'The Hidden Life of Trees' ಜರ್ಮನಿಯಲ್ಲಿ ವೃತ್ತಿಯಿಂದ ಫಾರೆಸ್ಟರ್ ಮತ್ತು ಲೇಖಕರೂ ಆದ Peter Wohlleben ಅವರ ಪುಸ್ತಕ. ಗಿಡ-ಮರಗಳು ಹೇಗೆ ಯೋಚಿಸುತ್ತವೆ, ಹೇಗೆ ಪರಸ್ಪರ ಸಂಭಾಷಿಸುತ್ತವೆ ಎನ್ನುವುದರ ಕುರಿತು ಹೇಳುತ್ತಾರೆ.ಈ ಪುಸ್ತಕವನ್ನು ಓದುತ್ತಾ ಹೋದಂತೆ ಮರ-ಗಿಡಗಳ ಜೀವನ ನಮ್ಮ ಮುಂದೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಪುಸ್ತಕ ಓದಿದ ನಂತರ ಮರ-ಗಿಡಗಳ ಬಗ್ಗೆ ನಮ್ಮ ದೃಷ್ಟಿಯೇ ಬದಲಾಗುತ್ತದೆ. ಈ ಪುಸ್ತಕದ ಹೆಚ್ಚುಗಾರಿಕೆಯಿರುವುದು ಅದರ ಸರಳತೆಯಲ್ಲಿ. ಪೀಟರ್ ಅವರು ತಾವು ಹೇಳುವ ಸಂಗತಿಗಳಿಗೆ ವೈಜ್ಞಾನಿಕ ಪುರಾವೆಗಳನ್ನು ಕೊಡುತ್ತಾರಾದರೂ ಅವುಗಳನ್ನೇ ಯಥಾವತ್ತಾಗಿ ಹೇಳುವುದಿಲ್ಲ. ವಿಷಯವನ್ನು ಆದಷ್ಟು ಸರಳವಾಗಿ ಹೇಳುತ್ತಾಹೋಗುತ್ತಾರೆ. ಈ ಪುಸ್ತಕದ ಮೊದಲ ಅಧ್ಯಾಯದ ಕನ್ನಡ ಅನುವಾದ ಇಲ್ಲಿದೆ.
ಕೆಲವು ವರ್ಷಗಳ ಹಿಂದೆ ನಾನು ಕಾಡಿನಲ್ಲಿ ನಡೆದಾಡುವಾಗ ಪಾಚಿಯಿಂದ ಆವೃತವಾದ ಕೆಲವು ಕಲ್ಲುಗಳನ್ನು ನೋಡಿದ್ದೆ. ಆ ಕಾಡು ಹಳೆಯ 'ಬೀಚ್' (ಹೊಂಗೆ ಮರ ಕುಟುಂಬಕ್ಕೆ - Fagaceae - ಸೇರಿದ, ಯೂರೋಪಿನ ಒಂದು ಮರ - Fagus sylvatica) ಮರಗಳ ಸಂರಕ್ಷಿತ ಜಾಗವಾಗಿತ್ತು ಮತ್ತು ಅದು ನನ್ನ ನಿರ್ವಹಣೆಯಲ್ಲಿತ್ತು. ನನಗೆ ತಿಳಿದಂತೆ ನಾನು ಹಲವಾರು ಬಾರಿ ಆ ಜಾಗದಲ್ಲಿ ಓಡಾಡಿದ್ದೆ. ಆದರೆ ಆ ಕಲ್ಲುಗಳ ಬಗ್ಗೆ ಯಾವುದೇ ಗಮನ ನೀಡಿರಲಿಲ್ಲ.ಅಂದು ಅದನ್ನು ಸರಿಯಾಗಿ ಗಮನಿಸಿದೆ. ಆ ಕಲ್ಲುಗಳು ವಿಚಿತ್ರ ಆಕಾರದಲ್ಲಿದ್ದವು. ಒಂದು ಕಲ್ಲಿನ ಮೇಲಿನ ಪಾಚಿಯನ್ನು ಜೋಪಾನವಾಗಿ ಸರಿಸಿದೆ. ಅದರ ಕೆಳಗೆ ಕಲ್ಲಿನ ಬದಲಾಗಿ ಮರದ ತೊಗಟೆಯಿತ್ತು! ಎಂದರೆ ಅದು ನಿಜವಾಗಿಯೂ ಕಲ್ಲು ಅಲ್ಲ, ಒಂದು ಹಳೆಯ ಮರ! ನನಗೆ ಆಶ್ಚರ್ಯವಾಯಿತು. ಏಕೆಂದರೆ ಬೀಚ್ ಮರಗಳು ಮಣ್ಣಿನಲ್ಲಿ ಕೊಳೆತು ಮಣ್ಣಾಗಿ ಹೋಗುವುದಕ್ಕೆ ಕೆಲವೇ ವರ್ಷಗಳು ಸಾಕು. ಆದರೆ ಇಲ್ಲಿ ಕಲ್ಲಿನಂತೆ ಗಟ್ಟಿಯಾಗಿರುವುದಷ್ಟೇ ಅಲ್ಲ ಸುಲಭವಾಗಿ ಮೇಲೆತ್ತಲಾರದಂತೆ ನೆಲಕ್ಕೆ ಅಂಟಿಕೊಂಡಿದೆ!
