ವಿಷಯಕ್ಕೆ ಹೋಗಿ

ಹರ್ಮಿಟ್ ಏಡಿ

ನೀಲಿ ಸಾಗರದ ಮಧ್ಯೆ ಹಸಿರು ಅಟಾಲ್ ಗಳಿಂದ , ಮಾಲೆಯಂಥ ಆಕಾರವನ್ನು ಹೊಂದಿರುವ ಮಾಲ್ಡೀವ್ಸ್‌ನ ಬಿಳಿ ತೀರದ ಮೇಲೆ ಕುಳಿತು ನಮ್ಮನ್ನು ಕರೆದುಕೊಂಡು ಹೋಗಬೇಕಿದ್ದ ಹಾಯಿದೋಣಿಗಾಗಿ ಕಾಯುತ್ತಿದ್ದೆವು
. ಏನನ್ನೊ ಯೋಚಿಸುತ್ತಿದ್ದ ನನಗೆ, ತೀರದ ಮೇಲೆ ಏನೊ ಚಲಿಸಿದಂತಾಗಿ ದೃಷ್ಟಿ ಅತ್ತ ಹೋಯಿತು. ನನಗೆ ಒಂದು ಕ್ಷಣ ಪರಮಾಶ್ಚರ್ಯವಾಯಿತು. ಏಕೆಂದರೆ ಅಲ್ಲಿ ಚಲಿಸುತ್ತಿದ್ದದ್ದು ಒಂದು ಶಂಖ.
ಶಂಖದ ದ್ವಾರದಲ್ಲಿ ಏನೊ ಅಡ್ಡವಾಗಿ ಇದ್ದದ್ದು ಮಾತ್ರ ಕಾಣುತ್ತಿತ್ತು.


ಶಂಖ ಚಲಿಸುತ್ತಿದ್ದರೆ ಅದರಲ್ಲಿ ಆಶ್ಚರ್ಯ ಪಡುವಂಥದ್ದೇನಿದೆ ಎಂದು ನಿಮಗೆ ಅನ್ನಿಸಬಹುದು. ನಾವೆಲ್ಲ ಶಂಖದ ಹುಳುವನ್ನು ನೋಡಿರುತ್ತೇವೆ ಅವು ಸಾಮಾನ್ಯವಾಗಿ ಕಾಣಸಿಗುವ ಪ್ರಾಣಿ. ಆದರೆ ಆಶ್ಚರ್ಯವಾಗಿದ್ದು ಶಂಖದ ಹುಳು ಸಮುದ್ರ ತೀರದ ಮೇಲೆ ಚಲಿಸುತ್ತಿದ್ದ ಕಾರಣದಿಂದಾಗಿ. ಶಂಖದ ಹುಳು ನೆಲವಾಸಿ ಪ್ರಾಣಿ. ಇದೆ ಕುಟುಂಬದ ಇತರ ಪ್ರಾಣಿ ಸಮುದ್ರ ಮತ್ತು ನದಿಯಲ್ಲಿ ವಾಸಿಸುತ್ತವೆಯಾದರು ಅವು ಶಂಖದ ಹುಳುವಿನ ರೀತಿ ನೆಲದ ಮೇಲೆ ಕಾಣಸಿಗುವುದಿಲ್ಲ.

