ನಾವು ನಮ್ಮ ಮನೆಯ ಗೋಡೆ ಅಥವಾ ಕಾಂಪೌಡಿನ ಮೇಲೆ ಒಂದುರೀತಿ ಚಿಕ್ಕದಾಗಿ ಕಸ ಒಗ್ಗೂಡಿರುವುದನ್ನು ನೋಡಿರುತ್ತೇವೆ. ಇದನ್ನು ಬಹುತೇಕ ಜನ ಕಸವೆಂದು ಉಪೇಕ್ಷಿಸುವುದೆ ಹೆಚ್ಚು. ಆದರೆ ಸ್ವಲ್ಪ ತಾಳ್ಮೆಯಿಂದ ಸೂಕ್ಷ್ಮವಾಗಿ ಗಮನಿಸಿದರೆ ಅದೊಂದು ಜೀವಿಯೆಂದು ತಿಳಿಯುತ್ತದೆ.
ಕಸದಂತೆ ಕಾಣುವ ಜೋಳಿಗೆ ಹುಳು |
ಸಾಮಾನ್ಯವಾಗಿ ಈ ಜೀವಿ ಸ್ತಬ್ಧವಾಗಿರುತ್ತದೆ ಹಾಗಾಗಿ ಇದು ಜನರ ಗಮನವನ್ನು ಸೆಳೆಯುವುದಿಲ್ಲ. ಈ ಜೀವಿಯನ್ನು .ಇಂಗ್ಲಿಷಿನಲ್ಲಿ ಬ್ಯಾಗ್ ವರ್ಮ್ ಎನ್ನುತ್ತಾರೆ. ನಾವು ಕನ್ನಡದಲ್ಲಿ ಜೋಳಿಗೆ ಹುಳು ಎಂದು ಕರೆಯಬಹುದು. ಈ ಹೆಸರು ಬರಲು ಕಾರಣ ಅದು ತನ್ನ ಗೂಡನ್ನು ರಚಿಸಿಕೊಂಡು ಅದನ್ನು ಹೊತ್ತು ಎಲ್ಲೆಡೆ ಚಲಿಸುತ್ತಿರುತ್ತದೆ, ಗೂಡು ಜೋಳಿಗೆ ರೀತಿ ಕಾಣುತ್ತದೆ
ಜೋಳಿಗೆ ಹುಳುವಿನ ರೀತಿ ಕಾಣುವ ಕೇಸ್ ವರ್ಮ್ |
ಜೋಳಿಗೆ ಹುಳು ನಿಜಕ್ಕೂ ಹುಳವಲ್ಲ. ಇದೊಂದು ಪತಂಗ. ಇದು ತನ್ನ ಲಾರ್ವ ಅವಸ್ಥೆಯಲ್ಲಿ ಹೀಗೆ ಕಾಣಿಸುತ್ತದೆ. ಚಿಟ್ಟೆ ಹಾಗು ಪತಂಗಗಳ ಜಾತಿಯಲ್ಲಿ ಸೈಕಿಡೆ ಎಂಬ ಕುಟುಂಬ ವರ್ಗಕ್ಕೆ ಸೇರುತ್ತದೆ. ಇದನ್ನು ಕೇಸ್ ವರ್ಮ್ ಎಂದು
ಕೆಲವರು ಕರೆಯುತ್ತಾರೆ. ಆದರೆ ಅವು ಇದೆ ರೀತಿ ಕಾಣುವ ಇನ್ನೊಂದು ಕುಟುಂಬಕ್ಕೆ ಸೇರಿದ ಪತಂಗ. ಜೋಳಿಗೆ ಹುಳುವಿನಲ್ಲಿ ಅನೇಕ ಜಾತಿಗಳು ಇವೆ. ಇವು ಪ್ರಪಂಚಾದ್ಯಂತ ವ್ಯಾಪಿಸಿವೆ.
