ವಿಷಯಕ್ಕೆ ಹೋಗಿ

ದೊಡ್ಡಕಾಡಿನಲ್ಲೊಂದು ಪುಟ್ಟ ನಾಟಕ


ಕಾಡಿನಲ್ಲಿ ಸುತ್ತಾಡುವಾಗ ಹಲವಾರು ಚಟುವಟಿಕೆಗಳಲ್ಲಿ ಮುಳುಗಿ ಹೋಗಿ ಕೆಲವೊಮ್ಮೆ ನಮಗೆ ಪ್ರಿಯವಾದ ಚಟುವಟಿಕೆಗಳನ್ನೇ ಮರೆತು ಹೋಗಿರುತ್ತೇವೆ. ಉದಾಹರಣೆಗೆ ಒಂದು ವರ್ಷ ನಾಗರಹೊಳೆಯಲ್ಲಿದ್ದಾಗ ಸುಮಾರು ಒಂದು ತಿಂಗಳು ನನಗೆ ಇಷ್ಟವಾದ ಪಕ್ಷಿವೀಕ್ಷಣೆಯನ್ನೇ ಮಾಡಿರಲಿಲ್ಲ. ನೆಲದ ಮೇಲೆ ಬಿದ್ದಿರುವ ಮರದ ಕೊಂಬೆಯನ್ನೋ ಅಥವಾ ಕಲ್ಲನ್ನೋ ಎತ್ತಿ ನೋಡುವುದು, ಹಾಗೆ ಎತ್ತಿ ನೋಡಿದಾಗ ಅಲ್ಲಿರುವ ಬಗೆಬಗೆಯ ಕೀಟಗಳು, ಚೇಳು, ಪುಟ್ಟ ಹಾವುಗಳು, ಕಪ್ಪೆ ಇವುಗಳನ್ನು ಹುಡುಕುವುದರಲ್ಲೇ ಸಮಯ ಹೋಗುತಿತ್ತು. ಇದು ಎಷ್ಟರ ಮಟ್ಟಿಗೆ ಇತ್ತೆಂದರೆ ಮಧ್ಯಾಹ್ನದ ಊಟಕ್ಕೆ ಸರಿಯಾಗಿ ಸಮಯ ಕೊಡದಂತಾಗಿ, ಊಟವನ್ನು ಸ್ವಲ್ಪ ಸ್ವಲ್ಪವಾಗಿ ತುಂಬಾ ಸಮಯದವರೆಗೂ ಮಾಡುವಂತಾಗಿತ್ತು.

ಒಂದು ಬಾರಿ ಮಧ್ಯಾಹ್ನದ ಹೊತ್ತುಊಟಕ್ಕೆಂದು ಒಂದು ನೀರು ಹರಿಯುವ ಜಾಗದಲ್ಲಿ ಜೀಪನ್ನು ನಿಲ್ಲಿಸಿದೆವು. ನನ್ನೊಡನಿದ್ದ ಹುಡುಗರು ಇಬ್ಬರು ಊಟಕ್ಕೆಂದು ಹಳ್ಳದ ಒಂದು ಬದಿಗೆ ಹೋದರು. ನಾನು ಸುತ್ತ-ಮುತ್ತ ಏನಾದರು ಕಾಣುತ್ತೆದೆಯೋ ಎಂದು ಹುಡುಕುತ್ತಾ ನನ್ನ ಊಟದ ಡಬ್ಬಿಗೆ ಕೈ ಹಾಕಿದೆ. ಅಲ್ಲೇನಿದೆ!? ಅವತ್ತು ನಾನು ಊಟವನ್ನೇ ತಂದಿರಲಿಲ್ಲ. ನನ್ನ ಡಬ್ಬಿಗೆ ಊಟವನ್ನು ತುಂಬಿದ್ದು ನೆನಪಿತ್ತು, ಆದರೆ ಆ ಡಬ್ಬವನ್ನು ತೆಗೆದುಕೊಳ್ಳಲು ಮರೆತಿದ್ದೆ. ನನ್ನೊಡನಿದ್ದ ಇಬ್ಬರ ಊಟದಲ್ಲಿ ಸ್ಪಲ್ಪ ಕೇಳೋಣವೆಂದುಕೊಂಡೆ, ಆದರೆ ಅವರು ಆಗಲೇ ಊಟ ಶುರು ಮಾಡಿರುತ್ತಾರೆ ಎಂದುಕೊಂಡು ಸುಮ್ಮನಾದೆ. ತಕ್ಷಣವೇ ನನಗೆ ಹೊಳೆದದ್ದೇನೆಂದರೆ ನಾನು ಸಂಜೆಯವರೆಗೂ ಊಟವಿಲ್ಲದೇ ಇರಬೇಕಾದರೆ ನನ್ನ ಚಟುವಟಿಕೆಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು. Camera ಹಿಡಿದು ಅತ್ತಿತ್ತ ಸುತ್ತಾಡುವುದು, ಕೆಳಗೆ ಬಿದ್ದ ಕಲ್ಲನ್ನೋ, ಮರವನ್ನೋ ಎತ್ತಿ ನೋಡುವುದು, ಇಂತಹ ದೈಹಿಕ ಶ್ರಮ ಬೇಡುವ ಕೆಲಸಗಳನ್ನು ಬಿಟ್ಟು ಸುಮ್ಮನೆ ಕುಳಿತುಕೊಳ್ಳಬೇಕು. ಹೀಗೆಂದು ಯೋಚಿಸಿ ಸುಮ್ಮನೆ ಕುಳಿತುಕೊಂಡೆ. ಸುಮ್ಮನೆ ಹೇಗೆ ಕೂರುವುದು, ತುಂಬಾ ದಿನದಿಂದ ಪಕ್ಷಿವೀಕ್ಷಣೆ ಮಾಡಿರಲಿಲ್ಲವಲ್ಲಾ, Binocular ಹಿಡಿದು ಕುಳಿತೆ.

