ವಿಷಯಕ್ಕೆ ಹೋಗಿ

ತೆಳು ಗಾಳಿಗೆ - ಪಕ್ಷಿಗಳ ಉಗಮ

"ವೈ ಎವಲ್ಯೂಶನ್ ಈಸ್ ಟ್ರು ?” ಪುಸ್ತಕದ ಆಯ್ದ ಭಾಗ ಕನ್ನಡದಲ್ಲಿ

ಅರ್ಧ ರೆಕ್ಕೆಯ ಪ್ರಯೋಜನವೇನು? ಇದು ಪ್ರಾಕೃತಿಕ ಆಯ್ಕೆ ಅಥವಾ ವಿಕಾಸವಾದದ ಬಗ್ಗೆ ಅನುಮಾನ ವ್ಯಕ್ತಪಡಿಸಲು ಡಾರ್ವಿನ್ ಕಾಲದಿಂದಲು ಪ್ರಚಲಿತವಿರುವ ಪ್ರಶ್ನೆ. ಜೀವ ವಿಜ್ಞಾನಿಗಳ ಪ್ರಕಾರ ಪಕ್ಷಿಗಳು ಆರಂಭಿಕ ಉರಗಗಳಿಂದ ವಿಕಾಸ ಹೊಂದಿವೆ. ಆದರೆ ಒಂದು ನೆಲವಾಸಿ ಪ್ರಾಣಿಯು ಹೇಗೆ ಹಾರುವ ಸಾಮರ್ಥ್ಯವನ್ನು ಪಡೆಯುತ್ತದೆ? ಪ್ರಾಕೃತಿಕ ಆಯ್ಕೆಯು ಈ ಪರಿವರ್ತನೆಯನ್ನು ವಿವರಿಸಲಾಗುವುದಿಲ್ಲ. ಏಕೆಂದರೆ ಇದಕ್ಕಾಗಿ ಜೀವಿಗಳು ಒಂದು ಮಧ್ಯಂತರ ಕಾಲಘಟ್ಟದಲ್ಲಿ ಕೇವಲ ಅಪೂರ್ಣಾವಸ್ಥೆಯಲ್ಲಿರುವ ರೆಕ್ಕೆಯನ್ನು ಹೊಂದಿರಬೇಕು. ಇದು ಆ ಜೀವಿಗೆ ಆಯ್ಕೆಯ ಪ್ರಯೋಜನಕ್ಕಿಂತ ಹೊರೆಯನ್ನೆ ಉಂಟುಮಾಡುತ್ತದೆ ಎಂದು ಸೃಷ್ಟಿ ವಾದಿಗಳು ವಾದಿಸುತ್ತಾರೆ.

ಆದರೆ ಸ್ವಲ್ಪ ಯೋಚಿಸಿ ನೋಡಿದರೆ, ಹಾರಾಟದ ವಿಕಾಸದಲ್ಲಿ ಮಧ್ಯಂತರ ಕಾಲ ಘಟ್ಟವನ್ನು ಹುಡುಕುವುದು ಕಷ್ಟವೇನಲ್ಲ. ಈ ಘಟ್ಟದ ಅವಸ್ಥೆ ಆ ಜೀವಿಗಳಿಗೆ ಅನುಕೂಲಕರವಾಗಿರಬಹುದು. ಈ ನಿಟ್ಟಿನಲ್ಲಿ ಗಾಳಿಯಲ್ಲಿ ತೇಲುವುದು ಖಂಡಿತವಾಗಿಯೂ ಮೊದಲ ಹೆಜ್ಜೆ ಎನಿಸಿಕೊಳ್ಳುತ್ತದೆ. ಗಾಳಿಯಲ್ಲಿ ತೇಲುವುದು ಗರ್ಭಸಸ್ತನಿ, ಚೀಲಸಸ್ತನಿ ಮತ್ತು ಹಲ್ಲಿಗಳಲ್ಲಿ ಸ್ವತಂತ್ರವಾಗಿ ಅನೇಕ ಬಾರಿ ವಿಕಾಸವಾಗಿದೆ. ಹಾರುವ ಅಳಿಲುಗಳು ತಮ್ಮ ದೇಹದ ಪಕ್ಕದಲ್ಲಿ ಕಾಲುಗಳ ನಡುವೆಯಿರುವ ಚರ್ಮದ ಪದರದಿಂದಾಗಿ ಉತ್ತಮವಾಗಿ ತೇಲುತ್ತವೆ. ಇದು ಶತ್ರುಗಳಿಂದ ತಪ್ಪಿಸಿಕೊಳ್ಳಲು, ಆಹಾರವನ್ನು ಅರಸಲು ಮರದಿಂದ ಮರಕ್ಕೆ ಹೋಗಲು ಸಹಕರಿಸುತ್ತದೆ. ಇದಕ್ಕಿಂತ ವಿಶೇಷವಾಗಿರುವ ಪ್ರಾಣಿಯೆಂದರೆ ಆಗ್ನೇಯ ಏಷ್ಯಾದ "ಹಾರುವ ಲೀಮರ್" ಅಥವಾ ಕೊಲುಗೊ. ಇದರ ಚರ್ಮದ ಪದರ ತಲೆಯಿಂದ ಬಾಲದವರೆಗು ಚಾಚಿಕೊಂಡಿರುತ್ತದೆ. ಒಂದು ಕೊಲುಗೊ ಸುಮಾರು 450 ಅಡಿವರೆಗು ತೇಲಿಕೊಂಡು ಹೋಗಿರುವುದು ಕಂಡು ಬಂದಿದೆ. ಈ ದೂರ ಸುಮಾರು ಆರು ಟೆನಿಸ್ ಕೋರ್ಟ್­ಗಳಷ್ಟು ಸಮ. ಈ ದೂರವನ್ನು ಕ್ರಮಿಸುವಾಗ ಇದು ಕಳೆದುಕೊಂಡ ಎತ್ತರ ಕೇವಲ 40 ಅಡಿಗಳಷ್ಟು. ಇದರ ಮುಂದಿನ ವಿಕಾಸದ ಮೆಟ್ಟಿಲನ್ನು ಕಲ್ಪಿಸಿಕೊಳ್ಳುವುದು ಕಷ್ಟವಲ್ಲ. ಬಾವಲಿಗಳಲ್ಲಿ ಕಾಣುವಂತೆ ಕೊಲುಗೊನಂತಹ ಪ್ರಾಣಿ ಕಾಲುಗಳನ್ನು ಬಡಿದರೆ ನಿಜವಾದ ಹಾರಾಟ ಹೊಮ್ಮುತ್ತದೆ. ಆದರೆ ನಾವು ಇದನ್ನು ಕೇವಲ ಊಹಿಸುವ ಅಗತ್ಯವಿಲ್ಲ. ಹಾರುವ ಪಕ್ಷಿಗಳು ಹೇಗೆ ವಿಕಾಸಗೊಂಡವು ಎಂದು ತೋರಿಸುವ ಪಳೆಯುಳಿಕೆಗಳು ನಮ್ಮಲ್ಲಿ ಇವೆ.