ಜೀವಕೋಶಗಳು ಜೀವಂತವಾಗಿರಬೇಕಾದರೆ ಅದಕ್ಕೆ ಸ್ವಲ್ಪವಾದರೂ ಆಹಾರ, ಉಸಿರಾಡಲು ಗಾಳಿ ಬೇಕೇ ಬೇಕು. ಹಾಗಿದ್ದಲ್ಲಿ ಮಾತ್ರ ಅವು ಸ್ವಲ್ಪವಾದರೂ ಬೆಳವಣಿಗೆ ತೋರುತ್ತವೆ. ಆದರೆ ಎಲೆಗಳಿಲ್ಲದೆ ಎಂದರೆ ದ್ಯುತಿ ಸಂಶ್ಲೇಷಣೆ ಕ್ರಿಯೆ (photosynthesis) ನಡೆಯದೆ ಆ ಮರದ ಜೀವಕೋಶಗಳಿಗೆ ಆಹಾರ ಸಿಗುವುದಾದರೂ ಹೇಗೆ? ಜಗತ್ತಿನ ಯಾವುದೇ ಜೀವ ಹೀಗೆ ಆಹಾರವಿಲ್ಲದೆ ಬದುಕಿದ ಉದಾಹರಣೆಯಿಲ್ಲ. ಅದೂ ಯಾವುದೇ ಮರದ ತುಂಡು ತನಗೆ ತಾನೆ ಜೀವದಿಂದಿರುವ ಸಾಧ್ಯತೆಯಿಲ್ಲ. ಇವೆಲ್ಲಾ ಗಮನಿಸಿದರೆ ಒಂದಂತು ಸ್ಪಷ್ಟವಾಗುತ್ತದೆ: ಈ ಮರದಲ್ಲೇನೋ ನಡೆಯುತ್ತಿದೆ!! ತನ್ನ ಸುತ್ತ ಮುತ್ತಲಿನ ಜೀವಂತ ಮರಗಳಿಂದ ಈ ಮರಕ್ಕೆ ಯಾವುದೋ 'ಸಹಾಯ' ಒದಗುತ್ತಿದೆ. ಅದರ ಬೇರುಗಳ ಮೂಲಕ!! ಈ 'ಸಹಾಯ'ವು ಬೇರುಗಳ ಸುತ್ತ ಇರುವ ಶಿಲೀಂಧ್ರಗಳ ಮೂಲಕವೋ ಅಥವಾ ಬೇರುಗಳು ತಾವೇ ಪರಸ್ಪರ ತಾಗುತ್ತಿರುವುದರ ಮೂಲಕವೋ ದೊರೆಯುತ್ತದೆ ಎನ್ನುವುದನ್ನು ವಿಜ್ಙಾನಿಗಳು ಕಂಡುಹಿಡಿದಿದ್ದಾರೆ. ಈ ಮರಕ್ಕೆ ಸಂಬಂದಿಸಿದಂತೆ ಒಳಗೆ ಏನು ನಡೆಯುತ್ತಿದೆ ಎನ್ನುವುದನ್ನು ನಾನು ನೋಡಲು ಹೋಗಲಿಲ್ಲ. ಏಕೆಂದರೆ ಆ ಮರದ ಸುತ್ತ ಅಗೆದು ಆ ಸಂಬಂಧವನ್ನು ಘಾಸಿಗೊಳಿಸಲು ನನಗೆ ಇಷ್ಟವಾಗಲಿಲ್ಲ. ಆದರೆ ಒಂದು ವಿಷಯವಂತೂ ಸ್ಪಷ್ಟ: ಸಮೀಪದ ಜೀವಂತ ಮರಗಳು ತಮ್ಮ ಬೇರಿನ ಮೂಲಕ ಆಹಾರ ಪೂರೈಸುತ್ತಾ ಈ ಮರದ ತುಂಡನ್ನು ಜೀವಂತವಾಗಿಟ್ಟಿದ್ದವು.