ಅದೊಂದು ನೀರು ಹರಿಯುವ ಪ್ರಶಾಂತ ಜಾಗ. ಹರಿಯುವ ನೀರಿನ ಮೇಲೆ ದಟ್ಟವಾದ ಮರಗಳು. ಆ ಮರಗಳಲ್ಲಿ Binocularನಿಂದ ನೋಡುತ್ತಾ ಹೋದಂತೆ ಒಂದೊಂದೇ ಪಕ್ಷಿಗಳು ತಮ್ಮ ತಮ್ಮ ಕೆಲಸದಲ್ಲಿ ಮುಳುಗಿರುವುದು ಕಂಡಿತು. ಒಂದು ಜೋಡಿ ಗುಲಗಂಜಿ ಪಕ್ಷಿಗಳು (Orange Minivet) ಯಾವುದೋ ನೆಲದಿಂದ ಬರುತ್ತಿದ್ದ ಕೀಟಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದವು. ಅದರ ನಂತರ ಕಂಡಿದ್ದು Black-naped Monarch, ಅವು ಸಹಾ ಅದೇ ಕೀಟಗಳನ್ನು ಹಿಡಿಯುತ್ತಿತ್ತು. ಅಲ್ಲೆಲ್ಲಾ ಬೇರೆ ಬೇರೆ ಮರಗಳಲ್ಲಿ ಅರಿಶಿನ ಗುಬ್ಬಿ (Common Iora), ಕೆಮ್ಮೀಸೆ ಪಿಕಳಾರ (Red-whiskered Bulbul), ಗಣಿಗಾರಲು ಹಕ್ಕಿ (Green Bee-eater), ಕರಿ ಪಿಕಳಾರ (Black Bulbul), Black-hooded oriole, ಕುಟುರ ಪಕ್ಷಿಗಳು (White-cheeked Barbet) ಹೀಗೆ ಹಲವಾರು ಪಕ್ಷಿಗಳು ನೆಲದಿಂದ ಮೇಲೆ ಬರುವ ಕೀಟಗಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದವು. ಆದರೆ ಅಲ್ಲಿದ್ದ ಒಂದು ಭರದ್ವಾಜ ಪಕ್ಷಿಗೆ (Black Drongo) ಇವನ್ನೆಲ್ಲಾ ನೋಡಿ ಏನೋ ಅಸಮಾಧಾನ. 'ಏನು! ಇವೆಲ್ಲಾ ಹೀಗೆ ಸುಮ್ಮನೆ ಬಿಟ್ಟಿ ತಿನ್ನುತ್ತಿವೆಯಲ್ಲಾ' ಎನ್ನುವ ಅಸಹನೆ. ಎಲ್ಲಾ ಪಕ್ಷಿಗಳಿಗೂ ಸಾಕಾಗುವಷ್ಟು ಕೀಟಗಳು ಬರುತ್ತಿದ್ದರೂ ಈ ಡ್ರೋಂಗೊ ಪಕ್ಷಿಗೆ ತಡೆಯಲಾಗಲಿಲ್ಲ. ಸುಮ್ಮನೆ ಕಂಡ ಕಂಡ ಪಕ್ಷಿಗಳನ್ನು ಅಟ್ಟಿಸಿಕೊಂಡು ಹೋಗುವುದು, ಅದು ಸ್ವಲ್ಪ ದೂರ ಹೋದಾಗ ಮತ್ತ್ಯಾವುದೋ ಪಕ್ಷಿ ಇದು ಕುಳಿತಿದ್ದ ಜಾಗಕ್ಕೆ ಬಂದಾಗ, ಆ ಪಕ್ಷಿಯನ್ನು ಅಟ್ಟಿಸಿಕೊಂಡು ಹೋಗುವುದು ಹೀಗೆಯೇ ನಡೆದಿತ್ತು. ಅಲ್ಲೊಂದು ಮರದ ಕೊಂಬೆಯ ಮೇಲೆ ಮಕ್ಮಲ್ ನೆತ್ತಿ ಪಕ್ಷಿ (Velvet-fronted Nuthatch) ಇಲ್ಲಿ ನಡೆಯುತ್ತಿರುವುದಕ್ಕೂ ತನಗೂ ಏನೂ ಸಂಬಂಧವಿಲ್ಲವೆನ್ನುವಂತೆ ತನ್ನ ಪಾಡಿಗೆ, ಇಲಿಯ ತರಹ ಮರದ ಕಾಂಡಗಳ ಮೇಲೆಲ್ಲಾ ಓಡಾಡಿಕೊಂಡು ತೊಗಟೆಯ ಮರೆಯಲ್ಲಿರು ಕೀಟ, ಜೇಡಗಳನ್ನು ಹಿಡಿಯುತ್ತಿತ್ತು. ಡ್ರೋಂಗೊ ಪಕ್ಷಿಗೆ ಅದರ ಮೇಲೂ ಎಂಥದ್ದೋ ಅಸಹನೆ. ಆ ಪುಟ್ಟ ಪಕ್ಷಿ ಸ್ಪರ್ಧೆಯಲ್ಲಿರದಿದ್ದರೂ ಅದರ ಮೇಲೂ ತನ್ನ ದಾದಾಗಿರಿ ತೋರಿಸುತಿತ್ತು.