ಹತ್ತೊಂಬತ್ತನೇ ಶತಮಾನದಿಂದಲೂ ಪಳೆಯುಳಿಕೆಶಾಸ್ತ್ರಜ್ಞರು, ಪಕ್ಷಿ ಮತ್ತು ಡೈನೋಸಾರ್­ಗಳ ಅಸ್ಥಿಪಂಜರದಲ್ಲಿನ ಸಾಮ್ಯತೆಯಿಂದಾಗಿ ಇವು ಸಾಮಾನ್ಯ ಪೂರ್ವಜರನ್ನು ಹೊಂದಿದ್ದವು ಎಂಬ ಸಿದ್ಧಾಂತವನ್ನು ಮಾಡಿದ್ದರು. ಅದರಲ್ಲೂ ಮುಖ್ಯವಾಗಿ ತೆರೋಪಾಡ್ ಎಂದು ಕರೆಯಲ್ಪಡುವ ಎರಡು ಕಾಲಿನ ತ್ವರಿತ ಮಾಂಸಹಾರಿ ಡೈನೋಸಾರ್ ನೊಂದಿಗೆ ಹೆಚ್ಚು ಸಾಮ್ಯತೆಯಿತ್ತು. ನಮಗೆ ಸುಮಾರು 200 ದಶಲಕ್ಷ ವರ್ಷಗಳ ಹಿಂದಿನ ತೆರೋಪಾಡ್ ಗಳ ಅನೇಕ ಪಳೆಯುಳಿಕೆಗಳು ಕಾಣಸಿಗುತ್ತವೆ. ಆದರೆ ಇವು ಮಬ್ಬಾಗಿಯು ಪಕ್ಷಿಗಳಂತೆ ಕಾಣುವುದಿಲ್ಲ. ಸುಮಾರು 70 ದಶಲಕ್ಷ ವರ್ಷಗಳ ಹಿಂದಿನ ನವಪಕ್ಷಿಗಳ ಪಳೆಯುಳಿಕೆಗಳು ನಮಗೆ ಸಿಗುತ್ತವೆ. ಒಂದು ವೇಳೆ ವಿಕಾಸವು ನಿಜವಾಗಿದ್ದಲ್ಲಿ, ಪರಿವರ್ತನೆಯು, ನಮಗೆ 70 ಮತ್ತು 200 ದಶಲಕ್ಷ ವರ್ಷಗಳ ನಡುವೆ ಬಂಡೆಗಳಲ್ಲಿ ಕಾಣಸಿಗಬೇಕು. ಹಾಗೆ ಅದು ಅಲ್ಲಿಯೆ ಇದೆ.

ಪಕ್ಷಿ ಮತ್ತು ಉರಗಗಳ ಮೊದಲ ಕೊಂಡಿ ಡಾರ್ವಿನ್ ಗು ಸಹ ತಿಳಿದಿತ್ತು. ಇದನ್ನು ಡಾರ್ವಿನ್ ಕುತೂಹಲದಿಂದ ತನ್ನ ದಿ ಆರಿಜಿನ್ ಆಫ್ ಸ್ಪೀಶಿಸ್­ನ ಅನಂತರದ ಆವೃತಿಗಳಲ್ಲಿ ಅಪರೂಪವೆನ್ನುವಂತೆ ಪ್ರಸ್ತಾಪಿಸಿದ್ದಾನೆ. ಇದು ಮತ್ಯಾವುದು ಅಲ್ಲದೆ ಆರ್ಕಿಯಾಪ್ಟರಿಕ್ಸ್ ಲಿತೋಗ್ರಾಫಿಕ ಎನ್ನವ ಕಾಗೆ ಗಾತ್ರದ ಪ್ರಾಣಿಯದು. ಈ ಪಳೆಯುಳಿಕೆ ಯನ್ನು 1860ರಲ್ಲಿ ಜರ್ಮನಿಯ ಒಂದು ಸುಣ್ಣದ ಗಣಿಯಲ್ಲಿ ಪತ್ತೆ ಹಚ್ಚಲಾಯಿತು. ( ಆರ್ಕಿಯಾಪ್ಟೆರಿಕ್ಸ್ ಎಂದರೆ ಹಳೆಯ ರೆಕ್ಕೆ ಮತ್ತು ಲಿತೋಗ್ರಾಫಿಕ ಎಂದರೆ ಸಾಲ್ನೋಫೆನ್ ಸುಣ್ಣದಕಲ್ಲಿನಿಂದ ಬಂದಿರುವ ಶಬ್ದ. ಇವು ತುಂಬ ನಯವಾಗಿದ್ದು ಲಿತೋಗ್ರಾಫಿಗಾಗಿ ಬಳಸಲಾಗುತ್ತದೆ ಮತ್ತು ಪುಕ್ಕಗಳಂತ ಮೃದು ವಸ್ತುಗಳ ಪಡಿಯಚ್ಚನ್ನು ಕಾಪಾಡಿವೆ) ಆರ್ಕಿಯಾಪ್ಟೆರಿಕ್ಸ್ ಪರಿವರ್ತನೆಯ ಹಂತದಲ್ಲಿರುವ ಎಲ್ಲ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ನಾವು ಎಣಿಸಿದಂತೆ ಅದರ ಕಾಲ ಸುಮಾರು 145 ದಶಲಕ್ಷ ವರ್ಷಗಳಷ್ಟು ಹಳೆಯದು.

