ನಾನು ಚಿಪ್ಪು ಕೀಟಗಳು ಬರೆದು ಕೆಲವು ತಿಂಗಳಾಗಿತ್ತು ಅಷ್ಟೇ ನನಗೆ ಇದರೊಂದಿಗೆ ಮತ್ತೊಮ್ಮೆ ಎದುರಾಗುವ ಸಂದರ್ಭ ಬಂತು. ನಾನು ಲಾಲ್ ಬಾಗ್ ನಿಂದ ಒಂದು ದಾಸವಾಳದ ಗಿಡ ತಂದು ಕುಂಡದಲ್ಲಿ ನೆಟ್ಟು ಬೆಳೆಸತೊಡಗಿದೆ. ಚೆನ್ನಾಗಿ ಹೂ ಬಿಡುತ್ತ ಬೆಳೆಯುತ್ತಿದ್ದ ಗಿಡ ಕೆಲವೆ ವಾರಗಳಲ್ಲಿ ಚಿಪ್ಪು ಕೀಟದ ಆಕ್ರಮಣಕ್ಕೆ ಒಳಗಾಯಿತು. ಈ ಬಾರಿ ಕಾಣಿಸಿಕೊಂಡ ಕೀಟ ಹಿಂದೆ ನೋಡಿದ್ದ ಚಿಪ್ಪು ಕೀಟಗಳಂತೆ ಇರದೆ ಭಿನ್ನವಾಗಿತ್ತು. ಇದಕ್ಕೆ ಇಂಗ್ಶೀಷಿನಲ್ಲಿ ಮೀಲಿ ಬಗ್ ಎನ್ನುತ್ತಾರೆ. ನೋಡಲು ಬಿಳಿ ಬಣ್ಣದ ಕೀಟಗಾಳಾಗಿದ್ದ ಇವು ಯಾವುದೋ ಪುಡಿಯನ್ನು ಮೈ ಮೇಲೆ ಬಳಿದು ಕೊಂಡಂತೆ ಕಾಣುತ್ತಿದ್ದವು. ನೋಡುತ್ತಿದ್ದಂತೆ ಇವು ಸಂಖ್ಯೆ ಹೆಚ್ಚಾಗತೊಡಗಿತು ಹೀಗೆ ಬಿಟ್ಟರೆ ದಾಸವಾಳದ ಗಿಡವನ್ನು ಮುಗಿಸಿಬಿಡುತ್ತದೆ ಎಂದು ಅವುಗಳ ನಿರ್ಮೂಲನೆಗೆ ಕೆಲವು ಕ್ರಮಗಳನ್ನು ಕೈಗೊಂಡೆ. ಆದರೆ ಇವು ಅಷ್ಟು ಸುಲಭವಾಗಿ ಜಗ್ಗಲಿಲ್ಲ.
ಕೋಶ ನೋಡಲು ಮಂಗನ ಮುಖದಂತೆ ಇರುತ್ತದೆ. ಎಡಬದಿಯಲ್ಲಿ ಚಿಪ್ಪು ಕೀಟಗಳು. |
ಏಪ್ ಫ್ಲೈ ಚಿಟ್ಟೆಯ ಕಂಬಳಿಹುಳು |
ಒಂದು ದಿನ ಚಿಪ್ಪು ಕೀಟಗಳ ನಡುವೆ ಹೆಚ್ಚುಕಮ್ಮಿ ಅದೆ ರೀತಿ ಕಾಣುವ ಆದರೆ ಸ್ವಲ್ಪ ದೊಡ್ಡದಾಗಿದ್ದ ಜೀವಿಯನ್ನು ನೋಡಿದೆ. ಮೀಲಿ ಬಗ್ ಕೀಟವೆ ಚೆನ್ನಾಗಿ ಗಿಡದ ರಸವನ್ನು ಹೀರಿ ಈ ರೀತಿ ಕೊಬ್ಬಿದೆ ಎಂದು ತಿಳಿದು ಅದನ್ನು ಉಪೇಕ್ಷಿಸಿ ಬಿಟ್ಟೆ.ಇನ್ನೂ ಕೆಲವು ದಿನಗಳು ಕಳೆದ ಬಳಿಕ ತಿಳಿ ಹಳದಿ ಬಣ್ಣದ ಚಿಕ್ಕ ಗಾತ್ರದ ಕ್ಯಾಪ್ಸುಲ್ ರೀತಿ ಇದ್ದ ವಸ್ತು ಗಿಡದ ಮೇಲೆ ಅಲ್ಲಲ್ಲಿ ಅಂಟಿಕೊಂಡಿದ್ದವು. ಕುತೂಹಲದಿಂದ ಒಂದನ್ನು ತೆಗೆದುಕೊಂಡು ಹತ್ತಿರದಿಂದ ಪರೀಕ್ಷಿಸಿದೆ. ಅದರ ಆಕಾರದಿಂದಾಗಿ ತತ್ಕ್ಷಣ ಹೊಳೆಯಿತು ನಾನು ಕೈಯಲ್ಲಿ ಹಿಡಿದುಕೊಂಡಿರುವುದು ಒಂದು ಚಿಟ್ಟೆಯ ಕೋಶವನ್ನು ಎಂದು.