ಸ್ವಲ್ಪ ಹೊತ್ತಿನ ನಂತರ ಅಲ್ಲೊಂದು ಬದಲಾವಣೆಯಾಯ್ತು. ಒಂದು ಜೋಡಿ ಕಾಜಾಣ (Racket-tailed Drongo) ಪಕ್ಷಿಗಳು ರಂಗಪ್ರವೇಶ ಮಾಡಿದವು. ಅವು ಮಾಡಿದ ಮೊತ್ತಮೊದಲ ಕೆಲಸವೆಂದರೆ ಆ ಡ್ರೋಂಗೊ ಪಕ್ಷಿಯನ್ನು ಓಡಿಸಿ, ಪರಿಸ್ಥಿತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡವು. ಈ ಸುಂದರ ರಂಗಸ್ಥಳಕ್ಕೆ ಒಂದು ಜೊತೆ ಸ್ವರ್ಗದ ಹಕ್ಕಿಗಳು (Asian Paradise-flycatcher) entry ಕೊಟ್ಟವು.

ಆ ಸುಂದರ ನಾಟಕದಲ್ಲಿ ಮತ್ತೇನೇನೋ ನಡೆಯುವುದಿತ್ತು. ನನ್ನೊಡನಿದ್ದ ಇಬ್ಬರು ಹುಡುಗರು ಊಟ ಮುಗಿಸಿ ಬಂದು 'ಹೋಗೋಣಾ ಸಾರ್' ಎಂದರು. ಎಲ್ಲಾ ಪಕ್ಷಿಗಳೂ ಆದಷ್ಟು ಕಾಣದಂತೆ ಅಡಗಿಕೊಂಡವು. ಅವುಗಳ ಚಟುವಟಿಕೆಗೆ ಅಡ್ಡಿಯಾಗದಿರಲೆಂದು ಜೀಪಿನಲ್ಲಿ ನಮ್ಮ ಪ್ರಯಾಣ ಮುಂದುವರೆಸಿದೆವು.















ಕಾಮೆಂಟ್‌ಗಳು

  1. ಲೇಖನ ತುಂಬ ಚೆನ್ನಾಗಿದೆ. ಒಂದೈದು ನಿಮಿಷ ಆ ನಾಟಕವೆಲ್ಲ ನಮ್ಮ ಮುಂದೆ ನಡೆಯಿತೇನೊ ಎಂದೆನಿಸಿತು. ಪ್ರತಿಯೊಂದು ಪಕ್ಷಿಗಳ ಗುಣಸ್ವಭಾವ ನೈಜ್ಯವಾಗಿ ಚಿತ್ರಿತವಾಗಿದೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.