ಅದೇನೆಂದು ಪರೀಕ್ಷಿಸಲು ಹತ್ತಿರ ಹೋದೆ. ಚಲಿಸುತ್ತಿದ್ದ ಆ ಜೀವಿ ಸ್ತಬ್ದವಾಯಿತು. ಸ್ವಲ್ಪ ಸಮಯ ಕಳೆದರು ಅದು ಚಲಿಸಲಿಲ್ಲ. ಅದನ್ನು ಕೈಗೆ ತೆಗೆದುಕೊಂಡು ನೋಡಿದಾಗ, ಆ ಜೀವಿ ಒಳ ಸರಿದಿತ್ತು. ಶಂಖದ ದ್ವಾರದಲ್ಲಿ ಏನೊ ಅಡ್ಡವಾಗಿ ಇದ್ದದ್ದು ಮಾತ್ರ ಕಾಣುತ್ತಿತ್ತು. ಅದನ್ನು ಹಾಗೆಯೆ ಇಟ್ಟುಬಿಟ್ಟೆ. ಸ್ವಲ್ಪ ಕ್ಷಣಗಳ ನಂತರ ಅದು ಕಣ್ಣು ಮತ್ತು ಕಾಲುಗಳನ್ನು ಹೊರಗೆ ಹಾಕಿಕೊಂಡು ಚಲಿಸಲಾರಂಭಿಸಿತು. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದಕ್ಕೆ ಏಡಿಗಳಿಗಿರುವಂತೆ ಕೊಂಡಿಯಿರುವುದು ಕಾಣಿಸುತ್ತಿತ್ತು. ಆದರೆ ಅದು ಯಾವ ಜೀವಿಯೆಂದು ಗೊತ್ತಾಗಲಿಲ್ಲ. ಅಷ್ಟರಲ್ಲಿ ನಮ್ಮ ಹಾಯಿದೋಣಿ ಬಂದುಬಿಟ್ಟಿತು ಹಾಗಾಗಿ ಆ ಜೀವಿಯನ್ನು ಅಲ್ಲಿಯೆ ಬಿಟ್ಟು ಹೊರಟುಹೋದೆವು.

ಸಾಗರದ ಮೇಲೆ ಹಾಯಿ ದೋಣಿಯ ವಿಹಾರವನ್ನು ಮುಗಿಸಿ ಮರಳಿ ಬಂದಾಗ ಆಗಲೆ ಕತ್ತಲೆಯಾಗುತ್ತಿತ್ತು. ಹಾಗೆ ದಡದ ಉದ್ದಕ್ಕು ನಡೆಯೋಣವೆಂದುಕೊಂಡು ಹೋಗುತ್ತಿರಬೇಕಾದರೆ, ಅಲ್ಲೊಂದು ಕಡೆ ಆಗಷ್ಟೆ ಸಮುದ್ರದಿಂದ ಒಂದಷ್ಟು ಶಂಖಗಳು ಬಂದು ಬಿದ್ದಿದ್ದವು. ಅಚ್ಚ ಬಿಳಿಯ ಬಣ್ಣದ ಶಂಖಗಳು ನೋಡಲು ತುಂಬಾ ಸುಂದರವಾಗಿದ್ದವು. ಒಂದೆರಡು ಶಂಖಗಳನ್ನು ಆಯ್ದು ಬೆಂಗಳೂರಿಗೆ ಹೋಗುವಾಗ ತೆಗೆದುಕೊಂಡು ಹೋಗೋಣವೆಂದು ಅಲ್ಲಿಯೆ ಬಿದ್ದಿದ್ದ ನೀರಿನ ಬಾಟಲಿನಲ್ಲಿ ತುಂಬಿಕೊಂಡೆ. ಮನಸ್ತೃಪ್ತಿಯಾಗುವಷ್ಟು ತುಂಬಿಕೊಂಡ ನಂತರ ಅದನ್ನು ತೆಗೆದುಕೊಂಡು ಹೋಗಿ ತೊಳೆದು ಹೊರಡುವಾಗ ಪ್ಯಾಕ್ ಮಾಡಿಕೊಳ್ಳೋಣವೆಂದು ಹಾಗೆಯೆ ಟೇಬಲ್ ಮೇಲೆ ಇಟ್ಟೆ.
ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದಕ್ಕೆ ಏಡಿಗಳಿಗಿರುವಂತೆ ಕೊಂಡಿಯಿರುವುದು ಕಾಣಿಸುತ್ತಿತ್ತು.