ಸಾಮಾನ್ಯವಾಗಿ ನಮ್ಮ ಕಲ್ಪನೆಯಲ್ಲಿ ಚಿಟ್ಟೆಯ ಜೀವನಚಕ್ರ ಎಂದರೆ, ಚಿಟ್ಟೆ ಅತಿಥೇಯ ಗಿಡದ ಮೇಲೆ ಮೊಟ್ಟೆ ಇಡುತ್ತದೆ. ಮೊಟ್ಟೆಯಿಂದ ಹೊರಬಂದ ಕಂಬಳಿಹುಳುಗಳು ಗಿಡದ ಎಲೆಗಳನ್ನು ಭಕ್ಷಿಸಿ ಕೋಶಾವಸ್ಥೆಗೆ ಜಾರಿ ನಂತರ ಪ್ರೌಢವಾಗುತ್ತವೆ ಎಂದು. ಆದರೆ ಎಲ್ಲ ಚಿಟ್ಟೆಗಳು ಈ ಕ್ರಮವನ್ನು ಅನುಸರಿಸುವುದಿಲ್ಲ. ಕೆಲವು ಚಿಟ್ಟೆಯ ಕಂಬಳಿ ಹುಳುಗಳು ಕೀಟಾಹಾರಿ ಎಂದರೆ ನಂಬಲೇಬೇಕು.ಅಂತಹ ಒಂದು ಚಿಟ್ಟೆಯ ಕೋಶವನ್ನೆ ನಾನು ನೋಡಿದ್ದು. ಇದಕ್ಕೆ ಇಂಗ್ಲೀಷಿನಲ್ಲಿ ಏಪ್ ಫ್ಲೈ ಎನ್ನುತ್ತಾರೆ ಕಾರಣ ಇದರ ಕೋಶ ನೋಡಲು ಮಂಗನ ಮುಖದಂತೆ ಇರುತ್ತದೆ.
ಏಪ್ ಫ್ಲೈ ಚಿಟ್ಟೆ, ಭಾರತ-ಮಲಯ ವಲಯದಲ್ಲಿ ಕಂಡು ಬರುತ್ತವೆ. ಇದನ್ನು ಲೈಕೇನಿಡ್ಸ್ ಅಂದರೆ ನೀಲಿ ಚಿಟ್ಟೆಗಳ ಗುಂಪಿಗೆ ಸೇರಿಸಲಾಗಿದೆ. ಇದರ ವೈಜ್ಞಾನಿಕ ಹೆಸರು ಸ್ಪಾಲ್ಗಿಸ್ ಎಪಿಯಸ್(Spalgis epius). ಇದು ಸಣ್ಣ ಗಾತ್ರದ ಚಿಟ್ಟೆ. ಇದರ ಗಾತ್ರ ಕೇವಲ ೨೦-೩೦ಮಿಮೀ ಇರುತ್ತದೆ. ಇದರ ಮೇಲ್ಭಾಗದ ಬಣ್ಣ ಕಡು ಕಂದು ಮಿಶ್ರಿತ ಬೂದು. ಕೆಳಭಾಗದ ಬಣ್ಣ ತೆಳು ಬೂದು ಅದರ ಮೇಲೆ ಗಾಢವಾದ ಪಟ್ಟೆಗಳಿರಪತ್ತವೆ. ಕಣ್ಣು ಹಳದಿ ಬಣ್ಣ.