ಮಳೆಯ ನೀರು ಅತಿಯಾಗಿ ಹರಿದು ಮಣ್ಣೆಲ್ಲಾ ಕೊಚ್ಚಿ ಹೋಗಿರುವ ಮರಗಳ ಬುಡವನ್ನು ಗಮನಿಸಿದಾಗ ಮರಗಳ ಬೇರು ಹೇಗೆಲ್ಲಾ ಹರಡಿಕೊಂಡಿರುತ್ತದೆ ಮತ್ತು ಮತ್ತೊಂದು ಮರದ ಬೇರುಗಳ ಜೊತೆ ಹೇಗೆ ಸಂಕೀರ್ಣವಾಗಿ ಬೆಸೆದುಕೊಂಡಿರುತ್ತದೆ ಎನ್ನುವುದನ್ನು ಕಾಣಬಹುದು. ಹೀಗೆ ಸಂಕೀರ್ಣವಾಗಿ ಬೆಸೆದುಕೊಂಡಿರುವುದರಿಂದಲೇ ಮರಗಳ ನಡುವೆ ಪರಸ್ಪರ ಅವಲಂಬನೆಯೊಂದು ಇರುವುದನ್ನು ಜರ್ಮನಿಯ ಹರ್ಜ್ (Harz) ಪರ್ವತಶ್ರೇಣಿಯಲ್ಲಿ ಅಧ್ಯಯನ ನಡೆಸಿ ಕಂಡುಹಿಡಿದಿದ್ದಾರೆ. ಕೆಲವೊಮ್ಮೆ ಬೇರೆ ಪ್ರಬೇಧಕ್ಕೆ ಸೇರಿದ ಮರಗಳು, ಹೆಚ್ಚಿನ ಸಂದರ್ಭಗಳಲ್ಲಿ ಒಂದೇ ಪ್ರಭೇಧಕ್ಕೆ ಸೇರಿದ ಮರಗಳು ತಮ್ಮ ಬೇರುಗಳ ಸಂಪರ್ಕ ಜಾಲದ ಮೂಲಕ ತಮಗೆ ಅವಶ್ಯಕವಾದ ಆಹಾರ ವಿನಿಮಯ ಮತ್ತು ಪರಸ್ಪರ ಸಹಾಯ ಒಂದು ಸಾಮಾನ್ಯ ನಿಯಮ ಎನ್ನುವಂತೆ ಅಸ್ತಿತ್ವದಲ್ಲಿದೆ. ಮತ್ತು ಈ ಮೂಲಕ ಇಡೀ ಕಾಡು ಒಂದು ಜೀವಿಯಂತೆ ವರ್ತಿಸುತ್ತದೆ, ಇರುವೆಗಳ ಸಾಮ್ರಾಜ್ಯಗಳಿರುವಂತೆ.
