದಲಾದರೆ ಅಂತಹ ಪ್ರಾಣಿಯನ್ನು ಹುಡುಕುವುದು ಇನ್ನು ಕಷ್ಟವಾಗುತ್ತದೆ. ಅಂತಹ ಒಂದು ಕೀಟವೆ ಮುಡಿಗೆ ಮಿಡತೆ.
ಒಂದು ದಿನ ಹೀಗೆ ಪ್ರಕೃತಿಯಲ್ಲಿ ನಡೆಯುವಾಗ ಒಂದು ಪೊದೆಯಲ್ಲಿ ಏನೋ ವಿಚಿತ್ರವಾದದ್ದನ್ನು ಕಂಡಂತೆ ಆಯಿತು. ಅದನ್ನು ಅಲಕ್ಷ್ಯಿಸಿ ಎರಡು ಹೆಜ್ಜೆ ಮುನ್ನಡೆದಿದ್ದರು ಮತ್ತೊಮ್ಮೆ ಹತ್ತಿರದಿಂದ ನೋಡುವ ಮನಸ್ಸಾಗಿ, ಮತ್ತೆ ಪೊದೆಯನ್ನು ಗಮನಿಸತೊಡಗಿದೆ. ಅಲ್ಲಿ ಹಲವು ಹಸಿರು ಎಲೆಗಳ ನಡುವೆ ಒಂದು ವಿಚಿತ್ರವಾದ ಕೀಟವೊಂದು ಕುಳಿತಿತ್ತು. ಕೈಯಲ್ಲಿ ಕ್ಯಾಮೆರ ಇರುವುದನ್ನು ಮರೆತು ಅದರ ವೈಚಿತ್ರ ನೋಡುತ್ತಿದೆ. ಆನಂತರ ಬುದ್ಧಿ ಹೇಳಿತೊ ಏನೋ ಒಂದೆರಡು ಚಿತ್ರಗಳನ್ನು ತೆಗೆದೆ. ಮುಂದೆ ತಿಳಿಯಿತು ಇದೊಂದು ಮಿಡತೆ ಎಂದು. ಇದರ ತಲೆ ಮೇಲಿನ ವಿನ್ಯಾಸ ದಿಂದಾಗಿ ಇದನ್ನು ಹುಡೆಡ್ ಗ್ರಾಸ್ ಹಾಪ್ಪರ್ ಎನ್ನುತ್ತಾರೆ. ನಾವು ಅದೆ ರೀತಿ ಮುಡಿಗೆ ಮಿಡತೆ ಎಂದು ಕರೆಯಬಹುದು.
ಮುಡಿಗೆ ಮಿಡತೆಯ ವೈಜ್ಞಾನಿಕ ಹೆಸರು ಟೆರಾಟೋಡ್ಸ್ ಮಾಂಟಿಕೊಲಿಸ್. ಇದು ಭಾರತ ಮತ್ತು ಶ್ರೀಲಂಕಾದಲ್ಲಿ ಕಂಡುಬರುತ್ತದೆ. ಸಂಪೂರ್ಣ ಹಸಿರು ಬಣ್ಣದ ದೇಹ, ಕಣ್ಣು ಹಳದಿ, ಚಿಕ್ಕದಾದ ಹಳದಿ ಕೆಂಪು ಮಿಶ್ರಿತ ಆಂಟೆನ. ಇದರ ಮುಡಿಗೆ ಹಳದಿ ಸೀಮಾ ರೇಖೆಯನ್ನು ಮತ್ತು ದೇಹದ ಮಧ್ಯ ಭಾಗದಲ್ಲಿ ನೀಲಿ ಮಚ್ಚೆಯನ್ನು ಹೊಂದಿರುತ್ತದೆ. ಉಳಿದ ಮಿಡತೆಗಳಂತೆ ಉದ್ದವಾದ ಕಾಲುಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಕೀಟಗಳ ದೇಹವನ್ನು ಮೂರು ಭಾಗಗಳಾಗಿ ವಿಂಗಡಿಸುತ್ತಾರೆ. ಮೊದಲನೆಯದು ತಲೆ, ಕಾಲುಗಳನ್ನು ಹೊಂದಿರುವ ನಡು ಭಾಗವನ್ನು ತೋರಾಕ್ಸ್ ಎನ್ನುತ್ತಾರೆ. ಕೊನೆಯ ಭಾಗವನ್ನು ಅಬ್ಡಮನ್ ಎನ್ನುತ್ತಾರೆ. ಮುಡಿಗೆಯಂತೆ ಕಾಣುವ ಭಾಗವು ನಡು ಭಾಗದ ಮುಂಭಾಗವೆ ಈ ರೀತಿ ವಿಸ್ತಾರಗೊಂಡಿರುತ್ತದೆ. ಇದರ ವಿನ್ಯಾಸದಿಂದಾಗಿ, ಶತ್ರುಗಳಿಂದ ಸುಲಭವಾಗಿ ಕಣ್ತಪ್ಪಿಸಿಕೊಳ್ಳಬಹುದು.
ಇದು ಎಲೆಗಳನ್ನು ತಿಂದು ಬದುಕುವ ಕೀಟ. ಹಾಗಾಗಿ ತೇಗ ಮತ್ತು ಶ್ರೀಗಂಧದ ಮರಗಳಿಗೆ ಪೀಡೆಯಾಗಿ ಪರಿಣಮಿಸ ಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