ಏಪ್ ಫ್ಲೈ ಚಿಟ್ಟೆ, |
ಮೇಲೆ ತಿಳಿಸಿದಂತೆ ಇದೊಂದು ಕೀಟಾಹಾರಿ ಚಿಟ್ಟೆ. ಪ್ರೌಢ ಹೆಣ್ಣು ಚಿಟ್ಟೆ ಚಿಪ್ಪು ಕೀಟಗಳಿಂದ ದಾಳಿಗೊಳಗಾಗಿರುವ ಗಿಡದ ಮೇಲೆ ಮೊಟ್ಟೆ ಇಡುತ್ತದೆ. ಮೊಟ್ಟೆಯಿಂದ ಹೊರ ಬಂದ ಕಂಬಳಿ ಹುಳುಗಳು ನೋಡಲು ಮೀಲಿ ಬಗ್ಸ್ ನಂತೆಯೆ ಇರುತ್ತದೆ. ಹಲವು ಹಂತಗಳಲ್ಲಿ ಮೀಲಿ ಬಗ್ಸ್ ಗಳನ್ನು, ಭಕ್ಷಿಸಿ ಕೋಶಾವಸ್ಥೆಗೆ ಜಾರುತ್ತವೆ. ಅನಂತರ ಪ್ರೌಢ ಕೀಟವಾಗಿ ಮಾರ್ಪಡುತ್ತವೆ. ಅತ್ಯಂತ ಕೌತುಕದ ವಿಷಯವೆಂದರೆ ಮೀಲಿ ಬಗ್ಸ್ ಗಳನ್ನು ಸಾಕಿಕೊಳ್ಳುವ ಇರುವೆಗಳು ಏಪ್ ಫ್ಲೈ ಕಂಬಳಿಹುಳುಗಳಿಗೆ ಏನು ತೊಂದರೆ ಮಾಡದಿರುವುದು. ಈ ರೀತಿಯ ತ್ರಿಕೋನ ಸಹಬಾಳ್ವೆ ಜೀವಲೋಕದ ವಿಜ್ಞಾನಿಗಳಿಗು ಅಚ್ಚರಿಯ ವಿಷಯ. ಅಂತಿಮವಾಗಿ ಇದರ ಲಾಭ ಪಡೆಯುವುದು ಗಿಡಗಳು. ಚಿಪ್ಪು ಕೀಟಗಳು ಗಿಡದಿಂದ ತಮ್ಮ ಆಹಾರವನ್ನು ಪಡೆದು ಇರುವೆಗಳಿಗೆ ಬೇಕಿರುವ ಸಕ್ಕರೆಯ ದ್ರವವನ್ನು ಕೊಡುತ್ತವೆ. ಇರುವೆಗಳು ಗಿಡದ ಮೇಲೆ ಓಡಾಡಿಕೊಂಡಿರುವುದರಿಂದ ಎಲೆಗಳನ್ನು ತಿನ್ನಲು ಇತರ ಪ್ರಾಣಿಗಳು ಹಿಂಜರಿಯುತ್ತವೆ. ಏಪ್ ಫ್ಲೈ ಕಂಬಳಿ ಹುಳುಗಳು ಚಿಪ್ಪು ಕೀಟಗಳಿಂದ ಗಿಡಕ್ಕೆ ಹೆಚ್ಚು ಹಾನಿಯಾಗದಂತೆ ನಿಯಂತ್ರಿಸುತ್ತವೆ. ಪ್ರಕೃತಿಯಲ್ಲಿ ಕಂಡು ಬರುವ ಇಂತಹ ವಿಸ್ಮಯವನ್ನು ಕಣ್ಣೆದುರೆ ಕಂಡಾಗ, ನಾನು ಪುಳಕಿತನಾಗಿ ಅನೇಕ ದಿನಗಳವರೆಗು ಅದರ ಗುಂಗಿನಲ್ಲಿಯೆ ಮುಳುಗಿ ಹೋಗಿದ್ದೆ.
ಏಪ್ ಫ್ಲೈ, ಇರುವೆ ಹಾಗು ಚಿಪ್ಪು ಕೀಟಗಳು ತ್ರಿಕೋನ ಸಹಬಾಳ್ವೆ ನಡೆಸುತ್ತವೆ |
ಕೃಷಿರಂಗದಲ್ಲಿ ಮೀಲಿ ಬಗ್ ಗಳು ಪಿಡುಗುಗಳೆನಿಸಿಕೊಂಡಿವೆ. ಇವು ಸಾಮಾನ್ಯವಾಗಿ ಕೀಟನಾಶಕಗಳಿಗೆ ಬಗ್ಗುವುದಿಲ್ಲ. ಹಾಗಾಗಿ ಏಪ್ ಫ್ಲೈ ಕಂಬಳಿಹುಳುಗಳನ್ನು ಜೈವಿಕ ನಿಯಂತ್ರಕದಂತೆ ಬಳಸಲು ಸಂಶೋಧನೆ ನಡೆದಿದೆ. ಬಹುಶಃ ಸಹಜ ಕೃಷಿಯನ್ನು ಅಳವಡಿಸಿಕೊಂಡಲ್ಲಿ ಪ್ರಕೃತಿಯೆ ಇದನ್ನು ಸರಿಮಾಡಿಕೊಳ್ಳಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