ಆರ್ಕಿಯಾಪ್ಟೆರಿಕ್ಸ್ ಪಕ್ಷಿಗಿಂತ ಹೆಚ್ಚಾಗಿ ಉರಗವನ್ನೆ ಹೋಲುತ್ತದೆ. ಇದರ ಅಸ್ಥಿ ಪಂಜರ ತೆರೋಪಾಡ್­ನ ಅಸ್ಥಿ ಪಂಜರದೊಂದಿಗೆ ಸಾಮ್ಯತೆಯನ್ನು ಹೊಂದಿದೆ. ಕೆಲವು ವಿಜ್ಞಾನಿಗಳು ಪುಕ್ಕಗಳನ್ನು ಸರಿಯಾಗಿ ಗಮನಿಸದೆ ಇದನ್ನು ತೆರೋಪಾಡ್ ಡೈನೋಸಾರ್ ಎಂದೆ ಪರಿಗಣಿಸಿದ್ದರು. ಇದರ ದಾಡೆಯ ಹಲ್ಲುಗಳು, ಉದ್ದನೆಯ ಮೂಳೆಯ ಬಾಲ, ಪಂಜ, ರೆಕ್ಕೆಯ ಮೇಲಿನ ಬೆರಳುಗಳು ಮತ್ತು ಬುರುಡೆಗೆ ಹಿಂದಿನಿಂದ ಸೇರ್ಪಡೆಯಾದ ಕುತ್ತಿಗೆ. ಇವೆಲ್ಲ ಗುಣಲಕ್ಷಣಗಳು ಡೈನೋಸಾರ್ ರೀತಿಯವು. ಪಕ್ಷಿಯ ಗುಣಲಕ್ಷಣಗಳೆಂದರೆ ಅವು ಎರಡೆ ದೊಡ್ಡ ಪುಕ್ಕಗಳು ಮತ್ತು ಕೊಂಬೆಯನ್ನು ಹಿಡಿದು ಕುಳಿತು ಕೊಳ್ಳಲು ಸಹಾಯ ಮಾಡುವಂತ ಎದುರಿಗಿರುವ ಹೆಬ್ಬೆರಳು. ಈ ಪ್ರಾಣಿ ಸಂಪೂರ್ಣವಾಗಿ ಪುಕ್ಕಗಳನ್ನು ಹೊಂದಿದ್ದರು ಹಾರಬಲ್ಲದ್ದಾಗಿತ್ತೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೆ ಇದರ ಆಸಮರೂಪದ ಪುಕ್ಕಗಳು ಒಂದರ ಪಕ್ಕ ಇನ್ನೊಂದು ದೊಡ್ಡದಾಗಿರುವುದರಿಂದ ಇದು ಹಾರಬಲ್ಲದ್ದಾಗಿತ್ತು ಎಂದು ತೋರಿಸುತ್ತದೆ. ಆಸಮರೂಪದ ಪುಕ್ಕಗಳು ವಿಮಾನದ ರೆಕ್ಕೆಯಂತೆ ವಾಯುತಡೆ (airfoil) ಸೃಷ್ಟಿಸುತ್ತದೆ. ಇದು ವಾಯುಬಲ (aerodynamic) ಹಾರಾಟಕ್ಕೆ ಅವಶ್ಯವೆನಿಸುತ್ತದೆ. ಒಂದು ವೇಳೆ ಈ ಪ್ರಾಣಿ ಹಾರುತ್ತಿದ್ದರು, ಮುಖ್ಯವಾಗಿ ಡೈನೋಸಾರ್ ಎನಿಸಿಕೊಳ್ಳುತ್ತದೆ. ಇದನ್ನು ವಿಕಾಸವಾದಿಗಳು ನಮೂನೆ (mosaic) ಎಂದು ಕರೆಯುತ್ತಾರೆ. ಇದು ಪಕ್ಷಿಯ ಮತ್ತು ಉರಗದನಡುವೆ ಇರುವುದಕ್ಕಿಂತ ಕೆಲವು ಗುಣಗಳು ಪಕ್ಷಿಗಳಂತೆ ಮತ್ತು ಬಹುತೇಕ ಗುಣಗಳು ಉರಗಗಳಂತೆ ಇದೆ.