ಮಾರನೇ ದಿನ ಬೆಳಿಗ್ಗೆ ಎದ್ದು ಕಾಫಿ ಕುಡಿಯುತ್ತ ಟೇಬಲ್‌ನತ್ತ ಕಣ್ಣು ಹಾಯಿಸಿದಾಗ ಬಾಟಲಿನಿಂದ ಒಂದೆರಡು ಶಂಖಗಳು ನಾಪತ್ತೆಯಾಗಿರುವುದು ಕಂಡುಬಂತು. ಏನಾಯಿತು ಎಂದು ಅಚ್ಚರಿಯಿಂದ ಅತ್ತಿತ್ತ ನೋಡಿದಾಗ ಶಂಖಗಳು ದಿಕ್ಕಾಪಾಲಾಗಿ ಬಿದ್ದಿದ್ದವು. ಹೀಗೇಕೆ ಆಯಿತು ಎಂದು ಆಶ್ಚರ್ಯದಿಂದ ಅದನ್ನು ಎತ್ತಿ ನೋಡಿದರೆ ಅದರಲ್ಲೂ ಹಿಂದಿನ ದಿನ ನೋಡಿದ ಪ್ರಾಣಿಯೇ!!! ಹೇಗಾದರು ಮಾಡಿ ಆ ಪ್ರಾಣಿಯನ್ನು ಹೊರಗೆ ತೆಗೆಯಬೇಕೆಂದು ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ. ಹಾಗಾಗಿ ಆ ಶಂಖಗಳನೆಲ್ಲ ಸಮುದ್ರ ದಂಡೆಗೆ ಎಸೆದೆ. ಇಷ್ಟೆಲ್ಲ ಆದರು ಅದು ಯಾವ ಜೀವಿಯೆಂದು ತಿಳಿಯಲಿಲ್ಲ. ಬೆಂಗಳೂರಿಗೆ ಬಂದ ನಂತರ ಇಂಟರ್ನೆಟ್ ಪುಟಗಳನ್ನು ತಿರುವಿದ ಮೇಲೆ ತಿಳಿಯಿತು ಇದು ಹರ್ಮಿಟ್ ಏಡಿ ಎಂದು.

ಹರ್ಮಿಟ್ ಏಡಿಗಳು ಡೆಕಾಪೊಡ (ದಶಪಾದ) ಕ್ರಶ್ಟೇಶಿಯನ್ ಎನ್ನುವ ಕುಟುಂಬ ವರ್ಗಕ್ಕೆ ಸೇರುತ್ತದೆ. ಈ ಕುಟುಂಬದಲ್ಲಿರುವ ಇತರ ಜೀವಿಗಳೆಂದರೆ, ಏಡಿ, ಲಾಬ್ಸಟರ್, ಸೀಗಡಿ ಮುಂತಾದವು. ಹರ್ಮಿಟ್ ಏಡಿಗಳಲ್ಲಿ ಸುಮಾರು 1100 ಪ್ರಬೇಧಗಳಿವೆ.