ಒಂದು ಮರದ ಬೇರಿನ ಜಾಲ ಮಣ್ಣಿನಲ್ಲಿ ಹರಡಿಕೊಂಡಿರುವ ಬಗೆಯನ್ನು ನೋಡಿದರೆ ಅದು ಮತ್ತೊಂದು ಮರದ ಬೇರಿನ ಜಾಲವನ್ನು ಸಂಧಿಸುವುದು ಅಷ್ಟೊಂದು ಕಷ್ಟವಾಗಲಾರದು. ಹೀಗೆ ಪರಸ್ಪರ ಸಂಧಿಸಿದಾಗ ಆ ಮರಗಳ ನಡುವಿನ ಕೊಡು-ಕೊಳ್ಳುವಿಕೆಯ ನಿಯಮ ಅನಿವಾರ್ಯವಾಗುತ್ತದೆ. ಇದೊಂದು ಕೇವಲ ಆಕಸ್ಮಿಕದಿಂದಿ ನಡೆಯುವ ಘಟನೆಯಲ್ಲ ಎನ್ನಿಸಬಹುದು. ಇದು ಪ್ರಕೃತಿಯ ಜೀವಜಾಲದ (ecosystem) ಒಂದು ಭಾಗವೇ ಆಗಿರಬಹುದು. ಆದರೆ ಇದು ಅಷ್ಟು ಸರಳ ವಿಷಯವಲ್ಲ. ವಿಜ್ಞಾನಿಗಳ ಪ್ರಕಾರ ಮರಗಳಿಗೆ ತಮ್ಮದೇ ಪ್ರಭೇಧದ ಮರದ ಬೇರುಗಳ ಮತ್ತು ಇತರ ಪ್ರಭೇಧದ ಮರದ ಬೇರುಗಳ ನಡುವೆ ಇರುವ ವ್ಯತ್ಯಾಸ ಸ್ಪಷ್ಟವಾಗಿ ತಿಳಿಯುತ್ತದೆ.
ಆದರೆ ಮರಗಳೇಕೆ ಇಷ್ಟು ಸಾಮಾಜಿಕ ಜೀವಿಗಳಾಗಿವೆ? ಏಕೆ ಅವು ತಮ್ಮ ಆಹಾರವನ್ನು ತಮ್ಮದೇ ಪ್ರಭೇದದ, ಕೆಲವೊಮ್ಮೆ ತಮ್ಮ ಪ್ರತಿಸ್ಪರ್ಧಿಗಳೊಡನೆಯೂ ಹಂಚಿಕೊಳ್ಳುತ್ತದೆ? ಇದಕ್ಕೆ ಉತ್ತರ ಮನುಷ್ಯನೇಕೆ ಸಂಘಜೀವಿಯಾದ ಎನ್ನುವ ಪ್ರಶ್ನೆಗೆ ಉತ್ತರದಂತೆಯೇ ಇದೆ. ಒಟ್ಟಾಗಿ ಕೆಲಸ ಮಾಡುವುದರಿಂದ ಕೆಲವೊಂದು ಅನುಕೂಲಗಳಿವೆ. ಕೇವಲ ಒಂದು ಮರ 'ಕಾಡು' ಎನ್ನಿಸಿಕೊಳ್ಳುವುದಿಲ್ಲ. ಕೇವಲ ಒಂದು ಮರ ತನ್ನ ಸುತ್ತಲಿನ ಪರಿಸರವನ್ನು ತನಗೆ ಅನುಕೂಲಕರ ರೀತಿಯಲ್ಲಿ ಸೃಷ್ಟಿಸಿಕೊಳ್ಳಲಾರದು. ಒಂದು ಮರದ ಬದುಕು ಸುತ್ತಲಿನ ವಾತಾವರಣ, ಗಾಳಿ ಇವುಗಳನ್ನು ಅವಲಂಬಿಸಿರುತ್ತದೆ. ಹೆಚ್ಚು ಮರಗಳು ಒಟ್ಟಾಗಿದ್ದಷ್ಟೂ ಅವುಗಳ ಸುತ್ತಲಿನ ಪರಿಸರವನ್ನು ತಮಗೆ ಅನುಕೂಲಕರ ರೀತಿಯಲ್ಲಿ ಪರಿವರ್ತಿಸಿಕೊಳ್ಳಬಹುದು. ಬೇಸಿಗೆಯಲ್ಲಿ ಅತಿ ಬಿಸಿ, ಚಳಿಗಾಲದ ಅತಿ ತಂಪು ಇವುಗಳನ್ನು ತಮ್ಮದೇ ಜೀವಜಾಲದಿಂದ ಎದುರಿಸಬಹುದು. ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ, ವಾತಾವರಣದಲ್ಲಿನ ತೇವಾಂಶ ಇವುಗಳನ್ನು ನಿಯಂತ್ರಿಸಬಹುದು. ಮತ್ತು ಇಂತಹ ಅನುಕೂಲಕರ ಪರಿಸರದಲ್ಲಿ ಮರಗಳು ಹೆಚ್ಚುಕಾಲ ಬದುಕಬಹುದು. ಇಂತಹ ಪರಿಸರ ಸೃಷ್ಟಿಗಾಗಿಯೇ ಮರಗಳು ಗುಂಪಿನಲ್ಲಿ ಬದುಕುವುದು ಅನುಕೂಲಕರ. ಒಂದು ಮರ ತಾನು ತನಗಾಗಿಯೇ ಬದುಕುವುದಾದರೆ ಅದು ಹೆಚ್ಚುಕಾಲ ಬದುಕಲಾರದು. ಮರಗಳ ನಡುವಿನ ಮೇಲಿನ ಆವರಣ ಹೆಚ್ಚು ತೆರೆದುಕೊಂಡಿದ್ದರೆ ಜೋರಾಗಿ ಬೀಸುವ ಗಾಳಿ ಅದರ ನಡುವೆ ನುಸುಳಿ ಮರಗಳನ್ನು ಬುಡಮೇಲಾಗಿಸಬಹುದು. ಬೇಸಿಗೆಯ ಬಿಸಿ ಕಾಡಿನ ನೆಲವನ್ನು ಒಣಗುವಂತೆ ಮಾಡಿ ಸತ್ವರಹಿತವಾಗಿಸಬಹುದು. ಇದರಿಂದ ಎಲ್ಲಾ ಮರಗಳು ತೊಂದರೆ ಅನುಭವಿಸುತ್ತವೆ.
ಈ ಕಾರಣದಿಂದಲೇ ಒಂದು ಗುಂಪಿನ ಎಲ್ಲಾ ಮರಗಳೂ ಆ ಗುಂಪಿಗೆ ಅಮೂಲ್ಯವಾಗಿರುತ್ತದೆ. ಹೀಗೆ ಅಮೂಲ್ಯವಾಗಿರುವುದರಿಂದಲೇ ಒಂದು ರೋಗಗ್ರಸ್ಥವಾದ ಮರ ತಾನು ಆರೋಗ್ಯವಾಗುವವರೆಗೆ ಮತ್ತೆಲ್ಲಾ ಮರಗಳಿಂದ ಆಹಾರ, ಪೋಷಕಾಂಶಗಳನ್ನು ಪಡೆಯುತ್ತವೆ. ಮುಂದೊಂದು ಸಲ ಮತ್ತೊಂದು ಮರಕ್ಕೆ ಇದೇ ಪರಿಸ್ಥಿತಿ ಬಂದಾಗ ಅದೂ ಬೇರೆ ಮರಗಳಿಂದ ಸಹಾಯ ಪಡೆಯುತ್ತವೆ. ಈ ಕ್ರಿಯೆ ನನಗೆ ಒಂದು ಆನೆಯ ಗುಂಪನ್ನು ನೆನಪಿಸುತ್ತದೆ. ಆನೆಯ ಗುಂಪಿನ ದುರ್ಬಲ ಮತ್ತು ಅನಾರೋಗ್ಯಕ್ಕೆ ಒಳಗಾದ ಆನೆಯೂ ಸಹ ಇತರ ಆನೆಗಳಿಂದ ಸಹಾಯ ಪಡೆದು ತಮ್ಮ ಕಾಲಿನ ಮೇಲೆ ತಾವು ನಿಲ್ಲುತ್ತವೆ. ಮತ್ತು ಮುಂದೊಂದು ದಿನ ಬೇರೆ ಆನೆಗೆ ಈ ರೀತಿಯಾದಲ್ಲಿ ಈ ಆನೆಯೇ ನೆರವಿಗೆ ಧಾವಿಸುತ್ತದೆ.