ಆರ್ಕಿಯಾಪ್ಟೆರಿಕ್ಸ್ ಕಂಡು ಹಿಡಿದ ಮೇಲೆ ಅದೇ ರೀತಿಯ ಮಧ್ಯಂತರ ಪ್ರಾಣಿ ಯಾವುದು ಅನೇಕ ವರ್ಷಗಳವರೆಗೂ ಸಿಗಲಿಲ್ಲ. ಇದು ನವ ಪಕ್ಷಿ ಮತ್ತು ಅವುಗಳ ಪೂರ್ವಜರ ನಡುವೆ ಕಂದರವನ್ನು ಸೃಷ್ಟಿಸಿತ್ತು. ಮುಂದೆ ಈ ಕಂದರವನ್ನು ಮುಚ್ಚುವಂತಹ ಅಚ್ಚರಿಯ ಅನ್ವೇಷಣೆ 1990ರ ದಶಕದಲ್ಲಿ ಚೀನಾದಲ್ಲಿ ನಡೆಯಿತು. ದೇಹದ ಮೃದು ಭಾಗಗಳನ್ನು ಸಹ ಸ್ಪಷ್ಟವಾಗಿ ಕಾಯ್ದಿರಿಸುವ ಕೆರೆಯ ಕೆಸರುಗಳಲ್ಲಿ ದೊರಕಿದ ಈ ಪಳೆಯುಳಿಕೆಗಳು, ಪುಕ್ಕಗಳನ್ನು ಹೊಂದಿದ ತೆರೊಪಾಡ್ ಡೈನೊಸಾರ್ ನನ್ನು ಪ್ರತಿನಿಧಿಸುತ್ತದೆ.

ಇದರಲ್ಲಿ ಕೆಲವು ಡೈನೋಸಾರ್­ಗಳ ಮೇಲೆ ಸಣ್ಣ ಕೂದಲಿನಂತಹ ಆಕೃತಿಗಳು ಕಂಡು ಬಂದಿದೆ. ಬಹುಶಃ ಇದು ಆರಂಭದ ಪುಕ್ಕಗಳಿರಬಹುದು. ಇದರಲ್ಲಿ ಪ್ರಮುಖವಾದದ್ದು ಎಂದರೆ ಸೈನೊಆರ್ನಿತೊಸಾರಸ್ ಮಿಲ್ಲೆನಿ (ಎಂದರೆ ಚೈನಾದ ಹಕ್ಕಿಹಲ್ಲಿ). ಇದರ ಮೈಮೇಲೆಲ್ಲ ಉದ್ದನೆಯ ತೆಳು ಪುಕ್ಕಗಳಿವೆ. ಈ ಪುಕ್ಕಗಳು ತುಂಬಾ ಚಿಕ್ಕದಿದ್ದು ಹಾರಲು ಸಹಾಯವಾಗುವುದಿಲ್ಲ. ಇದರ ಹಲ್ಲುಗಳು, ಪಂಜ, ಉದ್ದನೆಯ ಮೂಳೆಯ ಬಾಲ ಇದು ನವ ಪಕ್ಷಿಗಳಂತೆ ಇಲ್ಲ ಎಂದು ತೋರಿಸುತ್ತದೆ. ಕೆಲವು ಡೈನೊಸಾರ್ ಗಳು ಮಧ್ಯಮ ಗಾತ್ರದ ಪುಕ್ಕಗಳನ್ನು ತಮ್ಮ ತಲೆ ಮತ್ತು ಮುಂಗಾಲುಗಳ ಮೇಲೆ ಹೊಂದಿವೆ. ಇನ್ನುಳಿದ ಕೆಲವು ಡೈನೋಸಾರ್­ಗಳು ದೊಡ್ಡ ಪುಕ್ಕಗಳನ್ನು ನವಪಕ್ಷಿಗಳಂತೆ ಬಾಲ ಮತ್ತು ಮುಂಗಾಲುಗಳ ಮೇಲೆ ಹೊಂದಿವೆ. ಆದರೆ ಇವೆಲ್ಲಕ್ಕಿಂತ ಗಮನ ಸೆಳೆಯುವ ಪಳೆಯುಳಿಕೆ ಎಂದರೆ ಮೈಕ್ರೋರ್ಯಾಪ್ಟರ್ ಗುಯ್ ಎಂದು ಹೆಸರಿಸಿರುವ ಪ್ರಾಣಿಯದು. ಇದನ್ನು ನಾಲ್ಕು ರೆಕ್ಕೆಯ ಡೈನೋಸಾರ್ ಎಂದು ಕರೆಯಲಾಗುತ್ತದೆ. ಈಗಿನ ಯಾವುದೇ ಪಕ್ಷಿಗಳಂತೆ ಅಲ್ಲದೆ ಈ ವಿಚಿತ್ರವಾದ ಸುಮಾರು 30 ಅಂಗುಲ ಉದ್ದದ ಜೀವಿಯು ತನ್ನ ಮುಂಗಾಲು ಮತ್ತು ಹಿಂಗಾಲುಗಳ ಮೇಲೆ ಸಂಪೂರ್ಣವಾಗಿ ಪುಕ್ಕಗಳನ್ನು ಹೊಂದಿತ್ತು. ಇದನ್ನು ಚಾಚಿದಾಗ ಬಹುಶಃ ಗಾಳಿಯಲ್ಲಿ ತೇಲುವದಕ್ಕೆ ಅನುವು ಮಾಡಿಕೊಟ್ಟಿರಬಹುದು.