ಇವುಗಳ ಜೀವನ ಚಕ್ರ ಸ್ವಲ್ಪ ವಿಚಿತ್ರವಾಗಿದೆ. ಇವು ಮೊಟ್ಟೆ ಯಿಂದ ಹೊರ ಬಂದ ತಕ್ಷಣ ತಮ್ಮ ಸುತ್ತಲೂ ರೇಷ್ಮೆ ಯಂಥ ಎಳೆಯನ್ನು ಸುತ್ತಿಕೊಂಡು ಗೂಡನ್ನು ರಚಿಸಿಕೊಳ್ಳುತ್ತದೆ. ಅನಂತರ ತನ್ನ ಪರಿಸರದಲ್ಲಿ ಲಭ್ಯ ವಿರುವ ಕಡ್ಡಿ, ಗಿಡ ದ ಇತರ ಭಾಗಗಳು, ಮರಳಿನ ಕಣಗಳು, ಮಣ್ಣು ಇವನ್ನೆಲ್ಲ ರೇಷ್ಮೆಯ ಎಳೆಗೆ ಅಂಟಿಸಿಕೊಳ್ಳುತ್ತದೆ. ತನ್ನ ತಲೆ ಮತ್ತು ಮುಂಭಾಗವನ್ನು ಹೊರಚಾಚಿಸಿಕೊಂಡು ಗೂಡನ್ನು ಹೊತ್ತು ಚಲಿಸುತ್ತದೆ. ಬಹುತೇಕ ಜೋಳಿಗೆ ಹುಳು ಎಲೆಗಳನ್ನು ಭಕ್ಷಿಸುತ್ತವೆ. ಕೆಲವು ಕಲ್ಲು ಹೂವನ್ನು ತಿನ್ನುತ್ತವೆ. ತಮ್ಮ ಪ್ಯೂಪ ಅವಸ್ಥೆಯಲ್ಲಿ ಗೋಡೆಗಳ ಮೇಲೆ ಅಥವಾ ಬಂಡೆಗಳ ಮೇಲೆ ಅಂಟಿಕೊಂಡು ಬಿಡುತ್ತವೆ.
ಕಡ್ಡಿಗಳಿಂದ ಆವೃತವಾಗಿರುವ ಜೋಳಿಗೆ ಹುಳು |
ಜೋಳಿಗೆ ಹುಳುವಿನ ಗೂಡು ೧ ಸೇಮೀ ನಿಂದ ೧೫ ರವರೆಗೂ ವಿವಿಧ ಆಕಾರದಲ್ಲಿ ಕಾಣಸಿಗುತ್ತವೆ. ಪ್ರತಿಯೊಂದು ಜಾತಿಯು ತಮ್ಮದೆ ವಿನ್ಯಾಸದ ಗೂಡುಗಳನ್ನು ರಚಿಸಿಕೊಳ್ಳುತ್ತವೆ. ಹೀಗಾಗಿ ಗೂಡಿನ ವಿನ್ಯಾಸದ ಮೇಲೆ ಅದು ಯಾವ ಜಾತಿಯ ಜೋಳಿಗೆ ಹುಳು ಎಂದು ಗುರುತಿಸಬಹುದು. ಇವು ತಮ್ಮ ಪರಿಸರದಲ್ಲಿ ಸಿಗುವ ವಸ್ತುಗಳಿಂದ ಗೂಡನ್ನು ನಿರ್ಮಿಸುವದರಿಂದ, ಪಕ್ಷಿ ಮುಂತಾದ ಬೇಟೆಗಾರರಿಂದ ಮರೆಯಾಗುವಲ್ಲಿ ಯಶಸ್ವಿ ಯಾಗುತ್ತದೆ.
ವಯಸ್ಕ ಕೀಟವಾದ ನಂತರ ಗಂಡು ಜೋಳಿಗೆ ಹುಳು ರೆಕ್ಕೆಯನ್ನು ಮೂಡಿಸಿಕೊಂಡು ಗೂಡನ್ನು ತ್ಯಜಿಸುತ್ತದೆ. ಹೆಣ್ಣು ಗೂಡನ್ನು ತ್ಯಜಿಸುವುದಿಲ್ಲ. ಒಂದು ವೇಳೆ ತ್ಯಜಿಸಿದರು ಇವುಗಳ ರೆಕ್ಕೆ ಬಲಿಷ್ಠವಾಗಿರುವುದಿಲ್ಲ ಹಾಗಾಗಿ ಹಾರಲಾಗುವುದಿಲ್ಲ. ಹೆಣ್ಣು ತನ್ನ ಗೂಡಿನಲ್ಲಿಯೆ ಮೊಟ್ಟೆಗಳನ್ನಿಟ್ಟು ಸಾವನ್ನಪ್ಪುತ್ತದೆ.
ಗೋಪುರಾಕಾರದ ಜೋಳಿಗೆ ಹುಳು |
ಸಾಮಾನ್ಯವಾಗಿ ಜೋಳಿಗೆ ಹುಳುವಿನಿಂದ ನಮಗೆ ಯಾವುದೇ ತೊಂದರೆ ಇಲ್ಲ. ಕೆಲವು ಜಾತಿ ಬೆಳೆಗಳಿಗೆ ಮಾರಕವಾಗಬಹುದು. ಉಳಿದಂತೆ ಇವು ನಿರುಪದ್ರವಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