ಆರ್ಥ್ರೋಪೊಡ ಎಂಬ ಪ್ರಜಾತಿಗೆ ಸೇರುವ ಈ ಜೀವಿಗಳು, exoskeleton (ಆರ್ಥ್ರೋಪೊಡ ಜೀವಿಗಳ ಅಸ್ಥಿ ಮೈ ಮೇಲಿರುತ್ತದೆ) ಹೊಂದಿರುವುದಿಲ್ಲ. ಹೀಗಾಗಿ ಇವುಗಳ ಮೈ ಮೃಧುವಾಗಿರುತ್ತದೆ. ಅಸ್ಥಿ ಇಲ್ಲದಿದ್ದರೆ ಎಂತಹ ಜೀವಿಗಳಿಗು ಅಪಾಯಕಾರಿಯೆ. ಈ ಸಮಸ್ಯೆಯಿಂದ ಹೊರ ಬರಲು ಹರ್ಮಿಟ್‌ಗಳು ಕಂಡುಕೊಂಡ ಉತ್ತರವೆಂದರೆ ಖಾಲಿ ಇರುವ ಶಂಖಗಳನ್ನು ಉಪಯೋಗಿಸುವುದು. ಇವು ತಮ್ಮ ಗಾತ್ರದ ಅನುಗುಣವಾಗಿ ಶಂಖಗಳನ್ನು ಆಯ್ಕೆ ಮಾಡಿಕೊಂಡು ಅದರೊಳಗೆ ಸೇರಿಕೊಳ್ಳುತ್ತವೆ ಮತ್ತು ಎಲ್ಲೆಡೆ ಶಂಖವನ್ನು ಹೊತ್ತು ನಡೆಯುತ್ತವೆ. ಹರ್ಮಿಟ್‌ಗಳು ಆಕ್ರಮಣಕ್ಕೊಳಗಾದಗ ಶಂಖದೊಳಗೆ ಹುದುಗುವುದರಿಂದ ಶತ್ರುಗಳಿಂದಲು ರಕ್ಷಣೆದೊರೆಯುತ್ತದೆ. ಹರ್ಮಿಟ್‌ಗಳು ಬೆಳೆದಂತೆಲ್ಲ, ಶಂಖದೊಳಗಿನ ಜಾಗ ಚಿಕ್ಕದಾಗುವುದರಿಂದ ಅದನ್ನು ಬಿಟ್ಟು ಬೇರೆಯದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಖಾಲಿ ಶಂಖಕ್ಕಾಗಿ ಪೈಪೋಟಿಯಿರುತ್ತದೆ. ಕೆಲವು ಬಾರಿ ಖಾಲಿ ಶಂಖಕ್ಕಾಗಿ ಹರ್ಮಿಟ್‌ಗಳ ನಡುವೆ ಹೊಡೆದಾಟವು ಕಂಡುಬಂದಿವೆ. ಹರ್ಮಿಟ್ ಒಂದು ಜಾಡಮಾಲಿ ಜೀವಿ. ಇವು ಕೊಳೆತ ಹಣ್ಣುಗಳಿಂದ ಹಿಡಿದು ಸತ್ತ ಪ್ರಾಣಿಯನ್ನು ಸಹ ಭಕ್ಷಿಸುತ್ತದೆ.

ಹರ್ಮಿಟ್‌ಗಳು ಒಂದು ವಿಚಿತ್ರ ಪರಂಪರೆಯನ್ನು ಮಾಡಿಕೊಂಡಿವೆ. ಅದೇನೆಂದರೆ ಯಾವುದಾದರು ಖಾಲಿಯಾದ ಶಂಖ ದೊರೆತಾಗ ಅದರ ಬಳಿ ಹರ್ಮಿಟ್‌ಗಳು ಸಾಲಾಗಿ ತಮ್ಮ ಆಕಾರದ ಅನುಸಾರವಾಗಿ ನಿಂತು ಕೊಳ್ಳುತ್ತವೆ. ಮೊದಲ ಹರ್ಮಿಟ್ ಖಾಲಿ ಶಂಖವನ್ನು ಹೊಕ್ಕ ನಂತರ ಮುಂದಿನ ಹರ್ಮಿಟ್ ಈಗ ಖಾಲಿಯಾದ ಶಂಖವನ್ನು ಸೇರುತ್ತದೆ ಹೀಗೆ ಈ ಪ್ರಕ್ರಿಯೆ ಕೊನೆಯ ಹರ್ಮಿಟ್ ವರೆಗು ಮುಂದುವರೆಯುತ್ತದೆ. ಇದಕ್ಕೆ ವೇಕೆನ್ಸಿ ಚೇಯ್ನ್ ಎಂದು ಕರೆಯುತ್ತಾರೆ. ಹರ್ಮಿಟ್‌ಗಳು ಮೊಟ್ಟೆಯಿಟ್ಟು ಮರಿ ಮಾಡುತ್ತವೆ. ಮೊಟ್ಟೆಯಿಂದ ಮರಿ ಹೊರ ಬಂದ ನಂತರ ಅನೇಕ ಹಂತಗಳಲ್ಲಿ ರೂಪಾಂತರ ಹೊಂದಿ ವಯಸ್ಕ ಹರ್ಮಿಟ್ ಆಗುತ್ತದೆ.

ಅಂದಹಾಗೆ ಪ್ರಪಂಚದ ಅತ್ಯಂತ ದೊಡ್ಡ ಗಾತ್ರದ ಅಕಶೇರುಕ ಕೊಕೊನಟ್ ಕ್ರ್ಯಾಬ್ ಸಹ ಹರ್ಮಿಟ್ ಏಡಿಯೆ!!!

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...