ತೆರೋಪಾಡ್ ಕೇವಲ ಪಕ್ಷಿಗಳಂತೆ ಕಾಣುವುದು ಮಾತ್ರವಲ್ಲ, ಅದರ ಕೆಲವು ವರ್ತನೆಗಳು ಪಕ್ಷಿಗಳಂತೆ ಇದೆ. ಅಮೆರಿಕದ ಪಳೆಯುಳಿಕೆಶಾಸ್ತ್ರಜ್ಞರಾದ ಮಾರ್ಕ್ ನಾರೆಲ್ ಮತ್ತು ಅವರ ತಂಡ ಎರಡು ಪುರಾತನ ಪಳೆಯುಳಿಕೆಗಳನ್ನು ಬಣ್ಣಿಸಿದರು. ಮೊದಲನೆಯದು, ಚಿಕ್ಕ ಪುಕ್ಕಗಳನ್ನು ಹೊಂದಿದ, ತನ್ನ ತಲೆಯನ್ನು ರೆಕ್ಕೆಯಂತಹ ತನ್ನ ಮುಂಗಾಲಿನ ನಡುವೆ ಇಟ್ಟು ನಿದ್ರಿಸುತ್ತಿರುವ ಡೈನೋಸಾರ್. ಈ ವರ್ತನೆ ನವ ಪಕ್ಷಿಗಳಲ್ಲಿ ಸಹ ಕಂಡುಬರುತ್ತದೆ. ಇದಕ್ಕೆ ಚೀನಿ ಭಾಷೆಯಲ್ಲಿ ಮೇ ಲಾಂಗ್ ಎಂದು ಹೆಸರು ನೀಡಲಾಗಿದೆ ಇದರ ಅರ್ಥ ನಿದ್ರಿಸುತ್ತಿರುವ ಡ್ರ್ಯಾಗನ್. ಈ ಜೀವಿ ತನ್ನ ನಿದ್ರಾವಸ್ಥೆಯಲ್ಲಿದ್ದಾಗ ಸಾವನ್ನಪ್ಪಿರಬಹುದು. ಇನ್ನೊಂದು ಹೆಣ್ಣು ತೆರೋಪಾಡ್ ಡೈನೋಸಾರ್­ನದು. ಇದು ತನ್ನ ಇಪ್ಪತ್ತೆರಡು ಮೊಟ್ಟೆಗಳ ಮೇಲೆ ಕಾವು ಕೊಡುತ್ತ ಕುಳಿತಿರುವಾಗ ತನ್ನ ಅಂತ್ಯವನ್ನು ಕಂಡಿದೆ. ಈ ವರ್ತನೆ ಸಹ ನವಪಕ್ಷಿಗಳಲ್ಲಿ ಕಂಡು ಬರುತ್ತದೆ.

ಈ ಎಲ್ಲ ಹಾರಲಾರದ ಡೈನೋಸಾರ್ ಪಳೆಯುಳಿಕೆ ಸುಮಾರು 135 ಮತ್ತು 110 ದಶಲಕ್ಷ ವರ್ಷಗಳ ನಡುವೆ ಇದೆ. ಇವೆಲ್ಲವೂ 145 ದಶಲಕ್ಷ ವರ್ಷಗಳ ಹಳೆಯದಾದ ಆರ್ಕಿಯಾಪ್ಟೆರಿಕ್ಸ್ ಗಿಂತಲೂ ಈಚಿನವು. ಅಂದರೆ ಆರ್ಕಿಯಾಪ್ಟೆರಿಕ್ಸ್­ನ ಪೂರ್ವಜರಾಗಿರದೆ ಅದರ ದಾಯಾದಿಯಾಗಿರಬಹುದು. ಪುಕ್ಕಗಳನ್ನು ಹೊಂದಿದ ಡೈನೋಸಾರ್­ಗಳು ಬಹುಶಃ ಅವುಗಳ ಯಾವುದೊ ಸಂಬಂಧಿ ನವಪಕ್ಷಿಗಳಂತೆ ಉಗಮವಾದ ಮೇಲು ಬದುಕಲು ಮುಂದುವರೆಸಿರಬೇಕು. ಹಾಗಿದ್ದರೆ ನಾವು ಆರ್ಕಿಯಾಪ್ಟೆರಿಕ್ಸ್ ನ ಪೂರ್ವದ ಪುಕ್ಕಗಳಿರುವ ಡೈನೋಸಾರ್ ಗಳನ್ನು ಹುಡುಕಬೇಕು. ಆದರೆ ಒಂದು ತೊಂದರೆಯೆಂದರೆ, ಪುಕ್ಕಗಳು ಹೂಳು, ಕೆಸರು, ಕೆರೆ ಮತ್ತು ಲಗೂನ್ ನಂಥ ಪರಿಸರದಲ್ಲಿ ಮಾತ್ರ ಕಂಡು ಬರುತ್ತದೆ. ಈ ರೀತಿಯ ಪರಿಸ್ಥಿತಿ ತುಂಬ ವಿರಳ. ಆದರೆ ನಾವು ಇನ್ನೊಂದು ಪರೀಕ್ಷಿಸಬಹುದಾದ ಊಹೆಯನ್ನು ಮಾತ್ರ ಮಾಡಬಹುದು : ಮುಂದೊಂದು ದಿನ ನಾವು ಆರ್ಕಿಯಾಪ್ಟೆರಿಕ್ಸ್ ಗಿಂತ ಹಳೆಯದಾದ, ಪುಕ್ಕಗಳನ್ನು ಹೊಂದಿದ ಡೈನೋಸಾರ್ ಪಳೆಯುಳಿಕೆಯನ್ನು ಪತ್ತೆ ಹಚ್ಚಬಹುದು.

ನವಪಕ್ಷಿಗಳೆಲ್ಲ ಆರ್ಕಿಯಾಪ್ಟೆರಿಕ್ಸ್ ನಿಂದ ಉಗಮವಾಯಿತೆ ಎಂದು ನಮಗೆ ಖಚಿತವಾಗಿ ತಿಳಿದಿಲ್ಲ. ಇದು ಮಿಸ್ಸಿಂಗ್ ಲಿಂಕ್ ಎನ್ನಿಸಿಕೊಳ್ಳುವುದು ಸಂಶಯ. ಏನಾದರು ಇದು ನವ ಪಕ್ಷಿಗಳು ಕಾಣಿಸಿಕೊಂಡವು ಎಂದು ದಾಖಾಲಾಗಿರುವ ಹಲವು ಪಳೆಯುಳಿಕೆಗಳಲ್ಲಿ ಒಂದು. ಈ ಪಳೆಯುಳಿಕೆಗಳು ಕಾಲದಲ್ಲಿ ಹೊಸದಾದಂತೆಲ್ಲ, ಉರಗಗಳ ಬಾಲ ಕುಗ್ಗುತ್ತ, ಹಲ್ಲುಗಳು ಮಾಯವಾಗುತ್ತ, ಪಂಜಗಳು ಬೆಸೆದುಕೊಳ್ಳುತ್ತ ಮತ್ತು ಹಾರಾಟದ ಮಾಂಸಖಂಡವನ್ನು ಹಿಡಿದು ಕೊಳ್ಳಲು ಸಹಾಯಮಾಡುವಂತ ದೊಡ್ಡದಾದ ಎದೆಯ ಮೂಳೆ ಕಾಣಿಸಿಕೊಳ್ಳುತ್ತ ಹೋಗುತ್ತದೆ.

ಈ ಪಳೆಯುಳಿಕೆಗಳನ್ನೆಲ್ಲ ಒಟ್ಟುಗೂಡಿಸಿ ನೋಡಿದರೆ, ಪಕ್ಷಿಗಳ ಅಸ್ಥಿಪಂಜರದ ನೀಲನಕ್ಷೆಯಂತೆ ಕಾಣಿಸುತ್ತದೆ ಮತ್ತು ಪುಕ್ಕಗಳು ಪಕ್ಷಿಗಳು ಹಾರಾಡುವುದಕ್ಕಿಂತ ಮುನ್ನವೆ ಉಗಮಿಸಿವೆ ಎಂದು ತಿಳಿಯುತ್ತದೆ. ಆಗ ತುಂಬಾ ಡೈನೋಸಾರ್­ಗಳು ಇದ್ದವು ಮತ್ತು ಅವುಗಳ ಪುಕ್ಕ ನಿಸ್ಸಂದೇಹವಾಗಿ ಪಕ್ಷಿಗಳ ಪುಕ್ಕಗಳಿಗೆ ಸಂಬಂಧಿಸಿದೆ. ಈ ಪುಕ್ಕಗಳು ಹಾರುವುದಕ್ಕೆ ಉಗಮವಾಗಿರದೆ ಯಾವುದಕ್ಕೆ ಉಗಮವಾಗಿರಬಹುದು? ಇದಕ್ಕೆ ನಮ್ಮ ಬಳಿ ಉತ್ತರವಿಲ್ಲ‌. ಬಹುಶಃ ಇದು ಅಲಂಕಾರಿಕವಾಗಿ ಅಥವಾ ತೋರ್ಪಡಿಕೆಗಾಗಿ, ತನ್ನ ಸಂಗಾತಿಯನ್ನು ಆಕರ್ಷಿಸುವ ಸಲುವಾಗಿ ಉಗಮವಾಗಿರಬಹುದು. ಅಲ್ಲದೆ ಚಳಿಯಿಂದ ರಕ್ಷಿಸಿಕೊಳ್ಳಲು ಬಳಕೆಯಾಗಿರಬಹುದು. ಈಗಿನ ಉರಗಗಳಂತಲ್ಲದೆ, ತೆರೋಪಾಡ್ ಡೈನೋಸಾರ್­ಗಳು ಭಾಗಶಃ ಉಷ್ಣ ರಕ್ತ ಜೀವಿಗಳಾಗಿರಬಹುದು. ಒಂದು ವೇಳೆ ಆಗಿರದಿದ್ದರು ಪುಕ್ಕಗಳು ದೇಹದ ಉಷ್ಣಾಂಶವನ್ನು ಕಾಪಾಡಿರಬಹುದು. ಪುಕ್ಕಗಳು ಯಾವುದರಿಂದ ಉಗಮಿಸಿತು ಎನ್ನವುದು ಇನ್ನು ನಿಗೂಢ. ಒಂದು ಊಹೆಯೆಂದರೆ ಇವು ಉರಗಗಳಲ್ಲಿನ ಚಿಪ್ಪುಗಳಿಂದ ಉಗಮವಾಯಿತು ಎಂದು. ಆದರೆ ಇದನ್ನು ಎಲ್ಲರೂ ಒಪ್ಪುವುದಿಲ್ಲ.