ಒಂದು ಗುಂಪಿನ ಮರಗಳೆಲ್ಲವೂ ಆ ಗುಂಪಿನ ಸದಸ್ಯರಿದ್ದಂತೆ. ಆದರೆ ವಿವಿಧ ಶ್ರೇಣಿಯ ಸದಸ್ಯತ್ವ ಇರುತ್ತದೆ. ಉದಾಹರಣೆಗೆ ಹೇಳುವುದಾದರೆ ಹೆಚ್ಚುಪಾಲು ಮರಗಳು ಬಿದ್ದು ಹೋದ ನಂತರ ಅವುಗಳ ಕಾಂಡ ಕೆಲವು ನೂರು ವರ್ಷಗಳಲ್ಲಿ (ಮರವೊಂದರ ಜೀವಮಾನಕ್ಕೆ ಹೋಲಿಸಿದರೆ ಈ ಅವಧಿ ದೊಡ್ಡದಲ್ಲ) ಲಡ್ಡಾಗಿ, ಕೊಳೆತು, ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತದೆ. ಆದರೆ ಕೆಲವು ಮರಗಳು ಮಾತ್ರ ಶುರುವಿನಲ್ಲಿ ಹೇಳಿದಂತೆ ಪಾಚಿಯ ಹೊದಿಕೆ ಹೊದ್ದು 'ಕಲ್ಲಿನಂತೆ' ಹಲವು ಶತಮಾನಗಳ ಕಾಲ ಜೀವಂತವಾಗಿರುತ್ತವೆ. ಹಾಗಾದರೆ ಮರಗಳ ಈ ಗುಂಪಿನಲ್ಲಿ ಮನುಷ್ಯರಂತೆ ಮೊದಲ ಶ್ರೇಣಿ, ಎರಡನೇ ಶ್ರೇಣಿ ಎಂಬ ವರ್ಗೀಕರಣ ಇರುತ್ತದೆಯೆ? ಹಾಗನ್ನಿಸುತ್ತದೆ. 'ಶ್ರೇಣಿ' ಎಂಬ ಪದ ಇಲ್ಲಿ ಸೂಕ್ತವಾಗಲಾರದೇನೋ. ಒಂದು ಮರದ ಸಂಬಂಧ ಮತ್ತೊಂದರೊಡನೆ ಎಷ್ಟು ಗಾಢವಾಗಿದೆ ಅಥವಾ ಕೆಲವೊಮ್ಮೆ ಎಷ್ಟು ಸ್ನೇಹದಿಂದಿದೆ ಎನ್ನುವುದೂ ಅದರ ಮುಂದಿನ ಜೀವನವನ್ನು ನಿರ್ಧರಿಸಬಹುದು.
ಇದನ್ನು ಕಾಡಿನ ಮರಗಳ ಮೇಲಿನ ಪದರವನ್ನು (canopy) ಗಮನಿಸುವುದರಿಂದ ಪರೀಕ್ಷಿಸಬಹದು. ಸಾಮಾನ್ಯವಾಗಿ ಒಂದು ಮರ ತನ್ನ ಕೊಂಬೆಗಳನ್ನು ಮತ್ತೊಂದು ಮರದ ಕೊಂಬೆಯ ಎತ್ತರದವರೆಗೆ ಮಾತ್ರ ಚಾಚುತ್ತದೆ. ಅದಕ್ಕಿಂತ ಎತ್ತರಕ್ಕೆ ಚಾಚುವುದಿಲ್ಲ. ಏಕೆಂದರೆ ಅಷ್ಟರಲ್ಲಿಯೇ ಆ ಮರ ಉತ್ತಮ ಬೆಳಕು ದೊರೆಯುವಂತಹ ಜಾಗವನ್ನು ಗಳಿಸಿಯಾಗಿರುತ್ತದೆ. ಆದರೂ ಆ ಚಾಚಿದ ಕೊಂಬೆಗಳನ್ನು ಬಲಪಡಿಸಿಕೊಳ್ಳುತ್ತದೆ. ಇದರಿಂದ ಮೇಲ್ನೋಟಕ್ಕೆ ಆ ಮರಗಳ ನಡುವೆ ಹೊಂದಾಣಿಕೆಯಿದೆ ಎಂದೆನ್ನಿಸುತ್ತದೆ. ಆದರೆ ಒಳ್ಳೆಯ ಸ್ನೇಹಿತರಾಗಿರುವ ಮರಗಳು ಈ ವಿಷಯದಲ್ಲಿ ಎಷ್ಟು ಜಾಗರೂಕರಾಗಿರುತ್ತವೆ ಎಂದರೆ, ಆ ಮರಗಳು ಮತ್ತೊಂದು ಮರದ ದಿಕ್ಕಿನಲ್ಲಿ ದಟ್ಟವಾಗಿ ಬೆಳೆಯುವುದೇ ಇಲ್ಲ. ಅಂತಹ ಮರಗಳು ತಮ್ಮ ಸ್ನೇಹಿತ ಮರದಿಂದ ಏನನ್ನೂ ಕಸಿದುಕೊಳ್ಳುವುದಿಲ್ಲ. ಆದ್ದರಿಂದ ಅಂತಹ ಮರಗಳ ಕೊಂಬೆಗಳು ವಿರುದ್ಧ ದಿಕ್ಕಿನಲ್ಲಿ ಎಂದರೆ ತಮ್ಮ ಸ್ನೇಹಿತರಲ್ಲದ ಮರಗಳ ದಿಕ್ಕಿನಲ್ಲಿ ಮಾತ್ರ ಬಲವಾಗುತ್ತವೆ. ಆದರೆ ಅಂತಹ ಮರಗಳ ಬೇರುಗಳು ಗಾಢವಾಗಿ ಹೆಣೆದುಕೊಂಡಿರುತ್ತವೆ. ಕೆಲವೊಮ್ಮೆ ಒಟ್ಟಿಗೆ ಸಾಯುತ್ತವೆ.
ಹೀಗೆ ವಿವರಿಸಿದ ನಿಯಮದಂತೆ ಈ ತರಹದ ಸ್ನೇಹ ರೂಪುಗೊಳ್ಳುವುದು ಯಾವುದೇ ಅಡಚಣೆಯಿಲ್ಲದ ನೈಸರ್ಗಿಕ ಕಾಡುಗಳಲ್ಲಿ ಮಾತ್ರ. 'ಬೀಚ್'ಮರಗಳಲ್ಲಿ ಮಾತ್ರವಲ್ಲ, ಇನ್ನು ಅನೇಕ ಪ್ರಬೇಧಗಳ ಮರಗಳಲ್ಲಿ ಇಂತಹ ಸ್ನೇಹ ಇರುವುದನ್ನು ಗಮನಿಸಿದ್ದೇನೆ. ಇದಕ್ಕೆ ವಿರುದ್ಧವಾಗಿ ಕೃತಕವಾಗಿ ನಾವೇ ನೆಟ್ಟು ಪೋಷಿಸುವ ನೆಡುತೋಪುಗಳಲ್ಲಿ (plantation) ಇಂತಹ ಸ್ನೇಹ ರೂಪುಗೊಳ್ಳುವುದು ಅಪರೂಪ. ಏಕೆಂದರೆ ಅವುಗಳನ್ನು ನೆಡುವಾಗಲೇ ಅವುಗಳ ಬೇರನ್ನು ಸಾಕಷ್ಟು ಘಾಸಿಗೊಳಿಸಿರುತ್ತೇವೆ. ಆದ್ದರಿಂದ ಅವುಗಳು ತಕ್ಷಣಕ್ಕೆ ತಮ್ಮ ಬೇರಿನ ಜಾಲವನ್ನು ಮತ್ತೊಂದು ಬೇರಿನ ಜಾಲದೊಡನೆ ಬೆಸೆಯಲಾರವು. ಇಂತಹ ಮರಗಳು ಒಂಟಿತನದಿಂದ ಬಳಲುತ್ತವೆ. ಇವು ಹೆಚ್ಚುಕಾಲ ಬದುಕಲಾರವು. ಆದ್ದರಿಂದಲೇ ಇವುಗಳನ್ನು ನೆಟ್ಟು ಬೆಳೆಸಿದ ಸ್ವಲ್ಪ ಕಾಲದಲ್ಲೇ ಕಟಾವಿಗೆ ಸಿದ್ಧವಾದಂತೆ ಕಂಡು ಬರುತ್ತವೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