ಪಕ್ಷಿಗಳನ್ನು ಗಮನಿಸಿದರೆ, ಅವು ಯಾವಾಗಲೂ ಏನಾದರೂ ಕೆಲಸದಲ್ಲೇ ತಲ್ಲೀನವಾಗಿರುತ್ತವೆ. ಒಂದೊಮ್ಮೆ ಆಹಾರ ಹುಡುಕುತ್ತಿದ್ದರೆ, ಮತ್ತೊಮ್ಮೆ ಗೂಡು ಕಟ್ಟುತ್ತಿರುತ್ತವೆ, ಇಲ್ಲವೇ ಮರಿಗಳಿಗೆ ಆಹಾರ ತಿನ್ನಿಸುತ್ತಿರುತ್ತವೆ. ಕೆಲವೊಮ್ಮೆ ತಮ್ಮ ಕೆಲಸದಲ್ಲಿ ಅಷ್ಟು ಮಗ್ನವಾಗಿಬಿಡುತ್ತವೆ, ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನೇ ಮರೆತುಬಿಡುತ್ತವೆ. ಕ್ಯಾಸಲ್ ರಾಕ್ ಹತ್ತಿರ ಇವೋಲಿ ಎಂಬ ಪುಟ್ಟ ಊರಿನ ಬಳಿ ಒಂದು ಸಣ್ಣ ಹೊಳೆಯಿದೆ. ಒಂದು ದಿನ ನಾನು ಜೀಪಿನಲ್ಲಿ ಆ ಹೊಳೆಯನ್ನು ದಾಟುತ್ತಿದ್ದೆ. ಸಾಮಾನ್ಯವಾಗಿ ಹೊಳೆ ಅಥವಾ ನದಿಯ ಹತ್ತಿರ ಯಾವುದಾದರೂ ಪಕ್ಷಿ ಅಥವಾ ಪ್ರಾಣಿ ಕಾಣಬಹುದು ಎಂಬ ಅನುಭವವಿರುವುದರಿಂದ, ಅಂತಹ ಜಾಗಗಳಲ್ಲಿ ನಾನು ಯಾವಾಗಲೂ ನಿಧಾನವಾಗಿಯೇ ಜೀಪ್ ಓಡಿಸುತ್ತೇನೆ. ಬಹಳ ಬಾರಿ ಆ ಅಭ್ಯಾಸಕ್ಕೆ ಪ್ರತಿಫಲವೂ ಸಿಕ್ಕಿದೆ. ಆ ದಿನವೂ ಹೊಳೆಯ ಹತ್ತಿರ ಬಂದ ತಕ್ಷಣ ಜೀಪಿನ ವೇಗ ಕಡಿಮೆ ಮಾಡಿದೆ. ಹೊಳೆಯ ಮಧ್ಯದಲ್ಲಿದ್ದ ಒಂದು ಕಲ್ಲಿನ ಮೇಲೆ ಮಿಂಚುಳ್ಳಿ ( Common Kingfisher ) ಕುಳಿತಿತ್ತು. ಅದರ ದೃಷ್ಟಿಯೆಲ್ಲ ನೀರಿನ ಮೇಲೆಯೇ ಇತ್ತು. ಯಾವುದೋ ಮೀನು ಹತ್ತಿರ ಬರಬಹುದೆಂಬ ನಿರೀಕ್ಷೆಯಲ್ಲಿ ಸಂಪೂರ್ಣ ಏಕಾಗ್ರತೆಯಿಂದ ಹೊಂಚು ಹಾಕಿ ಕುಳಿತಿತ್ತು. ನಾನು ಜೀಪನ್ನು ನಿಲ್ಲಿಸಿದೆ. ಕೆಲವು ಕ್ಷಣಗಳ ನಂತರ ನಿಧಾನವಾಗಿ ಇನ್ನೂ ಹತ್ತಿರ ಕೊಂಡೊಯ್ದೆ. ಆಗಲೂ ಅದು ಹಾರಲಿಲ್ಲ. ನನ್ನ ಜೀಪಿನ ಕಡೆ ಒಮ್ಮೆ ಕೂಡ ನೋಡಲಿಲ್ಲ. "ಇನ್ನೂ ಸ್ವಲ್ಪ ಹ...