ನಮಗೆ ಅನೇಕ ವಿಷಯಗಳು ಗೊತ್ತಿಲ್ಲದಿದ್ದರೂ, ಪ್ರಾಕೃತಿಕ ಆಯ್ಕೆ ನವಪಕ್ಷಿಗಳನ್ನು ಹೇಗೆ ವಿನ್ಯಾಸ ಮಾಡಿದೆ ಎಂದು ಊಹೆಗಳನ್ನು ಮಾಡಬಹುದು. ಆರಂಭದ ಮಾಂಸಹಾರಿ ಡೈನೋಸಾರ್­ಗಳು ಉದ್ದವಾದ ಕಾಲುಗಳನ್ನು ಉಗಮಿಸಿಕೊಂಡವು. ಇದರಿಂದಡೈನೋಸಾರ್ ಗಳು ಅವುಗಳಿಗೆ ತಮ್ಮ ಬೇಟೆಯನ್ನು ಹಿಡಿಯಲು ಅನುಕೂಲವಾಗಿರಬಹುದು. ಈ ರೀತಿಯ ಹಿಡಿತದಿಂದಾಗಿ ಅದರ ಕಾಲಿನ ಮಾಂಸಖಂಡಗಳು ವೇಗವಾಗಿ ಮುಂಚಾಚಿ ಹಿಂಬರುವಂತೆ ಉಗಮವಾಗಿರಬಹುದು. ಈ ರೀತಿಯ ಚಲನೆ ನವಪಕ್ಷಿಗಳ ಹಾರಾಟದಲ್ಲಿ ರೆಕ್ಕೆಯನ್ನು ಬಡಿಯುವಾಗ ಕಾಣಬಹುದು. ಮುಂದೆ ಕಾಲುಗಳ ಮೇಲೆ ಬಹುಶಃ ಚಳಿಯ ರಕ್ಷಣೆಗಾಗಿ ಪುಕ್ಕಗಳು ಮೂಡಿವೆ. ಈ ಆವಿಷ್ಕಾರಗಳಿಂದಾಗಿ ಹಾರಾಟ ಎರಡು ರೀತಿಯಲ್ಲಿ ಉಗಮಿಸಿರಬಹುದು‌ ಮೊದಲನೆಯದು "ಮರದಿಂದ ಕೆಳಗೆ" ಸನ್ನಿವೇಶ. ಲಭ್ಯವಿರುವ ಸಾಕ್ಷಿಗಳಂತೆ ಕೆಲವು ತೆರೋಪಾಡ್ ಡೈನೋಸಾರ್­ಗಳು ಮರದ ಮೇಲೆ ವಾಸಿಸುತ್ತಿದ್ದವು. ಪುಕ್ಕಗಳಿರುವ ಮುಂಗಾಲುಗಳ ಸಹಾಯದಿಂದ ಇವು ಮರದಿಂದ ಮರಕ್ಕೆ ಅಥವಾ ನೆಲಕ್ಕೆ ತೇಲುತ್ತಿದ್ದಿರಬಹುದು. ಇದರಿಂದಾಗಿ ಇವು ತಮ್ಮ ಆಹಾರವನ್ನು ಅರಸಲು, ಶತ್ರುಗಳಿಂದ ತಪ್ಪಿಸಿಕೊಳ್ಳಲು ಅಥವಾ ನೆಲಕ್ಕೆ ಬಿದ್ದಾಗ ನೋವಾಗದಂತೆ ಮೆತ್ತೆಯಾಗಿ ಸಹಾಯ ಮಾಡಿರಬಹುದು.

ಇದಕ್ಕಿಂತ ಸ್ವಲ್ಪ ಭಿನ್ನವಾದ ಆದರೆ ಸಾಧ್ಯವಿರುವ ಸನ್ನಿವೇಶವೆಂದರೆ "ನೆಲದಿಂದ ಮೇಲಕ್ಕೆ" ಸಿದ್ಧಾಂತ. ಇದರ ಪ್ರಕಾರ ಪುಕ್ಕಗಳನ್ನು ಹೊಂದಿದ ತೆರೋಪಾಡ್ ಡೈನೋಸಾರ್­ಗಳು ತಮ್ಮ ಬೇಟೆಯನ್ನು ಹಿಡಿಯಲು ಮುಂಗಾಲುಗಳನ್ನು ತೆರೆದುಕೊಂಡು ಓಡುವಾಗ ಅಥವಾ ನೆಗೆಯುವಾಗ ಹಾರಾಟ ಉಗಮವಾಗಿದೆ. ಉದ್ದವಾದ ರೆಕ್ಕೆಗಳು ಓಡಲು ಸಹಾಯ ಮಾಡುವ ಸಲುವಾಗಿ ವಿಕಾಸಹೊಂದಿರಬಹುದು. ಯೂನಿವರ್ಸಿಟಿ ಆಫ್ ಮಾಂಟಾನ ಎಂಬಲ್ಲಿ, ಕೆನೆತ್ ಡೈಯಲ್ ಎನ್ನುವವರು ಒಂದು ಬೇಟೆ ಹಕ್ಕಿಯಾದ ಚುಕಾರ್ ಗೌಜಲಕ್ಕಿ ಮೇಲೆ ಸಂಶೋಧನೆ ನಡೆಸಿದರು. ಈ ಹಕ್ಕಿ ಈ ಹಂತದ ಜೈವಿಕ ಉದಾಹರಣೆ ಎನ್ನಬಹುದು. ಈ ಹಕ್ಕಿ ಬಹುತೇಕ ಎಂದಿಗೂ ಹಾರುವುದಿಲ್ಲ ಆದರೆ ಓಡುವಾಗ ರೆಕ್ಕೆಯನ್ನು ಬಡಿಯುತ್ತದೆ. ಹೀಗೆ ರೆಕ್ಕೆಯನ್ನು ಬಡಿಯುವುದರಿಂದ ಓಡುವುದಕ್ಕೆ ಹೆಚ್ಚು ಅನುಕೂಲವಾಗುತ್ತದೆ. ರೆಕ್ಕೆ ಬಡಿತ ಹಕ್ಕಿಗೆ ಹೆಚ್ಚಿನ ದೂಡಿಕೆ ಕೊಡುವುದಲ್ಲದೆ ನೆಲದ ವಿರುದ್ಧವಾಗಿ ಎಳೆತವನ್ನು ನೀಡುತ್ತದೆ. ಹೊಸದಾಗಿ ಹುಟ್ಟಿದ ಮರಿಗಳು ಸುಮಾರು 
450ಇಳಿಜಾರಿನಲ್ಲಿ ಏರುಮುಖವಾಗಿ ಓಡಬಲ್ಲದು. ಪ್ರೌಢ ಹಕ್ಕಿಗಳು ಸುಮಾರು 1050 ಅಂದರೆ ಲಂಬಕ್ಕಿಂತ ಹೆಚ್ಚು ಓರೆಯಾಗಿರುವ ಇಳಿಜಾರಿನಲ್ಲಿ ರೆಕ್ಕೆ ಬಡಿಯುತ್ತ ಓಡಬಲ್ಲದು. ಇದರ ಸ್ಪಷ್ಟ ಅನುಕೂಲವೆಂದರೆ ಬೆಟ್ಟವನ್ನು ಹತ್ತುತ್ತ ಶತ್ರುಗಳಿಂದ ತಪ್ಪಿಸಿಕೊಳ್ಳಬಹುದು. ಇದರ ಮುಂದಿನ ಹಂತವೆಂದರೆ ಸಣ್ಣ ಸಣ್ಣದಾಗಿ ಗಾಳಿಯಲ್ಲಿ ಜಿಗಿಯುವುದು. ಇದನ್ನು ನಾವು ಟರ್ಕಿ ಮತ್ತು ಗೌಜಲಕ್ಕಿ ಅಪಾಯದ ಪರಿಸ್ಥಿತಿ ಯನ್ನು ಎದುರಿಸುವಾಗ ಕಾಣಬಹುದು.

ಮರದಿಂದ ಕೆಳಗೆ ಅಥವಾ ನೆಲದಿಂದ ಮೇಲಕ್ಕೆ ಇವೆರಡು ಸನ್ನಿವೇಶಗಳಲ್ಲಿ ಪ್ರಾಕೃತಿಕ ಆಯ್ಕೆಯು ಕೇವಲ ಗಾಳಿಯಲ್ಲಿ ತೇಲುವ, ನೆಗೆಯುವ ಅಥವಾ ಚಿಕ್ಕ ಚಿಕ್ಕ ದೂರಕ್ಕೆ ಹಾರುವ ಜೀವಿಗಳಿಗಿಂತಲು ಹೆಚ್ಚು ದೂರಕ್ಕೆ ಹಾರಬಲ್ಲ ಜೀವಿಗಳಿಗೆ ಒಲವು ತೋರಿರುತ್ತದೆ. ಇದರ ನಂತರ ನವಪಕ್ಷಿಗಳಲ್ಲಿ ಕಂಡು ಬರುವ ಹಗುರವಾದ ಟೊಳ್ಳಾದ ಮೂಳೆ ಮತ್ತು ದೊಡ್ಡದಾದ ಎದೆ ಮೂಳೆ ಬಂದಿದೆ.

ನಾವು ಈ ಎಲ್ಲ ವಿವರಗಳನ್ನು ಊಹಿಸಿದರು ಸ್ಥಿತ್ಯಂತರ ಪಳೆಯುಳಿಕೆಗಳು ಮತ್ತು ಉರಗಗಳಿಂದ ಪಕ್ಷಿಗಳು ಉಗಮವಾಗಿರುವುದು ನಿಜ. ಆರ್ಕಿಯಾಪ್ಟೆರಿಕ್ಸ್ ಮತ್ತು ಅದರ ಮುಂದಿನ ಸಂಬಂಧಿಗಳ ಪಳೆಯುಳಿಕೆಗಳು ಪಕ್ಷಿ ಮತ್ತು ಉರಗ ಎರಡೂ ಗುಣಗಳನ್ನು ತೋರಿಸುತ್ತವೆ. ಮತ್ತು ಈ ಪಳೆಯುಳಿಕೆಗಳು ನಮಗೆ ಸರಿಯಾದ ಕಾಲಘಟ್ಟದಲ್ಲಿ ದೊರೆಯುತ್ತದೆ. ವಿಜ್ಞಾನಿಗಳು ತೆರೋಪಾಡ್ ಡೈನೋಸಾರ್­ಗಳಿಂದ ಪಕ್ಷಿಗಳು ವಿಕಾಸವಾಗಿದೆ ಎಂದು ಊಹಿಸಿದ್ದರು. ಅಂತೆಯೆ ನಾವು ಪುಕ್ಕಗಳನ್ನು ಹೊಂದಿರುವ ಡೈನೋಸಾರ್­ಗಳನ್ನು ಕಾಣುತ್ತೇವೆ. ಸಣ್ಣ ಪದರಗಳನ್ನು ಮೈ ತುಂಬಾ ಹೊಂದಿದ್ದ ಆರಂಭಿಕ ಡೈನೋಸಾರ್ ಗಳಿಂದ ಹಿಡಿದು ಪ್ರತ್ಯೇಕ ಪುಕ್ಕಗಳನ್ನು ಹೊಂದಿದ್ದ ಬಹುಶಃ ತೇಲುತ್ತಿದ್ದ ಡೈನೋಸಾರ್­ಗಳನ್ನು ನಾವು ಕಾಲ ಸರಿದಂತೆ ಕಾಣುತ್ತೇವೆ. ನಾವು ಹಕ್ಕಿಗಳಲ್ಲಿ, ಹಳೆ ಗುಣಗಳಾದ ಮುಂಗಾಲು ಮತ್ತು ಚರ್ಮದ ತೆಳು ಎಳೆಗಳು ಹೊಸ ಗುಣಗಳು ಅಂದರೆ ಬೆರಳುಗಳಿಲ್ಲದ ರೆಕ್ಕೆಗಳು ಮತ್ತು ಪುಕ್ಕಗಳಾಗಿ ಮಾರ್ಪಾಡಾಗಿರುವುದನ್ನು ಕಾಣುತ್ತೇವೆ. ವಿಕಾಸವಾದ ಊಹಿಸುವಂತೆಯೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.